ಅಂಕಣ ಆಕಾಶಮಾರ್ಗ

ಜಗತ್ತಿನ ಜಟಿಲ ಕಾರ್ಯಾಚರಣೆಯ ಕ್ಷಣಗಳು…

ಲೀಪಾ..
ಅತ್ಯಂತ ಜಟಿಲ ಮತ್ತು ಊರಿನ ಜನರೇ ಸುಲಭಕ್ಕೆ ತಲುಪಲಾರದ ಹೊರವಲಯದ ಪರ್ವತ ಪ್ರದೇಶವೆಂದರೆ  ಅದಿನ್ನೆಂಗಿದ್ದೀತು. ಇಲ್ಲಿಗೆ ಬರೊಬ್ಬರಿ 24 ಕಿ.ಮೀ. ದೂರದಲ್ಲಿರುವ ರೈಸಿನ್ ಎಂಬ ಇದ್ದುದರಲ್ಲಿ ಚಿಕ್ಕ ಪಟ್ಟಣದ ಬಳಿಯೆ ವಾಹನಗಳು ನಿಂತು ಹೋಗುತ್ತವೆ. ಇನ್ನೇನಿದ್ದರೂ ಅತ್ಯಂತ ದುರ್ಗಮ ಕಚ್ಚಾದಾರಿಯಲ್ಲಿ ಘಟಿಯಾ ಜೀಪುಗಳು ಮಾತ್ರ ಇಲ್ಲಿಗೆ ಜನರನ್ನು ಹೊತ್ತುಕೊಂಡು ಬರುತ್ತವೆ. ಸರಿಯಾದ ರಸ್ತೆ ಯಾಕಿಲ್ಲ..? ಇಲ್ಲಿನ ಕುಸಿಯುವ ಪರ್ವತ ಪ್ರದೇಶ ನಿರ್ಮಿಸಿದ ರಸ್ತೆಯನ್ನು ತಿಂಗಳೊಪ್ಪತ್ತಿಲ್ಲಿ ನುಂಗಿ ಮುಗಿಸುತ್ತವೆ. ಇಲ್ಲಿಂದ ಅಷ್ಟು ದೂರದಲ್ಲಿದೆ ದುರ್ಗಮವಾದ ಬಂಗೂಸ್ ವ್ಯಾಲಿ. ಅತ್ಯಂತ ಸುಂದರ ಪ್ರದೇಶವಾಗಿರುವ ಲೀಪಾ ಎರಡು ವಿಭಿನ್ನ ವಲಯವನ್ನಾಗಿ ಗುರುತಿಸಲಾಗಿದ್ದು ಮೇಲ್ಗಡೆಯ ಪೂರ್ವ ಭಾಗವನ್ನು ಡೈಖಾನ್ ವ್ಯಾಲಿ ಮತ್ತು ಪಕ್ಕದ ಇನ್ನೊಂದಿಷ್ಟು ವಲಯವನ್ನು ಚಾನ್ಸೇನ್ ಎನ್ನುತ್ತರೆ. ಪಾಕಿಗಳಲ್ಲಿ ಹೆಚ್ಚಿನವರು ಲೀಪಾ ಎಂದರೆ ಡೈಖಾನ ವ್ಯಾಲಿಯ ಬದೀಗೆ ಹೋಗುತ್ತಾರೆ. ಹಾಗೆಯೇ ಮಾಡುವಂತೆ ಅವರಿಗೆ ಪಾಕಿ ಅಧಿಕಾರ ಕೇಂದ್ರದ ಸೂಚನೆಯೂ ಇದೆ. ಕಾರಣ ಆದಷ್ಟು ಯಾರೂ ಈ ಅತೀ ಸುಂದರ ಪ್ರದೇಶಕ್ಕೆ ಭೇಟಿ ನೀಡುವುದು ಅವರಿಗೆ ಬೇಕಿಲ್ಲ. ಅದಕ್ಕೆ ರಸ್ತೆ ಸೇರಿದಂತೆ ಯಾವ ಸೌಲಭ್ಯವನ್ನೂ ಅಲ್ಲಿ ಪೂರೈಸಲಾಗಿಲ್ಲ.

