ಮೊನ್ನೆ ನನ್ನ ಇಂಗ್ಲಿಷ್ ಪುಸ್ತಕವನ್ನು ಓದಿ ಮುಗಿಸಿದ ಕಸಿನ್ ನನಗೆ ಕರೆ ಮಾಡಿ “ ಹಳೆಯದೆಲ್ಲ ಮತ್ತೆ ನೆನಪಾಯಿತು.. ನಿನ್ನ ನೋಡಬೇಕು ಅನಿಸುತ್ತಿದೆ” ಎಂದ. ಅದಕ್ಕೂ ಒಂದೆರಡು ದಿನದ ಹಿಂದಷ್ಟೆ ನನ್ನ ಗೆಳತಿಯೊಬ್ಬಳು ನನ್ನ ಹತ್ತಿರ ಮಾತನಾಡುತ್ತಾ ಹಳೆಯದನ್ನೆಲ್ಲಾ ಮೆಲುಕು ಹಾಕುತ್ತಿದ್ದಳು. ಆ ಘಟನೆ ನೆನಪಿದೆಯ? ಆ ದಿನಗಳು ಹೇಗಿತ್ತಲ್ಲವಾ ಎಂದೆಲ್ಲಾ ಹೇಳುತ್ತಾ ಮಾತಾನಾಡಿದ್ದಳು. ಈಗ ೮ ವರ್ಷಗಳು ಕಳೆದು ಹೋಗಿವೆ ಕ್ಯಾನ್ಸರ್ ಮುಗಿದು ಆದರೂ ಮೊನ್ನೆ ಹೊರ ಬಂದ ಇಂಗ್ಲಿಷ್ ಬುಕ್ ಮತ್ತೆ ಅವರುಗಳಿಗೆ ಆ ನೆನಪುಗಳನ್ನೆಲ್ಲಾ ತಾಜಾಗೊಳಿಸಿತ್ತು.
ಕ್ಯಾನ್ಸರ್ ನನ್ನ ಬದುಕಿನ ಪ್ರಮುಖ ಘಟ್ಟ. ಮನದಲ್ಲಿ ಅಚ್ಚೊತ್ತಿ ಹೋಗಿರುವಂತಹ ಎಷ್ಟೋ ಘಟನೆಗಳಿವೆ. ಎಂದಿಗೂ ಮರೆಯಲಾಗದಷ್ಟು ನೆನಪುಗಳು ಇವೆ. ಕ್ಯಾನ್ಸರ್ ಎನ್ನುವುದೇ ಜೀವನದ ಒಂದು ದೊಡ್ಡ ಪಾಠವಾಗಿ ಬಂದಿದ್ದು. ಆದರೆ ಆ ಪಯಣವನ್ನು ಇನ್ನಷ್ಟು ರಸಮಯವಾಗಿ ಮಾಡಿದ್ದು ನನ್ನ ಗೆಳೆಯ-ಗೆಳತಿಯರು ಹಾಗೂ ಕಸಿನ್ಸ್’ರಿಂದ. ಎಲ್ಲಾ ರೀತಿಯಿಂದ ಪರಿಪೂರ್ಣ ಎನ್ನಿಸುವಂತೆ ಮಾಡಿದ್ದು ಇವರುಗಳೇ.. ಯಾಕೆಂದರೆ ನನ್ನ ಬಳಗವೇ ಹಾಗಿದೆ. ಎಲ್ಲಾ ರೀತಿಯ ನಮೂನೆಗಳು ಸಿಗುತ್ತವೆ ನನ್ನ ಬಳಗದಲ್ಲಿ…!!! ಅಥವಾ ಎಲ್ಲಾ ಗೆಳೆಯರು ಕಸಿನ್’ಗಳು ಇರೋದೆ ಹಾಗೆ.
