ಮಹತ್ತರವಾದ ಸಾಧನೆ ಮಾಡುವುದಕ್ಕೆ ಸಾಕಷ್ಟು ಸಮಯ, ತಾಳ್ಮೆ ಹಾಗೂ ಪರಿಶ್ರಮದ ಅವಶ್ಯಕತೆ ಇದೆ. ಕೆಲವೊಮ್ಮೆ ವರ್ಷಗಳೇ ಉರುಳಿ ಹೋಗುತ್ತದೆ. ಆದರೆ ಅದಕ್ಕೆಲ್ಲಾ ಹೊರತಾಗಿಯೂ ಕೆಲವರಿರುತ್ತಾರೆ. ನಮ್ಮಗಳ ಮಧ್ಯೆಯೇ ಇರುತ್ತಾರೆ. ಅಂತಹದೇ ಒಬ್ಬಾತ ಉಡುಪಿ ಜಿಲ್ಲೆಯ ನಿಟ್ಟೆ ಯೂನಿವರ್ಸಿಟಿಯ ೨೧ ವರ್ಷದ ಪ್ರತಿಭಾವಂತ ಹುಡುಗ ಯತೀಶ್ ಶೆಟ್ಟಿ.
ಸಾಮಾನ್ಯವಾಗಿ ಇಂಜಿನಿಯರ್ ಕಾಲೇಜೊಂದರಲ್ಲಿ ನಮಗೆ ಕಾಣ ಸಿಗುವುದು ಸುಲಭವಾಗಿ ಅರ್ಥವಾಗದ ಫಾರ್ಮುಲಾಗಳನ್ನ ಇಟ್ಟುಕೊಂಡು ಅಧ್ಯಯನ ಮಾಡುವ ವಿದ್ಯಾರ್ಥಿಗಳು. ಆದರೆ ನಿಟ್ಟೆಯಲ್ಲಿ ಇದಕ್ಕೆ ಹೊರತಾದ ದೃಶ್ಯವೊಂದು ಕಂಡುಬರುತ್ತದೆ. ಯತೀಶ್ ಶೆಟ್ಟಿಯ ನೇತೃತ್ವದಲ್ಲಿ ನಾಟಕ ಪ್ರದರ್ಶನಗಳನ್ನು ಅಭ್ಯಸಿಸುವ, ಅವುಗಳ ಮೇಲೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ಟೀಮ್.
ನಿಟ್ಟೆಯಲ್ಲಿ ಇಂಜಿನಿಯರಿಂಗ್ ಮಾಡುತ್ತಿರುವ ಯತೀಶ್’ ಅದ್ಭುತ ನಟ ಎನ್ನುವುದರಲ್ಲಿ ಬೇರೆ ಮಾತಿಲ್ಲ. ನಟನೆಯ ಹಾದಿಯಲ್ಲಿ ದಾಪುಗಾಲಿಡುತ್ತಾ ಮುಂದೆ ಸಾಗುತ್ತಿರುವ ಈತ ವಿಶೇಷ ಎನಿಸಿಕೊಳ್ಳುವುದು ತನ್ನ ೧೬ನೇ ವಯಸ್ಸಿನಲ್ಲಿಯೇ ಆತ ಕ್ಯಾನ್ಸರ್ ಎದುರು ತೋರಿದ ಧೈರ್ಯದಿಂದ. ಕೇವಲ ೮% ಸರ್ವೈವಲ್ ಚಾನ್ಸ್ ಇರುವ ಚೆಸ್ಟ್ ಕ್ಯಾವಿಟಿ ಕ್ಯಾನ್ಸರ್ ಅಥವಾ ಮೆಸೊಥೆಲಿಯೋಮ ಎಂಬ ಬಹಳ ಅಪರೂಪದ ಕ್ಯಾನ್ಸರ್’ನ ಬಗೆ ಈತನ ಮನೋಸ್ಥೈರ್ಯದ ಮುಂದೆ ತಲೆ ಬಾಗಲೇಬೇಕಾಯಿತು. ಸುಮಾರು ಒಂದು ವರ್ಷಗಳ ಕಾಲ ಚಿಕಿತ್ಸೆಗಳು ನಡೆದವು, ಆಪರೇಷನ್’ಗಳು ಆದವು. ಆದರೆ ಯತೀಶ್ ತನ್ನ ನೋವಿನ ಬಗ್ಗೆಯಾಗಲಿ ಅಥವಾ ಆ ಸಂದರ್ಭದಲ್ಲಿ ತನ್ನ ಮನಸ್ಥಿತಿಯ ಬಗ್ಗೆಯಾಗಲಿ ಯಾರ ಬಳಿ ಏನನ್ನೂ ಹೇಳಿಕೊಳ್ಳಲಿಲ್ಲ. ತಾನೇನೋ ರಜೆಯ ಮೇಲಿರುವಂತೆ ಇದ್ದು ಬಿಟ್ಟಿದ್ದನು.
