ಬದುಕಿನಲ್ಲಿ ತುಂಬಾ ಕಷ್ಟಕರ ಎನಿಸುವಂತದ್ದು ಯಾವುದು ಅಂತ ಕೇಳಿದರೆ ‘ನಿರ್ಧಾರ ತೆಗೆದುಕೊಳ್ಳುವುದು’ ಎನ್ನಬಹುದು. ಯಾಕೆಂದರೆ ನಮ್ಮ ನಿರ್ಧಾರಗಳೇ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ನಮ್ಮ ನಿರ್ಧಾರಗಳ ಪರಿಣಾಮ ಯಾವಾಗಲೂ ನಾವೆಣಿಸಿದಂತೆಯೇ ಇರಬೇಕು ಅಂತೇನೂ ಇಲ್ಲ. ಕೆಲವೊಮ್ಮೆ ನಾವು ಅಂದುಕೊಳ್ಳುವುದು ಒಂದು ಆಗುವುದು ಇನ್ನೊಂದು ಆಗಿರುತ್ತದೆ. ಹಾಗಾಗಿ ಅಂತಹ ಪರಿಣಾಮಗಳಿಗೂ ಸಿದ್ಧರಿರಬೇಕು. ಅಲ್ಲದೇ ಆ ನಿರ್ಧಾರಗಳು ನಮ್ಮ ಮೇಲೆ ಮಾತ್ರ ಅಲ್ಲ; ನಮ್ಮೊಂದಿಗಿರುವವರ ಮೇಲೆ ಕೂಡ ಪರಿಣಾಮ ಬೀರುತ್ತದೆ. ನಿರ್ಧಾರ ಸರಿಯಾಗಿದ್ದರೆ ತೊಂದರೆ ಇಲ್ಲ. ತಪ್ಪಾಗಿದ್ದರೆ ಅದರಿಂದ ಪಾಠ ಕಲಿಯುತ್ತೇವೆ. ಆದರೆ ಎಲ್ಲ ಸಂದರ್ಭಗಳಲ್ಲೂ ಇದು ಹೀಗೆ ಇರುತ್ತದೆಯಾ? ಸಾವು – ಬದುಕಿನ ಪ್ರಶ್ನೆಯಾಗಿದ್ದಲ್ಲಿ ತಪ್ಪು ನಿರ್ಧಾರಗಳಿಗೆ ಅವಕಾಶವಿದೆಯಾ? ಅದರಿಂದ ಪಾಠ ಕಲಿಯುತ್ತೇವೆ ಎಂಬ ಧೈರ್ಯವನ್ನು ತೋರಿಸುವುದಕ್ಕೆ ಆಗುವುದಾ…??
ಕ್ಯಾನ್ಸರ್ ಎಂದಾಕ್ಷಣ ಕೇವಲ ರೋಗವಷ್ಟೇ ಅಲ್ಲ. ನಮ್ಮ ಧೈರ್ಯ ಹಾಗೂ ನಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಪರೀಕ್ಷಿಸುವ ಒಂದು ದೊಡ್ಡ ಸವಾಲು..! ಕ್ಯಾನ್ಸರ್ ಎಂದು ರಿಪೋರ್ಟ್ ಬಂದಾಕ್ಷಣ ಸಾಕಷ್ಟು ಜನ ಯೋಚಿಸಿವುದು ಸೆಕೆಂಡ್ ಒಪಿನಿಯನ್ ತೆಗೆದುಕೊಳ್ಳಬೇಕಾ ಎಂದು?! ಇಲ್ಲಿಂದಲೇ ನಮ್ಮ ಪರೀಕ್ಷೆ ಶುರು. ರಿಪೋರ್ಟ್ ಬಂದಾಗಿನಿಂದ ಚಿಕಿತ್ಸೆ ಮುಗಿಯುವ ತನಕವೂ ಪ್ರತಿ ಹಂತದಲ್ಲೂ ನಮ್ಮ ನಿರ್ಧಾರಗಳ ಪರೀಕ್ಷೆ ಆಗುತ್ತಲೇ ಇರುತ್ತದೆ.
