ತುಸು ಭಿನ್ನ ಹಿನ್ನಲೆಯ ಗಜಾಸುರನಿಗೆ ಸಂಬಂಧಿಸಿದ ಗೌರಿ ಗಣೇಶರ ಕಥೆ ಈ ಕೆಳಗಿದೆ. ಪೌರಾಣಿಕ ಹಿನ್ನಲೆಯಾಗಿ ಗಣೇಶ ಗಜಮುಖನಾದ ಕಥೆ ಚಿರಪರಿಚಿತವಾದರೂ, ಅವನ ಹುಟ್ಟಿಗೆ ಮತ್ತು ಗಜಾಸುರನ ಸಾವಿಗಿರುವ ಸಂಬಂಧ, ಮೂಷಿಕಾಸುರ ಗರ್ವಭಂಗದಷ್ಟು ಪ್ರಸಿದ್ದವಲ್ಲ. ಆ ಹುಟ್ಟಿನ ಹಿನ್ನಲೆಯಾದ ಮೂಷಿಕಾಸುರ ವರಗರ್ವ, ಸತ್ತು ಅಸ್ವಾಭಾವಿಕ ಮರುಹುಟ್ಟು ಪಡೆದು ಗಜಾಸುರನ ಶಿರದೊಡನೆ ಗಜಾನನ ಜನ್ಮ ತಳೆದ ಪ್ರವರ ಮತ್ತು ಅಂತಿಮವಾಗಿ ಮೂಷಿಕನ ಗರ್ವಭಂಗ – ಈ ಮೂರನ್ನು ಸಮಗ್ರ ರೂಪದಲ್ಲಿ, ಮೂರು ಕವನ ಭಾಗಗಳಾಗಿ ತರುವ ಯತ್ನ, ಈ ಕವನ ಕುಂಜ.
- ಮೂಷಿಕಾಸುರ ಗರ್ವ
__________________________________
ಮೂಷಿಕಾಸುರನೆಂಬ ಅಸುರ ದೊರೆ ಮದ ಮದೋನ್ಮತ್ತ
ಬ್ರಹ್ಮದೇವನ ಕುರಿತು ಘೋರ ತಪಗೈದ ದಾನವ ಸತತ
ಜಿಗುಟಿಗೆ ಪ್ರಸನ್ನಿಸಿ ಮೆಚ್ಚಿ ಕಡೆಗು ಪ್ರತ್ಯಕ್ಷನಾ ಅಂಚೆದೇರ
ಫಲಿಸಿತು ತಪನೆ ವ್ಯಾಪಾರ ವರವ ಪಡೆದ ರಾಕ್ಷಸವೀರ ||
ಬರಬಾರಾದಂತೆ ಮರಣ ಭೀತಿ ಮೂಲೋಕಗತಿ ವಿಪ್ಪತ್ತು
ಅಸಹಜ ಜನನ ಸತ್ತು ಮರು ಸೃಷ್ಟಿಯಾದರಷ್ಟೆ ಆಪತ್ತು
ವರ ಪಡೆದ ದಾನವ ಮದ ಗರ್ವ ನಡೆಸಿ ಸ್ವರ್ಗಾಕ್ರಮಣ
ಅಂಕೆಗು ಮಿತಿಮೀರಿದ ದೈತ್ಯ ದುರುಳನ ದುರಾಕ್ರಮಣ ||
ಪತ್ನಿ ಪ್ರಿಯಂವದೆ ಸುನೀತೆ, ಶಿವೆಗೆ ಪರಮ ಈಶ್ವರಿ ಭಕ್ತೆ
ಪತಿಯಟ್ಟಹಾಸವನು ಮನದೊಳೊಪ್ಪದ ಸುಶೀಲಿನಿ ಶಕ್ತೆ
ಮನವೊಲಿಸುತ ಬೇಡಿದಳು ಪತಿಯ ಬಿಟ್ಟುಬಿಡೊರಾಯ
