Featured ಅಂಕಣ

ಲೆಟ್ಸ್ ಫೇಸ್ ಇಟ್ ಎಂದವರು ಎಸ್ಕೇಪ್ ಆಗಿದ್ದೇಕೆ?

ಮೈಸೂರಿನ ಸಂಸದರ ಮೇಲೆ ಬರೀ ಮೈಸೂರಿನ ಜನರಿಗಷ್ಟೆ ಅಲ್ಲ, ಇಡೀ ರಾಜ್ಯದ ಜನಕ್ಕೆ ಬಹಳಾ ಭರವಸೆಯಿತ್ತು. ಕುಲಗೆಟ್ಟಿರುವ ರಾಜಕೀಯ ವ್ಯವಸ್ಥೆಯಲ್ಲಿ, ಬರವಣಿಗೆಯ ಮೂಲಕ ಜನರ ಮನಗೆದ್ದ ಒಬ್ಬ ಯುವಕ, ಮೋದಿಯಂತಹಾ ನಾಯಕ ಪ್ರಧಾನಿಯಾಗುತ್ತಿರುವ ಸಂದರ್ಭದಲ್ಲಿ ಚುನಾವಣೆಗೆ ನಿಂತಿದ್ದು ರಾಜ್ಯದ ಜನರ ಸಂತಸಕ್ಕೆ ಕಾರಣವಾಗಿತ್ತು. ಸ್ವಂತ ಪ್ರಭಾವವೋ, ಇಲ್ಲಾ ಮೋದಿಯ ನಾಮಬಲವೋ ಇಲ್ಲಾ ಮತ್ತೊಂದೋ, ಅಂತೂ ಗೆದ್ದಿದ್ದಾಯ್ತು. ಆದರೆ ಗೆದ್ದ ಬಳಿಕ ಮಾಡಿದ್ದೇನು? ಎಲ್ಲಾ ಸಂಸದರು ಮಾಡುವಂತೆ ಒಂದಷ್ಟು ಅಭಿವೃದ್ಧಿ ಕಾರ್ಯಗಳನ್ನು ಬಿಟ್ಟರೆ ಉಳಿದಂತೆ ರಾಜಕಾರಣದಲ್ಲಿ ಹೊಸದೇನನ್ನೂ ಮಾಡಿಲ್ಲ. ಎರಡು ವರ್ಷಗಳಲ್ಲಿ ಏನು ಮಾಡಿದ್ದಾರೆ ಎನ್ನುವುದಕ್ಕಿಂತಲೂ, ಏನೆಲ್ಲಾ ಎಡವಟ್ಟುಗಳನ್ನು ಮಾಡಿಕೊಂಡಿದ್ದಾರೆ ಎನ್ನುವುದು ತೀರಾ ಸದ್ದು ಮಾಡಿದೆ. ರಾಜಕಾರಣದಲ್ಲಿ ಹೊಸತನವನ್ನು ತರುತ್ತಾರೆ ಎಂದು ನಾವು ನಿರೀಕ್ಷಿಸಿದ್ದರೆ ಈ ಜನ ಮಾಡಿದ್ದು ಉಳಿದ ರಾಜಕಾರಣಿಗಳಂತೆ ಬಕೆಟ್ ರಾಜಕಾರಣ, ಚಮಚಾಗಿರಿ ಮತ್ತು ಸಂದಿಗ್ಧ ಸ್ಥಿತಿಯಲ್ಲಿ ಜವಾಬ್ದಾರಿ ಮರೆತು ಮೆರೆದ ಲಜ್ಜೆಗೇಡಿತನ.

ಸಂಸದರ ಲೇಟೆಸ್ಟ್ ಎಡವಟ್ಟುಗಳ ಕುರಿತು ಮಾತನಾಡೋಣ. ಮೊನ್ನೆ ( ಸೆಪ್ಟೆಂಬರ್ ೨೧) ಮಾನ್ಯ ಸಂಸದರು ಒಂದು ಜವಾಬ್ದಾರಿಯುತ ಸ್ಟೇಟಸ್ ಹಾಕಿದ್ದರು. ಅದು ಹೀಗಿತ್ತು : “Guys, I will come on TV9, ETV and Public TV between 7 and 9pm today and you all must sympathise me at least  for being available and taking your criticism”. ಸಂಸದರು, ಜನ ರೊಚ್ಚಿಗೇಳುತ್ತಿರುವ ಸಂದರ್ಭದಲ್ಲಿ ಇಷ್ಟೊಂದು ನಯವಾಗಿ ಜನರನ್ನು ಕೇಳಿಕೊಂಡಿದ್ದನ್ನು  ನೋಡಿ ಮನಸ್ಸು ಮೂಕವಾಯಿತು.

