ಬುಧವಾರ ರಾತ್ರಿ ಪಿಒಕೆ ಪ್ರದೇಶಕ್ಕೆ ನುಗ್ಗಿ ಅಲ್ಲಿರುವ ಉಗ್ರರ ಕ್ಯಾಂಪ್’ಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದು ಭಯೋತ್ಪಾದಕರ ಸಾವು ಸಂಭವಿಸಿದೆ ಎಂದು ಇಂದು ಬೆಳಗ್ಗೆ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರು ತಿಳಿಸಿದರು.
ಸೇನೆಗೆ ದೊರೆತ ಖಚಿತ ಮಾಹಿತಿ ಪ್ರಕಾರ ಭಯೋತ್ಪಾದಕರು ಭಾರತದೊಳಕ್ಕೆ ನುಗ್ಗಲು ಸಜ್ಜಾಗುತ್ತಿತ್ತು, ಇದನ್ನು ಆಧರಿಸಿಯೇ ಸರ್ಜಿಕಲ್ ಧಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಭಾರತೀಯರಿಗೆ ಯಾವುದೇ ತೊಂದರೆಯುಂಟಾಗಿಲ್ಲ ಎಂದು ಲೆ ಜ ರಣಬೀರ್ ಸಿಂಗ್ ತಿಳಿಸಿದರು. ಭಯೋತ್ಪಾದಕರ ದಾಳಿ, ಕದನ ವಿರಾಮ ಉಲ್ಲಂಘನೆ ಬಗ್ಗೆ ಪಾಕ್ ಡಿಜಿಎಂಒ ಅವರಿಗೆ ತಿಳಿಸಲಾಗಿದ್ದರೂ, ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯದ ಕಾರಣ ಸರ್ಜಿಕಲ್ ದಾಳಿ ನಡೆಸಲಾಗಿದೆ ಎಂದರು.
ಪತ್ರಿಕಾ ಗೋಷ್ಟಿಯ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಸಮಿತಿ ಸಭೆ ನಡೆಸಲಾಯಿತು.ರಾಷ್ಟ್ರಪತಿ ಪ್ರಣಬ್ ಮುಖರ್ಜಿ , ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಜಮ್ಮು ಕಾಶ್ಮೀರದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರಿಗೆ ಈ ಸೀಮಿತ ಧಾಳಿ ಬಗ್ಗೆ ಮಾಹಿತಿ ನೀಡಲಾಗಿದೆ. ವಿದೇಶಾಂಗ ವ್ಯವಹಾರಗಳ ವಕ್ತಾರ ವಿಕಾಸ್ ಸ್ವರೂಪ್ ಅವರು ಪತ್ರಿಕಾ ಗೋಷ್ಟಿಯಲ್ಲಿ ಹಾಜರಿದ್ದರು.
ಮಾಹಿತಿ ಪ್ರಕಾರ ೩೦ಕ್ಕೂ ಮಿಕ್ಕಿ ಉಗ್ರರ ಸಾವು ಸಂಭವಿಸಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ನೆಲಕ್ಕೆ ನುಗ್ಗಿದ ಸೇನೆ ಭಿಂಬರ್, ಹಾಟ್’ಸ್ಪ್ರಿಂಗ್, ಕೆಲ್ ಮತ್ತು ಲಿಪಾ ರಂಗ್ ಅಲ್ಲಿ ದಾಳಿ ನಡೆಸಿದೆ ಎಂದು ಪಾಕಿಸ್ತಾನದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ ಒಪ್ಪಿಕೊಂಡಿದೆ. ಜೊತೆಗೇ, “ ಈ ದಾಳಿಯನ್ನು ನಾವು ಖಂಡಿಸುತ್ತೇವೆ. ನಮ್ಮ ಶಾಂತಿಯನ್ನು ದೌರ್ಬಲ್ಯ ಎಂದು ಪರಿಗಣಿಸಬಾರದೆಂದು ಪಾಕ್ ಪ್ರಧಾನಿ ಹೇಳಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.
“ಉರಿ”ಯ ಉರಿಯನ್ನು ಆರಿಸಿದ ಭಾರತೀಯ ಸೇನೆ:
ಅಕ್ರಮ ನುಸುಳುವಿಕೆ ಇನ್ನು ಮುಂದೆ ನಡೆದರೆ ಕಠಿಣ ಕ್ರಮ ಖಂಡಿತಾ ಎನ್ನುವ ಸಂದೇಶವನ್ನು ಈ ದಾಳಿ ಮೂಲಕ ಭಾರತೀಯ ಸೇನೆ ಪಾಕಿಸ್ತಾನಕ್ಕೆ ರವಾನಿಸಿದೆ. ಮೊನ್ನೆ ತಾನೇ ಭಾರತದೊಳಗೆ ನುಗ್ಗಿ ಉರಿಯಲ್ಲಿ ಹದಿನೆಂಟು ಯೋಧರ ಕೊನೆಯುಸಿರಿಗೆ ಕಾರಣವಾಗಿದ್ದ ಉಗ್ರರಿಗೆ ಮುಂದಿನ ದಿನಗಳಲ್ಲಿ ಇಂತಹಾ ಘಟನೆ ನಡೆದರೆ ಭಾರತದ ಮುಂದಿನ ನಡೆಯ ಬಗ್ಗೆ ಸ್ಪಷ್ಟ ಚಿತ್ರಣ ದೊರೆತಿದೆ