Featured ಅಂಕಣ

ಕೃಷ್ಣಮಠದ ಅನ್ನದಾನ ರಾಷ್ಟ್ರೀಯ ಸಮಸ್ಯೆಯೆ?

ಕೆಲವರು ಬ್ರಾಹ್ಮಣರ ಊಟದ ಸಂಪ್ರದಾಯಗಳು ಬೇರೆ ಎಂದು ಸಾಧಿಸಲು ಹೋಗುತ್ತಿದ್ದಾರೆ. ಏನೇ ಹೇಳಲಿ, ಹೇಗೇ ಹೇಳಲಿ, ಇವೆಲ್ಲ ಒಂದು ಬಗೆಯಲ್ಲಿ ಪಂಕ್ತಿಭೇದದ ಸಮರ್ಥನೆಯಂತೆಯೇ ಕಾಣುತ್ತವೆ ನನಗೆ. ಪಂಕ್ತಿಭೇದದ ಸಮರ್ಥನೆಗೆ ನಿಲ್ಲುವ ಮೊದಲು ಅದು ಯಾಕೆ ಮತ್ತು ಹೇಗೆ ಪ್ರಾರಂಭವಾಯಿತೆಂಬುದನ್ನು ವಿಶ್ಲೇಷಿಸಬೇಕು.

ಒಂದಾನೊಂದು ಕಾಲದಲ್ಲಿ ಉಡುಪಿ ಮಠದಲ್ಲಿ ಬ್ರಾಹ್ಮಣರ ಓಡಾಟ ಹೆಚ್ಚಿತ್ತು. ಇದೇನೂ ಚಿದಂಬರ ರಹಸ್ಯ ಅಲ್ಲ. ಸಮಾಜದ ಕೆಲ ವರ್ಗಗಳಿಗೆ ಪ್ರವೇಶಾನುಮತಿ ಇರಲಿಲ್ಲ. ಅದು ಕೂಡ ನಿಜವೇ. ಮಠ ಅಥವಾ ದೇವಸ್ಥಾನ ಮೂಲತಃ ಒಂದು ದೈವಿಕ ಶ್ರದ್ಧಾಕೇಂದ್ರವಾದ್ದರಿಂದ ಅಲ್ಲಿ ಬ್ರಾಹ್ಮಣರ ಹೊಕ್ಕು-ಬರು ಇರುವುದು ಸ್ವಾಭಾವಿಕ. ಮಠ ಎಂಬುದೇ ವೇದಾದ್ಯಯನ ಮಾಡುವವರ ಒಂದು ವಸತಿಶಾಲೆಯಾದ್ದರಿಂದ ಅಲ್ಲಿ ಊಟ-ತಿಂಡಿಯ ವ್ಯವಸ್ಥೆ ಇದ್ದಿದ್ದು ಕೂಡ ಸಹಜ. ಆದರೆ ಕಾಲಾನಂತರ ಅದು ವಿಸ್ತರಣೆಯಾಗಿ ದೇವಸ್ಥಾನವನ್ನು ಸಂದರ್ಶಿಸುವವರನ್ನೂ ಒಳಗೊಂಡಿತು. ಹಿಂದಿನ ಕಾಲದಲ್ಲಿ ಭಕ್ತರು ನೂರಾರು ಮೈಲಿ ನಡೆದೇ ದೇವರ ದರ್ಶನಕ್ಕೆ ಹೋಗುತ್ತಿದ್ದುದರಿಂದ, ಹಾಗೆ ದೂರದೂರುಗಳಿಂದ ಬಂದವರಿಗೆ ಮಠದೊಳಗೆ ಊಟ, ಅಗತ್ಯ ಬಿದ್ದರೆ ವಸತಿ – ಇವುಗಳ ವ್ಯವಸ್ಥೆಯಾಯಿತು. ಕಾಲಚಕ್ರ ಮುಂದುವರಿದಂತೆ, ವಾಹನಗಳು ರಸ್ತೆಗಿಳಿದಂತೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿತು. ಭೋಜನಶಾಲೆಯಲ್ಲಿ ಹಾಕಬೇಕಾದ ಎಲೆಗಳ ಸಂಖ್ಯೆಯೂ ಹೆಚ್ಚಿತು. ಹಿಂದೆಲ್ಲ ಮಠಕ್ಕೆ ಬರುತ್ತಿದ್ದವರು ಉಡುಪಿಯ ಆಸುಪಾಸಿನವರಾಗಿದ್ದರೆ, ವಾಹನಗಳ ಅನುಕೂಲ ಒದಗಿದ ಮೇಲೆ ಉಡುಪಿಯ ಹೊರಗಿನವರೂ, ಘಟ್ಟದ ಆಚೆಯವರೂ ಮಠಕ್ಕೆ ಸಂದರ್ಶಕರಾಗಿ ಬರತೊಡಗಿದರು.

ಆದರೆ ಉಡುಪಿಯ ಜನರಿಗೂ, ಹೊರಗಿನಿಂದ ಬರುತ್ತಿದ್ದವರಿಗೂ ಊಟದ ಸಂಸ್ಕೃತಿಯಲ್ಲಿ ವ್ಯತ್ಯಾಸಗಳಿದ್ದವು. ಪಂಕ್ತಿಯಲ್ಲಿ ಕೂತಾಗ,ಹೇಗೆ ಕೂರಬೇಕು ಎಂಬುದರಿಂದ ಹಿಡಿದು ಹೇಗೆ ಉಣ್ಣಬೇಕು, ಯಾವಾಗ ಯಾವುದನ್ನು ಬಡಿಸಬೇಕು, ಯಾವಾಗ ಊಟ ಮುಗಿಸಿ ಏಳಬೇಕು ಎಂಬಲ್ಲಿಯವರೆಗೆ ಹತ್ತಾರು ಸಂಪ್ರದಾಯ, ಕಟ್ಟುಪಾಡುಗಳು – ಈಗಾಗಲೇ ಹಲವರು ಹೇಳಿರುವಂತೆ – ಉಡುಪಿ ಬ್ರಾಹ್ಮಣರಲ್ಲಿವೆ. ಆದರೆ ಅವರ ಜೊತೆ ಕೂತ ಬೇರೆ ಊರವರಿಗೆ ಇವೆಲ್ಲ ಸೂಕ್ಷ್ಮಗಳು ತಿಳಿದಿರಲಿಲ್ಲ. ಕೆಲವರು ಬಾಳೆ ಎಲೆಯನ್ನು ಎಡಕ್ಕೆ ಬಲಕ್ಕೆ ಅಥವಾ ಕೆಲವೊಮ್ಮೆ ಕೂತ ನೆಲದಲ್ಲಿ ಎದುರಿಗೆ ತುದಿ ಹೋಗುವಂತೆ ಇಟ್ಟುಕೊಳ್ಳುತ್ತಿದ್ದರು. ಗೋವಿಂದಾನಿ ಗೋವಿಂದ ಎಂಬ ಫೈನಲ್ ಕಾಲ್ ಬರುವ ಮೊದಲೇ ಎಲೆಗೆ ಕೈ ಇಕ್ಕಿ ಅಲ್ಲಿದ್ದುದನ್ನು ಭಕ್ಷಿಸಿ ಬಿಡುತ್ತಿದ್ದರು. ಇಂತಹ – ಕೆಲವು ಸಣ್ಣ, ಕೆಲವು ಗಂಭೀರ ವ್ಯತ್ಯಾಸಗಳು ಬಂದಾಗ ಉಡುಪಿಯ ಬ್ರಾಹ್ಮಣರು ತಮಗೂ ಪರವೂರಿಂದ ಬಂದವರಿಗೂ ಆಗುವ ಮುಜುಗರ ತಪ್ಪಿಸಲು ಪ್ರತ್ಯೇಕ ಪಂಕ್ತಿಗಳಲ್ಲಿ ಕೂರುವ ವ್ಯವಸ್ಥೆ ಮಾಡಿಕೊಂಡರು.

ಇಲ್ಲಿ ಒಂದು ಸೂಕ್ಷ್ಮವನ್ನು ಗಮನಿಸಬೇಕು. ಬ್ರಾಹ್ಮಣರು ಸಸ್ಯಾಹಾರಿಗಳು. ಮಡಿ ಮೈಲಿಗೆ ಇತ್ಯಾದಿಯನ್ನು ಆಚರಿಸಿದವರು. ನಿತ್ಯ ಪೂಜೆ ಪುನಸ್ಕಾರಗಳನ್ನು ಮಾಡುವವರು. ಹಾಗಾಗಿ ಅವರು ಮಾಂಸಾಹಾರಿಗಳ ಜೊತೆ ಕೂತು ಉಣ್ಣುವುದು ಸರಿಯಲ್ಲ ಎಂಬ ಅಲಿಖಿತ ನಿಯಮವಿತ್ತು. ಅದೂ ಅಲ್ಲದೆ ಬ್ರಾಹ್ಮಣರದು ಸಾತ್ವಿಕ ಆಹಾರ. ಉಪ್ಪು-ಹುಳಿ-ಖಾರಗಳು ಕಮ್ಮಿ. ಮಾಂಸಾಹಾರ ಮಾಡಿದವರದ್ದು ಇವೆಲ್ಲವನ್ನು ಯಥೇಚ್ಛ ಸೇವಿಸಿದ ದೇಹ, ನಾಲಗೆ. ಹಾಗಾಗಿ ಅವರಿಗೆ ಬ್ರಾಂಬ್ರರ ಸಪ್ಪೆ ಊಟ ರುಚಿಸುತ್ತಲೂ ಇರಲಿಲ್ಲ. ಆದರೆ ಅಬ್ರಾಹ್ಮಣರು ಬ್ರಾಹ್ಮಣರ ಸಿಹಿತಿಂಡಿಗಳನ್ನೂ, ಪಾಯಸವನ್ನೂ, ರುಚಿಕಟ್ಟಾದ ಸಾರನ್ನೂ ಇಷ್ಟಪಡುತ್ತಿದ್ದರು. ಹಾಗಾಗಿ ಇಬ್ಬರಿಗೂ ಅವರವರ ರುಚಿಸಂಸ್ಕೃತಿಗೆ ತಕ್ಕಂತೆ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಿ ಎರಡು ಪ್ರತ್ಯೇಕ ಪಂಕ್ತಿ ಮಾಡಲಾಯಿತು. ಬ್ರಾಹ್ಮಣರು ಅಬ್ರಾಹ್ಮಣರಿಂದ ಅಂತರ ಕಾಯ್ದುಕೊಳ್ಳುವುದಕ್ಕಿಂತ ಹೆಚ್ಚಾಗಿ ಅಬ್ರಾಹ್ಮಣರೇ ಬ್ರಾಹ್ಮಣರಿಂದ ಅಂತರ ಕಾಯ್ದುಕೊಳ್ಳುತ್ತಿದ್ದರು ಎಂದರೂ ಸರಿಯೇ. ಬ್ರಾಹ್ಮಣನೊಬ್ಬ ಅಬ್ರಾಹ್ಮಣನ ಮನೆಗೆ ಹೋದರೆ ಕುಡಿಯಲು ನೀರೂ ಸಿಗುವುದಿಲ್ಲ.’ಅಯ್ಯ! ನೀವು ದೇವರ ಪೂಜೆ ಮಾಡೋರು. ನಮ್ಮ ಮನೆ ಚಾ-ತಿಂಡಿ ತಗೋಬಾರದು’ ಎಂಬ ಭಯಮಿಶ್ರಿತ ಭಕ್ತಿ ಅಬ್ರಾಹ್ಮಣರದ್ದು. ಇದನ್ನವರು ಅಸಮಾನತೆಯ ದೃಷ್ಟಿಯಿಂದ ಮಾಡುತ್ತಿದ್ದುದಲ್ಲ. ದೇವರ ಮೇಲಿನ ಗೌರವವನ್ನು ಅವರು ತೋರಿಸುತ್ತಿದ್ದ ರೀತಿ ಇದು.

