Featured ಅಂಕಣ

ಕ್ಯಾನ್ಸರ್’ಗೆ ಅರಿಶಿನ ಎಂಬ ಮಹಾಮಂತ್ರ …

     ‘ಅರಿಶಿನ’ ಭಾರತೀಯರ ಬದುಕಿನ ಒಂದು ಅವಿಭಾಜ್ಯ ಅಂಗ. ನಿತ್ಯ ಪೂಜೆ; ಹಬ್ಬಹರಿದಿನಗಳಲ್ಲಿ ಅರಿಶಿನ ಇರಲೇಬೇಕು. ಅದಿಲ್ಲದೆ ಯಾವ ಶುಭಕಾರ್ಯವೂ ನಡೆಯುದಿಲ್ಲ. ಆಹಾರ ಪದ್ಧತಿಯಲ್ಲೂ ಕೂಡ ಅರಿಶಿನದ ಪಾತ್ರ ಅಷ್ಟೇ ಪ್ರಮುಖವಾಗಿದೆ. ಅರಿಶಿನವಿಲ್ಲದೆ ಭಾರತೀಯರಿಗೆ ಅಡುಗೆಯೇ ಇಲ್ಲ. ಅಲ್ಲದೇ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಮನೆಮದ್ದುಗಳಲ್ಲಿಯೂ ತೀರ ಅವಶ್ಯಕ ಎನಿಸಿಕೊಂಡಿದೆ. ಈಗ ಅರಿಶಿನದಲ್ಲಿ ಕ್ಯಾನ್ಸರನ್ನು ಗುಣಪಡಿಸುವ ಶಕ್ತಿಯೂ ಇದೆ ಎನ್ನಲಾಗುತ್ತಿದೆ. ಅದರ ಮೇಲೆ ಸಾಕಷ್ಟು ಪ್ರಯೋಗಗಳು ನಡೆಯುತ್ತಿದೆ.

          ಬ್ರಿಟನ್ನಿನ ವಿಕ್ಕಿ ಸ್ಟುವರ್ಟ್ ಎಂಬಾಕೆ ಕ್ಯಾನ್ಸರ್’ಗೊಳಗಾದಾಗ ಕೀಮೋಥೆರಪಿ ಹಾಗೂ ಸರ್ಜರಿಯನ್ನು ನಿರಾಕರಿಸಿದಳು. ಆಗ ಡಾಕ್ಟರ್ ಆಕೆಯ ಆಹಾರಪದ್ಧತಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಹೇಳಿ ಅರಿಶಿನವನ್ನು ಹೆಚ್ಚು ಸೇವಿಸಿವಂತೆ ಸಲಹೆ ನೀಡಿದರು. ಅದರ ಜೊತೆಗೆ “ಇದು ಕ್ಯಾನ್ಸರ್’ನ್ನು ಗುಣಪಡಿಸುತ್ತದೆ ಎಂದೇನಲ್ಲ” ಎಂದು ಕೂಡ ಹೇಳಿದ್ದರು. ಆದರೆ ಆಶ್ಚರ್ಯಕರ ಎಂಬಂತೆ ಆಕೆ ಕ್ಯಾನ್ಸರ್’ನಿಂದ ಸಂಪೂರ್ಣವಾಗಿ ಗುಣಮುಖಳಾದಳು. ಈ ಕುರಿತು ಮಾತನಾಡುತ್ತಾ ಸ್ಟುವರ್ಟ್ “ಅರಿಶಿನ ಕ್ಯಾನ್ಸರ್’ಗೆ ಒಳ್ಳೆಯ ಚಿಕಿತ್ಸೆ. ಆದರೆ ಡಾಕ್ಟರ್’ಗಳು ಅದನ್ನು ನೇರವಾಗಿ ಒಪ್ಪಿಕೊಳ್ಳುವುದಿಲ್ಲ” ಎಂದಿದ್ದಾಳೆ. ನಿಜವಿರಬಹುದು. ಆದರೆ ಅದನ್ನು ಹಾಗೆ ಹೇಳುವ ಬದಲು ಡಾಕ್ಟರ್’ಗಳು ನೇರವಾಗಿ ಇದನ್ನು ಒಪ್ಪಿಕೊಳ್ಳುವ ಹಂತವನ್ನು ತಲುಪಿಲ್ಲ ಎನ್ನಬಹುದು. ಯಾಕೆಂದರೆ ಇದರ ಮೇಲೆ ಕ್ಲಿನಿಕಲ್ ಟ್ರಯಲ್’ಗಳು ಇನ್ನೂ ಸಾಕಷ್ಟು ನಡೆದು ಅಧಿಕೃತಗೊಳ್ಳಬೇಕಿದೆ.

