ಅಂಕಣ

ಬ್ರಾಹ್ಮಣ ಅಂದರೆ ಪೂಜೆ ಪುನಸ್ಕಾರ ಮಾಡಿಕೊಂಡು ಇರುತ್ತಿದ್ದ ಪಾಪದ ಜೀವಿ ಅನ್ನುವ ಹ್ಯಾಂಗೋವರ್ ಯಾಕೆ ?

ಪೌರೋಹಿತ್ಯ ಮಾಡೋದು ಮತ್ತು ದೇವಸ್ಥಾನ ಪೂಜೆ ಮಾಡೋದು ವೇದ ಶಾಸ್ತ್ರ ಓದಿಕೊಂಡ ಬ್ರಾಹ್ಮಣರ ಪ್ರಧಾನ ವೃತ್ತಿಯಾಗಿತ್ತು. ಆ ವೃತ್ತಿಗಳ ಕಾರಣದಿಂದ ಅವರು  ಸಮಾಜವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಶೋಷಿಸಿದರು  ಅನ್ನೋದು ಯುರೋಪಿಯನ್ ಇತಿಹಾಸಕಾರರು ಹುಟ್ಟು ಹಾಕಿದ ದೊಡ್ಡ ಸುಳ್ಳು.

ಈ ಸುಳ್ಳಿನ ಆಧಾರದ ಮೇಲೆ ಮುಂದಿನ ಥಿಯರಿಗಳು ನಿಂತಿವೆ. ಇದು ಹೇಗೆ ಸುಳ್ಳು ಅನ್ನೋದನ್ನು ಅರ್ಥ ಮಾಡಿಕೊಂಡರೆ ಉಳಿದ ಎಲ್ಲ ಐತಿಹಾಸಿಕ ಊಹೆಗಳು, ಆರ್ಯ ದ್ರವಿಡ ಮಿಥ್ಯೆ, ಬೌದ್ಧ -ವೈದಿಕ ಸಂಘರ್ಷ ಮುಂತಾದ ಎಲ್ಲವೂ ಕುಸಿದು ಬೀಳ್ತವೆ.

ಆಧುನಿಕ ಶಿಕ್ಷಣ ಪಡೆದಿರುವ ಮತ್ತು ಶಿಕ್ಷಣ, ಪತ್ರಿಕಾರಂಗ, ಸಾಹಿತ್ಯ ವಲಯ ಮುಂತಾದೆಡೆ ಕೆಲಸ ಮಾಡುವ ಸುಶಿಕ್ಷಿತ ವರ್ಗದ ಬ್ರಾಹ್ಮಣರು ಕೂಡ ಈ  ಸುಳ್ಳನ್ನು ನಿಜವೆಂದೇ ನಂಬಿದ್ದಾರೆ. ಇತ್ತೀಚಿನ ಉಡುಪಿಯ ಪಂಕ್ತಿಭೇದದ ಚರ್ಚೆಗಳಲ್ಲಿ  ಬ್ರಾಹ್ಮಣರು ಅಂದರೆ ಪೂಜೆ ಪುನಸ್ಕಾರ ಮಾಡಿಕೊಂಡು ಹೊಟ್ಟೆ ಹೊರೆಯುವ ಅಮಾಯಕ ಸಮೂಹ  ಅಂತ ಬ್ರಾಹ್ಮಣ ಬರಹಗಾರರೇ ಬರೆದುಕೊಳ್ಳುವುದನ್ನು ನೋಡುತ್ತಿದ್ದೆ.