ಅತಿ ಹೆಚ್ಚು ಎಂದರೆ ಸರಿಯಾಗಿ ಎರಡು ಸಾವಿರ ದಾಟದ ಜನಸಂಖ್ಯೆಯ ಲೀಪಾ ಹೊರ ಭಾಗವನ್ನು ಜನ ಸಾಮಾನ್ಯರಿಗೆ ಪ್ರದರ್ಶನಕ್ಕೀಡು ಮಾಡುವುದಿಲ್ಲ. ಕಾರಣ ಇಲ್ಲೇ ಹೊರಭಾಗದಲ್ಲಿ ಹಿಜ್ಬುಲ್ ಸಂಘಟನೆಯ ದ್ರೋಹಿಗಳು ದಟ್ಟ ಪರ್ವತ ಪ್ರದೇಶದ ಸೆರಗಿನಲ್ಲಿ ಬೀಡುಬಿಟ್ಟಿದ್ದರು. ಹಾಗಾಗಿ ಚಾನ್ಸೆನ್ ನಂತರದ ಪ್ರದೇಶ ಜನರಿಗೆ ಮುಕ್ತವಾಗಿಲ್ಲ. ಯಾವ ಸಾರ್ವಜನಿಕ ವಾಹನಗಳೂ ಇಲ್ಲಿಗೆ ಬರುವುದೇ ಇಲ್ಲ. ಜನ ವಸತಿ ಶೂನ್ಯ. ಇಲ್ಲಿ ನಡೆದು ಬರುವ ಚಾರಣಿಗರೂ ಇಲ್ಲ. ಬಂದರೂ ಗಡಿ ಕಾಯುವ ಪಾಕಿಗಳ ಬಂಕರ್ ಮತ್ತು ಸೈನಿಕ ಪಡೆಯ ಕಣ್ತಪ್ಪಿಸುವುದು ಸಾಧ್ಯವೇ ಇಲ್ಲ. ಕೇವಲ ನೂರೇ ಮೀ. ದೂರದಲ್ಲಿ ಈ ಪ್ರದೇಶದ ಪಾಕಿ ಸೈನಿಕರ ಅಡ್ಡೆಗಳಿವೆ. ಅವರ ಕಣ್ಣಿಗೆ ಮೊದಲು ಇದರ ಸುತ್ತ ಮುತ್ತಲ ಪ್ರದೇಶ ಅತ್ಯಂತ ಸ್ಪಷ್ಟವಾಗಿ ಕಣ್ಣಿಗೆ ಬೀಳುತ್ತವೆ. ಬೇಕೆಂದರೆ ಕ್ಷಣಾರ್ಧದಲ್ಲಿ ಸೆಟ್‍ಲೈಟ್ ಇಮೇಜ್‍ನ್ನು ಉಪಗ್ರಹಗಳು ರವಾನಿಸಬಲ್ಲವು.

