Featured ಅಂಕಣ

ಶಬರಿಮಲೈ ಮತ್ತು ಮಹಿಳಾ ಸಮಾನತೆ- 1

ಶನಿ ಶಿಂಗಣಾಪುರದಲ್ಲಿ ಸ್ತ್ರೀಯರ ಪ್ರವೇಶಕ್ಕಾಗಿ ಹೋರಾಡಿದವರು ಶನಿಯ ಭಕ್ತರಲ್ಲದಿದ್ದರೂ ಕೋರ್ಟಿನಲ್ಲಿ ಅವರ ಪರವಾಗಿ ತೀರ್ಪು ಬಂದಿದೆ. ಕೋರ್ಟಿನ ತೀರ್ಪಿಗೆ ಸ್ಥಳೀಯವಾಗಿ ಕೆಲ ಗ್ರಾಮಸ್ಥರ ವಿರೋಧದ ಹೊರತಾಗಿ ಅಲ್ಲಿ ದೊಡ್ಡಮಟ್ಟದಲ್ಲಿ ವಿರೋಧ ಎದುರಾಗಲಿಲ್ಲ. ಸ್ವಲ್ಪಮಟ್ಟಿಗಿನ ವಿರೋಧ ತೋರಿದ ಗ್ರಾಮಸ್ಥರನ್ನು ಹಾಗೂ ಭಕ್ತರನ್ನು ಆರ್ಟ್ ಆಫ್ ಲಿವಿಂಗ್ ಮತ್ತು ಆರ್ ಎಸ್ ಎಸ್  ಮಧ್ಯಸ್ಥಿಕೆ ವಹಿಸಿ ಬಾಯಿ ಮುಚ್ಚಿಸಿದವು. ಈ ರೀತಿ ಮಧ್ಯಸ್ಥಿಕೆ ವಹಿಸಿದ ಜನರಿಗೆ ಸ್ತ್ರೀಯರ ಪ್ರವೇಶ ಆ ನಿರ್ದಿಷ್ಟ ಜಾಗದಲ್ಲಿ ಯಾಕೆ ನಿಷಿದ್ಧ ಅನ್ನುವುದರ ಬಗ್ಗೆ ಸ್ವಲ್ಪವೂ ಮಾಹಿತಿಯೇ ಇರದೇ ಹೋದದ್ದು ದುರಾದೃಷ್ಟಕರ. ಅಥವಾ ಮಾಹಿತಿ ಇದ್ದರೂ ರಾಜಕೀಯ ಹಿತಾಸಕ್ತಿಗಾಗಿ ಜಾಣ ಮೌನ ವಹಿಸಿರಬಹುದು. ಆ ದೇವಸ್ಥಾನದ ನಿರ್ವಾಹಕರಿಗೆ/ಆಡಳಿತ ಮಂಡಳಿಗೆ “ಇಲ್ಲಿ ಸ್ತ್ರೀಯರ ನಿಷೇಧ ಯಾವ ಕಾರಣಕ್ಕೆ ಇದೆ” ಅಂತ ಸ್ಪಷ್ಟವಾಗಿ ವಿವರಿಸುವಷ್ಟು ಜ್ಞಾನವೂ ಇಲ್ಲದೇ ಹೋದದ್ದು ನಮ್ಮ ದೇವಸ್ಥಾನಗಳು ಎಂತಹ ಅಜ್ಞಾನಿಗಳ ಆಡಳಿತಕ್ಕೆ ಒಳಪಟ್ಟಿವೆ ಮತ್ತು ಎಷ್ಟು ವ್ಯಾವಹಾರಿಕ ಆಗಿವೆ ಅನ್ನುವುದಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ. ಶಬರಿಮಲೈ ದೇವಸ್ಥಾನದ ವಿಷಯದಲ್ಲಿಯೂ ತಾರ್ಕಿಕ ಮತ್ತು ಯುಕ್ತಿಯುತವಾದ ಕಾರಣವನ್ನು ನೀಡಲಿಕ್ಕೆ ಅಲ್ಲಿನ ಆಡಳಿತ ವಿಫಲವಾಗಿದೆ. ಋತುಸ್ರಾವ ಕಂಡು ಹಿಡಿಯುವ ಯಂತ್ರ ಬರುವವರೆಗೂ ಈ ನಿಷೇಧ ಮುಂದುವರೆಯುತ್ತದೆ ಅಂತ ಅಲ್ಲಿನ ಅರ್ಚಕರೊಬ್ಬರ ಹೇಳಿಕೆಗೆ ಆಕ್ರೋಶ ವ್ಯಕ್ತವಾಯ್ತು. ಆದರೆ ಋತುಸ್ರಾವಕ್ಕೂ ಪ್ರವೇಶಕ್ಕೂ ಏನು ಸಂಬಂಧ ಅಂತ ವಿವರಿಸುವಷ್ಟು ತಿಳುವಳಿಕೆ ಅಲ್ಲಿ ಕಂಡು ಬರಲಿಲ್ಲ. ಮೆಕಾಲೆ ಮಾದರಿಯಲ್ಲಿ ಶಿಕ್ಷಣ ಪಡೆದವರು ಇಂತಹ ದೇವಸ್ಥಾನಗಳ ಆಡಳಿತ ಮಂಡಳಿಯಲ್ಲಿ ಇರುತ್ತಾರಾದ್ದರಿಂದ ಅವರಿಂದ ಹಿಂದೂ ಶಾಸ್ತ್ರಗಳ ವಿದ್ವತ್ತು ನಿರೀಕ್ಷಿಸಲು ಆಗುವುದಿಲ್ಲ. ಹಿಂದೂ ಸಂಘಟನೆ ಅಂತ ಹೇಳಿಕೊಳ್ಳುವ ಯಾವ ಸಂಘಟನೆಯವರಿಗೂ ಹಿಂದೂ ಆಚರಣೆಗಳ ತಲೆ ಬುಡ ಗೊತ್ತಿಲ್ಲ. ನಿಜವಾದ ಹಿಂದೂಗಳನ್ನು ಮತ್ತು ವಿದ್ವಾಂಸರನ್ನು ಇಂತಹ ಸಂಘಟನೆಗಳು ದೂರವೇ ಇಡುತ್ತವೆ.

