2012ರ ಮಾತು. ಬೆಂಗಳೂರು ಈಶಾನ್ಯ ಭಾರತದವರಿಗೆ ಸೇಫ್ ಅಲ್ಲ ಎನ್ನುವ ರೂಮರ್ ಹರಡಿ ಇಲ್ಲಿರುವ ಅಸ್ಸಾಂ, ಮಣಿಪುರ ಮುಂತಾದೆಡೆಯ ಜನರೆಲ್ಲಾ ಬಿಡಾರ ಸಮೇತ ಬೆಂಗಳೂರನ್ನು ತೊರೆದು ಹುಟ್ಟೂರನ್ನು ಸೇರಿದ್ದರು. ದೊಡ್ಡ ಸಂಖ್ಯೆಯಲ್ಲಿ ಜನರು ಬೆಂಗಳೂರನ್ನು ಬಿಟ್ಟು ಹೋಗಿದ್ದರಿಂದ, ಮೀಡಿಯಾಗಳು ಚೆನ್ನಾಗಿ ಮಸಾಲೆ ಅರೆದಿದ್ದರಿಂದ ಅಂದು ಬೆಂಗಳೂರಿಗೆ ಕೆಟ್ಟ ಹೆಸರು ಬಂದಿತ್ತು. ಸರಕಾರ ಎಷ್ಟು ಕೇಳಿಕೊಂಡರೂ ಜನ ಸರಕಾರದ ಮಾತು ಕೇಳಲಿಲ್ಲ. ಪರಿಸ್ಥಿತಿ ಎಷ್ಟು ಕೈ ಮೀರಿತೆಂದರೆ ಸಮರೋಪಾದಿಯಲ್ಲಿ ಹುಟ್ಟೂರಿಗೆ ಹಿಂದಿರುಗುತ್ತಿದ್ದವರ ಮನವೊಲಿಸುವುದಕ್ಕೆ ಆಗಿನ ಸರಕಾರದ ಕೆಲ ಮಂತ್ರಿಗಳು ರೈಲು ನಿಲ್ದಾಣದವರೆಗೂ ಹೋಗಬೇಕಾಯಿತು. ಕ್ಷುಲ್ಲಕ ಕಾರಣವೊಂದಕ್ಕೆ ಈಶಾನ್ಯ ಭಾರತೀಯನೊಬ್ಬನಿಗೆ ಹಲ್ಲೆ ಮಾಡಲಾಗಿದೆ ಎನ್ನುವುದು ಇದೆಲ್ಲದಕ್ಕೆ ಮೂಲಭೂತ ಕಾರಣವಾಗಿದ್ದು. ಆದರೆ ಆವತ್ತು ಜನ ನಿಜಕ್ಕೂ ಭಯಭೀತರಾಗಿದ್ದು “ಬೆಂಗಳೂರು ನಿಮಗೆ ಸೇಫ್ ಅಲ್ಲ, ನೀವು ಆದಷ್ಟು ಬೇಗ ಬೇಂಗಳೂರು ತೊರೆಯದಿದ್ದರೆ ನಿಮ್ಮವನಿಗೆ ಆದ ಹಲ್ಲೆ ನಿಮ್ಮ ಮೇಲೂ ಆದೀತು” ಎನ್ನುವ ಕೆಲ ಕಿಡಿಗೇಡಿಗಳು ಸೃಷ್ಟಿಸಿ ಹಬ್ಬಿಸಿದ SMS ರೂಮರ್’ನಿಂದಾಗಿ. ಈ ರೂಮರ್ ಹಬ್ಬಿಸುವುದಕ್ಕಾಗಿ ಕೆಲವರು ಫೇಸ್ಬುಕ್ಕನ್ನೂ ಬಳಸಿಕೊಂಡರು. ಕೊನೆಗೆ ಪರಿಸ್ಥಿತಿಯ ನಿಯಂತ್ರಣಕ್ಕಾಗಿ ಕೇಂದ್ರ ಸರಕಾರ ಒಂದು ವಾರಗಳ ಕಾಲ SMS ಸೇವೆಗಳನ್ನು ನಿಷೇಧಿಸಿತು ಮತ್ತು ದ್ವೇಷ ಹಬ್ಬಿಸಿದವರ ಫೇಸ್ಬುಕ್ ಅಕೌಂಟನ್ನು ಕೆಲ ದಿನಗಳ ಕಾಲ ತಡೆ ಹಿಡಿಯಿತು.