ಈ ಎಲ್ಲ ಕಾರಣಗಳಿಂದ ಮಠದಲ್ಲಿ ಎರಡು ಪಂಕ್ತಿಗಳಾದವು. ಗಮನಿಸಿ; ಮಠ ಎಂಬುದು ಬ್ರಾಹ್ಮಣ ವಟುಗಳ ವಿದ್ಯಾಭ್ಯಾಸದ ವಸತಿಶಾಲೆ. ಅಲ್ಲಿ ಬ್ರಾಹ್ಮಣರಿಗೆ ಊಟ ಇದ್ದಿದ್ದೇ. ಆದರೆ ಅಬ್ರಾಹ್ಮಣರಿಗೆ ಊಟ ಹಾಕಬೇಕೆಂಬ ಯಾವ ನಿಯಮವೂ ಇರದೇ ಇದ್ದರೂ, ಅವರಿಗೂ ಊಟ ಹಾಕೋಣ ಎಂಬ ಉದಾರತೆಯಿಂದಷ್ಟೇ ಅಬ್ರಾಹ್ಮಣರಿಗೆ ಊಟದ ಪಂಕ್ತಿ ಶುರುವಾದದ್ದು. ಊಟದ ವಿಚಾರದಲ್ಲಿ; ಬೇರೆಯವರಿಗೆ ಉಣ್ಣಿಸುವ ವಿಚಾರದಲ್ಲಿ ಬ್ರಾಹ್ಮಣರು ಮೊದಲಿಂದಲೂ ಸ್ವಲ್ಪ ಉದಾರಿಗಳೇ. ಶತಶತಮಾನಗಳಿಂದ ಪಾಕಶಾಸ್ತ್ರವನ್ನು ದಕ್ಕಿಸಿಕೊಂಡವರಲ್ಲವೇ? ಹಾಗಾಗಿ, ತಾವು ಅಡುಗೆ ಮಾಡಿ ಬೇರೆಯವರಿಗೆ ಬಡಿಸುವುದರಲ್ಲಿ ಸುಖ ಕಾಣುವ ಬಹಳ ದೊಡ್ಡ ಬ್ರಾಹ್ಮಣ ವರ್ಗ ಇದೆ. ಹಳ್ಳಿಗಳಲ್ಲಿ ಬ್ರಾಹ್ಮಣರ ಮನೆಗಳಲ್ಲಿ ಕಾರ್ಯಕ್ರಮಗಳಾದರೆ, ಆಸುಪಾಸಿನ ನಾಲ್ಕು ಮನೆಗಳಿಗೆ ತಪಲೆಗಳಲ್ಲಿ ಹಂಚಲೆಂದೇ ಮನೆಯೊಡತಿ ಸ್ವಲ್ಪ ಹೆಚ್ಚಿಗೇ ಅಡುಗೆ ಮಾಡಿಸುವ ಕ್ರಮ ಇವತ್ತಿಗೂ ಇದೆ. ಮಠದಲ್ಲಿದ್ದವರೂ ಅಂತಹ ಮಾನವೀಯ ಗುಣ ಇದ್ದವರೇ ಆದ್ದರಿಂದ ಅಬ್ರಾಹ್ಮಣರಿಗೆ ಊಟ ಹಾಕುವುದಕ್ಕೆ ತಕರಾರು ಮಾಡಲಿಲ್ಲ. ಅಲ್ಲದೆ, ದೇವಸ್ಥಾನದ ಒಂದಿಲ್ಲೊಂದು ಕೆಲಸದಲ್ಲಿ ಅಬ್ರಾಹ್ಮಣರ ಭಾಗವಹಿಸುವಿಕೆ ಇದ್ದೇ ಇರುತ್ತಲ್ಲ? ದೇವಸ್ಥಾನದೆದುರು ಜಾತ್ರೆಗೆ ಚಪ್ಪರ ಕಟ್ಟಲು, ರಥ ಅಣಿಗೊಳಿಸಲು ಅಬ್ರಾಹ್ಮಣರ ರಟ್ಟೆಗಳೇ ಬೇಕು. ಕೆಲಸ ಮಾಡಿಸಿ ಊಟ ಹಾಕದೆ ಅವರನ್ನು ಕಳಿಸಲು ಯಾರಿಗೆ ಮನಸು ಬಂದೀತು?

