ಅಂಕಣ

ಶಬರಿಮಲೈ ಮತ್ತು ಮಹಿಳಾ ಸಮಾನತೆ-3

ಸ್ರೀ ಪುರುಷ ಭೇದ:

ಅಗ್ನಿ ಮತ್ತು ಸೋಮ ತತ್ವಗಳೆರಡರ ಸಮ್ಮಿಲದಿಂದ ಸೃಷ್ಟಿ ನಿರ್ಮಾಣವಾಗ್ತದೆ. ಸೃಷ್ಟಿಯ ಧಾರಣೆ ಮತ್ತು ಪೋಷಣೆಗೂ ಈ ಎರಡು ತತ್ವಗಳ ನಿರಂತರ ಸಾಮಂಜಸ್ಯ ಅಗತ್ಯವಾದದ್ದು. ಸೂರ್ಯನು “ಅಗ್ನಿ”ಯಾದರೆ ಚಂದ್ರನು “ಸೋಮ”. “ಅಗ್ನೀಷೋಮಾತ್ಮಕಮಿದಂ ಜಗತ್”. “ಅಗ್ನಿ ಮತ್ತು ಸೋಮರ ಸಮ್ಮಿಲನವೇ ಜಗತ್ತು” ಎಂದು ವೇದ ಹೇಳುತ್ತದೆ. ವೇದದಲ್ಲಿ ಅಗ್ನಿ ಮತ್ತು ಸೋಮದ ವಿವರಗಳು ಬೇಕಾದಷ್ಟಿವೆ.  ವೇದದ ಒಂದು ಭಾಗವಾದ ಕರ್ಮಕಾಂಡದಲ್ಲಿ, ಶ್ರೌತ ಯಜ್ಞಗಳು ಹಾಗೂ  ಯಾವುದೇ ಸ್ಮೃತಿ ಆಧಾರಿತ ಹೋಮ ಹವನಾದಿಗಳನ್ನು ಮಾಡುವಾಗಲೂ ಮೊದಲು ಅಗ್ನಿ ಮತ್ತು ಸೋಮರಿಬ್ಬರಿಗೂ ಎರಡು ಆಹುತಿಗಳನ್ನು ನೀಡಿಯೇ ಕರ್ಮಾಂಗ ದೇವತೆಗಳಿಗೆ ಆಹುತಿ ನೀಡ್ತೇವೆ. ವಿವಾಹ ಮಂಟಪದಲ್ಲಿ ನಡೆಯುವ ಲಾಜಾಹೋಮವನ್ನು ಗಮನಿಸಿ ನೋಡಿ. ಅಲ್ಲಿ “ಅಗ್ನಿಮುಖ ಪ್ರಯೋಗ” ದಲ್ಲಿ ಅಗ್ನಿಯ ಸ್ಥಾಪನೆ ಆದ ಮೇಲೆ “ಆಘಾರ” ಆಹುತಿ ಮತ್ತು “ಚಕ್ಷುಷೀ” ಆಹುತಿಗಳನ್ನು ಕೊಡ್ತಾರೆ. “ಪ್ರಜಾಪತಿ” ಗೆ ಆಘಾರ, ಅಗ್ನಿ ಮತ್ತು ಸೋಮರಿಗೆ ಚಕ್ಷುಷೀ ಆಹುತಿ. ಕುಂಡದ ಎಡಭಾಗದಲ್ಲಿ ಅಗ್ನಿ ಮತ್ತು ಬಲಭಾಗದಲ್ಲಿ ಸೋಮನಿಗೆ ಆಹುತಿ. ಯಜ್ಞಕ್ಕೆ ಅವೆರಡೂ ಕಣ್ಣುಗಳಿದ್ದ ಹಾಗೆ.

ನಾವೆಲ್ಲ ಉಸಿರಾಟ ಮಾಡುವ ಇಳಾ ಮತ್ತ ಪಿಂಗಳಾ ನಾಡಿಗಳು ಸೂರ್ಯ ಮತ್ತು ಚಂದ್ರರೇ ಆಗಿವೆ. ಅವುಗಳನ್ನೇ ಸೂರ್ಯನಾಡಿ –ಚಂದ್ರ ನಾಡಿ ಅಂತ ಕರೀತಾರೆ.  ಹೀಗೆ ಎಲ್ಲರ ದೇಹದಲ್ಲಿಯೂ ಅಗ್ನಿ-ಸೋಮತತ್ವಗಳೆರಡೂ ಇದ್ದರೂ ಪುರುಷನದೇಹ ಅಗ್ನಿಯ ಆಧಿಕ್ಯವನ್ನು ಹೊಂದಿದೆ. ಅಂತೆಯೇ ಸ್ತ್ರೀ ದೇಹ ಸೋಮ ತತ್ವದ ಹೆಚ್ಚವರಿ ಪ್ರಮಾಣದಿಂದಾಗಿ ಸುಕೋಮಲತೆ, ಸೌಮ್ಯತೆ ಲಾಲಿತ್ಯ ಇತ್ಯಾದಿಗಳಿಂದ ಕೂಡಿರುತ್ತದೆ.

