Featured ಅಂಕಣ

ಬಲ್ಲರೆಷ್ಟು ಜನ ಬೀರಬಲ್ಲನ?

ಒಮ್ಮೆ ಅಕ್ಬರ್ ಬೀರಬಲ್ಲನ ಜೊತೆ ಮಾತಾಡುತ್ತಿದ್ದಾಗ ಆಮಿಷಗಳ ಮಾತು ಬಂತಂತೆ. ಬೀರಬಲ್ಲ ಹೇಳಿದ, “ದುಡ್ಡಿಗಾಗಿ ಮನುಷ್ಯ ಏನನ್ನು ಬೇಕಾದರೂ ಮಾಡಬಲ್ಲ, ಹುಜೂರ್!”. “ಹೌದೆ? ಏನನ್ನೂ ಮಾಡಬಲ್ಲನೇ?”, ಅಕ್ಬರ್ ಮರುಪ್ರಶ್ನೆ ಹಾಕಿದ. “ಸಂಶಯವೇ ಬೇಡ” ಎಂದ ಅತ್ಯಂತ ಖಚಿತ ಧ್ವನಿಯಲ್ಲಿ ಬೀರಬಲ್ಲ. ಸರಿ, ಈ ಮಾತನ್ನು ಪರೀಕ್ಷಿಸಲೋಸುಗ ಒಬ್ಬ ಬಡ ಬ್ರಾಹ್ಮಣನನ್ನು ಹುಡುಕಿ ತರಲಾಯಿತು. ಬಡ ಮತ್ತು ಬ್ರಾಹ್ಮಣವೆಂಬ ಪದಗಳು ಸಮಾನಾರ್ಥಕವಾಗಿರುವಾಗ ಅವೆರಡೂ ಆಗಿರುವವನನ್ನು ಹುಡುಕಿ ಕರೆತರುವುದು ದೊಡ್ಡ ಕಷ್ಟವೇ? ಹಿಡಿದು ತಂದ ಬ್ರಾಹ್ಮಣನಿಗೆ ಮಹಾರಾಜ ಅಕ್ಬರ್,ತನ್ನ ಅರಮನೆಯ ಉದ್ಯಾನದಲ್ಲಿದ್ದ ಕೊಳ ತೋರಿಸಿ, ಅದರಲ್ಲಿ ಕತ್ತು ಮುಳುಗುವಂತೆ ನಿಂತು ಒಂದಿಡೀ ರಾತ್ರಿ ಕಳೆದರೆ ಒಂದು ಲಕ್ಷ ಚಿನ್ನದ ವರಹಗಳನ್ನು ಕೊಡುತ್ತೇನೆ, ಎಂದು ಬಿಟ್ಟ. ಚಿನ್ನದ ಆಸೆಗೆ ಹಾರುವ ಒಪ್ಪಿದ.

ಮಾತಿನಂತೆ, ಒಂದು ನಿರ್ದಿಷ್ಟಪಡಿಸಿದ ದಿನ, ಬ್ರಾಹ್ಮಣ ಆ ಕೊಳದಲ್ಲಿಳಿದು ಇಡೀ ರಾತ್ರಿಯನ್ನು ಚಳಿಯಿಂದ ಗಡಗಡ ನಡುಗುತ್ತ ಕಳೆದ. ಮರುದಿನ ಆತನನ್ನು ಆಸ್ಥಾನದಲ್ಲಿ ಹಾಜರುಪಡಿಸಲಾಯಿತು. “ಇಂಥ ಶೀತಲ ಚಳಿಗಾಲದಲ್ಲೂ ನೀನು ಇಡೀ ರಾತ್ರಿಯನ್ನು ಕನಿಷ್ಠ ಬಟ್ಟೆಯಲ್ಲಿದ್ದು ನೀರೊಳಗೆ ಮುಳುಗಿ ಕಳೆದೆಯೆಂಬುದನ್ನು ಕೇಳಿದರೇನೇ ಆಶ್ಚರ್ಯವಾಗುತ್ತದೆ. ಚಳಿಯನ್ನು ಹೇಗೆ ತಡೆದುಕೊಂಡೆ?” ಎಂದು ಕುಶಲ ಕೇಳಿದ ಅಕ್ಬರ್. ದೊರೆಯನ್ನು ಬೇಸರ ಪಡಿಸಬಾರದೆಂಬ ಭೂತದಯೆಯಿಂದ ಆ ಬ್ರಾಹ್ಮಣ, “ಹುಜೂರ್, ಕೊಳದ ಅನತಿ ದೂರದಲ್ಲಿ ನಿಮ್ಮ ಕೋಟೆಯ ಬುರುಜಿನ ಮೇಲೆ ಕಾವಲುಗಾರ ನೆಟ್ಟ ದೊಂದಿಯಿತ್ತು. ರಾತ್ರಿಯಿಡೀ ಅದು ಸಣ್ಣಗೆ ಉರಿಯುತ್ತಿತ್ತು. ಅದನ್ನೇ ಏಕಾಗ್ರಚಿತ್ತದಿಂದ ನೋಡುತ್ತ, ಜಗತ್ತಿನ ಮಿಕ್ಕೆಲ್ಲ ಸಂಗತಿಗಳನ್ನೂ ಮರೆತು ನಿಂತುಬಿಟ್ಟೆ. ಹಾಗೆ ಇಡೀ ರಾತ್ರಿಯನ್ನು ಕಳೆದು ಬಿಟ್ಟೆ” ಎಂದ. ಇನ್ನೇನು ಹಣದ ಥೈಲಿಯನ್ನು ಬ್ರಾಹ್ಮಣನ ಉಡಿಗೆ ಹಾಕಲೆಂದು ಹೊರಟಿದ್ದ ಅಕ್ಬರ್ ತಡೆದ. “ನೀನು ದೊಂದಿಯನ್ನು ನೋಡುತ್ತ ರಾತ್ರಿ ಕಳೆದೆ ಎಂದರೆ ಆ ಬೆಳಕಿನ ಉಷ್ಣವನ್ನು ಪಡೆದಿದ್ದೀ ಎಂದಾಯಿತು. ಹಾಗಾಗಿ ನಿನಗೆ ದುಡ್ಡು ಕೊಡಲು ಸಾಧ್ಯವಿಲ್ಲ” ಎಂದ. ಆಸ್ಥಾನದಲ್ಲಿ ಕೂತು ಇದನ್ನೆಲ್ಲ ನೋಡುತ್ತಿದ್ದ ಮಂತ್ರಿ ಬೀರಬಲ್ಲನಿಗೆ ಕೆಡುಕೆನಿಸಿತು. ತನ್ನ ಒಂದು ಮಾತೇ ಬೆಳೆದು ಇಷ್ಟುದ್ದವಾಯಿತಲ್ಲ? ತನ್ನ ಮಾತಿನ ಸತ್ಯಾಸತ್ಯತೆ ಪರೀಕ್ಷಿಸಲು ಹೋಗಿ ಅಕ್ಬರ್ ಬಡ ಮನುಷ್ಯನ ಜೊತೆ ಚೆಲ್ಲಾಟವಾಡುತ್ತಿದ್ದಾನಲ್ಲ, ಅನ್ನಿಸಿತು. ಒಂದು ಇರುಳು ನೀರಲ್ಲಿ ಕಳೆದೂ ಒಂದು ದುಗ್ಗಾಣಿಯನ್ನೂ ಪಡೆಯದೆ ವಾಪಸ್ ಹೋಗಬೇಕಾದ ನತದೃಷ್ಟನ ಬಗ್ಗೆ ಬೀರಬಲ್ಲನಿಗೆ ಕೇಡೆನಿಸಿತು. ಇದಕ್ಕೆ ತಕ್ಕ ಮದ್ದರೆಯಬೇಕು ಎಂದು ಮನಸ್ಸಲ್ಲೇ ನಿರ್ಧರಿಸಿದ.