ಹಾಳು ದೇವತೆ ಸಹವಾಸ ನಂಬೆ ತ್ರಿಮೂರ್ತಿಗಳಪಾಯ ||
ಒಪ್ಪುವನೆ ಮೂಢ ಮೂಷಿಕ ವಿಧಿ ಬರೆಸಿದ ಕಹಿ ಜಾತಕ
ಅವಿರತ ಮುಂದುವರೆಯಿತು ಸತತ ನಿರಾತಂಕ ಅಂತಕ
ತೀರದ ಗೋಳಿಗೆ ಓಡಿದ ದೇವತೆಗಳ್ಹಿಡಿದು ಬ್ರಹ್ಮನ ಕಾಲು
ಮೊರೆಯಿಟ್ಟರು ಅಜ್ಜನಲಿ ತಾತಾ, ಕಾಪಾಡು ನಮ್ಹೆಗಲು ||
ಏನ್ರಯ್ಯ ಈ ಗೋಳು, ಮೊದಲು ವರ ಕೊಡಿಸೆ ಯಾಚನೆ
ಕೊಟ್ಟಾದ ಮೇಲಾರಂಭ ದಮನ, ವರ ನಿವಾರಣೆ ಪೀಡನೆ
ಸರಿ ಬನ್ನಿ ಆಲೋಚಿಸೋಣ ಅಜನೊಡನೆ ಪರಿ ಸಂಭಾಷಣೆ
ಹುಡುಕಿಸುತ ದಾರಿ ಮೂಷಿಕನ್ಹುಟ್ಟಡಗಿಸುವ ಯೋಜನೆ ||
(ಸಶೇಷ – ೦೧)
- ಗಜಾಸುರ ಗಜಾನನನ ಶಿರ
_____________________________________
ಬ್ರಹ್ಮ,ವಿಷ್ಣು ಚಿಂತನೆ ನಡೆಸೆ ವರ ಸೆರೆಯ್ಹೇಗೆ ಮುರಿವ ಬಗೆ
ಬೇಕಾದ ಗಳಿಗೆಯಲೆ ಪರಶಿವ ಲೀನ ಗಜಾಸುರ ಗರ್ಭದಲೆ
ವರಕೊಟ್ಟ ತಪ್ಪಿಗೆ ಶಿವನ ತನ್ನೊಳಗಿರಲು ಬೇಡೆ ಗಜಾಸುರ
ಮಾಡಬೇಕುಪಾಯ ಹೇಗೋ ಹೊರ ಬರಿಸೆ ಶಿವಲಿಂಗೇಶ್ವರ ||
ನಡೆದರು ಹುಡುಕುತ ಉಮೆ ಒಳದಾರಿ ಆಯೋಜಿಸಲು
ಕೋರುತ ಶಿವೆಯ ಸೃಷ್ಟಿಸೆ ಮಾನಸಪುತ್ರನ ಶಕ್ತಿಯೊಳು
ಮಂಗಳದ್ರವ್ಯ ಮೈದಾಳಿ ಜನಿಸೆ ಉಮಾಪುತ್ರ ಶಕ್ತಿಮಾನ
ತುಂಬಿ ಈಶ್ವರಿ ಜೀವ, ನುಡಿದು ಹೇಗೋ ಕರೆತನ್ನೀ ಶಿವನ ||
ಮಗನ ಕಾವಲಿಗಿಟ್ಟು ನಡೆದಳೆ ಶಿವೆ ಗೌರಿ ಸ್ನಾನದ ಮನೆಗೆ
ಹರಿ ಬ್ರಹ್ಮರು ನಡೆದರು ಶಿವನನಿಳಿಸಲು ಗಜಾಸುರನೆಡೆಗೆ
ಗಾನ,ನಾಟ್ಯ,ಸಂಗಿತದಿ ಮೆಚ್ಚಿಸೆ ಗಜಾಸುರ ವರ-ವಚನವಿತ್ತ
