Featured ಅಂಕಣ

ಪುರುಷೋತ್ತಮನ ರೂಪರೇಖೆ ಕಡೆದ ರಸಋಷಿಯ ನೆನಪಲ್ಲಿ

ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಕಳೆದ ವರ್ಷ ನಡೆದ ಚರ್ಚೆ ನೆನಪಿಗೆ ಬರುತ್ತಿದೆ. ಒಬ್ಬರು ವಾಲ್ಮೀಕಿಯನ್ನು ವಹಿಸಿಕೊಂಡು ಮತಾಡುತ್ತಿದ್ದರು. ಚರ್ಚೆಯ ನಡುವೆ, “ಆತ ನಮ್ಮವನು” ಎಂಬ ಹೇಳಿಕೆ ಬಂತು. “ಹಾಗಲ್ಲ, ವಾಲ್ಮೀಕಿ ನಮ್ಮೆಲ್ಲರವನು. ಇಡೀ ಭಾರತಕ್ಕೆ ಸೇರಿದವನು”, ತಿದ್ದಿದೆ. ಹೋಗ್ರಿ, ಆತ ನಮ್ಮ ಸಮುದಾಯದ ನಾಯಕ. ಉಳಿದವರಿಗೆ ಆತನ ಬಗ್ಗೆ ಮಾತಾಡುವ ಹಕ್ಕಿಲ್ಲ ಎಂಬ ರೋಷಾವೇಶದ ಜವಾಬು ಬಂತು. ಮುಂದುವರಿದು ಅವರು, “ಆತ ಏನು ಬರೆದಿದ್ದಾನೋ ನಮಗೆ ಮುಖ್ಯವಲ್ಲ. ಆತ ನಮ್ಮ ಪಂಗಡಕ್ಕೆ ಸೇರಿದ ವ್ಯಕ್ತಿ; ಅಷ್ಟು ಮಾತ್ರ ಬೇಕಾಗಿದೆ” ಎಂದು ಹೇಳಿ ಚರ್ಚೆಗೆ ಮಂಗಳ ಹಾಡಿದರು. ವಾಲ್ಮೀಕಿಯ ಬಗ್ಗೆ ಮಾತ್ರವಲ್ಲ, ನಮ್ಮ ಪುರಾಣ ಅಥವಾ ಇತಿಹಾಸದ ಯಾವ ವ್ಯಕ್ತಿಯ ಬಗ್ಗೆಯೂ ಏನನ್ನೂ ಮಾತಾಡದ ಸ್ಥಿತಿ ನಿರ್ಮಾಣವಾಗಿದೆ. ವಾಲ್ಮೀಕಿ ಋಷಿಗಳ ಜೀವನದ ಕತೆಯನ್ನು ವಿಶ್ಲೇಷಿಸ ಹೊರಟ ಪ್ರೊ. ನಾರಾಯಣಾಚಾರ್ಯರು ಕೊನೆಗೆ ಒಂದು ಪಂಗಡದ ಅತಿ ಭಯಂಕರ ಪ್ರತಿಭಟನೆಗೆ ತಲೆಬಾಗಿ ತನ್ನ ಸತ್ಯಾನ್ವೇಷಣೆಯನ್ನು ಮೊಟಕುಗೊಳಿಸಬೇಕಾಯಿತು. ಸ್ವಾರಸ್ಯವೆಂದರೆ ವಾಲ್ಮೀಕಿಯನ್ನು ತಮ್ಮವರೆಂದು ಬೇಡರ ಸಮುದಾಯ ಆತುಕೊಂಡಂತೆ ವ್ಯಾಸ ಮಹರ್ಷಿಗಳನ್ನು ಬೆಸ್ತ ಸಮುದಾಯ ತಮ್ಮವರೆಂದು ಘೋಷಿಸಿಲ್ಲ. ವ್ಯಾಸರು ಜನ್ಮತಃ ಬ್ರಾಹ್ಮಣರಾಗಿರಲಿಲ್ಲ ಎಂಬ ವಿಷಯವನ್ನು ಉಳಿದ ಜಾತಿಯವರೂ ಸಂಪೂರ್ಣವಾಗಿ ಮರೆತೇ ಬಿಟ್ಟಿರುವಂತೆ ಕಾಣುತ್ತಿದೆ. ವಾಲ್ಮೀಕಿಯನ್ನು ಬಳಸಿಕೊಂಡಂತೆ ವ್ಯಾಸರನ್ನು ಯಾವ ರಾಜಕೀಯ ಪಕ್ಷವೂ ಇನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿಲ್ಲ. ಅವರು ವೇದಗಳನ್ನು ವರ್ಗೀಕರಿಸಿದರು, ಪುರಾಣಗಳನ್ನು ಬರೆದರು, ಬ್ರಾಹ್ಮಣ ಶಿಷ್ಯ ಪರಂಪರೆ ಬೆಳೆಸಿದರು. ಒಟ್ಟಲ್ಲಿ, ಪುರೋಹಿತಶಾಹಿಗೆ ಅನುಕೂಲವಾಗುವ ಎಲ್ಲ ಕೆಲಸಗಳನ್ನೂ ಮಾಡಿದರು; ಹಾಗಾಗಿ ತಮಗೆ ವಜ್ರ್ಯ ಎಂದು ಇವರೆಲ್ಲ ಭಾವಿಸಿದ್ದಾರೋ ಏನೋ!