ಮರುದಿನ ಬೀರಬಲ್ಲ ಆಸ್ಥಾನಕ್ಕೆ ಹೋಗಲಿಲ್ಲ. ತನ್ನ ಸಹಾಯಕನಲ್ಲಿ ಒಂದು ಸಂದೇಶ ಕೊಟ್ಟು ಕಳಿಸಿದ. ಅದರಲ್ಲಿ “ಮನೆಯಲ್ಲಿ ಅನ್ನ ಬೇಯಿಸುತ್ತಿದ್ದೇನೆ. ಬೆಂದೊಡನೆ ಒಲೆಯಿಂದ ಕೆಳಗಿಟ್ಟು ಆಸ್ಥಾನಕ್ಕೆ ಬರುತ್ತೇನೆ” ಎಂದು ಬರೆದಿತ್ತು. ಆದರೆ ಅಂದು ಅಕ್ಬರ್ ಆಸ್ಥಾನದಲ್ಲಿ ಇಡೀ ದಿನ ಕಾದರೂ ಬೀರಬಲ್ಲನ ಸುಳಿವೇ ಇರಲಿಲ್ಲ. ಎರಡನೇ ದಿನವೂ ಆತ ಕಾಣಿಸಲಿಲ್ಲ. ಮೂರನೇ ದಿನವೂ ಗೈರು. ಹೀಗೆ ನಾಲ್ಕು ದಿನಗಳಾದ ಮೇಲೆ ಅಕ್ಬರನ ಸಹನೆಯ ಕಟ್ಟೆಯೊಡೆಯಿತು. ಅನ್ನ ಬೇಯಿಸುತ್ತಿದ್ದೇನೆಂಬ ಕ್ಷುಲ್ಲಕ ಕಾರಣ ಕೊಟ್ಟು ನಾಲ್ಕು ದಿನ ತಲೆ ಮರೆಸಿಕೊಂಡಿದ್ದನ್ನು ಅವನಿಗೆ ಸಹಿಸಲಾಗಲಿಲ್ಲ. ಏನು ಕಥೆ ನೋಡೋಣ ಎಂದು ತಾನೇ ಬೀರಬಲ್ಲನ ಮನೆಗೆ ಪಾದ ಬೆಳೆಸಿದ. ಅಲ್ಲಿ ಹೋಗಿ ನೋಡಿದರೆ ನೋಡುವುದೇನು! ಒಂದು ಪುಟ್ಟ ಚಿಮಣಿ ದೀಪವನ್ನು ಬೀರಬಲ್ಲ ನೆಲದಲ್ಲಿ ಇಟ್ಟಿದ್ದಾನೆ. ಅದರ ನೇರಕ್ಕೆ ಮನೆಯ ಛಾವಣಿಗೆ ಒಂದು ಮಡಕೆಯನ್ನು ಕಟ್ಟಿ ತೂಗು ಬಿಟ್ಟಿದ್ದಾನೆ. ಅವೆರಡರ ನಡುವೆ ಕನಿಷ್ಠ ಹತ್ತಡಿಗಳ ಅಂತರ ಬೇರೆ! ಈ ಬಗೆಯಲ್ಲಿ ಅನ್ನ ಬೇಯಿಸುವ ವಿಧಾನವನ್ನು ಅಕ್ಬರ್ ಹಿಂದೆಂದೂ ನೋಡಿರಲಿಲ್ಲ! “ಇದೇನಯ್ಯಾ ನಿನ್ನ ಆಟ? ಈ ರೀತಿಯಲ್ಲಿ ಅನ್ನ ಎಂದಾದರೂ ಬೇಯುವುದುಂಟೆ? ಏನು ಹುಚ್ಚಾಟ ನಿನ್ನದು?” ಎಂದು ದಬಾಯಿಸಿದ. “ಹುಜೂರ್, ಮೈಲಿಯಷ್ಟು ದೂರದ ಕೋಟೆಯ ದೊಂದಿಯ ಬೆಳಕು ಕೊಳದಲ್ಲಿ ನಿಂತವನಿಗೆ ಶಾಖ ಕೊಡಬಹುದಾದರೆ ಈ ಚಿಮಣಿಯ ಬೆಳಕು ಆ ಮಡಕೆಗೆ ತಾಗುವುದಿಲ್ಲ ಎಂದು ಹೇಗೆ ಹೇಳುತ್ತೀರಿ?”, ಪ್ರಶ್ನಿಸಿದ ಬೀರಬಲ್ಲ. ಅಕ್ಬರನಿಗೆ ತನ್ನ ತಪ್ಪಿನ ಅರಿವಾಗಿಹೋಯಿತು ತಟ್ಟನೆ.

ಇಂಥ ಒಂದಲ್ಲ ನೂರಾರು ಕತೆಗಳನ್ನು ಕೇಳುತ್ತ ಬೆಳೆದವರು ನಾವು. ಅಕ್ಬರ್ ಎಂದರೆ ಸಾಕು, ಬೀರ್‍ಬಲ್ ಎಂಬ ಹೆಸರು ಅನಾಯಾಸವಾಗಿ ಬಾಯಿಗೆ ಬಂದು ಬಿಡುತ್ತದೆ. ಅಕ್ಬರ್ ಬೀರಬಲ್ಲರ ಕತೆಗಳ ವಿಶೇಷವೇನೆಂದರೆ ಯಾವ ಸಂದರ್ಭದಲ್ಲೂ ಬೀರಬಲ್ಲ ತನ್ನ ಬುದ್ಧಿವಂತಿಕೆಗೆ ಸೋಲಾಗದಂತೆ ನೋಡಿಕೊಳ್ಳುತ್ತಾನೆ. ಆದರೂ ದೊರೆಯ ಘನತೆಗೆ ಕುಂದಾಗದಂತೆ ನೋಡುವ ಜಾಣ್ಮೆಯನ್ನೂ ಮೆರೆಯುತ್ತಾನೆ. ಯಾವ ಸಂದರ್ಭದಲ್ಲೂ ಆತ ಎದುರಾಳಿಯ ಜೊತೆ ಕತ್ತಿಯ ಭಾಷೆಯಿಂದ ಮಾತಾಡುವ ಪ್ರಸಂಗವೇ ಬರುವುದಿಲ್ಲ. ಜಾಣನಿಗೆ ಮಾತ್ರವಲ್ಲ ಕೋಣನಿಗೂ ಮಾತಿನ ಪೆಟ್ಟಿನ ಮೂಲಕವೇ ಜ್ಞಾನೋದಯ ಮಾಡಿಸುವ ಮಹಾಜಾಣ ಅವನು. ಹೆಚ್ಚಿನ ಸಂದರ್ಭಗಳಲ್ಲಿ ಆತನ ನೀತಿಬೋಧೆಗಳು ನೇರವಾಗಿ ಅಕ್ಬರನನ್ನೇ ಕುರಿತಾಗಿರುತ್ತವೆ ಎಂಬುದು ಒಂದು ವಿಶೇಷ. ಪ್ರತಿಸಲ ಹಾಗೆ ಕಿವಿ ಹಿಂಡಿಸಿಕೊಂಡಾಗಲೂ ಅಕ್ಬರನಿಗೆ ಬೀರಬಲ್ಲನ ಮೇಲೆ ಕೋಪ ಹುಟ್ಟುವ ಬದಲು ವಿಸ್ಮಯ, ಆಶ್ಚರ್ಯ, ಗೌರವಗಳು ಹೆಚ್ಚಾಗುವಂತಾಗುವುದು ಬೀರಬಲ್ಲನ ಪ್ರಸಂಗಾವಧಾನತೆಯ ಹೆಚ್ಚುಗಾರಿಕೆ.