ನನ್ನ ಬಯಾಪ್ಸಿ ರಿಪೋರ್ಟ್ ಬಂದಾಗಲೂ ತಂದೆ ಮೊದಲು ಯೋಚಿಸಿದ್ದು ಸೆಕೆಂಡ್ ಒಪಿನಿಯನ್ ತೆಗೆದುಕೊಳ್ಳಬೇಕಾ ಎಂದು..?! ಕೆಲವರು ಬೇರೆ ಲ್ಯಾಬ್’ಗೆ ಸ್ಯಾಂಪಲ್ ಕಳಿಸಿ ಇನ್ನೊಮ್ಮೆ ಪರೀಕ್ಷಿಸುವುದು ಒಳ್ಳೆಯದು ಎಂತಲೇ ಹೇಳಿದ್ದರು. ಆದರೆ ಅದಕ್ಕೆ ಇನ್ನೂ ಸ್ವಲ್ಪ ಕಾಲ ತೆಗೆದುಕೊಳುತ್ತಿತ್ತು. ಏನಿಲ್ಲವೆಂದರೂ ೨೦ ದಿನವಾದರೂ ಆಗಬಹುದು. ಅಲ್ಲಿಯತನಕ ಕಾಯುವಂತಹ ಧೈರ್ಯ ಮಾಡಬೇಕಾ ಎಂಬುದು ನಮ್ಮ ಮುಂದಿದ್ದ ಪ್ರಶ್ನೆಯಾಗಿತ್ತು. ಬದುಕಿನ ವಿಷಯದಲ್ಲಿ ಅಂತಹ ರಿಸ್ಕ್ ತೆಗೆದುಕೊಳ್ಳುವುದು ತುಸು ಕಷ್ಟವೇ. ಹಾಗಾಗಿ ಮರುದಿನವೇ ಕ್ಯಾನ್ಸರ್ ವಾರ್ಡ್’ಗೆ ಶಿಫ್ಟ್ ಆಗುವ ನಿರ್ಧಾರ ಮಾಡಿದ್ದೆವು.
ಈಗೊಂದು ಹದಿನೈದು ದಿನದ ಹಿಂದೆ ತಮಿಳುನಾಡಿನವರೊಬ್ಬರು ನನಗೆ ಮೇಲ್ ಮಾಡಿದ್ದರು. ಅವರ ತಮ್ಮನಿಗೆ ಆಸ್ಟಿಯೋ ಸರ್ಕೋಮ ಉಂಟಾಗಿತ್ತು. ಅದೂ ಕೂಡ ೩ನೇ ಸ್ಟೇಜಿನಲ್ಲಿತ್ತು. ಕೀಮೋ ಥೆರಪಿ ಮಾಡಿ ಮುಗಿಸಿ; ಆಪರೇಷನ್ ಮಾಡಿ ಎಲುಬನ್ನ ಬದಲಾಯಿಸಲಾಯಿತು. ಆದರೆ ಆ ಎಲುಬಿನ ಸುತ್ತ ಇರುವ ಅಂಗಾಂಶಗಳಿಗೆ ಕ್ಯಾನ್ಸರ್ ಅದಾಗಲೇ ಹರಡಿದೆ ಎಂಬ ಅಂಶ ನಂತರ ತಿಳಿದುಬಂತು. ಡಾಕ್ಟರ್ ರೇಡಿಯೇಷನ್ ಮಾಡಬೇಕು ಎಂದಿದ್ದಲ್ಲದೇ; ಒಂದು ವೇಳೆ ರೇಡಿಯೇಷನ್ ಪರಿಣಾಮಕಾರಿಯಾಗದಿದ್ದಲ್ಲಿ ಕಾಲನ್ನು ತೆಗೆಯಬೇಕಾಗುತ್ತದೆ ಎಂದಿದ್ದಾರೆ. ಅದಕ್ಕೆ ಆ ವ್ಯಕ್ತಿ “ನಾವು ಕೆಳ ಮಧ್ಯಮ ವರ್ಗದವರು ಈಗಾಗಲೇ ಲಕ್ಷಗಟ್ಟಲೇ ಖರ್ಚು ಮಾಡಿದ್ದೇವೆ. ನನ್ನ ತಮ್ಮನಿನ್ನು ೨೧ ವರ್ಷದವ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ೩ನೇ ಸ್ಟೇಜಿನಲ್ಲಿರುವ ಕ್ಯಾನ್ಸರ್ ಗುಣಮುಖವಾಗಬಲ್ಲದಾ? ಚಿಕಿತ್ಸೆ ಮುಂದುವರೆಸಬೇಕಾ? ಏನೊಂದೂ ತಿಳಿಯುತ್ತಿಲ್ಲ. ಸಲಹೆ ನೀಡಿ” ಎಂದು ಕೇಳಿದ್ದರು. ಮುಂದಿನ ನಿರ್ಧಾರ ತೆಗೆದುಕೊಳ್ಳುವ ಗೊಂದಲದಲ್ಲಿದ್ದರು. ‘ದಯವಿಟ್ಟು ಡಾಕ್ಟರ್ ಹೇಳಿದಂತೆ ಚಿಕಿತ್ಸೆ ಮುಂದುವರೆಸಿ’ ಎಂದಷ್ಟೇ ಹೇಳಬಹುದಿತ್ತು. ಆತ ಖಂಡಿತವಾಗಿಯೂ ಇನ್ನೊಂದು ಅವಕಾಶಕ್ಕೆ ಹಕ್ಕುದಾರ. ಈ ಬಾರಿ ಚಿಕಿತ್ಸೆಯಿಂದ ಆತ ಸಂಪೂರ್ಣ ಗುಣಮುಖವಾಗುವ ಸಾಧ್ಯತೆಗಳಿರಬಹುದು. ಆತ ಮತ್ತೆ ಒಂದು ಹೊಸ ಬದುಕು ಶುರು ಮಾಡಬಹುದು. ಒಂದು ವೇಳೆ ಚಿಕಿತ್ಸೆ ನಿಲ್ಲಿಸಿದರೆ ಆತನಿಗಿರುವ ಆ ಸುವರ್ಣ ಅವಕಾಶವನ್ನು ಕಿತ್ತುಕೊಂಡಂತಲ್ಲವೇ..?! ಆದರೆ ಈ ನಡುವೆ ಆತನ ಕುಟುಂಬದ ಬಗ್ಗೆಯೂ ಯೋಚಿಸಿಬೇಕು. ಅವರಲ್ಲಿ ಇಂತಹ ಯೋಚನೆ ಸುಮ್ಮನೇ ಅಂತೂ ಬಂದಿರುವುದಿಲ್ಲ. ಇಂತಹ ಯೋಚನೆ ಬಂದಿದೆಯೆಂದರೆ ಅವರೆಷ್ಟು ಸಂಕಷ್ಟಗಳಿಗೆ ಒಳಗಾಗಿರಬಹುದು. ಆದರೆ ಬದುಕು ಎಲ್ಲದಕ್ಕಿಂತ ದೊಡ್ಡದು. ಬದುಕಿಗಾಗಿ ಯಾವುದನ್ನಾದರೂ ಎದುರಿಸಬಹುದು. “ನಾಲ್ಕನೇ ಸ್ಟೇಜಿನಲ್ಲಿದ್ದ ಕ್ಯಾನ್ಸರ್ ಗುಣಮುಖಗೊಂಡು ಆರೋಗ್ಯವಾಗಿ ಜೀವನ ನಡೆಸುತ್ತಿರುವವರು ಸಾಕಷ್ಟು ಜನರಿದ್ದಾರೆ. ಆತನನ್ನು ಈ ಅವಕಾಶದಿಂದ ವಂಚಿತಗೊಳಿಸಬೇಡಿ” ಎಂಬ ಸಲಹೆ ನೀಡಬೇಕಾಯಿತು. ಯಾವುದೋ ನಿರ್ಧಾರದಿಂದ ಜೀವನ ಪರ್ಯಂತ ಪಶ್ಚಾತ್ತಾಪ ಪಡುವುದಕ್ಕಿಂತ ಕೊನೆಯ ಘಳಿಗೆಯವರೆಗೂ ಪ್ರಯತ್ನ ಮಾಡಿದ ತೃಪ್ತಿ ಮುಖ್ಯವಲ್ಲವೇ?