ನಮ್ಮ ಪೂರ್ವಜರು ಹೇಗೆ ಬದುಕಿದರು ಅನ್ನುವುದರ ಪರಿಚಯ ಈಗ ಯಾರಿಗೂ  ಇಲ್ಲ. ವೇದಗಳಲ್ಲಿ, ಶಾಸ್ತ್ರಗಳಲ್ಲಿ  ಏನಿದೆ ಅನ್ನೋದು ಗೊತ್ತಿಲ್ಲ.  ಹಾಗಾಗಿ ಈ ಬ್ರಾಹ್ಮಣದ್ವೇಷದ ಥಿಯರಿಗಳ ಮುಂದೆ ಎಲ್ಲರದ್ದೂ “ದಾರಿ ಕಾಣದಾಗಿದೆ ರಾಘವೇಂದ್ರನೇ” ಎಂಬಂತಹ ಸ್ಥಿತಿ. ಇದೊಂದು ದೊಡ್ಡ mental blockage. ಇದನ್ನು ಬಿಡಿಸಿಕೊಳ್ಳದ ಹೊರತು ದ್ವೇಷದ ರಾಜಕೀಯಕ್ಕೆ ಉತ್ತರ ಕೊಡಲಿಕ್ಕೆ ಆಗುವುದಿಲ್ಲ.  ನಮ್ಮ ಪೂರ್ವಜರ ಜೀವನವನ್ನು ತಿಳಿಯಲಿಕ್ಕೆ ಆಗುವುದಿಲ್ಲ.

ಪ್ರಾಚೀನ ಭಾರತದ ಬ್ರಾಹ್ಮಣರು

ವೈಶ್ಯರು ಮತ್ತು ಕ್ಷತ್ರಿಯರು ಕೂಡ ವೇದ ಮಂತ್ರಗಳನ್ನು ತಿಳಿದವರೇ ಆಗಿರುತ್ತಿದ್ದರು. ಶೂದ್ರರಿಗೆ ವೈದಿಕ ಕರ್ಮಾಧಿಕಾರವೇ ಇಲ್ಲ. ಹೀಗಾಗಿ ಬ್ರಾಹ್ಮಣರು ಪೌರೋಹಿತ್ಯ ಮಾಡಿ ಯಾರನ್ನು ಸುಲೀತಾ ಇದ್ರು ? ಕ್ಷತ್ರಿಯ ಮತ್ತು ವೈಶ್ಯರನ್ನೇ ಸುಲೀತಾ ಇದ್ದರು ಅಂತ ಅನ್ನೋಣ ಅಂದ್ರೆ “ಅಸಂಗ್ರಹ, ಅಪರಿಗ್ರಹ” ಇವು ಬ್ರಾಹ್ಮಣನಿಗೆ ಕಡ್ಡಾಯವಾಗಿದ್ದವು. ಅಸಂಗ್ರಹ ಅಂದರೆ ಧನದ ಸಂಗ್ರಹ ಮಾಡದೇ ಇರುವಿಕೆ. ಅಪರಿಗ್ರಹ ಅಂದರೆ ಯಾರಿಂದಲೂ ಯಾವುದೇ ವಸ್ತು ಅಥವಾ ಧನವನ್ನು ದಾನವಾಗಿ  ಸ್ವೀಕರಿಸದೇ ಇರುವಿಕೆ.  ಅಸಂಗ್ರಹ ತಪಸ್ಸಿನ ಮುಖ್ಯ ಅವಶ್ಯಕತೆ. ಹಸು ಸಾಕಣೆ, ಮತ್ತು ಭಿಕ್ಷೆಯ ಹೊರತು ಮತ್ಯಾವುದೇ ರೀತಿಯ ವೃತ್ತಿ ವರ್ಜ್ಯ. ಹಾಗಾಗಿ “ಪಶುಧನ” ಅಂದರೆ ಹಸುವೇ ಅವನ ಧನವಾಗಿತ್ತು. ಮನೆಯಲ್ಲಿ ಹಸುಗಳು ಇಲ್ಲದೇ  ಇರುವಾಗ ಮಾತ್ರ ಗೋದಾನ ಪಡೆಯಬೇಕು, ಅನ್ಯಥಾ ಪಡೆಯಬಾರದು ಎಂಬ ನಿಯಮವಿದೆ. ದಾನ ಕೊಡುವವನಿಗೂ ಕೂಡ “ಪಾತ್ರತೆ” ನೋಡಿ ಕೊಡಬೇಕು, ಅಂದರೆ ವೇದ ಶಾಸ್ತ್ರ ಸಂಪನ್ನನಾಗಿದ್ದು, ಅಗತ್ಯಕ್ಕನುಗುಣವಾಗಿ ಹಸುಗಳನ್ನು ಹೊಂದದೆ ಇರುವ, ಆಸ್ತಿ ಶೇಖರಣೆ ಮಾಡಿಕೊಳ್ಳದ ಬ್ರಾಹ್ಮಣನನ್ನು ಹುಡುಕಿ ದಾನ ಕೊಡಬೇಕು ಅನ್ನೋ ನಿರ್ದೇಶವಿದೆ. ಹೆಚ್ಚು ಬಾಯಾರಿದವನಿಗೆ ಬೇಗ ನೀರು ಕೊಡಬೇಕು ಅನ್ನೋದು ಕಾಮನ್ ಸೆನ್ಸ್. ಹಾಗಾಗಿ ಬ್ರಾಹ್ಮಣನಿಗೆ ಗೋದಾನ ಕೊಟ್ಟರೆ ಎಲ್ಲಕ್ಕಿಂತ ದೊಡ್ಡ ಕೆಲಸ ಅನ್ನೋ ಭಾವನೆ ಇದೆ. ಏಕೆಂದರೆ ಅವನಿಗೆ ಅದರ ಹೊರತು ಮತ್ತೊಂದು ಜೀವನಾಧಾರ ಇರಲಿಲ್ಲ.