ಪುರುಷನ ದೇಹದಲ್ಲಿ ಅಗ್ನಿಯಾದ ರೇತಸ್ಸು ಸ್ತ್ರೀ ದೇಹದೊಳಗಿನ ಸೋಮತತ್ವವಾದ ಅಂಡಾಣುವಿನೊಂದಿಗೆ ಸೇರಿದಾಗಲೇ ಹೊಸ ಸೃಷ್ಟಿಯಾಗೋದು.  ಈ ಕಾರಣಕ್ಕಾಗಿಯೇ ಗಂಡಸು ಅಗ್ನಿತತ್ವಕ್ಕೆ ಅನುಗುಣವಾದ ಉಪಾಸನಾ ವಿಧಾನಗಳನ್ನುಹೊಂದಿದ್ದಾನೆ. ಸ್ತ್ರೀಗೆ ಸೋಮತತ್ವಕ್ಕೆ ಅನುಗುಣವಾಗಿ ಆ ಸೌಮ್ಯತೆ ನಷ್ಟವಾಗದಂತಹ ವಿಭಿನ್ನ ಉಪಾಸನಾ ವಿಧಾನಗಳಿವೆ. “ಸೌಮ್ಯ” ಎಂಬ ಶಬ್ದದ ಉತ್ಪತ್ತಿಯೇ “ಸೋಮ” ಶಬ್ದದಿಂದಾಗಿದೆ.  “ಹಠಯೋಗ” ಎಂಬ ಶಬ್ದದ ಅರ್ಥವನ್ನು ನೋಡುವುದಾದರೆ “ಹ” ಎಂದರೆ ಸೂರ್ಯ, “ಠ” ಎಂದರೆ “ಚಂದ್ರ”.  ಹಠಯೋಗದ ವಿಧಾನಗಳೆಲ್ಲ ಈ ಅಗ್ನಿ-ಸೋಮಗಳೆರಡರ ಸಮತೋಲನೆ ಉಂಟು ಮಾಡಿ ಈ ಎರಡನ್ನೂ ಒಗ್ಗೂಡಿಸುವ ಸುಷುಮ್ನಾ ನಾಡಿಯನ್ನು active ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ.   ಈ ಸೋಮ ಮತ್ತು ಅಗ್ನಿ ತತ್ವಗಳನ್ನೇ ಆಧುನಿಕ “ಕ್ವಾಂಟಮ್ ಫಿಸಿಕ್ಸ್” ಪರಿಭಾಷೆಯಲ್ಲಿ masculine energy  and feminine energy ಅಂತ ಗುರುತಿಸುತ್ತಾರೆ.  ಅವೆರಡರ ಪ್ರಕೃತಿ ಮತ್ತು ಪರಿಚಲನೆಯಲ್ಲಿ ಅಗಾಧವಾದ ವ್ಯತ್ಯಾಸಗಳಿವೆ.

ಈ ಹಠಯೋಗದಲ್ಲಿ ಸಾಧನೆಗಳನ್ನು ಹೇಳಿಕೊಡುವಾಗ ಸ್ತ್ರೀಯರಿಗೆ ಮತ್ತು ಪುರುಷರಿಗೆ ಬೇರೆ ಬೇರೆ ಸಾಧನೆಗಳನ್ನು ಹೇಳ್ತಾರೆ ಮತ್ತು ಆಹಾರ ಕ್ರಮಗಳನ್ನು ಕೂಡ ವಿಭಿನ್ನವಾಗಿ ಹೇಳ್ತಾರೆ. ಅದು ಅವರ ದೇಹತತ್ವಗಳಿಗೆ ಅನುಗುಣವಾಗಿರ್ತವೆ.ಉದಾಹರಣೆಗೆ- ವೀರಭದ್ರಾಸನ ಮಾಡುವಾಗ ಗಂಡಸರಿಗೆ ಮೊದಲು ಬಲಗಾಲು ಮುಂದಿಡುವ ನಿಯಮವಿದ್ದರೆ, ಹೆಂಗಸರಿಗೆ ಎಡಗಾಲು ಮುಂದಿಡಬೇಕೆಂಬ ನಿಯಮವಿದೆ. ಭೂತಶುದ್ಧಿಯಲ್ಲಿ ಮೃತ್ತಿಕಾ ಪ್ರಾಶನ, ಮತ್ತು ಅಗ್ನಿಯ ಆಘ್ರಾಣ ಗಂಡಸರು ಐದು ಸಾರಿ ಮಾಡ್ತಾರೆ. ಹೆಂಗಸರು ಮೂರು ಬಾರಿ ಮಾತ್ರ.