      ವಿಕ್ಕಿ ಸ್ಟುವರ್ಟ್ ಹೇಳಿದಂತೆ ಅರಿಶಿನ ಕ್ಯಾನ್ಸರ್’ಗೆ ಒಂದು ಉತ್ತಮ ಪರಿಹಾರ ಎನ್ನುವುದನ್ನ ಒಪ್ಪಿಕೊಂಡಾಗ ನಮ್ಮಲ್ಲಿ ಒಂದು ಪ್ರಮುಖ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ನಾವು ಭಾರತೀಯರು ಅಡುಗೆಯಲ್ಲಿ ಪ್ರತಿನಿತ್ಯ ಅರಿಶಿನವನ್ನು ಬಳಸಿಯೇ ಬಳಸುತ್ತೇವೆ. ಹಾಗೆ ನೋಡಿದರೆ ಭಾರತೀಯರಿಗೆ ಕ್ಯಾನ್ಸರ್ ಬರಲೇಬಾರದು. ಆದರೆ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ದಿನದಿಂದ ದಿನಕ್ಕೆ ಕ್ಯಾನ್ಸರ್’ಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಿದ್ದಲ್ಲಿ ಅರಿಶಿನ ಕ್ಯಾನ್ಸರ್’ ವಿರುದ್ಧ ಕೆಲಸ ಮಾಡುವುದು ಹೇಗೆ?

        ಅರಿಶಿನದಲ್ಲಿ ಅದಕ್ಕೆ ಹಳದಿ ಬಣ್ಣ ಕೊಡುವ ಪದಾರ್ಥ ಕರ್ಕ್ಯುಮಿನ್ ಎಂಬ ಅಂಶ. ಈಗ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಬಹುದು ಎನ್ನಲಾಗುತ್ತಿರುವುದು ಈ ಕರ್ಕ್ಯುಮಿನ್ ಬಗ್ಗೆಯೇ.  ಹಾಗಂತ ಸಂಪೂರ್ಣ ಅರಿಶಿನವೇ ಕರ್ಕ್ಯುಮಿನ್ ಆಗಿರುವುದಿಲ್ಲ. ಅಂದರೆ ೫ಗ್ರಾಂ ಅರಿಶಿನದ ಪುಡಿಯನ್ನು ತೆಗೆದುಕೊಂಡರೆ ಅದರಲ್ಲಿ ಕರ್ಕ್ಯುಮಿನ್ ಕೇವಲ ೦.೧೫ರಿಂದ ೦.೨ಗ್ರಾಂನಷ್ಟು ಮಾತ್ರ ಇರುತ್ತದೆ. ಅದು ಬಹಳ ಕಡಿಮೆ. ಕ್ಯಾನ್ಸರ್ ಚಿಕಿತ್ಸೆಗೆ ಪ್ರತಿದಿನ ಕನಿಷ್ಟ ೭-೮ಗ್ರಾಂ ಕರ್ಕ್ಯುಮಿನ್ ಬೇಕಾಗುವುದು. ಹಾಗಾದರೆ ನಾವು ನಿತ್ಯ ಎಷ್ಟು ಅರಿಶಿನ ತಿನ್ನಬೇಕಾಗುತ್ತದೆ ಎಂದು ಯೋಚಿಸಿ!!. ಅಲ್ಲದೇ ನಾವು ಸೇವಿಸುವ ಅರಿಶಿನದಿಂದ ಕರ್ಕ್ಯುಮಿನ್ ಅಂಶವನ್ನು ನಮ್ಮ ದೇಹ ಎಷ್ಟರಮಟ್ಟಿಗೆ ಹೀರಿಕೊಳ್ಳುತ್ತದೆ ಎನ್ನುವುದು ಕೂಡ ಪ್ರಮುಖ ಅಂಶವಾಗುತ್ತದೆ. ನಿಜ ಹೇಳಬೇಕೆಂದರೆ ನಮ್ಮ ದೇಹ ಸಂಪೂರ್ಣವಾಗಿ ಕರ್ಕ್ಯುಮಿನ್’ನ್ನು ಹೀರಿಕೊಳ್ಳುವುದೇ ಇಲ್ಲ. ಹೀಗಾಗಿಯೇ ಅರಿಶಿನದೊಂದಿಗೆ ಕರಿಮೆಣಸನ್ನು ಸೇವಿಸಬೇಕು ಎನ್ನುತ್ತಾರೆ ಕೆಲವರು. ಕರಿಮೆಣಸಿನಲ್ಲಿರುವ ಪೈಪರಿನ್ ಎಂಬ ಅಂಶ ಬಯೋ ಅವೈಲಿಬಿಲಿಟಿಯನ್ನು ಹೆಚ್ಚಿಸುವುದರಿಂದ ಕರ್ಕ್ಯುಮಿನ್ ಅಂಶವನ್ನು ಹೀರಿಕೊಳ್ಳಲು ಸಹಾಯಕವಾಗಿದೆ.