14657246_1065030916949710_63726622334488518_n

ವೇದ ಶಾಸ್ತ್ರ ಸಂಪನ್ನ ಬ್ರಾಹ್ಮಣನ ಮನೆಯಲ್ಲಿ  ವಿದ್ಯಾರ್ಥಿಗಳು ಭಿಕ್ಷೆ ಪಡೆದು ಬಂದ  ದ್ರವ್ಯವೇ ಅವತ್ತಿನ ಊಟಕ್ಕೆ. ನಾಳೆಗಾಗಿ ಸಂಗ್ರಹ ಮಾಡಿದರೆ ಅಸಂಗ್ರಹ ವ್ರತ ಹಾಳಾಗ್ತದೆ.   ರಾಜಾಶ್ರಯ ಪಡೆಯುವುದು ಕೂಡ ಧರ್ಮಶಾಸ್ತ್ರ ನಿಷಿದ್ಧ ಮಾಡಿದೆ.

ದೇವಲತ್ವ ಅಂದರೆ ದೇವಾಲಯದ ಪೂಜೆ ಮಾಡುವುದನ್ನು ಅಂದರೆ ಉಪಾಸನೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡು ಬದುಕುವುದು ನಿಕೃಷ್ಟ, ಹೀನ ಮಟ್ಟದ ಜೀವನ ಅಂತ ಪರಿಗಣಿಸಲಾಗಿದೆ. ಹಾಗಾಗಿ ದೇವಳದ ಅರ್ಚಕರ ಮನೆಯ ಅನ್ನವನ್ನು ವೇದ ಶಾಸ್ತ್ರ ಸಂಪನ್ನ  ಶ್ರೋತ್ರೀಯ ಬ್ರಾಹ್ಮಣರು ಮುಟ್ಟುವುದಿಲ್ಲ. ತಾವು ಆ ವೃತ್ತಿಯನ್ನು ಮಾಡುವುದಿಲ್ಲ.