KI17SABARIMALAS_KI_2623327f

ವೈದಿಕ ಆಚಮನ ವಿಧಾನದಲ್ಲಿ ಗಂಡಸರು “ಕೇಶವಾಯ ಸ್ವಾಹಾ” ಅಂತ ಹೇಳಿ ನೀರು ಕುಡಿದರೆ ಹೆಂಗಸರು “ಸ್ವಾಹಾ” ಶಬ್ದದ ಬದಲಿಗೆ “ನಮಃ” ಶಬ್ದವನ್ನು ಉಚ್ಚರಿಸ್ತಾರೆ. “ಸ್ವಾಹಾ” ಎಂಬ ಶಬ್ದವನ್ನು ಉಚ್ಚರಿಸುವಾಗ ನಾಭಿಸ್ಥಾನದಲ್ಲಿ ಕಂಪನ ಉಂಟಾಗಿ ಅಲ್ಲಿಂದಲೇ ಧ್ವನಿ ಹೊರಡುತ್ತದೆ. ಅದು ಅಗ್ನಿಯ ಸ್ಥಾನವಾಗಿದ್ದು ಪುರುಷನಿಗೆ ತನ್ನ ಅಗ್ನಿತತ್ವದ ಉದ್ದೀಪನೆಗೆ ಅದು ಸಹಕಾರಿ. ಹೆಂಗಸರೂ ಹಾಗೆ ಸ್ವಾಹಾ ಅಂತ ಉಚ್ಚರಿಸುವುದರಿಂದ ಸೋಮಕ್ಕಿಂತ ಅಗ್ನಿಯೇ ಪ್ರಬಲವಾಗಿ ಸೋಮತ್ವ ಕುಂಠಿತವಾಗ್ತದೆ.ಇದು ಮಂತ್ರೋಚ್ಚಾರಣೆಯಲ್ಲಿರುವ ಶಬ್ದ ವಿಜ್ಞಾನ. ಪಾಣಿನಿಯ ವ್ಯಾಕರಣ ಸೂತ್ರಗಳಲ್ಲಿ “ಋಟುರಷಾಣಾಂ ಮೂರ್ಧಾ” “ಅಕುಹವಿಸರ್ಜನೀಯಾನಾಂ ಕಂಠಃ” ಮುಂತಾದ ಸೂತ್ರಗಳ ಮೂಲಕ ಯಾವ ಯಾವ ಅಕ್ಷರ ದೇಹದ ಯಾವ ಯಾವ ಭಾಗದಿಂದ ಕಂಪನಗಳ ಮೂಲಕ ಉತ್ಪನ್ನವಾಗ್ತದೆ ಅನ್ನುವುದನ್ನು ತಿಳಿಯಬಹುದು.

ಹೆಂಗಸರಿಗೆ “ಸ್ವಾಹಾ” ಎಂಬ ಪದದ ಉಚ್ಚಾರಣೆಯ ನಿಷೇಧ ಮಾತ್ರವಲ್ಲ,  ದೇವರ ತೀರ್ಥ ಪಡೆಯುವಾಗಲೂ ಗಂಡಸರಿಗೆ ಮೂರು ಬಾರಿ ಮತ್ತು ಹೆಂಗಸರಿಗೆ ಒಂದೇ ಬಾರಿ ತೀರ್ಥ ಕೊಡ್ತಾರೆ. ( ಈ ಪದ್ಧತಿ ನಗರಗಳಲ್ಲಿ ಉಳಿದಿಲ್ಲ)