         ಕರ್ಕ್ಯುಮಿನ್ ಬಗ್ಗೆ ಈಗಾಗಲೇ ಅಧ್ಯಯನ ಹಾಗೂ ಕ್ಲಿನಿಕಲ್ ಟ್ರಯಲ್’ಗಳು ಆರಂಭವಾಗಿವೆ. ಮೊದಲ ಹಂತದ ಕ್ಲಿನಿಕಲ್ ಟ್ರಯಲ್’ನಲ್ಲಿ ಪ್ರಿ-ಕ್ಯಾನ್ಸರಸ್ ಬದಲಾವಣೆಗಳಿರುವ ೨೫ ಜನರಿಗೆ ನಿಯಮಿತವಾಗಿ ಕೆಲದಿನಗಳ ಕಾಲ ಕರ್ಕ್ಯುಮಿನ್’ನ್ನು ನೀಡಲಾಯಿತು. ಇದು ಅರಿಶಿನದ ಕರ್ಕ್ಯುಮಿನ್ ಅಂಶ ಕ್ಯಾನ್ಸರ್’ನ್ನು ತಡೆಗಟ್ಟುತ್ತದೆ ಎನ್ನುವುದನ್ನು ಸಾಬೀತು ಪಡಿಸಿದೆ.

    ೨೦೦೭ರಲ್ಲಿ ಅಮೇರಿಕಾದಲ್ಲಿ ನಡೆಸಿದ ಪ್ರಯೋಗವೊಂದರಲ್ಲಿ ಕೀಮೊವಿನೊಂದಿಗೆ ಕರ್ಕ್ಯುಮಿನ್’ನ್ನು ಜೊತೆ ಮಾಡಿ ನೀಡಲಾಯಿತು. ಆದರೆ ಆ ಪ್ರಯೋಗ ಅಷ್ಟೊಂದು ಫಲಕಾರಿಯಾಗಲಿಲ್ಲ. ವಿಫಲವಾಯಿತು ಎಂದೇ ಹೇಳಬಹುದು. ಆದರೆ ಅದರ ನಂತರ ಇಲಿಗಳ ಮೇಲೆ ನಡೆಸಿದ ಪ್ರಯೋಗವೊಂದು ಕ್ಯಾನ್ಸರ್ ಒಂದೆಡೆಯಿಂದ ಇನ್ನೊಂದೆಡೆ ಹರಡುವುದನ್ನು ಕರ್ಕ್ಯುಮಿನ್ ತಡೆಯಬಲ್ಲದು ಎಂದು ತೋರಿಸಿಕೊಟ್ಟಿದೆ. ಅಷ್ಟೇ ಅಲ್ಲದೇ ೨೦೦೮ರಲ್ಲಿ ನಡೆಸಿದ ೨ನೇ ಹಂತದ ಕ್ಲಿನಿಕಲ್ ಟ್ರಯಲ್ ಸಾಕಷ್ಟು ಪರಿಣಾಮಕಾರಿಯಾಗಿದ್ದು ಧನಾತ್ಮಕ ಫಲಿತಾಂಶ ನೀಡಿದೆ.

