ಅಂಕಣ

ಹಬಲ್ ಎಂಬ ಮೋಹಕ ನೋಟಗಾರ

ಮನುಷ್ಯನ ಕುತೂಹಲದ ಜಾಲದೊಳಗೆ ಯಾವ ವಿಷಯ ಬಿದ್ದರೂ ಮುಗೀತು. ಅದರ ಆಳವನ್ನು ಕೆದಕಿ ಎಲ್ಲಾ ಅವಿತಿರುವ ವಿಷಯಗಳನ್ನು ಹೊರ ತೆಗೆಯುವವರೆಗೂ ಅವನಿಗೆ ನೆಮ್ಮದಿ ಇಲ್ಲ. ಏನು ? ಎತ್ತ  ? ಹೇಗೆ ? ಎಂದೆಲ್ಲಾ ಸಾವಿರಾರು ಪ್ರಶ್ನೆಗಳನ್ನು ಹಾಕಿ ಅದರ ಮೂಲವನ್ನು ಹಿಂಬಾಲಿಸುತ್ತಾ ಉತ್ತರವನ್ನು ಹುಡುಕುತ್ತಾ ಹೋಗುತ್ತಾನೆ. ಸಿಕ್ಕ ಉತ್ತರಕ್ಕೂ ಹಾಗೂ ಪ್ರಶ್ನೆಗೂ ಕೆಲವೊಮ್ಮೆ ಸಂಬಂಧವೇ ಇರುವುದಿಲ್ಲ. ಇತಿಹಾಸವನ್ನು ಕೆದಕಿ ನೋಡಿದರೆ ಮನುಷ್ಯನ ಜ್ಞಾನದಾಹಕ್ಕೆ ಮಿತಿಯೇ ಇಲ್ಲ. ಹಲವಾರು ಸಂಶೋಧನೆಗಳಿಂದ ನಮಗೆ ಇಂದು ಹಲವಾರು ಉಪಯೋಗಗಳಾಗಿವೆ. ಬರೀ ಭೂಮಂಡಲದ ಪರಿಧಿಯೊಳಗೆ ತನ್ನ ಮಿತಿಯನ್ನು ಕೊನೆಗೊಳಿಸದ ಮನುಷ್ಯ ಆಗಸದತ್ತ ತಲೆ ಎತ್ತಿ ನೋಡುತ್ತಾನೆ. ಹೀಗೆ ಶುರುವಾದ ನೋಟದಿಂದ ಮನುಷ್ಯನ ಕುತೂಹಲಕ್ಕೆ ರೆಕ್ಕೆ ಬಂದಂತಾಗುತ್ತದೆ. ಭೂಮಂಡಲದ ಆಚೆ ಏನಿಹುದು ? ತಾರೆಗಳು ಯಾಕೆ ಸದಾ ಮಿನುಗುತ್ತಿರುತ್ತವೆ ? ಆಕಾಶದ ಬಣ್ಣ ಯಾವುದು ? ನಮ್ಮ ಭೂಮಂಡಲದ ಹೊರಗೆ ಅದೆಷ್ಟು ಪ್ರಪಂಚಗಳಿವೆ ? ಹೀಗೆ ಹತ್ತು ಹಲವಾರು ಪ್ರಶ್ನೆಗಳಿಂದಾಗಿ ಹಲವಾರು ಉತ್ತರಗಳು ಹೊರಗೆ ಬಂದು ಇಂದಿಗೂ ಅದರ ನಿಜಾಂಶದ ಬಗ್ಗೆ ಚರ್ಚೆಗಳು ಊಹಾಪೋಹಗಳು ನಡೆಯುತ್ತಲೇ ಇವೆ.