ವಿದೇಶಗಳ ಕೆಲವೊಂದು ನಗರಗಳಲ್ಲಿ ನಡೆದಾಡಿದಾಗ ನಮಗೆ ನಮ್ಮ ದೇಶ ಮತ್ತು ಹೊರದೇಶಗಳ ನಡುವಿರುವ ಒಂದು ದೊಡ್ಡ ವ್ಯತ್ಯಾಸ ಕಣ್ಣಿಗೆ ರಾಚುತ್ತದೆ. ಅದೇನೆಂದರೆ ಭಾರತದ ಹೊರಗಿನ ಯಾವುದೇ ದೇಶದಲ್ಲಿ ಆಯಾ ದೇಶಗಳೊಳಗೆ ಕೆಲಸ ಮಾಡಿ ಹೆಸರಾದ ವ್ಯಕ್ತಿಗಳನ್ನು ನ್ಯಾಷನಲ್ ಐಕಾನ್, ಅಥವಾ ರಾಷ್ಟ್ರೀಯ ಪ್ರಭೃತಿ ಎಂಬಂತೆ ನೋಡಲಾಗುತ್ತದೆ. ಇಂಗ್ಲೆಂಡಿಗೆ ಹೋದರೆ ಅಲ್ಲಿ ಶೇಕ್ಸ್’ಪಿಯರ್, ಬನ್ರ್ಸ್, ಯೇಟ್ಸ್, ಬರ್ನಾರ್ಡ್ ಷಾ ಮುಂತಾದ ಕವಿ, ನಾಟಕಕಾರರ ಬದುಕಿನ ಪ್ರತಿ ವಿವರಗಳನ್ನೂ ಮರು ಸೃಷ್ಟಿಸಿ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿಡಲಾಗಿದೆ. ಎಲ್ಲೂ ಇವರು ಕ್ಯಾಥೊಲಿಕ್, ಇವರು ಪ್ರಾಟೆಸ್ಟೆಂಟ್, ಇವರು ಮತ್ತೊಂದು ಹೆಸರಿಲ್ಲದ ಜಾತಿ ಎಂಬ ವರ್ಗೀಕರಣ ಇಲ್ಲವೇ ಇಲ್ಲ. ಶೇಕ್ಸ್’ಪಿಯರ್‍ನ ಜನ್ಮಸ್ಥಳವಾದ ಸ್ಟ್ರಾಟ್‍ಫರ್ಡ್ ಅಪಾನ್ ಏವನ್ ಎಂಬ, ಏವನ್ ನದೀದಂಡೆಯ ಮೇಲಿರುವ ಪುಟ್ಟ ಸುಂದರ ಹಳ್ಳಿಯಲ್ಲಿ ವರ್ಷದ ಮುನ್ನೂರಾ ಅರವತ್ತೈದು ದಿನಗಳ ಕಾಲವೂ ಶೇಕ್ಸ್’ಪಿಯರ್ ನಾಟಕಗಳು ನಡೆಯುತ್ತವೆ. ಆತನ ಸಾನೆಟ್‍ಗಳ ಮೇಲೆ ಚರ್ಚೆ, ವಿಚಾರ ವಿನಿಮಯಗಳಾಗುತ್ತವೆ. ಶೇಕ್‍ಸ್ಪಿಯರ್‍ನನ್ನು ಆಳವಾಗಿ ಓದಿಕೊಂಡ ವಿಮರ್ಶಕರು, ಆಸಕ್ತ ಓದುಗರು ಜತೆ ಸೇರುತ್ತಾರೆ; ಚರ್ಚಿಸುತ್ತಾರೆ. ಒಟ್ಟಲ್ಲಿ ಆತನನ್ನು ಓದಿಕೊಳ್ಳದ ಗಮಾರನೊಬ್ಬ ದಾರಿ ತಪ್ಪಿ ಆ ಹಳ್ಳಿಗೆ ಹೋಗಿ ಅಡ್ಡಾಡಿ ಬಂದರೂ ಸಾಕು, ಬಂದವನೇ ನಾಲ್ಕು ನಾಟಕ ಕೃತಿಗಳನ್ನು ಹರವಿಕೊಂಡು ಸಂಭಾಷಣೆಗಳನ್ನು ಚಪ್ಪರಿಸಿಕೊಂಡು ಓದ ತೊಡಗುತ್ತಾನೆ.

ಬ್ರಿಟಿಷರು ಹದಿನೆಂಟು-ಹತ್ತೊಂಬತ್ತನೇ ಶತಮಾನಗಳಲ್ಲಿ ಪ್ರಪಂಚದ ಉಳಿದ ದೇಶಗಳಲ್ಲಿ ವಸಾಹತುಗಳನ್ನು ವಿಸ್ತರಿಸಿಕೊಳ್ಳುತ್ತಿದ್ದಾಗ ಮಾಡಿದ ಮೊದಲ ಕೆಲಸ ಎಂದರೆ ತಮ್ಮ ಅಧೀನಕ್ಕೊಳಪಟ್ಟ ಪ್ರದೇಶಗಳ ಜನರಿಗೆಲ್ಲ ಕೈಗೆ ಶೇಕ್ಸ್’ಪಿಯರ್‍ನನ್ನು ಕೊಟ್ಟದ್ದು. ಇಂಗ್ಲೀಷ್ ಕವಿತೆಗಳನ್ನು ಓದಿಸಿದ್ದು. ಇಂಗ್ಲೀಷ್ ಕತೆ, ಕಾದಂಬರಿಗಳನ್ನು ಪರಿಚಯಿಸಿದ್ದು. ಎಷ್ಟೆಂದರೆ ಮನೆತೋಟದಲ್ಲಿ ಜಾಜಿ, ಮಲ್ಲಿಗೆ, ಸೇವಂತಿಗೆಯಂತಹ ನೂರಾರು ಹೂಗಳಿದ್ದೂ ನಮ್ಮವರು ಪರಿಮಳವಿಲ್ಲದ ಡೆಫೊಡಿಲ್ಸ್’ಗಳನ್ನೊಮ್ಮೆ ನೋಡಬೇಕೆಂದು ಕನವರಿಸುವಂತಾಯಿತು. ಶೇಕ್‍ಸ್ಪಿಯರ್ ನಾಟಕಗಳನ್ನು ಬರೆಯುತ್ತಿದ್ದ ಕಾಲದಲ್ಲಿ ಇಂಗ್ಲೀಷ್ ನಮ್ಮ ಅರ್ಧ ಕರ್ನಾಟಕದಷ್ಟೂ ದೊಡ್ಡದಲ್ಲದ ಪುಟ್ಟ ರಾಷ್ಟ್ರದ ಆಡುಭಾಷೆಯಾಗಿತ್ತಷ್ಟೇ. ಭಾವಾಭಿವ್ಯಕ್ತಿಗೆ ಬೇಕಾದಷ್ಟು ಶಬ್ದಗಳಿಲ್ಲದೆ ಪರದಾಡುತ್ತಿದ್ದ ಶೇಕ್ಸ್’ಪಿಯರ್ ನಾಮಪದ, ವಿಶೇಷಣ, ಕ್ರಿಯಾಪದಗಳನ್ನು ಒಡೆದು ಬೆರೆಸಿ ಹಿಂಜಿ ಕೂಡಿಸಿ 1700ರಷ್ಟು ಹೊಚ್ಚ ಹೊಸ ಶಬ್ದಗಳನ್ನು ಸೃಷ್ಟಿಸಿ ಭಾಷೆಗೆ ಸೇರಿಸಿದ. ಅವನ ಕಾಲಕ್ಕಾಗಲೇ ಕರ್ನಾಟಕದಲ್ಲಿ ಪಂಪ, ರಾಘವಾಂಕ, ಕುಮಾರವ್ಯಾಸರು ಬಂದು ಹೋಗಾಗಿತ್ತು. ಕನ್ನಡ ನಾಡು ಕಾವೇರಿಯಿಂದ ಗೋದಾವರಿಯವರೆಗೆ ಹರಡಿಕೊಂಡ ವಿಶಾಲ ದೇಶವಾಗಿತ್ತು. ಆದರೆ ಇಂದು ನಮಗೆ ನಮ್ಮವರೇ ಆದ ಪಂಪ, ರಾಘವಾಂಕರಿಗಿಂತ ಹೊರದೇಶಗಳ ಲೇಖಕರ ಪರಿಚಯವೆ ಚೆನ್ನಾಗಿದೆ. ಯಾಕೆಂದರೆ ನಮ್ಮವರನ್ನು ನಮ್ಮ ಸರಕಾರಗಳೇ ಬೇಲಿ ಹಾಕಿ ಮುಸುಕೆಳೆದು ಸಾರ್ವಜನಿಕರಿಂದ ಮರೆ ಮಾಡಿವೆ. ಗದುಗಿನ ವೀರನಾರಾಯಣನ ಗುಡಿಯ ಕುಮಾರವ್ಯಾಸನ ಕಂಬದ ಮೇಲೂ “ಫೋಟೋಗ್ರಫಿ ನಿಷೇಧಿಸಲಾಗಿದೆ” ಎಂಬ ಬೋರ್ಡು ತಗಲಿಸಿ ಬಿಟ್ಟಿದ್ದೇವೆ! ಕುಮಾರವ್ಯಾಸನ ಊರಿನಲ್ಲಿ ಇಂದು, ಆತನ ಆರಾಧ್ಯದೈವದ ದೇವಸ್ಥಾನವೊಂದನ್ನು ಬಿಟ್ಟರೆ ಸರಕಾರ ಆಸ್ಥೆಯಿಂದ ನಿರ್ಮಿಸಿದ ಜೀವಂತಿಕೆಯಿರುವ ಸ್ಮಾರಕಗಳೊಂದೂ ಇಲ್ಲ. ಭಾರತದ ಗಮಕವಾಚನವನ್ನು ಕೇಳಬೇಕಾದರೆ ನಾವಿಂದು ಕರ್ನಾಟಕದಲ್ಲಿ ಚಾತಕ ಪಕ್ಷಿಗಳಂತೆ ಅಲೆಯಬೇಕಾಗಿದೆ. ಗದುಗಿನ ಭಾರತದ ನಾಲ್ಕು ಪದ್ಯಗಳನ್ನು ಶಾಲೆಗಳ ಕನ್ನಡ ಪಠ್ಯದಲ್ಲಿ ಹಾಕಿದರೆ ಕೆಲಸ ಮುಗಿಯಿತೆಂದು ಸರಕಾರ ಭಾವಿಸಿದೆ. ಚಾಸರನ ಕ್ಯಾಂಟರ್‍ಬರಿ ಕತೆಗಳು ಹಳೆ ಇಂಗ್ಲೀಷಿನಲ್ಲಿದ್ದರೂ ಅವನ್ನು ಕಷ್ಟ ಪಟ್ಟಾದರೂ ಓದುವುದು ಫ್ಯಾಶನ್ ಎಂದು ಭಾವಿಸುವ ನಮ್ಮ ಜನ, ಮುದ್ದಣ ಮನೋರಮೆ ಸಂವಾದವನ್ನು ಮುಂದೆ ಹಿಡಿದರೆ ಸ್ವಾಟೆ ತಿರುವುತ್ತಾರೆ. ಇದೆಲ್ಲ ಕಬ್ಬಿಣದ ಕಡಲೆಗಳು ಸ್ವಾಮೀ, ನಾಲ್ಕು ಮತ್ತೊಂದು ಸಾಲಿನಲ್ಲಿ ಮುಗಿವ ಚುಟುಕಗಳಿದ್ದರೆ ಕೊಡಿ; ಓದಿ ವಾಟ್ಸಾಪ್‍ನಲ್ಲಿ ಗೆಳೆಯರಿಗೆ ಕಳಿಸಿ ಕೈ ತೊಳೆದುಕೊಳ್ಳುತ್ತೇವೆ ಎನ್ನುತ್ತಾರೆ.