ಅವೆಲ್ಲ ಸರಿ, ಆದರೆ ಬೀರಬಲ್ಲ ಒಂದು ಕಾಲ್ಪನಿಕ ಪಾತ್ರವೇ? ಅಥವಾ ಅಂಥ ವ್ಯಕ್ತಿ ನಿಜವಾಗಿಯೂ ಇದ್ದನೇ? ಎಂಬ ಪ್ರಶ್ನೆ ಮಾತ್ರ ನಮ್ಮಲ್ಲಿ ಯಾರಿಗೂ ಬಂದಂತಿಲ್ಲ. ಕತೆಗಳನ್ನು, ಅವುಗಳಲ್ಲಿ ಬಂದುಹೋಗುವ ಪಾತ್ರಗಳ ಐತಿಹಾಸಿಕತೆಯ ಬಗ್ಗೆ ಯೋಚಿಸದೆ ಮೆಚ್ಚುವ ಎಳೆ ವಯಸ್ಸಿನಲ್ಲೇ ನಾವು ಅಕ್ಬರ್-ಬೀರಬಲ್ಲರ ಕತೆಗಳನ್ನು ಓದಿ ಮುಗಿಸುವುದರಿಂದ ಬೀರಬಲ್ಲ ನಿಜವಾಗಿಯೂ ಒಬ್ಬ ವ್ಯಕ್ತಿಯೇ ಅಥವಾ ಪಾತ್ರವೇ ಎಂಬ ಪ್ರಶ್ನೆ ನಮಗೆ ಎದುರಾಗುವುದೇ ಇಲ್ಲ. ಮುಂದೆ ಇತಿಹಾಸ ಪಠ್ಯಗಳನ್ನು ಓದುವಾಗಂತೂ ಬೀರಬಲ್ಲನ ಪ್ರಸ್ತಾಪ ಹೆಚ್ಚಿನ ಕಡೆಗಳಲ್ಲಿ ಬರುವುದಿಲ್ಲ. ಬಂದರೂ ಅಕ್ಬರನ ಆಸ್ಥಾನದ ನವರತ್ನಗಳೆಂಬ ಪಂಡಿತರ ಸಾಲಿನಲ್ಲಿ ಬೀರಬಲ್ಲನೂ ಇದ್ದ ಎಂಬ ಒಂದು ವಾಕ್ಯದಲ್ಲಿ ಅವನ ಇಡೀ ಜೀವನಚರಿತ್ರೆಯನ್ನು ಮುಗಿಸಿ ಬಿಡುತ್ತೇವೆ. ಅಂಥ ಹೆಸರಿನ ಒಬ್ಬ ಮಂತ್ರಿ ಅಕ್ಬರನ ಆಸ್ಥಾನದಲ್ಲಿದ್ದ; ಅವನ ಬುದ್ಧಿವಂತಿಕೆಯನ್ನು ಅತಿರಂಜಿಸಿ ಅದ್ಯಾರೋ ಮಕ್ಕಳ ಕತೆಗಳನ್ನು ಬರೆದಿದ್ದಾರಷ್ಟೇ ಎಂಬ ಷರಾ ಬರೆದು ಮುಂದೆ ಹೋಗಿ ಬಿಡುತ್ತೇವೆ. ಶಾಲಾ ಪಠ್ಯಗಳ ಹೊರತಾಗಿ, ಮಕ್ಕಳ ಕತೆ ಪುಸ್ತಕಗಳ ಹೊರತಾಗಿ ಬೀರಬಲ್ಲನ ಬಗ್ಗೆ ನಾವು ಓದಿದ್ದು, ಕೇಳಿದ್ದು ಇಲ್ಲವೇ ಇಲ್ಲ ಎನ್ನಬಹುದು ನಿಸ್ಸಂದಿಗ್ಧವಾಗಿ.

ಬೀರಬಲ್ಲ ಕಾಲ್ಪನಿಕ ವ್ಯಕ್ತಿಯಲ್ಲ; ಗತಕಾಲದಲ್ಲಿ ನಿಜಕ್ಕೂ ಈ ಭೂಮಿಯಲ್ಲಿ ನಡೆದಾಡಿದ್ದ ಒಬ್ಬ ಜೀವಂತ ಪಾತ್ರ. ಯಮುನಾ ನದಿಯ ದಂಡೆಯ ಮೇಲಿದ್ದ ತ್ರಿವಿಕ್ರಮಪುರ ಎಂಬ ಊರಲ್ಲಿ (ಈಗದರ ಹೆಸರು: ಟಿವಕಾಪುರ್) ಕ್ರಿಸ್ತಶಕ 1528ರಲ್ಲಿ ಕಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಬೀರಬಲ್ಲ ಹುಟ್ಟಿದ. ಅವನ ಬಾಲ್ಯದ ಹೆಸರು: ಮಹೇಶದಾಸ ಭಟ್ಟ. ಈತನಿನ್ನೂ ಚಿಕ್ಕ ಬಾಲಕನಾಗಿದ್ದಾಗಲೇ ತಂದೆ ಗಂಗದಾಸ ಭಟ್ಟರು ತೀರಿಕೊಂಡರು. ತಾಯಿ ಅನಭಾದೇವಿ ತನ್ನ ಕುಮಾರ ಐದು ವರ್ಷ ವಯಸ್ಸಿಗೆ ಬಂದಾಗ ಬ್ರಹ್ಮೋಪದೇಶ ಮಾಡಿಸಿ ಪತ್ರಪುಂಜ ಎಂಬ ಊರಲ್ಲಿದ್ದ ತನ್ನ ತಂದೆ ರೂಪಧರರ ಬಳಿ ಕಳಿಸಿದಳು. ಮಹೇಶದಾಸನ ಅಜ್ಜ ರೂಪಧರರು ಸಕಲ ಶಾಸ್ತ್ರ ಕೋವಿದರೆಂದು ಸುತ್ತಮುತ್ತಲಿನ ಹತ್ತೂರುಗಳಲ್ಲಿ ಹೆಸರು ಪಡೆದವರು. ಮೇಲಾಗಿ ಪ್ರಕಾಂಡ ಸಂಸ್ಕøತ ವಿದ್ವಾಂಸ. ಅವರ ಕೈಕೆಳಗೆ ಹನ್ನೆರಡು ವರ್ಷ ಅಧ್ಯಯನ ಮಾಡಿದ ಮಹೇಶದಾಸ ಸಂಸ್ಕøತ, ಹಿಂದೂಸ್ತಾನಿ (ಹಿಂದಿ ಮತ್ತು ಉರ್ದುಗಳ ಬೆರಕೆ ಭಾಷೆ) ಮತ್ತು ರಾಜ್ಯಭಾಷೆ ಪರ್ಶಿಯನ್‍ಗಳಲ್ಲಿ ಪಾಂಡಿತ್ಯ ಸಂಪಾದಿಸಿದ. ಸ್ವತಂತ್ರವಾಗಿ ಕವಿತಾ ರಚನೆ ಮಾಡುವ, ಸುಶ್ರಾವ್ಯವಾಗಿ ಹಾಡುವ ಕಲೆಯೂ ಒಲಿಯಿತು. ಯುದ್ಧ ವಿದ್ಯೆಯಲ್ಲೂ ಪಾರಂಗತನಾದ. ಹದಿನೆಂಟು ತುಂಬಿದ ಮೇಲೆ ಪ್ರತಿಭೆಗೆ ತಕ್ಕ ಮನ್ನಣೆ ಕೊಡುವ ರಾಜಾಶ್ರಯವನ್ನು ಹುಡುಕುತ್ತ ಹೊರಟ.