ಆಕಾಶದತ್ತ ನೋಟ ಬೀರಿದ ಮಾನವನಿಗೆ ಎಲ್ಲಾ ತಾರೆಗಳು ಹಾಗೂ ಗ್ರಹಗಳನ್ನು ಸರಿಯಾಗಿ ನೋಡಲು ಸಾಧ್ಯವಾಗದೇ ಇರುವುದರಿಂದ ದೂರದರ್ಶಕದ(Telescope) ಆವಿಷ್ಕಾರವಾಗುತ್ತದೆ. 1610ರಲ್ಲಿ ಇಟಲಿಯ ಖಗೋಳಶಾಸ್ತ್ರಜ್ಞ ಗೆಲಿಲಿಯೋ ಗೆಲಿಲಿ(Galileo Galilei) ತಾನೆ ತಯಾರಿಸಿದ ತನ್ನ ದೂರದರ್ಶಕವನ್ನು ಬಾನಿನತ್ತ ತಿರುಗಿಸಿ ಕತ್ತಲೆ ತುಂಬಿದ ಆಕಾಶವನ್ನು ಗಮನಿಸುತ್ತಾನೆ. ಇದರಿಂದ ಒಂದು ವಿಚಾರ ತಿಳಿದು ಬರುತ್ತದೆ. ಅದೇನೆಂದರೆ ಮನುಷ್ಯನ ಕಣ್ಣಿಗೆ ಕಾಣದ ಹಲವಾರು ವಿಷಯಗಳು ಕತ್ತಲೆ ತುಂಬಿದ ಆಕಾಶದಲ್ಲಿವೆ ಹಾಗೂ ಅದನ್ನು ನೋಡಲು ಉತ್ತಮ ದೂರದರ್ಶಕದ ಅವಶ್ಯಕತೆ ಇದೆ ಎಂದು. ಇದನ್ನೆ ಆಧಾರವಾಗಿಟ್ಟುಕೊಂಡು ಮುಂದೆ ದೂರದರ್ಶಕವನ್ನು ತಯಾರಿ ಮಾಡುವ ತಂತ್ರಜ್ಞಾನದಲ್ಲಿ ಹಲವಾರು ಪ್ರಮುಖ ಬೆಳವಣಿಗೆಗಳು ಆಗುತ್ತವೆ. ಬೆಟ್ಟ ಗುಡ್ಡಗಳ ಮೇಲೆ ದೂರದರ್ಶಕಗಳನ್ನು ಇಟ್ಟು ತಾರೆಗಳನ್ನು, ಗ್ರಹಗಳನ್ನು ಹಾಗೂ ತಾರಾಗುಚ್ಚಗಳನ್ನು ಗಮನಿಸುವ ವಿಧಾನವನ್ನು ಕಂಡುಕೊಳ್ಳುತ್ತಾನೆ. ಆದರೆ ಭೂಮಿಯ ವಾತಾವರಣದಿಂದಾಗಿ ಅಸ್ಪಷ್ಟತೆ ಸಮಸ್ಯೆ ಕಂಡು ಬರುತ್ತದೆ. ಸಮಸ್ಯೆಗೆ ಮುಂದೆ ಒಂದು ಉತ್ತಮ ಪರಿಹಾರ ಸಿಗುತ್ತದೆ. 1923ರಲ್ಲಿ ಜರ್ಮನ್ ವಿಜ್ಞಾನಿ ಹರ್ಮನ್ ಓಬರ್ತ್(Hermann Oberth) ಪ್ರಪ್ರಥಮ ಬಾರಿಗೆ ಬಾಹ್ಯಾಕಾಶದಲ್ಲಿ ದೂರದರ್ಶಕವನ್ನು ಇರಿಸಬಹುದು ಎಂಬ ಸಲಹೆಯನ್ನು ನೀಡುತ್ತಾನೆ. 1969ರಲ್ಲಿ ಬೃಹತ್ ದೂರದರ್ಶಕಗಳನ್ನು ಬಾಹ್ಯಾಕಾಶದತ್ತ ತೇಲಿ ಬಿಡಲು ಅನುಮೋದನೆ ದೊರಕುತ್ತದೆ. ಆದರೆ ದೂರದರ್ಶಕವನ್ನು ತಯಾರಿಸಲು ದೊಡ್ಡ ಪ್ರಮಾಣದ ಅವಧಿಯೇ ಹಿಡಿಯುತ್ತದೆ.