ಹಾಗೆ ಆದದ್ದಕ್ಕೆ ಕಾರಣವಿದೆ. ಭಾರತವನ್ನು ಹಿಡಿತದಲ್ಲಿಟ್ಟುಕೊಳ್ಳಬೇಕಾದರೆ ಇಲ್ಲಿನ ಶಿಕ್ಷಣ ಪದ್ಧತಿಯ ಬುನಾದಿಯನ್ನು ಕಿತ್ತೆಸೆಯಬೇಕು; ಬ್ರಿಟಿಷ್ ಪದ್ಧತಿಯನ್ನು ಹೇರಬೇಕು ಎಂದ ಮೆಕಾಲೆ. ನನಗೆ ಬೇಕಿರುವುದು ದೇಶವನ್ನು ಪ್ರೀತಿಸಲು ಕಲಿಯುವ ಸುಶಿಕ್ಷಿತ ವಿದ್ಯಾವಂತರಲ್ಲ; ಮೇಲಿನಿಂದ ಬರುವ ಸರಕಾರೀ ಆಜ್ಞೆಗಳನ್ನು ಗೊಂದಲಕ್ಕೆಡೆಯಿಲ್ಲದಂತೆ ಅರ್ಥ ಮಾಡಿಕೊಂಡು ಏಕರೂಪವಾಗಿ ಪಾಲಿಸುವ ನೌಕರ ಪಡೆ ಅಷ್ಟೇ ಎಂಬ ಅತ್ಯಂತ ಖಚಿತ ಮಾತುಗಳನ್ನು ಆತ ಆಡಿದ. ತನ್ನ ಆಶಯಕ್ಕೆ ತಕ್ಕಂತೆ ಬ್ರಿಟಿಷ್ ಸಂಸ್ಥಾನವನ್ನು ಒಪ್ಪಿಸಿ ದುಡಿಸಿಕೊಂಡ ಕೂಡ. ದೇಶಾದ್ಯಂತ ದೊಡ್ಡ ದೊಡ್ಡ ಕಾಲೇಜು, ಯೂನಿವರ್ಸಿಟಿಗಳನ್ನು ಕಟ್ಟಿದ ಬ್ರಿಟಿಷ್ ಸರಕಾರ ಅಲ್ಲಿ ಇಂಗ್ಲೀಷ್ ಲೋಕದ ದಿಗ್ಗಜಗಳನ್ನು ಪರಿಚಯಿಸಿ ವಿದ್ಯಾವಂತರಾದ ಭಾರತೀಯರೆಲ್ಲರೂ ಇಂಗ್ಲೀಷ್ ಭಾಷೆಯನ್ನು ಬೆರಗುಗಣ್ಣುಗಳಿಂದ ಆರಾಧಿಸುವ ವಾತಾವರಣವನ್ನು ಸೃಷ್ಟಿಸಿತು. ಅದೇನೇ ಇರಲಿ; ಬ್ರಿಟಿಷರು ತಮ್ಮದನ್ನು ಪರಿಚಯಿಸಿದರು ಹೊರತು ಹೆರವರದ್ದನ್ನು ಕೀಳೆಂದು ಕಾಣಲಿಲ್ಲ ಎನ್ನುವುದನ್ನೂ ಗಮನಿಸಬೇಕು. ಆದರೆ ಸ್ವಾತಂತ್ರ್ಯಾನಂತರ ದೇಶದೊಳಗೆ ಬೇರು ಬಿಟ್ಟ ಕಮ್ಯುನಿಸಂ ಮಾತ್ರ ಭಾರತೀಯವಾದದ್ದೆಲ್ಲವನ್ನೂ ಪ್ರಶ್ನಿಸಿ ತುಚ್ಛೀಕರಿಸಿ ಒಡೆಯುವ ಕೆಲಸಕ್ಕೆ ಕೈ ಹಾಕಿತು. ಯಾಕೆಂದರೆ ಕಾರ್ಲ್ ಮಾಕ್ರ್ಸ್ ಬರೆದ ಎರಡು ಗ್ರಂಥಗಳ ಹೊರತಾಗಿ ಅದಕ್ಕೆ ತನ್ನ ಶಂಖ ಊದಿಕೊಳ್ಳಲು ಬೇರೇನೂ ಇತಿಹಾಸವೇ ಇರಲಿಲ್ಲವಲ್ಲ! ಕಮ್ಯುನಿಸಂ ಅಸ್ತಿತ್ವದಲ್ಲಿರಬೇಕಾದರೆ ಸಮಾಜದಲ್ಲಿ ಎರಡು ವರ್ಗಗಳಿರುವುದು ಅನಿವಾರ್ಯ. ಭಾರತದ ಅಸ್ಮಿತೆಯನ್ನು ಮುರಿಯ ಬಯಸಿದವರಿಗೆ ಮೊದಲು ಕಂಡದ್ದು ಭಾರತದಲ್ಲಿದ್ದ ನೂರಾರು ಜಾತಿಗಳು. ಈ ಜಾತಿಗಳ ನಡುವೆಯೇ ಕಚ್ಚಾಟ ತಂದಿಟ್ಟರೆ ತಮ್ಮ ಬೇಳೆಯನ್ನು ಯಾವ ಕುಕ್ಕರ್ ಇಲ್ಲದೆ ಬೇಯಿಸಿಕೊಳ್ಳಬಹುದೆಂಬ ತಥ್ಯ ಅರಿತ ಕಮ್ಯುನಿಸ್ಟರು ಇಲ್ಲಿನ ಇತಿಹಾಸ ಪಠ್ಯದ ಪುಟ ಪುಟಗಳನ್ನೂ ಜಾತಿ ವೈರುಧ್ಯಗಳಿಂದಲೇ ತುಂಬುತ್ತಾ ಹೋದರು. ರಾಷ್ಟ್ರೀಯ ಸೆಲೆಬ್ರಿಟಿಗಳಾಗಬೇಕಿದ್ದ ಎಲ್ಲ ವ್ಯಕ್ತಿತ್ವಗಳನ್ನೂ ಒಂದೊಂದು ಜಾತಿಯ ಹಣೆಪಟ್ಟಿ ಹಚ್ಚಿ ಕೂರಿಸಲಾಯಿತು. ಕನಕರಿಗೆ ಕುರುಬನೆಂಬ ಪಟ್ಟಿ ಹಚ್ಚಿ ಬಿಟ್ಟೊಡನೆ ಅವರು ಬ್ರಾಹ್ಮಣರಿಗೆ ಅಪಥ್ಯರಾಗಲೇಬೇಕೆಂದು ಬಯಸಲಾಯಿತು. ವಾಲ್ಮೀಕಿ ಬೇಡರೆನಿಸಿಕೊಂಡರೆ ಉಳಿದ ಯಾರಿಗೂ ಅವರ ಬಗ್ಗೆ ಮಾತಾಡುವ ಹಕ್ಕೇ ಇಲ್ಲವೆಂದು ತುತ್ತೂರಿ ಊದಲಾಯಿತು.

