ಬೇಕಾದ್ರೆ ಬೆಟ್ಸ್.. ಮೇಲಿನ ಹಾಡನ್ನು ನೀವು ಕಳೆದೆರಡು ಮೂರು ದಿನಗಳಲ್ಲಿ ಒಮ್ಮೆಯಾದರೂ ಫೇಸ್ಬುಕ್ಕಿನಲ್ಲಿ ನೋಡಿರುತ್ತೀರಾ. ಆ ಗಾಯಕಿ ಯಾರು ಅಂತ ಒಮ್ಮೆಯಾದರೂ ಕುತೂಹಲದಿಂದ ಅವರ ಪ್ರೊಫೈಲ್’ಗೆ ಭೇಟಿ ಕೊಟ್ಟಿರುತ್ತೀರಾ. ಏನ್ ಸಖತ್ತಾಗಿ ಹಾಡ್ತಾಳಪ್ಪ ಇವ್ಳು ಅಂತ ಉದ್ಗಾರ ತೆಗೆದೇ ತೆಗೆದಿರುತ್ತೀರಾ. ಇಲ್ಲಾ ಅಂದರೆ ನೀವು ಫೇಸ್ಬುಕ್ಕಿನಲ್ಲಿ ಆಕ್ಟಿವ್ ಇರುವುದು ಅಷ್ಟಕ್ಕಷ್ಟೇ ಎಂದರ್ಥ.
ಮುಂಗಾರು ಮಳೆ-೨ ಹಾಗು ಇನ್ನಿತರ ಹಾಡುಗಳ ಮೂಲಕ ಹುಡುಗರ ನಿದ್ದೆಗೆಡಿಸುವ ಈ ಹುಡುಗಿಯ ಹೆಸರು ವಿದಿಶಾ ವಿಶ್ವಾಸ್. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ವಿದಿಶಾ, ಇನ್ಫಾರ್ಮೇಶನ್ ಸೈನ್ಸ್’ನಲ್ಲಿ ಇಂಜಿನಿಯರಿಂಗನ್ನು ದಕ್ಷಿಣ ಕನ್ನಡದ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮುಗಿಸಿ ಬಳಿಕ ಐರ್ಲೆಂಡಿನಲ್ಲಿ ಸ್ನಾತಕೋತ್ತರ(MS) ಪದವಿಯನ್ನೂ ಪಡೆದು ಈಗ ಅಲ್ಲಿಯೇ ಕೆಲಸದಲ್ಲಿದ್ದಾರೆ.
ಶ್ರೇಯಾ ಘೋಶಾಲ್ ಮುಂತಾದ ಸ್ಟಾರ್ ಸಿಂಗರ್’ಗಳು ಚಲನಚಿತ್ರಗಳಲ್ಲಿ ಹಾಡಿದ ಹಾಡುಗಳನ್ನೇ ಹಾಡುವುದನ್ನು ಹವ್ಯಾಸವನ್ನಾಗಿ ಆರಂಭಿಸಿದ ವಿದಿಶಾ, ಸ್ನೇಹಿತರೊಂದಿಗೆ ಹಂಚಿಕೊಳ್ಳುವುದಕ್ಕಾಗಿ ಇನ್ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಅಪರೂಪಕ್ಕೊಮ್ಮೆ ಫೇಸ್ಬುಕ್ಕಿನಲ್ಲಿ ಹಾಕತೊಡಗಿದರು. ಇವರ ವಾಯ್ಸ್’ಗೆ ಸ್ನೇಹಿತರೆಲ್ಲರೂ ಫಿದಾ ಆದವರೇ.
ವಿದಿಶಾ ಮೊನ್ನೆ ಮೊನ್ನೆಯಷ್ಟೇ ಹೀಗೆ ಹಾಡುವುದನ್ನು ಶುರು ಮಾಡಿದ್ದಲ್ಲ. ಅಸಲಿಗೆ ಅವರು ಒಂದೆರಡು ವರ್ಷಗಳ ಹಿಂದೆಯೇ ಶುರು ಮಾಡಿದ್ದರು. ಅದು ಹೊರ ಜಗತ್ತಿಗೆ ಹೆಚ್ಚಾಗಿ ತಿಳಿದಿರಲಿಲ್ಲ. ಆದರೆ ಮೊನ್ನೆ ಅದೇನಾಯ್ತೋ ಗೊತ್ತಿಲ್ಲ, ಆಕೆ ಹಾಡಿದ ಮುಂಗಾರು ಮಳೆ-೨ ಚಿತ್ರದ “ಗಮನಿಸು ಒಮ್ಮೆ ನೀನು…” ಹಾಡು ಫೇಸ್ಬುಕ್ಕಿನಲ್ಲಿ ಹಿಗ್ಗಾಮುಗ್ಗ ವೈರಲ್ ಆಗಿ ಬಿಡ್ತು. ಆಕೆಯ ಸ್ವರ, ಹಾಡಿಗೆ ತಕ್ಕಂತೆ ಆಕೆ ನೀಡುತ್ತಿದ್ದ ಎಕ್ಸ್’ಪ್ರೆಶನ್’ಗೆ ಜನ ಹುಚ್ಚೆದ್ದು ಕುಣಿದರು. ಎಲ್ಲಾ ಕಡೆ ಲೈಕು, ಕಮೆಂಟ್, ಶೇರುಗಳ ಸುರಿಮಳೆ.. ಟ್ರೋಲ್ ಪೇಜುಗಳಂತೂ ಈಕೆಯನ್ನೇ ನೆಚ್ಚಿಕೊಂಡು ಒಂದರ ಮೇಲೆ ಮತ್ತೊಂದು ಪೋಸ್ಟುಗಳನ್ನು ಹಾಕಿದವು. ನೋಡ ನೋಡುತ್ತಿರುವಂತೆಯೇ ವಿಧಿಶಾ ಸೆಲೆಬ್ರಿಟಿಯಾಗಿ ಬಿಟ್ರು. ಜನ ಈಕೆಯ ಹಾಡಿಗೆ ಅದೆಷ್ಟು ಫಿದಾ ಆಗಿದ್ದಾರೆಂದರೆ ಒಮ್ಮೆ ಓಕೆಯ ಹಾಡು ಕೇಳಿದವರೆಲ್ಲಾ “ಈಕೆ ದಿಟ್ಟೊ ಶ್ರೇಯಾ ಘೋಶಾಲ್ ಥರಾನೇ ಹಾಡುತ್ತಾಳೆ” ಎಂದು ಉದ್ಗರಿಸುತ್ತಿದ್ದಾರೆ. ಒಮ್ಮೆ ಕೇಳಿದರೆ ಸಾಕು, ಮತ್ತೆ ಮತ್ತೆ ಕೇಳಿಸುತ್ತದೆ.
ಪ್ರೊಫೆಶನಲ್ ಸಿಂಗರ್ ಅಲ್ಲದೆಯೂ ಈ ಪರಿಯ ಹವಾ ಸೃಷ್ಟಿಸಿರುವ ವಿದಿಶಾ ಮುಂದೆ ದೊಡ್ಡ ಅವಕಾಶ ಸಿಕ್ಕರೆ ಅದನ್ನು ಖಂಡಿತವಾಗಿಯೂ ಅಂತಹ ಅವಕಾಶಗಳನ್ನು ಬಳಸಿಕೊಳ್ಳುತ್ಟಾರಂತೆ. ಅಂತಹಾ ಅವಕಾಶಕ್ಕೆ ಅವರು ಅರ್ಹರೂ ಕೂಡ. ಅಂತಹಾ ಅವಕಾಶ ಅವರಿಗೆ ಬೇಗ ಸಿಗಲಿ, ಮತ್ತಷ್ಟು ಹಾಡುಗಳೊಂದಿಗೆ ನಮ್ಮನ್ನು ರಂಜಿಸಲಿ ಎಂಬುದು ನಮ್ಮ ಹಾರೈಕೆ.
ವಿದಿಶಾ ವಿಶ್ವಾಸ್ ಅವರ ಇನ್ನಷ್ಟು ಹಾಡುಗಳನ್ನು ಇಲ್ಲಿ ವೀಕ್ಷಿಸಿ.