ಅಂಕಣ

ನೀ ಮರೆತರೂ ನಾ ಮರೆಯುವುದಿಲ್ಲ ನಿನ್ನ

गुरु ब्रम्हा गुरु विष्णू

गुरुः देवो महेश्वरा I

गुरु शाक्षात परब्रम्हा

तस्मै श्री गुरुवे नमः II

ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಮುಂದೆ ಗುರಿ ಹಾಗೂ ಹಿಂದೆ ಗುರು ಇರಬೇಕೆಂಬ ಮಾತು ಈ ಕಲಿಯುಗಕ್ಕೆ ಅನ್ವಯಿಸುವುದಿಲ್ಲ ಅನ್ನಿಸುತ್ತದೆ. ಈಗಿನ ಕಾಲದ ವಿದ್ಯಾರ್ಥಿಗಳಿಗೆ ಸರಿಯಾದ ಗುರಿಯೇ ಇರುವುದಿಲ್ಲ. ಏನೋಒಂದು ಪದವಿ ಅಂತ ಗಳಿಸಿ ಉದ್ಯೋಗ ಗಿಟ್ಟಿಸಿದರೆ ಅಲ್ಲಿಗೆ ಮುಗಿಯಿತು. ಕಲಿಯುಗದ ಜೀವನ ಶೈಲಿಯೇ ವಿಚಿತ್ರ. ಕಾಲ ಕಾಲಕ್ಕೆ ಗುರು ಶಿಷ್ಯರ ನಡುವಿನ ಸಂಬಂಧ ಬದಲಾಗುತ್ತಲೇ ಇದೆ. ವಿದ್ಯಾರ್ಥಿಗಳಿಗೆ ಗುರುವಿನ ಮಹತ್ವ ಮರೆತೆ ಹೋಗಿದೆಯೇನೋ. ಅಲ್ಪ ಸ್ವಲ್ಪ ಓದಿಕೊಂಡು ಕೆಲಸ ಗಿಟ್ಟಿಸುವ ಯುವಜನತೆಗೆ ಯಾವುದೇ ಒಂದು ವಿಷಯದಲ್ಲಿ ಆಳವಾಗಿ ಅಧ್ಯಯನ ಮಾಡುವ ಮನಸ್ಸು ಹಾಗೂ ತುಡಿತವಿಲ್ಲ. ಸಮಯದ ಕೈಗೆ ಸಿಕ್ಕ ಗೊಂಬೆಯಂತೆ ನಮ್ಮ ಕಲಿಯುಗದಯುವಜನತೆಯ ಪರಿಸ್ಥಿತಿ. ಅದೇನೆ ಇರಲಿ, ನೀವು ಎಷ್ಟು ಓದಿದ್ದೀರಿ ಅಂತಾ ಕೇಳುವ ಅವಶ್ಯಕತೆ ಇಲ್ಲ. ಬದಲಾಗಿ ನಿಮಗೆ ಪಾಠ ಕಲಿಸಿದ ಶಿಕ್ಷಕರನ್ನು ನೀವು ನೆನಪಿನಲ್ಲಿ ಇಟ್ಟುಕೊಂಡಿದ್ದೀರಾ ಎಂದು ಕೇಳಿದರೆ ಹಲವಾರು ಮಂದಿ ಮರೆತಿರುತ್ತಾರೆ.