Lunch-@-odaipatti-e-640x360

ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವಾಗ ಗಂಡಸು ಎಂಟು ಅಂಗಗಳ ಮೂಲಕ ದೀರ್ಘದಂಡ ನಮಸ್ಕಾರ ಮಾಡ್ತಾನೆ. ಆದರೆ ಸ್ತ್ರೀ ಹೀಗೆ ಮಾಡುವಂತಿಲ್ಲ. ಮೊಳಕಾಲೂರಿ ಮಾರ್ಜಾಲಾಸನದಲ್ಲಿ ಕುಳಿತು ನಮಸ್ಕರಿಸುವ ವಿಧಾನ ಸ್ತ್ರೀಯರಿಗೆ ವಿಹಿತ. ಚಾಪೆ ಇಲ್ಲದೇ ನೆಲದ ಮೇಲೆ ಕುಳಿತರೆ ಮೂಲಾಧಾರ ಕೆಳಮುಖವಾಗಿ ಸೆಳೆತಕ್ಕೊಳಗಾಗುವ ಸಂಭವ ಇರುವುದರಿಂದ ಚಾಪೆಯಿಲ್ಲದೇ ನೆಲದ ಮೇಲೆ ಕೂರಲೇಬಾರದೆಂಬ ನಿಯಮ ಗಂಡಸಿಗಿದೆ. ಹಾಗೆಯೇ ಸ್ತ್ರೀ ತನ್ನ ಎದೆಭಾಗವನ್ನು ನೆಲಕ್ಕೆತಾಕಿಸಬಾರದೆಂಬ ನಿಯಮವಿದೆ. ಆ ಕಾರಣಕ್ಕಾಗಿಯೇ ಸ್ತ್ರೀಯರಿಗೆ ಸಾಷ್ಟಾಂಗ ನಮಸ್ಕಾರ ನಿಷಿದ್ಧ. (ಯೋಗಿನೀ ಪರಂಪರೆಯಲ್ಲಿ ಹೆಂಗಸರೂ ಕೂಡ ಸಾಷ್ಟಾಂಗ ನಮಸ್ಕಾರ ಮಾಡ್ತಾರೆ. ಆದರೆ ಯೋಗಿನಿಯರು ಗೃಹಸ್ಥ ಜೀವನವನ್ನು ತ್ಯಜಿಸಿರುತ್ತಾರಾದ್ದರಿಂದ ಪ್ರಜೋತ್ಪತ್ತಿಯ ಅಗತ್ಯ ಉಳಿದಿರುವುದಿಲ್ಲ)   ಈ ಕಾರಣಕ್ಕಾಗಿಯೇ ಮದುವೆಯಾದ ಮತ್ತು ಮದುವೆಯಾಗದ ಸ್ತ್ರೀಯರಿಗೆ ನೆಲದ ಮೇಲೆ ಮಲಗುವುದು ನಿಷಿದ್ಧ. ಬ್ರಹ್ಮಚಾರಿ, ವಾನಪ್ರಸ್ಥಿ ಮತ್ತು ಸನ್ಯಾಸಿ ಗಂಡಸರಿಗೆ ನೆಲದ ಮೇಲೆಯೇ ಚಾಪೆ ಹಾಸಿಕೊಂಡು ಮಲಗಬೇಕೆಂಬ ನಿಯಮವಿದೆ. ಆದರೆ ಮದುವೆಯಾದ ಗೃಹಸ್ಥನ ಜೊತೆ ಸ್ತ್ರೀ ಕೂಡ ಇರುವುದರಿಂದ ಗೃಹಸ್ಥನ ಮನೆಯಲ್ಲಿ ಮಂಚ ಕಡ್ಡಾಯ. ಆ ಸ್ತ್ರೀಗೆ ಕೂಡ ಪತಿವಿಯೋಗದ ಮೂಲಕ ಗೃಹಸ್ಥ ಧರ್ಮ ಹಾಗೂ ಸಂತಾನೋತ್ಪತ್ತಿಯ ಅಗತ್ಯ ಮುಗಿದು ಹೋಗುವುದರಿಂದ ವಿಧವೆಯರಿಗೆ ಚಾಪೆಯ ಮೇಲೆ ಮಲಗುವ ವಿಧಾನ ವಿಹಿತ.   ಹೀಗೆ ವಿವಿಧ ಹಂತಗಳಲ್ಲಿ ಸಂದರ್ಭಾನುಸಾರವಾಗಿ ಗಂಡಸು ಮತ್ತು ಹೆಂಗಸಿಗೆ  ದೇಹದ ಲಿಂಗ, ವಯಸ್ಸು ಮತ್ತು ಗೃಹಸ್ಥ ಜೀವನ-ವಿರಕ್ತ ಜೀವನ,  ಸಾಮಾಜಿಕ ಸ್ಥಿತಿಗತಿ, ವೃತ್ತಿ ಇತ್ಯಾದಿಗಳಿಗೆ ಅನುಗುಣವಾಗಿ ವಿಧಿ-ನಿಷೇಧಗಳಲ್ಲಿ ವ್ಯತ್ಯಾಸ ಅತ್ಯಂತ ಸಹಜ.