ಇನ್ನೊಂದು ಘಟನೆ ವಿವರಿಸುತ್ತೇನೆ. ಅದನ್ನ ನೋಡಿದರೆ ಕೊನೆಯವರೆಗೂ ಪ್ರಯತ್ನ ಪಡಬೇಕು ಎಂಬ ನಿರ್ಧಾರವನ್ನೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ. ‘ಟ್ರಾನ್ಸ್’ಫಾರ್ಮೇಷನ್; ಕ್ರಿಯೇಟಿಂಗ್ ಅನ್ ಎಕ್ಸೆಪ್ಶನಲ್ ಲೈಫ್ ಇನ್ ದ ಫೇಸ್ ಆಫ಼್ ಕ್ಯಾನ್ಸರ್’ ಎಂಬ ಪುಸ್ತಕದ ಲೇಖಕಿ ಆಗಿರುವ ಗೇಲ್ ಓಬ್ರಿಯನ್ ಅವರ ಸಂದರ್ಶನವೊಂದನ್ನ ಓದುತ್ತಿದ್ದೆ. ಆಕೆ ಈಗ ಸಾಕಷ್ಟು ಕ್ಯಾನ್ಸರ್ ಸರ್ವೈವರ್’ಗಳಿಗೆ ಒಂದು ಹೊಸ ಬದುಕನ್ನ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಕೋಚಿಂಗ್’ನ್ನು ಆರಂಭಿಸಿದ್ದಾರೆ. ಕ್ಯಾನ್ಸರ್ ಸರ್ವೈವರ್’ಗಳಿಗೆ ಅಷ್ಟೆ ಅಲ್ಲದೇ; ಕ್ಯಾನ್ಸರ್’ಗೆ ಒಳಗಾಗಿರುವವರಿಗೆ ಭಾವನಾತ್ಮಕವಾಗಿ ಅದನ್ನು ಎದುರಿಸುವುದನ್ನು ಹೇಳಿಕೊಡುತ್ತಾ ನೈತಿಕ ಬೆಂಬಲ ನೀಡುತ್ತಿದ್ದಾರೆ. ತಾವು ಸ್ವತಃ ಕ್ಯಾನ್ಸರ್ ಸರ್ವೈವರ್ ಆಗಿರುವ ಗೇಲ್ ಇಂತಹ ಒಂದು ಕೋಚಿಂಗ್ ಆರಂಭಿಸಲು ತಮ್ಮ ತಾಯಿಯ ಘಟನೆ ಸ್ಪೂರ್ತಿ ಎನ್ನುತ್ತಾ ಘಟನೆ ವಿವರಿಸುತ್ತಾರೆ.