ಆದರೆ ಕಾಲಾನುಕ್ರಮದಲ್ಲಿ ಈ ಪಂಕ್ತಿಭೇದ ಎಂಬುದು ಎರಡು ಜಾತಿಗಳ ನಡುವೆ ಎಳೆದ ಗೆರೆ, ಅಸಮಾನತೆ, ಶೋಷಣೆ ಎಂದು ಕಾಣಿಸತೊಡಗಿತು ಪ್ರಗತಿಪರರಿಗೆ. ಉಡುಪಿಯಲ್ಲಿ ನೂರಾರು ವರ್ಷಗಳಿಂದ ಉಂಡವರಲ್ಲಿ ಅಂಥ ಯಾವುದೇ ಜಾತೀಯ ಭಾವನೆ ಇರಲಿಲ್ಲ. ಆದರೆ ಅಸಮಾನತೆಯ ಕನ್ನಡಕವನ್ನು ದಿನರಾತ್ರಿ ಹಾಕಿಕೊಂಡೇ ಓಡಾಡುವವರಿಗೆ ಉಡುಪಿಯ ಈ ವ್ಯವಸ್ಥೆ ಕಣ್ಣು ಕುಕ್ಕತೊಡಗಿತು. ಭಾರತೀಯವಾದ ಎಲ್ಲ ವ್ಯವಸ್ಥೆಗಳನ್ನೂ ಕಿತ್ತುಹಾಕಬೇಕೆಂಬ ಅಜೆಂಡಾ ಹಾಕಿಕೊಂಡಿದ್ದವರು ಉಡುಪಿಯ ಮೇಲೆ ಮುಗಿಬಿದ್ದರು. ಇವರಲ್ಲೆಷ್ಟು ಜನ ಉಡುಪಿಯ ಕೃಷ್ಣನ ಭಕ್ತರು? ಎಷ್ಟು ಜನ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಕೈ ಮುಗಿದವರು?ಸಮರ್ಪಣಾ ಭಾವದಿಂದ ಹುಂಡಿಗೆ ಕಾಣಿಕೆ ಹಾಕಿದವರು? ಕಷ್ಟಕಾಲದಲ್ಲಿ ಹರಕೆ ಹೊತ್ತವರು? ನಿಷ್ಕಲ್ಮಶ ಮನಸ್ಸಿನಿಂದ ತೀರ್ಥ,ಗಂಧ, ಪ್ರಸಾದ ಪಡೆದವರು? ಒಬ್ಬರೂ ಇಲ್ಲ! ಮೂಲತಃ ದೇವರ ಅಸ್ತಿತ್ವವನ್ನೇ ನಿರಾಕರಿಸುವ ಈ ಮಂದಿ, ಪಂಕ್ತಿಭೇದ ಮಾತ್ರ ತೊಲಗಲೇಬೇಕು ಎಂದು ಹೋರಾಟಕ್ಕೆ ಇಳಿದುಬಿಟ್ಟಿದ್ದರು. ದೇವಳಕ್ಕೆ ಬಂದುಹೋಗುತ್ತಿದ್ದ ಲಕ್ಷಾಂತರ ಭಕ್ತರಿಗೆ ಕಾಣಿಸದೇ ಇದ್ದ ಸಮಸ್ಯೆ ಈ ವಿಚಾರವಾದಿಗಳಿಗೆ ಕಾಣಿಸಿತ್ತು!