ಶಾಸ್ತ್ರಗಳು ಕೆಳಜಾತಿಯವರನ್ನು ಶೋಷಿಸಲಿಕ್ಕಾಗಿ ಬರೆಯಲ್ಪಟ್ಟಿವೆ, ಜನರಿಗೆ ಅರ್ಥವಾಗದ ಯಜ್ಞ ಯಾಗಗಳ ಮೂಲಕ ಆ ಜನರನ್ನು ಹೆದರಿಸಿ ಇಟ್ಟುಕೊಳ್ಳಲಾಗಿತ್ತು ಅಂತ  ಅಂತ ತೀರ್ಪು ಕೊಡುವ ಇತಿಹಾಸಕಾರರು ಎಂದೂ ಬ್ರಾಹ್ಮಣನ ಜೀವನ ನೋಡಿದವರಲ್ಲ. ಧರ್ಮ ಶಾಸ್ತ್ರ ತಿಳಿದವರಲ್ಲ. ನಾಲ್ಕು ಪುರುಷಾರ್ಥಗಳ ಪೈಕಿ ಕೇವಲ ಎರಡನ್ನೇ ಜೀವನದ  ಮೌಲ್ಯಗಳೆಂದು ತಿಳಿದು, ಆ ವಕ್ರ ದೃಷ್ಟಿಯಿಂದಲೇ ಎಲ್ಲವನ್ನು ಅಳೆಯುವವರಾಗಿದ್ದರು.

14708253_1065028283616640_1417602014911719412_n

ಪುರುಷಾರ್ಥ ದೃಷ್ಟಿ

ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ  ನಾಲ್ಕು ಪುರುಷಾರ್ಥಗಳಿಗೆ ಭಾರತೀಯ ಜೀವನದಲ್ಲಿ ಸಮಾನ ಮಹತ್ವವಿದೆ.  ಯುರೋಪಿಯನ್ನರಿಗೆ ಈ  ಪುರುಷಾರ್ಥಗಳ ಪೈಕಿ ಧರ್ಮ ಮತ್ತು ಮೋಕ್ಷ  ಎಂಬ ಎರಡು ಪ್ರಧಾನ ಪುರುಷಾರ್ಥಗಳ ಪರಿಚಯವೇ ಇರಲಿಲ್ಲ. ಮಾರ್ಕ್ಸಿಸ್ಟ್’ಗಳಿಗೂ ಪುರುಷಾರ್ಥ ದೃಷ್ಟಿ ಇಲ್ಲ.   ಏಕೆಂದರೆ ರಿಲಿಜಿಯನ್’ಗಳಲ್ಲಿ ಇಂತಹ ಪುರುಷಾರ್ಥದ ಸಂಭಾವ್ಯತೆ ಇಲ್ಲ.