14390824_1180755885318103_5494139487209160446_n

ಇವರು ಟಿವಿಯಲ್ಲಿ ಬರುತ್ತಾರಂತೆ, ಕನಿಷ್ಟ, ಜನರಿಗೆ ಟಿವಿಯಲ್ಲಿ ಅವೈಲೇಬಲ್ ಇರುವ ಕಾರಣಕ್ಕೆ ಮತ್ತು ಜನರ ಟೀಕೆಗಳನ್ನು ಎದುರಿಸುವುದಕ್ಕೆ ಜನ ಸಿಂಪತಿ ತೋರಿಸ್ಬೇಕಂತೆ. ವಾಟ್ ದ ಹೆಲ್.. ಒಬ್ಬ ಜವಾಬ್ದಾರಿಯುತ ಸಂಸದನಾಗಿ ಆಡಬೇಕಾದ ಮಾತಾ ಇದು? ಸಾರ್ಥಕವಾಯ್ತು ಮೈಸೂರಿನ ಜನ ಇವರ ಮೇಲೆ ಭರವಸೆಯಿಟ್ಟು ಲೋಕಸಭೆಗೆ ಕಳುಸಿದ್ದಕ್ಕೆ.

ಅಲ್ಲಾ ಸ್ವಾಮೀ… ಊರಿಗೆ ಊರೇ ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿ ಜನರ ಜೊತೆಗಿರುವುದು ಒಬ್ಬ ಜನಪ್ರತಿನಿಧಿಯ ಆದ್ಯ ಕರ್ತವ್ಯ.  ಈ ಕರ್ತವ್ಯದಿಂದ ಯಾವ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು ಮತ್ತು ಒಬ್ಬ ನಾಯಕನಾದವನು ಯಾವತ್ತೂ ಜನರಿಂದ ಟೀಕೆಗಳನ್ನು ಎದುರಿಸಲು ಸಿದ್ಧನಾಗಿರಬೇಕು. ಆದರೆ ಅವರಡೇ ಅವನ ಅಲ್ಟಿಮೇಟ್ ಕೆಲಸಗಳಲ್ಲ. ಆ ಕಾರಣಕ್ಕಾಗಿ ಜನ ಆತನ ಮೇಲೆ ಸಿಂಪತಿ ತೋರಿಸಬೇಕಾದ ಅಗತ್ಯವೂ ಇಲ್ಲ. ಜನ ಮನೆ ಮಠ ಬಿಟ್ಟು  ಬೀದಿಗಿಳಿದಿರಬೇಕಾದರೆ ಟಿವಿಯಲ್ಲಿ ಬರುವುದು ಯಾವ ಸಾಧನೆಯೂ ಅಲ್ಲ ಮತ್ತು ಅದರಿಂದ ಜನರ ಹೋರಾಟವನ್ನು ಬೆಂಬಲಿಸಿದಂತೆಯೂ ಆಗುವುದಿಲ್ಲ.