ಮಹೇಶದಾಸನ ಕಲಾ ಪ್ರತಿಭೆಯನ್ನು ಮೊದಲು ಗುರುತಿಸಿದವನು ಜೈಪುರದ ಮಹಾರಾಜ ಭಗವಾನ್‍ದಾಸ್. ಅಲ್ಲಿ ರಾಜಾಶ್ರಯದಲ್ಲಿ ಕೆಲವು ದಿನಗಳನ್ನು ಕಳೆದ ಮಹೇಶದಾಸ, ತನ್ನ ಸ್ವರಚಿತ ಕವಿತೆಗಳನ್ನು ರಾಗಬದ್ಧವಾಗಿ ಹಾಡುತ್ತ ಪ್ರಸಿದ್ಧಿಗೆ ಬಂದ. ಅಲ್ಲಿಂದ ಮುಂದಕ್ಕೆ ಬಾಗೇಲಖಂಡದ (ಇದಕ್ಕೆ ರೇವಾ ಸಂಸ್ಥಾನ ಎಂಬ ಹೆಸರಿತ್ತು) ಮಹಾರಾಜ ರಾಮಚಂದ್ರನ ಆಸ್ಥಾನದಲ್ಲಿ ಕವಿಯಾದ. ಅದೇ ಸಮಯದಲ್ಲಿ ಮಹೇಶದಾಸನಿಗೆ ಕಲಿಂಜರ್ ಪಟ್ಟಣದ ಶ್ರೀಮಂತ ಕುಲದ ಯುವತಿಯೊಂದಿಗೆ ವಿವಾಹವೂ ನೆರವೇರಿತು. ಬಡ ಬ್ರಾಹ್ಮಣನೆಂಬ ಉಪಾಧಿ ಕಳೆದು ಶ್ರೀಮಂತಿಕೆಯ ಮೇಲ್ದರ್ಜೆ ಸಿಕ್ಕಿತು. ಅಷ್ಟರಲ್ಲಾಗಲೇ ಮಹೇಶದಾಸನ ಕವಿತಾ ಚಾತುರ್ಯ, ಸಂಗೀತ ಜ್ಞಾನ ಮತ್ತು ಹಾಡುಗಾರಿಕೆಯ ಕೌಶಲಗಳು ರಾಜ್ಯದಿಂದ ಹೊರಕ್ಕೂ ಪ್ರಸಾರವಾದವು. ಬ್ರಹ್ಮ ಕವಿ ಎಂಬ ಹೆಸರಲ್ಲಿ ಆತ ಬರೆಯುತ್ತಿದ್ದ ಕವಿತೆಗಳು ಜನಸಾಮಾನ್ಯರ ನಾಲಗೆಯ ಮೇಲೂ ಕುಣಿದಾಡಲು ಶುರು ಮಾಡಿತು. ಗಂಧವನ್ನು ಎಷ್ಟು ದಿನ ಬಚ್ಚಿಡಬಹುದು?ರೇವಾ ರಾಜ್ಯದ ಈ ಪ್ರತಿಭಾವಂತನ ವಿವರಗಳನ್ನು ತರಿಸಿಕೊಂಡ ಮುಘಲ್ ಮಹಾರಾಜ ಅಕ್ಬರ್, ತನ್ನಲ್ಲಿ ಬಂದು ಆಶ್ರಯ ಪಡೆಯುವಂತೆ ಪ್ರೀತಿಯ ಆಮಂತ್ರಣ ಕಳಿಸಿದ. ಅಕ್ಬರನ ಕರೆಯನ್ನು ಮನ್ನಿಸಿ, 1556ರಲ್ಲಿ, ಮಹೇಶದಾಸ ಆಗ್ರಾಕ್ಕೆ ಪ್ರಯಾಣ ಬೆಳೆಸಿದ. ಅವನೊಂದಿಗೆ, ಬಾಗೇಲಖಂಡದಿಂದ ಅಕ್ಬರನಲ್ಲಿಗೆ ಬಂದು ಸೇರಿಕೊಂಡ ಇನ್ನೊಬ್ಬ ಕಲಾವಿದ ಸಂಗೀತ ಸಮ್ರಾಟ ತಾನ್‍ಸೇನ್. ಇಬ್ಬರೂ ಸರಿ ಸುಮಾರು ಒಂದೇ ಸಮಯದಲ್ಲಿ ಅಕ್ಬರನ ರಾಜಾಶ್ರಯ ಪಡೆದು ಹಲವು ವರ್ಷಗಳ ನಂತರ ಅವನ ನವರತ್ನಗಳ ಪಟ್ಟಿಯಲ್ಲಿ ಜಾಗ ಪಡೆದುಕೊಂಡರು.