ಹೀಗೆ ಸ್ವಂತ ನೆಲದವರೇ ಅಲ್ಲಿಗೆ ತಲುಪಲು ಇಷ್ಟು ಕಷ್ಟವಿದ್ದರೆ ಭಾರತೀಯ ಕಡೆಯಿಂದ ಅಸಾಧ್ಯ ಎನ್ನುವ ಪರಿಸ್ಥಿತಿಯಿದೆ. ಅದಕ್ಕೆ ಮುಖ್ಯ ಕಾರಣ ಅದರ ಕೆಳಗಿರುವ ಖಬರ್‍ನಾಲಾ ರಭಸವಾಗಿಯೂ, ಆಳವಾಗಿಯೂ ಹರಿಯುತ್ತದೆ. ನಮ್ಮ ಕಡೆಯ ದಖೋಟಿಯ ಹರಿವೂ ಜಂಖಾ ನಾಲದ ಬದಿಯೂ ಇದಕ್ಕೆ ಪೂರಕ. ಇದನ್ನೆ ಉರಿದಾಳಿ ಸಂದರ್ಭದಲ್ಲಿ ಉಗ್ರರು ಉಪಯೋಗಿಸಿದ್ದರು. ಝೀಲಂ ನದಿಯನ್ನು ಸೇರುವ ಮೊದಲು ಅದು ಬಂಗೂಸ ವ್ಯಾಲಿ ಕಡೆಯಿಂದ ಪೂರ್ತಿ ಲೀಪಾವನ್ನು ಬಳಸುತ್ತದೆ. ಅದೇ ಒಂದು ರೀತಿಯಲ್ಲಿ ಭಾರತದ ಕಡೆಯಿಂದ ಪಾಕಿಗಳಿಗೆ ತಡೆಗೋಡೆ. ಹಾಗಾಗಿ ಅದನ್ನು ದಾಟುವ ಮೊದಲೇ ಆ ಕಡೆಯಿಂದ ಗುಂಡಿನ ಮೊರೆತ ಕೇಳಿಸುತ್ತದೆ. ಯಾವ ಲೆಕ್ಕದಲ್ಲೂ ಅದನ್ನು ದಾಟಿ, ಕಡಿದಾದ ಪರ್ವತ ಪ್ರದೇಶದ ಸೆರಗು ಸವರಿಕೊಂಡು ನುಸುಳುವ ಸಾಧ್ಯತೆ ಅಸಾಧ್ಯ. ಜತೆಗೆ ಯಾವಾಗೆಂದರೆ ಆಗ ಸಿಡಿಯುವ ಲ್ಯಾಂಡ್ ಮೈನ್ಸುಗಳನ್ನು ಅಲ್ಲಿ ಹುದುಗಿಸಲಾಗಿದ್ದು ಅವೆಲ್ಲವೂ ಈಗ ಎಲ್ಲೆಲ್ಲಿ ಅಡಗಿವಿಯೋ ದೇವರಿಗೇ ಗೊತ್ತು.

ಇನ್ನು ತೀರ ಕಡಿದಾದ ಪರ್ವತದ ಆ ಕಡೆಯ ಭಾಗದಲ್ಲಿ ಉಗ್ರರ ಕ್ಯಾಂಪಿದ್ದು ಅದಕ್ಕೂ ಮೊದಲು ಪಾಕಿ ಪಡೆ ಗುಡ್ಡದ ಮೇಲೆ ಕಾಯ್ದು ಕೂತಿರುತ್ತದೆ ಕೆಳಗೆ ಬೀಡು ಬಿಟ್ಟಿರುವ ಅವರಿಗೂ, ತಮ್ಮ ನಿಯಂತ್ರಣ ರೇಖೆಗೂ ಸುರಕ್ಷೆ ಒದಗಿಸುತ್ತಾ. ಹೀಗಾಗಿ ನಮ್ಮ ಗಡಿ ಕ್ರಾಸ್ ಮಾಡಿದ ಕಮ್ಯಾಂಡೊ ಪಡೆ ತುಂಬ ನಿಖರವಾಗಿ ಸಂಪೂರ್ಣವಾಗಿ ಮರದ ಕಾಂಡಗಳ ಆಸರೆ ಪಡೆಯುತ್ತಾ ಲೀಪಾ ಪ್ಯಾಂಪು ತಲುಪಲು ಪರ್ವತದ ಬುಡವನ್ನು ಬಳಸಿ ಹೋಗಬೇಕಿತ್ತು. ಮೇಲ್ಗಡೆ ಕೆಲವೇ ನೂರು. ಮೀ. ದೂರದಲ್ಲಿ ಪಾಕಿಗಳ ಚಲನವಲನ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರ ತುಂಬಿರುವ ಬಂಕರುಗಳು ಗಡಿ ಕಾಯಲು ಕೂತಿರುತ್ತವೆ. ಇದೆಲ್ಲವನ್ನೂ ಮೀರಿಸಿ ಲೀಪ ತಲುಪಿದ ನಮ್ಮ ಪ್ಯಾರಾ ಮಿಲಿಟರಿ ಕಮ್ಯಾಂಡೊಗಳು ಸರಿಯಾಗಿ ನಿಗದಿತ ಸಮಯಕ್ಕೆ ನಾಲ್ಕೂ ಕಡೆಯಲ್ಲೂ ಟಾರ್ಗೆಟ್ ಎನ್ನುತ್ತಿದ್ದಂತೆ ದಾಳಿ ನಡೆಸಿದ್ದಾರೆ. ಕೇವಲ ಅರ್ಧ ಗಂಟೆಗೂ ಕಡಿಮೆ ಅವಧಿಯಲ್ಲಿ ಸಂಪೂರ್ಣ ಸ್ಮಶಾನ ಸದೃಶ್ಯ ವಾತಾವರಣ ನಿರ್ಮಿಸಿದ ಪಡೆಗಳು ಮಿಂಚಿನಂತೆ ಹಿಂದಿರುಗಿದ್ದಾರೆ. ಉಗ್ರರು ಅದೆಷ್ಟು ಮೈಮರೆತು ಮಲಗಿದ್ದರೆಂದರೆ ಎಷ್ಟೊ ಜನಕ್ಕೆ ತಾವು ಸಾಯುತ್ತಿರುವುದೇ ಅರಿವಿಗೆ ಬಂದಿಲ್ಲ.

ಇನ್ನೊಂದು ಖಚಿತ ಮೂಲದ ಪ್ರಕಾರ ಪ್ರತಿ ಕ್ಯಾಂಪುಗಳೂ ಕನಿಷ್ಟ ನಲ್ವತ್ತು ಜನರನ್ನು ಹೊಂದಿರುತ್ತವೆ. ಹಾಗೆ ಪ್ರತಿ ಕ್ಯಾಂಪುಗಳ ಜನರನ್ನು ಲೆಕ್ಕ ಹಾಕಿದರೂ ಇನ್ನೂರು ಚಿಲ್ರೆ ಜನರು ಕರೆಂಟು ಹೊಡೆದ ಕಾಗೆಗಳ ಹಾಗೆ ಉದುರಿ ಬಿದ್ದಿದ್ದಾರೆ. ಆದರೂ ಅಧಿಕೃತವಾಗಿ ನಲ್ವತ್ತಕ್ಕೆ ನಿಲ್ಲಿಸಿದ್ದು ಯಾಕೆಂದರೆ ಗ್ರೆನೇಡ್ ದಾಳಿ ನಡೆದಾಗ ಕ್ಯಾಂಪಿನಿಂದ ಎಗರಿ ಹೊರಬಿದ್ದ ಶವಗಳ ಲೆಕ್ಕ ಸಿಕ್ಕಿದ್ದು ಅಷ್ಟೆ. ಟ್ರಕ್ಕುಗಟ್ಟಲೇ ಲೋಡು ಯುದ್ಧ ಸಾಮಗ್ರಿಗಳನ್ನು ತುಂಬಿಕೊಂಡಿದ್ದ ಗೋದಾಮಿನಂತಿದ್ದ ಕ್ಯಾಂಪುಗಳು ಸ್ಫೋಟಗೊಂಡಾಗ ಇದರ ನಾಲ್ಕು ಪಟ್ಟು ಉಗ್ರರು ಲೆಕ್ಕಕ್ಕೆ ಸಿಗದಂತೆ ಉರಿದು ಹೋಗಿದ್ದಾರೆ. ಇನ್ನು ಅವರ ಕೈಯಲ್ಲಿದ್ದ ಸ್ಫೊಟಕಗಳಲ್ಲದೇ ಭಾರತೀಯ ನೆಲೆಯಿಂದ ಹಾರಿದ ಸಿಡಿತಲೆಯ ರಾಕೇಟ್‍ಗಳು ಕ್ಯಾಂಪುಗಳನ್ನು ನಿರ್ದಿಷ್ಟವಾಗಿ ಧ್ವಂಸಗೊಳಿಸುತ್ತಿದ್ದಂತೆ, ಪಾರಾ ಮಿಲಿಟರಿ ಪಡೆಗೆ `ಫಿನಿಶ್’ ಎನ್ನುವ ಸೂಚನೆ ಹೋಗಿದೆ. ಕಮ್ಯಾಂಡೊಗಳು ದೊಡ್ಡ ಗೆಲುವಿನ ಹೆಜ್ಜೆ ಇಡುತ್ತಾ ಗಡಿಯತ್ತಾ ಕೂಚು ಮಾಡಿದ್ದಾರೆ. ಅಲ್ಲಿಗೆ `ಆಪರೇಶನ್ ಘಾತಕ್’ ಮುಕ್ತಾಯಗೊಂಡಿದೆ.

