Featured ಅಂಕಣ

ಸ್ವಾತಂತ್ರ್ಯ ಹೋರಾಟ ಹಾಗೂ ಆರ್‍ಎಸ್‍ಎಸ್‍ನ ಪಾತ್ರ

ಅದು ‘ವಂದೇ ಮಾತರಂ’ನ್ನು ಬ್ರಿಟೀಷರು ನಿಷೇಧಿಸಿದ್ದ ಕಾಲ. ರಕ್ತದ ಕಣಕಣದಲ್ಲೂ ದೇಶ ಪ್ರೇಮವನ್ನು ಜಾಗೃತಗೊಳಿಸುತ್ತೇ, ಬ್ರಿಟೀಷರ ವಿರುದ್ಧ ಭಾರತೀಯರ ಐಕ್ಯತೆಗೆ ಪ್ರಬಲ ಅಸ್ತ್ರವಾಗಲಿದೆ ಎಂಬ ಒಂದು ಭಯವೇ ಅಂದು ಬ್ರಿಟೀಷರಿಗೆ ವಂದೇ ಮಾತರಂ ಮೇಲೆ ಆಕ್ರೋಶ ಮೂಡಲು ಕಾರಣವಾಗಿತ್ತು! ಅಂದಿನ ಪರಿಸ್ಥಿತಿ ಅದ್ಹೇಗಿತ್ತು ಎಂದರೆ ಎಲ್ಲಿ ‘ವಂದೇ ಮಾತರಂ’ನ ಸ್ವರ ತರಂಗಗಳು ಕೇಳುತ್ತೋ ಅಲ್ಲೆಲ್ಲಾ ರಾಷ್ಟ್ರಪ್ರೇಮವು ಜಾಗೃತವಾಗಿದೆ, ಬ್ರಿಟೀಷ್ ವಿರೋಧಿ ಶಕ್ತಿಯು ಬೆಳೆಯುತ್ತಿದೆ ಎಂದೇ ಅರ್ಥೈಸುವಂತಾಗಿತ್ತು! ಹೀಗಿರಲು ಅದೊಂದು ದಿನ ಬ್ರಿಟೀಷ್ ಉನ್ನತ ಅಧಿಕಾರಿಯೋರ್ವನು ಶಾಲೆಯೊಂದಕ್ಕೆ ಭೇಟಿಯಿತ್ತಾಗ ಅಲ್ಲಿದ್ದ ಹೈಸ್ಕೂಲ್ ವಿದ್ಯಾರ್ಥಿಯೋರ್ವ ತನ್ನ ಮಿತ್ರರೊಡಗೂಡಿ ಯಾರಿಗೂ ಭಯಪಡದೆ ಗರ್ವದಿಂದ ‘ವಂದೇ ಮಾತರಂ’ ಗೀತೆಯನ್ನು ಹಾಡಿದರೆ ಹೇಗಾಗಿರಬೇಡ ಅಧಿಕಾರಿಗೆ!? ಹೌದು ಅಂದು ಬಾಲಕನ ‘ವಂದೇ ಮಾತರಂಗೆ’ ಹುರಿದೆದ್ದ ಆ ಬ್ರಿಟೀಷ್ ಅಧಿಕಾರಿ ಕೂಡಲೇ ಬಾಲಕನನ್ನು ಶಾಲೆಯಿಂದ ಹೊರದಬ್ಬುತ್ತಾನೆ! ಹೀಗೆ ರಾಷ್ಟ್ರಪ್ರೇಮವನ್ನು ಬಾಲ್ಯದಲ್ಲಿಯೇ ಬೆಳೆಸಿಕೊಂಡು ಬೆಳೆದ ಬಾಲಕ ಮುಂದೆ ಅಪ್ಪಟ ದೇಶ ಪ್ರೇಮಿಯಾದನಲ್ಲದೆ ತನ್ನ 19ನೇ ವಯಸ್ಸಿನಲ್ಲಿ ಬ್ರಿಟೀಷ್ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಸ್ಥಳೀಯ ಪೋಲೀಸ್ ಠಾಣೆಗೆ ಬಾಂಬ್ ಇಟ್ಟು