1975ರಲ್ಲಿ ಯೂರೋಪಿಯನ್ ಸ್ಪೇಸ್ ಏಜೆನ್ಸಿ(European Space Agency) ಅಮೇರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ(NASA) ಜೊತೆ ಕೈಜೋಡಿಸಿ ಹೊಸತೊಂದು ಯೋಜನೆಯನ್ನು ಪ್ರಾರಂಭಿಸುತ್ತದೆ. ಅದೇ ಮುಂದೆ ಹಬಲ್ ದೂರದರ್ಶಕವಾಗಿ(Hubble Telescope)ಹೊರಹೊಮ್ಮುತ್ತದೆ. ಯೋಜನೆಗೆ ಬೇಕಾದ ನಿಧಿಯೂ ದೊರೆಯುತ್ತದೆ. ಸ್ಪೇಸ್ ಶಟಲ್ಗಳನ್ನು ಪುನರ್ಬಳಸುವ(Reusable Space Shuttle) ವಿಧಾನ ಯೋಜನೆಯಿಂದ ಹುಟ್ಟಿಕೊಳ್ಳುತ್ತದೆ.

ಬೃಹತ್ ದೂರದರ್ಶಕಕ್ಕೆ ಹಬಲ್ ಎಂದು ಹೆಸರಿಡುವುದರ ಮೂಲಕ ಅಮೇರಿಕದ ಖ್ಯಾತ ಖಗೋಳಶಾಸ್ತ್ರಜ್ಞ ಎಡ್ವಿನ್ ಹಬಲ್ಗೆ ಗೌರವ ಸಲ್ಲಿಸಲಾಗುತ್ತದೆ. ಯಾಕೆ ಹಬಲ್ ಹೆಸರನ್ನು ಇಡಲಾಯಿತೆಂದರೆ, 20ನೇ ಶತಮಾನದಲ್ಲಿ ಹಬಲ್ ಖಗೋಳಶಾಸ್ತ್ರದ ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರಯತ್ನಿಸಿದ್ದಾನೆ. ಆತನ ಬಹು ಮುಖ್ಯ ಆವಿಷ್ಕಾರ 1929ರಲ್ಲಿ ಜಗತ್ತಿಗೆ ಪ್ರಕಟವಾಗುತ್ತದೆ. ಅದೇನೆಂದರೆ ಬ್ರಹ್ಮಾಂಡ ಸ್ಥಿರವಾಗಿಲ್ಲ ಬದಲಾಗಿ ವಿಸ್ತಾರವಾಗುತ್ತಿದೆ ಎಂದು. ಮುಂದೆ ಹೊಸ ಅಧ್ಯಯನ ಬಿಗ್ ಬ್ಯಾಂಗ್ ಸಿದ್ಧಾಂತಕ್ಕೆ ಸಿಕ್ಕ ದೊಡ್ಡ ಆಧಾರವಾಗುತ್ತದೆ. ಅಂತೂ 1975ರಲ್ಲಿ ಪ್ರಾರಂಭವಾದ ಯೋಜನೆ 1990ರಲ್ಲಿ ಯಶಸ್ವಿಯಾಗುತ್ತದೆ. ಜಗತ್ತಿನ ಪ್ರಥಮ ಬಾಹ್ಯಾಕಾಶ ದೂರದರ್ಶಕವನ್ನು (Space Telescope) 1990 ಏಪ್ರಿಲ್ 24ರಂದು ಕಕ್ಷೆಗೆ ತೇಲಿ ಬಿಡಲಾಗುತ್ತದೆ. ಯೋಜನೆಯ ಒಟ್ಟು ವೆಚ್ಚ 1.5 ಬಿಲಿಯನ್ ಡಾಲರ್ಗಳು.