SMS ಸೇವೆಗಳನ್ನು ನಿಷೇಧಿಸಿದ್ದು, ಕೆಲವರ ಫೇಸ್ಬುಕ್ ಅಕೌಂಟನ್ನು ತಡೆ ಹಿಡಿದಿದ್ದು ದೊಡ್ಡ ತಲೆ ಹೋಗುವ ಸಂಗತಿಯೇನಲ್ಲ. ಆದರೆ ತಮ್ಮ ಆಟಾಟೋಪಗಳಿಂದಾಗಿ ಕೆಲ ಕಿಡಿಗೇಡಿಗಳು SMSನಂತಹ ತಂತ್ರಜ್ಞಾನಗಳನ್ನು ದುರುಪಯೋಗಪಡಿಸಿಕೊಂಡು ಭೀತಿ ಹುಟ್ಟಿಸಿದ್ದು, ಸರ್ವ ಜನಾಂಗದ ಶಾಂತಿಯ ತೋಟ ಎನ್ನುವಂತಿರುವ ಬೆಂಗಳೂರಿನ ಹೆಸರು ಕೆಡಿಸಿದ್ದು ದೊಡ್ಡ ವಿಷಯ. ಇವತ್ತು SMS ಸೇವೆ ಪಂಚಭೂತಗಳಲ್ಲಿ ಲೀನವಾಗಿದೆ. ಆದರೆ ಆವತ್ತು SMS ದುರ್ಬಳಕೆಯಾದಂತೆ ಇವತ್ತು ಫೇಸ್ಬುಕ್ ಮತ್ತು ವಾಟ್ಸಾಪ್ ತಂತ್ರಜ್ಞಾನಗಳು ವ್ಯಾಪಕವಾಗಿ ದುರ್ಬಳಕೆಯಾಗುತ್ತಿದೆ.
ಮೊದಲಿಗೆ ಫೇಸ್ಬುಕ್ಕಿನ ವಿಚಾರಕ್ಕೆ ಬರುತ್ತೇನೆ. ಫೇಸ್ಬುಕ್ ನಿಜಕ್ಕೂ ಒಂದು ಅದ್ಭುತ ಜಗತ್ತು. ಇದರಲ್ಲಿ ತಲೆಗೆ ತೋಚಿದ್ದನ್ನು ಗೋಡೆಯಲ್ಲಿ ಗೀಚಿಕೊಳ್ಳಬಹುದು, ಫೋಟೋ ಹಾಕಿಕೊಳ್ಳಬಹುದು, ಈಗೀಗ ಲೈವ್ ವಿಡಿಯೋವನ್ನೂ ಮಾಡಬಹುದು. ಜಗತ್ತಿನ ಬೇರೆ ಬೇರೆಡೆಗಳಲ್ಲಿ ಚದುರಿರುವ ನೆಂಟರಿಷ್ಟರ ಜೊತೆ, ಸ್ನೇಹಿತರ ಜೊತೆಗೆ ನಿರಂತರ ಸಂಪರ್ಕದಲ್ಲಿರುವುದಕ್ಕೆ ಇದು ಬಹಳಾನೇ ಸಹಕಾರಿ. ಪರಿಚಯವೇ ಇಲ್ಲದವರ ಜೊತೆಗೆ ಸ್ನೇಹ ಹಸ್ತ ಚಾಚಿ ವಿಚಾರ ವಿನಿಮಯ ಮಾಡಿಕೊಳ್ಳುವುದಕ್ಕೆ ಇದೊಂದು ಏಜೆಂಟ್ ಇದ್ದಂತೆ. ನಮ್ಮ ಪ್ರಧಾನಿಗಳು ಎಲ್ಲಿ, ಏನು ಮಾಡುತ್ತಿದ್ದಾರೆ, ಸೆಲೆಬ್ರಿಟಿಗಳು ಏನು ಮಾಡುತ್ತಿದ್ದಾರೆ ಮುಂತಾದ ವಿಷಯಗಳನ್ನು ಸಹ ಇದು ನಮಗೆ ಅಪ್’ಲೋಡ್ ಮಾಡಿಕೊಡುತ್ತದೆ. ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲದಷ್ಟು ಜನ ಫೇಸ್ಬುಕ್ಕೆನ್ನುವ ಮಾಯಾಲೋಕದಲ್ಲಿದ್ದಾರೆ ಎಂದರೆ ಊಹಿಸಿ ಇದರ ಮಾಯೆ ಎಂತಾದ್ದು ಅಂತ.
