Featured ಅಂಕಣ

ಶಬರಿಮಲೈ ಮತ್ತು ಮಹಿಳಾ ಸಮಾನತೆ- 2

ಶನಿ ಶಿಂಗನಾಪುರ, ಉಜ್ಜಯಿನಿಯ ಭೈರವನ ದೇವಸ್ಥಾನ, ಕಾಮಾಕ್ಯ ಮುಂತಾದವುಗಳು ವಾಮ ಮಾರ್ಗ, ಕೌಲ ಮಾರ್ಗ ಮುಂತಾದ ತಾಮಸಿಕ ತಂತ್ರಗಳ ಮೂಲಕ ವಾಮಾಚಾರ ನಡೆಯುವ ಜಾಗಗಳು. ಆ ಕಾರಣಕ್ಕಾಗಿ ಅಲ್ಲಿ ಪಶುಬಲಿ, ವಿಗ್ರಹದ ಮೇಲೆ ಎಣ್ಣೆ ಸುರಿಯುವುದು, ಮದ್ಯ ಮಾಂಸ ನೈವೇದ್ಯ ಮುಂತಾದ ಆಚರಣೆಗಳು ಇರುತ್ತವೆ.  ಶನಿ ಶಿಂಗನಾಪುರದಲ್ಲಿ ಯಾವುದೇ ಆಗಮ ಪ್ರಕಾರ ನಿರ್ಮಿಸಿದ ದೇವಸ್ಥಾನ ಇಲ್ಲ. ಅದು ಯಾರೋ ಕೌಲ ಮಾರ್ಗದ ತಾಂತ್ರಿಕರು ತಮ್ಮ ಸಾಧನೆಗೆ ಅನುಕೂಲಕ್ಕಾಗಿ ಇಟ್ಟುಕೊಂಡು ಒಂದು ಕಲ್ಲಿನ ದೇವಸ್ಥಾನ. ಅದು ಶನಿಯ ದೇವಸ್ಥಾನ ಅನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ. ಬಹುಶಃ ಅದು ಭೈರವನ ಕಲ್ಲಾಗಿರಬಹುದು. ಆ ಊರಿನಲ್ಲಿ ಕಳ್ಳತನ ಮಾಡಿದರೆ ಕಣ್ಣು ಕುರುಡಾಗ್ತವೆ ಅನ್ನುವ ಕಾರಣಕ್ಕೆ ಯಾರೂ ಮನೆಗಳಿಗೆ ಬಾಗಿಲನ್ನೂ ಹಾಕುವುದಿಲ್ಲ ಅನ್ನುವ ಕಥೆಗಳು ಎಲ್ಲೆಡೆ ಪ್ರಸಿದ್ಧ. ಈ ರೀತಿ ಒಬ್ಬರ ಕಣ್ಣು ಕಾಣದಂತೆ ಮಾಡುವುದು ಯಕ್ಷಿಣೀ ವಿದ್ಯೆಯ ಭಾಗ. ಯಕ್ಷಿಣೀ, ಧೂಮ್ರಾಕ್ಷಿ ಮುಂತಾದ ತಾಮಸಿಕ ದೈವಗಳ ಸಿದ್ಧಿಯನ್ನು ಪಡೆಯುವ ಬಯಕೆ ಇರುವವರು ಗುಪ್ತವಾದ ಜಾಗಗಳಲ್ಲಿ ಇರ್ತಾರೆ. ಇನ್ನು ನವಗ್ರಹಗಳಿಗೆ ದೇವಸ್ಥಾನ ಕಟ್ಟುವ ವಿಧಾನವೇ ವೈದಿಕಾಗಮದಲ್ಲಿ ಇಲ್ಲ. ಹೀಗಾಗಿಯೇ ಯಾವುದೆ ಪ್ರಾಚೀನ ನವಗ್ರಹ ದೇವಸ್ಥಾನ ಎಲ್ಲಿಯೂ ಕಂಡು ಬರುವುದಿಲ್ಲ. ಇತ್ತೀಚಿನ ನವಗ್ರಹಗಳ ವಿಗ್ರಹ ಪ್ರತಿಷ್ಠೆ ಮಾಡುವ ಪ್ರಥೆ ಕಂಡು ಬರುತ್ತಿದೆ. ಆದರೆ ಎಲ್ಲಿಯೂ ಬಿಡಿ ಬಿಡಿಯಾಗಿ ಒಂದೊಂದು ಗ್ರಹವನ್ನೂ ಒಂದೊಂದು ದೈವವಾಗಿ ಪ್ರತಿಷ್ಠಾಪಿಸಿಲ್ಲ. ಸಮಷ್ಟಿಯಾಗಿ ಒಂಭತ್ತೂ ವಿಗ್ರಹಗಳನ್ನು ಒಟ್ಟಿಗೆ ಪ್ರತಿಷ್ಠಾಪಿಸಿದ್ದಾರೆ. ಗ್ರಹಗಳಿಗೆ ದೇವತಾ ಸ್ಥಾನ ಇಲ್ಲವೇ ಇಲ್ಲ. ಗ್ರಹದೋಷಗಳಿದ್ದಾಗ ಗಣಪತಿ, ದುರ್ಗೆ ಸುಬ್ರಮಣ್ಯ ಇತ್ಯಾದಿ ದೇವತಾರಾಧನೆಯನ್ನು ಹೇಳುತ್ತಾರೆಯೇ ಹೊರತು ಗ್ರಹಗಳ ಪೂಜೆ ಹೇಳುವುದಿಲ್ಲ. ಕರ್ಮಕಾಂಡದ ಹೋಮ ಹವನಾದಿಗಳಲ್ಲಿ ಗ್ರಹಾರಾಧನೆ ಇದೆ.  ಒಂಭತ್ತು ಗ್ರಹಗಳು, ಎಂಟು ದಿಕ್ಪಾಲಕರು ಮತ್ತು ಕ್ರತು ಸಾದ್ಗುಣ್ಯ ಉಂಟು ಮಾಡುವ ಏಳು ದೇವತೆಗಳು ಇವೆಲ್ಲ ಒಟ್ಟಿಗೇ ಇರುತ್ತವೆ.   ನೇರವಾಗಿ ಒಂದೊಂದೇ ಗ್ರಹದ ಉಪಾಸನೆ ಮತ್ತು ಶನಿ ದೇವಸ್ಥಾನ ಇವೆಲ್ಲ ತೀರ ಇತ್ತೀಚಿನ Distortion ಗಳು.  ಹಾಗೆ ಒಂದೇ ಗ್ರಹವನ್ನು ದೇವತಾ ಸ್ಥಾನಕ್ಕೇರಿಸಿ ವಿಗ್ರಹ ಸ್ಥಾಪಿಸಿ ಪೂಜಿಸುವ ವಿಧಾನವೇ ಅಶಾಸ್ತ್ರೀಯವಾದದ್ದು.