ಹಬಲ್ ದೂರದರ್ಶಕವು ಬಾಹ್ಯಾಕಾಶದತ್ತ, ಭೂಮಿಯ ಕಕ್ಷೆಯ ಸುತ್ತ ತಿರುಗುವುದನ್ನೇನೋ ಪ್ರಾರಂಭಿಸಿತು. ಭೂಮಿಯ ಹಾಗೂ ಬಾಹ್ಯಾಕಾಶದ ಛಾಯಾಚಿತ್ರವನ್ನು ತೆಗೆಯಲು ಪ್ರಾರಂಭಿಸುತ್ತದೆ. ಆದರೆ ಸಂಶೋಧನೆಯ ಮೂಲಕ ಒಂದು ವಿಷಯ ತಿಳಿದು ಬರುತ್ತದೆ. ಅದೇನೆಂದರೆ ಹಬಲ್ ದೂರದರ್ಶಕ ತನ್ನಲ್ಲಿ ಹಲವಾರು ನ್ಯೂನತೆಗಳನ್ನು ಹೊಂದಿರುತ್ತದೆ. ಹಬಲ್ ತೆಗೆದ ಎಲ್ಲಾ ಛಾಯಾಚಿತ್ರಗಳು ಅಸ್ಪಷ್ಟವಾಗಿ ಗೋಚರಿಸುತ್ತದೆ. ಯಾಕೆಂದರೆ ಹಬಲ್ ದೂರದರ್ಶಕದ ಕೆಲ ಕನ್ನಡಿಗಳು ದೋಷಪೂರಿತವಾಗಿತ್ತವೆ. ಮುಖ್ಯ ಕನ್ನಡಿಯಲ್ಲೇ ದೋಷ ಕಂಡು ಬರುತ್ತದೆ. ಇದು ಉತ್ಪಾದನಾ ದೋಷವಾಗಿರುತ್ತದೆ(Manufacturing Defect). ಇದನ್ನು ಸರಿಪಡಿಸುವ ಮಾರ್ಗವನ್ನು ಕಂಡುಕೊಳ್ಳಲು ಮೂರು ವರ್ಷಗಳೇ ಬೇಕಾಯಿತು. ನಾಸಾ(NASA) 1993ನೇ ಇಸವಿ ಡಿಸೆಂಬರ್ 2ನೇ ತಾರೀಖು ಇದರ ದುರಸ್ತಿ ಕಾರ್ಯವನ್ನು ಪ್ರಾರಂಭಿಸುತ್ತದೆ. ಏಳು ಜನ ಸಿಬ್ಬಂದಿಗಳನ್ನು ಒಳಗೊಂಡ ತಂಡವನ್ನು ಹೊತ್ತ ಸ್ಪೇಸ್ ಶಟಲ್ ಎಂಡೀವರ್ ಫೆರೀಡ್(Endeavor Ferried) ದುರಸ್ತಿ ಕಾರ್ಯಕ್ಕಾಗಿ ಹಬಲ್ನತ್ತ ಸಂಚರಿಸುತ್ತದೆ. ದುರಸ್ತಿ ಕಾರ್ಯದ ಮುಖಾಂತರ ಎರಡು ಹೊಸಾ ಅತ್ಯುನ್ನತ ಕೆಮರಾಗಳನ್ನು(Wide-Field Planetary Camera 2(WFPC-2)) ಹಬಲ್ ದೂರದರ್ಶಕಕ್ಕೆ ಅಳವಡಿಸಲಾಗುತ್ತದೆ. ಕ್ಯಾಮೆರಾಗಳ ಮೂಲಕ ಹಬಲ್ ಬಾಹ್ಯಾಕಾಶದ ಹಲವಾರು ಖ್ಯಾತ ಛಾಯಾಚಿತ್ರಗಳನ್ನು ತೆಗೆದಿದೆ.

ಹಬಲ್ ದೂರದರ್ಶಕದ ಕುರಿತಾದ ಕೆಲವು ಸಂಗತಿಗಳು,

1.      ಹಬಲ್ ದೂರದರ್ಶಕ ಇಲ್ಲಿಯವರೆಗೂ ಒಟ್ಟು 1.2 ಮಿಲಿಯನ್ಗಿಂತಲೂ ಹೆಚ್ಚು ಬಾಹ್ಯಾಕಾಶ ವೀಕ್ಷಣೆಯನ್ನು(Space Observation) ಮಾಡಿದೆ.