ಪ್ರಾಥಮಿಕ ಹಂತದಲ್ಲಿ ನಮ್ಮನ್ನು ತಿದ್ದಿ ಸರಿಯಾದ ದಾರಿಗೆ ತಂದ ಗುರುಗಳು, ಮುಂದೆ ಪ್ರೌಢ ಶಾಲೆ ಹಾಗೂ ಉನ್ನತ ಶಿಕ್ಷಣದ ಹಂತದಲ್ಲಿ ನಮಗೆ ಒಂದು ನಿರ್ಧಿಷ್ಟ ದಾರಿ ತೋರಿಸಿದ ಗುರುಗಳನ್ನು ನಾವು ಎಂದೆಂದಿಗೂ ಮರೆಯಬಾರದು. ಯಾಕೆಂದರೆನಾವಿಂದು ಒಳ್ಳೆ ಸ್ಥಾನದಲ್ಲಿದ್ದೇವೆ ಎಂದರೆ ಅದಕ್ಕೆ ಕಾರಣ ನಮಗೆ ಶಿಕ್ಷಣ ನೀಡಿದ ಎಲ್ಲಾ ಗುರುಗಳು. ನಾವು ಪ್ರಸ್ತುತ ದಿನಗಳಲ್ಲಿ ಎಲ್ಲವನ್ನೂ ಮರೆತು ಬದುಕುವುದನ್ನು ಚೆನ್ನಾಗಿಯೇ ಕಲಿತಿದ್ದೇವೆ. ಒಬ್ಬ ಶಿಷ್ಯ ತನ್ನ ಗುರುವನ್ನು ಮೀರಿಸಿದರೆ ಗುರುವಿಗೆತನ್ನ ಜೀವನ ಸಾರ್ಥಕವಾದಂತೆ. ಸ್ನೇಹಿತರೆ ಇವತ್ತು, ಗಣೇಶ ಚತುರ್ಥಿ ಹಾಗೂ ಶಿಕ್ಷಕರ ದಿನಾಚರಣೆ. ನಮ್ಮನ್ನು ಒಂದು ಸುಂದರ ವ್ಯಕ್ತಿತ್ವ ಹೊಂದಿದ ಮೂರ್ತಿಯನ್ನಾಗಿಸಿದ ಆ ಎಲ್ಲಾ ಶಿಕ್ಷಕರನ್ನು ನೆನದು ಅವರಿಗೆ ಕೃತಜ್ಞತೆಯನ್ನು ಸಲ್ಲಿಸಲು ನಮಗೆಸಿಗುವ ಸದಾವಕಾಶ. ನಿಮ್ಮ ಜೀವನದಲ್ಲಿ ಬಂದು ಹೋದ ಎಲ್ಲಾ ಶಿಕ್ಷಕರನ್ನು ಗುರುಗಳನ್ನು ನೆನಪು ಮಾಡಿಕೊಳ್ಳಿ. ನಿಮ್ಮ ಬಳಿ ಅವರ ವಿಳಾಸ ಅಥವಾ ದೂರವಾಣಿ ಸಂಖ್ಯೆ ಇದ್ದಲ್ಲಿ ಅವರಿಗೊಂದು ಕರೆ ಮಾಡಿ ಶಿಕ್ಷಕರ ದಿನಾಚರಣೆ ಶುಭಾಶಯ ಹಾಗೂಕೃತಜ್ಞತೆಯನ್ನು ಸಲ್ಲಿಸಿ. ನಿಜವಾಗಿಯೂ ನಿಮ್ಮ ಶಿಕ್ಷಕರಿಗೆಲ್ಲಾ ಇದರಿಂದ ಬಹಳಾ ಸಂತೋಷವಾಗುತ್ತದೆ.

ಶಿಕ್ಷಕರ ದಿನಾಚರಣೆಯ ಪ್ರಯುಕ್ತವಾಗಿ ನನ್ನಲ್ಲೊಂದು ಪತ್ರವಿದೆ. ಇದು ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಗೆ ಬರೆದ ಪತ್ರ.

“ರವಿಕುಮಾರ್ ನಿನ್ನ ಪತ್ರ ಬರುತ್ತದೆ, ಎಂದಾದರೂ ನನ್ನನ್ನು ಪತ್ರದ ಮೂಲಕ ಸಂಪರ್ಕಿಸುತ್ತೀಯಾ ಎಂದು ಅದೆಷ್ಟೋ ದಿನಗಳಿಂದ ಕಾದಿದ್ದೇನೆ. ಆದರೆ ನಿನ್ನ ಪತ್ರ ಬರಲಿಲ್ಲ. ತೊಂದರೆ ಇಲ್ಲ, ನನಗೇನು ಬೇಜಾರಿಲ್ಲ. ನಾನೇ ನಿನ್ನ ವಿಳಾಸವನ್ನುತಿಳಿದುಕೊಂಡು ಈ ಪತ್ರವನ್ನು ಬರೆಯುತ್ತಿದ್ದೇನೆ.

ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಯ ಏಳಿಗೆಯನ್ನು ಬಯಸುತ್ತಾನೆ ಹೊರತು ವಿದ್ಯಾರ್ಥಿಯ ಸೋಲನ್ನಲ್ಲ. ನಾನು ನಿನ್ನ ಬಗೆಗೆ ಬಹಳ ಕನಸುಗಳನ್ನು ಇಟ್ಟುಕೊಂಡಿದ್ದೆ. ನನ್ನ ವಿದ್ಯಾರ್ಥಿ ಬಹಳ ಬುದ್ಧಿವಂತ, ಗುರಿಸಾಧಕ ಎಂದೆಲ್ಲಾ ಹೆಮ್ಮೆಯಿಂದಹೇಳಿಕೊಳ್ಳುತ್ತಿದ್ದೆ. ನಿನ್ನ ಬಗ್ಗೆ ನನಗೆ ವಿಶೇಷ ಆಸಕ್ತಿ ಹಾಗೂ ಕುತೂಹಲ ಇತ್ತು. ಶಿಕ್ಷಕ ತನ್ನ ವಿದ್ಯಾರ್ಥಿಯ ಮೇಲಿನ ಪ್ರೀತಿಯಿಂದ ಹಾಗೂ ಕಾಳಜಿಯಿಂದ ಒಂದೆರಡು ಮಾತು ಬೈಯ್ಯಬಹುದು ಅಥವಾ ಒಂದೆರಡು ಏಟು ಹೊಡೆಯಬಹುದು. ತನ್ನವಿದ್ಯಾರ್ಥಿ ತಪ್ಪು ದಾರಿ ಹಿಡಿಯದಿರಲಿ ಎಂಬ ಉದ್ದೇಶ ಶಿಕ್ಷಕರದ್ದಾಗಿರುತ್ತದೆ ಹೊರತು ವಿದ್ಯಾರ್ಥಿಗಳನ್ನು ಶಿಕ್ಷಿಸಬೇಕೆಂದಲ್ಲ.

ಅಂದು ನಾನು ನಿನಗೆ ಹೊಡೆದೆ ಎಂಬ ಒಂದೇ ಒಂದು ಸಣ್ಣ ವಿಷಯವನ್ನು ಇಟ್ಟುಕೊಂಡು ನನ್ನ ಮೇಲೆ ದ್ವೇಷ ಸಾಧಿಸುತ್ತಾ ಬಂದೆ, ನನ್ನನ್ನು ದೂಷಿಸುತ್ತಾ ಬಂದೆ. ಆದರೆ ಅಂದು ನಾನು ಯಾವ ಕೆಟ್ಟ ಉದ್ದೇಶದಿಂದ ಹೊಡೆಯಲಿಲ್ಲ. ಅಯ್ಯೋ ನನ್ನವಿದ್ಯಾರ್ಥಿಯೊಬ್ಬ ತಪ್ಪು ದಾರಿ ಹಿಡಿಯುತ್ತಿದ್ದಾನಲ್ಲ ಎಂಬ ಬೇಸರದಿಂದ ಹಾಗೂ ನಿನ್ನ ಮೇಲಿದ್ದ ಪ್ರೀತಿಯಿಂದ ಹೊಡೆದೆ ಅಷ್ಟೇ. ಇಂದು ನೀನು ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉನ್ನತ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಿ ಎಂದು ತಿಳಿಯಿತು. ನನಗೆ ಬಹಳಸಂತೋಷವಾಯಿತು. ಅಂತೂ ಜೀವನದಲ್ಲಿ ಒಂದು ಉತ್ತಮ ಹುದ್ದೆಯನ್ನೇ ಅಲಂಕರಿಸಿರುವೆ. ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿ ಬಗ್ಗೆ ಬಯಸೋದು ಅದನ್ನೆ.