ಅನೇಕ ವರ್ಷಗಳಿಂದ ಸುದ್ದಿಯಲ್ಲಿರುವ ಶಬರಿಮಲೈ ದೇವಸ್ಥಾನದ ವಿಷಯದಲ್ಲಿ ಈ ಬಾರಿ ಕೆಲವರು ನಾಲಿಗೆಯನ್ನು ಹೆಚ್ಚೇ ಹರಿಬಿಟ್ಟಿದ್ದರಿಂದ ಕೇರಳದಲ್ಲಿ ಒಂದಷ್ಟು ಮಹಿಳಾ ಭಕ್ತರು ಕೆರಳಿ ನಿಂತಿದ್ದಾರೆ. “ನಾವು ನಮ್ಮ ದೇವಸ್ಥಾನಕ್ಕೆ ಹೋಗಬೇಕೋ ಬೇಡವೋ ಅನ್ನುವುದನ್ನು ನಾವು ನಿರ್ಧರಿಸ್ತೇವೆ. ನಮ್ಮ ಕೇರಳದಲ್ಲಿ ಶಬರಿಮಲೈ “ದೀಕ್ಷಾ ಮಾಲೆ”ಹಾಕಿದವರಿಗೆ ಹೆಂಗಸರೇ ಎಲ್ಲ ರೀತಿಯ ಏರ್ಪಾಡುಗಳನ್ನು ಸಹಕಾರವನ್ನು ಕೊಡ್ತಾರೆ. ಹಾಗೆಯೇ ಕೇವಲ ಹೆಂಗಸರಷ್ಟೇ ಆಚರಿಸುವ ಕೆಲ ಉತ್ಸವ ಮತ್ತು ಉಪಾಸನೆಗಳಲ್ಲಿ ಗಂಡಸರು ದೂರ ಉಳಿದು ಏರ್ಪಾಡುಗಳನ್ನು ಮಾಡಿ ಸಹಕರಿಸ್ತಾರೆ. ಕೇರಳದಾದ್ಯಂತ ನೂರಾರು ಅಯ್ಯಪ್ಪ ದೇವಳಗಳಿವೆ. ಅಲ್ಲಿಗೆ ಎಲ್ಲರೂ ಹೋಗ್ತಾರೆ. ಶಬರಿ ಮಲೈಗೆ ಮಾತ್ರ ಹೋಗೋದಿಲ್ಲ. ಇವೆಲ್ಲ ಶಾಸ್ತ್ರೀಯ ನಿಯಮಗಳ ಅನುಸಾರ ನಡೆಯುವ ಆಚರಣೆಗಳು. ರಿಲಿಜಿಯನ್’ಗಳನ್ನ ಅಳೆಯುವ ಮಾನದಂಡದ ಮೂಲಕ ನಮ್ಮನ್ನು ಮತ್ತು ನಮ್ಮ ದೇವಸ್ಥಾನಗಳನ್ನು ಅಳೆಯಬೇಡಿ. ನಮ್ಮ ಆಚರಣೆಗಳ ಸ್ವರೂಪ ಮತ್ತು ಉದ್ದೇಶವೇ ನಿಮಗೆ ಗೊತ್ತಿಲ್ಲ. ನಮ್ಮ ಪರವಾಗಿ ನೀವೇನು ಹೋರಾಟ ಮಾಡುವುದು ..? ಬೇಕಾಗಿಲ್ಲ. ನಿಮಗೆ ಇಂತಹ ಹೋರಾಟ ಮಾಡಲಿಕ್ಕೆ ಆರ್ಥಿಕ ಸಹಾಯ ಮಾಡ್ತಾ ಇರೋರು ಯಾರು ..? ಅವರ ಉದ್ದೇಶಗಳೇನು..? ನಮಗೆ ಯಾವುದು ಇಷ್ಟು ದಿನ ಲಿಂಗಾಧಾರಿತ ಅಪಮಾನ ಅಂತ ಅನ್ನಿಸಿಲ್ಲವೋ ಅದನ್ನು ಅಪಮಾನಕರ ಮತ್ತು ಮೂಢನಂಬಿಕೆ ಅಂತೆಲ್ಲ ಹೇಳಲಿಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದು ಯಾರು ? ನಮ್ಮ ಆಚರಣೆಗಳ ಬಗ್ಗೆ ನಿಮಗೆಷ್ಟು ಗೊತ್ತು ? ನಿಮ್ಮ ಹೋರಾಟದ ಹಿಂದೆ ಇರುವ ಉದ್ದೇಶವೇ ಬೇರೆ ಇದೆ” ಅಂತ ತಿರುಗಿಬಿದ್ದಿದ್ದಾರೆ. ಹೀಗೆ ತಿರುಗಿಬಿದ್ದವರು ಅನಕ್ಷರಸ್ಥ ಹೆಂಗಸರಲ್ಲ. ಯಾವುದೇ ಸಂಘ ಸಂಸ್ಥೆಗೆ ಸೇರಿದವರಲ್ಲ. ಸುಶಿಕ್ಷಿತ ಹಾಗೂ ಉದ್ಯೋಗಸ್ಥ ಮಹಿಳೆಯರು. ಯಾವುದೇ ಸಂಸ್ಥೆಗಳ ಸಹಕಾರವಿಲ್ಲದೇ ನಾಗರೀಕವಾದ ರೀತಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. ನಮ್ಮ ಆಚರಣೆಗಳಿಗೆ ಶಾಸ್ತ್ರೀಯ ಕಾರಣಗಳಿವೆ. ನಮ್ಮಲ್ಲಿ ಅದರ ಬಗ್ಗೆ ಶ್ರದ್ಧೆ ಇದೆ. ವಿದೇಶೀ ಹಣಬಲ ಮತ್ತು ದುರುದ್ದೇಶ ಪೂರಿತ ಕುಂತಂತ್ರ ಉಪಯೋಗಿಸಿಕೊಂಡು ನಮ್ಮ ದೇವಸ್ಥಾನದ ಮತ್ತು ನಮ್ಮ ಆಚರಣೆಯ ತಂಟೆಗೆ ಬರಬೇಡಿ ಅಂತ ಧ್ವನಿ ಎತ್ತಿದ್ದಾರೆ. ಯಥಾ ಪ್ರಕಾರ ನಮ್ಮ ಮುಖ್ಯವಾಹಿನಿಯ ಮಾಧ್ಯಮ ಮತ್ತು ಮೆಕಾಲೆ ಮಾದರಿ ಶಿಕ್ಷಣ ಹೊಡೆತಕ್ಕೆ ಶ್ರದ್ಧೆಯನ್ನು ಕಳೆದುಕೊಂಡಿರುವ ಸುಶಿಕ್ಷಿತ ಸಮೂಹ “ಇವರೆಲ್ಲ ಪಿತೃಸತ್ತಾತ್ಮಕ ವ್ಯವಸ್ಥೆಯ ಬಲಿಪಶುಗಳು,ಮೂರ್ಖರು” ಅಂತೆಲ್ಲ ಹೀಗಳೆಯತೊಡಗಿದ್ದಾರೆ.