ಅಸಲಿಗೆ ಎಂಥೆಂಥಾ ವೈಜ್ಞಾನಿಕ ಮತ್ತು ತಾಂತ್ರಿಕ ಬೆಂಬಲ ಈ ಪಡೆಗಳಿಗೆ ಒದಗಿಸಲಾಗಿತ್ತೆಂದರೆ, ಸರಿಯಾಗಿ ಒಂಬತ್ತು ದಿನಗಳ ಮೊದಲು ಹೀಗೊಂದು ಕಾರ್ಯಾಚರಣೆ ಕೈಗೊಳ್ಳಬೇಕೆಂದು ನಿರ್ಧರಿಸುತ್ತಿದ್ದಂತೆ ಗುಪ್ತಚರ ಪಡೆ ಅಲ್ಲಿನ ಸಂಪೂರ್ಣ ವಿವರ, ಸಂಖ್ಯೆ ಮತ್ತು ಲಭ್ಯವಿರುವ ದಾಸ್ತಾನು ಎಲ್ಲಾ ಒದಗಿಸಿತ್ತು. ಆದರೂ ನಕ್ಷೆಯ ಬೆಂಬಲಿವಿಲ್ಲದೆ ಯಾವ ಅಪರೇಶನ್ನೂ ಆಗಲಾರದು. ಹಾಗಾಗಿ ಕೂಡಲೇ ಉಪಗ್ರಹದಿಂದ ನೇರ ವಿಡೀಯೋ ಸೌಲಭ್ಯದ ಚಿತ್ರಣವನ್ನೇ ಪಡೆದಿದ್ದಾರೆ. ಅದರಲ್ಲಿ ಭಾರತದ ಗಡಿಗುಂಟ ಇರುವ, ತಲುಪಬೇಕಾದ ದಾರಿಯ ಚಿತ್ರಣಗಳನ್ನು ಗುರುತಿಸಲಾಗಿದೆ. ಕಾರಣ ಇಲ್ಲಿರುವುದು ಸಾಲುಸಾಲು ಪರ್ವತ ಶ್ರೇಣಿಗಳು. ನೇರ ಮಾರ್ಗದಲ್ಲಿ ಲ್ಯಾಂಡ್ ಮೈನ್ಸುಗಳಿದ್ದರೆ..? ಅದಕ್ಕೆ ತೀರ ನಾಲಾ ಪ್ರದೇಶದ ಬಳಸುದಾರಿ ಮತ್ತು ಪರ್ವತ ಸೆರಗಿನಲ್ಲಿ ಚಲಿಸುವ ವ್ಯವಸ್ಥೆ ನಡೆದಿದೆ.