ತನ್ನ ಕೈಕೆಳಗೆ ಬಂದ ಕೆಲವೇ ದಿನಗಳಲ್ಲಿ ಮಹೇಶದಾಸನ ಜಾಣ್ಮೆ, ಪ್ರತಿಭೆ, ಕಾವ್ಯ ಸಾಮರ್ಥ್ಯಗಳ ಅರಿವು ಅಕ್ಬರನಿಗಾಯಿತು. ಇಲ್ಲೊಂದು ಸ್ವಾರಸ್ಯವನ್ನೂ ಗಮನಿಸಬೇಕು. ತಾನ್‍ಸೇನ್ ಮತ್ತು ಮಹೇಶ್‍ದಾಸರನ್ನು ತನ್ನಲ್ಲಿಗೆ ಬರಮಾಡಿಕೊಂಡ ಅಕ್ಬರ್ ಮಧ್ಯವಯಸ್ಕನೇನೂ ಆಗಿರಲಿಲ್ಲ. ಆಗವನಿಗಿನ್ನೂ ಹದಿನಾಲ್ಕರ ಹರೆಯ ಅಷ್ಟೆ! ಅಕ್ಬರನ ಆಸ್ಥಾನವನ್ನು ಕವಿಯಾಗಿ, ಸಚಿವನಾಗಿ ಸೇರಿಕೊಂಡಾಗ ಮಹೇಶದಾಸನಿಗೆ ಇಪ್ಪತ್ತೆಂಟರ ಹರೆಯ. ಅಂದರೆ ಚಕ್ರವರ್ತಿಗೂ ಸಚಿವನಿಗೂ ಹದಿನಾಲ್ಕು ವರ್ಷಗಳ ಅಂತರವಿತ್ತು. ಪ್ರಾಯದಲ್ಲಿ ಅಕ್ಬರನೇ ಎಳೆಯ. ಹಾಗಾಗಿ ಆ ಸಮಯದಲ್ಲಿ ಎಲ್ಲ ನಿರ್ಣಯಗಳನ್ನೂ ಅಕ್ಬರನೊಬ್ಬನೇ ತೆಗೆದುಕೊಂಡನೆಂಬುದಕ್ಕಿಂತ ಅವನ ಮಾವ ಬೈರಾಮ್ ಖಾನನ ಬೆಂಬಲವೂ ಇದ್ದಿರಬೇಕು ಎಂದು ಭಾವಿಸಬಹುದು. ಅಕ್ಬರನನ್ನು ಪಟ್ಟದಿಂದ ಇಳಿಸಬೇಕೆಂದು ತೆರೆಮರೆಯಲ್ಲಿ ಕುಸ್ತಿಯಾಡುವವರು ಬಹಳ ಮಂದಿ ಇದ್ದ ಸಂದರ್ಭದಲ್ಲಿ ಆತನಿಗೆ ತನ್ನ ನಿಷ್ಠೆಯನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡವನು ಮಹೇಶದಾಸ. ಈ ನಿಸ್ಪøಹತೆಯೇ ಅವರಿಬ್ಬರನ್ನೂ ಹತ್ತಿರ ತಂದಿತೆಂದು ಹೇಳಬೇಕು. ರಾಜಕಾರಣಕ್ಕೆ ಸಂಬಂಧಿಸಿದ ಅತ್ಯಂತ ಪ್ರಮುಖ ವಿಚಾರಗಳನ್ನು ಅಕ್ಬರ್ ಮಹೇಶದಾಸನೊಂದಿಗೆ ಚರ್ಚಿಸದೆ ಮುಂದಡಿ ಇಡುವುದಿಲ್ಲವೆಂಬ ಪರಿಸ್ಥಿತಿ ಬಂತು. ಸಹಜವಾಗಿಯೇ ಇದು ಅಕ್ಬರನ ಆಸ್ಥಾನದಲ್ಲಿ ಲಾಗಾಯ್ತಿನಿಂದಿದ್ದ ಪಟ್ಟಭದ್ರ ಹಿತಾಸಕ್ತ ಮಂದಿಗೆ ರುಚಿಸಲಿಲ್ಲ.

ಮಹೇಶದಾಸನ ಬುಡವನ್ನು ಅಭದ್ರಗೊಳಿಸಲು ಮೇಲಿಂದ ಮೇಲೆ ಪಿತೂರಿಗಳಾದವು. ಇಂಥ ಒಳಸಂಚುಗಳ ವಿವರಗಳು ಹೊರ ಬಂದಾಗೆಲ್ಲ ಅಕ್ಬರ-ಮಹೇಶರ ಬಂಧ ಗಟ್ಟಿಯಾಗುತ್ತಲೇ ಹೋಯಿತು. ಯುದ್ಧ ವಿದ್ಯೆಯಲ್ಲಿ ಗಟ್ಟಿಗನಾಗಿದ್ದ ಮಹೇಶದಾಸನನ್ನು ಅಕ್ಬರ್ ಒರಿಸ್ಸಾ, ಬಿಹಾರ, ಬಂಗಾಳ,ಮಧ್ಯಪ್ರದೇಶಗಳಲ್ಲಿ ನಡೆದ ಹಲವು ಯುದ್ಧಗಳಲ್ಲಿ ಜೊತೆ ಮಾಡಿಕೊಂಡಿದ್ದ. ಯುದ್ಧ ತಂತ್ರಗಳಲ್ಲೂ ಅವನ ಸಲಹೆಗಳು ಅಕ್ಬರನಿಗೆ ಅಗತ್ಯವಾಗಿ ಬೇಕಿತ್ತೆನ್ನಬಹುದೇನೋ. ಪಂಜಾಬ್‍ನ ಸುಲ್ತಾನ್‍ಪುರದಲ್ಲಿ ನಡೆದ ಒಂದು ಯುದ್ಧದಲ್ಲಿ ಮುಘಲ್ ಸೇನೆಯನ್ನು ಮಹೇಶದಾಸನೇ ಏಕಾಂಗಿಯಾಗಿ ಮುನ್ನಡೆಸಿ ಗೆಲುವು ತಂದುಕೊಟ್ಟದ್ದರಿಂದಾಗಿ ಸಂತುಷ್ಟನಾದ ಅಕ್ಬರ್ ಆತನಿಗೆ ವೀರ್‍ವರ್ ಎಂಬ ಬಿರುದನ್ನು ದಯಪಾಲಿಸಿದ. ಇದೇ ಹೆಸರೇಕೆ ಎಂಬುದಕ್ಕೆ ಒಂದು ಸ್ವಾರಸ್ಯಕರ ಹಿನ್ನೆಲೆಕತೆಯಿದೆ. ಸಂಸ್ಕøತದ ಕಥಾ ಸಾಹಿತ್ಯವಾದ “ವೇತಾಲ ಪಂಚವಿಂಶತಿ”ಯ ಮೂರನೇ ಕತೆಯಲ್ಲಿ ವೀರವರನೆಂಬ ಒಂದು ಪಾತ್ರವಿದೆ. ರಾಜನ ಅತ್ಯಂತ ನಿಷ್ಠ ಸೇನಾಧಿಕಾರಿಯ ಪಾತ್ರವದು. ಅಕ್ಬರನಿಗೆ ಆ ಕತೆ ಅದೆಷ್ಟು ಇಷ್ಟವಾಗಿತ್ತೆಂದರೆ ತನ್ನ ಅತ್ಯಂತ ನಂಬಿಕಸ್ಥ ಸಚಿವನಾದ ಮಹೇಶದಾಸನಿಗಲ್ಲದೆ ಆ ಹೆಸರನ್ನು ಬೇರಾರಿಗೂ ಆರೋಪಿಸಲು ಸಾಧ್ಯವಿಲ್ಲವೆಂದು ಹೇಳಿದನಂತೆ. ಹೀಗೆ, ದೊರೆಯಿಂದ ಪಡೆದ ವೀರವರನೆಂಬ ಬಿರುದಿನಿಂದ ಮಹೇಶದಾಸನೂ ಉಬ್ಬಿ ಹೋದನೆಂದು ಕಾಣುತ್ತದೆ. ಆತ ಮುಂದೆ ಬರೆದ ಹಲವು ಕವಿತೆಗಳಲ್ಲಿ ತನ್ನ ಹೆಸರನ್ನು ವೀರವರನೆಂದೇ ಉಲ್ಲೇಖಿಸಿದ್ದಾನೆ. ಯಾವುದೇ ನಾಮಸೂಚಕ ಪದದಲ್ಲಿ ರಕಾರ ಅಕ್ಕಪಕ್ಕದಲ್ಲಿ ಎರಡೆರಡು ಬಾರಿ ಕಾಣಿಸಿಕೊಂಡರೆ ಎರಡನೇ ಅಕ್ಷರವನ್ನು ಲಕಾರವಾಗಿ ಉಚ್ಚರಿಸಬೇಕೆಂಬುದು ಸಂಸ್ಕøತ ವ್ಯಾಕರಣದ ನಿಯಮ. ಅದರಿಂದ ವೀರವರನೇ ಮುಂದೆ ವೀರವಲನಾದ. ಪರ್ಶಿಯನ್ ಉಚ್ಚಾರಗಳಲ್ಲಿ ವಕಾರ ಅಪಭ್ರಂಶವಾಗಿ ಬಕಾರವಾಗುವುದರಿಂದ ಅಕ್ಬರನ ಆಸ್ಥಾನಿಕರ ನಾಲಗೆಯಲ್ಲಿ ಅವನೇ ಬೀರಬಲನಾದ. ಮಹೇಶದಾಸನೆಂಬ ಜನ್ಮನಾಮ ಬಿದ್ದು ಹೋಗಿ ಬೀರಬಲನೆಂಬ ಗೌರವ ಸೂಚಕವೇ ಗಟ್ಟಿಯಾಯಿತು.