ಶನಿ ಶಿಂಗನಾಪುರದಲ್ಲಿರುವ ಶನಿಯ ಮೂರ್ತಿ ಕೆತ್ತನೆ ಮಾಡಿದ ಮೂರ್ತಿಯಲ್ಲ. ಊರ ಬಳಿಯ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಕಲ್ಲೊಂದರಲ್ಲಿ ರಕ್ತ ಸುರಿಯುತ್ತಿತ್ತು. ಅದರಲ್ಲಿ ರಕ್ತ ಜಿನುಗುತ್ತಿದ್ದದ್ದನ್ನು ನೋಡಿ ಯಾರೋ ದಂಡೆಗೆ ಎಳೆದು ಊರಿನಲ್ಲಿ ತಂದು ಸ್ಥಾಪನೆ ಮಾಡಿದರು ಅನ್ನೋ ಸ್ಥಳ ಪುರಾಣ ಅಲ್ಲಿದೆ. ಹೊಳೆಯಲ್ಲಿ ಕಲ್ಲು ಕೊಚ್ಚಿಕೊಂಡು ಹೋಗುವುದೇ ಅತಾರ್ಕಿಕವಾದ ಕಥೆ. ಇನ್ನು ರಕ್ತ ಜಿನುಗುವ ಸಂಗತಿ ನಿಜವಿದ್ದದ್ದಿರಬಹುದು. ಏಕೆಂದರೆ ಅದು ಯಾರೋ ಯಾವುದೋ ತಾಂತ್ರಿಕ ಕರ್ಮಗಳಿಗೆ ಬಲಿ ಕೊಡಲಿಕ್ಕಾಗಿ ಉಪಯೋಗಿಸುತ್ತಿದ್ದ “ಬಲಿಕಲ್ಲು” ಆಗಿರಬಹುದು. ಅಥವಾ ಭೈರವನ ಕಲ್ಲಾಗಿರಬಹುದು. ಭೈರವ ಚೌಡಿ ಮುಂತಾದ ಗ್ರಾಮದೇವತೆಗಳ ಮೇಲೆ ರಕ್ತ ತರ್ಪಣ ಅತ್ಯಂತ ಸಹಜವಾದದ್ದು. ಈ ಎಲ್ಲ ಕಾರಣಗಳಿಗಾಗಿ ಶನಿ ಶಿಂಗನಾಪುರದಲ್ಲಿ ಶನಿಗ್ರಹದ ದೇವಸ್ಥಾನ ಎನ್ನುವ ವಿಷಯವೇ ಸಂಶಯಾಸ್ಪದವಾಗ್ತದೆ. ಅದು ಶನಿಯಾಗಿರದೇ ಯಾವುದೇ ಯಕ್ಷಿಣೀ ದೇವತೆಯಾಗಿತ್ತು ಅನ್ನೋದನ್ನು ಊಹಿಸಬಹುದಾಗಿದೆ. ಅಲ್ಲಿ ಹೋಗುವ ಜನ ಪಡೆಯುತ್ತಿರುವ ಪ್ರಯೋಜನಗಳು, ಅಲ್ಲಿ ವಿಗ್ರಹದ ಮೇಲೆ ಎಣ್ಣೆ ಸುರಿಯುವ ವಿಧಾನ, ಕಳ್ಳತನ ಮಾಡಿದವರಿಗೆ ಕಣ್ಣು ಹೋಗುವುದು ಇತ್ಯಾದಿಗಳನ್ನು ಗಮನಿಸಿದರೆ ಗ್ರಾಮವನ್ನು ಕಳ್ಳತನದಿಂದ ರಕ್ಷಣೆ ಮಾಡಲಿಕ್ಕೆ ಯಾರೋ ಸಿದ್ಧಪುರುಷರು ಹುಟ್ಟು ಹಾಕಿದ ಶಕ್ತಿಕೇಂದ್ರವಾಗಿರಬಹುದು ಅಥವಾ ಕ್ಷುದ್ರ ಸಾಧನೆಗಳು ನಡೆಯುವ ಜಾಗವಾಗಿರಲೂ ಬಹುದು. ಈ ಎರಡರಲ್ಲಿ ಯಾವುದು ನಿಜವಾದರೂ ಅದು ವಾಮಾಚಾರವೇ. ವಾಮ ಮಾರ್ಗದಲ್ಲಿ ಬಲಿ ನೀಡುವುದು ಸಹಜ.