ಸೆಮೆಟಿಕ್ ರಿಲಿಜಿಯನ್’ಗಳಲ್ಲಿ ಪ್ರವಾದಿಯ ಮಾತಿನ ಮೇಲೆ ಕುರುಡು ವಿಶ್ವಾಸದಿಂದ ಮಾಡುವ ಆಚರಣೆಗಳಿಗೂ ಭಾರತೀಯ ಶಾಸ್ತ್ರೀಯ ಆಚಾರಗಳಿಗೂ ನಡುವಿನ ವ್ಯತ್ಯಾಸವನ್ನು ನಮ್ಮ ಪತ್ರಕರ್ತರುಗಳು ಮತ್ತು ತಮ್ಮನ್ನು ತಾವು ಪ್ರೋಗ್ರಸ್ಸಿವ್ ಅಂತ ಭಾವಿಸುವ ಹಿಂದೂಗಳು ಇದುವರೆಗೆ ಅರ್ಥ ಮಾಡಿಕೊಂಡಿಲ್ಲ. Place of prayer ಮತ್ತು place of energised deity ಗೂ ವ್ಯತ್ಯಾಸವೇ ಗೊತ್ತಿಲ್ಲದ ಕಾರಣ ಶಬರಿಮಲೈ ಪ್ರಕರಣ ಕಗ್ಗಂಟಾಗಿ ಬೆಳೆದು ನಿಂತಿದೆ. ಹಾಗೆಯೇ ರಿಲಿಜಿಯನ್’ಗಳ ಏಕರೂಪಿ ಪ್ರಾರ್ಥನೆಗೂ ಭಾರತೀಯ ವೈದಿಕ ಉಪಾಸನಾ ವೈವಿಧ್ಯಕ್ಕೂ ನಡುವಿನ ವ್ಯತ್ಯಾಸ ಸುಶಿಕ್ಷಿತ ವರ್ಗಕ್ಕೆ ಗೊತ್ತೇ ಆಗುತ್ತಿಲ್ಲ. ಅದಕ್ಕೆ ಕಾರಣ ಯಥಾ ಪ್ರಕಾರ ನಮ್ಮ ಶಿಕ್ಷಣ ವ್ಯವಸ್ಥೆಯೆಂದೇ ಮತ್ತೆ ಹೇಳಬೇಕಾಗುತ್ತದೆ.

ದೇವಸ್ಥಾನ ಮತ್ತು ಪ್ರಾರ್ಥನಾ ಸ್ಥಳಗಳ ವ್ಯತ್ಯಾಸ

******************************************

ದೇವಸ್ಥಾನಗಳು ಮುಂಜಾನೆ ಎದ್ದು ಹೋಗಿ ದೇವರ ಪ್ರಾರ್ಥನೆ ಮಾಡಲಿಕ್ಕೆ ಇರುವ ಸ್ಥಳಗಳಲ್ಲ. ಪ್ರತಿನಿತ್ಯ ದೇವಸ್ಥಾನಕ್ಕೆ ಹೋಗಲೇಬೇಕೆಂಬ ನಿಯಮವೂ ಇಲ್ಲ. ತಮ್ಮ ತಮ್ಮ ಮನೆಯಲ್ಲಿ ನಿತ್ಯದ ಉಪಾಸನೆ-ಅಗ್ನಿಹೋತ್ರ ಇತ್ಯಾದಿ ಮಾಡುವ ಅನುಕೂಲ ಇಲ್ಲದ ವರ್ಣಕ್ಕೆ ಸೇರಿದವರು, ಯೋಗ ಸಾಧನೆ ಮುಂತಾದ ವೈಯಕ್ತಿಕ ಆಧ್ಯಾತ್ಮಿಕ ಸಾಧನೆ ತಿಳಿಯದವರು ಮಾತ್ರ ದೇವಸ್ಥಾನಕ್ಕೆ ಹೋಗ್ತಾರೆ.ಅದೂ ಪ್ರತಿ ನಿತ್ಯ ಹೋಗಲೇಬೇಕೆಂಬ ನಿಯಮವಾಗಲಿ, ಹೋಗದೇ ಇದ್ದರೆ ನೀನು ದೇವಸ್ಥಾನಕ್ಕೆ ಹೋಗುವುದಿಲ್ಲವೆಂಬ ಕಾರಣಕ್ಕೆ ನೀನು ಹಿಂದು ಅಲ್ಲ ಅಂತ ಮೂದಲಿಸುವುದಾಗಲಿ ಕಂಡು ಬರುವುದಿಲ್ಲ. ಮನೆಯಲ್ಲಿ ಮಾಡುವ ಪೂಜೆಯಲ್ಲಿಯೂ ದೇವರಿಗೆ ಹದಿನಾರು ಉಪಚಾರಗಳನ್ನು ಮಾಡಬೇಕೆಂಬ ನಿಯಮವಿದೆಯೇ ಹೊರತು ಪ್ರಾರ್ಥಿಸಬೇಕೆಂಬ ನಿಯಮವಿಲ್ಲ. ನಮ್ಮ ಅಸಂಖ್ಯ ಸ್ತೋತ್ರಾದಿಗಳಲ್ಲಿ ದೇವತಾ ಸ್ವರೂಪದ ಗುಣಗಳ ಸ್ತುತಿ ಇರುತ್ತದೆಯೇ ಹೊರತು ಯಾವುದೇ ಪ್ರಾರ್ಥನೆ ಇರುವುದಿಲ್ಲ. ಆ ಸ್ತೋತ್ರದ ಕೊನೆಯಲ್ಲಿ ಈ ಸ್ತೋತ್ರ ಪಠಣಕ್ಕೆ ಇಂತಹ ಫಲ ಅಂತ ತಿಳಿಸುವ ಫಲಶೃತಿ ಇರುತ್ತದೆಯೇ ಹೊರತು ಫಲದ ಬೇಡಿಕೆ ಸ್ತೋತ್ರದಲ್ಲಿರುವುದಿಲ್ಲ.