2.     ಹಬಲ್ ದೂರದರ್ಶಕದ ವೀಕ್ಷಣೆಯನ್ನು ಇಟ್ಟುಕೊಂಡು ಖಗೋಳಶಾಸ್ತ್ರಜ್ಞರು ಇಲ್ಲಿಯವರೆಗೂ 14,000ಕ್ಕೂ ಹೆಚ್ಚು ಅಧ್ಯಯನಗಳನ್ನು ಮಾಡಿದ್ದಾರೆ.

3.     ಹಬಲ್ ಇಲ್ಲಿಯವರೆಗೂ ಯಾವ ನಕ್ಷತ್ರ ಹಾಗೂ ಗ್ರಹಗಳತ್ತ ಪ್ರಯಾಣ ಮಾಡಿಲ್ಲ. ಬದಲಾಗಿ ಭೂಮಿಯ ಸುತ್ತ ಗಂಟೆಗೆ 17,000 ಮೈಲಿಯ ವೇಗದಲ್ಲಿ  ಸುತ್ತುತ್ತಾ ನಕ್ಷತ್ರಗಳ, ಗ್ರಹಗಳ, ತಾರಾಗುಚ್ಚಗಳ ಹಾಗೂ ಹಲವಾರು ಬಾಹ್ಯಾಕಾಶದ  ಸದಸ್ಯರುಗಳ ಛಾಯಾಚಿತ್ರವನ್ನು ತೆಗೆಯುತ್ತದೆ.

4.    ಹಬಲ್ ದೂರದರ್ಶಕದ ತೂಕ 27,000 ಪೌಂಡ್ಗಳು, ಅಂದರೆ 12246.994 ಕೆಜಿ.

5.     ಹಬಲ್ ದೂರದರ್ಶಕವು 13.3 ಮೀಟರ್ ಉದ್ದವಿದೆ ಅಂದರೆ ಒಂದು ದೊಡ್ಡ ಬಸ್ನಷ್ಟು ಉದ್ದವಿದೆ.

6.    ಭೂಮಿಯಿಂದ 340 ಮೈಲಿ ಎತ್ತರದಲ್ಲಿ ಹಬಲ್ ಭೂಮಂಡಲವನ್ನು ಸುತ್ತುತ್ತಿದೆ.

ಹಬಲ್ ದೂರದರ್ಶಕದ ಹಲವಾರು ಆವಿಷ್ಕಾರಗಳಲ್ಲಿ ಬಹು ಮುಖ್ಯವಾಗಿರುವಂತಹ ಆವಿಷ್ಕಾರಗಳೆಂದರೆ, ಹಬಲ್ ಬ್ರಹ್ಮಾಂಡದ ವಯಸ್ಸು 13 ರಿಂದ 14 ಬಿಲಿಯನ್ ವರ್ಷಗಳೆಂದು ಬಹು ನಿಖರವಾದ ಮಾಹಿತಿಯನ್ನು ನೀಡಿದೆ. ಡಾರ್ಕ್ ಎನರ್ಜಿ (Dark Energy) ಆವಿಷ್ಕಾರದಲ್ಲಿ ಹಬಲ್ ಬಹು ಮುಖ್ಯವಾದ ಪಾತ್ರ ವಹುಸಿದೆ. ಹಬಲ್ ತಾರಾಗುಚ್ಚಗಳ(Galaxies) ವಿಕಾಸದ ಪ್ರತಿಯೊಂದು ಹಂತವನ್ನು ವಿಜ್ಞಾನಿಗಳಿಗೆ ತೋರಿಸಿದೆ, ಇದರಿಂದ ತಾರಾಗುಚ್ಚಗಳು ಹೇಗೆ ಹುಟ್ಟುತ್ತವೆ ಎಂಬುದನ್ನು ವಿಜ್ಞಾನಿಗಳು ಊಹಿಸಿದ್ದಾರೆ.