ಆದರೆ ಇಂತಹಾ ಅಮೋಘ ಆವಿಷ್ಕಾರವನ್ನೂ ಸಹ ದುರುಳರು ಬಿಟ್ಟಿಲ್ಲ. ಲೈಕ್ ಆಸೆಗಾಗಿ, ಒಂದಷ್ಟು ಹಣ ಸಂಪಾದನೆಗಾಗಿ ಮತ್ತು ಇನ್ನೊಬ್ಬರ ತೇಜೋವಧೆ ಮಾಡುವುದಕ್ಕಾಗಿ ಫೇಸ್ಬುಕ್ಕೂ ಸಹ ದುರ್ಬಳಕೆಗೀಡಾಗುತ್ತಿರುವುದು ಅತ್ಯಂತ ಬೇಸರದ ಸಂಗತಿ.
ವೈಯಕ್ತಿಕ ಪ್ರೊಫೈಲುಗಳಲ್ಲಿ ಕೆಲವರು ಅನಾಚಾರ ಮಾಡುವವರು, ಹೆಣ್ಮಕ್ಕಳಿಗೆ ಕೀಟಲೆ ಕೊಡುವವರು ಇದ್ದಾರೆ. ಆದರೆ ವೈಯಕ್ತಿಕ ಪ್ರೊಫೈಲುಗಳಿಗಿಂತಲೂ ಇಂತಹಾ ಹಾದರಕ್ಕಿಳಿಯುವುದು ಫೇಸ್ಬುಕ್ಕಿನಲ್ಲಿರುವ ಲಕ್ಷಾಂತರ ಪೇಜುಗಳು. ಸಾಹಿತ್ಯದ್ದೋ, ಟ್ರೆಕ್ಕಿಂಗಿದ್ದೋ, ಹಾಸ್ಯಕ್ಕಾಗಿಯೇ ಇರುವ ಟ್ರೋಲ್ ಪೇಜುಗಳೋ ಅಥವಾ ಇನ್ನಾವುದೋ ಉತ್ತಮ ವಿಚಾರಗಳನ್ನು ಪ್ರಸ್ತುತಪಡಿಸುತ್ತಿರುವ ಪೇಜುಗಳಾದರೆ ಪರವಾಗಿಲ್ಲ, ಕಣ್ಣು ಮುಚ್ಚಿ ಲೈಕ್ ಒತ್ತಿ ಬಿಡಬಹುದು. ಆದರೆ ನಮ್ಮಲ್ಲಿರುವ ಬಹುತೇಕ ಪೇಜುಗಳು ಲೈಕ್ ತೆವಲಿಗಾಗಿ ಹುಟ್ಟಿಕೊಂಡಿದ್ದು. TRPಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಟಿವಿ ಮಾಧ್ಯಮಗಳಂತೆಯೇ ಇವುಗಳೂ ಸಹ. ಲೈಕ್ ಗಳಿಸುವುದಕ್ಕಾಗಿ ಇವುಗಳು ಎಷ್ಟು ಸಾಧ್ಯವೋ ಅದಕ್ಕಿಂತಲೂ ಕೆಳ ಮಟ್ಟಕ್ಕಿಳಿಯಲೂ ಸಿದ್ಧ. ಒಟ್ಟಿನಲ್ಲಿ ದಿನ ಮುಗಿಯುವಾಗ ಕಿಸೆಯೊಳಗೆ ಒಂದಷ್ಟು ಲೈಕುಗಳಿದ್ದರೆ ಸಾಕು.
ಒಂದೆರಡು ಉದಾಹರಣೆಗಳನ್ನು ಕೊಡುತ್ತೇನೆ.