ದೇವಸ್ಥಾನದಲ್ಲಿ ಹೋದರೆ ದರ್ಶನ, ಪ್ರದಕ್ಷಿಣೆ ಮತ್ತು ತೀರ್ಥ ಸೇವನೆ ಮಾಡಬೆಕೆಂದು ಕಲಿಸಿಕೊಡುತ್ತಾರೆಯೇ ಹೊರತು ಪ್ರಾರ್ಥನೆಯನ್ನು ಯಾರೂ ಬೋಧಿಸುವುದಿಲ್ಲ. ಅಲ್ಲಿನ ಶಕ್ತಿವಲಯಕ್ಕೆ ಪ್ರದಕ್ಷಿಣಾಕಾರವಾಗಿ ಸುತ್ತು ಹಾಕಿ ಕೆಲ ಸಮಯ ಅಲ್ಲಿ ಕೂರಬೇಕು ಅನ್ನೋ ನಿಯಮ ಇದೆಯಷ್ಟೆ. ಆ ಶಕ್ತಿವಲಯದಲ್ಲಿ ಎಷ್ಟು ಹೆಚ್ಚು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಅಲ್ಲಿ ಕುಳಿತಿದ್ದು ಆಮೇಲೆ ಎದ್ದು ತಮ್ಮ ವೃತ್ತಿ ಕರ್ಮಗಳಿಗೆ ಹೋಗುವ ವಿಧಾನವಿದೆ. ಮಸೀದಿ, ಚರ್ಚುಗಳಲ್ಲಿ ಆಯಾ ಮತ-ಪ್ರವರ್ತಕರ ಬೋಧೆಗಳ ತರಬೇತಿ ಪಡೆದು ನಿಯೋಜಿತರಾದ ಪಾದ್ರಿ/ ಮೌಲ್ವಿಗಳಿರ್ತಾರೆ. ಅಲ್ಲಿ ಮತೀಯ ನಂಬಿಕೆಯ ಬೋಧನೆ ಅವರ ಕರ್ತವ್ಯ. ದೇವಸ್ಥಾನದ ಪೂಜಾರಿಗಳು ಯಾವುದೇ ಮತೀಯ ಜ್ಞಾನ ಹೊಂದಿರುವುದಿಲ್ಲ. ಮತ ಪ್ರಚಾರ ಮಾಡುವುದಿಲ್ಲ ಮತ್ತು ದರ್ಶನಕ್ಕೆ ಬಂದ ಜನರನ್ನು ಭೇಟಿ ಕೂಡ ಮಾಡುವುದಿಲ್ಲ.ಅರ್ಚಕರನ್ನು ಭೇಟಿ ಮಾಡಿ ಅವರ ಮಾತು ಕೇಳಬೇಕೆಂದು ಯಾವ ಭಕ್ತರೂ ಬಯಸುವುದಿಲ್ಲ. ದೇವಸ್ಥಾನಗಳಲ್ಲಿ ಮಾಡಲಿಕ್ಕಾಗಿ (ರಿಲಿಜಿಯನ್ ಗಳಲ್ಲಿ ಇರುವಂತೆ) ಯಾವುದೇ ನಿರ್ದಿಷ್ಟ ಪ್ರಾರ್ಥನಾ ವಿಧಾನವೇ ಇಲ್ಲ. ದೇವಸ್ಥಾನಗಳು ತಂತ್ರ-ಯಂತ್ರ ಮತ್ತು ಮಂತ್ರ ಈ ಮೂರನ್ನು ಉಪಯೋಗಿಸಿ ಪ್ರಭಾವಲಯವನ್ನು ಉಂಟು ಮಾಡಿರೋ ಜಾಗಗಳು. ತಂತ್ರಾಗಮ,ವೈದಿಕಾಗಮ ಮುಂತಾಗಿ ಇಫ್ಫತ್ತೇಳು ಪ್ರಕಾರದ ಆಗಮ ವಿಧಾನಗಳಿವೆ. ವೈಖಾನಸ, ಕಪಾಲ,ಪಾಶುಪತ, ಶೈವಾಗಮ, ಸೌರಾಗಮ,ಗಾಣಾಪತ್ಯಾಗಮ, ಪಾಂಚರಾತ್ರ ಆಗಮ ಇತ್ಯಾದಿಗಳು ರೂಢಿಯಲ್ಲಿವೆ. ಇನ್ನೂ ಅಸಂಖ್ಯ ಆಗಮಗಳಿದ್ದು ಅವೆಲ್ಲ ಲುಪ್ತವಾಗಿವೆ ಅಂತ ತಿಳಿದವರು ಹೇಳ್ತಾರೆ. ಹಾಗೆ ಆಗಮದ ತಂತ್ರಗಳನ್ನು ಉಪಯೋಗಿಸಿ ವಿಗ್ರಹ ಪ್ರತಿಷ್ಠೆ ಮಾಡುವಾಗ ಆ ವಿಗ್ರಹದ ಬುಡದಲ್ಲಿ ಪಾದರಸ, ಕೆಲವೊಂದು ರತ್ನಗಳು, ಶಕ್ತಿಯುತವಾದ ಯಂತ್ರಗಳು ಮುಂತಾದವನ್ನು ಸ್ಥಾಪಿಸ್ತಾರೆ. ನಿರ್ದಿಷ್ಟ ಬೀಜಮಂತ್ರಗಳ ಪ್ರಯೋಗದ ಮೂಲಕ ಆ ಯಂತ್ರಗಳಲ್ಲಿ ಶಕ್ತಿಯನ್ನು ತುಂಬ್ತಾರೆ. ಹಾಗೆ ಶಕ್ತಿಯನ್ನು ತುಂಬುವವರು ಆ ಮಂತ್ರಗಳನ್ನು ವರ್ಷಾನುಗಟ್ಟಲೇ ಅನುಷ್ಠಾನ ಮಾಡಿರಬೇಕಾಗುತ್ತದೆ. ಪ್ರತಿಷ್ಠೆಯಾದ ಮೇಲೆ ಆಯಾ ದೇವಸ್ಥಾನಗಳಲ್ಲಿ ಆ ಶಕ್ತಿಯನ್ನು ಉಳಿಸಿಕೊಂಡು ಹೋಗಲಿಕ್ಕೆ ನಿರ್ದಿಷ್ಟ ನಿಯಮಗಳನ್ನ ಪಾಲಿಸ್ತಾರೆ. ಒಂದೊಂದು ದೇವಸ್ಥಾನ ಒಂದೊಂದು ಉದ್ದೇಶಕ್ಕಾಗಿ ಕಟ್ಟಿದ್ದಾರೆ. ಹಾಗಾಗಿಯೇ ಆ ದೇವಸ್ಥಾನಕ್ಕೆ ಹೋದ್ರೆ ಇಂಥಾ ಪ್ರಯೋಜನ, ಈ ದೇವಸ್ಥಾನಕ್ಕೆ ಹೋದ್ರೆ ಇಂಥಾ ಪ್ರಯೋಜನ ಮುಂತಾಗಿ ಪ್ರಯೋಜನಗಳಲ್ಲಿಯೂ ವೈವಿಧ್ಯ ಇದೆ. ಈ ಪ್ರಯೋಜನಗಳೇ ಸ್ಥಳ ಮಹಿಮೆ ಎನ್ನಿಸಿಕೊಂಡಿವೆ.