ಹಬಲ್ ಪ್ರತೀ ಸೆಕೆಂಡಿಗೆ 5 ಮೈಲಿ ವೇಗದಲ್ಲಿ, 97 ನಿಮಿಷಗಳಲ್ಲಿ ಭೂಮಿಯ ಸುತ್ತ ಒಂದು ಗಿರಕಿ ಹೊಡೆದು ಮುಗಿಸುತ್ತದೆ. ಹೀಗೆ ಸುತ್ತುವಾಗ ಹಬಲ್ ತನ್ನತ್ತ ಬರುವ ಬೆಳಕನ್ನು ಹಿಡಿದು ತನ್ನಲ್ಲಿರುವ ವಿಶೇಷ ವೈಜ್ಞಾನಿಕ ಉಪಕರಣಗಳತ್ತ ನಿರ್ದೇಶಿಸುತ್ತದೆ. ಹಬಲ್ ದೂರದರ್ಶಕವನ್ನು ಒಂದು ಕ್ಯಾಸಗ್ರೇನ್(Cassegrain) ಪ್ರತಿಫಲಕ ಎಂದು ಕರೆಯಲಾಗುತ್ತದೆ. ಹಬಲ್ನತ್ತ ಬಂದ ಬೆಳಕು ಅದರ ಮುಖ್ಯ(ಪ್ರಾಥಮಿಕ) ಕನ್ನಡಿಯ ಮೇಲೆ ಬಿದ್ದು ಅಲ್ಲಿಂದ ಪುಟಿದು ದ್ವಿತೀಯ ಕನ್ನಡಿಯ ಮೇಲೆ ಚೆಲ್ಲುತ್ತದೆ. ಹೀಗೆ ತನ್ನ ಮೇಲೆ ಹರಡಿದ ಬೆಳಕನ್ನು ದ್ವಿತೀಯ ಕನ್ನಡಿ ಎಲ್ಲಾ ಬೆಳಕನ್ನು ಒಂದು ಕಡೆ ಫೋಕಸ್ ಮಾಡಿ ಪ್ರಾಥಮಿಕ ಕನ್ನಡಿಯ ಮಧ್ಯಭಾಗದಲ್ಲಿ ಇರುವ ಒಂದು ಸಣ್ಣ ರಂಧ್ರದ ಒಳಗೆ ಹಾದು ಹೋಗುವಂತೆ ಮಾಡುತ್ತದೆ. ಹೀಗೆ ರಂಧ್ರದಿಂದ ಹೊರಗೆ ಬರುವ ಬೆಳಕು ವೈಜ್ಞಾನಿಕ  ಉಪಕರಣಗಳತ್ತ ಸಾಗುತ್ತದೆಹಬಲ್ ತನ್ನಲ್ಲಿ ಹಲವಾರು ಅತ್ಯುನ್ನತ ಉಪಕರಣಗಳನ್ನು ಹೊಂದಿದೆ. ಎಲ್ಲಾ ಉಪಕರಣಗಳು ತನ್ನೊಳಗೆ ಬಂದ ಬೆಳಕನ್ನು ಹಿಡಿದು ಹಲವಾರು ವಿಧಗಳಲ್ಲಿ ಪರೀಕ್ಷಿಸುತ್ತವೆ. ಹೀಗೆ  ಪರೀಕ್ಷಿಸಲಾದ ಮಾಹಿತಿಯನ್ನು ಭೂಮಿಯತ್ತ  ಆ್ಯಂಟೆನಾಗಳ ಮೂಲಕ ರವಾನಿಸುತ್ತದೆ. ಮಾಹಿತಿಯನ್ನು(DATA) ಇಂಜಿನಿಯರುಗಳ ತಂಡ ವೈಜ್ಞಾನಿಕ ಸಂಶೋಧನೆಗೆ ಬೇಕಾದಂತೆ ಭಾಷಾಂತರಿಸಿ ಮ್ಯಾಗ್ನೆಟೋ ಆಪ್ಟಿಕಲ್ ಡಿಸ್ಕ್ನಲ್ಲಿ ಸಂಗ್ರಹಿಸಿಡುತ್ತಾರೆ. ಹೀಗೆ ಸಂಗ್ರಹವಾದ ಮಾಹಿತಿಯನ್ನು ಖಗೋಳಶಾಸ್ತ್ರಜ್ಞರು ವಿಶ್ಲೇಷಿಸುತ್ತಾರೆ.