ಇನ್ನು ಉಗ್ರ ನೆಲೆಗಳನ್ನು ತಲುಪುವ ಮೊದಲೇ ಎನ್.ಟಿ.ಆರ್.ಓ. ಅಲ್ಲಿನ ಸಂಪೂರ್ಣ ಇಮೇಜನ್ನು ಬಿಡಿಸಿಟ್ಟಿತ್ತು. ನಂತರದಲ್ಲಿ ಇಮೇಜ್ ಸೆನ್ಸಾರ್‍ಗಳ ಹಲವು ಉಪಕರಣಗಳು ಅಲ್ಲಿರುವ ಮಾಹಿತಿಯನ್ನು ಪ್ರತ್ಯೇಕಿಸಿ ಒದಗಿಸಿತ್ತು. ಇದರಿಂದ ಮಾನವ ಮತ್ತು ಇತರ ವಸ್ತುಗಳ ವ್ಯತ್ಯಾಸದ ಸಹಜತೆ ಅಲ್ಲಿ ಲಭ್ಯವಿತ್ತು. ಪ್ರತಿ ಸೈನಿಕನ ದಿರಿಸಿಗೆ ಅಳವಡಿಸಿದ್ದ ಕ್ಯಾಮೆರಾ ನೇರ ಪ್ರಸಾರ ಇತ್ತ ಕುಳಿತಿದ್ದ ನಿಯಂತ್ರಣ ಕೋಣೆಯನ್ನು ಸೇರುತ್ತಿತ್ತು. ಅದರೊಂದಿಗೆ ಅತಿ ದೊಡ್ಡ ರಿಸ್ಕು ಎಂದರೆ ಕಾರ್ಯಾಚರಣೆಯ ವ್ಯಾಪ್ತಿ ಸುಮಾರು ಇನ್ನೂರು ಕಿ.ಮೀ. ಆಸುಪಾಸು. ಅಲ್ಲಿಯವರೆಗೆ ತಲುಪಿ ಅದರ ಜಾಗದಲ್ಲಿ ಸೆನ್ಸಾರ್‍ಗಳನ್ನು ಸ್ಥಾಪಿಸುತ್ತಿದ್ದಂತೆ ಉಪಗ್ರಹಗಳ ಮೂಲಕ ದೊರೆಯುವ ಸಿಗ್ನಲ್‍ನಿಂದ ಅದರ ಗುರಿಯನ್ನು ಗುರುತಿಸಿಕೊಂಡಿದ್ದಾರೆ. ನಿರ್ದಿಷ್ಟ ಸಿಡಿತಲೆಯ ರಾಕೇಟ್‍ಗಳು ಇತ್ತಲಿನ ನೆಲೆಯಿಂದ ಏಕಕಾಲಕ್ಕೆ ಅತ್ತ ಹಾರಿ ನೆಲೆಯ ಮೇಲೆ ಬಿದ್ದಿವೆ. ಈ ರಾಕೆಟ್ ತುದಿಯಲ್ಲಿ ಇರುವ ಸೆನ್ಸಾರ್‍ಗಳನ್ನು ಉಪಗ್ರಹದ ಮೂಲಕ ನಿಯಂತ್ರಿಸಬಹುದಾಗಿದ್ದು ಇವು ಗುರಿಯತ್ತ ನುಗ್ಗುವಾಗ ಆತ್ತಲಿಂದ ಸೂಸುವ ಸಿಗ್ನಲ್‍ನ್ನು ಗಮನಿಸಿಕೊಂಡು ನುಗ್ಗುತ್ತವೆ.