       ಡಾಕ್ಟರ್ ವಿಲಿಯಂ ಲಾವ್ಯಾಲಿ ಎಂಬುವವರು ಹಲವು ವರ್ಷಗಳಿಂದ ಕರ್ಕ್ಯುಮಿನ್ ಮೇಲೆ ಅಧ್ಯಯನ ನಡೆಸುತ್ತಿದ್ದು; ಅದರ ಕೆಲವು ವಿಶೇಷತೆಗಳನ್ನು ತಿಳಿಸಿದ್ದಾರೆ. ಅವರ ಪ್ರಕಾರ ಕರ್ಕ್ಯುಮಿನ್ ಟ್ಯೂಮರ್ ಸೆಲ್’ಗಳ  ಅವಿರತ ಕೋಶವಿಭಜನೆಯನ್ನು ತಡೆಯಬಲ್ಲದು. ಮ್ಯುಟೇಟ್ ಆಗುವ ಜೀವಕೋಶಗಳನ್ನು ನಾಶ ಮಾಡಿ ಟ್ಯೂಮರ್ ಸೆಲ್ ಆಗುವುದನ್ನು ತಡೆಯುತ್ತದೆ. ಅಷ್ಟೇ ಅಲ್ಲದೇ ಟ್ಯೂಮರ್ ಬೆಳವಣಿಗೆಗೆ ಸಹಾಯಕವಾಗುವ ಪ್ರೋಟೀನ್ ಸಿಂಥೆಸಿಸ್’ನ್ನು ಕೂಡ ಕಡಿಮೆಗೊಳಿಸುತ್ತದೆ. ಡಾಕ್ಟರ್ ಲಾವ್ಯಾಲಿಯವರ ಪ್ರಕಾರ ಕರ್ಕ್ಯುಮಿನ್ ಒಂದು ಉತ್ತಮ ಚಿಕಿತ್ಸಕವಾಗಲಿದೆ.

       ಮಿಶಿಗನ್ ವಿಶ್ವವಿದ್ಯಾನಿಲಯದಲ್ಲಿ ಕ್ಯಾನ್ಸರ್ ಸ್ಪೆಶಲಿಸ್ಟ್ ಹಾಗೂ ಪಿ.ಎಚ್.ಡಿ ರೀಸರ್ಚರ್ ಆಗಿರುವ ಮಾಧುರಿ ಕಾಕರಾಲ ಅವರು ಕರ್ಕ್ಯುಮಿನ್ ಹಾಗೂ ಪೈಪರಿನ್’ನ ಕಾಂಬಿನೇಷನ್ ಕ್ಯಾನ್ಸರ್ ತಡೆಗಟ್ಟುವಲ್ಲಿ ಹೇಗೆ ಸಹಾಯಕವಾಗಲಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಿದ್ದಾರೆ.