ಕಾಲ ಸರಿದಂತೆ ಉಡುಪಿಯ ಮಠ ಕೂಡ ದೊಡ್ಡದಾಗಿದೆ. ಹಲವು ಭಾಗಗಳನ್ನು ಸೇರಿಸಲಾಗಿದೆ. ಮೊದಲು ಅಲ್ಲಿ ಚೌಕಿ ಎಂಬ ಒಂದೇ ಊಟದ ಮನೆ ಇತ್ತು. ಸ್ವಾಮೀಜಿಯವರು ಅಲ್ಲಿಗೆ ಬಂದು ಅಪರಾಹ್ನದ ೧೨-೧ ಗಂಟೆಯ ಮಧ್ಯೆ ಊಟ ಮಾಡುತ್ತಾರೆ. ಚೌಕಿ ಎಂಬುದು ಮಠದ ವಿದ್ಯಾರ್ಥಿಗಳು ಮತ್ತು ವಿದ್ವಾಂಸರಿಗೆ ಊಟಕ್ಕೆ ಮೀಸಲಿದ್ದ ಭಾಗ. ಅಲ್ಲಿ ಸ್ವಾಮಿಗಳ ಊಟವಾಗುತ್ತಿರುವಾಗ ಯಾರಾದರೊಬ್ಬ ವಿದ್ವಾಂಸರು ರಾಮಾಯಣವೋ ಮಹಾಭಾರತವೋ ಭಾಗವತವೋ , ಯಾವುದಾದರೊಂದು ಕಾವ್ಯದ ಭಾಗವನ್ನು ಓದುತ್ತಾರೆ. ಸ್ವಾಮೀಜಿಯವರದ್ದು ಹಕ್ಕಿ ಊಟ. ಇಪ್ಪತ್ತೊಂದು ತುತ್ತಿಗಿಂತ ಹೆಚ್ಚಿನದನ್ನು ಉಣ್ಣಬಾರದು ಎಂಬ ನಿಯಮವೇ ಇದೆ. ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಜಾಸ್ತಿಯಾದ ಮೇಲೆ, ಹೊರಗೆ ವಿಶಾಲವಾದ ಭೋಜನಶಾಲೆಯನ್ನು ಕಟ್ಟಿಸಲಾಯಿತು. ಭೋಜನ ಅಂಗಣವನ್ನು ಸ್ವಾಮಿಗಳು ಕಟ್ಟದೇ ಇದ್ದರೆ ಇಂದು ಪಂಕ್ತಿಭೇದ ಎನ್ನುತ್ತ ಚಳವಳಿಗಾರರು ಹಾರಾಡುವ ಪ್ರಮೇಯವೇ ಇರುತ್ತಿರಲಿಲ್ಲ!

ಸರಿ, ಈಗ ಸದ್ಯದ ಸಮಸ್ಯೆಯ ವಿಷಯಕ್ಕೆ ಬರೋಣ. ಬ್ರಾಹ್ಮಣರು ಊಟದ ವಿಷಯದಲ್ಲಿ ಕೆಲವು ಕ್ರಮ ಅನುಸರಿಸುತ್ತಾರೆ ಎಂದರು ಕೆಲವರು. ಬ್ರಾಹ್ಮಣರ ಊಟದಲ್ಲಿ ಪ್ರೋಕ್ಷಣೆ, ಪರಿಷಿಂಚನೆ, ಹವಿಸ್ಸು ಸಮರ್ಪಣೆ, ಪ್ರಾರ್ಥನೆ, ಅನ್ನಪ್ರಾಶನ ಮತ್ತು ಕೊನೆಯದಾಗಿ ಆಪೋಶನ – ಎಂಬ ಹಂತಗಳುಂಟು. ಇವೆಲ್ಲವನ್ನು ಕ್ರಮಬದ್ಧವಾಗಿ ಮಾಡುವ ಕರ್ಮಠ ಬ್ರಾಹ್ಮಣನಿಗೆ ಏಕಾಏಕಿ ನೀನು ಅವೆಲ್ಲವನ್ನು ಬಿಟ್ಟು ಉಳಿದವರ ಜತೆ ಊಟ ಮಾಡಬೇಕು ಎಂದರೆ ಗೊಂದಲವಾಗಬಹುದು; ಕಿರಿಕಿರಿಯಾಗಬಹುದು. ಹಾಗಾಗಿ ಅವರ ಪಾಡಿಗೆ ಅವರನ್ನು ಬಿಟ್ಟುಬಿಡೋಣ. ಮಠ ಎಂಬುದು ಒಂದು ಖಾಸಗಿ ಸಂಸ್ಥೆಯಾದ್ದರಿಂದ ಅಲ್ಲಿ ಸಾರ್ವಜನಿಕರು ಹೋಗಿ ನಾವು ಹೇಳಿದಂತೇ ನೀವು ನಡೆದುಕೊಳ್ಳಬೇಕೆಂದು ಹಕ್ಕೊತ್ತಾಯ ಮಾಡುವುದು ಸರಿಯಲ್ಲ. ಮಠದಲ್ಲಿ ಸ್ವಾಮಿಗಳು ಭೋಜನಕ್ಕೆ ಕೂರುವ ಚೌಕಿ ಇದೆ. ಅಲ್ಲಿ, ಈ ಕರ್ಮಠ ಬ್ರಾಹ್ಮಣರು ತಮ್ಮ ಆಚರಣೆಗೆ ಮುಕ್ಕಾಗದಂತೆ ಊಟ ಮಾಡಲಿ. ಅಲ್ಲದೆ, ಮಠದಲ್ಲಿ ಶ್ರಾದ್ಧಕರ್ಮವನ್ನೋ ಇನ್ಯಾವುದೋ ಸೇವೆಯನ್ನೋ ಮಾಡಿಸಲು ಬಂದವರು ಇರುತ್ತಾರೆ. ಅವರಿಗೂ ಚೌಕಿಯಲ್ಲೇ ಊಟವಾಗಲಿ.

