“ಶೀರ್ಷಿಕೆ ನೋಡಿ ಏನೇನೋ ಊಹಿಸಿಕೊಳ್ಳಬೇಡಿ. ಈ ಶೀರ್ಷಿಕೆಗೂ ರಮ್ಯ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ. ಅಕಸ್ಮಾತ್ ನೀವೇನಾದರೂ ಸಂಬಂಧವನ್ನು ಕಲ್ಪಿಸಿಕೊಂಡರೆ ಅದಕ್ಕೆ ನಾನು ಹೊಣೆಗಾರನಲ್ಲ” ಅಂತ ಹೇಳೋದಿಲ್ಲ. ಯಾಕೆಂದರೆ ರಮ್ಯ ನೀಡಿರುವ ಹೇಳಿಕೆಕೂ ನಾನು ಕೊಟ್ಟಿರುವ ಶೀರ್ಷಿಕೆಗೂ ನೇರ ಸಂಬಂಧವಿದೆ. ಇನ್ ಫ್ಯಾಕ್ಟ್ ಈ ಶೀರ್ಷಿಕೆ ಹುಟ್ಟಿಕೊಂಡಿದ್ದೇ ರಮ್ಯ ನೀಡಿರುವ ಹೇಳಿಕೆಯಿಂದಾಗಿ. ಮೊದಲಿಗೆ ಮಂಗಳೂರನ್ನು ನರಕ ಎಂದು ಹೇಳಿ ಬಳಿಕ ಮಂಗಳೂರೆಂದರೆ ಸ್ವರ್ಗ, ಐ ಲವ್ ಮಂಗಳೂರು ಅಂತ ದೋಸೆ ಮಗುಚಿ ಹಾಕಿದಷ್ಟೇ ಸುಲಭವಾಗಿ ಹೇಳಿಕೆಯನ್ನು ತಿರುಚಿದ ರಮ್ಯ ಅವರ ಹೇಳಿಕೆಯೇ ಈ ಲೇಖನಕ್ಕೆ ಮೂಲ ಪ್ರೇರಣೆ. ಆದ್ದರಿಂದ ಮಾಜಿ ನಟಿ, ಮಾಜಿ ಸಂಸದೆಯಾಗಿರುವ ರಮ್ಯ ದಿವ್ಯ ಸ್ಪಂದನ ಅವರಿಗೆ ಈ ಲೇಖನ ಅರ್ಪಣೆ.
ಯಾಕೋ ಗೊತ್ತಿಲ್ಲ. ಇತ್ತಿತ್ಲಾಗೆ ಮಂಗಳೂರೆಂದರೆ ಮೂಗು ಮುರಿಯುವವರು ಬಹಳಾ ಜನ ಹುಟ್ಟಿಕೊಂಡಿದ್ದಾರೆ. ಇಲ್ಲಿನ ಸಂಸ್ಕೃತಿ, ಭಾಷೆ, ವಿಶೇಷತೆಗಳಿಗಿಂತಲೂ ಹೆಚ್ಚಾಗಿ ಪಬ್ಬ್ ದಾಳಿ, ಗೋರಕ್ಷಣೆ, ಸಂಘ ಪರಿವಾರ ಮುಂತಾದ ವಿಷಯಗಳ ಕುರಿತು ರಮ್ಯ ಥರ ಹೊರಗೆ ನಿಂತು ಮಾತನಾಡುವವರು ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದಾರೆ. ಆದ್ರೆ ಮಂಗಳೂರೆಂದರೆ ಇಷ್ಟೇನಾ? ಮಂಗಳೂರೆಂಬ ಸರ್ವರೂ ಇಷ್ಟಪಡುವ ಊರು ಯಾಕೆ ಯಾವಾಗಲೂ ಕೆಟ್ಟ ವಿಷಯಗಳಿಗಾಗಿಯೇ ಸುದ್ದಿಯಾಗುತ್ತಿದೆ? ಬರೀ ನೆಗೆಟಿವ್ ಸುದ್ದಿಗಳೇ ಹಬ್ಬುತ್ತಿರುವುದರಿಂದ ಬೇಸತ್ತಿರುವ ನನಗೆ ಮಂಗಳೂರಿನ ಕುರಿತು ಕೆಲ ಪಾಸಿಟಿವ್ ವಿಷಯಗಳನ್ನು ಹಂಚಿಕೊಳ್ಳಬೇಕು ಅಂತ ಅನಿಸ್ತಾ ಇದೆ. ಆದ್ದರಿಂದ ನನ್ನೂರಿನ ಮೇಲಿನ ಪ್ರೀತಿಯಿಂದ, ಗೌರವದಿಂದ ಬರೆಯುತ್ತಿದ್ದೇನೆ, ಒಮ್ಮೆ ಓದಿ.