ಬ್ರಿಟೀಷ್ ಸರಕಾರಕ್ಕೆ ಒಂದು ಎಚ್ಚರಿಕೆಯ ಗಂಟೆಯನ್ನು ಕೂಡ ಬಾರಿಸುತ್ತಾನೆ. ಇದರ ಪರಿಣಾಮ ಆತನಿಗೆ ದಕ್ಕಿದ್ದು 18 ತಿಂಗಳುಗಳ ಕಾಲ ಜೈಲು ವಾಸ! ಇವೆಲ್ಲವೂ ರಾಷ್ಟ್ರದ ಮೇಲಿನ ಪ್ರೇಮದಿಂದ. ಮುಂದೆ ಇದೇ ಬಾಲಕ ವೈದ್ಯಕೀಯದಲ್ಲಿ ಪದವಿ ಪಡೆಯಲು ಕೋಲ್ಕತಾಗೆ ತೆರಳಿದರೆ ಅಲ್ಲೂ ಕೂಡ ರಾಷ್ಟ್ರ ಕಟ್ಟುವ ಕಾಯಕದಲ್ಲಿ ನಿರತರಾಗಿದ್ದ ‘ಅನುಶೀಲನಾ ಸಮಿತಿ’ಯ ಹಲವಾರು ಸದಸ್ಯರೊಡಗೂಡಿ ಅವರ ಮಾರ್ಗದರ್ಶನದಂತೆ ಮತ್ತಷ್ಟು ದೇಶಪ್ರೇಮಿಯಾಗಿ ಬಲಿತಗೊಳ್ಳುತ್ತಾರೆ.

ಅಂದ ಹಾಗೆ ನಾನು ಹೇಳುತ್ತಿರುವ ಆ ರಾಷ್ಟ್ರ ಪ್ರೇಮಿ ಯಾರು ಗೊತ್ತೆ? ಅವರೇ ಡಾ! ಕೇಶವ ಬಲಿರಾಮ್ ಹೆಡ್ಗೇವಾರ್! ರಾಷ್ಟ್ರಕ್ಕೊಂದು ಕೆಚ್ಚೆದೆಯ ಸಂಘಟನೆಗೆ ಬೇಕು ಎಂದು ರಾಷ್ಟ್ರಪ್ರೇಮಿಗಳನ್ನು ಒಗ್ಗೂಡಿಸುತ್ತಾ ಒಗ್ಗೂಡಿಸುತ್ತಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‍ಎಸ್‍ಎಸ್) ಎಂಬ ಪ್ರಬಲವಾದ ಸಂಘಟನೆಯನ್ನು(1925ರಲ್ಲಿ) ಕಟ್ಟಿದ ಅಭೂತ ಪೂರ್ವ ರಾಷ್ಟ್ರಪ್ರೇಮಿ ಇವರು. ಇವತ್ತು ಹಾಲುಗಲ್ಲದ ರಾಜಕಾರಣಿಗಳು, ಇತಿಹಾಸದ ಪರಿಚಯವೇ ಇಲ್ಲದೆ ಸೋಗಲಾಡಿಗಳು ಇವರು ಕಟ್ಟಿ ಬೆಳೆಸಿದ ಆರ್‍ಎಸ್‍ಎಸ್‍ನ ರಾಷ್ಟ್ರಪ್ರೇಮದ ಬಗ್ಗೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅದರ ಪಾತ್ರದ ಬಗ್ಗೆ ಪ್ರಶ್ನೆಯಿಡಲು ಪ್ರಾರಂಭಿಸಿದ್ದಾರಲ್ಲಾ… ಆದರೆ ನಂಬಲೇ ಬೇಕಾದ ಸತ್ಯವೇನು ಗೊತ್ತೆ? ಭಾರತಕ್ಕೆ ‘ಸಂಪೂರ್ಣ ಸ್ವಾತಂತ್ರ್ಯ’ ಬೇಕು, ಬ್ರಿಟೀಷರನ್ನು ಭಾರತದಿಂದ ಹೊರದಬ್ಬಲೇ ಬೇಕು ಎಂದು ಮೊದಲ ಬಾರಿಗೆ ಕನಸು ಕಂಡದ್ದೇ ಈ ಆರ್‍ಎಸ್‍ಎಸ್ ಜನಕ ಡಾ.