ಇನ್ನು ಕರ್ಮಠರಂತೆ ಕಚ್ಚೆ-ಪಂಚೆ ಉಡದೆ ಪ್ಯಾಂಟು-ಶರಟು ಹಾಕಿಕೊಂಡು ದೇವಸ್ಥಾನಕ್ಕೆ ಬಂದವರಿಗೆ ಭೋಜನಶಾಲೆಯಲ್ಲಿ ಊಟವಾಗಲಿ. ಇವರಲ್ಲಿ ಹೆಚ್ಚಿನವರು ಮಠದ ವ್ಯವಸ್ಥೆಯಿಂದ ಹೊರಗಿನವರು. ಯಾವಾಗಲೋ ಒಮ್ಮೆ ದೇವಸ್ಥಾನಕ್ಕೆ ಬಂದು ಹೋಗುವವರು. ಪ್ರವಾಸಿಗರು. ಇವರಲ್ಲಿ ಹೆಚ್ಚಿನವರಿಗೆ ತಾವು ಯಾವ ಜಾತಿಯವರ ಜೊತೆ ಊಟಕ್ಕೆ ಕೂರುತ್ತೇವೆಂಬುದು ಮುಖ್ಯವಾಗುವುದಿಲ್ಲ. ಅಂಥವರು ಸಾರ್ವಜನಿಕವಾಗಿ ಭೋಜನಶಾಲೆಯಲ್ಲಿ ಊಟ ಮಾಡಲಿ. ನಾನು ಉಡುಪಿಯಲ್ಲಿ ಚೌಕಿಯಲ್ಲೂ ಉಂಡಿದ್ದೇನೆ; ಎಲ್ಲರೊಳಗೊಂದಾಗಿ ಭೋಜನಶಾಲೆಯಲ್ಲೂ ಉಂಡಿದ್ದೇನೆ. ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು ಎಂಬಂಥ ನನಗೆ ಮತ್ತು ನನ್ನಂಥ ಸಹಸ್ರಾರು ಮಂದಿಗೆ ಈ ಪಂಕ್ತಿಭೇದ ಒಂದು ಸಮಸ್ಯೆಯಾಗಿ ಕಂಡೇ ಇಲ್ಲ. ಸಮಸ್ಯೆ ಎಂದು ಭಾವಿಸಿದವರು ಕೃಷ್ಣಮಠವನ್ನು ಒಮ್ಮೆಯೂ ಸಂದರ್ಶಿಸದ, ಇಲ್ಲಿನ ಆಚರಣೆ-ಸಂಪ್ರದಾಯಗಳಲ್ಲಿ ಆಸಕ್ತಿ ಅಥವಾ ಶ್ರದ್ದೆ ಇಲ್ಲದ ಮತ್ತು ಯಾರೊಂದಿಗೂ ನೆಮ್ಮದಿಯಿಂದ ಕೂತು ಉಣ್ಣಲು ಸಾಧ್ಯವಾಗದಂತಹ ಮನಸ್ಥಿತಿ ಇರುವ ವಿಚಾರವಾದಿಗಳು ಮಾತ್ರ. ಈ ವಿಚಾರವಾದಿಗಳು ಚೌಕಿಯಲ್ಲಿ ಕೂತು ಉಂಡಾರೇ? ಇಲ್ಲ. ಯಾಕೆಂದರೆ ಊಟ ನಡೆಯುತ್ತಿರುವಷ್ಟೂ ಹೊತ್ತು ನಡೆಯುವ ಪುರಾಣ ಪ್ರವಚನ ಅವರ ಕಿವಿಗೆ ಕಾದ ಸೀಸವನ್ನು ಸುರಿದ ಅನುಭವವನ್ನು ಕೊಡಬಹುದು. ಇನ್ನು, ಎಲ್ಲರಂತೆ ಭೋಜನಶಾಲೆಯಲ್ಲಾದರೂ ಕೂತು ಉಂಡಾರೇ? ಅದೂ ಇಲ್ಲ. ದೇವಸ್ಥಾನಕ್ಕೆ ಒಂದು ಪೈಸೆ ಕಾಣಿಕೆ ಹಾಕದ, ಮನಸ್ಸಲ್ಲಿ ಒಂದು ಗ್ರಾಂ ಭಕ್ತಿಯೂ ಇಲ್ಲದ ಈ ನಾಸ್ತಿಕರಿಗೆ ಪ್ರತಿ ತುತ್ತಲ್ಲೂ ಕೃಷ್ಣನ ರೂಪ ಕಂಡು ತಿಂದದ್ದೆಲ್ಲ ಗಂಟಲಲ್ಲೇ ಸಿಕ್ಕಿಕೊಳ್ಳಬಹುದು. ಹಾಗಾಗಿ, ಇವರು ಮಾಡುವುದೆಲ್ಲ ಪ್ರಚಾರಕ್ಕಾಗಿ. ನಿಜವಾಗಿಯೂ ದೇವಳದೊಳಗೆ ಬಂದು ಎಲ್ಲರಂತೆ ಭಕ್ತರಾಗಿ ದೇವರ ದರ್ಶನ ಪಡೆದು ಉಂಡುಹೋಗುವ ಮನೋನಿರ್ಮಲತೆ ಇವರಲ್ಲಿಲ್ಲ ಎನ್ನಬಹುದು.

ಮಠಕ್ಕೆ ಬಂದು ಊಟ ಬೇಕು ಎಂದ ಭಕ್ತನಿಗೆ, ಆತ ಕಟ್ಟುನಿಟ್ಟಾಗಿ ಬ್ರಾಹ್ಮಣಾಚರಣೆಗಳನ್ನು ಆಚರಿಸುವ ವ್ಯಕ್ತಿಯಾಗಿದ್ದರೆ ಚೌಕಿಗೆ;ಎಲ್ಲರಂತೆ ಕೂತು ಉಂಡು ಹೋಗುತ್ತೇನೆಂದರೆ ಭೋಜನಶಾಲೆಗೆ ಕಳಿಸಿದರೆ ಸಮಸ್ಯೆಯೇ ಇಲ್ಲ. (ಈಗ ನಡೆದಿರುವುದೂ, ಹಲವು ವರ್ಷಗಳಿಂದ ನಡೆಯುತ್ತ ಬಂದಿರುವುದೂ ಹೆಚ್ಚುಕಡಿಮೆ ಅದೇ!) ದೇವರ ಭಕ್ತಿಯೊಂದನ್ನಷ್ಟೇ ತುಂಬಿಕೊಂಡು ಬಂದ ನಿಜವಾದ ಭಕ್ತ ಕಲ್ಲುಹಾಸಿನ ಮೇಲೆ ಎಲೆ ಹಾಕಿದರೂ ಕೂತು ಸಂತೃಪ್ತಿಯಿಂದ ಉಂಡು ಹೋಗುತ್ತಾನೆ. ಯಾಕೆಂದರೆ ಭಕ್ತನಿಗೆ ಅಲ್ಲಿ ಕಾಣಿಸುವುದು ಪ್ರಸಾದ. ಭಕ್ತನಲ್ಲದ ಬಂಡಾಯಗಾರನಿಗೆ ಕಾಣಿಸುವುದು ಪಂಕ್ತಿಭೇದ ಅಷ್ಟೆ.

-Rohit Chakratirtha

(ಪಂಕ್ತಿಬೇಧದ ಪರ ವಿರೋಧ ಪೂರಕವಾದ ಆರೋಗ್ಯಕರ ಬರವಣಿಗೆಗೆ ಸ್ವಾಗತ- ರೀಡೂ ಕನ್ನಡ)

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!