ಶಬರಿಮಲೈ ಮುಂತಾದ ಮಾಲಾಧಾರಣೆಯ ದೀಕ್ಷೆಗಳು

walk-e-640x360

ಮಹಿಳೆಯರ ಪ್ರವೇಶ ನಿಷೇಧದ ಪ್ರಕರಣದಲ್ಲಿ ಮುಖ್ಯವಾಹಿನಿಯಲ್ಲಿ ಶಬರಿಮಲೈ ಬಂದಿರುವುದರಿಂದ ಅದರ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ. ಆದರೆ ಇದೊಂದು ದೇವಸ್ಥಾನ ಮಾತ್ರವಲ್ಲದೇ  ಅನೇಕ ದೇವಸ್ಥಾನಗಳಲ್ಲಿ ಈ ರೀತಿಯ ವ್ರತ ನಿಯಮಗಳು ಇವೆ. ಗಜರಾತಿನ ಗಿರ್ನಾರ್’ಗೆ ದತ್ತಾತ್ರೇಯ ಸಂಪ್ರದಾಯದವರು ೪೮ ದಿನಗಳ ದೀಕ್ಷೆ ಪಡೆದು ಪಾದ ಯಾತ್ರೆಗೆ ಹೋಗ್ತಾರೆ. ಮಹಾರಾಷ್ಟ್ರದ ತುಳಜಾ ಭವಾನಿಗೆ ತೆಲುಗು ರಾಜ್ಯಗಳಿಂದಲೂ ಪಾದಯಾತ್ರೆಗೆ ಹೋಗ್ತಾರೆ. ಪಂಢರಪುರದಲ್ಲಿ “ವಾರಕರಿ” ಸಂಪ್ರದಾಯದವರು ೪೮ ದಿನಗಳ ವ್ರತ ಪಾಲಿಸಿ  ಪ್ರತಿ ವರ್ಷ ನಡೆದು ಹೋಗ್ತಾರೆ. ರಾಮದಾಸಿ ಪರಂಪರೆಯವರು ದಾರಿಯಲ್ಲಿ ಭಾಗವತ ರಾಮಾಯಣ ಹಾಡುತ್ತಾ ೪೮ ದಿನಗಳ ವ್ರತ ನಿಯಮದ ಪಾದಯಾತ್ರೆ ಮಾಡ್ತಾರೆ. ಆಂಧ್ರದಲ್ಲಿ “ಮಾಲೆ ಹಾಕುವುದು” ಅನೇಕ ಪುಣ್ಯ ಕ್ಷೇತ್ರಗಳಲ್ಲಿ ಕಂಡು ಬರುತ್ತದೆ. ತಮಿಳುನಾಡಿನಲ್ಲಿ  “ಶಿವಾಂಗ” ದೀಕ್ಷೆ ಪಡೆದು ೪೮ ದಿನಗಳ ವ್ರತ ಪಾಲಿಸಿ ಕೊಯಮತ್ತೂರಿನ ಬಳಿ ವೆಳ್ಳಿಯಂಗಿರಿ  ಬೆಟ್ಟಕ್ಕೆ ಹೋಗ್ತಾರೆ.  ಹೀಗೆ ಮಾಲೆ ಹಾಕುವುದು ಅಂದರೆ ದೀಕ್ಷೆ ಪಡೆಯುವುದು ಅಂತಲೇ ಅರ್ಥ. ಹಾಗೆ ದೀಕ್ಷೆಯಲ್ಲಿರುವವರು  “ಒಂದು ಮಂಡಲ” ಅಂದರೆ ೪೮ ದಿನಗಳು ಕಾಲಿಗೆ ಚಪ್ಪಲಿ ಹಾಕುವುದಿಲ್ಲ. ತಂಬಾಕು, ಮದ್ಯ ಮುಂತಾದ ಮತ್ತು ಪದಾರ್ಥಗಳನ್ನು ಸೇವಿಸುವುದಿಲ್ಲ. ಸಸ್ಯಾಹಾರ ಸೇವನೆ ಕಡ್ಡಾಯ. ಆ ಸಸ್ಯಾಹಾರದಲ್ಲಿಯೂ ಕೆಲ ಪದಾರ್ಥಗಳು ವರ್ಜ್ಯ. ದಿನಕ್ಕೆ ಎರಡು ಹೊತ್ತು ಸ್ನಾನ. ಮುಂಜಾನೆ ಸೂರ್ಯೋದಯಕ್ಕೆ ಮುಂಚೆಯೇ ಸ್ನಾನ. ಸಂಜೆ ಕೂಡ ಮತ್ತೊಮ್ಮೆ ಸ್ನಾನ. ಪೂರ್ಣ ಬ್ರಹ್ಮಚರ್ಯ. ದಿನಕ್ಕೆರಡು ಬಾರಿ  ಭಜನೆ ಮುಂತಾದ ನಿಯಮಗಳನ್ನು ಪಾಲಿಸ್ತಾರೆ. ಈ ರೀತಿ ವರ್ಷಕ್ಕೊಮ್ಮೆ ಒಂದು ಮಂಡಲದಷ್ಟು ಸಮಯ ಅವರು ತಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಮೀಸಲಿಡ್ತಾರೆ. ಯಾಕೆಂದರೆ  ವರ್ಷ ಪೂರ್ತಿ ತಮ್ಮ ಕೃಷಿ, ಪಶುಪಾಲನೆ ಮುಂತಾದ ವೃತ್ತಿಗಳಲ್ಲಿ ಅವರಿಗೆ ಪ್ರತಿನಿತ್ಯ ದೇವರ ಭಜನೆ ಮಾಡುವಷ್ಟು ಸಮಯವೂ ಇರುವುದಿಲ್ಲ. ಬ್ರಾಹ್ಮಣ ಮತ್ತು  ಕ್ಷತ್ರಿಯ ವರ್ಣಗಳಲ್ಲಿ ಪ್ರತಿ ನಿತ್ಯ ಸಂಧ್ಯಾವಂದನೆ, ಅಗ್ನಿಯ ಉಪಾಸನೆ, ನಿತ್ಯ ಪೂಜೆ, ಬ್ರಹ್ಮಯಜ್ಞ, ಅತಿಥಿ ಸತ್ಕಾರ, ಯೋಗ ಮುಂತಾದ ಆಧ್ಯಾತ್ಮಿಕ ಸಾಧನೆಗಳು ಕಡ್ಡಾಯವಾಗಿವೆ. ವರ್ಷ ಪೂರ್ತಿ  ಮದ್ಯ ಮಾಂಸಾದಿಗಳಿಂದಲೂ ದೂರ ಇರುವುದು ಅವರಿಗೆ ಕಡ್ಡಾಯ.