ನನ್ನ ಬಯಾಪ್ಸಿ ರಿಪೋರ್ಟ್ ಬಂದ ತಕ್ಷಣ ನನ್ನ ಮನೆಯವರು ಸಂಬಂಧಿಕರಿಗೆ ವಿಷಯ ಗೊತ್ತಾಗುವುದಕ್ಕೂ ಮುಂಚೆ ನನ್ನ ಫ್ರೆಂಡ್ಸ್’ಗೆ ಹಾಗೂ ಕಸಿನ್’ಗೆ ಗೊತ್ತಾಗಿ ಬಿಟ್ಟಿತ್ತು. ನನ್ನ ಕಸಿನ್ ಅಂತು ಈ ವಿಷಯ ಅವರಮ್ಮನಿಗೆ ಹೇಳೋಕೆ ಹೋಗಿ ಸರಿಯಾಗಿ ಬೈಸಿಕೊಂಡು ಬಿಟ್ಟಿದ್ದ. ಇನ್ನು ನನ್ನ ಗೆಳತಿಯೊಬ್ಬಳಿಗಂತೂ ನನಗಿಂತ ಮೊದಲೇ ಭಾಗಶಃ ವಿಷಯ ಗೊತ್ತಾಗಿ ತನ್ನ ಊಹೆಯೇ ತಪ್ಪಾಗಿರಲಿ ಎಂದು ಬೇಡಿಕೊಳ್ಳುತ್ತಿದ್ದಳು. ಇನ್ನು ನಾನು ಮಣಿಪಾಲಿನಿಂದ ಎರಡು ತಿಂಗಳ ನಂತರ ವಾಪಾಸ್ಸಾದ ದಿನವೇ ರಾತ್ರಿ ಏಳು ಗಂಟೆಗೆ ಬಾಲ್ಯದ ಗೆಳತಿಯೊಬ್ಬಳು ಧುತ್ತೆಂದು ಪ್ರತ್ಯಕ್ಷವಾಗಿ ಬಿಟ್ಟಿದ್ದಳು. ಅವಳು ನನ್ನನ್ನ ಹೇಗೆ ನಿರೀಕ್ಷಿಸಿದ್ದಳೋ ಗೊತ್ತಿಲ್ಲ. ನಾನು ಮಾತ್ರ ಹಾಯಾಗಿ ಕುಳಿತು ಕ್ಯಾರೆಟ್ ತಿನ್ನುತ್ತಾ ಇದ್ದೆ. ಅವಳ ಮುಖದಲ್ಲಿದ್ದ ನರ್ವೆಸ್’ನೆಸ್ ಎದ್ದು ಕಾಣುತ್ತಿತ್ತು. “ಕ್ಯಾರೆಟ್ ತಿಂತೀಯಾ?” ಎಂದೆ ಮುಗುಳ್ನಗುತ್ತಾ ಕೇಳಿದ ಮೇಲೆ ಸ್ವಲ್ಪ ಆರಾಮಾದಳು ಅವಳು. ನಮ್ಮವರು ಎಷ್ಟು ಪ್ರೀತಿಸುತ್ತಾರೆ ಎಂದು ಗೊತ್ತಾಗುವುದೇ ಇಂತಹ ಸಂದರ್ಭಗಳಲ್ಲಿ. ಅಂತಹ ಅರಿವುಂಟಾಗುವ ಕ್ಷಣವಿದೆಯಲ್ಲ ಜೀವನದ ಅತ್ಯದ್ಭುತ ಕ್ಷಣವಾಗಿರುತ್ತದೆ ಅದು.
ಸಮಯ ಸಿಕ್ಕಾಗೆಲ್ಲಾ ಅವರು ನನ್ನ ಭೇಟಿ ಮಾಡಲು ಬರುತ್ತಿದ್ದರು. ಆದರೆ ಎಷ್ಟೋ ಬಾರಿ ನಾನೇ ‘ಬರಬೇಡಿ’ ಎಂದಿದ್ದಿದೆ. ಕೀಮೋನ ಮೊದಲೆರಡು ವಾರಗಳಲ್ಲಂತೂ ಅವರ ಬರುವಿಕೆಗೆ ನಿಷೇಧ ಹೇರಿಬಿಟ್ಟಿದ್ದೆ. ಯಾಕೆಂದರೆ ಅವರು ಬಂದಾಗ ಎಷ್ಟು ಸಾಧ್ಯವೋ ಅಷ್ಟು ಎಂಜಾಯ್ ಮಾಡಬೇಕೆಂದುಕೊಳ್ಳುತ್ತಿದ್ದೆ. ಮೊದಲೆರಡು ವಾರದಲ್ಲಿ ಸೈಡ್ ಎಫೆಕ್ಟ್’ನಿಂದಾಗಿ ಏನೂ ಮಾಡಲಾಗುತ್ತಿರಲಿಲ್ಲ. ಫೋನ್ ಮಾಡಿದರೂ ಯಾಕೆ ಮಾಡ್ತಾರಪ್ಪಾ ಅನ್ನುವಷ್ಟು ಆಯಾಸಗೊಂಡಿರುತ್ತಿದ್ದೆ. ಹಾಗಾಗಿ ಮೂರನೇ ವಾರದಲ್ಲಿ ಮಾತ್ರ ಬರುತ್ತಿದ್ದರು. ಆ ಸಮಯದಲ್ಲಿ ನಾವು ಕ್ಯಾನ್ಸರ್ ಬಗ್ಗೆ ಏನನ್ನೂ ಮಾತನಾಡುತ್ತಿರಲಿಲ್ಲ. ಕೇವಲ ಹರಟೆ ಹೊಡೆಯುತ್ತಾ ತಮಾಷೆ ಮಾಡಿಕೊಳ್ಳುತ್ತಾ ಕಾಲ ಕಳೆಯುತ್ತಿದ್ದೆವು.