ಕಳಿಸ್ಹೊರಗೆ ಹರನ ತನುವಿಂದ ಎನಲು ನಗುತ ವರವನಿತ್ತ ||
ಬೇಡಿದ ಗಜಾಸುರ ಹರನ ಪೂರೈಸೆ ಹರಿಬ್ರಹ್ಮ ಕೋರಿಕೆ
ಒಪ್ಪಿದ ಸರ್ವೇಶ್ವರ ಹೊಟ್ಟೆ ಬಗೆಯುತ ಲಿಂಗದ ತೋರಿಕೆ
ಮೆಚ್ಚಿದ ಭಕ್ತಿಯ ಆಳಕೆ ಹರಸಿ ಸಾವಿನ ಮಡಿಲಲೆ ಹೆರಿಗೆ
ಒಪ್ಪುತವನಾ ಕೋರಿಕೆ ಮರಣ ನಂತರವು ಶಿವನ ಬಳಿಗೆ ||
ಮಾರಾಂತಕ ಬಿಡುಗಡೆ ಪೂರ, ಹಿಡಿಯೆ ಮನೆಕಡೆ ದ್ವಾರ
ತಡೆಯಲು ಬಾಲನ ಕಪಟ, ಮೂಗೇರಿಸಿ ಕೋಪದ ಖಾರ
ತರಿದ ಶಿವ ತಲೆಪಕ್ಕ ತ್ರಿಶೂಲದೆ ಗೋಣ್ಮುರಿದೆಸೆದ ಪೂರ
ಪಾರ್ವತಿ ಆಘಾತಕೆ ಅಳಲು ಹರ ಅಸಹಾಯಕತೆ ಶಿಖರ ||
ಹರಿ,ಬ್ರಹ್ಮರ ಆಗಮನ ಸಂತೈಸುತ ಗೌರಿಯ ಪರಿಹರಣ
ನೆನೆದರು ಗಜಾಸುರ ಮರಣ, ಸತ್ತುಳಿದ ಆನೆ ತಲೆ ಮಣ
ಹೇಗೂ ಹರ ವರವಿತ್ತ ಪ್ರಕರಣ, ಸೇರಿಸೆ ಗಜನ ಶಿವಚರಣ
ಹೊರಟಿತು ಶಿವನಾ ಆಜ್ಞೆ, ಗಜನ ತಲೆ ತರಲು ಸಂಪೂರ್ಣ ||
ಬದುಕಿದ ಬಾಲಕ ಪುತ್ರ ಹೊತ್ತು ಗಜಾಸುರ ಶಿರ ಭೂಶಿರ
ಹೆಸರಾಯಿತು ಗಜಾನನ ಸುಪುತ್ರ ದೇವಬಲವೆಲ್ಲ ಮಿತ್ರ
ಹೀಗೆ ಅಸಹಜ ಸೃಷ್ಟಿ, ಸತ್ತು ಮರುಹುಟ್ಟಿದ ಗಣ ಪ್ರಣತಿ
ವೇದಿಕೆ ಸಿದ್ದ ಭೂಪತಿ ಮೂಷಿಕನಿಗೆ ಸರಿ ಕಾಣಿಸೆ ಸದ್ಗತಿ ||
(ಸಶೇಷ – ೦೨)
- ಮೂಷಿಕ ಗರ್ವಭಂಗ
______________________________________
ಕಥೆ ಕೇಳಿದ ಮೂಷಿಕ ಸಿಡಿದು ಉರಿದೆದ್ದ ನಖ ಶಿಖಾಂತ
ಮಾಡುವನೇನ ಬಾಲನೆನುತ ಹೂಡೇ ಬಿಟ್ಟ ಯುದ್ಧ ಸ್ವತಃ
ವೀರದಿ, ಶೌರ್ಯದಿ, ಧೈರ್ಯದಿ ಗಣ ಮೂಷಿಕ ಕಾದಿರಲು