“Atleast for being available” ಅಂತ ಹೇಳಿದ್ದಾರಲ್ಲ ಯಾವ ಅರ್ಥದಲ್ಲಿ ಅಂತ? ಬಿಜೆಪಿಯ ಇತರ ಯಾವ ಎಂಪಿಗಳೂ ಕಾವೇರಿಯ ವಿಷಯದಲ್ಲಿ ಮಾತನಾಡುತ್ತಿಲ್ಲ, ನಾನು ಮಾತ್ರ ಮಾತನಾಡುತ್ತಿದ್ದೇನೆ ಅಂತಾನಾ? ಇಲ್ಲಾ ಇಷ್ಟು ದಿನ ನನಗೆ ಟೈಮ್ ಇರಲಿಲ್ಲ, ಕೇರಳದಲ್ಲಿ ಹೆಚ್ಚುತ್ತಿರುವ ಕಮ್ಯುನಿಸಮ್ ವಿರುದ್ಧವಾಗಿ ಮೊಂಬತ್ತಿ ಬೆಳಗುವುದರಲ್ಲಿ ಬ್ಯುಸಿ ಇದ್ದೆ,  ಈಗ ಇಷ್ಟೆಲ್ಲಾ ಆದ ಬಳಿಕ ನಾನು ಅವೈಲೇಬಲ್ ಇದ್ದೇನೆ ಅಂತಾನಾ? ಬೇಕು ಬೇಕಾದ ಹಾಗೆ ಅವೈಲೇಬಲ್ ಆಂತ ಹೇಳಲು ಇದೇನು ವಾಟ್ಯಾಪ್ ಸ್ಟೇಟಸ್ಸಾ ಸ್ವಾಮಿ? ಜನರ ಸಮಸ್ಯೆಗಳಿಗೆ ಸಮರ್ಥವಾಗಿ ಸ್ಪಂದಿಸದೆ  ಟಿವಿಯಲ್ಲಿ ಬರೋದಕ್ಕಾ ಕಳೆದ ವರ್ಷ ಸಂಬಳ ಹೆಚ್ಚು ಮಾಡಿ ಅಂತ ಗೊಳೋ ಅತ್ತಿದ್ದು??

ಕೆಲವರು ಸಿಂಹರ ಈ  ನಡೆಯನ್ನು ಸಮರ್ಥಿಸಿಕೊಳ್ಳುವುದಕ್ಕೆ ಮಾಜಿ ಸಂಸದ  ವಿಶ್ವನಾಥ್ ನೀಡಿದ ಹೇಳಿಕೆಯನ್ನು ಕಾರಣವನ್ನಾಗಿ ನೀಡಿದರು. ‘ಕಾವೇರಿಯ ವಿಷಯದಲ್ಲಿ ಮೈಸೂರಿನ ಸಂಸದರು ಅವೈಲೇಬಲ್ ಇಲ್ಲ’ ಅಂತ ವಿಶ್ವನಾಥ್ ಹೇಳಿದ್ದರಂತೆ. ಇರಲೂಬಹುದು. ಆದರೆ ಸಂಸದರು ಅವೈಲೇಬಲ್ ಇದ್ದಿದ್ದರೆ ವಿಶ್ವನಾಥ್ ಹಾಗೆ ಹೇಳುತ್ತಿದ್ದರೆ? ಅಥವಾ ವಿಶ್ವನಾಥ್’ಗೆ ಟಾಂಗ್ ನೀಡುವ ಸಲುವಾಗಿ, ಅವೈಲೇಬಲ್ ಇರುವುದನ್ನೇ ದೊಡ್ದ ಸಾಧನೆಯೆಂಬಂತೆ ಹೇಳಿಕೊಳ್ಳುವ ಅಗತ್ಯವಿದೆಯೇ? ಜನ ನೀರಿಗಾಗಿ ಸಾಯುತ್ತಿರುವಾಗ ಎಂತಹಾ ಹೊಲಸು ರಾಜಕೀಯ ಇದು?!