ಕಾಲ ಸರಿದಂತೆ ಬೀರಬಲ್ಲ ಅಕ್ಬರನ ಅತ್ಯಂತ ನಿಕಟವರ್ತಿಯಾಗಿ ಬೆಳೆದ. ಅವರಿಬ್ಬರನ್ನು ಬೇರ್ಪಡಿಸುವುದಾಗಲೀ ಮನಸ್ತಾಪ ತಂದು ಹಾಕುವುದಾಗಲೀ ಸಾಧ್ಯವೇ ಇಲ್ಲವೆಂಬ ತಥ್ಯ ಆಸ್ಥಾನಿಕರಿಗೆ ತಡವಾಗಿ ತಿಳಿಯಲಾರಂಭಿಸಿತು. ಎರಡು ಸಂದರ್ಭಗಳಲ್ಲಿ ಅಕ್ಬರ್ ಸ್ವತಃ ತನ್ನ ಜೀವದ ಹಂಗು ತೊರೆದು ಬೀರಬಲ್ಲನನ್ನು ಅಪಾಯದಿಂದ ರಕ್ಷಿಸಿದ ಘಟನೆಗಳೂ ನಡೆದವು. ಒಮ್ಮೆ ಕುದುರೆ ಪೋಲೋ ಆಡುತ್ತಿದ್ದ ಸಂದರ್ಭದಲ್ಲಿ ಬೀರಬಲ್ಲ ಆಯತಪ್ಪಿ ಕುದುರೆಯಿಂದ ಬಿದ್ದಾಗ, ಆತನ ಉಪಚಾರ ಮಾಡಿದವನು ಅಕ್ಬರನೇ. ಇನ್ನೊಮ್ಮೆ, ಎರಡು ಮದಗಜಗಳ ಕಾದಾಟ ನೋಡುತ್ತಿದ್ದಾಗ, ಅವುಗಳಲ್ಲೊಂದು ಧುತ್ತನೆ ತನ್ನ ದಿಕ್ಕು ಬದಲಿಸಿ ಬೀರಬಲ್ಲನತ್ತ ಓಡಿ ಬರಲು ತೊಡಗಿತಂತೆ. ಅಪಾಯದ ಮುನ್ಸೂಚನೆಯನ್ನು ತಕ್ಷಣ ಗ್ರಹಿಸಿದ ಅಕ್ಬರ್ ಕುದುರೆ ಹತ್ತಿ ವೇಗವಾಗಿ ಬಂದು ಆನೆ ಮತ್ತು ಬೀರಬಲ್ಲರ ನಡುವಲ್ಲಿ ನಿಂತನಂತೆ. ಗಲಿಬಿಲಿಗೊಂಡ ಆನೆ ವಾಪಸ್ ಹೋಯಿತು; ಬೀರಬಲ್ಲನ ಜೀವ ಉಳಿಯಿತು ಎಂಬ ದಂತಕತೆ ಇದೆ. ಹಿಂದೂ ಮುಸ್ಲಿಮರ ನಡುವೆ ಸೌಹಾರ್ದ ಬೆಳೆಸಲು ಅಕ್ಬರ್ ತನ್ನ ಇಳಿಗಾಲದಲ್ಲಿ ದೀನ್-ಇ-ಇಲಾಹಿ ಎಂಬ ಹೊಸ ಮತವೊಂದನ್ನು ಸ್ಥಾಪಿಸಿದಾಗ ಆತನ ರಾಜ್ಯದ ಸಮಸ್ತ ಜನತೆಯ ಪೈಕಿ ಆ ಮತಕ್ಕೆ ಬೆಂಬಲ ಕೊಟ್ಟು ಸೇರುವವನು ಒಬ್ಬನೇ – ಬೀರಬಲ್ಲ ಮಾತ್ರ! ಇದು ಅಕ್ಬರನ ಪ್ರಯತ್ನದ ವಿಫಲತೆಯ ಜೊತೆಜೊತೆಗೆ ಬೀರಬಲ್ಲನ ಸ್ವಾಮಿಭಕ್ತಿಗೂ ದೃಷ್ಟಾಂತವಾಗಿದೆ.