ಆಂಗ್ಲ ಭಾಷೆಯಲ್ಲಿ ಮ್ಯಾಂಗ್ಲೋರ್, ಕನ್ನಡದಲ್ಲಿ ಮಂಗಳೂರು, ಮಳಯಾಳದಲ್ಲಿ ಮಂಗಳಾಪುರಂ, ತುಳುವಿನಲ್ಲಿ ಕುಡ್ಲ, ಬ್ರಾಹ್ಮಣರ ಭಾಷೆಯಲ್ಲಿ ಕೊಡೆಯಾಲ, ಕೊಂಕಣಿಯಲ್ಲಿ ಕೊಡಿಯಾಲ್, ಬ್ಯಾರಿ ಭಾಷೆಯಲ್ಲಿ ಮೈಕಾಲ… ಅಬ್ಬಬ್ಬಾ.. ಇಷ್ಟೆಲ್ಲಾ ಹೆಸರಿನಿಂದ ಕರೆಸಿಕೊಳ್ಳುವ ಮಂಗಳೂರು ರಾಜತಾಂತ್ರಿಕವಾಗಿ, ಸಾಂಸ್ಕೃತಿಕವಾಗಿ, ವ್ಯಾವಹಾರಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಶ್ರೀಮಂತ ಊರು ಎನ್ನುವುದು ಎಲ್ಲರಿಗೂ ತಿಳಿಯದ ಸಂಗತಿಯೇನಲ್ಲ. ಪರಶುರಾಮನ ಸೃಷ್ಟಿ ಎನ್ನುವ ಪರಂಪರೆಯನ್ನೇ ಹೊಂದಿರುವ ಊರಿನಲ್ಲಿ, ಬೇಸಗೆಯಲ್ಲಿ “ಎಂತ ಕರ್ಮದ ಸೆಖೆ ಮಾರ್ರೆ” ಅನಿಸುವಂತಹ ಸೆಖೆ ಬಿಟ್ಟರೆ ಮಳೆಗಾಲದಲ್ಲಿ ಎಷ್ಟು ಬೇಕೋ ಅಷ್ಟು ಮಳೆ, ಚಳಿಗಾಲದಲ್ಲಿ ಹಿತವಾದ ಮಿತವಾದ ಚಳಿ. ಇದೊಂಥರಾ ಬ್ಯಾಲೆನ್ಸ್’ಡ್ ವಾತಾವರಣ. ಏಪ್ರಿಲ್, ಮೇ ತಿಂಗಳಿನ ವಾತವರಣವೊಂದನ್ನು ಬಿಟ್ಟು ನೋಡಿದರೆ, ಇಂತಹಾ ವಾತಾವರಣ ರಾಜ್ಯದ ಇನ್ನೆಲ್ಲೂ ಇರದು.
ಅರಬ್ಬೀ ಸಮುದ್ರ ಮಂಗಳೂರಿನ ಪ್ರಮುಖ ಆಕರ್ಷಣೆ. ಪಣಂಬೂರು, ಸುರತ್ಕಲ್, ತಣ್ಣಿರುಬಾವಿ, ಉಳ್ಳಾಲ, ಸೋಮೇಶ್ವರ.. ಮಂಗಳೂರಿನ ಪ್ರತೀ ದಿಕ್ಕಿನಲ್ಲೂ ಒಂದೊಂದು ಬೀಚ್ ಸಿಗುತ್ತವೆ. ಇಲ್ಲಿಯ ಬೀಚುಗಳನ್ನು ನೋಡಲು, ಮರಳಿನಲ್ಲಿ ಹೊಯ್ದಾಡಿಕೊಳ್ಳಲು ಉತ್ತರ ಕರ್ನಾಟಕದ ಆದಿಯಾಗಿ ಮೂಲೆ ಮೂಲೆಗಳಿಂದಲೂ ಜನರು ಬರುತ್ತಾರೆ. ತಣ್ಣಿರುಬಾವಿ, ಸುಲ್ತಾನ್ ಬತ್ತೇರಿಯ ಬೀಚುಗಳು ಹದಿಹರೆಯದ ಪ್ರೇಮಿಗಳಿಗೆ ನಿತ್ಯವೂ ಸ್ವರ್ಗವನ್ನು ತೋರಿಸುತ್ತಿರುತ್ತವೆ. ಕೆಲಸದ ಒತ್ತಡದಿಂದ ಬಸವಳಿದಿರುವ ಮನಸ್ಸುಗಳಿಗೆ,ಜೀವನದ ಸಂಧ್ಯಾಕಾಲದಲ್ಲಿರುವ ವೃದ್ಧರಿಗೆ ಈ ಬೀಚುಗಳ ಬದಿಯಲ್ಲಿ ವಾಕಿಂಗ್ ಮಾಡಿದರಷ್ಟೇ ಸಮಾಧಾನ.