ಒಮ್ಮೆ ನನ್ನ ಗೆಳತಿಯೊಬ್ಬಳು ಕರೆ ಮಾಡಿ “ ‘ಏನೂ ಹೆದರಿಕೋಬೇಡ.. ಧೈರ್ಯವಾಗಿರು. ನಾವೆಲ್ಲ ನಿನ್ನ ಜೊತೆ ಇದೀವಿ’ ಅಂತ ಶ್ರುತಿಗೆ ಹೇಳು ಅಂತ ನನ್ನ ಅಪ್ಪ-ಅಮ್ಮ ಹೇಳ್ತಾರೆ. ನಾನು ಹಾಗೆ ಹೇಳಿದರೆ ನಿನಗೆ ನಗು ಬರಲ್ವೇನೆ?” ಎಂದಳು. ನಾನು ಅದಾಗಲೇ ನಗೋದಿಕ್ಕೆ ಶುರು ಮಾಡಿಕೊಂಡಿದ್ದೆ. “ನೀನು ದಯವಿಟ್ಟು ಈ ಥರ ಡೈಲಾಗ್ ಎಲ್ಲ ಹೇಳಬೇಡ. ನಿನಗೆ ಸೂಟ್ ಆಗಲ್ಲ. ತುಂಬಾ ಫನ್ನಿ ಅನ್ನಿಸುತ್ತೆ. “ ಎಂದು ಜೋರಾಗಿ ನಕ್ಕಿದ್ದೆ.
ನಾನು ಕ್ರಚಸ್ ಹಿಡಿದು ಓಡಾಡುತ್ತಿದ್ದ ಸಂದರ್ಭದಲ್ಲಿ ಒಮ್ಮೆ ನನ್ನ ಗೆಳತಿ “ಶ್ರುತಿ.. ಉದ್ದ ಆಗಿಬಿಟ್ಯನೇ..??” ಎಂದಳು ನಾನು ಕಣ್ಣರಳಿಸಿ ನೋಡಿದೆ. “..ಅಥವಾ ಕ್ರಚಸ್ ಹಿಡಿದುಕೊಂಡಿದ್ದಕ್ಕೆ ಉದ್ದ ಕಾಣ್ತಾ ಇದೀಯಾ..? ಎಂದಳು. “ಜನ್ಮ ಸಾರ್ಥಕ ಆಗೊಯ್ತು. ಈ ಥರ ಆದ್ರೂ ಉದ್ದ ಕಾಣಿಸಿದ್ನಲ” ಎಂದರೆ ಅವಳು “ಹಾಗಾದರೆ ನಾನು ಕಾಲೇಜಿಗೆ ಹೀಗೆ ಹೋಗಬಹುದೇನೋ ಅಲ್ವಾ..” ಎಂದು ಹೇಳುತ್ತಾ ನನ್ನ ಕ್ರಚಸ್ ಹಿಡಿದು ಪ್ರಾಕ್ಟೀಸ್ ಆರಂಭಿಸಿ ಬಿಟ್ಟಿದ್ದಳು. ಅವರುಗಳು ಬಂದಾಗ ತುಂಬಾ ರಿಲ್ಯಾಕ್ಸ್ ಆಗಿರುತ್ತಿದ್ದೆ. ನಾನೊಬ್ಬ ರೋಗಿ ಎನ್ನುವುದನ್ನೇ ಮರೆಯುವಷ್ಟು. ಇಂತಹ ಸಂದರ್ಭಗಳಲ್ಲಿ ಕುಟುಂಬ ಹಾಗೂ ಗೆಳೆಯರ ಪಾತ್ರ ತುಂಬಾ ದೊಡ್ಡದಾಗಿರುತ್ತದೆ. ಅವರು ನಮ್ಮೊಂದಿಗೆ ಸಹಜವಾಗಿ ವರ್ತಿಸಲಿ ಎಂದೇ ನಾವು ಬಯಸುತ್ತಿರುತ್ತೇವೆ. ನಮ್ಮ ಎಷ್ಟೋ ಚಿಂತೆಗಳು ಕಳೆಯುವುದು ಅವರು ನಮ್ಮೊಂದಿಗೆ ಸಹಜವಾಗಿ ವರ್ತಿಸಿದಾಗಲೇ. ಪುಣ್ಯವಶಾತ್ ನನ್ನ ವಿಷಯದಲ್ಲಿ ಹಾಗೇ ಆಗಿದೆ.