       ಸ್ವತಃ ಒಬ್ಬ ಕ್ಯಾನ್ಸರ್ ಸರ್ವೈವರ್ ಆಗಿರುವ ಮಾಧುರಿ ಅವರು ನಮ್ಮ ದಿನನಿತ್ಯದ ಆಹಾರದಲ್ಲಿ ಕೆಲ ಬದಲಾವಣೆ ತಂದುಕೊಂಡಲ್ಲಿ ಕ್ಯಾನ್ಸರ್’ನ್ನು ತಡೆಗಟ್ಟಬಹುದು ಎನ್ನುತ್ತಾರೆ. ಕೊನೆಯ ವರ್ಷದ ಮೆಡಿಕಲ್ ಓದುತ್ತಿದ್ದ ಮಾಧುರಿ ಅವರು ನಾಲ್ಕನೇ ಸ್ಟೇಜ್ ಥೈರಾಯಿಡ್ ಕ್ಯಾನ್ಸರ್’ಗೆ ಒಳಗಾಗಿದ್ದರು. ಆ ಸಮಯದಿಂದಲೇ ಅವರು ಕ್ಯಾನ್ಸರ್ ಚಿಕಿತ್ಸಕಗಳ ಕುರಿತು ಅಧ್ಯಯನ ನಡೆಸಬೇಕೆಂದು ತೀರ್ಮಾನಿಸಿದ್ದರು. ಅದರಂತೆ ಅವರು ಮಿಶಿಗನ್ ವಿಶ್ವವಿದ್ಯಾನಿಲಯದಲ್ಲಿ ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಭಾರತೀಯರಾಗಿರುವ ಮಾಧುರಿ ಇಲ್ಲಿನ ಆಹಾರ ಪದ್ಧತಿಗಳ ಬಗ್ಗೆ ಚೆನ್ನಾಗಿಯೇ ಅರಿವನ್ನು ಹೊಂದಿದ್ದರಿಂದ ಅರಿಶಿನ ಹಾಗೂ ಕರಿಮೆಣಸನ್ನು ತಮ್ಮ ಸಂಶೋಧನೆಗೆ ಬಳಸಿಕೊಂಡಿದ್ದಾರೆ.

     ಅವರ ಪ್ರಕಾರ ಕರ್ಕ್ಯುಮಿನ್ ಹಾಗೂ ಪೈಪರಿನ್ ಕಾಂಬಿನೇಷನ್ ಬ್ರೆಸ್ಟ್ ಕ್ಯಾನ್ಸರ್ ಸ್ಟೆಮ್ ಸೆಲ್’ನ್ನು ಸಂಪೂರ್ಣವಾಗಿ ತೆಗೆದುಹಾಕಬಲ್ಲದು. ಸ್ಟೆಮ್ ಸೆಲ್ ಎಲ್ಲಾ ರೀತಿಯ ಜೀವಕೋಶಗಳಿಗೆ ತಾಯಿಯಿದ್ದಂತೆ. ಸ್ಟೆಮ್ ಸೆಲ್’ನಿಂದಲೇ ವಿವಿಧ ಜೀವಕೋಶಗಳು ಉಂಟಾಗುವುದು. ಕೆಲವೊಮ್ಮೆ ಕ್ಯಾನ್ಸರ್ ಮರುಕಳಿಸುವುದಕ್ಕೆ ಈ ಸ್ಟೆಮ್ ಸೆಲ್ ಕಾರಣವಾಗಬಹುದು. ಈಗಿರುವ ಚಿಕಿತ್ಸೆ ಕ್ಯಾನ್ಸರನ್ನು ಸಂಪೂರ್ಣವಾಗಿ ನಾಶಮಾಡಬಹುದು ಆದರೆ ಸ್ಟೆಮ್ ಸೆಲ್’ನ್ನು ಅಲ್ಲ. ಹಾಗಾಗಿ ಬ್ರೆಸ್ಟ್ ಕ್ಯಾನ್ಸರ್’ಗೆ ಮೂಲವಾಗಿದ್ದ ಸ್ಟೆಮ್ ಸೆಲ್ ಹಾಗೆ ಉಳಿದುಕೊಂಡುಬಿಟ್ಟಿರುತ್ತದೆ. ಕೆಲ ಕಾಲದ ನಂತರ ಅದರಿಂದ ಕ್ಯಾನ್ಸರ್ ಮತ್ತೆ ಮರುಕಳಿಸುವ ಸಾಧ್ಯತೆ ಇರುತ್ತದೆ. ಸ್ಟೆಮ್ ಸೆಲ್’ಗಳು ಇತರ ಜೀವಕೋಶಗಳಂತೆ ಪದೇ ಪದೇ ತಮ್ಮನ್ನ ನವೀಕರಿಸಿಕೊಳ್ಳುವುದಿಲ್ಲ. ಹಾಗಾಗಿ ಚಿಕಿತ್ಸೆಯ ಸಮಯದಲ್ಲಿ ಅತಿಶೀಘ್ರವಾಗಿ ವಿಭಜನೆಗೊಳ್ಳುವ ಕ್ಯಾನ್ಸರ್ ಜೀವಕೋಶಗಳು ಮಾತ್ರ ನಾಶವಾಗುತ್ತದೆ.  ಸ್ಟೆಮ್ ಸೆಲ್ ಉಳಿದುಕೊಂಡುಬಿಡುತ್ತದೆ.  ಆದರೆ ಮಾಧುರಿ ಅವರ ಸಂಶೋಧನೆ ಪ್ರಕಾರ ಕರ್ಕ್ಯುಮಿನ್ ಹಾಗೂ ಪೈಪರಿನ್’ನ ಕಾಂಬಿನೇಷನ್ ‘ಮೂಲ’ ಎನಿಸಿಕೊಂಡ ಈ ಸ್ಟೆಮ್ ಸೆಲ್’ನ್ನೇ  ತೆಗೆದುಹಾಕಬಲ್ಲದು. ಸದ್ಯದ ಮಟ್ಟಿಗೆ ಇದೊಂದು ದೊಡ್ಡ ಅನ್ವೇಷಣೆಯೇ ಸರಿ.