 

ಮಾನವ ಶರೀರ ಮತ್ತು ದೇವಸ್ಥಾನ ನಿರ್ಮಾಣ

***************************************

ಮಾನವನ ಶರೀರದಲ್ಲಿ ಐವತ್ತು ಟ್ರಿಲಿಯನ್ ಗೂ ಹೆಚ್ಚು ಜೀವಾಣುಗಳಿರುವ ಸಂಗತಿ ಎಲ್ಲರಿಗೂ ತಿಳಿದದ್ದೇ. ಒಂದು ಜೀವಾಣು ನಾಶವಾದ ಕೂಡಲೇ ಅದರ ಜಾಗದಲ್ಲಿ ಮತ್ತೊಂದು ಜೀವಾಣು ಹುಟ್ಟಿಕೊಳ್ಳುತ್ತಲೇ ಇರುತ್ತದೆ . ಹೀಗೆ ಶರೀರದ ಎಲ್ಲ ಜೀವಾಣುಗಳ renewal ಹನ್ನೆರಡು ವರ್ಷಕ್ಕೊಮ್ಮೆ ಪೂರ್ಣವಾಗುತ್ತದೆ. ಆ ಕಾರಣಕ್ಕಾಗಿಯೇ ಆಯುರ್ವೇದದಲ್ಲಿ ಹನ್ನೆರಡು ವರ್ಷಗಳ ಔಷಧಿಯ ಕೋರ್ಸ್ ಇದೆ. ಹನ್ನೆರಡು ವರ್ಷ ಪ್ರತಿದಿನ ಕೆಲ ಔಷಧಿಗಳನ್ನು ಸೇವಿಸುವ ನಿಯಮ ಇದೆ. ಆ ಹನ್ನೆರಡು ವರ್ಷಗಳಲ್ಲಿ ದೇಹದಲ್ಲಿ ಹುಟ್ಟುವ ಎಲ್ಲ ಹೊಸ ಜೀವಾಣುಗಳೂ ಆ ಔಷಧಿಯ ಪರಿಣಾಮ ಹೊಂದುವುದರಿಂದ ಹನ್ನೆರಡು ವರ್ಷಗಳ ನಂತರ ಹಳೆಯ ದೇಹ ಹೋಗಿ ಹೊಸ ದೇಹವೇ ನಿರ್ಮಾಣವಾದಂತಾಗುತ್ತೆ. ಯೋಗ ಸಾಧಕರು ಭೂತ ಶುದ್ಧಿಯನ್ನು ಹಾಗೂ ಕೆಲ ಕ್ರಿಯೆಗಳನ್ನು ಹನ್ನೆರಡು ವರ್ಷಗಳ ಕಾಲ ನಿರಂತರವಾಗಿ ಮಾಡ್ತಾರೆ. ಹನ್ನೆರಡು ವರ್ಷ ಭೂತಶುದ್ಧಿ ಮಾಡುವುದರಿಂದ ಹಳೆಯ ಕರ್ಮದ ಪದರುಗಳೆಲ್ಲ ನಶಿಸಿ ಆ ಹನ್ನೆರಡು ವರ್ಷಗಳಲ್ಲಿ ಹುಟ್ಟಿರುವ ಜೀವಾಣುಗಳು ಹೊಸದೇ ಆದ ದೇಹವನ್ನು ನಿರ್ಮಾಣ ಮಾಡಿಕೊಳ್ತವೆ. ಉಪನಯನದಲ್ಲಿ ವಟುವಿಗೆ ಹನ್ನೆರಡು ವರ್ಷಗಳ ಕಾಲ ಬ್ರಹ್ಮಚರ್ಯವನ್ನು ಪಾಲಿಸು (ದ್ವಾದಶ ವರ್ಷಾಣಿ ವೇದ ಗ್ರಹಣಾಂತಂ ವಾ ಬ್ರಹ್ಮಚರ್ಯಮ್ ಕುರು) ಅಂತ ವ್ರತಾದೇಶವನ್ನು ಮಾಡ್ತಾರೆ. ವಿವಾಹಕ್ಕೂ ಮುಂಚಿನ ಈ ಹನ್ನೆರಡು ವರ್ಷಗಳ ವ್ರತ ಆತನಲ್ಲಿ ಒಂದು ಬದಲಾವಣೆಯನ್ನು ಉಂಟು ಮಾಡುತ್ತದೆ. ಆತ ಹುಟ್ಟಿನಿಂದ ತಂದೆ ತಾಯಿಯರಿಂದ ಪಡೆದುಕೊಂಡು ಬಂದ ಬೀಜಗತ ಮತ್ತು ಗರ್ಭಗತ ವಿಕಾರಗಳಿಂದ ಮುಕ್ತನಾಗಿ ಹೊಸ ಜನ್ಮ ಪಡೀತಾನೆ.