ಬೇಸಗೆಯ ಬಿಸಿಲನಲ್ಲಿ ಬೆಂದಿರುವ ದೇಹಗಳನ್ನು ತಂಪುಗೊಳಿಸಲು ಇಲ್ಲಿ ಜಗತ್ಪ್ರಸಿದ್ಧವಾದ ಪಬ್ಬಾಸ್ ಇದೆ. ಅಲ್ಲಿಯವರೆಗೂ ಹೋಗುವುದು ಕಷ್ಟವೆಂದಾದರೆ ಹಂಪನಕಟ್ಟೆಯ “ಐಡಿಯಲ್ಸ್” ಇದೆ. ಈ ಎರಡೂ ಕ್ರೀಂ ಪಾರ್ಲರುಗಳು ತಮ್ಮದೇ ಆದ ವಿಶೇಷತೆಗಳಿಂದಾಗಿ ಯುವ ಜನರಲ್ಲಿ ಒಂದು ಹೊಸ ಕ್ರೇಝನ್ನು ಹುಟ್ಟು ಹಾಕಿದೆ.
ವಾಣಿಜ್ಯ ವಹಿವಾಟಿನಲ್ಲಿ ಬೆಂಗಳೂರನ್ನು ಬಿಟ್ಟರೆ ನಂತರದ ನಗರವೇ ಮಂಗಳೂರು. ಅತ್ಯುತ್ತಮ ಸಾರಿಗೆ ವ್ಯವಸ್ಥೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಂತಾರಾಷ್ಟ್ರೀಯ ಗುಣಮಟ್ಟದ ಬಂದರು, ಅಂತಾರಾಷ್ಟ್ರೀಯ ರೈಲು ನಿಲ್ದಾಣ(ಮೇಲ್ದರ್ಜೆಗೆ ಏರ್ತಾ ಇದೆ).. ಹೀಗೆ ಎಲ್ಲಾ ಬಗೆಯ ಅತ್ಯುನ್ನತ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ರಾಜ್ಯದ ಏಕೈಕ ನಗರ ಮಂಗಳೂರು ಅಂತ ಹೇಳಿಕೊಳ್ಳುವುದಕ್ಕೆ ಒಳಗೊಳಗಿಂದಲೇ ಹೆಮ್ಮೆಯಾಗುತ್ತದೆ.
ನಾನು ಪುರೋಹಿತಶಾಹಿ(ಬ್ರಾಹ್ಮಣ) ವಂಶಕ್ಕೆ ಸೇರಿರೋದರಿಂದ ಮೀನು ತಿನ್ನುವುದಿಲ್ಲ. ಆದರೆ ಮಂಗಳೂರಿನ ಬಂಗುಡೆ, ಬೂತಾಯಿ ಹಾಗು ಇನ್ನಿತರ ಬಗೆ ಬಗೆಯ ಮೀನುಗಳ ಬಗ್ಗೆ ಕೇಳಿ, ನೋಡಿ ತಿಳಿದುಕೊಂಡಿದ್ದೇನೆ. ಈ ಮೀನುಗಳು ಎಷ್ಟು ಫೇಮಸ್ಸು, ಟೇಸ್ಟಿಯಸ್ ಅಂತ ಅದನ್ನು ತಿಂದವರಲ್ಲಿ, ತಿನ್ನಲು ಹಾತೊರೆಯುವವರಲ್ಲಿ ಕೇಳಿ ತಿಳಿದುಕೊಳ್ಳಬೇಕು. ಇಲ್ಲಿನ ಬಂದರಿನಿಂದ ಮೀನುಗಳು ಅದೆಲ್ಲಿಗೆಲ್ಲಾ ರಫ್ತಾಗುತ್ತಿವೆಯೋ, ಅದು ಎಷ್ಟು ಕೋಟಿಯ ಬ್ಯುಸಿನೆಸ್ಸೋ? ದೇವರಿಗೂ ಗೊತ್ತಿದೆಯೋ ಇಲ್ಲವೋ! ಸ್ಟೇಟ್’ಬ್ಯಾಂಕಿನ ಬಸ್ ಸ್ಟ್ಯಾಂಡ್ ಬದಿಯಲ್ಲಿ ಹಾದು ಹೋಗುವ ಜನರನ್ನು ಸಣ್ಣ ಸಣ್ಣ ಬುಟ್ಟಿಗಳಲ್ಲಿ ಮೀನುಗಳನ್ನು ತುಂಬಿಟ್ಟುಕೊಂಡು, ತಲೆತುಂಬ ಸೇವಂತಿಗೆ-ಮಲ್ಲಿಗೆ ಹೂ ಮುಡಿದುಕೊಂಡಿರುವ ಟಿಪಿಕಲ್ ಮಂಗಳೂರು ಹೆಂಗಸರು ಜನರನ್ನು ಬರಸೆಳೆಯುವ ಪರಿಗೆ ನೀವು ಕಾಣೆಯಾಗಿ ಬಿಡುತ್ತೀರಾ!
ಮಂಗಳೂರು Educational Hub ಎನ್ನುವುದು ಲೋಕರೂಢಿಯಾಗಿರುವ ಮಾತು. ಕರ್ನಾಟಕದ ಮೂಲೆ ಮೂಲೆ ಮಾತ್ರವಲ್ಲ, ಭಾರತದ ಮೂಲೆ ಮೂಲೆಗಳಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ವಿದ್ಯಾರ್ಜನೆಗಾಗಿ ಬರುತ್ತಾರೆ. ನಗರದ ಮೂಲೆ ಮೂಲೆಗಳಲ್ಲೂ ಬೀಚುಗಳಿರುವಂತೆ ಜಿಲ್ಲೆಯ ಮೂಲೆ ಮೂಲೆಯಲ್ಲೂ ಸುಪ್ರಸಿದ್ಧವಾದ ಕಾಲೇಜುಗಳಿವೆ. ಮೂಡಬಿದರೆಯ ಆಳ್ವಾಸ್ ಕಾಲೇಜು, ಪುತ್ತೂರಿನ ವಿವೇಕಾನಂದ ಕಾಲೇಜು, ಉಜಿರೆಯ ಎಸ್.ಡಿ.ಎಮ್ ಕಾಲೇಜು, ಸುಳ್ಯದ ಕೆ.ವಿ.ಜಿ ಕಾಲೇಜು, ನಿಟ್ಟೆಯ ಕೆ.ಎಸ್ ಹೆಗಡೆ ಕಾಲೇಜು,ಮಂಗಳೂರು ವಿಶ್ವವಿದ್ಯಾಲಯ, ಸುರತ್ಕಲ್ಲಿನ ಎನ್.ಐ.ಟಿ.ಕೆ ಕಾಲೇಜುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಉತ್ತರ ಕರ್ನಾಟಕ, ಕೇರಳ, ತಮಿಳುನಾಡು, ಅಸ್ಸಾಂ, ಮಣಿಪುರ, ಮೇಘಾಲಯ ಮುಂತಾದೆಡೆಯ ವಿದ್ಯಾರ್ಥಿಗಳು ಇಲ್ಲಿಯೇ ಕಲಿಯಬೇಕೆಂಬ ಬಯಕೆಯೊಂದಿಗೆ ಇಲ್ಲಿಗೆ ಬರುತ್ತಾರೆ. ಅಷ್ಟರ ಮಟ್ಟಿಗೆ ಮಂಗಳೂರು ಶೈಕ್ಷಣಿಕವಾಗಿ ಫೇಮಸ್. ಇಲ್ಲಿನ ಎಲ್ಲಾ ಕಾಲೇಜುಗಳು ಸಾವಿರಾರು ಇಂಜಿನಿಯರುಗಳನ್ನು, ಡಾಕ್ಟರುಗಳನ್ನು, ಉಪನ್ಯಾಸಕರನ್ನು, ವಿಜ್ನಾನಿಗಳನ್ನು ಸೃಷ್ಟಿ ಮಾಡುತ್ತಿವೆ, ಹೊರತು ಭಯೋತ್ಪಾದಕರನ್ನಲ್ಲ. ಅದೂ ಅಲ್ಲದೆ ಪ್ರತೀ ಭಾರಿಯ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಮೊದಲ ಅಥವಾ ದ್ವಿತೀಯ ಸ್ಥಾನಗಳನ್ನು ಕಾಯ್ದುಕೊಳ್ಳುತ್ತಿರುವುದು ಹೆಚ್ಚಾಗಿ ನಮ್ಮ ಮಂಗಳೂರು ಅಥವಾ ಉಡುಪಿ. ಪ್ರತೀ ವರ್ಷವೂ ಇಂತಹಾ ಕನ್ಸಿಸ್ಟೆನ್ಸಿ ಕಾಯ್ದುಕೊಂಡಿರುವ ಮತ್ತೊಂದು ಜಿಲ್ಲೆ ಬೇರೆ ಯಾವುದೂ ಇಲ್ಲ.