ಪಶು ಬಲಿ ಮತ್ತು ಕಾನೂನು ನಿಷೇಧ:

“ದೈವ” ಎಂದರೆ ಎನರ್ಜಿಯೇ ಆಗಿದೆ. ಅಂತಹ ಸಮಯದಲ್ಲಿ ತಮ್ಮ ದೇಹದಲ್ಲಿ ಮಂತ್ರಗಳ ಮೂಲಕ ಪ್ರಾಣಗಳನ್ನು ಉದ್ದೀಪನಗೊಳಿಸಿಕೊಳ್ಳುವುದರ ಜೊತೆಗೆ ಇತರೆ ಜೀವಗಳನ್ನು ಕೂಡ substitute ಆಗಿ ಬಳಸ್ತಾರೆ. ಅಂದರೆ ಇತರೆ ಜೀವಗಳ ಬಲಿ ನೀಡುವುದರ ಮೂಲಕ ಆ ದೇಹಗಳಿಂದ ಹೊರ ಬರುವ ಪ್ರಾಣಶಕ್ತಿ ಆ ಸ್ಥಳದಲ್ಲಿ ಇರುವುದರಿಂದ ಅದು ಅವರಿಗೆ ಸಹಕಾರಿಯಾಗಿ ಕೆಲಸ ಮಾಡ್ತದೆ. ದುರ್ಗಿ ಚೌಡಿ ಮುಂತಾದ ಗ್ರಾಮದೇವತೆಗಳು ಇಂತಹ ಶಕ್ತಿಕೇಂದ್ರಗಳೇ ಆಗಿರ್ತವೆ. ಆ ಸ್ಥಳಗಳಲ್ಲಿ ಮತ್ತೊಂದು ಜೀವವನ್ನು ಬಲಿ ಕೊಟ್ಟಾಗ ಆ ಬಲಿಪಶುವಿನ ದೇಹದ ಪ್ರಾಣ ಆ ದೈವದ ಸ್ಥಳವನ್ನು ಇನ್ನೂ ಹೆಚ್ಚು ಪ್ರಾಣಶಕ್ತಿಯುತವಾಗಿ ಮಾಡುತ್ತದೆ. ಈ ಕಾರಣಕ್ಕಾಗಿಯೇ ಪ್ರಾಣಿಗಳನ್ನು ದೇವತೆಗಳ ಮುಂದೆ ಬಲಿ ನೀಡುವುದು. ಶ್ರೀಚಕ್ರ ಉಪಾಸನೆ ಮಾಡುವವರಲ್ಲಿ ರಕ್ತತರ್ಪಣ ವಿಧಾನವನ್ನು ಅನುಸರಿಸುವವರೂ ಇದ್ದಾರೆ. ಅದೂ ಕೂಡ Excessive ಪ್ರಾಣ ಶಕ್ತಿಯ ಪ್ರಯೋಗಕ್ಕಾಗಿಯೇ. ಋತು ಚಕ್ರದ ಕಾಲದಲ್ಲಿ ಸ್ರವಿಸುವ ರಕ್ತದಲ್ಲಿ ಪ್ರಾಣ ಶಕ್ತಿ ಮತ್ತು ಜೀವಕಣಗಳು ಹೇರಳವಾಗಿರ್ತವೆ. ಹಾಗಾಗಿ ಋತುಸ್ರಾವದ ರಕ್ತವನ್ನು ಯಂತ್ರದ ಮೇಲೆ ಸುರಿಯುವುದೂ ಕೂಡ ತಾಮಸಿಕ ತಂತ್ರಗಳಲ್ಲಿ ಕಂಡು ಬರುವ ವಿಧಾನ. ಪ್ರಾಣ ಶಕ್ತಿ ಹೆಚ್ಚಿರುವ ಮಕ್ಕಳು ಮತ್ತು ಗರ್ಭಿಣಿಯರನ್ನು ಬಲಿ ಕೊಡುವ ಉದ್ದೇಶವೂ ತಮ್ಮ ಉದ್ದೇಶ ಪೂರ್ತಿಗಾಗಿ. ಹೀಗೆ ಬೇರೊಬ್ಬ ಮನುಷ್ಯರಿಗೆ ಹಾನಿಯನ್ನು ಮಾಡಿ ತಮ್ಮ ಕ್ಷುದ್ರ ಬಯಕೆಗಳಿಗಾಗಿ ಸಿದ್ಧಿಗಳಿಗೆ ಬಯಸುವುದು ನ್ಯಾಯಸಮ್ಮತ ಮತ್ತು ಧಾರ್ಮಿಕವಲ್ಲದ ಕಾರಣ ಗುಪ್ತವಾಗಿ ಮಾಡುವವರು ಕಂಡು ಬರ್ತಾರೆ. ಈ ಪ್ರಾಣ ಶಕ್ತಿಯ ಬಳಕೆ ವೈದಿಕ ವಿಧಾನಗಳಲ್ಲಿ ನ್ಯಾಯಯುತವಾಗಿ ಕಂಡು ಬರ್ತದೆ. ಬೂದುಗುಂಬಳ ಕಾಯಿ ನಿಂಬೆ ಹಣ್ಣು ತೆಂಗಿನ ಕಾಯಿ ಮುಂತಾದವುಗಳಲ್ಲಿಯೂ ಮಾನವ  ಮತ್ತು ಪಶುಗಳ ಶರೀರದಲ್ಲಿರುವಂತೆಯೇ ಪ್ರಾಣಶಕ್ತಿ ಅಧಿಕವಾಗಿರ್ತದೆ. ಹಾಗಾಗಿ ಕುಂಬಳಕಾಯಿ ಒಡೆಯುವ ಪದ್ಧತಿ ಇದೆ. ತೆಂಗಿನ ಕಾಯಿಯನನ್ನು ದೇವರ ಸನ್ನೀಧಿಯ ಮುಂದೆ ಒಡೆಯುವುದರಿಂದ ಆ ಕಾಯಿಯಿಂದ ಬಿಡುಗಡೆ ಹೊಂದುವ ಪ್ರಾಣಶಕ್ತಿ ಆ ಸ್ಥಳದಲ್ಲಿ ಪ್ರಬಲವಾಗ್ತದೆ. ಹಾಗೆ ನೋಡಿದರೆ ನರಬಲಿಗೂ ತೆಂಗಿನ ಕಾಯಿ ಒಡೆಯುವುದಕ್ಕೂ technical ಆಗಿ ವ್ಯತ್ಯಾಸವೇನಿಲ್ಲ. ಆದರೆ ನರಬಲಿ ಧರ್ಮವಲ್ಲ. ಲಾಭಕಾರಿಯಾದರೂ ಧರ್ಮಸಮ್ಮತವಲ್ಲ ಎನ್ನುವ ಕಾರಣಕ್ಕೆ ನರಬಲಿ ನಿಂದ್ಯ. ಇನ್ನು ಪಶುಬಲಿಯ ವಿಚಾರಕ್ಕೆ ಬಂದರೆ ಆಹಾರಕ್ಕಾಗಿ ಪಶುಗಳನ್ನು ಕೊಲ್ಲುವುದು ನಡೆಯುತ್ತಲೇ ಇದೆ. ಆಹಾರಕ್ಕಾಗಿಯೇ ಕೊಲ್ಲುವುದು ಅಂತಾದ ಮೇಲೆ  ಅದರಿಂದ ನಷ್ಟವಾಗುವ ಪ್ರಾಣಶಕ್ತಿಯನ್ನು ಒಂದು ದೈವದ ಸಾನ್ನಿಧ್ಯ ಹೆಚ್ಚಿಸಲಿಕ್ಕೆ ಉಪಯೋಗಿಸುವುದು ನ್ಯಾಯಯುತವಾದದ್ದೇ. ಈ ಕಾರಣಕ್ಕೆ ಮಾಂಸಾಹಾರ ನಿಷೇಧ ಆಗುವವರೆಗೂ ಪಶುಬಲಿ ನಿಷೇಧ ಅತಾರ್ಕಿಕವಾಗ್ತದೆ. ಮಾಂಸವನ್ನು ತಿನ್ನುವ ವ್ಯಕ್ತಿ ಅದನ್ನು ಕೇವಲ ತನ್ನ ಆಹಾರವಾಗಿ ಭಾವಿಸದೇ ದೇವರಿಗೆ ಬಲಿ ನೀಡಿದ ಪ್ರಸಾದ ಅಂತ ತಿನ್ನುವದರಿಂದ ಅದರಲ್ಲಿ ಸ್ವಲ್ಪವಾದರೂ ಪವಿತ್ರ ಭಾವನೆಯಿಂದ ತಿನ್ನುತ್ತಾನೆ. ಈ ಭಾವನೆಯೇ ಮನುಷ್ಯನನ್ನು evolve ಮಾಡುತ್ತದೆ. ತಾನು ಉಣ್ಣಲಿಕ್ಕಾಗಿ ಅಂತ ಅನ್ನ ಮಾಡಿಕೊಳ್ಳುವುದಕ್ಕೂ ದೇವರ ನೈವೇದ್ಯಕ್ಕೆ ಅಂತ ಪವಿತ್ರ ಭಾವನೆಯಿಂದ ಅಡುಗೆ ಮಾಡಿಕೊಂಡು ಉಣ್ಣುವುದಕ್ಕೂ ವ್ಯತ್ಯಾಸವಿದೆಯಲ್ಲವೇ?