ಬೀರಬಲ್ಲ, ಅಕ್ಬರನ ಕೈಕೆಳಗೆ ಬರೋಬ್ಬರಿ ಇಪ್ಪತ್ತೇಳು ವರ್ಷಗಳ ಕಾಲ ಸೇವೆ ಸಲ್ಲಿಸಿದ. 1583ರಲ್ಲಿ ಆತ ಅಕ್ಬರನ ಕೋರಿಕೆಯ ಮೇರೆಗೆ ಅಫಘಾನಿಸ್ತಾನದ ಕಡಿದಾದ ಕಣಿವೆಗಳಲ್ಲಿ ಮುಘಲ್ ಸೈನ್ಯವನ್ನು ಮುನ್ನಡೆಸಿಕೊಂಡು ಹೋಗಬೇಕಾಯಿತು. ಅಫಘನದ ಕಣಿವೆಗಳಲ್ಲಿದ್ದ ಯುಸೂಫ್‍ಜಾಯಿ,ಪಶ್ತುನಿ, ಮಂದರ್ ಅಫಘನಿಗಳೆಂಬ ಬುಡಕಟ್ಟು ಜನರ ಪುಂಡಾಟ ಮೇರೆ ಮೀರಿದ್ದುದರಿಂದ ಅವರನ್ನು ಆದಷ್ಟು ಬೇಗ ನಿಗ್ರಹಿಸಲೇಬೇಕಾಗಿತ್ತು. ಶೇಕ್ ಫರಿದ್, ಶೇಕ್ ಫೈಝಿ, ಶೇರ್ ಖ್ವಾಜಾ ಫತಾಉಲ್ಲ ಮುಂತಾದ ಹಲವು ಸೇನಾಧಿಕಾರಿಗಳನ್ನು ಅಕ್ಬರ್ ಅತ್ತ ಕಳಿಸಿದರೂ ಕಣಿವೆ ಜನರ ಆಟಾಟೋಪಗಳನ್ನು ಹತ್ತಿಕ್ಕುವದರಲ್ಲಿ ಅವರ್ಯಾರೂ ಯಶಸ್ವಿಯಾಗಿರಲಿಲ್ಲ. ಕೊನೆಯ ಪ್ರಯತ್ನವೆಂಬಂತೆ ಆತ ಅಫಘಾನಿಸ್ತಾನ ಪ್ರಾಂತ್ಯದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ ಝೈನ್ ಖಾನ್‍ನ ಸಹಾಯಕ್ಕೆ ಬೀರಬಲ್ಲನೊಡನೆ ತನ್ನ ಸೈನ್ಯವನ್ನು ಕಳಿಸಿಕೊಟ್ಟ. ಆದರೆ ಝೈನ್ ಖಾನ್‍ನಿಗೆ ಬೀರಬಲ್ಲನ ಮೇಲೆ ಹಳೆಯ ದ್ವೇಷವಿತ್ತೆಂಬ ವಿಚಾರ ಮಾತ್ರ ಅಕ್ಬರನಿಗಾಗಲೀ ಸ್ವತಃ ಬೀರಬಲ್ಲನಿಗಾಗಲೀ ತಿಳಿದಿರಲಿಲ್ಲ. ಬೀರಬಲ್ಲ ಅಕ್ಬರನ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರಿಂದಲೇ ತನ್ನ ಏಳಿಗೆ ಮುಕ್ಕಾಯಿತೆಂಬ ಭ್ರಮೆ ಮತ್ತು ಹಗೆ ಝೈನ್ ಖಾನನ ರಕ್ತದ ತೊಟ್ಟು ತೊಟ್ಟಿನಲ್ಲೂ ತುಂಬಿಕೊಂಡಿತ್ತು. ಬೀರಬಲ್ಲನ ಮೇಲೆ ಹಗೆ ಸಾಧಿಸಲು ಕಾಯುತ್ತಿದ್ದವನಿಗೆ ಈಗ ರೊಟ್ಟಿಯೇ ಜಾರಿ ತುಪ್ಪದಲ್ಲಿ ಬಿದ್ದಂತಾಯಿತು. ಆತ ಅಫಘಾನಿಸ್ತಾನಕ್ಕೆ ಬಂದ ಬೀರಬಲ್ಲನನ್ನು ದಾರಿ ತಪ್ಪಿಸಿ ಒಂದು ಸಣ್ಣ ಕಣಿವೆಯ ಮಾರ್ಗದಲ್ಲಿ ಸಾಗುವಂತೆ ಪ್ರೇರೇಪಿಸಿದ. ಆ ಪ್ರದೇಶದ ಸಂಪೂರ್ಣ ಪರಿಚಯವಿರದಿದ್ದ ಬೀರಬಲ್ಲ ತನ್ನ ಸೇನೆಯೊಂದಿಗೆ ಝೈನ್ ಖಾನ್ ಹೇಳಿದ ದಾರಿಯಲ್ಲಿ ಸಾಗಿ ಬರುತ್ತಿದ್ದಾಗ, ಅದಕ್ಕೆಂದೇ ಕಾದಂತಿದ್ದ ಬುಡಕಟ್ಟು ವೈರಿಗಳು ಮುಗಿಬಿದ್ದು ಗೆರಿಲ್ಲಾ ಮಾದರಿಯ ಯುದ್ಧ ಮಾಡಿ ಇಡೀ ಮುಘಲ್ ಸೇನೆಯನ್ನು ಚಿತ್ರಾನ್ನ ಮಾಡಿ ಹಾಕಿದರು. ನೆಲದ ತಂತ್ರಗಳ ಪರಿಚಯವಿರದಿದ್ದ ದೆಹಲಿಯ ಸೇನೆ ಸುಲಭದಲ್ಲಿ ಶರಣಾಗತವಾಯಿತು. ಗಲಭೆಯ ಮಧ್ಯದಲ್ಲಿ ಯಾರೋ ಬೀರಬಲ್ಲನ ಎದೆಗೆ ಕಠಾರಿಯಿಂದ ಹೊಡೆತ ಕೊಟ್ಟೇ ಬಿಟ್ಟರು. ಆತ ನೆಲಕ್ಕುರುಳಿದ. 1583ರ ಫೆಬ್ರವರಿ 16ರಂದು, ಹೀಗೆ, ಯುದ್ಧಭೂಮಿಯಲ್ಲಿ ಅವನ ದೇಹಾಂತವಾಯಿತು.

ಬೀರಬಲ್ಲನ ಮರಣದ ವಾರ್ತೆ ಕೇಳಿ ಅಕ್ಬರ ಅದೆಷ್ಟು ಯಾತನೆ ಪಟ್ಟನೆಂದರೆ ಎರಡು ದಿನ ಅನ್ನಾಹಾರ ತ್ಯಜಿಸಿದ. ತನ್ನ ಪರಮಾಪ್ತ ಸ್ನೇಹಿತನನ್ನು ಅಫಘಾನಿಸ್ತಾನಕ್ಕೆ ಕಳಿಸುವ ಮೂಲಕ ಅತಿದೊಡ್ಡ ತಪ್ಪು ಮಾಡಿದೆನೆಂದು ಜೀವನದ ಕೊನೆಯವರೆಗೂ ಆತನೊಳಗೆ ಕೊರಗು ಉಳಿದು ಹೋಯಿತು. ಬಡಬ್ರಾಹ್ಮಣ ಕುಟುಂಬವೊಂದರಲ್ಲಿ ಹುಟ್ಟಿ ತನ್ನ ಸ್ವಂತ ಪರಿಶ್ರಮದಿಂದ ಮೇಲೆ ಬಂದು, ಹಲವು ರಾಜರ ಆಶ್ರಯ ಮತ್ತು ಗೌರವ ಪಡೆದು, ಆ ಕಾಲದ ಬಹುದೊಡ್ಡ ಸಾಮ್ರಾಜ್ಯದ ಚಕ್ರವರ್ತಿಯ ಅಂತರಂಗದ ಗೆಳೆಯನಾಗುವ ಮಟ್ಟಕ್ಕೇರಿದ ಮಹೇಶದಾಸ ಭಟ್ಟ ಅಲಿಯಾಸ್ ಬೀರಬಲ್ಲನ ಕತೆ ನಿಜಕ್ಕೂ ರೋಮಾಂಚಕ ಮತ್ತು ಸ್ಪೂರ್ತಿದಾಯಕ. ತನ್ನ ಜೀವನದ ಅರ್ಧ ಭಾಗವನ್ನು ಮುಸ್ಲಿಂ ದೊರೆಯ ಅಧಿಪತ್ಯದಲ್ಲಿ ಕಳೆಯಬೇಕಾಗಿ ಬಂದರೂ ತೀರಿಕೊಳ್ಳುವ ಗಳಿಗೆಯವರೆಗೆ ಬೀರಬಲ್ಲ ಹಿಂದೂ ಆಗಿಯೇ ಉಳಿದ. ಜೀವನಪರ್ಯಂತ ಕಟ್ಟಾ ಸಸ್ಯಾಹಾರಿಯಾಗಿದ್ದ. ಸತ್ತ ಮೇಲೆ ತನ್ನ ಅಸ್ಥಿಯನ್ನು ಹರಿದ್ವಾರದ ಗಂಗೆಯಲ್ಲಿ ವಿಸರ್ಜಿಸಬೇಕೆಂಬುದು ಅವನ ಬಯಕೆಯಾಗಿತ್ತು. ಅಕ್ಬರ್, ಗಂಗೆಯ ಪಕ್ಕದಲ್ಲೊಂದು ಬಾವಿ ತೋಡಿಸಿ ಅಲ್ಲಿ ಬೀರಬಲ್ಲನ ಅಸ್ಥಿಯನ್ನು ಪೆಟ್ಟಿಗೆಯಲ್ಲಿ ಇರಿಸಿದ. ಬೀರಬಲ್ಲನ ಹೆಸರಿನಲ್ಲಿ ಇಂದಿಗೂ ನೋಡಲು ಸಿಗುವ ಎರಡು ದಾಖಲೆಗಳೆಂದರೆ, ಒಂದು – ಫತೇಪುರ ಸಿಕ್ರಿಯಲ್ಲಿ, ಅಕ್ಬರನ ಪತ್ನಿ ಜೋಧಾಭಾಯಿಯ ಅರಮನೆಯ ಪಕ್ಕದಲ್ಲಿ ನಿಂತಿರುವ ಅವನ ಭವ್ಯವಾದ ಮನೆ. ಇದು ಕ್ರಿಸ್ತಶಕ 1581ರಲ್ಲಿ ನಿರ್ಮಾಣವಾಯಿತು. ಎರಡನೆಯದು – ಬೀರಬಲ್ಲ ಬರೆದಿರುವ ಕೆಲವು ಕವಿತೆಗಳು, ಪತ್ರಗಳು ಇತ್ಯಾದಿ ಲಿಖಿತ ದಾಖಲೆ. ಇದನ್ನು ರಾಜಸ್ಥಾನದ ಭರತ್‍ಪುರ ವಸ್ತುಸಂಗ್ರಹಾಲಯದಲ್ಲಿ ರಕ್ಷಿಸಿಟ್ಟಿದ್ದಾರೆ.