ಮಂಗಳೂರಿಗರು ಬಹಳಾ ಬುದ್ಧಿವಂತರು ಅಂತ ನಾವಲ್ಲ, ಹೊರಗಿನವರೂ ಹೇಳುತ್ತಾರೆ. ನೀವು ಜಗತ್ತಿನ ಯಾವ ಮೂಲೆಗೇ ಹೋಗಿ ಅಲ್ಲಿ ಮಂಗಳೂರಿಗರಿರುತ್ತಾರೆ. ಯಾವ ಊರಿಗೇ ಹೋಗಿ, ಅಲ್ಲೇ ಸ್ವಲ್ಪ ಆಚೀಚೆ ಹುಡುಕಾಡಿದರೆ ಮಂಗಳೂರಿಗರ ಹೋಟೆಲ್ ನಿಮಗೆ ಸಿಗುತ್ತದೆ. ಮೊದೆಲೆಲ್ಲಾ ಬೆಂಗಳೂರು, ಮುಂಬೈನ ಹೋಟೇಲುಗಳಲ್ಲಿ ಗ್ಲಾಸು ತೊಳೆದುಕೊಂಡು ವೃತ್ತಿ ಜೀವನ ಆರಂಭಿಸಿ ಬಳಿಕ ಕಷ್ಟ ಪಟ್ಟು ಮೇಲೆ ಬಂದು ಸ್ವಂತ ಹೋಟೇಲುಗಳನ್ನು ಕಟ್ಟಿ ಇತರರಿಗೆ ಮಾದರಿಯಾಗಿರುವ ಮಂಗಳೂರಿಗರು ಬಹುತೇಕರಿದ್ದಾರೆ.
ಮಂಗಳೂರಿನ ವಿಶೇಷತೆಯನ್ನು ಹೇಳುವಾಗ ಉಳಿದೆಲ್ಲವನ್ನು ಹೇಳಿ ಇಲ್ಲಿನ ದೇವಸ್ಥಾನಗಳ ಬಗೆಗೆ ಹೇಳದಿದ್ದರೆ ಆ ದೇವರೂ ಕೂಡಾ ಮೆಚ್ಚಲಾರ. ಧರ್ಮಸ್ಥಳ, ಸುಬ್ರಹ್ಮಣ್ಯ, ಕಟೀಲು, ಉಡುಪಿ(ಅವಿಭಜಿತ ದ.ಕ ಜಿಲ್ಲೆ),ಕೊಲ್ಲೂರು ಮುಂತಾದ ಪ್ರಸಿದ್ಧ ಧಾರ್ಮಿಕ ಶ್ರದ್ಧಾ ಭಕ್ತಿಯ ಕೇಂದ್ರಗಳು ಕೋಟ್ಯಾಂತರ ಜನರ ಆರಾಧ್ಯ ಕೇಂದ್ರವಾಗಿರುವುದು ಮಾತ್ರವಲ್ಲದೆ ತನ್ನಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತನಿಗೂ ಶುಚಿರುಚಿಯಾದ ಅನ್ನ ದಾಸೋಹವನ್ನು ನಿತ್ಯವೂ ಬಡಿಸುತ್ತಿವೆ. ಈ ಕ್ಷೇತ್ರಗಳನ್ನು ಸಂದರ್ಶಿಸಿ ಹೊರ ಬರುವಾಗ ಮನ ತಣಿದರೆ ಅನ್ನ ಪ್ರಸಾದವನ್ನು ಸ್ವೀಕರಿಸಿದಾಗ ಹೊಟ್ಟೆಯೂ ತಣಿದಿರುತ್ತದೆ. ವಾವ್.. ಪ್ರಸಾದ ಊಟವೆಂದರೆ ಹೀಗಿರಬೇಕೆನ್ನುವ ಭಾವ ನಮ್ಮಲ್ಲಿ ಮೂಡುತ್ತದೆ.