ಧರ್ಮ ಮತ್ತು ಮೋಕ್ಷ ಇವೆರಡೂ  ಕೂಡ ಕಾಮ ಮತ್ತು ಅರ್ಥಗಳಿಗೆ ಕಡಿವಾಣ  ಹಾಕಿ  ನಿಯಂತ್ರಿಸುತ್ತವೆ.  ಸ್ವೇಚ್ಚಾಚಾರಕ್ಕೆ ಧರ್ಮ ಅವಕಾಶ ಕೊಡುವುದಿಲ್ಲ. ಮೋಕ್ಷ ಪಡೆಯಲು ತಪಸ್ಸಿನ ಜೊತೆಗೆ ಧರ್ಮದ ಪ್ರಕಾರ ಸಂಯಮದ ಜೀವನವೂ ಅಗತ್ಯ. ಧರ್ಮ ಮತ್ತು ಮೋಕ್ಷ ಎರಡೂ ಪರಸ್ಪರ ಸಂಬಂಧ ಇರುವ ಪುರುಷಾರ್ಥಗಳು. ಈ ಮೋಕ್ಷ ಮತ್ತು ಧರ್ಮ ಎನ್ನುವ ಸಂಗತಿಗಳು ಸಮಾಜವನ್ನು ಜೀವನವನ್ನು ಸದಾಚಾರ, ನ್ಯಾಯ, ನೀತಿ, ಸತ್ಯ ಅಹಿಂಸೆ ಇತ್ಯಾದಿ ಮಾರ್ಗದಲ್ಲಿ ನಡೆಸ್ತವೆ.  ಹಾಗಾಗಿಯೇ ಅಲ್ಲಿ ಸ್ವೇಚ್ಚಾಚಾರಕ್ಕೆ ಅವಕಾಶವಿಲ್ಲ. ಈ  ಕಾರಣಕ್ಕೆ, ಧರ್ಮ-ಮೋಕ್ಷಗಳೆರಡನ್ನೂ  ಜೀವ ವಿರೋಧೀ ಅಂತ  ಯುರೋಪಿಯನ್ನರು ಮತ್ತು ಮಾರ್ಕ್ಸಿಸ್ಟ್’ಗಳು  ಪರಿಗಣಿಸ್ತಾರೆ. ಅವರ ದೃಷ್ಟಿಯಲ್ಲಿ  ಕಾಮ ಮತ್ತು ಅರ್ಥಗಳಿಗೆ ಕಡಿವಾಣವಿರಬಾರದು. ಹಾಗೆ ಕಡಿವಾಣ ಇಲ್ಲದೇ ಎಲ್ಲರೂ ತಮ್ಮ ತಮ್ಮ ಇಚ್ಛೆಗೆ ತಕ್ಕಂತೆ ನಡೆದುಕೊಂಡರೆ ಅದೇ “ಜೀವ ಪರ” ಹಾಗೂ ಕಡಿವಾಣ  ಇದ್ದರೆ  ಅದು  “ಜೀವ ವಿರೋಧೀ” ಅನ್ನುವುದು  ಮಾರ್ಕ್ಸಿಸ್ಟ್ ಸಿದ್ಧಾಂತದ ನಿಲುವು. ಈ ಕಡಿವಾಣಗಳ ಹಿಂದೆ ಉದಾತ್ತ ಉದ್ದೇಶಗಳಿವೆ, ಆಧ್ಯಾತ್ಮಿಕ ಕಾರಣಗಳಿವೆ ಅನ್ನುವುದನ್ನು ಅವರು ಒಪ್ಪುವುದಿಲ್ಲ.  ನಮ್ಮ ಇತಿಹಾಸ ಬರೆದವರೆಲ್ಲ ಇಂಥದ್ದೇ ವಿಚಾರಧಾರೆಯವರು. ಹಾಗಾಗಿ  ಅವರು  ಧರ್ಮ ಮತ್ತು ಮೋಕ್ಷ ಇವೆರಡನ್ನೂ  ನೆಗೆಟಿವ್ ಆಗಿಯೇ ಪ್ರೆಸೆಂಟ್ ಮಾಡಿದ್ದಾರೆ. ಏಕೆಂದರೆ ಅವೆರಡೂ  ಸ್ವೇಚ್ಚಾಚಾರಕ್ಕೆ ಕಡಿವಾಣ ಹಾಕ್ತವೆ ಮತ್ತು ಮೋಕ್ಷ ಎಂಬುದು ವೈಜ್ಞಾನಿಕವಾಗಿ ಸಿದ್ಧವಾಗಿಲ್ಲ.   ಹಾಗಾಗಿಯೇ ಪ್ರತಿಯೊಂದು  ಶಾಸ್ತ್ರೀಯ  ನಿರ್ಬಂಧ, ಆಧ್ಯಾತ್ಮಿಕ  ನಿಯಮ-ನಿಷೇಧಗಳ ಹಿಂದೆ ಅವರಿಗೆ ಶೋಷಣೆಗಳ ಹೊರತಾಗಿ ಮತ್ತೇನೂ ಕಾಣುವುದಿಲ್ಲ. ಅವುಗಳ ಹಿಂದಿನ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರಣಗಳು ಅವರಿಗೆ ಗೋಚರಿಸುವುದಿಲ್ಲ.  ಅವರ ದೃಷ್ಟಿಯಲ್ಲಿ ಧರ್ಮ ಮತ್ತು ಮೋಕ್ಷಗಳಿಗೆ ಅಸ್ತಿತ್ವವೇ ಇಲ್ಲ ಮತ್ತು ಅವು ಜೀವನದ ಅಗತ್ಯ ಮೌಲ್ಯಗಳಲ್ಲ.   ಹಾಗಾಗಿಯೇ ಅವರು “ಬ್ರಹ್ಮಚರ್ಯ” ಅಂದರೆ ಪ್ರಕೃತಿ ವಿರೋಧಿ, “ಹಸ್ತ ಮೈಥುನ” ಪ್ರಕೃತಿ ಸಹಜ ಎಂಬಿತ್ಯಾದಿ ವಾದಗಳನ್ನು ಮಂಡಿಸ್ತಾರೆ. ಎಲ್ಲ ಶಾಸ್ತ್ರಗಳೂ  ಶೋಷಣೆಗಾಗಿ ಬ್ರಾಹ್ಮಣರು  ಮಾಡಿಕೊಂಡ ಕಲ್ಪನೆಗಳು ಅಂತ ವಾದಿಸ್ತಾರೆ.   ಅವರು ತಮ್ಮಂತೆಯೇ ಪರರನ್ನೂ ಬಗೆದಿದ್ದಾರೆ. ಏಕೆಂದರೆ ಅವರ ದೇಶಗಳಲ್ಲಿ ರಿಲಿಜಿಯನ್’ಗಳು ಹುಟ್ಟಿಕೊಂಡದ್ದು ಅಂಥದ್ದೇ ಉದ್ದೇಶಗಳಿಗಾಗಿ.