೨೦ಕ್ಕೆ ಸುಪ್ರೀಂ ಕೋರ್ಟ್ ಮತ್ತೆ ನೀರು ಬಿಡಬೇಕೆಂದು ಆಗ್ರಹಿಸಿತು. ೨೧ಕ್ಕೆ ಕರ್ನಾಟಕ ಸರಕಾರ ಸರ್ವಪಕ್ಷ ಸಭೆ ಕರೆಯಿತು. ಬುದ್ಧಿ ಉಪಯೋಗಿಸಿದ ಜೆಡಿಎಸ್ ಸರ್ವಪಕ್ಷ ಸಭೆಯಿಂದ ಉಪಯೋಗವಾಗುತ್ತೋ ಇಲ್ಲವೋ,  ಸಭೆಯಲ್ಲಿ ಭಾಗವಹಿಸಿ ಎಲ್ಲರ ಮನ ಗೆದ್ದಿತು. ಇಂತಹಾ ಸಂದಿಗ್ಧ ಪರಿಸ್ಥಿತಿಯಲ್ಲೂ “ಹಿಂದಿನ ಸಭೆಯಲ್ಲೇ ನಾವು ನೀರು ಬಿಡೋದು ಬೇಡ ಎಂದರೂ ಕೇಳಲಿಲ್ಲ, ಆದ್ದರಿಂದ ಸಭೆಯನ್ನು ಬಹಿಷ್ಕರಿಸುತ್ತಿದ್ದೇವೆ” ಎನ್ನುತ್ತಾ ರಾಜಕೀಯ ಮೆರೆದ ಬಿಜೆಪಿ ರಾಜ್ಯದ ಜನರ ಕಣ್ಣಲ್ಲಿ ನಾಯಿಗಿಂತಲೂ ಕಡೆಯಾಗಿ ಹೋಯ್ತು. ಟಿವಿ ಚಾನೆಲ್ಲುಗಳ ಡಿಬೆಟಿನಲ್ಲಿ ಮಾನ್ಯ ಸಂಸದರು ಮೇಲಿನ ಕಾರಣವನ್ನೇ ತೊದಲುತ್ತಾ ಹೇಳಿದರು.

ನಿನ್ನೆ(ಸೆಪ್ಟೆಂಬರ್ ೨೨) ಸುವರ್ಣ ನ್ಯೂಸಿನ ಚರ್ಚೆಯಲ್ಲಿ ಕಾಂಗ್ರೆಸ್ಸಿನ ಹ್ಯಾರಿಸ್ ಅವರು “ಪ್ರಧಾನಿ ಸೌಜನ್ಯಕ್ಕೂ ಭೇಟಿಗೆ ಸಮಯ ಕೊಡಲಿಲ್ಲ” ಅಂತ ಹೇಳಿದಾಗ ಶ್ರೀಯುತ ಸಿಂಹರು “ಸೌಜನ್ಯದ ಮಾತನ್ನು ನೀವಾಡಬೇಡಿ, ಮಂಡ್ಯದಲ್ಲಿ ರೈತ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿಕೊಂಡು ಸತ್ತಾಗ, ಡಿ.ಕೆ ರವಿಯವರ ಮನೆಯವರು ವಿಧಾನ ಸೌಧದ ಮುಂದೆ ಪರಿಹಾರಕ್ಕಾಗಿ ಪ್ರತಿಭಟಿಸಿದಾಗ ನಿಮ್ಮ ಮುಖ್ಯಮಂತ್ರಿಗಳು ತೋರಿಸಿದ ಸೌಜನ್ಯ ನಮಗೂ ಗೊತ್ತು” ಅಂತ ರೋಷಾವೇಶದಿಂದ ಕೂಗಾಡಿದರು.   ಸಿಂಹರು ಎಷ್ಟು ಅಪ್ರಬುದ್ಧರು ಎಂಬುದನ್ನು ಅವರ ಉತ್ತರವೇ ತೋರಿಸುತ್ತಿತ್ತು. ಇದು ಟಿಟ್ ಫಾರ್ ಟ್ಯಾಟ್ ಆಟಾನಾ? ಇದು,  ನಿಮ್ಮ ಮುಖ್ಯಮಂತ್ರಿಗಳೂ ಅದೇ ರೀತಿ ಇದ್ದಾರೆ, ಸೋ ನಮ್ಮ ಪ್ರಧಾನಿಗಳೂ ಅದೇ ರೀತಿ ಅಂದ ಹಾಗೆ ಆಗಲಿಲ್ಲವೇ? ಗಂಭೀರ ವಿಷಯದ ಚರ್ಚೆಯ ನಡುವಲ್ಲಿ ಇಂತಹಾ ಚಮಚಾಗಿರಿ ಪ್ರದರ್ಶಿಸುವ ಅಗತ್ಯವಿತ್ತೇ? ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಕಾವೇರಿ ವಿಷಯದಲ್ಲಿ ನೇರವಾಗಿ ಪ್ರಧಾನಿಗಳೂ ಏನೂ ಮಾಡುವಂತಿಲ್ಲ. ಕಾಂಗ್ರೆಸ್ಸಿನವರು ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಇಂತಹಾ ಸಂದಿಗ್ಧ ವಿಚಾರದಲ್ಲಿ ಜಾಣ್ಮೆಯ ಉತ್ತರ ನೀಡುವ ಬದಲು ಕಾಂಗ್ರೆಸ್ಸನ್ನೂ ಮೀರಿಸುವಂತಹಾ ಕೀಳು ರಾಜಕೀಯಕ್ಕೆ ಮಿ.ಸಿಂಹ ಇಳಿದಿದ್ದೇಕೆ?