ಕಮ್ಯುನಿಸ್ಟರು ಮಾಡತೊಡಗಿದ ಈ ಜಾತಿ ಭೇದ, ಜಾತಿ ವೈಷಮ್ಯದ ಗಾಂಜಾ ಬೆಳೆಯ ವಾಸನೆ ನಮ್ಮ ಸರಕಾರಗಳಿಗೆ ಹೊಡೆಯಲಿಲ್ಲ. ಅಷ್ಟರಲ್ಲಿ ಭಾರತದಲ್ಲಿ ದಲಿತ ಚಳವಳಿ ಪ್ರವರ್ಧಮಾನಕ್ಕೆ ಬಂತು. ಅಂಬೇಡ್ಕರ್ ಕಾಲವಾದ ನಂತರ ಅವರನ್ನು ತಮ್ಮ ಐಕಾನ್ ಎಂದು ದಲಿತರು ಒಪ್ಪಿಕೊಂಡರು. ತಪ್ಪೇನಿಲ್ಲ ಬಿಡಿ. ಆದರೆ ಹಾಗೆ ಒಂದು ಜಾತಿಗೆ ಮಾತ್ರ ಐಕಾನ್ ಇರುವುದು ಉಳಿದವರಿಗೆ ಸರಿ ಬರಲಿಲ್ಲವೆಂದು ಕಾಣುತ್ತದೆ. ಅವರು ತಮಗೂ ಆಯಾ ಜಾತಿಯಲ್ಲಿ ಹುಟ್ಟಿದ್ದ ಒಂದಿಲ್ಲೊಂದು ಪ್ರಭಾವೀ ವ್ಯಕ್ತಿಯನ್ನು ಆರಿಸಿಕೊಂಡರು. ಸಮಕಾಲೀನ ನಾಯಕರಿಲ್ಲದವರು ಐತಿಹಾಸಿಕ ಮುಖಂಡರನ್ನು ಆಯ್ದುಕೊಂಡರು. ಅದೂ ಇಲ್ಲದಿದ್ದವರು ಪುರಾಣ ಪುರುಷಗಳ ಮೊರೆ ಹೋಗಿ ಅವರಿಗೆ ಒಂದೊಂದು ಜಾತಿಯ ಠಸ್ಸೆ ಒತ್ತಿದರು. ವಾಲ್ಮೀಕಿ ಬೇಡರವನು; ಅವನ ಹೆಸರು ರತ್ನಾಕರ; ದರೋಡೆ ಮಾಡಿ ಜೀವನ ಸಾಗಿಸುತ್ತಿದ್ದ; ನಾರದರಿಂದ ತನ್ನ ತಪ್ಪು ಅರಿತು ಸಾತ್ವಿಕನಾಗಿ ಋಷಿಯಾದ; ನಂತರ ರಾಮಾಯಣವನ್ನು ಬರೆದ – ಎಂಬ ಕತೆಯೊಂದು ಹರಿದಾಡುತ್ತಿತ್ತಲ್ಲ? ಅದು ಇಷ್ಟವಾಗಿ ಬೇಡರು ವಾಲ್ಮೀಕಿಯೇ ತಮ್ಮ ನಾಯಕ ಎಂದು ಒಪ್ಪಿಕೊಂಡು ಬಿಟ್ಟರು. ಬೇಡರವನು ದರೋಡೆ ಮಾಡುತ್ತಿದ್ದದ್ದು ಏಕೆ ಎಂದು ಯಾರೂ ಪ್ರಶ್ನಿಸಲಿಲ್ಲ. ರತ್ನಾಕರನೆಂಬ ಹೆಸರಿಟ್ಟುಕೊಂಡಿದ್ದ ವ್ಯಕ್ತಿಗೆ ನಾರದರು “ರಾಮ” ಎಂದು ಉಪದೇಶಿಸಿದಾಗ ಅದನ್ನು ಉಚ್ಚರಿಸಲು ಕಷ್ಟವಾಯಿತಂತೆ; ನಿಜ ಇರಬಹುದೆ ಎಂದು ಕೂಡ ಯಾರೂ ಯೋಚಿಸಲಿಲ್ಲ. ಒಟ್ಟಲ್ಲಿ ಕೆಲವು ರಾಜಕೀಯ ಹಿತಾಸಕ್ತಿಗಳಿಗಾಗಿ ವಾಲ್ಮೀಕಿ ಋಷಿಗಳು ಒಂದು ಸಮುದಾಯದ ನಾಯಕರಾಗಿಬಿಟ್ಟರು. ಅವರನ್ನು ಹಾಗೆ ತಮ್ಮವರು ಎಂದು ಯಾರಾದರೂ ಭಾವಿಸುವುದಕ್ಕೆ ಯಾವ ಆಕ್ಷೇಪವೂ ಇಲ್ಲ. ಆದರೆ ಮುಂದೆ, ವಾಲ್ಮೀಕಿಗಳನ್ನು ಮುಟ್ಟಬಾರದು; ಅವರನ್ನು ಕುರಿತು ಯಾವ ಸಂಶೋಧನೆಯನ್ನೂ ಯಾರೂ ಮಾಡಬಾರದು ಎಂಬ ಅನಧಿಕೃತ ನಿಷೇಧವೊಂದು ಜಿಜ್ಞಾಸುಗಳ ಮೇಲೆ ಹೇರಲ್ಪಟ್ಟಾಗ ಮಾತ್ರ ನಮ್ಮ ರಾಷ್ಟ್ರೀಯ ಐಕಾನ್‍ಗಳು ಅಪಾಯದಲ್ಲಿದ್ದಾರೆಂದು ಕೆಲವರಿಗೆ ಅರ್ಥವಾಯಿತು.