Goat sacrifice, Ambubachi Mela, Kamakhya Mandir, Guwahati

Goat sacrifice, Ambubachi Mela, Kamakhya Mandir, Guwahati

ಮಾಂಸಾಹಾರ ಮಾಡದೇ ಇರುವವರು ತೆಂಗಿನ ಕಾಯಿ ಒಡೆಯುವುದು, ಬೂದುಗುಂಬಳಕಾಯಿ ಒಡೆಯುವುದು, ನಿಂಬೆ ಹಣ್ಣು ಕತ್ತರಿಸಿ ಇಡುವುದು ಇತ್ಯಾದಿಗಳ ಮೂಲಕ ಪ್ರಾಣಿಬಲಿಯಿಂದ ಉಂಟಾಗುವ ಪರಿಣಾಮವನ್ನೇ ಉಂಟು ಮಾಡ್ತಾರೆ. ಆದರೆ ಅದರ ಪರಿಣಾಮದ ತೀವ್ರತೆ ಮತ್ತು ಉದ್ದೇಶಗಳಲ್ಲಿ ವ್ಯತ್ಯಾಸವಿರುತ್ತದೆಯಷ್ಟೇ.

kamakhya-temple

ಈ ಎಲ್ಲದರ ಹಿನ್ನೆಲೆಯಲ್ಲಿ ನೋಡುವಾಗ ತಮ್ಮ ಪ್ರಯೋಜನಕ್ಕಾಗಿ ಬೇರೆಯವರಿಗೆ ಹಾನಿಯುಂಟಾದರೂ ಸರಿ ತಮ್ಮ ಲಾಭ ತಮಗೆ ಮುಖ್ಯ ಎಂದು ಅಧಾರ್ಮಿಕ ಆಕಾಂಕ್ಷೆಗಳನ್ನು ಹೊಂದಿರುವರು ಸಮಾಜದಲ್ಲಿ ಇರುವುದು ಸಹಜವೇ.  ಅಂಥವರು ಋತುಮತಿಯರಾದ ಸ್ತ್ರೀಯರ ರಕ್ತ, ಚಿಕ್ಕ ವಯಸ್ಸಿನ ಮಕ್ಕಳು ಸಿಕ್ಕರೆ ಅವರನ್ನು ಅಪಹರಿಸಿ ತಮ್ಮ ಕ್ಷುದ್ರ ಕಾಮನೆಗಳಿಗೆ ಬಲಿಯಾಗಿ ಬಳಸಿಕೊಳ್ಳುವ ಸಂಭವ ಇರುತ್ತದೆ. ಹಾಗಾಗಿ ಊರ ಹೊರಗಿನ ಆಲದ ಮರದ ಕೆಳಗೋ, ಬೇವಿನ ಮರದ ಕೆಳಗೋ ಇರುವ ಯಾವುದೋ ಚೌಡಿ ದುರ್ಗೆ ಮುಂತಾದ ಸ್ಥಳಗಳ ಬಳಿಗೆ ಮಕ್ಕಳು ಮತ್ತು ಹೆಂಗಸರು ಒಂಟಿಯಾಗಿ ಹೋಗದಂತೆ ಜಾಗ್ರತೆ ವಹಿಸುವುದು ಭಾರತದ ಎಲ್ಲ ಪ್ರಾಂತಗಳಲ್ಲಿ ಕಂಡು ಬರುತ್ತದೆ. ಕೆಲವೊಂದು ನಿರ್ದಿಷ್ಟ ದಿನಗಳಲ್ಲಿ ಊರಿನ ಜನರೆಲ್ಲ ಸಾಮೂಹಿಕವಾಗಿ ಅಲ್ಲಿಗೆ ಹೋಗಿ ಬರುವ ಸಂಪ್ರದಾಯಗಳಿದ್ದರೂ ಒಂಟಿಯಾಗಿ ಅಂತಹ ಜಾಗಗಳಿಗೆ ಹೆಂಗಸರು ಮತ್ತು ಮಕ್ಕಳು ಹೋಗದಂತೆ ತಡೀತಾರೆ.