ವರ ನಿವಾರಣೆ ಮರ್ದನ ಗಣಪ ಗೆಲ್ಮೆ ಕೈಮೇಲಾಗಿರಲು ||
ಕುಗ್ಗಿತು ಅಸುರಶಕ್ತಿ, ಗಜಾನನ ಮುರಿದ ದಂತದಾ ಯುಕ್ತಿ
ಓಡಿದ ಮೂಷಿಕ ಭಯದಿ, ಜೀವ ಬೆನ್ನಟ್ಟುವ ದಂತದ ಶಕ್ತಿ
ಕಂಡಳು ಸತಿಪ್ರಿಯಂವದೆ ಪೂಜೆಕುಳಿತ ಹೋಮಕುಂಡದೆ
ಮೊರೆಯಿಟ್ಟಳು ಈಶ್ವರಿಗೆ ತಪ್ಪಿಸಲು ಪತಿ ಮೂಷಿಕ ವಧೆ ||
ಶಂಕರಿ ಕೃಪಾಕರಿ, ಕರುಣಾಕರಿ ಆರ್ಯಸತಿ ಮೊರೆಗೆ ತಾಳಿ
ಉಪಸಂಹರಿಸಿ ದಂತ ಬಿಲದ ಮೂಷಿಕ ಬುದ್ಧಿ ಬಂತಾ ಕೇಳಿ
ಕ್ಷಮಿಸುತಾಯೆ ಜಗನ್ಮಾಯೆ ಕಲಿತಾಯ್ತು ನಾನೆ ಪಾಠಕೊನೆ
ತಪ್ಪು ಶಿಕ್ಷೆ ಉಚಿತ, ಗಜಾನನ ವಾಹನ ಜೀವನವೆಲ್ಲ ನಾನೇ ||
ಹೀಗಾಯ್ತು ಗಜಾನನ ಜನನ ಸಂಭಾಳಿಸಲಿಕ್ಕೆ ಮೂಷಿಕನ
ಗಣಪ ಮೆಟ್ಟಿದ ಅಸುರನ ಒಣ ಅಹಂಕಾರದ ಧೂರ್ತತನ
ಪಳಗಿಸಿ ಕೊನೆಯಲಿ ಅವನನೆ ವಾಹನವಾಗಿಸಿದ ನರ್ತನ
ಪ್ರಿಯಂವದೆ ಜತೆಗಿರುವಂತ ಬೇಡಿಕೆಗೂ ಒಪ್ಪಿದ ಗಜಾನನ ||
ಗಣಪ ಚೌತಿಗೆ ಸಂಭ್ರಮ ಆಚರಣೆ ಎಲ್ಲ ಪೂಜೆ ಸಲಕರಣೆ
ಗಜಾನನ ಬರುವ ಭುವಿಗೆ ಮೂಷಿಕನೊಡನೆ ಸರಿಸಂಚರಣೆ
ಕೈಕಾಯಿ ಕಡುಬ ಕಂತೆ, ಕಟ್ಟಿ ಹೊಟ್ಟೆ ಹಾವಿನ ಸುಮಲತೆ
ಹೊರಲಾರದೆ ಹೊತ್ತ ಮೂಷಿಕತೆ ಪಾಠ ನಮಗೇ ಗಣಪತೆ ||
ಶರಣೆನ್ನಿರಿ ಹಬ್ಬದದಿನ ಇರಬೇಕು ಗೌರಿ,ಗಣೇಶ ಎಲ್ಲಮನ
ಸ್ಮರಣೆಗೆ ಸಾಕು ಭಕುತಿ ಬೇಕಿಲ್ಲ ಗುಡಿ,ಗೋಪುರ,ಜನ,ಗಣ
ಮೂಷಿಕನೂ ಸಾಂಕೇತಿಕ ಒಳಾರ್ಥ ತುಂಬಾ ನಿಗೂಢ ಧನ
ಕಟ್ಟಿರಿಸಿ ಇಪ್ಪತ್ತೊಂದು ನಮನ ಪಡೆ ಗಣಪನಾಶೀರ್ವಚನ ||
–ನಾಗೇಶ ಮೈಸೂರು