ಇಂದು ನಮ್ಮಲ್ಲಿ ಕೆಲವೊಂದು ಜಯಂತಿಗಳು ನಡೆಯುತ್ತವೆ. ಅವುಗಳ ನಿಜವಾದ ಉದ್ದೇಶವೇನು ಎಂಬುದು ಆಯೋಜಿಸಿದ ಸಂಘಟಕರಿಗೂ ಗೊತ್ತಿರುವುದಿಲ್ಲ. ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ತಾನೇ ಮುಂದಾಗಿ ನಿಂತು ಟಿಪ್ಪುವಿನ ಜಯಂತಿ ಆಚರಿಸಿತು. ತನ್ನ ಆಡಳಿತಾವಧಿಯಲ್ಲಿ ಲಕ್ಷಾಂತರ ಅನ್ಯಧರ್ಮೀಯರನ್ನು ಅಮಾನುಷವಾಗಿ ಕೊಂದಿದ್ದ ದುರುಳನನ್ನು ಸಂತನೆಂಬಂತೆ ಬಿಂಬಿಸಿ ಸರಕಾರ ಮುಸ್ಲಿಂ ಸಮುದಾಯವನ್ನು ತೃಪ್ತಿ ಪಡಿಸಲು ನೋಡಿತು. ಟಿಪ್ಪು ಜಯಂತಿಯಿಂದ ಸರಕಾರವಾಗಲೀ ರಾಜ್ಯವಾಗಲೀ ಸಾಧಿಸಿದ್ದೇನು? ಒಂದಷ್ಟು ಜೀವಗಳು ಎರವಾಗಿ ಸ್ವರ್ಗವಾಸಿಯಾದವು ಅಷ್ಟೆ. ಟಿಪ್ಪುವಿನ ಜಯಂತಿಗಾಗಿ ಪ್ರತಿ ತಾಲೂಕು ಕಚೇರಿಗೆ 25,000 ರುಪಾಯಿ ಹಂಚಲಾಯಿತು. ಅದನ್ನು ರಾಜ್ಯದ ವಿವಿಧ ತಾಲೂಕುಗಳು ಹೇಗೆ ಖರ್ಚು ಮಾಡಿದವೆಂಬುದನ್ನು ಹೇಳಲು ನಿಂತರೆ ಅದಿನ್ನೊಂದು ಕತೆ! ಟಿಪ್ಪುವಿನ ಹೆಸರಿನಲ್ಲಿ ಏನಾದರೂ ಸಂಶೋಧನೆಯಾಯಿತೆ? ಯಾವುದಾದರೂ ಐತಿಹಾಸಿಕ ಸ್ಥಳ ಅಭಿವೃದ್ಧಿಯಾಯಿತೆ? ಕರ್ನಾಟಕದ ಪ್ರವಾಸೋದ್ಯಮ ಬೆಳೆಯಿತೆ? ಊಹ್ಞೂ! ಯಾವುದೂ ಆಗಲಿಲ್ಲ! ಸರಕಾರದೊಳಗಿರುವ ಒಬ್ಬ ವ್ಯಕ್ತಿಯ ಒತ್ತಾಯಕ್ಕೆ ಕಟ್ಟುಬಿದ್ದು ಇದೇ ಸಿದ್ದರಾಮಯ್ಯನವರ ಸರಕಾರ ಬ್ರಹ್ಮರ್ಷಿ ನಾರಾಯಣ ಗುರುಗಳ ಜಯಂತಿಯನ್ನೂ ಆಚರಿಸಿತು. ಆದರೆ ಆ ಜಯಂತಿಯ ನೆಪದಲ್ಲಿ, ಎಲ್ಲ ಜಾತಿ-ಪಂಥಗಳ ಜನರಿಗೂ ಮಾನ್ಯರಾಗಿದ್ದ ನಾರಾಯಣ ಗುರುಗಳನ್ನು ಬಿಲ್ಲವ ಸಮಾಜಕ್ಕೆ ಮಾತ್ರ ಸೀಮಿತರು ಎಂದು ಬಿಂಬಿಸುವ ಪ್ರಯತ್ನಗಳಾದವು. ಹೀಗೆ ಒಂದು ವ್ಯಕ್ತಿಯನ್ನು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸಿ ಸಂಕೋಲೆ ತೊಡಿಸುವುದು ಮೊದಲ ಹಂತ. ಮುಂದಿನ ಹಂತವಾಗಿ ಅವರ ಕುರಿತು ಆ ಸಮುದಾಯದೊಳಗಿನವರಲ್ಲದೆ ಬೇರಾರೂ ಮಾತಾಡಬಾರದು, ಬರೆಯಬಾರದು, ಚರ್ಚಿಸಬಾರದು ಎಂಬ ಅಲಿಖಿತ ಕಾನೂನು ಜಾರಿಗೊಳ್ಳುತ್ತದೆ. ಒಂದು ಸಮುದಾಯದೊಳಗೆ ಕಟ್ಟಿ ಹಾಕಿದ ವ್ಯಕ್ತಿತ್ವವನ್ನು ಇನ್ನೊಂದು ಸಮುದಾಯದವರು ಕೇವಲ ಚರ್ಚಿಸಿದರೂ ಸಾಕು, ಇಬ್ಬರ ನಡುವೆ ವಾಲಿ-ಸುಗ್ರೀವರ ಯುದ್ಧ ನಡೆಯಲು ವೇದಿಕೆ ಸಜ್ಜುಗೊಳ್ಳುತ್ತದೆ.