ಶನಿ ಶಿಂಗನಾಪುರ ವಾಮಾಚಾರ ನಡೆಯುವ ಜಾಗವೆಂಬುದರಲ್ಲಿ ಯಾವುದೇ ಸಂಶಯಗಳಿಲ್ಲ. ಆದರೆ ಈಗ ಅಲ್ಲಿ ಅದೆಲ್ಲ ನಡೆಯುವುದು ನಿಂತಿರಬಹುದು. ಶನಿ ಎಂಬ ಹೆಸರಲ್ಲಿ ಅದು ಪ್ರಸಿಧ್ಧಿ ಪಡೆದು ಜನಜಂಗುಳಿಯಿಂದ ತುಂಬಿ ಹೋಗಿರಬಹುದು. ಆದರೆ ಮೂವತ್ತು ವರ್ಷಗಳ ಹಿಂದೆ ನೋಡಿದರೆ ಅದೊಂದು ನಿರ್ಜನ ಪ್ರದೇಶವಾಗಿತ್ತು.  ಇದೆಲ್ಲ ರಹಸ್ಯ ಬಾಯಿ ಬಿಟ್ಟರೆ ಇದು ವಾಮಾಚಾರದ ಜಾಗ ಅಂತ ಹೇಳಿಬಿಟ್ಟರೆ ಈಗ ಶನಿ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಕ್ಷೇತ್ರದ ಬುಡವೇ ಅಲುಗಾಡಿ ಹೋಗುತ್ತದೆ.

ಈ ವಾಮಾಚಾರಿಗಳಿಂದ ರಕ್ಷಣೆಯ ಉದ್ದೇಶ  ಮಾತ್ರವಲ್ಲದೇ ಸ್ತ್ರೀಯರು ಹೋಗದಂತೆ ತಡೆಯುವುದಕ್ಕೆ  ಅಂತಹ ಜಾಗಗಳಲ್ಲಿನ ಊರ್ಜೆಯ ಪರಿಣಾಮವೂ ಮತ್ತೊಂದು ಆಯಾಮವಾಗಿದೆ.

ಸ್ಥೂಲ ದೇಹ, ಸೂಕ್ಷ್ಮ ಶರೀರ-ಅದರ ಮೇಲೆ ದೇವಸ್ಥಾನದಲ್ಲಾಗುವ ಪರಿಣಾಮ:

ಮಾನವ ದೇಹದಲ್ಲಿ ದೇಹದಲ್ಲಿ ಸ್ಥೂಲ ದೇಹ, ಸೂಕ್ಷ್ಮ ದೇಹ ಮತ್ತು ಕಾರಣ ದೇಹ ಎಂಬ ಮೂರು ವಿಭಾಗಗಳಿವೆ. ಆಧುನಿಕ ಭೌತಿಕ ವಿಜ್ಞಾನ ಮತ್ತು ಅದರ ಆಧಾರದಲ್ಲಿ ಹುಟ್ಟಿಕೊಂಡ ಅಲೋಪತಿ ವೈದ್ಯ ವಿಧಾನ ಕೇವಲ ಸ್ಥೂಲದೇಹವನ್ನು ಮಾತ್ರ ಗುರುತಿಸುತ್ತದೆ ಮತ್ತು ಸ್ಥೂಲ ದೇಹದ ಚಿಕಿತ್ಸಾ ಕ್ರಮಗಳು ಮಾತ್ರ ವೈಜ್ಞಾನಿಕ ಎನಿಸಿಕೊಂಡಿವೆ. ಯೂರೋಪಿಯನ್ ವಿಶ್ವವಿದ್ಯಾಲಯಗಳು ಯಾವುದನ್ನು ಮೆಡಿಕಲ್ ಸೈನ್ಸ್ ಅಂತ ನೂರಾರು ವರ್ಷಗಳ ಹಿಂದೆ ಒಪ್ಪಿಕೊಂಡಿದ್ದವೋ ಕೇವಲ ಅದರ ಆಧಾರದ ಮೇಲೆ ಭೌತಿಕ ಶರೀರದ ವಿಜ್ಞಾನ ಮತ್ತು ಚಿಕಿತ್ಸಾ ವಿಧಾನಗಳಿವೆ. ಇದು ಎಷ್ಟು “ಅಪರಿಪೂರ್ಣ ವಿಜ್ಞಾನ” ಅನ್ನೋದನ್ನು ಡಾ: ಬಿ. ಎಮ್. ಹೆಗಡೆ ಯವರಂತಹ ವಿಜ್ಞಾನಿಗಳು ಆಧಾರ ಸಹಿತವಾಗಿ ವಿವರಿಸ್ತಾರೆ.