ಕೇಶವ ಬಲಿರಾಮ್‍ರವರು! ಅವರು 1920ರಲ್ಲಿ ನಡೆದ ಕಾಂಗ್ರೆಸ್‍ನ ‘ನಾಗಪುರ ಅಧಿವೇಶನದಲ್ಲಿ’ ‘ನಾಗಪುರ ನ್ಯಾಷನಲ್ ಯೂನಿಯನ್’ ಎಂಬ ಘಟಕದ ಮೂಲಕ ಸಂಪೂರ್ಣ ಸ್ವಾತಂತ್ರ್ಯದ ಬೇಡಿಕೆಯನ್ನು ಕಾಂಗ್ರೆಸ್‍ನ ಮುಂದೊಡ್ಡಿದ್ದರು. (ಆ ಸಮಯದಲ್ಲಿ ಹೆಡ್ಗೇವಾರ್ ಕೂಡ ಕಾಂಗ್ರೆಸ್‍ನ ಸದಸ್ಯರೇ ಆಗಿದ್ದರು) ಆದರೆ ದುರಂತವೆಂದರೆ ಅಂದಿನ ನಮ್ಮ ಕಾಂಗ್ರೆಸ್ ನಾಗಪುರ ನ್ಯಾಷನಲ್ ಯೂನಿಯನ್‍ನ ಬೇಡಿಕೆಯನ್ನು ಒಂದೇ ಏಟಿಗೆ ತಳ್ಳಿ ಹಾಕಿ ಹೆಡ್ಗೇವಾರ್ ಕನಸಿಗೆ ನೀರನ್ನೆರಚಿತ್ತು! ಹೌದು, 1885ರಲ್ಲಿ ಬ್ರಿಟೀಷ್ ಅಧಿಕಾರಿಯಿಂದ ಹುಟ್ಟಿಕೊಂಡು ಭಾರತದ ಅಗ್ರಗಣ್ಯ ನಾಯಕರುಗಳನ್ನು ಹೊಂದಿದ್ದ ನಮ್ಮ ಈ ಕಾಂಗ್ರೆಸ್‍ಗೆ ಸ್ವಾತಂತ್ರ್ಯವೆಂಬುದು ಮೊದಮೊದಲಿಗೆ ಕನಸಲ್ಲೂ ಯೋಚಿಸಲಾರದ ಒಂದು ವಿಷಯವಾಗಿತ್ತು ಎಂದರೆ ನಂಬಲೇಬೇಕು! ಅಂದು ಅವರ(ಕಾಂಗ್ರೇಸ್‍ನ) ಹೋರಾಟವಿದ್ದುದು ಬರೇ ‘ಸ್ವಾಯತ್ತತೆಯ ಸರಕ್ಕಾರಕ್ಕಾಗಗಿ’ ಅಂದರೆ ಭಾರತೀಯರ ಬೇಡಿಕೆಗಳನ್ನು ಈಡೇರಿಸುವ ಒಂದು ಸುಭದ್ರ ಬ್ರಿಟೀಷ್ ಸರಕಾರದ ನಿರ್ಮಾಣಕ್ಕಾಗಿಯಷ್ಟೇ! ಬ್ರೀಟೀಷರೇನಾದರರೂ ಬಿಟ್ಟು ಹೋದರೆ ಈ ದೊಡ್ಡ ದೇಶವನ್ನು ಆಳುವುದಾದರೂ ಹೇಗಪ್ಪಾ ಎಂಬ ಅಳುಕನ್ನು ಬೇರೆ ಹೊಂದಿತ್ತು ಈ ಕಾಂಗ್ರೆಸ್! ಭಾರತಕ್ಕೆ ಸಂಪೂರ್ಣವಾದ ಸ್ವಾತಂತ್ರ್ಯ ಬೇಕು ಬ್ರಿಟೀಷರನ್ನು ಇಲ್ಲಿಂದ ಓಡಿಸಬೇಕು