“ನರೇಂದ್ರ ಮೋದಿಯವರನ್ನು ವಿಶ್ವದ ಅತ್ಯುತ್ತಮ ಪ್ರಧಾನಿ ಎಂದು ಯುನೆಸ್ಕೋ ಘೋಷಣೆ ಮಾಡಿದೆ” ಎನ್ನುವ ಕಥೆ ನಿಮಗೆಲ್ಲಾ ಚೆನ್ನಾಗಿ ಗೊತ್ತಿದೆ. ಮೊದಲಿಗೆ ಈ ಕಥೆ ಹುಟ್ಟಿಕೊಂಡಿದ್ದು ಫೇಸ್ಬುಕ್ಕಿನ ಪಡಸಾಲೆಯಲ್ಲಿ. ನಮ್ಮ ಜನಕ್ಕೆ ಅಷ್ಟೇ ಸಾಕಿತ್ತು, “ಜೈ ಹೋ, ಜೈ ಮೋದಿಜಿ, Proud Of You” ಎನ್ನುತ್ತಾ ಶೇರ್ ಮಾಡಿಕೊಳ್ಳಲು. ಈ ಕಥೆಯನ್ನು ಸೃಷ್ಟಿಸಿದ ಮಹಾಶಯನಿಗೂ ಅಷ್ಟೇ ಬೇಕಿದ್ದಿದ್ದು.
ಎರಡನೇ ಉದಾಹರಣೆ; ಕಳೆದ ತಿಂಗಳು ದೀಪಾ ಕರ್ಮಕಾರ್ ಒಲಂಪಿಕ್ ಕ್ರೀಡಾಕೂಟದ ಜಿಮ್ನಾಸ್ಟಿಕ್ ಸ್ಪರ್ಧೆಯ ಅರ್ಹಾತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ನಮ್ಮಲ್ಲಿ ಸಂಚಲನವನ್ನೇ ಮೂಡಿಸಿದಳು. ಇಡೀ ರಾಷ್ಟ್ರದ ಜನತೆ ಆಕೆಯ ಸಾಧನೆಯ ಬಗ್ಗೆ ಹುಬ್ಬೇರಿಸಿತ್ತು ಮತ್ತು ಫೈನಲ್ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿತ್ತು. ಜನರ ಈ ಎಕ್ಸೈಟ್’ಮೆಂಟನ್ನೇ ದುರುಪಯೋಗಪಡಿಸಿಕೊಂಡ ಕೆಲವು ಪೇಜುಗಳು ಮರುದಿನವೇ ದೀಪಾ ಚಿನ್ನ ಗೆದ್ದಿದ್ದಾರೆ ಎನ್ನುವ ಬ್ರೇಕಿಂಗ್ ನ್ಯೂಸನ್ನು ದೀಪಾ ಪದಕವನ್ನು ಹಿಡಿದುಕೊಂಡಿರುವ ಫೋಟೋ ಸಮೇತ ಹಬ್ಬಿಸಿತು. ಪದಕಗಳಿಲ್ಲದೆ ಸೊರಗಿದ್ದ ಜನಕ್ಕೆ ಮರುಭೂಮಿಯಲ್ಲಿ ನೀರು ಸಿಕ್ಕಿದಂತಾಗಿತ್ತು. ಜನ ಹುಚ್ಚೆದ್ದು ಕುಣಿದರು. ಇಲ್ಲೂ ಅಷ್ಟೇ, ಸುದ್ದಿಯ ಆಥೆಂಟಿಸಿಟಿ ಚೆಕ್ ಮಾಡದೆ, ಪುರುಸೊತ್ತಿಲ್ಲದೆ ಶೇರ್ ಮಾಡಿದರು. ವಾಸ್ತವದಲ್ಲಿ ದೀಪಾಗೆ ಫೈನಲ್ ಇದ್ದಿದ್ದು ಈ ಸುದ್ದಿ ಹಬ್ಬಿದ ಒಂದು ವಾರದ ಬಳಿಕ. ಫೈನಲಿನಲ್ಲಿ ಅದ್ಭುತ ಪ್ರದರ್ಶನದ ಹೊರತಾಗಿಯೂ ದೀಪ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಫೇಸ್ಬುಕ್ಕಿನ ಕೆಲವು ಪೇಜುಗಳು, ದೀಪಾ ಮಾರ್ಚಿನಲ್ಲಿ ಅರ್ಹತಾ ಸುತ್ತಿನಲ್ಲಿ ಗೆದ್ದಾಗ ತೆಗೆದಿದ್ದ ಫೋಟೋವನ್ನು ಬಳಸಿಕೊಂಡು ಒಲಂಪಿಕ್’ನಲ್ಲೇ ಚಿನ್ನ ಗೆದ್ದಿದ್ಡಾಳೆ ಅಂತ ಹಸಿ ಸುಳ್ಳು ಸುದ್ದಿಯನ್ನು ಹಬ್ಬಿಸಿದವು. ತಮ್ಮ ಪೇಜುಗಳ ಹೆಸರನ್ನು #likeourpage ಎನ್ನುವ ಹ್ಯಾಶ್ ಟ್ಯಾಗುಗಳ ಮೂಲಕ ಹಾಕಿಕೊಂಡು ಟಿವಿ ಮಾಧ್ಯಮಗಳಿಗಿಂತ ನಾವು ಏನಕ್ಕೂ ಕಮ್ಮಿಯಿಲ್ಲವೆಂಬಂತೆ TRP ಬೇಳೆ ಬೇಯಿಸಿಕೊಂಡವು. ದೀಪಾ ಪದಕ ಗೆದ್ದಿದ್ದಾಳೆ ಎನ್ನುವಾಗ ಹುಚ್ಚೆದ್ದು ಕುಣಿದಿದ್ದ ಜನರ ಮುಖ ಸತ್ಯ ಗೊತ್ತಾಗುವಾಗ ಪೆಚ್ಚಾಗಿತ್ತು.