ಅನ್ನಮಯ ಕೋಶ , ಪ್ರಾಣಮಯ ಕೋಶ , ಮನೋಮಯ ಕೋಶ , ವಿಜ್ಞಾನಮಯ ಕೋಶ ಮತ್ತು ಆನಂದಮಯ ಕೋಶ ಎಂಬ ಐದು ಕೋಶಗಳಿವೆ.ಸ್ಥೂಲ ದೇಹವನ್ನು ಉಪನಿಷತ್ತುಗಳು ಮತ್ತು ಯೋಗಶಾಸ್ತ್ರವು ಅನ್ನಮಯ ಕೋಶ ಅಂತ ಗುರುತಿಸುತ್ತದೆ.  ಪ್ರಾಣಮಯ ಮತ್ತು ಮನೋಮಯ ಕೋಶಗಳೇ ಸೂಕ್ಷ್ಮ ಶರೀರ. ವಿಜ್ಞಾನಮಯ ಕೋಶ ಮತ್ತು ಆನಂದಮಯ ಕೋಶಗಳು ಕಾರಣ ಶರೀರ. ಇನ್ನು ಈ ಸೂಕ್ಶ್ಮ ದೇಹವನ್ನೇ ಯೋಗ, ರೇಖಿ ಮುಂತಾದ ಪದ್ಧತಿಗಳಲ್ಲಿ aura ಅಂತ ಗುರುತಿಸ್ತಾರೆ.  ಸೂಕ್ಷ್ಮ ಶರೀರ ಅಥವಾ ಈ aura ದಲ್ಲಿ ಏಳು ಹಂತಗಳನ್ನು ಗುರುತಿಸ್ತಾರೆ. ಅವು ಒಂದಕ್ಕೊಂದು ಪೂರಕವಾಗಿರ್ತವೆ. ಸೂಕ್ಷ್ಮ ಶರೀರ ಅನೇಕ ರೀತಿಯ ಏರಿಳಿತಳಿಗೆ ಒಳಪಡುತ್ತಿರುತ್ತದೆ. ಸ್ಥೂಲ ದೇಹದಲ್ಲಾಗುವ ಬದಲಾವಣೆಗಳು ಸೂಕ್ಷ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತವೆಯೋ ಹಾಗೆಯೇ ಸೂಕ್ಷ್ಮ ದೇಹದ ಮೇಲಾಗುವ ಆಘಾತಗಳು ಸ್ಥೂಲ ದೇಹಕ್ಕೂ ಹಾನಿಯನ್ನುಂಟು ಮಾಡ್ತವೆ. ಹಳ್ಳಿಗಾಡಿನಲ್ಲಿ ಗಾಳಿ ಬಡಿಯೋದು, ದೃಷ್ಟಿ ಆಗೋದು ಇತ್ಯಾದಿಯಾಗಿ ಹೇಳ್ತಾರೆ. ಅವರು ಈ ಸ್ಥೂಲ ಮತ್ತು ಸೂಕ್ಷ್ಮ ದೇಹಗಳ ಸಂಪೂರ್ಣ ವಿವರ ಗೊತ್ತಿಲ್ಲದೇ ಹಾಗಂತಾರೆ.

ಹಾಗೆ ಮಾಡುವುದರಿಂದ   ಕಾಲಾಂತರ ಅಲ್ಲಿನ ತಾಮಸಿಕ ತೇಜೋವಲಯ ಋತುಮತಿಯರಾದ ಸ್ತ್ರೀಯರ ಸೂಕ್ಷ್ಮ ದೇಹಕ್ಕೆ ಹಾನಿಕಾರಕ. ಕೇವಲ ಕೆಲ ದೇವಸ್ಥಾನಗಳು ಮಾತ್ರವಲ್ಲ. ಸ್ತ್ರೀಯರು ಮತ್ತು ಮಕ್ಕಳು ಸ್ಮಾಶನಕ್ಕೆ ಹೋಗದಂತೆ ತಡೆಯುವುದೂ ಕೂಡ ಅವರ ರಕ್ಷಣೆಯ ದೃಷ್ಟಿಯಿಂದಲೇ. ಮೊದಲ ಬಾರಿ ಋತುಮತಿಯಾದಾಗ “ಹಸಿ ಮೈ” ಇರುತ್ತದೆ ಅನ್ನುವ ಕಾರಣಕ್ಕೆ ಅರಿಶಿನ ಮತ್ತು ಎಣ್ಣೆಯಿಂದ ಅಭ್ಯಂಜನ ಮಾಡಿಸಿ ಹೊರಗೆ ಹೆಚ್ಚು ತಿರುಗಾಡಲು ಬಿಡುವುದಿಲ್ಲ. ಮದುವೆಯ ನಂತರ ಶೋಭನ ನಡೆದ ಮೇಲೂ ಕೂಡ “ಹಸೀ ಮೈ” ಅನ್ನುವ ಕಾರಣಕ್ಕೆ ಹೊಸ ಮದುಮಕ್ಕಳನ್ನು ಹೊರಗೆ ತಿರುಗಾಡಲು ಕಳಿಸುವುದಿಲ್ಲ. ಆಂಧ್ರದ ಕೆಲ ಪ್ರಾಂತಗಳಲ್ಲಿ “ಪದಹಾರು ರೋಜುಲ ಪಂಡಗ” ಅಂತ ಮಾಡ್ತಾರೆ. ಶೋಭನ ನಡೆದ ಹದಿನಾರು ದಿನಗಳ ವರೆಗೆ ಮದುಮಕ್ಕಳಿಬ್ಬರೂ ಹೆಣ್ಣಿನ ತವರು ಮನೆಯಲ್ಲಿಯೇ ಇರುತ್ತಾರೆ. ಆ ಸಮಯದಲ್ಲಿ ಪ್ರಯಾಣ ನಿಷಿದ್ಧ. ಪ್ರತಿನಿತ್ಯ ಅಭ್ಯಂಜನ ಮತ್ತು ನಿರ್ದಿಷ್ಟ ಪ್ರಕಾರದ ತಿಂಡಿ ತಿನಿಸುಗಳ ನಿಯಮ ವಿರುತ್ತದೆ.