ಸಿಂಪತಿಯಿಂದ ತನ್ನನ್ನು ದೂರವೇ ಇಡಿ ಎನ್ನುವ ಯತೀಶ್ ತನ್ನ ಕ್ಯಾನ್ಸರ್ ಪಯಣದ ಬಗ್ಗೆ ಮಾತನಾಡುತ್ತಾ “ಜೀವನದ ಬಗೆಗೆ ಒಂದು ಹೊಸ ಹುರುಪು ಉತ್ಸಾಹ ಮೂಡಿದೆ. ಆರು ದಿನಗಳ ಕಾಲ ಸತತವಾಗಿ ಐ.ಸಿ.ಯುನಲ್ಲಿದ್ದ ನಂತರ ದೇವರು ನನನ್ನ ಮತ್ತೆ ಇಲ್ಲಿಗೆ ವಾಪಾಸ್ಸು ಕರೆ ತಂದಿದ್ದಾನೆಂದರೆ ನಾನು ಯೋಗ್ಯನೇ ಆಗಿರಬೇಕು. ಈ ಸತ್ಯ ನನ್ನನ್ನ ಒಂದು ನಿಮಿಷವೂ ಸುಮ್ಮನೆ ಕೂರಲು ಬಿಡುವುದಿಲ್ಲ. ನಾನೇನೇ ಮಾಡಿದರೂ ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತೇನೆ ಹಾಗೂ ಬದುಕನ್ನ ಆಸ್ವಾದಿಸುತ್ತೇನೆ. ಡಾಕ್ಟರ್’ಗಳ ಪರಿಶ್ರಮ ಹಾಗೂ ಎಲ್ಲರ ಪ್ರಾರ್ಥನೆಯನ್ನ ವ್ಯರ್ಥವಾಗಲು ಬಿಡುವುದಿಲ್ಲ.” ಎನ್ನುತ್ತಾನೆ.
ಆತನ ಪ್ರತಿಭೆಯ ಬಗ್ಗೆ ಕೇಳಿದಾಗ “ ತನ್ನ ಬದುಕು ಸೃಜನಶೀಲತೆಯಿಂದಲೇ ಹಾಗೂ ಸೃಜನಶೀಲತೆಗಾಗಿಯೇ” ಎನ್ನುತ್ತಾನೆ. ಚಿಕ್ಕ ವಯಸ್ಸಿನಲ್ಲಿಯೇ ತನ್ನ ಕನಸನ್ನು ಗುರಿಯನ್ನು ಕಂಡುಕೊಂಡಿರುವ ಯತೀಶ್ ಅದಕ್ಕೆ ಸಿಗುತ್ತಿರುವ ಸಹಕಾರಕ್ಕೆ ಸಂತಸ ವ್ಯಕ್ತಪಡಿಸುತ್ತಾನೆ. ಪ್ರಸ್ತುತ ಶಾರ್ಟ್’ಫಿಲ್ಮ್ ಹಾಗೂ ನಾಟಕಗಳ ನಿರ್ದೇಶನ, ಅಭಿನಯಗಳನ್ನು ಮಾಡುತ್ತಿರುವುದಷ್ಟೇ ಅಲ್ಲದೇ, ಇದೇ ರಂಗದಲ್ಲಿ ಮಹತ್ತರವಾದ ಸಾಧನೆ ಮಾಡುವ ಕನಸು ಆತನದಾಗಿದೆ. “ನನ್ನ ಸೃಜನಶೀಲ ಯೋಚನೆಗಳೇ, ನನಗೆ ಸಿಕ್ಕಿರುವ ಆಶೀರ್ವಾದ ಅವುಗಳ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ” ಎನ್ನುತ್ತಾನೆ ಯತೀಶ್.