ಎಂದು ಈ ಕಾಂಗ್ರೆಸ್‍ಗೆ ಮೊತ್ತ ಮೊದಲು ಅನ್ನಿಸಿದ್ದೇ 1929 ಡಿ.31ರ ಲಾಹೋರ್ ಅಧಿವೇಶನದಲ್ಲಿ! ಅಂದರೆ ಬರೋಬ್ಬರಿ 45ವರ್ಷಗಳ ಬಳಿಕ! ಒಂದೇ ಮಾತಿನಲ್ಲಿ ಹೇಳುವುದಾದರೆ ಅಲ್ಲಿಯವರೆಗೆ ನಮ್ಮ ಕಾಂಗ್ರೆಸ್ ಒಳಗೆ ಇದ್ದುದ್ದು ಬ್ರಿಟೀಷ್ ಸರಕಾರದ ಮೇಲೆ ಗೌರವ, ನಿಷ್ಠೆಯಷ್ಟೇ!

ಇಂದು ಇದೇ ಕಾಂಗ್ರೆಸ್‍ನ ಕೆಲ ನಾಯಕರುಗಳಿಗೆ ಆರ್‍ಎಸ್‍ಎಸ್‍ನ ರಾಷ್ಟ್ರಪ್ರೇಮದ ಮೇಲೆ ಪ್ರಶ್ನೆಯೆದ್ದಿದೆ! ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರ್‍ಎಸ್‍ಎಸ್‍ನ ಪಾತ್ರ ಶೂನ್ಯವೆಂದು ಅನ್ನಿಸಿದೆ. ಆದರೆ ಇತಿಹಾಸದ ಪುಟಗಳನ್ನು ಅದ್ಯಾವುದೇ ಪೂರ್ವಾಗ್ರಹವಿಲ್ಲದೆ ನೋಡಿದರೆ ಅರಿವಾಗಬಹುದು ಈ ಆರ್‍ಎಸ್‍ಎಸ್ ಕೂಡ ಬ್ರಿಟೀಷ್ ದಾಸ್ಯದ ವಿರುದ್ದ ಭಾರತವನ್ನು ಮುಕ್ತಗೊಳಿಸಲು ಅದೆಷ್ಟು ಕಾತರವಾಗಿತ್ತು ಎಂದು! ಇದ್ದ ಸಣ್ಣ ಸಂಖ್ಯೆಯ ಸದಸ್ಯತ್ವದ ಬಲದೊಂದಿಗೆ ಅಂದಿನ ಆರ್‍ಎಸ್‍ಎಸ್ ರಾಷ್ಟ್ರೀಯ ಹೋರಾಟದಲ್ಲಿ ಅದೆಷ್ಟು ಸಕ್ರೀಯವಾಗಿತ್ತು ಎಂದರೆ ರಾಷ್ಟ್ರವನ್ನು ಪರಕೀಯ ಶಕ್ತಿಯಿಂದ ಬೇರ್ಪಡಿಸುವ ವಿಚಾರವನ್ನು ಅದು ತನ್ನ ಪ್ರತಿಜ್ಞೆಯಲ್ಲಿ ಆವತ್ತೇ ಸೇರ್ಪಡೆಗೊಳಿಸಿತ್ತು! ಅದಾಗ್ಯೂ ಈ ಆರ್‍ಎಸ್‍ಎಸ್ ದೇಶದ ಸ್ವಾತಂತ್ರ್ಯಕ್ಕೆ ದುಡಿದಿಲ್ಲ ಎಂಬ ವಾದ ಕಮ್ಯುನಿಷ್ಟರ ಹಾಗೂ ಕಾಂಗ್ರೇಸಿಗರ ತಲೆಯೊಳಗೆ ಅದ್ಯಾಕೆ ಹುಟ್ಟಿತೋ ಗೊತ್ತಿಲ್ಲ. ಆದರೆ 1925ರ ಬಳಿಕ (ಆರ್‍ಎಸ್‍ಎಸ್‍ನ ಹುಟ್ಟಿನ ಬಳಿಕ) ನಡೆದಿರುವ ಅದೆಲ್ಲಾ ಸ್ವಾತಂತ್ರ್ಯದ ಹೋರಾಟಗಳಲ್ಲೂ ಆರ್‍ಎಸ್‍ಎಸ್ ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ಬೆಂಬಲ ಸೂಚಿಸಿದೆ ಎಂಬದು ಸತ್ಯ. ಎಪ್ರಿಲ್ 6, 1930ರಲ್ಲಿ ಉಪ್ಪಿನ ಸತ್ಯಾಗ್ರಹ ನಡೆದಾಗಲೂ ಈ ಆರ್‍ಎಸ್‍ಎಸ್ ಸಕ್ರೀಯವಾಗೇ ಪಾಲ್ಗೊಂಡಿತ್ತು.. ನಾಗಪುರಕ್ಕೆ 150ಕಿ.ಮೀ.ದೂರದ ಯವತ್ಮಾಲ್ ಎಂಬಲ್ಲಿ ಬ್ರಿಟೀಷ್ ಅಧಿಕಾರದ ವಿರುದ್ಧ ನಡೆದ ‘ಅರಣ್ಯ ಸತ್ಯಾಗ್ರಹದಲ್ಲಂತೂ ಆರ್‍ಎಸ್‍ಎಸ್ ಅದೆಷ್ಟು ಸಕ್ರೀಯವಾಗಿತ್ತು ಎಂದರೆ ಅದರ ನಾಯಕ ಹೆಡಗೇವಾರ್ ಬಂಧನಕ್ಕೂ ಒಳಗಾಗಬೇಕಾಯಿತು. ಇನ್ನು 1930ರ ಜನವರಿ 26ನ್ನು ‘ಭಾರತದ ಸ್ವಾತಂತ್ರ್ಯೋತ್ಸವದ ದಿನವೆಂದು ಆಚರಿಸಬೇಕು ಎಂದು ಕಾಂಗ್ರೆಸ್ ಕರೆ ನೀಡಿದಾಗ ಅದನ್ನು ಮೊದಲು ಅಭಿನಂದಿಸಿದ್ದು, ಆನಂದಿಸಿದ್ದು ಇದೇ ಆರ್‍ಎಸ್‍ಎಸ್ ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಸತ್ಯ. ಅಂದು ಅದು ತನ್ನ ಎಲ್ಲಾ ಶಾಖೆಗಳಲ್ಲೂ ಈ ದಿನವನ್ನು ಭಗವದ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯೋತ್ಸವದ ದಿನವಾಗಿ ಸಂಭ್ರಮದಿಂದ ಆಚರಿಸಬೇಕಾಗಿ ಸುತ್ತೋಲೆಯನ್ನೇ ಹೊರಡಿಸಿತ್ತು! 1942ರಲ್ಲಿ ಕಾಂಗ್ರೆಸ್ ಅದ್ಯಾವುದೇ ಪೂರ್ವ ತಯಾರಿಯಿಲ್ಲದೆ ಕ್ವಿಟ್ ಇಂಡಿಯಾ ಚಳುವಳಿಗೆ ಕರೆ ನೀಡಿ ಬ್ರಿಟೀಷರ ಕೈಯಲ್ಲಿ ಬಂಧನಕ್ಕೊಳಗಾದಾಗ ಇದೇ ಆರ್‍ಎಸ್‍ಎಸ್‍ನ ಕಾರ್ಯಕರ್ತರು ವಿಧರ್ಭದ ಚಿಮೂರ್ ಎಂಬಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಬ್ರಿಟೀಷ್ ಸರಕಾರಕ್ಕೆ ಸಮಾನಂತರವಾದ ಸರಕಾರವನ್ನೇ ರಚಿಸಿ ಬ್ರಿಟೀಷರಿಗೆ ಸಡ್ಡು ಹೊಡೆದಿದ್ದರು! ದೆಹಲಿ-ಮುಜಫರ್‍ನಗರ ರೈಲು ಹಳಿಯನ್ನು ಹಾಳುಗೆಡವಿ ರೈಲು ಸಂಚಾರಕ್ಕೂ ತಡೆಯೊಡ್ಡಿದ್ದರು! ಹಾಗೇನೆ ಉತ್ತರ ಪ್ರದೇಶದ ಮೇರಠ್‍ನಲ್ಲೂ ಈ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಬ್ರಿಟೀಷ್ ಸರಕಾರಕ್ಕೆ ಸವಾಲೊಡ್ಡಿದ್ದರು! ಹಾಗೇ ನೋಡಿದರೆ 1942ರ ಕ್ವಿಟ್ ಇಂಡಿಯಾ ಚಳುವಳಿ ತಕ್ಕ ಮಟ್ಟಿಗೆ ಯಶ ಕಂಡಿದ್ದೇ ಈ ಆರ್‍ಎಸ್‍ಎಸ್ ಕಾರ್ಯಕರ್ತರುಗಳಿಂದ. ಯಾಕೆಂದರೆ ಕ್ವಿಟ್ ಇಂಡಿಯಾ ಚಳುವಳಿಯನ್ನು ಮೂಲದಲ್ಲೇ ಚಿವುಟಬೇಕು ಎಂದು ಬ್ರಿಟೀಷರು ಗಾಂಧೀ ಸಹಿತ ಕಾಂಗ್ರೆಸ್‍ನ ಅದೆಲ್ಲಾ ಮುಂಚೂಣಿ ನಾಯಕರುಗಳನ್ನು ಚಳುವಳಿಗೂ ಮುನ್ನವೇ ಬಂಧಿಸಿ ಜೈಲಿಗಟ್ಟಿ ಚಳುವಳಿಗೆ ದಿಕ್ಕು ದೆಸೆಯಿಲ್ಲದಂತೆ ಮಾಡಿದ್ದರು! ಎಲ್ಲಕ್ಕಿಂತಲೂ ಹೆಚ್ಚಾಗಿ ಇದೇ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಬ್ರಿಟೀಷರ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಕಾಂಗ್ರೆಸ್‍ನ ಕೆಲ ನಾಯಕರುಗಳಾದ ಅರುಣಾ ಆಸಫ್ ಆಲಿ, ಜಯಪ್ರಕಾಶ್ ನಾರಾಯಣ, ಅಚ್ಯುತಾ ಪಟವರ್ಧನ್, ಕ್ರಾಂತಿವೀರ ನಾನಾ ಪಾಟೀಲ್ ಮುಂತಾದವರಿಗೆ ಅಂದು ಇದೇ ಆರ್‍ಎಸ್‍ಎಸ್ ಬೆಚ್ಚನೆಯ ಆಶ್ರಯ ನೀಡಿ ರಕ್ಷಿಸಿತ್ತು ಎಂದರೆ ನಂಬಲೇಬೆಕು! ಬಹುಷಃ ಇಂತಹ ಸೂಕ್ಷ್ಮ ವಿಚಾರಗಳು ಇಂದಿನ ಕಾಂಗ್ರೇಸಿಗರಿಗೆ ಕಮ್ಯುನಿಷ್ಟರಿಗೆ ನೆನಪಿಲ್ಲವೋ ಏನೊ!? .