ಇದೇ ಸಂಸದರು ಸೆಪ್ಟೆಂಬರ್ ೨೦ರಂದು “@CMOKarnataka, Sir please  don’t release water to TN, Let’s face it”   ಅಂತ ಟ್ವೀಟೀಸಿದ್ದರು.

14355132_1180872868639738_2920539953759801291_n

ನೀವೇ ಹೇಳಿ, ಲೆಟ್ಸ್ ಫೇಸ್ ಇಟ್ ಅಂದರೆ ಅರ್ಥವೇನು? ಜೊತೆಯಾಗಿ ಎದುರಿಸೋಣ ಎಂದಲ್ಲವೇ? ಆದರೆ ಹೀಗೆ ಟ್ವೀಟ್ ಮಾಡಿ ಬಳಿಕ ಸಂಸದರು ಮಾಡಿದ್ದೇನು? ಫೇಸ್ ಇಟ್ ಎಂದರೆ ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸುವುದು ಎಂದರ್ಥವೇ? ಕಾವೇರಿ ಕಣಿವೆ ಭಾಗದ ಸಂಸದರಾಗಿ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿ ಸರಕಾರಕ್ಕೆ ಸಲಹೆ ಕೊಡಬಹುದಿತ್ತಲ್ಲವೇ? ಇವರ ಸಲಹೆಯನ್ನು ಸರ್ಕಾರ ತೆಗೆದುಕೊಳ್ಳುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಇವರು ಭಾಗವಹಿಸುವುದೇ ಇಲ್ಲವೆಂದ ಮೇಲೆ ಆ ಭಾಗದ ಜನರ ಸಮಸ್ಯೆಗಳನ್ನು ಪ್ರತಿನಿಧಿಸುವವರು ಯಾರು?  ಇಲ್ಲಾ ಅಂದರೆ ಲೆಟ್ಸ್ ಫೇಸ್ ಇಟ್ ಎಂದು ದೊಡ್ಡ ಜನರಂತೆ ಟ್ವೀಟಿಸಿದ್ದು ಯಾಕೆ? ಲೈಕು ಗಿಟ್ಟಿಸಿಕೊಳ್ಳುವುದಕ್ಕೋ ಇಲ್ಲಾ ನಾನು ಜನರ ಹೋರಾಟವನ್ನು ಟ್ವಿಟ್ಟರಿನಲ್ಲಿ ಬೆಂಬಲಿಸುತ್ತಿದ್ದೇನೆ ಎಂಬುದನ್ನು ತೋರಿಸಿಕೊಳ್ಳುವುದಕ್ಕೋ? ಮೊದಲು ಲೆಟ್ಸ್ ಫೇಸ್ ಇಟ್ ಎಂದವರು ತಮ್ಮ ಪಕ್ಷದ ನಾಯಕರ ಜೊತೆಗೆ ಲೆಟ್ಸ್ ಎಸ್ಕೇಪ್ ಎನ್ನುತ್ತಾ ಓಡಿ ಹೋಗಿದ್ದೇಕೆ?