ಕೊನೆಯ ಆಪರೇಷನ್’ನ ಹಿಂದಿನ ದಿನ ಕೂಡ ಅಷ್ಟೇ.. ಫೋನ್ ಕರೆಗಳು ನಿಲ್ಲುವಂತೆಯೇ ಕಾಣುತ್ತಿರಲಿಲ್ಲ. ಎಲ್ಲರೂ ಕರೆ ಮಾಡಿ ನನಗೆ ಗುಡ್’ಲಕ್ ಹೇಳುವವರೇ..ಹನುಮಂತ ಹಾರಿ ಸಮುದ್ರ ದಾಟಿ ಲಂಕೆಗೆ ಹೋಗುವಾಗ ವಾನರ ಸೇನೆಯಲ್ಲಾ ಆತನನ್ನ ಹುರುದುಂಬಿಸುತ್ತಲ್ಲ ಹಾಗೆ ನನ್ನ ವಾನರ ಸೇನೆಯೂ ಹಾಗೆ ನನಗೆ ಉತ್ಸಾಹ ತುಂಬಿತ್ತು. ಮರುದಿನ ಬೆಳಿಗ್ಗೆ ನಾನೂ ವೀರಾವೇಶದಿಂದ ಆಪರೇಷನ್ ಮಾಡಿಸಿಕೊಳ್ಳೋಕೆ ಹೋಗಿ ಬಿಟ್ಟಿದ್ದೆ!!!
ಕ್ಯಾನ್ಸರ್’ನಿಂದ ಗುಣಮುಖವಾಗಿ ನಿಧಾನವಾಗಿ ನಡೆಯುವುದನ್ನು ಪ್ರಾಕ್ಟೀಸ್ ಮಾಡುತ್ತಿದ್ದಾಗ ನನ್ನ ಕಸಿನ್ ಪ್ರತಿದಿನ ಮನೆಗೆ ಬಂದು ನನ್ನನ್ನ ಅವರ ಮನೆಗೆ ಕರೆದುಕೊಂಡು ಹೋಗುತ್ತಿದ್ದ. ಅವರ ಮನೆ ಸ್ವಲ್ಪ ದೂರದಲ್ಲಿತ್ತು. ಹಾಗಾಗಿ ನನಗೂ ವಾಕ್ ಆದ ಹಾಗೆ ಆಗುತ್ತಿತ್ತು. ಪ್ರತಿದಿನ ನನ್ನನ್ನ ಕೈಹಿಡಿದು ನಡೆಸಿಕೊಂಡು ಹೋಗುತ್ತಿದ್ದ. ಸಂಜೆಯ ತನಕ ಕೇರಮ್ ಆಡಿ ನಂತರ ವಾಪಾಸ್ಸು ಮತ್ತೆ ಬಂದು ನನ್ನ ಮನೆಗೆ ಬಿಟ್ಟು ಹೋಗುತ್ತಿದ್ದ. ನನ್ನನ್ನ ಕೇರಮ್’ ಪ್ರವೀಣೆ ಅಂತೆಲ್ಲಾ ಅನ್ಕೋಬೇಡಿ. ಅವನು ಪಾಪ ನನಗೆ ಸ್ಟ್ರೈಕರ್’ನ ಹೇಗೆ ಇಟ್ಕೋಬೇಕು; ಹೇಗೆ ಫ್ಲಿಕ್ ಮಾಡಬೇಕು; ಯಾವ ಪಾನ್’ನ ಯಾವ ಕಡೇಗೆ ಹೊಡಿಬೇಕು ಅಂತ ಗಿಣಿಗೆ ಹೇಳಿದ ಹಾಗೆ ಹೇಳಿಕೊಡುತ್ತಿದ್ದ. ಆದರೆ ನಾನು….??!! ನನ್ನ ಕೈಯಿಂದ ಹೊರಟ ಸ್ಟ್ರೈಕರ್ ಎಲ್ಲೆಲ್ಲೂ ಹೋಗಿ; ಯಾವ್ಯಾವುದಕ್ಕೋ ಡಿಕ್ಕಿ ಹೊಡೆದು ಕೊನೆಗೆ ನಿರೀಕ್ಷಿಸಿಯೇ ಇರದಂತಹ ಯಾವ್ಯಾವುದೋ ಒಂದೆರೆಡು ಪಾನ್ ಪಾಕೆಟ್ ಸೇರಿಕೊಳ್ಳುತ್ತಿತ್ತು.