ಹೆರಿಗೆ ಆದ ಹೆಂಗಸರನ್ನೂ ಕೂಡ “ದೃಷ್ಟಿ ಆಗ್ತದೆ” ಮೈ ಹಸಿಯಾಗಿರುತ್ತೆ ಇತ್ಯಾದಿ ಕಾರಣ ಹೇಳಿ ಬಾಣಂತಿ ಆರೈಕೆ ಸಮಯದಲ್ಲಿ ಹೊರಗೆ ತಿರುಗಾಡಲು ಬಿಡುವುದಿಲ್ಲ. ಸ್ತ್ರೀ ಶರೀರದಲ್ಲಿ ನಿರ್ದಿಷ್ಟ ಸಮಯದಲ್ಲಿ ಆಗುವ ಬದಲಾವಣೆಗಳಿಂದಾಗಿ ಆಕೆಯ ಸೂಕ್ಷ್ಮ ಶರೀರ delicate ಆಗಿರುತ್ತದೆ. ಸೂಕ್ಷ್ಮವಾಗಿರುವ ಅವರ aura ಕೆಲ ಜಾಗಗಳ ಪ್ರಭಾವಕ್ಕೆ ಒಳಗಾಗಿ ಗಾಳಿ ಬಡಿಯದಿರಲಿ ಅಂತ.  ಹಾಗೆ ತಾಮಸಿಕ ಜಾಗಗಳಲ್ಲಿ ತಿರುಗಾಡಿ ಗಾಳಿ ಬಡಿಸಿಕೊಂಡವರಿಗೆ ಬೇವಿನ ಮರದ ಎಲೆಗಳಿಂದ ಚಿಕಿತ್ಸೆ ಮಾಡ್ತಾರೆ. ಹಸಿರು ಬೇವಿನ ಎಲೆಗಳಲ್ಲಿ ಅತಿ ಹೆಚ್ಚು ಪ್ರಾಣಶಕ್ತಿ ಇರುತ್ತದೆ. ಉಪ್ಪು, ಮೆಣಸಿನ ಕಾಯಿಗಳಿಂದ ಅಥವಾ ಕಡ್ಡಿಯ ತುದಿಗೆ ಬೆಂಕಿ ಹಚ್ಚಿ ದೃಷ್ಟಿ ತೆಗೆಯುವುದು, ದೂರ ಪ್ರಯಾಣದಿಂದ ಮರಳಿ ಬಂದಾಗ ಬಾಗಿಲಲ್ಲಿ ಆರತಿ ಮಾಡಿ ಒಳಗೆ ಕರೆದುಕೊಳ್ಳುವುದು ಇವೆಲ್ಲ ಅಂತಹ ಪ್ರಭಾವಗಳಿಂದ ರಕ್ಷಣೆ ಮಾಡಿಕೊಳ್ಳುವುದೇ ಆಗಿದೆ. ಇಂತಹ ಪ್ರಾಚೀನ ಪದ್ಧತಿಗಳೇ ರೇಖಿ, ಪ್ರಾಣಿಕ್ ಹೀಲಿಂಗ್ ಮುಂತಾದ ಆಧುನಿಕ ಪದ್ಧತಿಗಳಲ್ಲಿ aura-cleansing ಅಂತ ಕರೆಯಲ್ಪಡುತ್ತಿವೆ. ಹೆಚ್ಚಿನ ವಿವರಗಳಿಗೆ ಇಲ್ಲಿ ನೋಡಿ http://bit.ly/2bRehtI

ಮುಂದುರೆಯುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Dattaraj D

ದತ್ತರಾಜ್ ಹುಟ್ಟಿದ್ದು 1986, ಧಾರವಾಡ ಜಿಲ್ಲೆಯ ಕುಗ್ರಾಮವೊಂದರಲ್ಲಿ. ಬೆಳೆದದ್ದು ಆಂಧ್ರಪ್ರದೇಶ ತಮಿಳು ನಾಡು ಮಹಾರಾಷ್ಟ್ರ ಮುಂತಾದೆಡೆ. ಶಾಲಾ ಕಾಲೇಜುಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಿಲ್ಲ. ಮೌಖಿಕ ಗುರುಶಿಷ್ಯ ಪರಂಪರೆಯಲ್ಲಿ ಋಗ್ವೇದವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದಾರೆ. ಬೀದರ್ ಜಿಲ್ಲೆಯ ಕೇಂದ್ರ ಸರ್ಕಾರದ ಅನುದಾನಿತ ಗುರುಕುಲದಲ್ಲಿ ಋಗ್ವೇದ ಅದ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಉದ್ಯೋಗ ತ್ಯಜಿಸಿ ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಗೆಳೆಯರ ಜೊತೆ ಸೇರಿ ಕಟ್ಟಡ ನಿರ್ಮಾಣ ಸಂಸ್ಥೆ ನಡೆಸುತ್ತಾರೆ. ಕನ್ನಡ, ತೆಲುಗು, ಹಿಂದೀ ಮತ್ತು ಸಂಸ್ಕೃತ ಭಾಷೆಗಳಲ್ಲಿ ಬರವಣಿಗೆ ಮಾಡುತ್ತಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!