ಶೋಷಣೆ

ಪ್ರಾಚೀನ ಭಾರತೀಯ  ಪರಿಸ್ಥಿತಿಯಲ್ಲಿ  ನಾಲ್ಕು ಪುರುಷಾರ್ಥಗಳ ಪೈಕಿ ಧರ್ಮ ಮತ್ತು ಮೋಕ್ಷ ಎಂಬ ಎರಡು ಪುರುಷಾರ್ಥಗಳನ್ನು ಬದಿಗಿಟ್ಟು(ಆಧ್ಯಾತ್ಮಿಕತೆ ಬದಿಗಿಟ್ಟು)  ಅವರದೇ ಆದ  ಅರ್ಥ ಮತ್ತು ಕಾಮ ಎಂಬ ಎರಡೇ ಪುರುಷಾರ್ಥಗಳ ವಕ್ರದೃಷ್ಟಿಯಿಂದ ನೋಡುವುದಾದರೆ ಶಾಸ್ತ್ರಗಳು ಬ್ರಾಹ್ಮಣರ ಶೋಷಣೆ ಮಾಡಲಿಕ್ಕಾಗಿಯೇ ಬರೆಯಲ್ಪಟ್ಟಿವೆ ಅಂತ ನಾವು  ವಾದಿಸಬಹುದು.

ಏಕೆಂದರೆ ಶಾಸ್ತ್ರಗಳು ಬ್ರಾಹ್ಮಣನಿಗೆ ಅರ್ಥ-ಕಾಮಗಳ ಮೇಲೆ ಉಳಿದ ಎಲ್ಲರಿಗಿಂತ ಹೆಚ್ಚಿನ  ಲಗಾಮು ಹಾಕಿವೆ. ಈ ದೃಷ್ಟಿಯಿಂದ ನೋಡಿದರೆ ಶಾಸ್ತ್ರಗಳಿಂದಾಗಿ ಬ್ರಾಹ್ಮಣನೇ ಹೆಚ್ಚು ಶೋಷಣೆಗೆ ಒಳಪಟ್ಟಿದ್ದಾನೆ ಅನ್ನಬಹುದು. ಅಷ್ಟೇ ಅಲ್ಲದೆ ಪೌರೋಹಿತ್ಯ ಮಾಡುವುದನ್ನು ಶಾಸ್ತ್ರಗಳು ಹೀನವೃತ್ತಿ ಅಂತ ಪರಿಗಣಿಸಿವೆ. ಹಾಗಾಗಿ ಬ್ರಾಹ್ಮಣರು ಪೌರೋಹಿತ್ಯದ ಸೋಗಿನಲ್ಲಿ ಶೋಷಣೆ ಮಾಡಿದರು ಎಂಬ ವಾದ ಇಲ್ಲಿ  ಅವರಿಗೆಯೇ  ತಿರುಗುಬಾಣವಾಗುತ್ತದೆ.