“ನೀನು ಎಕ್ಸ್ಟ್ರಾರ್ಡಿನರಿ ಬಿಡೆ…!!” ಎಂದು ಅಣಕಿಸುತ್ತಿದ್ದ. “ತಮ್ಮಾ… ಅದಕ್ಕೆಲ್ಲಾ ಟ್ಯಾಲೆಂಟ್ ಬೇಕು” ಎಂದು ನಾನು ನಗುತ್ತಿದ್ದೆ.
ಆ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಪ್ರಶ್ನೆಗಳಿದ್ದವು ಬದುಕಲ್ಲಿ. ಆದರೆ ಅದನ್ನೆಲ್ಲಾ ಸ್ವಲ್ಪ ಮಟ್ಟಿಗೆ ತಿಳಿಯಾಗಿಸಿದ್ದು ಆತನ ಸಾಂಗತ್ಯ.!!
ತಲೆಯಲ್ಲಿ ಹುಚ್ಚು ಯೋಚನೆಗಳು ಬಂದಾಗ “ಸ್ಟುಪಿಡ್.. ಯಾಕೋ ಈ ಥರ ಎಲ್ಲ ಯೋಚಿಸ್ತೀಯ” ಅಂತ ಕಾಳಜಿಯಿಂದ ಕೇಳಿದವರಿದ್ದಾರೆ. ಓಡಾಡಲು ಪ್ರಾಕ್ಟೀಸ್ ಮಾಡುತ್ತಾ ಬಿದ್ದಾಗ “ಹುಷಾರೇ…” ಎಂದವರಿದ್ದಾರೆ. ಯಾವುದೋ ಉತ್ಸಾಹದಲ್ಲಿ ಪೆಟ್ಟು ಮಾಡಿಕೊಂಡಾಗ “ನಿನಗೆ ಮಾಡೋಕೆ ಬೇರೆ ಕೆಲಸ ಇಲ್ವಾ? ಯಾಕೆ ಈ ಥರ ಸರ್ಕಸ್ ಮಾಡ್ತಿರ್ತೀಯ” ಎಂದು ಬೈದವರಿದ್ದಾರೆ. “ತಾಯಿ.. ಹೀಗೆ ಮಾಡ್ತಾ ಇದ್ದರೆ ಫೋಟೋಗೆ ಹಾರ ಹಾಕಿಸ್ಕೊಳ್ತೀಯ” ಅಂತ ತಮಾಷೆ ಮಾಡಿದವರೂ ಇದ್ದಾರೆ. ಹೇಳಿದೆನಲ್ಲ ಈ ಪಯಣವನ್ನು ರಸಮಯವಾಗಿಸಿದ್ದೇ ಇವರುಗಳು ಅಂತ. ನನ್ನ ದುಃಖದಲ್ಲಿ ನನಗಿಂತ ಹೆಚ್ಚು ದುಃಖ ಪಟ್ಟವರು; ಖುಷಿಯಲ್ಲಿ ನನಗಿಂತ ಹೆಚ್ಚು ಸಂತೋಷ ಪಟ್ಟವರು ಇವರುಗಳೇ . ಆ ಇಡೀ ಪಯಣದಲ್ಲಿ ನನ್ನ ಕೈ ಹಿಡಿದು ಹೆಜ್ಜೆ ಬೆಸೆದು ನಡೆದವರು ಇವರು…!!