ಯಾವುದೇ ಮಂತ್ರಾನುಷ್ಠಾನದ ಉಪದೇಶ ನೀಡುವಾಗ ಈ ಮಂತ್ರವನ್ನು 48 ದಿನಗಳ ಕಾಲ ನಿರ್ದಿಷ್ಟ ಸಂಖ್ಯೆಯಲ್ಲಿ ಜಪ ಮಾಡಲೇಬೇಕು ಮತ್ತು ಇಂತಿಂತಹ ನಿಯಮಗಳನ್ನು ಪಾಲಿಸಬೇಕು ಅಂತ ನಿರ್ದೇಶಿಸ್ತಾರೆ. 48 ದಿನಗಳಿಗೆ ಒಂದು “ಮಂಡಲ”ಎಂಬ ಹೆಸರಿದೆ. ಪ್ರತಿ 48 ದಿನಗಳಿಗೊಮ್ಮೆ ಸ್ಥೂಲ ಶರೀರ ಮತ್ತು ಸೂಕ್ಷ್ಮ ಶರೀರದಲ್ಲಿ ಬದಲಾವಣೆಗಳಾಗ್ತವೆ. ಅದೇ ರೀತಿ ಪ್ರತೀ 48ನಿಮಿಷಗಳಿಗೊಮ್ಮೆ ನಮ್ಮ ಉಸಿರಾಟದ ಪ್ರಕ್ರಿಯೆ ಬದಲಾಗ್ತದೆ. ಮೂಗಿನ ಎಡಭಾಗದ “ಇಳಾ”ನಾಡಿಯಿಂದ ಉಸಿರಾಡುತ್ತಿರುವ ದೇಹ 48ನಿಮಿಷಗಳ ನಂತರೆ ಸ್ವತಃ ಮೂಗಿನ ಬಲಭಾಗದ“ಪಿಂಗಳಾ” ನಾಡಿಗೆ ಬದಲಾಗ್ತದೆ. ಆರೋಗ್ಯವಂತ ಶರೀರ ಉಳ್ಳವರು ತಮ್ಮ ಮೂಗಿನ ಹೊಳ್ಳೆಯ ಬಳಿ ಬೆರಳು ಇಟ್ಟು ಯಾವ ನಾಡಿಯಿಂದ ಉಚ್ಛ್ವಾಸ ಆಗ್ತಾ ಇದೆ ಅನ್ನೋದನ್ನು ಗಮನಿಸಿ 48 ನಿಮಿಷಗಳ ನಂತರ ಸರಿಯಾಗಿ ಮತ್ತೆ ಪರೀಕ್ಷಿಸಿದರೆ ಉಚ್ಛ್ವಾಸ ನಡೆಯುತ್ತಿರುವ ನಾಡಿ ಬದಲಾದದ್ದು ಗೊತ್ತಾಗುತ್ತದೆ. ಈ ನಾಡಿಗಳ ಬದಲಾವಣೆಯಿಂದಾಗಿಯೇ ರಾತ್ರಿ ಹೊತ್ತು ಗಾಢ ನಿದ್ದೆಯಲ್ಲಿದ್ದಾಗಲೂ ಪ್ರತೀ ನಲವತ್ತು ಅಥವಾ ನಲವತ್ತೈದು ನಿಮಿಷಗಳಿಗೊಮ್ಮೆ“ಮಗ್ಗುಲು ಬದಲಾಯಿಸುವುದು”. ನಿದ್ದೆಯಲ್ಲಿ ಯಾರೂ ಉದ್ದೇಶ ಪೂರ್ವಕವಾಗಿ ಮಗ್ಗುಲು ಬದಲಿಸುವುದಿಲ್ಲ. ನಾಡಿಗಳ ಉಸಿರಾಟ ಬದಲಾದಂತೆ ಶರೀರ ತಾನಾಗಿಯೇ ತನ್ನ positionಅನ್ನು ಬದಲಾಯಿಸುತ್ತದೆ.

ಹಾಗೆಯೇ ಆಗಮದ ತಂತ್ರಗಳ ಮೂಲಕ ದೇವಸ್ಥಾನವನ್ನು ಮನುಷ್ಯ ಶರೀರ ನಿರ್ಮಾಣ ಮಾಡುವಂತೆ ತತ್ಸಮಾನವಾದ ವಿನ್ಯಾಸದಲ್ಲಿ ಮಾಡಿ ಅದರಲ್ಲಿ ಕೆಲ ವಿಧಾನಗಳ ಮೂಲಕ ಜೀವ ತುಂಬಿರ್ತಾರೆ. ಹನ್ನೆರಡು ವರ್ಷಗಳಿಗೊಮ್ಮೆ ಅದು ನಿಸ್ತೇಜವಾಗಿ ಹೋಗುವುದರಿಂದ ಹನ್ನೆರಡು ವರ್ಷಕ್ಕೊಮ್ಮೆ ಕುಂಭಾಭಿಷೇಕದ ಮೂಲಕ ಮತ್ತೆ ಪುರುಜ್ಜೀವನ ಮಾಡ್ತಾರೆ. ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ಆದ ಮೇಲೆ “ಒಂದು ಮಂಡಲ”ದ ಕಾಲ ಅಂದರೆ 48ದಿನಗಳ ಕಾಲ ತ್ರಿಕಾಲ ಪೂಜೆ, ಬಲಿಹರಣ, ಕೌತುಕ ಬಂಧನ, ಕಲಾಕರ್ಷಣೆ ಮುಂತಾದ ಕೆಲವೊಂದು ನಿಯಮಗಳನ್ನು ಪಾಲಿಸ್ತಾರೆ. ಮಾನವ ಶರೀರಕ್ಕೆ ಪೋಷಣೆ ಮತ್ತು ಧಾರಣೆಗೆ ಹೇಗೆ ಪ್ರತೀ ದಿನ ಆಹಾರಾದಿಗಳು ಬೇಕೋ ಹಾಗೆಯೇ ದೇವಸ್ಥಾನದಲ್ಲಿ ಸನ್ನಿಧಿ ಉಳಿಯಲು ಪ್ರತಿನಿತ್ಯದ ನಿಯಮಗಳು ಬೇಕು. ಮನುಷ್ಯ ದೇಹವನ್ನು ನೋಡಿಕೊಂಡಂತೆಯೇ ದೇವರ ಸನ್ನಿಧಿಯನ್ನು ನೋಡಿಕೊಳ್ಳಬೇಕು. ನೋಡಿಕೊಳ್ಳುವುದು ಅಂದರೆ ಕೇವಲ ಭಾವನಾತ್ಮಕವಾಗಿ ಅಲ್ಲ. (ಹರಿಹರಪುರದ ನರಸಿಂಹನಿಗೆ ಪ್ರತಿ ದಿನ ಹದಿನಾರು ಸೇರು ಅನ್ನದ ನೈವೇದ್ಯ ನಡೆಯಲೇಬೇಕು. ಆ ಅನ್ನದ ಪ್ರಸಾದ ಉಣ್ಣುವವರು ಯಾರೂ ಇಲ್ಲದೇ ವ್ಯರ್ಥವಾದರೂ ಆ ಹದಿನಾರು ಸೇರು ಪ್ರಮಾಣವನ್ನು ಎಂದಿಗೂ ಕಡಿಮೆ ಮಾಡುವುದಿಲ್ಲ. ಅಲ್ಲಿಯ ವಿಗ್ರದ ಪ್ರತಿಷ್ಠೆ ಮಾಡಿದ ವಿಧಾನಕ್ಕೆ ಅನುಗುಣವಾಗಿ ಆ ಪ್ರಾಣಶಕ್ತಿಯನ್ನು ಉಳಿಸಲಿಕ್ಕೆ ಅಷ್ಟು ಮಾಡಲೇಬೇಕು. ಇಂತಹ ಉದಾಹರಣೆಗಳು ಸಾವಿರಾರು ಇವೆ.) ಹೀಗೆ ಮಾನವ ಶರೀರ ನಿರ್ಮಾಣ ಹೇಗೆ ಇರುತ್ತದೆಯೋ ಅದರಂತೆಯೇ ಯಜ್ಞ ಪ್ರಕ್ರಿಯೆಯಲ್ಲಿ “ಯಾಗ ಶಾಲಾ” ನಿರ್ಮಾಣ ಮಾಡ್ತಾರೆ. ಆ ಯಾಗಶಾಲೆಯ ವಿನ್ಯಾಸದಂತೆಯೇ ಆಗಮವು ದೇವಸ್ಥಾನದ ವಿನ್ಯಾಸವನ್ನು ನಿರ್ಧಾರ ಮಾಡಿದೆ.