ಸಾಮಾಜಿಕ ಕಳಕಳಿಯಿಂದ ಮಾಡಲ್ಪಟ್ಟ ‘ಆಂಖೇ’ ಎಂಬ ಶಾರ್ಟ್’ಫಿಲ್ಮ್ ಯತೀಶ್’ನ ಒಂದು ದೊಡ್ಡ ಸಾಧನೆ. ಇದನ್ನು ನೋಡಿ ಸುಮಾರು ೨೦೦೦ ಜನರು ನೇತ್ರದಾನ ಮಾಡಲು ಸಹಿ ಮಾಡಿದ್ದಾರೆ. ಇಷ್ಟು ಚಿಕ್ಕವಯಸ್ಸಿನಲ್ಲೇ ಸಮಾಜಕ್ಕಾಗಿ ಇಂತಹ ಒಂದು ಕೊಡುಗೆ ನೀಡಿದ್ದು ಪ್ರಶಂಸನೀಯ.
ತನ್ನ ಕನಸುಗಳನ್ನು ಬೆನ್ನತ್ತಿ ಹೊರಟಿರುವ ಯತೀಶ್ ಅದರ ಬಗ್ಗೆ ಹೇಳುವುದು ಹೀಗೆ, “ ಮೊದಲನೆಯದಾಗಿ ಕೈಗೆತ್ತಿಕೊಂಡಿರುವ ಕೆಲಸ ಸಣ್ಣದಾಗಲಿ ಅಥವಾ ದೊಡ್ಡದಾಗಲಿ ಅದಕ್ಕೆ ನ್ಯಾಯ ಒದಗಿಸುತ್ತೇನೆ. ನನ್ನ ಗೆಳೆಯರೊಂದಿಗೆ ನಾಟಕಗಳನ್ನ, ಶಾರ್ಟ್’ಫಿಲ್ಮ್’ಗಳನ್ನ ಮಾಡುತ್ತೇನೆ. ಅದಕ್ಕೆ ಪೂರ್ಣವಾಗಿ ಶ್ರಮಿಸುತ್ತೇನೆ. ಯಾಕೆಂದರೆ ಪ್ರತಿ ಅನುಭವವೂ ಮೌಲ್ಯಯುತವಾದುದು. ಎರಡನೆಯದಾಗಿ ಪ್ರತಿಯೊಬ್ಬ ಉತ್ತಮ ನಾಯಕನ ಹಿಂದೆ ಒಂದು ಉತ್ತಮ ಟೀಮ್ ಇರುತ್ತದೆ. ಸಮಾನ ಮನಸ್ಕರಾದ ನನ್ನ ಬಳಗದ ಎಲ್ಲರು ಶ್ರಮಜೀವಿಗಳು. ನನ್ನ ಪ್ರಕಾರ ಒಂದು ಟೀಮ್’ನಲ್ಲಿರಬೇಕಾದ ಮುಖ್ಯ ಗುಣವೂ ಅದೇ. ನನ್ನ ಟೀಮ್ ನನ್ನ ದೊಡ್ಡ ಶಕ್ತಿ. ಅಲ್ಲದೇ ಹೊಸತನ್ನು ಪ್ರಯೋಗಿಸುವುದು ಬಹಳ ಮುಖ್ಯ. ನಾವು ಏನಾದರೊಂದು ಹೊಸತನ್ನು ಮಾಡುತ್ತಿದ್ದೇವೆಂದರೆ ಅದೇ ಒಂದು ಸಾಧನೆ. ನಾನೇನೇ ಮಾಡಿದರೂ ಅದರಲ್ಲಿ ಹೊಸತನವನ್ನು ತರುವ ಪ್ರಯತ್ನ ಮಾಡುತ್ತೇನೆ.”