ಇಲ್ಲಿ ಭೂತಕೋಲ ಅಂತ ಒಂದು ನಡೆಯುತ್ತೆ. ಮತ್ತು ಇದು ಮಂಗಳೂರಿನ ಆಸುಪಾಸುಗಳಲ್ಲಿ(ಉಡುಪಿ, ಕಾಸರಗೋಡು, ಮಡಿಕೇರಿಯವರೆಗೆ) ಮಾತ್ರ ನಡೆಯುತ್ತೆ. ಭೂತಕೋಲ ಅಂದರೆ ಜನರ ಭಕ್ತಿ ಭಾವದ ಪರಮೋಚ್ಚ ಸಂಕೇತ. ಇಲ್ಲಿನ ದೇವಾಲಯಗಳಲ್ಲಿ ನಡೆಯುವ ಜಾತ್ರೋತ್ಸವ, ನಾಗಮಂಡಲ ಇತ್ಯಾದಿಗಳು ಕಾಲಕಾಲಕ್ಕೆ ಜನರನ್ನು ಒಂದುಗೂಡಿಸುತ್ತಿವೆ ಮಾತ್ರವಲ್ಲದೆ ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಿವೆ
ಪತ್ರಡೆ ಅಂತ ಒಂದು ತಿಂಡಿಯಿದೆ ಇಲ್ಲಿ. ಉದ್ಯೋಗ ನಿಮಿತ್ತ ಮಂಗಳೂರಿನಿಂದ ಹೊರಗಿರುವವರು ಈ ತಿಂಡಿಯ ಹೆಸರನ್ನು ಕೇಳಿದರೆ ಬಾಯಲ್ಲಿ ನೀರೂರಿಸುತ್ತಾರೆ. ಹಾಗೆಯೇ ಗೋಳಿಬಜೆ, ಬನ್ಸ್, ಚಟ್ಟಂಬಡೆ, ಕೋರಿ ರೊಟ್ಟಿ ಮುಂತಾದ ತಿನಿಸುಗಳಿಗೂ ಮಂಗಳೂರು ಫೇಮಸ್ಸು.
ದೇಶದ ಆರ್ಥಿಕ ಸಬಲೀಕರಣದಲ್ಲಿ ಮಂಗಳೂರಿನ ಪಾತ್ರ ಬಹಳಾ ದೊಡ್ದದು. ದೇಶದಲ್ಲಿರುವ ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಲವು ಹುಟ್ಟಿಕೊಂಡಿದ್ದು ಮಂಗಳೂರಿನಲ್ಲಿ ಅಂತ ಹೇಳಿಕೊಳ್ಳುವುದಕ್ಕೂ ನಮಗೆ ಬಹಳಾ ಹೆಮ್ಮೆಯಿದೆ. ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್, ಕರ್ನಾಟಕ್ ಬ್ಯಾಂಕ್, ವಿಜಯಾ ಬ್ಯಾಂಕ್ ಹುಟ್ಟಿಕೊಂಡಿದ್ದು ನಮ್ಮ ಮಂಗಳೂರಿನಲ್ಲಿ. ಒಂದು ವೇಳೆ ಆ ಕಾಲದಲ್ಲಿ ಈ ಎಲ್ಲಾ ಬ್ಯಾಂಕುಗಳು ಹುಟ್ಟಿರದಿದ್ದರೆ ಇವತ್ತು ನಮ್ಮ ದೇಶದ ಅರ್ಥಿಕ ಸ್ಥಿತಿ ಇನ್ನೆಲ್ಲಿ ಇರುತ್ತಿತ್ತೇನೋ?