ಅಕ್ಬರ್ ಮತ್ತು ಬೀರಬಲ್ಲರ ನಡುವಿನ ಹಲವಾರು ರಾಜತಾಂತ್ರಿಕ ಮಾತುಕತೆಗಳ ವಿವರಗಳು ನಮಗೆ ಹಲವು ಐತಿಹಾಸಿಕ ಗ್ರಂಥಗಳಲ್ಲಿ ಸಿಗುತ್ತವಾದರೂ ಅವರಿಬ್ಬರನ್ನೂ ದಂತಕತೆಯ ಮಟ್ಟಕ್ಕೇರಿಸಿದ ಹಾಸ್ಯಕತೆಗಳು ಹುಟ್ಟಿದ್ದು ಹಲವಾರು ದಶಕಗಳ ನಂತರವೇ. ಶುರು ಮಾಡಿದವರು ಯಾರೇ ಇರಲಿ;ಕತೆಗಳಲ್ಲಿ ಅಕ್ಬರನ ಘನತೆಯನ್ನು ಕುಂದಾಗಿಸದೆ ಬೀರಬಲ್ಲನ ಬುದ್ಧಿವಂತಿಕೆಯನ್ನು ಪ್ರಕಟಪಡಿಸುವ ಕಥಾ ಹಂದರ ಹೆಣೆದ ಅವರ ಜಾಣ್ಮೆಯನ್ನು ಮೆಚ್ಚಿಕೊಳ್ಳಲೇಬೇಕು! ಬಹುಶಃ ಅಕ್ಬರನ ಕಾಲಕ್ಕಾಗಲೇ ಕೃಷ್ಣದೇವರಾಯ ಮತ್ತು ತೆನಾಲಿ ರಾಮಕೃಷ್ಣರ ಕತೆಗಳು ಜನಪದದಲ್ಲಿ ಪ್ರಚಲಿತವಿದ್ದಿರಬೇಕು (ಅವರು ಬಾಬರನ ಸಮಕಾಲೀನರು). ಅಂಥದೊಂದು ಹೊಚ್ಚ ಹೊಸ ಜನಪದ ಸಾಹಿತ್ಯವನ್ನು ತಾವೂ ಸೃಷ್ಟಿಸಬೇಕೆಂಬ ಒತ್ತಡ ಉತ್ತರದವರಿಗೆ ಹುಟ್ಟಿದ್ದಿರಬೇಕು. ಅಲ್ಲದೆ ಅಕ್ಬರನಿಗಿಂತ ಬೀರಬಲ್ಲ ಬುದ್ಧಿವಂತನಾಗಿದ್ದ ಎಂದು ತೋರಿಸುವ ಮೂಲಕ ಹಿಂದೂಗಳಿಗೆ ಮುಘಲ್ ಆಡಳಿತದ ವಿರುದ್ಧ ಒಂದು ಸಾತ್ವಿಕ ಸಿಟ್ಟನ್ನು ಹೊರ ಹಾಕುವ ಅಗತ್ಯವೂ ಇತ್ತೇನೋ. ಬ್ರಾಹ್ಮಣ ಬುದ್ಧಿವಂತಿಕೆಗೆ ಪರ್ಯಾಯವೆಂದು ಪರಿಗಣಿಸಲ್ಪಡುತ್ತಿದ್ದ ಕಾಲವಾದ್ದರಿಂದ, ಅಂಥ ಕ್ರಾಂತಿಕಾರಿಗಳಿಗೆ ಅಕ್ಬರ್ – ಬೀರಬಲ್ ಸಮೀಕರಣ ಒಪ್ಪಿತವಾಗಿದ್ದಿರಬಹುದು. ಮತ-ಧರ್ಮಗಳು ಯಾವುದೇ ಇರಲಿ, ರಾಜಸತ್ತೆಯ ವಿರುದ್ಧ ಇಂಥದ್ದೊಂದು ತೆಳ್ಳನೆಯ ವಿರೋಧದ ಧ್ವನಿ ಎಲ್ಲಾ ಕಾಲದಲ್ಲೂ ಇರುವಂಥಾದ್ದೇ ಅಲ್ಲವೆ?

ಬೀರಬಲ್ಲನ ಬಗ್ಗೆ ಇಷ್ಟೆಲ್ಲ ಬರೆದ ಮೇಲೆ ಆತನ ಹೆಸರಲ್ಲಿ ಪ್ರಚಲಿತವಿರುವ ದಂತಕತೆಗಳಲ್ಲಿ ಒಂದನ್ನಾದರೂ ನೆನೆಸಿಕೊಳ್ಳದೆ ಹೋದರೆ ಹೇಗೆ! ಚಾಲ್ತಿಯಲ್ಲಿರುವ ಕತೆಗಳಲ್ಲಿ ಒಂದು ಹೀಗಿದೆ: ಒಮ್ಮೆ ಅಕ್ಬರ್, “ನನ್ನ ಅಂತಃಪುರದಲ್ಲಿ ಗೋಡೆಯ ಮೇಲೆ ಒಂದು ವಾಕ್ಯವನ್ನು ಬರೆಸಬೇಕೆಂದಿದ್ದೇನೆ. ಖುಷಿಯ ಸಂತೋಷದಲ್ಲಿ ಬೇಸರವನ್ನೂ ಬೇಸರ ಸಂದರ್ಭದಲ್ಲಿ ಉತ್ಸಾಹವನ್ನೂ ಕೊಡುವಂತಿರಬೇಕು ಅದು. ಅಂಥದೊಂದು ಮಾತನ್ನು ಹೇಳು” ಎಂದು ಹೇಳಿದನಂತೆ. ಪ್ರತ್ಯುತ್ಪನ್ನಮತಿಯಾದ ಬೀರಬಲ್ಲ ತಟ್ಟನೆ ಹೇಳಿದನಂತೆ, “ಹುಜೂರ್, ಈ ಮಾತನ್ನು ಬರೆಸಿ: ಯಹ್ ವಖ್ತ್ ಭೀ ನಿಕಲ್ ಜಾಯೇಗಾ (ಈ ಸಮಯವೂ ಕಳೆದುಹೋಗುತ್ತದೆ)”.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!