       ಕೆಲವರು ಕ್ಯಾನ್ಸರ್ ಮರುಕಳಿಸದಂತೆ ಟಾಮಾಕ್ಸಿಫಿನ್  ಅಥವಾ ರಾಲೋಕ್ಸಿಫಿನ್ ತೆಗೆದುಕೊಳ್ಳುತ್ತಿರುತ್ತಾರೆ.  ಆದರೆ ಈ ಹಾನಿಕಾರಕ ಮಾತ್ರೆಗಳಿಗಿಂತ; ಸಹಜ ಜೀವಕೋಶಗಳಿಗೆ ಯಾವುದೇ ಹಾನಿ ಮಾಡದೇ ಸ್ಟೆಮ್ ಸೆಲ್’ನ್ನು ತೆಗೆದುಹಾಕಿ ಕ್ಯಾನ್ಸರ್ ಮರುಕಳಿಸದಂತೆ ಮಾಡುವ ಕರ್ಕ್ಯುಮಿನ್ ಹಾಗೊ ಪೈಪರಿನ್ ಉತ್ತಮವಾದುದು.

        ಪ್ರತಿನಿತ್ಯ ಅಡುಗೆಯಲ್ಲಿ ಬಳಸುವ ಅರಿಶಿನ ಸುರಕ್ಷಿತವಾದದ್ದು. ಆದರೆ ಕರ್ಕ್ಯುಮಿನ್ ಅಂಶವನ್ನು ಮಾತ್ರ ತೆಗೆದು ಬಳಸುವುದು ಎಷ್ಟರಮಟ್ಟಿಗೆ ಸುರಕ್ಷಿತ ಎನ್ನುವುದು ಸಾಕಷ್ಟು ಪ್ರಯೋಗಗಳ ನಂತರವೇ ತಿಳಿದುಬರುವಂತದ್ದು ಎನ್ನುತ್ತಾರೆ ಕೆಲ ವಿಜ್ಞಾನಿಗಳು. ಇಲ್ಲಿಯ ತನಕ ನಡೆದ ಕ್ಲಿನಿಕಲ್ ಟ್ರಯಲ್’ನಲ್ಲಿ ಅದರಿಂದ ಯಾವುದೇ ಹಾನಿ ಕಂಡುಬಂದಿಲ್ಲ. ಆದರೆ ಬೇರೆ ಬೇರೆ ಕ್ಯಾನ್ಸರ್’ಗಳಿಗೆ ಬೇರೆ ಬೇರೆ ಡೋಸ್ ಕೊಡುವಾಗ ಅಥವಾ ಡೋಸ್ ಹೆಚ್ಚಿಸಿದಾಗ ದೇಹದ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದನ್ನ ಕಾದುನೋಡಬೇಕಿದೆ. ಅದೇನೆ ಇದ್ದರೂ ಸದ್ಯದ ಮಟ್ಟಿಗೆ ಅರಿಶಿನ ಎಲ್ಲರಲ್ಲಿ ಹೊಸ ಭರವಸೆಗಳನ್ನು ಮೂಡಿಸಿದೆ ಎನ್ನುವುದಂತು ಸತ್ಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!