aagama

ಒಂದೊಂದು ದೇವಸ್ಥಾನಗಳೂ ಒಂದೊಂದು ರೀತಿಯ ಪ್ರಯೋಜನಕ್ಕಾಗಿ ನಿರ್ಮಾಣ ಮಾಡಿದ್ದಾರೆ ಎಂದು ಈ ಮುಂಚೆ ಹೇಳಿದೆನಷ್ಟೇ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಇಂತಿಂತಹ ಜ್ಯೋತಿರ್ಲಿಂಗಕ್ಕೆ ಹೋಗಿ ದರ್ಶನ ಪಡೆದರೆ ಇಂತಿಂತಹ ಫಲ ಅಂತ ಹೇಳುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂಥದ್ದೇ. ಅದನ್ನೇ ಜನರು ಆಡು ಭಾಷೆಯಲ್ಲಿ “ಸ್ಥಳ ಮಹಿಮೆ” ಅಂತಾರೆ. ಜ್ಯೋತಿರ್ಲಿಂಗಗಳಿಗೆ ಮಾತ್ರವಲ್ಲದೆ ಹಳ್ಳಿಗಾಡಿನ ಸಣ್ಣ ಪುಟ್ಟ ದೇವಾಲಯಗಳಲ್ಲಿಯೂ ಇದು ಕಂಡು ಬರುತ್ತದೆ. ಕೆಲ ದೇವಸ್ಥಾನಗಳಲ್ಲಿ ರಾತ್ರಿ ಹೊತ್ತು ಮಲಗಿ ಎದ್ದು ಬರುವ ನಿಯಮಗಳಿವೆ. ಹೊಸದುರ್ಗದ ಬಳಿ ಇರುವ ವೀರ ಪ್ರತಾಪ ಆಂಜನೇಯನ ಪ್ರಾಕಾರದಲ್ಲಿ ಹುಣ್ಣಿಮೆಯ ರಾತ್ರಿ ಮಲಗಲಿಕ್ಕಾಗಿಯೇ ದೂರದೂರುಗಳಿಂದ ಜನ ಬರ್ತಾರೆ. ಹುಣ್ಣಿಮೆಯ ರಾತ್ರಿ ಅಲ್ಲಿ ಮಲಗಿ ಎದ್ದು ಹೋಗುವ ಜನ ಅನೇಕ ರೋಗರುಜಿನಗಳಿಂದ ಮುಕ್ತರಾಗ್ತಾರೆ. ಈ ರೀತಿಯಾದ ಅನೇಕ ಪ್ರಕಾರದ ಸ್ಥಳ ಮಹಿಮೆಯ ಪರಿಣಾಮದಿಂದ ಪ್ರಯೋಜನವನ್ನು ಕೋಟ್ಯಂತರ ಭಾರತೀಯರು ಇಂದಿಗೂ ಪಡೆಯುತ್ತಲೇ ಇದ್ದಾರೆ. ಭೌಗೋಳಿಕವಾಗಿ ದೇವಸ್ಥಾನ ಇರುವ ಜಾಗ,(latitude and longitude), ದೇವಸ್ಥಾನದಲ್ಲಿ ವಿಗ್ರಹ ಪ್ರತಿಷ್ಠೆ ಮಾಡಲಾದ ವಿಧಾನ, ಅಲ್ಲಿ ಬಳಸಿದ ವಸ್ತುಗಳು,ಯಂತ್ರ, ದೇವಸ್ಥಾನದ ವಿನ್ಯಾಸ, ವಿಗ್ರಹದ ಕೆಳಗೆ ಹುದುಗಿ ಇಡಲಾದ ರತ್ನಗಳು, ಕಲ್ಲುಗಳು, ಯಂತ್ರ,ಮಂತ್ರ ಶಕ್ತಿಯ ಪರಿಣಾಮ ಇವೆಲ್ಲ ಸೇರಿ ಸ್ಥಳ ಮಹಿಮೆಯನ್ನು ಉಂಟು ಮಾಡ್ತವೆ. ಆ ಶಕ್ತಿಯ ಸರಿಯಾದ ನಿರ್ವಹಣೆ ಮತ್ತು ಭಕ್ತನ ಹೃದಯದಲ್ಲಿನ ಭಾವನೆ ಇವು ಪೂರಕವಾಗಿ ಕೆಲಸ ಮಾಡ್ತವೆ.