ವ್ಯಾಪಾರ ನಿಮಿತ್ತ  ಪ್ರಯಾಣ ಮಾಡುವ  ವೈಶ್ಯರು, ಇತರೆ ಅನೇಕ ವೃತ್ತಿಗಳಲ್ಲಿ ನಿರತರಾಗಿರುವ ಶೂದ್ರರು ಇವರಿಗೆಲ್ಲ ತಮ್ಮ ವೃತ್ತಿಗೆ ಸಂಬಂಧಿಸಿದಂತೆ ವ್ಯಸ್ತತೆಯಿಂದಾಗಿ ವರ್ಷಪೂರ್ತಿ ಒಂದು ಆಧ್ಯಾತ್ಮಿಕ ಸಾಧನೆಗಳನ್ನು ಮಾಡುವುದು ಅಸಾಧ್ಯವಾಗ್ತದೆ. ಆಹಾರ ನಿಯಮಗಳೂ ಅವರ ವೃತ್ತಿಗೆ ಹೊಂದುವುದಿಲ್ಲ.  ಆ ಕಾರಣಕ್ಕಾಗಿ ವರ್ಷಕ್ಕೊಮ್ಮೆ ಒಂದು ಮಂಡಲದಷ್ಟು ಸಮಯವನ್ನು ಈ ರೀತಿಯಾಗಿ ತೀವ್ರವಾದ ಆಹಾರ ನಿಯಮ, ತಪಸ್ಸು, ಭಜನೆ ಪಾದಯಾತ್ರೆ ಮುಂತಾದವುಗಳಿಂದ transcendಆಗುವ ಅವಕಾಶ ಆಗ್ತದೆ.  ವ್ಯಾವಹಾರಿಕ ಮತ್ತು ಪಾರಮಾರ್ಥಿಕ ಇವೆರಡಕ್ಕೂ ಜೀವನದಲ್ಲಿ ಸಮಾನ ಮಹತ್ವ ಸಿಕ್ಕಂತಾಗುತ್ತದೆ. ಪಾರಮಾರ್ಥಿಕ ಸಾಧನೆ ಕೇವಲ ಬ್ರಾಹ್ಮಣನಿಗೆ ಮಾತ್ರ ಸೀಮಿತವಲ್ಲ. ಅದು ಎಲ್ಲರಿಗೂ ತಲುಪಬೇಕು ಮತ್ತು ಎಲ್ಲರಿಗೂ ಅದರ ಅಗತ್ಯವಿರುತ್ತದೆ. ಆದರೆ ವೃತ್ತಿ,  ವಯಸ್ಸು, ಅರ್ಹತೆ ಮತ್ತು ಜೀವನದ  ಪರಿಸ್ಥಿತಿಗಳಿಗೆ ಅನುಗುಣವಾಗಿ  ಸಾಧನಾ ಕ್ರಮಗಳಲ್ಲಿ ವ್ಯತ್ಯಾಸವಾಗ್ತದೆ.