ಯತೀಶ್’ನನ್ನು ‘ಮುಂದೆ?’ ಎಂಬ ಪ್ರಶ್ನೆ ಕೇಳಿದರೆ “ಯಾರಿಗೆ ಗೊತ್ತು..?! ನಾವು ನಟನೆ, ನಿರ್ದೇಶನವನ್ನ ಮಾತ್ರ ಸೀರಿಯಸ್ಸಾಗಿ ತೆಗೆದುಕೊಳ್ಳುವುದು. ಬಾಕಿ ಕಳೆದು ಹೋದದ್ದಕ್ಕೆ ಪಶ್ಚಾತ್ತಾಪ ಪಡದೇ, ಭವಿಷ್ಯದ ಬಗ್ಗೆ ಚಿಂತೆ ಮಾಡದೇ ಜೀವನವನ್ನು ಎಂಜಾಯ್ ಮಾಡುತ್ತಾ ಇರುವ ಕಾಲೇಜು ಹುಡುಗರ ಒಂದು ಗುಂಪು. ಏನೇ ಆದರೂ ನಮ್ಮ ಕೆಲಸದಲ್ಲಿ ನಮ್ಮ ೧೦೦% ಕೊಡುತ್ತೇವೆ. ಈ ಆತ್ಮವಿಶ್ವಾಸ ಇರುವುದರಿಂದಲೇ ಭವಿಷ್ಯದ ಬಗ್ಗೆ ಚಿಂತೆ ಇಲ್ಲ” ಎನ್ನುವ ಯತೀಶ್, ಮುಂದುವರೆದು “ವೈಯಕ್ತಿಕವಾಗಿ ಹೇಳುವುದಾದರೆ, ದೈಹಿಕ ಹಾಗೂ ಮಾನಸಿಕವಾಗಿ ಅತ್ಯಂತ ಕೆಟ್ಟ ಎನ್ನುವಂತಹ ಪರಿಸ್ಥಿಯನ್ನ ನೋಡಿಯಾಗಿದೆ, ಅದು ಮುಂದೆ ಯಾವುದೇ ವಿಪತ್ತು ಬಂದರೂ ಎದುರಿಸುವಂತೆ ನನ್ನನ್ನ ಸಿದ್ಧಪಡಿಸಿದೆ. ನಾನು ಇಂದಿಗಾಗಿ ಬದುಕುತ್ತೇನೆ, ಹಾಗೆ, ‘ಇಂದು’ ಎನ್ನುವುದರಲ್ಲಿ ಬದುಕುವುದು ಅದ್ಭುತ ಅನುಭವ.” ಎನ್ನುವನು.
ಪ್ರತಿ ಮಾತಿನಲ್ಲೂ ಎಲ್ಲರನ್ನು ನಗಿಸುತ್ತಾ, ತಮಾಷೆ ಮಾಡುವ ಯತೀಶ್ ಸೀರಿಯಸ್ಸಾಗಿ ಇರುವುದೇ ಬಹಳ ಕಡಿಮೆ. ಬಹುಶಃ ಈ ಮೇಲಿನ ಕೆಲ ಸಾಲುಗಳನ್ನ ಹೇಳುವಾಗ ಮಾತ್ರ, ಕೆಲ ಸೆಕೆಂಡ್’ಗಳ ಕಾಲ ಗಂಭೀರವಾಗಿದ್ದು. ಒಬ್ಬ ಉತ್ತಮ ನಟನಾಗಿ ತನ್ನ ಭಾವನೆಗಳ ಮೇಲೆ ಹಿಡಿತವಿದೆ ಎನ್ನುವುದೂ ಸತ್ಯ.
ಯತೀಶ್’ನೊಂದಿಗಿನ ಗೆಳೆತನ ಬಹಳ ಮೌಲ್ಯಯುತವಾದುದು. ಆತನನ್ನು ಒಮ್ಮೆ ನೋಡಿದ ನಂತರ ಆತನನ್ನು ಪ್ರೀತಿಸಲಾರದೇ ಇರಲಾರಿರಿ, ಆತನೇ ನಿಮಗೆ ಸ್ಪೂರ್ತಿಯಾಗುತ್ತಾನೆ. ಭರವಸೆ ಕಳೆದುಕೊಂಡವರಿಗೆ ಸ್ಪೂರ್ತಿ ತುಂಬುತ್ತಾನೆ ಜೊತೆಗೆ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಾನೆ. ಆತನ ಕನಸುಗಳೆಲ್ಲಾ ಸಾಕಾರಗೊಳ್ಳಲಿ, ಯಶಸ್ಸು ಸಿಗಲಿ ಹಾಗೇ ಇನ್ನೂ ಸಾಕಷ್ಟು ಜನರಿಗೆ ಸ್ಪೂರ್ತಿಯಾಗಿ ಸಮಾಜಕ್ಕೆ ಮಾದರಿಯಾಗಲಿ ಎಂಬುದೇ ನಮ್ಮ ಆಶಯ.
ಮೂಲ ಲೇಖನ : ಅಶ್ವಿನಿ ಜೈನ್, (knowyourstar ವೆಬ್’ಸೈಟ್)