ಹಬಲ್ ಬಾಹ್ಯಾಕಾಶದ ಹಲವಾರು ಅದ್ಭುತಗಳನ್ನು ತನ್ನಲ್ಲಿ ಸೆರೆ ಹಿಡಿದಿದೆ ಹಾಗೂ ಇನ್ನೂ ಹಲವಾರೂ ಅದ್ಭುತವಾದ ಛಾಯಾಚಿತ್ರಗಳನ್ನು ಸೆರೆ ಹಿಡಿಯಲು ಬಾಹ್ಯಾಕಾಶದಲ್ಲಿ ಅಲೆದಾಡುತ್ತಿದೆ. 25 ವರ್ಷಗಳ ತನ್ನ ಪಯಣದಲ್ಲಿ ಹಲವಾರು ಸಂಗತಿಗಳನ್ನು ಅನ್ವೇಷಣೆ ಮಾಡಲು ಸಹಾಯಕಾರಿಯಾಗಿದೆ. ನಮಗಂತೂ ಬಾಹ್ಯಾಕಾಶಕ್ಕೆ ಜಿಗಿದು ತಾರೆಗಳನ್ನು , ಗ್ರಹಗಳನ್ನು, ತಾರಾಗುಚ್ಚಗಳನ್ನು ಹತ್ತಿರದಿಂದ ನೋಡಲು ಸಾಧ್ಯವಾಗದಿದ್ದರೂ ಹಬಲ್ ದೂರದರ್ಶಕ ತೆಗೆದ ಛಾಯಾಚಿತ್ರಗಳನ್ನು ನೋಡಿ ಆನಂದಪಡಬಹುದು. ಜಗತ್ತೆಂದರೆ ಬರೀ ಭೂಮಂಡಲವಷ್ಟೇ ಅಲ್ಲಾ, ಅದಕ್ಕೂ ಮೀರಿದ ದೊಡ್ಡ ಪ್ರಪಂಚಗಳಿವೆ ಎಂದು ನಮಗೆ ಮನವರಿಕೆಯಾಗುತ್ತದೆ. ಹಬಲ್ ದೂರದರ್ಶಕ ಮನುಷ್ಯನ ಪರಿಕಲ್ಪನೆಯ ಒಂದು ಸುಂದರ ಸೃಷ್ಟಿ. ಹಬಲ್ ತೆಗೆದ ಎಲ್ಲಾ ಛಾಯಾಚಿತ್ರಗಳು ಕೆಳಕಂಡ ಲಿಂಕ್ನಲ್ಲಿದೆ. ಒಮ್ಮೆ ಹಬಲ್ ತೆಗೆದ ಛಾಯಾಚಿತ್ರಗಳನ್ನು ನೋಡಿ, ಸೃಷ್ಟಿ ಅದೆಷ್ಟು ಸುಂದರ ಹಾಗೂ ಸೋಜಿಗ ಅನ್ನಿಸುತ್ತದೆ.

Link : http://hubblesite.org/gallery/album

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Madhyasta

ಹೆಸರು ಮಂಜುನಾಥ್ ಮಧ್ಯಸ್ಥ. ಓದಿದ್ದು ವಿಜ್ಞಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಬಹಳ ಆಸಕ್ತಿ. ಬರೆಯೋದು ನೆಚ್ಚಿನ ಹವ್ಯಾಸ. ಭೌತಶಾಸ್ತ್ರ ಹಾಗೂ ಖಗೋಳ ಶಾಸ್ತ್ರ ನನ್ನ ನೆಚ್ಚಿನ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!