ಅಯ್ಯಪ್ಪ ಸ್ವತಃ ಕಾಡಿನಲ್ಲಿ ತಪಸ್ಸಿನ ಭಂಗಿಯಲ್ಲಿ ಕುಳಿತಿದ್ದಾನೆ. ಅಯ್ಯಪ್ಪ ಸ್ತೋತ್ರಗಳನ್ನು ನೀವು ಗಮನಿಸಿದರೆ ಅದರಲ್ಲಿ ವೈರಾಗ್ಯ, ಬ್ರಹ್ಮಜ್ಞಾನ ಮುಂತಾದವುಗಳ ವಿವರಗಳು ಕಂಡು ಬರುತ್ತವೆ. ಅಲ್ಲಿನ ಹದಿನೆಂಟು ಮೆಟ್ಟಿಲುಗಳು ಅವುಗಳ ಹಿಂದಿನ ಉದ್ದೇಶ ಇವೆಲ್ಲವೂ “ನಿವೃತ್ತಿಮಾರ್ಗ”ವನ್ನು ಸೂಚಿಸ್ತವೆ. ಮಾಲೆಯ ಧಾರಣೆ ಆ ನಿವೃತ್ತಿ ಮಾರ್ಗದ ಅನುಸಂಧಾನ ಮಾಡಿಕೊಳ್ಳಲಿಕ್ಕೆ. ಮೈಮೇಲಿನ ಕಪ್ಪು ಬಟ್ಟೆ ಆತನಿಗೆ ತನ್ನ ದೀಕ್ಷೆಯನ್ನು ಪದೇ ಪದೇ ನೆನಪಿಸಿ ನಿವೃತ್ತಿಯ ಚಿಂತನೆಯಿಂದ ಹೊರಬಾರದಂತೆ ತಡೆಯುತ್ತದೆ. ಎರಡು ಬಾರಿ ಸ್ನಾನ, ಒಂದೇ ಹೊತ್ತಿನ ಊಟ ಇತ್ಯಾದಿ ನಿಯಮಗಳು ದೈಹಿಕವಾಗಿ ಆ ನಿವೃತ್ತಿಯ ಚಿಂತನೆಗೆ, ಪವಿತ್ರ ಭಾವಕ್ಕೆ ಸಹಕಾರಿಯಾಗ್ತವೆ. “ವೀರ್ಯನಾಶಾತ್ ಬುದ್ಧಿ ನಾಶಃ” ವೀರ್ಯನಾಶದಿಂದ ಬುದ್ಧಿಯ ಸ್ಥಿರತೆಯ ನಾಶವಾಗ್ತದೆ. ಮಾಲಾಧಾರಣೆ ದೀಕ್ಷೆಯ ಮಂಡಲ ಮುಗಿಯುವ ವರೆಗೂ ಪಾಲಿಸುವ ಬ್ರಹ್ಮಚರ್ಯ ಆ ವ್ಯಕ್ತಿಯ ಬುದ್ಧಿಯ ಸ್ಥಿರತೆಗೆ ಮತ್ತು ಕುಂಡಲಿನಿಯ ಜಾಗೃತಿಯಾಗಲಿಕ್ಕೆ ಸಹಕಾರಿಯಾಗ್ತದೆ.

ಪ್ರತಿನಿತ್ಯ ಮನೆಯ ದೇವರ ಪೂಜೆ, ಮಡಿ ಮೈಲಿಗೆ ಇತ್ಯಾದಿ ಶೌಚ ನಿಯಮಗಳ ಪಾಲನೆ ಮಾಡುವವರು, ವೇದಾಧ್ಯಯನ, ಯೋಗ, ಧ್ಯಾನ.. ವೇದಾಂತ ಅಧ್ಯಯನ ಮುಂತಾದವುಗಳನ್ನು ಪ್ರತಿನಿತ್ಯ ಮಾಡುವವರು ಯಾರಾದರೂ ಶಬರಿ ಮಲೈ ಅಥವಾ ಬೇರೆ ಯಾವುದೇ ಮಾಲೆ ಹಾಕಿದ್ದನ್ನು ಯಾರಾದರೂ ನೋಡಿದ್ದೀರಾ..?ಅದು ಬೇರೆಯದೇ ಆದ ರೀತಿಯ ಜೀವನ ಶೈಲಿ ಹೊಂದಿದ ಜನರಿಗಾಗಿ. ವರ್ಷಪೂರ್ತಿ ಆಧ್ಯಾತ್ಮರಹಿತ ಜೀವನಶೈಲಿ ಉಳ್ಳವರು ಕನಿಷ್ಠ ವರ್ಷಕ್ಕೊಮ್ಮೆ ತೀವ್ರವಾದ ತಪಸ್ಸಿನಲ್ಲಿ ಪಾಲ್ಗೊಳ್ತಾರೆ.