ಹೀಗಾಗಿ ನೆಲೆಗಳು ನಾಶವಾಗುತ್ತಿದ್ದಂತೆ ಚೆಲ್ಲಾಪಿಲ್ಲಿಯಾಗತೊಡಗಿದ ಉಗ್ರರನ್ನು ಹೊರಕ್ಕೆ ಕಾಯ್ದು ನಿಂತು ಪಡೆಗಳು ಹೊಡೆದುರುಳಿಸಿವೆ. ಇದೆಲ್ಲವೂ ಏಕಕಾಲಕ್ಕೆ ನಾಲ್ಕೂ ಗುರಿಯತ್ತ ನಡೆಸುವ ಆಪರೇಶನ್ ಇದೆಯಲ್ಲ ಅದು ಇವತ್ತು ಜಾಗತಿಕವಾಗಿ ಹುಬ್ಬೇರಿಸುತ್ತಿದೆ. ಕಾರ್ಯಾಚರಣೆಯ ವ್ಯಾಪ್ತಿ ದೊಡ್ಡದ್ದಿಷ್ಟೂ ನಿಖರತೆ ಕಡಿಮೆಯಾಗತೊಡಗುತ್ತದೆ. ಅದರೆ ಇಲ್ಲಿ ಹಾಗಾಗಿಲ್ಲ. ಪ್ರತಿ ನೆಲೆಯ ಮೇಲಿನ ದಾಳಿ ಸಕ್ಸಸ್ಸೇ. ಜತೆಗೆ ಬಿಂಭೇರ್ ಕ್ಯಾಂಪು ಕೂಡಾ ಸುಲಭಕ್ಕೆ ಕೈಗೆಟುಕು ವಂತಹದ್ದೇನಲ್ಲ. ಅತ್ತ ಮೀರ್‍ಪುರ್ ಇತ್ತ ಜಮ್ಮುವಿನ ಮಧ್ಯದಲ್ಲಿರುವ ಬಿಂಭೇರ್ ಸಾಕಷ್ಟು ಸುಲಭ ಸಂಪರ್ಕ ಸಾಧ್ಯತೆ ಇರುವ ಪಟ್ಟಣ. ಅದರ ಹೊರವಲಯದ ವ್ಯಾಪ್ತಿ ತೀರ ಭಾರತದ ತುದಿಯವರೆಗೂ ಹಬ್ಬಿದ್ದು ಬಫರ್ ಝೋನ್ ಮಾತ್ರ ರಕ್ಷಣಾ ವಲಯ ಎಂದು ಖಾಲಿ ಮಾಡಲಾಗಿದೆ. ಹಾಗಾಗಿ ಇಲ್ಲಿ ಉಗ್ರರ ನೆಲೆ ಎಲ್ಲಕ್ಕಿಂತಲೂ ಸೆಫ್ ಎಂದೇ ಭಾವಿಸಲಾಗುತ್ತಿತ್ತು. ಕಾರಣ ಪಕ್ಕದಲ್ಲೇ ಅವರ ದೊಡ್ಡ ಮಟ್ಟದ ಕಾರ್ಯಾಲಯವಿದ್ದು ಅಲ್ಲಿಯವರೆಗೂ ಸೈನಿಕರು ಇನ್ಯಾರೂ ತಲುಪಲಾರರು ಎಂದೇ ಭಾವಿಸಲಾಗಿತ್ತು. ಆದರೆ ಅದೆಲ್ಲವನ್ನೂ ಮೀರಿ 37 ನೇ ರಾಷ್ಟ್ರೀಯ ರೈಫಲ್ಸ್ ಪಡೆ ಎ.ಕೆ. 47, ಗ್ರೇನೆಡು, ರಾಕೆಟ್ ಲಾಂಚರು ಮತ್ತು ಎಲ್ಲ ರೀತಿಯ ನಿರೋಧಕವಿರುವ ಅತ್ಯಾಧುನಿಕ ಸೆನ್ಸಾರ್‍ಗಳೊಂದಿಗೆ ಯಶಸ್ವಿಯಾಗಿ ನುಗ್ಗಿ ಬಂದಿದೆ.

ಅದರ ಮೇಲ್ಭಾಗದಲ್ಲಿರುವ ಕೇಲಾ ಇವತ್ತು ನಕಾಶೆಯಲ್ಲೂ ಲಭ್ಯವಿರದ ಮೂಲೆಯ ಪುಟಾಣಿ ಹಳ್ಳಿ. ಆದರೆ ಉಗ್ರರಿಗೆ ಆತುಕೊಂಡು ಕೂತು ನಿಗಾವಹಿಸಲು ಸುಲಭ ಅನುಕೂಲವಾದ ಜಾಗವಾಗಿತ್ತು. ಎತ್ತರದಲ್ಲಿದ್ದು ಏಕೈಕ ಕಣಿವೆ ಮಾರ್ಗ ಹೊಂದಿರುವ ಕೇಲಾ ಕ್ಯಾಂಪು ಎರಡೂ ಕಡೆಯಲ್ಲಿ ಸಣ್ಣದಾಗಿ ನೀರಿನ ಹರಿವಿರುವ ಪ್ರದೇಶ. ಅದರಲ್ಲೂ ಸಾಕಷ್ಟು ನೀರಿನ ಲಭ್ಯತೆಯಿರುವ ಪ್ರದೇಶವನ್ನೇ ನೆಲೆಯನ್ನಾಗಿ ಪರಿವರ್ತಿಸುತ್ತಾರೆನ್ನುವುದೂ ಕಾಮನ್‍ಸೆನ್ಸ್.