ಗೇಲ್ ಅವರ ತಾಯಿ ೧೯೯೩ರಲ್ಲಿ ನಾನ್-ಹಾಡ್ಕಿನ್ಸ್ ಲಿಂಫೋಮಾಗೆ ಒಳಗಾದಾರು. ಸರ್ಜರಿ ಹಾಗೂ ಕೀಮೋಥೆರಪಿಯ ಬಳಿಕ ಸಂಪೂರ್ಣ ಗುಣಮುಖರಾದರು. ಆದರೆ ೧೯೯೭ರಲ್ಲಿ ಕ್ಯಾನ್ಸರ್ ಮರಳಿ ಬಂದಿತ್ತು. ಈ ಬಾರಿ ಇನ್ನಷ್ಟು ಸರ್ಜರಿಗಳು. ಅದೆಲ್ಲವನ್ನು ನಗು ನಗುತ್ತಲೇ ಸ್ವೀಕರಿಸಿದರು. ೨೦೦೩ ರಲ್ಲಿ ಮತ್ತೆ ಮರುಕಳಿಸಿತ್ತು ಅಲ್ಲದೇ ಈ ಬಾರಿ ಅದು ಪ್ಯಾಂಕ್ರಿಯಾಸ್’ಗೆ ಕೂಡ ಹಬ್ಬಿತ್ತು. ಡಾಕ್ಟರ್’ಗಳು ಈ ಬಾರಿ ಕೂಡ ಕೀಮೋಥೆರಪಿ ತೆಗೆದುಕೊಳ್ಳಲು ಪ್ರೇರೇಪಿಸಿದರು. ಆದರೆ ಗೇಲ್’ನ ತಾಯಿ ಅದನ್ನ ನಿರಾಕರಿಸಿದರು. “ನಾನು ನನ್ನ ಈ ಪಯಣವನ್ನ ಇಲ್ಲಿಗೇ ಮುಗಿಸ ಬಯಸುತ್ತೇನೆ.” ಎಂದು ತಮ್ಮ ನಿರ್ಧಾರವನ್ನು ತಿಳಿಸಿದ್ದರು. ಅನಿವಾರ್ಯವಾಗಿ ಇಡೀ ಕುಟುಂಬ ಆ ತಾಯಿಯ ನಿರ್ಧಾರದೊಂದಿಗೆ ನಿಲ್ಲಬೇಕಾಯಿತು. ಇವರುಗಳು ಬಲವಂತ ಮಾಡುವಂತಿರಲಿಲ್ಲ. ಯಾಕೆಂದರೆ ಕೀಮೋ; ಸರ್ಜರಿ ಹಾಗೂ ಅದರ ಸೈಡ್ ಎಫೆಕ್ಟ್’ನ ನೋವನ್ನೆಲ್ಲಾ ಸಹಿಸಿಕೊಳ್ಳಬೇಕಾಗಿದ್ದು ಅವರ ತಾಯಿ. ನಿರಾಕರಿಸಿದ ಮೇಲೆ ಬಲವಂತವಾಗಿ ಆ ನೋವಿಗೆ ನೂಕುವಂತಿರಲಿಲ್ಲ. ತಾಯಿಯನ್ನ ಉಳಿಸಿಕೊಳ್ಳುವ ಪ್ರಯತ್ನ ಬಿಡಲೇ ಬೇಕಿತ್ತು. ಗೇಲ್ ಹೇಳುವಂತೆ ಅವರು ತಮ್ಮ ತಾಯಿಯ ಈ ನಿರ್ಧಾರದೊಂದಿಗೆ ನಿಲ್ಲುವುದು ತುಂಬಾ ದುಃಖಕರವಾಗಿತ್ತು. ಆದರೆ ಅನಿವಾರ್ಯ. ಅವರ ಎಂತಹ ಅಸಹಾಯಕತೆಯನ್ನು ಎದುರಿಸಿರಬಹುದು…??!