IMG_20160829_151139 IMG_20160905_214908 IMG_20160905_214958 IMG_20160905_215100

ಹಾಗಾದರೆ ಸ್ತ್ರೀಯರಿಗೆ ಯಾಕೆ ಈ ಎಲ್ಲ ಕ್ಷೇತ್ರಗಳಲ್ಲಿ ಮಾಲಾ ದೀಕ್ಷೆ ಇಲ್ಲ. ? (ಕೆಲವೆಡೆ ಸ್ತ್ರೀಯರಿಗೆ 21 ದಿನಗಳ ದೀಕ್ಷೆ ಇದೆ)  ಸ್ತ್ರೀಯರಿಗೆ ತಪಸ್ಸಿನ ಅಗತ್ಯ ಇಲ್ಲವೇ..? ಕೇವಲ ಋತುಮರಿಯರಾಗದ ಬಾಲಕಿಯರು ಮತ್ತು ವಯೋಸಹಜವಾಗಿ  ಮುಟ್ಟು ನಿಂತವರಿಗೆ ಮಾತ್ರ ಪ್ರವೇಶ ಯಾಕೆ..? ಋತುಮತಿಯರಾದ ಸ್ತ್ರೀಯರು ಪ್ರವೇಶಿಸುವುದು ಅಪವಿತ್ರ ಹೇಗಾಗ್ತದೆ …?   ಇತ್ಯಾದಿ ಪ್ರಶ್ನೆಗಳು ಏಳ್ತವೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನಾವು ಸ್ವಧರ್ಮ ಮತ್ತು ಪರಧರ್ಮದ ಬಗೆಗಿನ ವಿವೇಕವನ್ನು ಪಡೆಯಬೇಕಾಗ್ತದೆ.

ಸ್ತ್ರೀ ಧರ್ಮವೇ ಬೇರೆ .. ಪುರುಷ ಧರ್ಮವೇ ಬೇರೆ. ಬಾಲಕಿಯ ಧರ್ಮವೇ ಬೇರೆ.. ವೃದ್ಧ ಸ್ತ್ರೀ ಧರ್ಮವೇ ಬೇರೆ. ಅದೇ ರೀತಿ ವಿವಾಹಿತೆಯಾದ ಸ್ತ್ರೀ ಧರ್ಮವೇ ಭೇರೆ ವಿಧವಾ ಧರ್ಮವೇ ಬೇರೆ.   ಈ ಧರ್ಮಭೇದವನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.

–      ಮುಂದುವರೆಯುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Dattaraj D

ದತ್ತರಾಜ್ ಹುಟ್ಟಿದ್ದು 1986, ಧಾರವಾಡ ಜಿಲ್ಲೆಯ ಕುಗ್ರಾಮವೊಂದರಲ್ಲಿ. ಬೆಳೆದದ್ದು ಆಂಧ್ರಪ್ರದೇಶ ತಮಿಳು ನಾಡು ಮಹಾರಾಷ್ಟ್ರ ಮುಂತಾದೆಡೆ. ಶಾಲಾ ಕಾಲೇಜುಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಿಲ್ಲ. ಮೌಖಿಕ ಗುರುಶಿಷ್ಯ ಪರಂಪರೆಯಲ್ಲಿ ಋಗ್ವೇದವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದಾರೆ. ಬೀದರ್ ಜಿಲ್ಲೆಯ ಕೇಂದ್ರ ಸರ್ಕಾರದ ಅನುದಾನಿತ ಗುರುಕುಲದಲ್ಲಿ ಋಗ್ವೇದ ಅದ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಉದ್ಯೋಗ ತ್ಯಜಿಸಿ ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಗೆಳೆಯರ ಜೊತೆ ಸೇರಿ ಕಟ್ಟಡ ನಿರ್ಮಾಣ ಸಂಸ್ಥೆ ನಡೆಸುತ್ತಾರೆ. ಕನ್ನಡ, ತೆಲುಗು, ಹಿಂದೀ ಮತ್ತು ಸಂಸ್ಕೃತ ಭಾಷೆಗಳಲ್ಲಿ ಬರವಣಿಗೆ ಮಾಡುತ್ತಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!