ಆಗಾಗ ಯೋಚಿಸುತ್ತೇನೆ; ಯಾಕೆ ನಾವಿಷ್ಟು ಸಂಕುಚಿತರಾಗುತ್ತಿದ್ದೇವೆ? ಬ್ರಿಟಿಷರು ನಮ್ಮನ್ನು ಬಂಧಮುಕ್ತಗೊಳಿಸಿ ಏಳು ದಶಕಗಳಾದವು. ಕಮ್ಯುನಿಸ್ಟರ ಕಪಿ ಮುಷ್ಟಿಯ ಅರಿವು ತಡವಾಗಿಯಾದರೂ ಆಗ ಹತ್ತಿದೆ. ಆದರೂ ಯಾಕೆ ನಮ್ಮ ದೇಶದ ಅತ್ಯುನ್ನತ ವ್ಯಕ್ತಿತ್ವಗಳನ್ನು ಜಾತಿಯ ಸಂಕೋಲೆಯಿಂದ ಬಂಧಿಸಿಡುವ ಪ್ರಯತ್ನ? ನಮಗೆ ಒಂದಷ್ಟು ಜಯಂತಿಗಳನ್ನು ಮಾಡಲೇಬೇಕೆನಿಸಿದರೆ ಅದೆಷ್ಟೊಂದು ಒಳ್ಳೊಳ್ಳೆಯ ವ್ಯಕ್ತಿಗಳನ್ನು ನಾವು ಸ್ಮರಿಸಿಕೊಳ್ಳಬಹುದು! ಕರ್ನಾಟಕದ ಚಹರೆಯನ್ನೇ ಬದಲಿಸಿ ಹಾಕಿದ, ಅಭಿವೃದ್ಧಿಯ ಬೀಜ ನೆಟ್ಟು ಹೆಮ್ಮರ ಬೆಳೆಸಿದ ಮೋಕ್ಷಗುಂಡಂ ವಿಶ್ವೇಶ್ವರಯ್ಯರಿದ್ದಾರೆ. ಕನ್ನಡದ ಸೇವೆಗಾಗಿ ತನ್ನ ಜೀವನವನ್ನು ಸವೆಸಿದ ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್ ಇದ್ದಾರೆ. ಮೈಸೂರು ಸಂಸ್ಥಾನದ ನಿಷ್ಠಾವಂತ ಸೇವಕನಾಗಿ ದುಡಿದ, ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟಿಗೆ ಕಾರಣರಾದ ಸರ್ ಮಿರ್ಜಾ ಇಸ್ಮಾಯಿಲ್ ಇದ್ದಾರೆ. ಕರ್ನಾಟಕ ಸಂಗೀತವನ್ನು ಕಟ್ಟಿ ಬೆಳೆಸಿದ ಕನಕರೂ ಪುರಂದರರೂ ಇದ್ದಾರೆ. ಅತ್ಯಂತ ವಿಶೇಷದ ಸಂಗತಿಯೆಂದರೆ ದ್ವೈತ – ಅದ್ವೈತ – ವಿಶಿಷ್ಟಾದ್ವೈತ ಈ ಮೂರೂ ಮತಗಳ ಆಚಾರ್ಯರೂ ಕರ್ನಾಟಕವನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡು ದುಡಿದರು. ಆ ಮೂರೂ ಆಚಾರ್ಯರನ್ನು ಒಂದುಗೂಡಿಸಿ ವರ್ಷದಲ್ಲೊಂದು ದಿನವನ್ನು ಅವರಿಗಾಗಿ ಮೀಸಲಿಟ್ಟು, ಮೂರೂ ಮತಗಳ ವಿಶಿಷ್ಟತೆಯನ್ನು ನಾಡಿನ ಜನರಿಗೆ ಪರಿಚಯಿಸುವ ಒಂದಿಲ್ಲೊಂದು ಕಾರ್ಯಕ್ರಮ ಹಾಕಿಕೊಳ್ಳಬಹುದು. ಜಯಂತಿಗಳ ಉದ್ದೇಶ ಒಂದು ನಿರ್ದಿಷ್ಟ ಜಾತಿ/ಮತದವರನ್ನು ಒಟ್ಟು ಸೇರಿಸುವುದಲ್ಲ; ಒಬ್ಬರ ವ್ಯಕ್ತಿತ್ವವನ್ನು ಜಾತಿಯಿಂದಾಚೆ ಕೊಂಡೊಯ್ಯುವುದು. ಮತ್ತು ಜಯಂತಿಗಳು ಕೇವಲ ಢಾಣಾಢಂಗುರದ, ವೈಭೋಗದ, ಭೀಷಣ ಭಾಷಣಗಳ ಪ್ರದರ್ಶನವೂ ಆಗಬಾರದು. ಸ್ಟ್ರಾಟ್‍ಫರ್ಡ್‍ನಲ್ಲಿ ಶೇಕ್‍ಸ್ಪಿಯರ್‍ನನ್ನು 365 ದಿನಗಳೂ ನೆನೆಸಿಕೊಂಡಂತೆ, ವ್ಯಕ್ತಿಗಳ ಜಯಂತಿ ಒಂದಿಲ್ಲೊಂದು ಬಗೆಯಲ್ಲಿ ವರ್ಷ ಪೂರ್ತಿ ಜಾರಿಯಲ್ಲಿರುವಂತೆ ಮಾಡಬೇಕು. ಉದಾಹರಣೆಗೆ, ನಮ್ಮ ಪುರಂದರ ದಾಸರನ್ನು ರಾಜ್ಯ ಸರಕಾರ ಮನಸ್ಸು ಮಾಡಿದ್ದರೆ ಅದೆಷ್ಟೊಂದು ಚಂದದಲ್ಲಿ ಜಗತ್ತಿಗೆ ಪರಿಚಯಿಸಿಕೊಡಬಹುದಿತ್ತು! ಅವರ ಹೆಸರಲ್ಲೊಂದು ಸಂಗೀತ ವಿದ್ಯಾಲಯ, ಜಗತ್ತಿನ ಯಾವ ಮೂಲೆಯಿಂದಲೂ ಆಸಕ್ತರು ಅಲ್ಲಿ ಬಂದು ಕರ್ನಾಟಕ ಸಂಗೀತದ ಬಗ್ಗೆ ತಿಳಿಯಲು ಬೇಕಾದ ವ್ಯವಸ್ಥೆ, ಒಂದೊಳ್ಳೆಯ ಸಂಗೀತ ವಸ್ತು ಸಂಗ್ರಹಾಲಯ, ಕರ್ನಾಟಕ ಸಂಗೀತದ ಸಾಹಿತ್ಯದ ಸಂಶೋಧನೆಗಳಿಗೆ ಮೀಸಲಾದ ಒಂದು ಸಂಸ್ಥೆ, ಪುರಂದರರು ಓಡಾಡಿದ ಜಾಗಗಳ ರಕ್ಷಣೆ ಮತ್ತು ಅಭಿವೃದ್ಧಿ, ವರ್ಷಕ್ಕೊಮ್ಮೆ ಹಂಪಿಯಲ್ಲಿ ಅವರ ಹೆಸರಲ್ಲಿ ವಾರಪೂರ್ತಿ ಸಂಗೀತ ಗೋಷ್ಠಿ – ಏನೆಲ್ಲ, ಏನೆಲ್ಲ ಮಾಡಬಹುದು ಮನಸ್ಸಿದ್ದರೆ ಸರಕಾರಕ್ಕೆ! ನಮ್ಮ ಎಲ್ಲ ಜಯಂತಿಗಳು, ಸರಕಾರೀ ಕಾರ್ಯಕ್ರಮಗಳು ಅದ್ಯಾಕೆ ಒಂದು ಜಗಜಗಿಸುವ ಕಾರ್ಯಕ್ರಮ ಮತ್ತು ಹತ್ತು ಹಾಗಲಕಾಯಿ ಹಲ್ವದಂಥ ಭಾಷಣಗಳಲ್ಲಿ ಮುಗಿದು ಹೋಗುತ್ತವೆ, ಇದುವರೆಗೆ ಅರ್ಥವಾಗಿಲ್ಲ ನನಗೆ.

ವಾಲ್ಮೀಕಿ ಮಹಾಋಷಿಯ ಜಯಂತಿಯ ಸಂದರ್ಭದಲ್ಲಿ ಇಡೀ ದೇಶಕ್ಕೆ ಸಲ್ಲುವ ಮಹಾಕಾವ್ಯವನ್ನು ಬರೆದಿಟ್ಟು ಹೋದ ಆ ಮಹಾಪುರುಷನ ಬಗ್ಗೆ ಸರಕಾರಗಳು ಮನದುಂಬಿ ಮಾತಾಡಬೇಕಿತ್ತು. ಈ ಕಾವ್ಯದ ನೂರಾರು ಪ್ರತಿಯನ್ನು ಕಡಿಮೆ ಬೆಲೆಗೆ ಪ್ರಕಟಿಸಿ ಜನರಿಗೆ ತಲುಪಿಸುತ್ತೇವೆ ಎನ್ನಬೇಕಿತ್ತು. ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳನ್ನು ಅಭಿವೃದ್ಧಿಗೊಳಿಸಿ ಅಲ್ಲೆಲ್ಲ ಕಾವ್ಯ ಸೌಂದರ್ಯ ಮೂರ್ತರೂಪದಲ್ಲಿ ಹಬ್ಬುವಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆ ಕೊಡಬೇಕಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ರಾಮಾಯಣ ಸಾರುವ ಉದಾತ್ತಾಂಶಗಳನ್ನು ಪಠ್ಯದಲ್ಲಿ ಪ್ರಸ್ತಾಪಿಸಿ ಮಕ್ಕಳಿಗೂ ಆ ಋಷಿ ಹತ್ತಿರವಾಗುವಂತೆ ಮಾಡಬೇಕಿತ್ತು. ವ್ಯಾಸ ಮತ್ತು ವಾಲ್ಮೀಕಿ ಇಬ್ಬರಿಗೆ ಈ ಇಡೀ ದೇಶವನ್ನು ಜಾತಿ-ಮತ-ಪಂಥಗಳನ್ನು ಮೀರಿ ಒಗ್ಗೂಡಿಸುವ ಅಪೂರ್ವ ಶಕ್ತಿಯಿದೆ. ವ್ಯಾಸರು ಭಾರತದ ಪೂರ್ವ-ಪಶ್ಚಿಮಗಳನ್ನು ಜೋಡಿಸಿದರೆ ವಾಲ್ಮೀಕಿ ಋಷಿಗಳು ದೇಶದ ಉತ್ತರ-ದಕ್ಷಿಣಗಳನ್ನು ಬೆಸೆದರು. ಅಖಂಡ ಭಾರತದ ಸಮಗ್ರತೆ ಎಂದರೆ ರಾಮಾಯಣ, ಮಹಾಭಾರತಗಳನ್ನು ನಮ್ಮೊಳಗೆ ಇಳಿಸಿಕೊಳ್ಳುವುದೇ ಆಗಿದೆ. ಆದರೆ, ದೇಶದ ಗಡಿಗುಂಟ ಬೇಲಿ ಹಾಕಿಕೊಳ್ಳಬೇಕಿದ್ದ ನಾವು ಬೇಲಿಯನ್ನೆಲ್ಲ ದೇಶದೊಳಗೇ ಅತ್ತಿತ್ತ ಎತ್ತೆತ್ತಲೋ ಎಳೆದುಕೊಂಡು ಬಿಟ್ಟಿದ್ದೇವಲ್ಲ!

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!