ಅಷ್ಟಕ್ಕೂ ಟ್ವಿಟ್ಟರಿನಿಂದಾಚೆಗೆ ಕಾವೇರಿ ವಿಷಯದಲ್ಲಿ ಪ್ರತಾಪ್ ಸಿಂಹ ಮಾಡಿರುವ ಘನಂದಾರಿ  ಕೆಲಸವಾದರೂ ಏನು? ಜಗದೀಶ್ ಶೆಟ್ಟರ್ ಜೊತೆಗೆ ಯಾವುದೋ ಸರ್ಕಲ್ಲಿನಲ್ಲಿ ಕುಳಿತು ಘೋಷಣೆ ಹಾಕಿದ್ದು ಬಿಟ್ಟರೆ ಅವರು ಮಾಡಿದ್ದು ಬೇರೇನಿದೆ? ಒಬ್ಬ ಜವಾಬ್ದಾರಿಯುತ ಸಂಸದರಾಗಿ ಅವರು ಬಹಳಷ್ಟು ಕೆಲಸಗಳನ್ನು  ಮಾಡಬಹುದಿತ್ತು. ಕಾವೇರಿ ವಿಷಯದಲ್ಲಿ, ಈಗ ಸರ್ಕಾರವನ್ನು ಮಾತ್ರ ದೂರದೇ, ತೀರ್ಪು ಬರುವ ಮೊದಲೇ ಆ ಭಾಗದ ರೈತರನ್ನು ಭೇಟಿಯಾಗಿ ಅಲ್ಲಿನ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ, “ನೋಡಿ ನಮ್ಮ ರೈತರಿಗೆ ಇಷ್ಟು ನೀರು ಬೇಕು, ಅದಕ್ಕಿಂತ ಹೆಚ್ಚಿನದನ್ನು ತಮಿಳುನಾಡಿಗೆ ಬಿಡಲು ಸಾಧ್ಯವೇ ಇಲ್ಲ” ಎನ್ನುವ ಅಧ್ಯಯನ  ವರದಿಯೊಂದನ್ನು ತಯಾರಿಸಬಹುದಿತ್ತು. ತಿಂಗಳುಗಳ ಮೊದಲೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಎಲ್ಲಾ ವಿಷಯಗಳನ್ನು ಕೂಲಂಕುಷವಾಗಿ ಚರ್ಚಿಸಬಹುದಿತ್ತು. ತಮ್ಮ ಅಧ್ಯಯನ ವರದಿಯನ್ನು ಕಾನೂನು ವಿಭಾಗಕ್ಕೂ ತಲುಪಿಸುವ ವ್ಯವಸ್ಥೆ ಮಾಡಬಹುದಿತ್ತು. ತನ್ನ ಪಕ್ಷದ ರಾಜ್ಯ ನಾಯಕರಿಗೂ, ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ನಾಯಕರ ಗಮನಕ್ಕೂ ಇದೆಲ್ಲವನ್ನೂ ತಂದು ಒಂದು ವೇಳೆ ನ್ಯಾಯಾಲಯದಲ್ಲಿ ನಮ್ಮ ನಿಲುವು ಏನಿರಬೇಕೆಂಬುದನ್ನು ಮುಂಚಿತವಾಗಿಯೇ ನಿರ್ಧರಿಸಬಹುದಿತ್ತು.  ಅದ್ಯಾವುದನ್ನೂ ಮಾಡದ ಸಿಂಹರಿಗೆ ಬರೀ ಟಿವಿಯಲ್ಲಿ ಬಂದಿದ್ದಕ್ಕೆ ಜನ ಸಿಂಪತಿ ತೋರಿಸ್ಬೇಕಂತೆ.