ಅಂದಿನ ದಿನಗಳಲ್ಲಿ ಆರ್‍ಎಸ್‍ಎಸ್‍ನ ರಾಷ್ಟ್ರ ಪ್ರೇಮ, ನಿಷ್ಠೆಗೆ ಸ್ವತಃ ಬ್ರಿಟೀಷರೂ ಕೂಡ ಭಯ ಪಟ್ಟಿದ್ದರು. ಪರಿಣಾಮ ಆರ್‍ಎಸ್‍ಎಸ್‍ನ್ನು ತುಳಿಯುವ ಪ್ರಯತ್ನ ಅಲ್ಲಿ ಸದಾ ಜಾಗೃತವಾಗೇ ಇತ್ತು. ಇನ್ನು ಇದೇ ಮನೋಸ್ಥಿತಿಯನ್ನು ಬೆಳೆಸಿಕೊಂಡಿರುವ ಕೆಲ ಭಾರತೀಯರಿಗೂ ಆರ್‍ಎಸ್‍ಎಸ್ ಅಪಥ್ಯವಾಗಿ ಹೋದದ್ದು ಆಶ್ಚರ್ಯವೇನಲ್ಲ. ಮಹಾತ್ಮ ಗಾಂಧೀಜಿಯ ಹತ್ಯೆ ನಡೆದ ಮೇಲಂತೂ ಸ್ವತಃ ಸುಪ್ರೀಂ ಕೋರ್ಟೇ ಕ್ಲೀನ್ ಚಿಟ್ ನೀಡಿದರೂ ಗಾಂಧೀ ಹತ್ಯೆಗೆ ಇದೇ ಆರ್‍ಎಸ್‍ಎಸ್ ಕಾರಣ ಎಂದು ಬೊಬ್ಬಿರಿಯುತ್ತಾ ಆರ್‍ಎಸ್‍ಎಸ್‍ನ್ನು ಅಳಿಸಿ ಹಾಕುವ ದೊಡ್ಡ ಪ್ರಯತ್ನವೇ ನಡೆದಿತ್ತು. ಬ್ರಿಟೀಷರ ಗಂಜಿ ಕುಡಿದು, ಶಿಕ್ಷಣ ಪಡೆದು ಋಣ ಸಂದಾಯಕ್ಕೆ ಹಾತೊರೆಯುತ್ತಿರುವ ಮನೋಸ್ಥಿತಿಯವರಿಗೆ ಆರ್‍ಎಸ್‍ಎಸ್ ಅಪಥ್ಯವಾಗುವುದು ಸಹಜವೇ ಬಿಡಿ.! ಇಲ್ಲವೆಂದಾದರೆ, 1885ರಲ್ಲಿ ಹುಟ್ಟಿದ ಇವತ್ತಿನ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಭಾರತಕ್ಕೊಂದು ಸ್ವಾತಂತ್ರ್ಯ ಬೇಕು ಎಂದೆನ್ನಿಸಿದ್ದೇ ಸುಮಾರು 45ವರ್ಷಗಳ ಬಳಿಕ. ಅಂತಹುದರಲ್ಲಿ 1925ರಲ್ಲಿ ಹುಟ್ಟಿದ ಆರ್‍ಎಸ್‍ಎಸ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿಲ್ಲ ಎಂದು ಆಪಾದನೆ ಹೊರಿಸುವುದು ಅದ್ಯಾವ ನೈತಿಕ ನೆಲೆಗಟ್ಟಿನ ಮೇಲೆ!?

ಆದರೇನಂತೆ, “RSS is my heart’s work. My dear young men don’t be disturbed by uncharitable comments of interested persons. Look ahead! Go ahead! The country is standing in need of your services”! ಎಂದು ಸ್ವತಃ ಫೀಲ್ಡ್ ಮಾರ್ಷಲ್ ಕಾರಿಯಪ್ಪರವರೇ ಆರ್‍ಎಸ್‍ಎಸ್‍ನ್ನು ಹೊಗಳಿರುವಾಗ ಇನ್ನು ಚಿಲ್ಲರೆ ವ್ಯಕ್ತಿಗಳ ಕ್ಷುಲ್ಲಕ ಟೀಕೆಗಳಿಗೆ ಕಿವಿಕೊಡುವುದಾದರೂ ಏಕೆ ಅಲ್ಲವೇ!?

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!