ಕೆಲವೊಂದು ಉದಾಹರಣೆ ಇಲ್ಲಿವೆ ನೋಡಿ.

ಕುಂಡಾನ್ನಂ ಗೋಲಕಾನ್ನಂ ಚ ದೇವಲಾನ್ನಂ ತಥೈವ ಚ।

ತಥಾ ಪುರೋಹಿತಸ್ಯಾನ್ನಂ ಭುಕ್ತ್ವಾ ಚಾಂದ್ರಾಯಣಂ ಚರೇತ್.

(ಮಹಾ ಭಾರತ, ಅನುಶಾಸನೀಯ ಪರ್ವ 14-112-39)

ಕುಂಡಾನ್ನ, ಗೋಳಕಾನ್ನ, ದೇವಲಾನ್ನ ಅಂದರೆ ದೇವಸ್ಥಾನದ ಅರ್ಚಕನ ಮನೆಯ ಅನ್ನ ಹಾಗೂ ಪುರೋಹಿತನ ಮನೆಯ ಅನ್ನವನ್ನು ತಿಂದದ್ದೇ ಆದಲ್ಲಿ ಚಾಂದ್ರಾಯಣ ವ್ರತದ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು.ಇದೇ ಮಾತನ್ನು ಮನು ಇತ್ಯಾದಿ ಸ್ಮೃತಿಕಾರರೂ ಹೇಳಿದ್ದಾರೆ. ಪುರಾಣಗಳಲ್ಲಿ ಆ ಮಾತು ಪುನರಾವರ್ತನೆಯಾಗಿದೆ. ಹಾಗಾಗಿ ಸ್ವಾಭಾವಿಕವಾಗಿ ಮಹಾಭಾರತದಲ್ಲಿಯೂ ಕಂಡು ಬರುತ್ತೆ.

ದೀಕ್ಷಿತಸ್ಯ ಕದರ್ಯಸ್ಯ ಕ್ರತುವಿಕ್ರಯಿಕಸ್ಯ ಚ !

ಉಗ್ರಾನ್ನಂ ಸೂತಿಕಾನ್ನಂ ಚ ಪರ್ಯಾಚಾನ್ತಮನಿರ್ದಿಶಂ !! (ಮನುಸ್ಮೃತಿ – ೪-೨೧೦)

”ದೀಕ್ಷಿತ” ಅಂದರೆ ಬೇರೆಯವರ ಪರವಾಗಿ ಯಜ್ಞ ಮಾಡಲಿಕ್ಕೆ ದೀಕ್ಷೆಯನ್ನು ಪಡೆಯುವವನು, ”ಕ್ರತುವಿಕ್ರಯಿಕ” – ”ಕ್ರತು” ಅಂದರೆ ಯಜ್ಞ – ಯಜ್ಞವನ್ನು ಮಾರಿಕೊಳ್ಳುವವನು, ದುಡ್ಡು ಪಡೆದು ಬೇರೆಯವರಿಗಾಗಿ ಯಜ್ಞ ಮಾಡುವವರು ,ಪೌರೋಹಿತ್ಯ ಮಾಡುವವರು ಇಂಥವರ ಮನೆಯ ಅನ್ನವನ್ನು ತಿನ್ನಬಾರದು

ಏಕಾಕೀ ಯತಚಿತ್ತಾತ್ಮಾ  ನಿರಾಶಿಃ ಅಪರಿಗ್ರಹಃ ||ಭಗವದ್ಗೀತೆ – ೬.೧೦ ||

ದುರಾಸೆಗಳನ್ನು ಬಿಟ್ಟು, ಯೋಗದಲ್ಲಿ ಮನಸ್ಸು ಉಳ್ಳವನಾಗಿರಬೇಕು ಮತ್ತು ಅಪರಿಗ್ರಹಿಯಾಗಿರಬೇಕು.