ಕ್ಯಾನ್ಸರ್ ಒಬ್ಬ ವ್ಯಕ್ತಿಯನ್ನ ಮಾತ್ರವಲ್ಲ. ಆತನ ಜೊತೆಗಿರುವ; ಜೊತೆಯಾಗಿರುವವ ಬದುಕಲ್ಲೂ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಈಗೊಂದು ೨ ವರ್ಷದ ಹಿಂದೆ ಒಬ್ಬರು ಮೇಲ್ ಮಾಡಿದ್ದರು. ಅವರ ತಮ್ಮನಿಗೆ ಎಂಗೇಜ್’ಮೆಂಟ್ ಆಗಿ ಕೆಲ ದಿನಗಳಾಗಿದ್ದವು ಅಷ್ಟೆ. ಆತನಿಗೆ ಕ್ಯಾನ್ಸರ್ ಉಂಟಾಗಿತ್ತು. ಆತನಿಗೆ ಚಿಕಿತ್ಸೆ ಆರಂಭಿಸಲಾಗಿತ್ತು. ಆ ಹುಡುಗಿ ಇಂತಹ ಕಠಿಣ ಸಮಯದಲ್ಲಿ ಆತನ ಜೊತೆ ನಿಲ್ಲಲು ಬಯಸಿದ್ದಳು. ಆದರೆ ನನಗೆ ಮೇಲ್ ಮಾಡಿದ ವ್ಯಕ್ತಿ ಈ ಬಗ್ಗೆ ಹೇಳುತ್ತಾ “ತಮ್ಮನಿಗೆ ಭವಿಷ್ಯವಿದೆಯೋ ಇಲ್ಲವೋ ಅನ್ನೋದೆ ಗೊತ್ತಿಲ್ಲ; ಅಂಥದ್ದರಲ್ಲಿ ಆಕೆಯ ಭವಿಷ್ಯವನ್ನು ಯಾಕೆ ಹಾಳು ಮಾಡುವುದು.? ಈ ಸಂಬಂಧ ಮುರಿದು ಬದುಕಲ್ಲಿ ಮುಂದುವರಿ ಎನ್ನುತ್ತಿದ್ದೇವೆ. ಆದರೆ ಆಕೆ ಕೇಳುತ್ತಿಲ್ಲ. ಏನು ಹೇಳುವುದೋ ಗೊತ್ತಾಗುತ್ತಿಲ್ಲ. ಸಲಹೆ ಕೊಡಿ” ಎಂದಿದ್ದರು. ಬದುಕು ಎಷ್ಟು ಕ್ರೂರ ಎನಿಸಿಬಿಟ್ಟಿತ್ತು. ಎಲ್ಲರೂ ಅವರವರ ಜಾಗದಲ್ಲಿ ಸರಿಯಾಗಿಯೇ ಇರುವಾಗ ಏನಂತ ಸಲಹೆ ಕೊಡುವುದು?!! “ನಿಮ್ಮ ಕಾಳಜಿಯನ್ನು ಆಕೆಗೆ ವಿವರಿಸಿ. ನಂತರ ಆಕೆಯೇ ನಿರ್ಧರಿಸಲಿ. ಆ ನಿರ್ಧಾರದ ಪರಿಣಾಮಗಳಿಗೂ ಸಿದ್ಧವಾಗಿರಲಿ” ಎನ್ನಬೇಕಾಯಿತು.
ಮೊದಲೇ ಹೇಳಿದಂತೆ ಕ್ಯಾನ್ಸರ್ ಪ್ರತಿ ಹಂತದಲ್ಲೂ ನಮ್ಮನ್ನ ಪರೀಕ್ಷಿಸುತ್ತದೆ. ನಮ್ಮ ನಿರ್ಧಾರಗಳಿಗೆ ಸವಾಲಾಗಿ ನಿಲ್ಲುತ್ತದೆ. ಆ ನಿರ್ಧಾರಗಳ ಮೇಲೆ ನಮ್ಮ ಇಡೀ ಬದುಕು ಅವಲಂಬಿತವಾಗಿರುತ್ತದೆ. ನಮ್ಮ ಬದುಕು ಮಾತ್ರವಲ್ಲ ನಮ್ಮ ಜೊತಯಾಗಿರುವವರ ಬದುಕು ಕೂಡ. ಒಂದು ತಪ್ಪು ನಿರ್ಧಾರ ಇಡೀ ಭವಿಷ್ಯ ನಾಶ. ಜೀವನ ಪರ್ಯಂತದ ಪಶ್ಚಾತ್ತಾಪ; ಹತಾಶೆ; ಅಸಹಾಯಕತೆ. ನಿರ್ಧಾರ ಸರಿಯಾಗಿದ್ದಲ್ಲಿ; ಪ್ರತಿ ಹಂತದಲ್ಲಿ ಉತ್ತಮ ನಿರ್ಧಾರ ತೆಗೆದುಕೊಂಡಲ್ಲಿ ಒಬ್ಬ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಆದರೆ ಅಂತಹ ನಿರ್ಧಾರ ತೆಗೆದುಕೊಳ್ಳುವುದು ಮಾತ್ರ ಬಹುದೊಡ್ಡ ಸವಾಲು..!!