ಇಂತಹಾ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಲೈಕ್ ಹಾದರಕ್ಕಿಳಿಯುವ ಸಾವಿರಾರು ಪೇಜುಗಳು ಫೇಸ್ಬುಕ್ಕಿನಲ್ಲಿದೆ. ಆದರೆ ಈ ಪೇಜುಗಳಿಗೆಲ್ಲಾ ತಾವು ಮಾಡುತ್ತಿರುವುದು ತಪ್ಪು ಎಂಬುದು ತಿಳಿಯದೇನಲ್ಲ, ಅದು ತಪ್ಪು ಎಂದು ಅವುಗಳಿಗೆ ಚೆನ್ನಾಗಿ ಗೊತ್ತಿದೆ. ಆದರೂ ಬೇಕು ಬೇಕೆಂದೇ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತವೆ, ಯಾಕೆ ಗೊತ್ತಾ? ಈಗ ಫೇಸ್ಬುಕ್ ಪೇಜಿನೊಳಗೆ ಮಾರ್ಕೆಟಿಂಗ್ ಬ್ಯುಸಿನೆಸ್ ಮಾಡಬಹುದು, ಅಡ್ವರ್ಟೈಸ್’ಮೆಂಟ್ ಹಾಕಬಹುದು, ಆ ಮೂಲಕ ಬರೀ ಪಬ್ಲಿಸಿಟಿಯೊಂದೇ ಅಲ್ಲ, ಹೇರಳವಾಗಿ ಹಣ ಸಂಪಾದನೆಯನ್ನೂ ಮಾಡಬಹುದು. ಸೋ ಲೈಕ್ ಹೆಚ್ಚಿದಷ್ಟೂ ಸಂಪಾದನೆ ಜಾಸ್ತಿ. ಆದ್ರೆ ಬಹುತೇಕ ಜನರಿಗೆ ಈ ಸಂಗತಿ ಇನ್ನೂ ಗೊತ್ತಿಲ್ಲ ಎನ್ನುವುದೇ ಆಶ್ಚರ್ಯಕರವಾದ ಸಂಗತಿ.
ಇನ್ನು ವಾಟ್ಸಾಪ್… ಒಂದಿಬ್ಬರು ಹುಡುಗರು ಹುಟ್ಟು ಹಾಕಿದ ಈ ಚಿನಕುರುಳಿ App ಅನ್ನು ಇವತ್ತು ಕೋಟ್ಯಾಂತರ ಜನರು ಬಳಸುತ್ತಿದ್ದಾರೆ. SMS ಎನ್ನುವ ಸೃಷ್ಟಿಯನ್ನು ನಿರ್ವಂಶ ಮಾಡಿ ಹಾಕಿದ್ದೇ ಈ ವಾಟ್ಸಾಪ್. ಆಗಲೇ ಹೇಳಿದಂತೆ ಇದು ಫೇಸ್ಬುಕ್ಕಿನ ದತ್ತು ಪುತ್ರನೂ ಹೌದು. ವಾಟ್ಸಾಪಿಗೆ ಅದೆಂತಹಾ ಅದ್ಭುತ ಸಾಮರ್ಥ್ಯವಿದೆಯೆಂದರೆ ಅಂಗೈಯಲ್ಲೇ ಇಡೀ ಜಗತ್ತನ್ನು ನಮ್ಮ ಮುಂದಿಡುತ್ತದೆ. ಡೇಟಾ ಪ್ಯಾಕ್ ಒಂದಿದ್ದರೆ ಸಾಕು, ಬರೀ ಮೆಸೇಜಲ್ಲ, ಫೋಟೋ, ಕಾಂಟಾಕ್ಟ್, ವಿಡಿಯೋ, ಡಾಕ್ಯುಮೆಂಟ್ ಏನು ಬೇಕಾದರೂ, ಎಲ್ಲಿಂದೆಲ್ಲಿಗೆ ಬೇಕಾದರೂ ಕಳುಹಿಸಬಹುದು ಇದರಲ್ಲಿ. ಉಪಯೋಗದ ದೃಷ್ಟಿಯಿಂದ ಹೇಳುವುದಾದರೆ, ಅನುಮಾನವೇ ಇಲ್ಲ, ಇದೊಂದು ವಿಸ್ಮಯಕಾರಿ ಸೃಷ್ಟಿ.