ಈ ನಡುವೆ  ಕೆಲ ಭಕ್ತ ಮಹಾಶಯರು  ಬಿಜೆಪಿಯ ನಡೆಯನ್ನು ಸಮರ್ಥಿಸುತ್ತಿದ್ದಾರೆ. ನೋಡಿ, ಬಿಜೆಪಿಯವರು ಹಿಂದಿನ ಸಭೆಯಲ್ಲಿ ಹೇಳಿದಂತೆ ಕೇಳದೆ ನೀರು ಬಿಟ್ಟಿದ್ದನ್ನು ತಪ್ಪೇ ಅನ್ನೋಣ, ಹಾಗಂತ ಅದಕ್ಕೆ ಬಹಿಷ್ಕಾರವೇ ಮದ್ದಾ? ಒಂದು ವೇಳೆ ನಿನ್ನೆಯ ಸರ್ವಪಕ್ಷ ಸಭೆಯಲ್ಲಿ ಸರಕಾರ ಹಿಂದಿನದಕ್ಕಿಂತಲೂ ಮಾರಕವಾದ ತೀರ್ಮಾನ ಕೈಗೊಂಡಿದಿದ್ದರೆ? ಕನಿಷ್ಟ  ಪ್ರತಿಭಟನೆಯನ್ನಾದರೂ ವ್ಯಕ್ತಪಡಿಸಬಹುದಿತ್ತಲ್ಲಾ? ಅದಕ್ಕಿಂತಲೂ ಹೆಚ್ಚಾಗಿ ನಿನ್ನೆಯ ಸಭೆ ಇನ್ನೂ ಪ್ರಾಮುಖ್ಯವಾಗಿತ್ತು ಯಾಕೆಂದರೆ ಕೋರ್ಟು ಕಾವೇರಿ ನೀರು ನಿರ್ವಹಣಾ ಸಮಿತಿ ರಚಿಸುವಂತೆ ಆದೇಶಿಸಿತ್ತಲ್ಲಾ? ಅದರ ಕುರಿತಾಗಿ ಬಿಜೆಪಿ ಸಂಸದರ ನಡೆಯೇನು? ಸಮಿತಿ ರಚಿಸದಂತೆ ಕೇಂದ್ರ ಸರಕಾರಕ್ಕೆ ಇವರುಗಳು ಯಾವ ರೀತಿಯ ಒತ್ತಡ ತರುತ್ತಾರೆ, ಆ ಮೂಲಕ ಸಮಿತಿ ಬೇಡ ಎಂದು ಹೇಗೆ  ಕೋರ್ಟಿಗೆ ಮನವರಿಕೆ ಮಾಡಿಕೊಡುತ್ತಾರೆ ಎಂಬುದನ್ನೆಲ್ಲಾ ಮುಕ್ತವಾಗಿ ಚರ್ಚಿಸಬಹುದಿತ್ತು. ಅದ್ಯಾವುದನ್ನೂ ಮಾಡದ ಬಿಜೆಪಿ ಅದಕ್ಕದುವೇ ವಿಲನ್ ಆಗಿದ್ದೇ ಹೊರತು ಮಾಧ್ಯಮಗಳಾಗಲೀ, ಕಾಂಗ್ರೆಸ್ಸ್ ಆಗಲಿ ಅದನ್ನು ವಿಲನ್ ಮಾಡಿದ್ದಲ್ಲ.

ಇದೆಲ್ಲದರ ಮಧ್ಯೆ “ಒಂದು ವೇಳೆ ಸರಕಾರದ ಮೇಲೆ ನ್ಯಾಯಾಂಗ ನಿಂದನೆಯ ಆರೋಪ ಎದುರಾದರೆ ನೀವು ಸರಕಾರದ ಜೊತೆಗೆ ನಿಲ್ಲುತ್ತೀರಾ?” ಎನ್ನುವ ಪ್ರಶ್ನೆಗೆ “ಖಂಡಿತವಾಗಿಯೂ ನಿಲ್ಲುತ್ತೇವೆ, ಒಟ್ಟಾಗಿ ಹೋರಾಡೋಣ” ಎನ್ನುವ ಸಂಸದರ ನಿಲುವನ್ನು ನಾವು ಪ್ರಶಂಸಿಸಲೇಬೇಕು. ಆದರೆ  ಇಲ್ಲೂ ಕೂಡಾ “ಲೆಟ್ಸ್ ಫೇಸ್ ಇಟ್” ಅಂತ ಹೇಳಿ ಕಡೇಗೆ ಎಸ್ಕೇಪ್ ಆಗದಿದ್ದರೆ ಸಾಕು ಅಷ್ಟೇ ಮತ್ತು  ನಿಜವಾಗಿಯೂ ನಾವು ಸಿಂಪತಿ ತೋರಿಸಬೇಕಿರುವುದು,  ನೀರಿಗಾಗಿ ಮನೆ ಮಠ ಬಿಟ್ಟು ಬೀದಿಯಲ್ಲಿ ಪೋಲೀಸರ ಲಾಠಿಯೇಟು ತಿನ್ನುತ್ತಿರುವ ರೈತರ ಮೇಲೆಯೇ ಹೊರತು ಪೇಪರಿನಲ್ಲಿ, ಸ್ಟುಡಿಯೋದಲ್ಲಿ ಕುಳಿತು ಘರ್ಜಿಸುವ ಸಿಂಹರ ಮೇಲಲ್ಲ!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!