ಯಾವ ಉದ್ದೇಶದ ಸಾಧನೆಗೆ ಯಾವ ತಂತ್ರ, ಯಾವ ಯಂತ್ರ ಮತ್ತು ಯಾವ ಮಂತ್ರ , ಎಷ್ಟು ದೊಡ್ಡ ವಿಗ್ರಹಕ್ಕೆ ಎಷ್ಟು ಪ್ರಮಾಣದ ಪ್ರಾಕಾರ, ಯಾವ ವಿನ್ಯಾಸ, ಪ್ರತಿಷ್ಠೆಯ ವಿಧಾನ ಹೇಗೆ, ಪ್ರತಿಷ್ಠೆ ಆದ ಮೇಲೆ ನಿತ್ಯ ವಿಧಿಗಳೇನು, ನಿತ್ಯೋತ್ಸವ, ಪಕ್ಷೋತ್ಸವ,ಮಾಸೋತ್ಸವ, ಸಂವತ್ಸರೋತ್ಸವ ಹೇಗೆ ಮಾಡಬೇಕು ಇತ್ಯಾದಿ ವಿವರಗಳನ್ನು ಮಂತ್ರಶಾಸ್ತ್ರ,ಆಗಮ, ಮತ್ತು ತಂತ್ರಶಾಸ್ತ್ರಗಳ ಮೂಲಕ ತಿಳಿಯಬಹುದು. ಅದೆಲ್ಲ ಇಲ್ಲಿ ವಿವರಿಸುವಷ್ಟು ಸರಳವಾದ ವಿಷಯವಲ್ಲ. ಭಕ್ತಿ ಪರಂಪರೆ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಕೇವಲ ಭಕ್ತಿಯ ಸೌಕರ್ಯಕ್ಕಾಗಿ ಕೆಲ ದೇವಸ್ಥಾನಗಳು ನಿರ್ಮಾಣವಾಗಿವೆ. ಮೊಹಮ್ಮದನ ಮತದವರು ದೇವಸ್ಥಾನಗಳನ್ನು ಒಡೆದು ಹಾಕಿದ ನಂತರ ಅವುಗಳನ್ನು ಪುನರ್ನಿರ್ಮಾಣ ಮಾಡುವ ಗಡಿಬಿಡಿಯಲ್ಲಿ ನಮ್ಮವರು ಯಾವುದೇ ಆಗಮ ನಿಯಮಗಳನ್ನು ಪಾಲಿಸಿಲ್ಲ. ಇಚ್ಛೆ ಮತ್ತು ಆಗಿನ ಅನುಕೂಲಕ್ಕೆ ತಕ್ಕಂತೆ ಕಟ್ಟಿದ್ದಾರೆ. ಇತ್ತೀಚೆಗೆ ನೂರು ವರ್ಷಗಳಲ್ಲಿ ಕಟ್ಟಿರುವ ದೇವಸ್ಥಾನಗಳಲ್ಲಿಯೂ ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ಹಾಗಾಗಿ ಅಲ್ಲಿ ಯಾವುದೇ ವಿಶೇಷ ನಿಯಮಗಳಿಲ್ಲ. ಹಾಗಾಗಿ ಅವು ಕೇವಲ ಪ್ರಾರ್ಥನೆ ಪೂಜೆ ಮಾಡುವ ಜಾಗಗಳಾಗಿವೆ. ಆದರೆ ವೈಜ್ಞಾನಿಕವಾಗಿ ನಿರ್ದಿಷ್ಟ ಉದ್ದೇಶಕ್ಕಾಗಿ ಕಟ್ಟಿದ ದೇವಸ್ಥಾನಗಳಲ್ಲಿ ಅವುಗಳದ್ದೇ ಆದ ನಿಯಮಗಳಿರ್ತವೆ. ಆ ನಿಯಮಗಳನ್ನು ನಿಲ್ಲಿಸಿದರೆ ಅದು ಸಾನ್ನಿಧ್ಯ ಕಳೆದುಕೊಂಡು ಸಾಮಾನ್ಯ ಭಕ್ತಿಯ ಅನುಕೂಲಕರ ಪ್ರಾರ್ಥನಾ ಸ್ಥಳವಾಗಿ ಬದಲಾಗ್ತದೆ.

ಕೇರಳ ತಮಿಳು ನಾಡುಗಳಲ್ಲಿ ತಂತ್ರಶಾಸ್ತ್ರದ ಮತ್ತು ಆಗಮದ ಅನುಸಾರ ಕಟ್ಟಿರುವ ದೇವಸ್ಥಾನಗಳಲ್ಲಿ ಇನ್ನೂ ಕೆಲವು ಸುರಕ್ಷಿತವಾಗಿ ಉಳಿದುಕೊಂಡಿವೆ. ಅಂಥವುಗಳಲ್ಲಿ ಶಬರಿಮಲೆಯೂ ಒಂದು. ಅಲ್ಲಿ ಯಾವ ರೀತಿಯಿಂದ ವಿಗ್ರಹ ಪ್ರತಿಷ್ಠೆ ಮಾಡಿದ್ದಾರೆ. ಅದರ ಪರಿಣಾಮಗಳೇನು ಮತ್ತು ಅದರ ಶಕ್ತಿಯ ಎಷ್ಟು ಉಳಿದುಕೊಂಡಿದೆ ಅನ್ನೋದನ್ನು ಯಾವುದಾದರೂ ಸಿಧ್ಧ ಪುರುಷರು, ಅಥವಾ ತಾಂತ್ರಿಕ ಉಪಾಸನೆ ಮಾಡುವವರು ಕಂಡು ಹಿಡಿಯಬಲ್ಲರು.

# ಮುಂದುವರೆಯುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Dattaraj D

ದತ್ತರಾಜ್ ಹುಟ್ಟಿದ್ದು 1986, ಧಾರವಾಡ ಜಿಲ್ಲೆಯ ಕುಗ್ರಾಮವೊಂದರಲ್ಲಿ. ಬೆಳೆದದ್ದು ಆಂಧ್ರಪ್ರದೇಶ ತಮಿಳು ನಾಡು ಮಹಾರಾಷ್ಟ್ರ ಮುಂತಾದೆಡೆ. ಶಾಲಾ ಕಾಲೇಜುಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಿಲ್ಲ. ಮೌಖಿಕ ಗುರುಶಿಷ್ಯ ಪರಂಪರೆಯಲ್ಲಿ ಋಗ್ವೇದವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದಾರೆ. ಬೀದರ್ ಜಿಲ್ಲೆಯ ಕೇಂದ್ರ ಸರ್ಕಾರದ ಅನುದಾನಿತ ಗುರುಕುಲದಲ್ಲಿ ಋಗ್ವೇದ ಅದ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಉದ್ಯೋಗ ತ್ಯಜಿಸಿ ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಗೆಳೆಯರ ಜೊತೆ ಸೇರಿ ಕಟ್ಟಡ ನಿರ್ಮಾಣ ಸಂಸ್ಥೆ ನಡೆಸುತ್ತಾರೆ. ಕನ್ನಡ, ತೆಲುಗು, ಹಿಂದೀ ಮತ್ತು ಸಂಸ್ಕೃತ ಭಾಷೆಗಳಲ್ಲಿ ಬರವಣಿಗೆ ಮಾಡುತ್ತಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!