ಆದರೆ, ಫೇಸ್ಬುಕ್ಕಿನ ಪೇಜುಗಳಂತೆ, ನಮಗೆ ಮಗ್ಗಲು ಮುಳ್ಳಾಗುತ್ತಿರುವುದು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುವ ವಾಟ್ಸಾಪ್ ಗ್ರೂಪುಗಳು. ಫೇಸ್ಬುಕ್ ಪೇಜುಗಳು ಕಿಡಿ ಹಚ್ಚುವುದಕ್ಕಾದರೆ ಈ ವಾಟ್ಸಾಪ್ ಗ್ರೂಪುಗಳು ಸೀಮೆಯೆಣ್ಣೆ ಸುರಿಯುವುದಕ್ಕೆ. ನಮ್ಮ ವಾಟ್ಸಾಪ್ ಓಪನ್ ಮಾಡಿದರೆ ಅದರೊಳಗೆ ನಾವು ಬೆಚ್ಚಿ ಬೀಳಿಸುವಷ್ಟು ಗ್ರೂಪುಗಳಿರುತ್ತವೆ. ಕೆಲವು ನಮ್ಮ ಸಂಬಂಧಿಕರೇ ಸೃಷ್ಟಿಸಿದ ಗ್ರೂಪುಗಳಾದರೆ, ಮತ್ತೆ ಕೆಲವು ಸ್ನೇಹಿತರೇ ಸೃಷ್ಟಿಸಿದ ಗ್ರೂಪುಗಳು. ಕೆಲವೊಮ್ಮೆ ನಮಗೆ ಪರಿಚಿತರೇ ಅಲ್ಲದವರು ಸೃಷ್ಟಿಸಿದ ಗ್ರೂಪಿನೊಳಗೆ ಮತ್ತಾರೋ ನಮ್ಮನ್ನು ಅದರೊಳಗೆ ಸೇರಿಸಿಕೊಳ್ಳುವುದೂ ಇದೆ. ಇಂತಹಾ ಗ್ರೂಪಗಳು ಹತ್ತಾರು ಇದ್ದರೂ ಉತ್ತಮ ವಿಚಾರಗಳನ್ನು ವಿವೇಚನೆಯಿಂದ ಹಬ್ಬುವವು ಕೆಲವೇ ಕೆಲವಷ್ಟೇ. ಇನ್ನುಳಿದೆಂತೆ ಎಲ್ಲವೂ ಹಾಸ್ಯಕ್ಕೆ, ಅಸಂಬದ್ಧ ಪ್ರಲಾಪಗಳಿಗೆ, ಕಾಡು ಹರಟೆಗಳಿಗಷ್ಟೇ ಸೀಮಿತವಾದಂತವುಗಳು.