ನೀನು ಯಾವುದೋ ಕೆಟ್ಟ ಹವ್ಯಾಸದಿಂದ ನಿನ್ನನ್ನು ನೀನು ಹಾಳು ಮಾಡಿಕೊಂಡು, ಕಡಿಮೆ ಅಂಕ ಗಳಿಸಿ ಕೆಲಸ ಇಲ್ಲದೆ ಬೀದಿ ಬೀದಿ ಅಲೆಯುತ್ತಿದ್ದೀ ಅಂತಾ ನಿನ್ನ ಗೆಳೆಯರ ಮೂಲಕ ತಿಳಿಯಿತು. ನನ್ನ ವಿದ್ಯಾರ್ಥಿಯ ಪಾಡು ಹೀಗಾಯಿತಲ್ಲಾ ಎಂದುಬಹಳ ಬೇಸರವಾಯಿತು. ನೀನು ಇಂದು ಕೆಲಸ ಮಾಡುತ್ತಿರುವ ಕಂಪನಿ ನನ್ನ ಸ್ನೇಹಿತನದ್ದು. ನಿನ್ನ ಜೀವನ ನರಕವಾಗಬಾರದೆಂದು ನನ್ನ ಸ್ನೇಹಿತನಲ್ಲಿ ಕೇಳಿಕೊಂಡು ನಿನಗೆ ಆ ಕಂಪನಿಯಲ್ಲಿ ಮ್ಯಾನೇಜರ್ ಕೆಲಸ ಕೊಡಿಸಿದೆ. ಬಹುಷಃ ನಿನಗೆ ಈವಿಷಯ ಗೊತ್ತಿರಲಿಕ್ಕಿಲ್ಲ. ಒಮ್ಮೆ ನಿನ್ನನ್ನು ಮ್ಯಾನೇಜರ್ ಸೀಟ್ನಲ್ಲಿ ನೋಡಿ ಹೋಗೋಣ ಎಂದು ಕಂಪನಿಗೆ ಬಂದಿದ್ದೆ. ಆದರೆ ಅಲ್ಲೂ ನೀನು ನಿನ್ನ ದ್ವೇಷವನ್ನೇ ಸಾಧಿಸಿದೆ. ನನ್ನನ್ನು ಹೊರದೂಡಿಸಿದೆ. ನನಗೇನೂ ಬೇಜಾರಿಲ್ಲ. ಆದರೆ ನಾನು ನಿನ್ನಲ್ಲಿಕೇಳಿಕೊಳ್ಳುವುದೇನೆಂದರೆ ದಯವಿಟ್ಟು ವಿದ್ಯೆ ಕಲಿಸಿದ ಗುರುಗಳನ್ನು ಮರೆಯಬೇಡ. ಎಂದೋ ಹೊಡೆದಿದ್ದರು, ಬೈದಿದ್ದರು ಅಂತ ಅವರ ಮೇಲೆ ದ್ವೇಷ ಸಾಧಿಸಬೇಡ. ಅಂದು ಅವರು ಬೈದಿರಬಹುದು, ಹೊಡೆದಿರಬಹುದು, ಆದರೇ ಆ ಬೈಗುಳಗಳೇ,ಹೊಡೆತಗಳೇ, ನಿನ್ನನ್ನು ಎತ್ತರಕ್ಕೆ ಕರೆದುಕೊಂಡು ಹೋಗಿರುತ್ತದೆ. ಒಂದನ್ನು ನೆನಪಿಟ್ಟುಕೋ ನೀನು ನನ್ನನ್ನು ಮರೆತಿರಬಹುದು ಆದರೆ ನೀನು ಎಂದೆಂದಿಗೂ ನನ್ನ ನೆಚ್ಚಿನ ವಿದ್ಯಾರ್ಥಿ…

ನಿನ್ನ ಪ್ರೀತಿಯ,

   ಶಿಕ್ಷಕ

ಸ್ನೇಹಿತರೆ ನಮಗೆ ಶಿಕ್ಷಣ ನೀಡಿದ ಎಲ್ಲಾ ಶಿಕ್ಷಕರನ್ನು ನೆನದು ಅವರಿಗೊಂದು ಶುಭಾಶಯ ತಿಳಿಸೋಣ.

“ನಾಡಿನ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.”

ಚಿತ್ರ ಕೃಪೆ: ಸನಾತನ ಸಂಸ್ಥೆ

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Madhyasta

ಹೆಸರು ಮಂಜುನಾಥ್ ಮಧ್ಯಸ್ಥ. ಓದಿದ್ದು ವಿಜ್ಞಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಬಹಳ ಆಸಕ್ತಿ. ಬರೆಯೋದು ನೆಚ್ಚಿನ ಹವ್ಯಾಸ. ಭೌತಶಾಸ್ತ್ರ ಹಾಗೂ ಖಗೋಳ ಶಾಸ್ತ್ರ ನನ್ನ ನೆಚ್ಚಿನ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!