ಹೌದು.. ಇಲ್ಲಿ ಮತ್ತೆ ಮತ್ತೆ ನಡೆಯುತ್ತಿರುವ ಕೋಮು ಗಲಭೆಗಳಿಂದಾಗಿ, ಮಂಗಳೂರಿನ ಬಗೆಗೆ ಮಾಧ್ಯಮಗಳಿಗಿರುವ ನಕಾರಾತ್ಮಕ ಧೋರಣೆಯಿಂದಾಗಿ ಮಂಗಳೂರು ತನ್ನ ನೈಜ ಸೌಂಧರ್ಯವನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಂಡಿರುವುದು ನಿಜ. ಆದರೆ ಅಷ್ಟಕ್ಕೆಯೇ ಮಂಗಳೂರನ್ನು ನರಕ ಎನ್ನಲು ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದೆ ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿರುವಾಗ ದಾರಿ ಮಧ್ಯ ಕಲ್ಲಡ್ಕದಲ್ಲಿ ನಡೆದ ಕೋಮುಗಲಭೆಯಲ್ಲಿ ಸಿಲುಕಿ ನಾನೂ ಪರದಾಡಿದ್ದೇನೆ. ಆದರೆ ಆ ಕೋಮುಗಲಭೆಗಳ ದಿನಗಳನ್ನು ಹೊರತುಪಡಿಸಿದರೆ ನಾವೆಲ್ಲಾ ಒಂದಾಗಿದ್ದೇವೆ. ಯಾವುದೇ ಧರ್ಮ,ಜಾತಿ ಬೇಧವಿಲ್ಲದೆ ದಿನವೂ ಕ್ರಿಕೆಟ್ ಆಡುತ್ತೇವೆ. ಈ ಎಲ್ಲಾ ಕೋಮು ಗಲಭೆಗಳಿಗಿಂತಲೂ ಆಚೆಗೆ ಒಂದು ಸುಂದರ ಮಂಗಳೂರು ಇದೆ.
ಪ್ರತಿಯೊಬ್ಬರಿಗೂ ಅವರವರ ಊರು ಸ್ವರ್ಗವೇ ಆಗಿರುತ್ತದೆ. ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತು :ಇದೆಂತಹಾ ಕರ್ಮ” ಅಂತ ಬೈದುಕೊಂಡರೂ ಮೂಲ ಬೆಂಗಳೂರಿಗರಿಗೆ ಅದು ಸ್ವರ್ಗವೇ ಆಗಿರುತ್ತದೆ. ಮಂಡ್ಯದಲ್ಲಿ ಮಳೆ ಬರದೆ, ಬೆಳೆ ನಾಶವಾಗಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರಲ್ಲ, ಹಾಗಂತ ಇಡೀ ರಾಜ್ಯಕ್ಕೆ ಸಕ್ಕರೆಯ ಸಿಹಿಯುಣಿಸುವ ಮಂಡ್ಯವನ್ನು ನರಕ ಎನ್ನಲಾಗುತ್ತದೆಯಾ? ಕೋಮು ಕಾರಣಕ್ಕಾಗಿ ಒಂದೆರಡು ಕೊಲೆ, ಮತ್ತೊಂದೆರಡು ಗಲಭೆಯಾಯ್ತೆಂದು ಮಂಗಳೂರನ್ನು ನರಕ ಎಂದರೆ ಒಪ್ಪಲಾಗುತ್ತದೆಯಾ? ನೋ.. ನೆವರ್.. Because ಮಂಗಳೂರು ಅಂದ್ರೆ ಸ್ವರ್ಗ.. ವೀ ಲವ್ ಮಂಗಳೂರು..
ಕಡೇ ಮಾತು: ಸ್ವರ್ಗದಂತಹ ಮಂಗಳೂರನ್ನು ನರಕ ಎಂದು ಹೇಳುವಷ್ಟು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವವರನ್ನು ಪುನಶ್ಚೇತನಗೊಳಿಸುವುದಕ್ಕಾಗಿಯೇ ಇರುವ ಫೇಮಸ್ಸ್ ಕಂಕನಾಡಿ ಆಸ್ಪತ್ರೆ ಇರುವುದೂ ಇದೇ ಮಂಗಳೂರಿನಲ್ಲಿ.