ಫೇಸ್ಬುಕ್ಕಿನಲ್ಲಿ ಬರುವ ವಿಚಾರಗಳನ್ನು ವೇಗವಾಗಿ ಜನರನ್ನು ತಲುಪುವುದಕ್ಕೆ ವಾಟ್ಸಾಪ್ ಬಹಳಾ ಸಹಕಾರಿ. ಇಲ್ಲೂ ಅಷ್ಟೇ, ವಿಷಯ ಸತ್ಯವೋ, ಸುಳ್ಳೋ ಎಂಬುದನ್ನು ಪರಾಮರ್ಶಿಸದೇ ಜನ ಸುಳ್ಳು ಸುದ್ದಿಗಳನ್ನು ಹಬ್ಬುತ್ತಿರುವುದು ಖೇದಕರವಾದ ಸಂಗತಿ. ನರೇಂದ್ರ ಮೋದಿಯವರನ್ನು ಯುನೆಸ್ಕೋ ಅತ್ಯುತ್ತಮ ಪ್ರಧಾನಿಯನ್ನಾಗಿ ಘೋಷಿಸಿದ್ದು, ದೀಪಾ ಕರ್ಮಕಾರ್ ಒಲಂಪಿಕ್’ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದು ಮುಂತಾದ ಸುಳ್ಳು ಸುದ್ದಿ ವೈರಲ್ ಆಗಿ ಹಬ್ಬುವಲ್ಲಿ ವಾಟ್ಸಾಪ್ ಗ್ರೂಪುಗಳೂ ಸಹ ತನ್ನದೇ ಆದ ಕೊಡುಗೆಯನ್ನು ನೀಡಿವೆ. ಆ ಮೂಲಕ ತನ್ನನ್ನು ದತ್ತು ತೆಗೆದುಕೊಂಡ ಫೇಸ್ಬುಕ್ಕಿನ ಋಣ ತೀರಿಸಿತ್ತು ವಾಟ್ಸಾಪ್.
ಕೆಲವೊಮ್ಮೆ ಈ ಗ್ರೂಪುಗಳು ಎಷ್ಟು ಕಿರಿಕಿರಿಯನ್ನುಂಟು ಮಾಡುತ್ತವೆಂದರೆ, ಉದಾಹರಣೆಯೊಂದಿಗೆ ಹೇಳುತ್ತೇನೆ. ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಕಾವೇರಿ ಗಲಾಟೆ ಜೋರಾದಾಗ ಎಲ್ಲರ ವಾಟ್ಸಾಪಿನಲ್ಲಿ ಫಾರ್ವರ್ಡ್ ಒಂದು ಬಂದಿತ್ತು. ಅದರ ತಿರುಳು ಈ ಥರಾ ಇತ್ತು.
“ಅಪ್ಪಿ ತಪ್ಪಿ ಗಲಾಟೆಯಲ್ಲಿ ಇಮಗೆ ಪೆಟ್ಟು ಬಿದ್ದರೆ “ಅಮ್ಮಾ” ಎಂದು ಕೂಗಿಕೊಳ್ಳಬೇಡಿ, ಪೆಟ್ಟು ಬೀಳುವುದು ಮತ್ತಷ್ಟು ಹೆಚ್ಚಾದೀತು”.
ಹಾಸ್ಯ ಮನೋಭಾವದಲ್ಲಿ ನೋಡುವಾಗ ಒಮ್ಮೆ ನಕ್ಕು ಸುಮ್ಮನಾಗಬಹುದು. ಆದರೆ ಒಂದು ಗ್ರೂಪಿನಲ್ಲಿ ಈ ಫಾರ್ವರ್ಡ್ ಬಂದಿದ್ದೇ ಬಂದಿದ್ದು, ಮತ್ತೆಲ್ಲಾ ಗ್ರೂಪುಗಳಲ್ಲೂ ಇದೇ ಮತ್ತು ಇಂತಹುದೇ ಮೆಸ್ಸೇಜುಗಳ ಹಾವಳಿ. ಅದಕ್ಕಿಂತಲೂ ಕೋಪ ತರಿಸಿದ್ದು ಏನೆಂದರೆ ಕೆಲವರು ಒಂದೇ ಗ್ರೂಪಿನಲ್ಲಿ, ಅದಾಗಲೇ ಬಂದಿದ್ದ ಈ ಫಾರ್ವರ್ಡನ್ನು ಮತ್ತೆ ಲೇಟೆಸ್ಟ್ ಜೋಕಿನಂತೆ ಹಾಕುತ್ತಿದ್ದುದು. ಥತ್..!