********************************

ವೇದ ಮತ್ತು ಶಾಸ್ತ್ರ ಓದುವುದು ಪೂಜೆ, ಪೌರೋಹಿತ್ಯ  ಮಾಡಿಕೊಂಡು ಹೊಟ್ಟೆ ಹೊರೆಯಲಿಕ್ಕೆ ಅಲ್ಲ. ನಮ್ಮ ಹಿರಿಯರು ಆ ಉದ್ದೇಶಕ್ಕೆ ಅವುಗಳನ್ನ ಓದಿಕೊಳ್ಳಲಿಲ್ಲ.ಹೊಟ್ಟೆ ಪಾಡಿಗೆ ಮತ್ತು ಯಥೇಚ್ಛ ಸಂಪಾದನೆಗೆ ಅನ್ಯ ಮಾರ್ಗಗಳಿದ್ದಾಗಿಯೂ ಸಂಯಮದಿಂದ   ಉದಾತ್ತ ಉದ್ದೇಶಗಳಿಗೆ ಬದುಕಿದವರು.  ಹಾಗಾಗಿ  ಬ್ರಾಹ್ಮಣ ಅಂದರೆ ಪೂಜೆ ಪುನಸ್ಕಾರ ಮಾಡಿಕೊಂಡು ಇರುತ್ತಿದ್ದ ಪಾಪದ  ಜೀವಿ ಅನ್ನುವ ಹ್ಯಾಂಗೋವರ್ ನಿಂದ ಈಗಲಾದರೂ ಆಧುನಿಕ ಸಮಾಜ ಹೊರಬರಬೇಕಾಗಿದೆ. ಪರದೇಸಿಗಳು  ನಮ್ಮ ತಲೆಯಲ್ಲಿ ತುಂಬಿದ ಸುಳ್ಳುಗಳನ್ನು ಈಗಲಾದರೂ ಅರ್ಥ ಮಾಡಿಕೊಳ್ಳಬೇಕಾಗಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Dattaraj D

ದತ್ತರಾಜ್ ಹುಟ್ಟಿದ್ದು 1986, ಧಾರವಾಡ ಜಿಲ್ಲೆಯ ಕುಗ್ರಾಮವೊಂದರಲ್ಲಿ. ಬೆಳೆದದ್ದು ಆಂಧ್ರಪ್ರದೇಶ ತಮಿಳು ನಾಡು ಮಹಾರಾಷ್ಟ್ರ ಮುಂತಾದೆಡೆ. ಶಾಲಾ ಕಾಲೇಜುಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಿಲ್ಲ. ಮೌಖಿಕ ಗುರುಶಿಷ್ಯ ಪರಂಪರೆಯಲ್ಲಿ ಋಗ್ವೇದವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದಾರೆ. ಬೀದರ್ ಜಿಲ್ಲೆಯ ಕೇಂದ್ರ ಸರ್ಕಾರದ ಅನುದಾನಿತ ಗುರುಕುಲದಲ್ಲಿ ಋಗ್ವೇದ ಅದ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಉದ್ಯೋಗ ತ್ಯಜಿಸಿ ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಗೆಳೆಯರ ಜೊತೆ ಸೇರಿ ಕಟ್ಟಡ ನಿರ್ಮಾಣ ಸಂಸ್ಥೆ ನಡೆಸುತ್ತಾರೆ. ಕನ್ನಡ, ತೆಲುಗು, ಹಿಂದೀ ಮತ್ತು ಸಂಸ್ಕೃತ ಭಾಷೆಗಳಲ್ಲಿ ಬರವಣಿಗೆ ಮಾಡುತ್ತಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!