ಕೊನೆಯ ಕ್ಷಣದವರೆಗೂ ಸೈನಿಕರಿಗೂ ಮಾಹಿತಿ ಇಲ್ಲದ ಕಾರ್ಯಾಚರಣೆಯ ಒಂದು ಗಂಟೆಗೂ ಮೊದಲು ಪಡೆಯನ್ನು ಸಿದ್ಧಪಡಿಸುವಂತೆ ಕಮಾಂಡರ್‍ಗಳಿಗೆ ಸೂಚಿಸಲಾಗಿದೆ. ಒಂದು ಬಾರಿ ಹೇಳಿದರೆ ಸಂಪೂರ್ಣ ಅರ್ಥೈಸಿಕೊಳ್ಳುವ ನಿಖರ ಕಮ್ಯಾಂಡೊಗಳನ್ನು ಆಯ್ದು ಪ್ರತಿ ನೆಲೆಗೆ ನಾಲ್ಕೈದು ಜನರಂತೆ ವಿಭಾಗಿಸಿ ಅವರೊಂದಿಗೆ ಏಕ ಮುಖ ಸಂವಹನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರಿಂದ ಶತ್ರು ನೆಲೆಯ ರೇಡಿಯೋ ಫ್ರಿಕ್ವೆನ್ಸಿಯಲ್ಲಿ ಸಿಗಬಾರದು ಎನ್ನುವ ಲೆಕ್ಕಾಚಾರವಿರುತ್ತದೆ. ಅಂದಹಾಗೆ ಈ ಎಲ್ಲಾ ಮಾಹಿತಿ ವಿನಿಮಯ ಕಳೆದ ಹತ್ತು ದಿನದಿಂದ ನಡೆಯುತ್ತಿದ್ದುದು ವಿಶೇಷ ಫೆÇೀನುಗಳಲ್ಲಿ ಮಾತ್ರ. ಇದು ಸರಿಯಾಗಿ ಎರಡು ದಿನ ಮೊದಲೇ ನಡೆಯಬೇಕಿತ್ತು ಆದರೆ ಅದ್ಯಾಕೊ ಕೊನೆಯ ಕ್ಷಣದಲ್ಲಿ ಮುಂದಕ್ಕೆ ಹಾಕಲಾಗಿತ್ತು. ಅಂತಿಮವಾಗಿ ಕಟ್ಟ ಕಡೆಯ ಸೈನಿಕ ಗಡಿಯೊಳಕ್ಕೆ ಕಾಲಿಟ್ಟು ನಡೆದು ಬರುತ್ತಿದ್ದರೆ ಪೂರ್ತಿ ಸೈನ್ಯದ ಹರ್ಷೊದ್ಗಾರ ಮುಗಿಲು ಮುಟ್ಟಿತ್ತು.

Facebook ಕಾಮೆಂಟ್ಸ್

ಲೇಖಕರ ಕುರಿತು

Santoshkumar Mehandale

ಅಂಕಣಕಾರರಾಗಿರುವ ಸಂತೋಷ್ ಕುಮಾರ್ ಮೆಹಂದಲೆ, ಮೂಲತಃ ಉತ್ತರಕನ್ನಡ ಜಿಲ್ಲೆಯವರಾಗಿದ್ದು, ಪ್ರಸ್ತುತ ಕೈಗಾದಲ್ಲಿ ಉದ್ಯೋಗಿಯಾಗಿದ್ದಾರೆ. ಇದುವರೆಗೆ ೮ ಕಾದಂಬರಿಗಳು, ೩ ಕಥಾ ಸಂಕಲನಗಳೂ ಸೆರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!