ಹಾಗಂತ ಈ ಯಾವ ಗ್ರೂಪುಗಳನ್ನು ಬಿಡುವ ಹಾಗಿಲ್ಲ. ಇವುಗಳು ಬಿಸಿ ತುಪ್ಪವಿದ್ದಂತೆ, ನುಂಗುವ ಹಾಗೂ ಇಲ್ಲ, ಉಗುಳುವ ಹಾಗೂ ಇಲ್ಲ. ಯಾಕೆಂದರೆ ಆಗಲೇ ಹೇಳಿದಂತೆ ಬಹುತೇಕ ಈ ಗ್ರೂಪುಗಳನ್ನು ಸೃಷ್ಟಿಸಿದ್ದು ನಮ್ಮ ಸಂಬಂಧಿಕರೋ ಇಲ್ಲಾ ಸ್ನೇಹಿತರೋ ಆಗಿರುತ್ತಾರೆ. ಅದಕ್ಕೂ ಮೀರಿ ಗ್ರೂಪಿನಿಂದ ಎಕ್ಸಿಟ್ ಆದ್ರೆ “ಓಹ್.. ಇವ ಈಗ ದೊಡ್ಡ ಜನ ಆಗಿದ್ದಾನೆ” ಎನ್ನುವ ಮಾತನ್ನು ಕೇಳಬೇಕಾಗುತ್ತದೆ. ಕಡೇಗೆ “Mute-One year” ಆಪ್ಷನ್ ಒತ್ತಿ ಸುಮ್ಮನಾಗಬೇಕಾಗುತ್ತದೆ. ಮತ್ತೆ ಕೆಲವು ಗ್ರೂಪುಗಳ ಆಡ್ಮಿನ್ ನಾವೇ ಆಗಿರುತ್ತೇವೆ. ಅಲ್ಲಿ “ಅಸಂಬದ್ಧ ಮೆಸ್ಸೇಜುಗಳನ್ನು ಈ ಗ್ರೂಪಿನಲ್ಲಿ ಮಾಡಬೇಡಿ” ಎಂದು ಎಷ್ಟೇ ವಾರ್ನಿಂಗ್ ಕೊಟ್ಟರೂ ಒಂದೆರಡು ದಿನವಷ್ಟೇ, ಮೂರನೇ ದಿನ ಮತ್ತದೇ ರಿಪೀಟ್ ಆಗುತ್ತದೆ.
ವಾಟ್ಸಾಪ್, ಫೇಸ್ಬುಕ್ಕುಗಳೆಲ್ಲಾ ಇರುವುದು ನಮ್ಮೆಲ್ಲಾ ಸಕಾರಾತ್ಮಕ ಕೆಲಸಗಳಿಗೆಯೇ ಹೊರತು ಅಸಂಬದ್ಧ ಪ್ರಲಾಪಗಳಿಗಲ್ಲ. ಹಾಸ್ಯ, ಎಂಜಾಯ್’ಮೆಂಟ್’ಗಳೆಲ್ಲಾ ಬೇಕು. ಫೇಸ್ಬುಕ್ಕಿನ ಮೂಲಕ ಬ್ಯುಸಿನೆಸ್ ಮಾಡುವುದಾದರೂ ಓಕೆ. ಹಾಗಂತ ಸುಳ್ಳು ಸುದ್ದಿಯನ್ನು ಹಬ್ಬಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪ್ರಧಾನಿಗೆ ಮುಜುಗರವಾಗುವಂತೆ ಮಾಡಿದರೆ ಓಕೆಯಾ? ಲೈಕ್ ಗಿಟ್ಟಿಸುವ ಭರದಲ್ಲಿ ದೀಪಾ ಕರ್ಮಕಾರ್’ರಂತಹ ಹಾರ್ಡ್ ವರ್ಕಿಂಗ್ ಕ್ರೀಡಾಳುವಿಗೆ ಮುಜುಗರವಾಗುವಂತೆ ಮಾಡಿದರೆ ಓಕೆಯಾ? ಅಂತಹಾ ಸುದ್ದಿಗಳನ್ನು ಲೈಕಿಸುವ ಮುನ್ನ, ಶೇರ್ ಮಾಡುವ ಮುನ ನಾವೊಮ್ಮೆ ಅದರ ಅಧಿಕೃತತೆಯನ್ನು ಪರಿಶೀಲಿಸಬೇಕು. ವಿಜ್ಞಾನ ಎಷ್ಟೇ ಮುಂದುವರಿದರೂ ಅದರಲ್ಲಿ ಅಡ್ವಾಂಟೇಜ್ ಮತ್ತು ಡಿಸ್ ಅಡ್ವಾಂಟೇಜ್ ಎರಡೂ ಇರುತ್ತವೆ. ಆದರೆ ಅದನ್ನು ಹೇಗೆ ಬಳಸಿಕೊಳ್ಳಬೇಕೆನ್ನುವುದು ನಮ್ಮ ಕೈಯಲ್ಲಿದೆ. ಅಲ್ವಾ? ಏನಂತಿರಾ?