ಪ್ರಚಲಿತ

ಕಾಶ್ಮೀರ ‘ಉರಿ’ಸಿ ತನ್ನ ತಲೆಯ ಮೇಲೆ ಕಲ್ಲು ಹಾಕಿಕೊಂಡ ಪಾಕಿಸ್ಥಾನ…

ಬಡವ ನೀನು ಮಡಗ್ದಾಂಗೆ ಇರು… ಎನ್ನುವ ಮಾತು ಈ ನೆನಪಾಗುತ್ತಿದೆ. ಕೆಲವರು ಇರುತ್ತಾರೆ ಎಷ್ಟು ಕೊಟ್ಟರೂ ಸಾಲದು ತನ್ನ ಕೈಯಲ್ಲಿ ಸಾಧ್ಯವಿಲ್ಲದ್ದರೂ ಕಾಲು ಕೆರೆದುಕೊಂಡು ಜಗಳ ಶರು ಮಾಡುವುದು. ಎಷ್ಟು ಸಾರಿ ಬುದ್ಧಿ ಕಲಿಸಿದರೂ ಕಲಿಯದೇ ಇರುವುದು. ನಾಯಿ ಬಾಲ ಡೊಂಕಾದರೂ ಅದೊಂದು ಸ್ವಾಮಿನಿಷ್ಠೆಯ ಪ್ರಾಣಿ .. ಆದರೆ ನರಿಯನ್ನು ಮಾತ್ರ ನಂಬಲೇಬಾರದು. ಅದನ್ನು ಕಂಡರೆ ಅದೃಷ್ಟವೆನ್ನುವ ಮಾತಿದೆ . ಏನು ಅದೃಷ್ಟವೋ ದೇವರೇ ಬಲ್ಲ. ಕುತಂತ್ರ ಬುದ್ದಿಯೇ ಅದಕ್ಕೆ. ನೇರ ಯುದ್ಧ ಮಾಡಿ ಗೆಲ್ಲುವ ಶಕ್ತಿಯೇ ಇಲ್ಲ… ಈ‌ ನರಿಯ ಹೋಲಿಕೆ ಯಾರಿಗೆ ಅಂದರೆ ಅದು ನಮ್ಮ ನೆರೆಯ ಪಾಕಿಸ್ಥಾನಕ್ಕೆ . ಅದಕ್ಕಲ್ಲದೆ ಇನ್ಯಾವ ದೇಶಕ್ಕೂ  ಹೋಲುವುದಿಲ್ಲ… ಸಾಲು ಸಾಲಾಗಿ ಸೋತ ಇತಿಹಾಸವಿದ್ದರೂ  ಬುದ್ಧಿ ಬಿಡುವುದೇ ಇಲ್ಲ. ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಎಂಬ ಮಾತಿನಂತೆ ಸೋತು ಸುಣ್ಣವಾಗಿದ್ದರೂ, ತನ್ನ ದೇಶದಲ್ಲಿ ಗಂಜಿಗೂ ಗತಿಯಿಲ್ಲದಿದ್ದರೂ, ನೇರ ಯುದ್ಧ ಮಾಡುವ ಸಾಮರ್ಥ್ಯವಿಲ್ಲದಿದ್ದರೂ ಭಾರತದೊಳಕ್ಕೆ ಭಯೋತ್ಪಾದಕರ ನುಗ್ಗಿಸಿ ಶಾಂತಿಯನ್ನು ಕದಡುತ್ತಿದೆ. ಇದರಿಂದ ಲಾಭವೇನಿದೆಯೋ ? ನೇರ ಯುದ್ಧಕ್ಕೆ ನಿಂತರೆ ಹೇಳಹೆಸರಿಲ್ಲದಂತೆ ಅಗಿ ಬಿಡುತ್ತದೋ ಎಂಬ ಭಯ.

ಭಾರತ ದೇಶ ಯುದ್ಧವನ್ನು ಬಯಸುವುದೇ ಇಲ್ಲ… ಯಾಕೆಂದರೆ ಇಡೀ ಜಗತ್ತಿಗೆ ಶಾಂತಿಯ ಪಾಠ ಕಲಿಸಿದವರೇ ನಾವು. ಸರ್ವೇ ಜನಾಃ ಸುಖಿನೋ ಭವಂತು , ಲೋಕಾ ಸಮಸ್ತ ಸುಖಿನೋ ಭವಂತು ಎಂದವರು ನಾವು. ಹೀಗಿದ್ದಾಗ ನಾವು ಯಾಕೆ ಯುದ್ಧ ಸಾರಬೇಕು. ಇತಿಹಾಸ ಪುಟಗಳನ್ನು ತಿರುಗಿಸಿದಾಗ ನಮಗೆ ಅರಿವಿಗೆ ಬರುತ್ತದೆ. ಎಲ್ಲರೂ ನಮ್ಮ ಭಾರತ ದೇಶದ ಮೇಲೆ‌ ದಂಡೆತ್ತಿ ಬಂದವರೇ. ನಾವಾಗಿಯೇ ರಣಕಹಳೆ ಊದಿದವರಲ್ಲ. ಅದೆಷ್ಟು ತಾಳ್ಮೆ ಸಹನೆ ನಮ್ಮ ಭಾರತೀಯರಿಗೆ. ನಿಜಕ್ಕೂ ನಮ್ಮ ಸಂಸ್ಕೃತಿ ಅಚಾರ ವಿಚಾರಗಳನ್ನು  ಮೆಚ್ಚಲೇಬೇಕು. ಬುದ್ಧ ಮಹಾವೀರರ ಜನ್ಮಸ್ಥಳ ನಮ್ಮ ಭಾರತ. ಆದರೆ ಒಂದು ಸತ್ಯ ನಾವಾಗಿಯೇ ಯುದ್ಧ ಮಾಡುವುದಿಲ್ಲ.. ಮೇಲೆರಗಿ ಬಂದರೆ ಕೈ ಕಟ್ಟಿ ಕುಳಿತುಕೊಳ್ಳುವವರು ನಾವಲ್ಲ.. ಎನ್ನುವುದು ಜಗಜ್ಜಾಹೀರು.

ಇತ್ತೀಚೆಗೆ ನಮ್ಮ ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಾ ಇದೆ.ಅದೂ ಕಾಶ್ಮೀರದಲ್ಲಂತೂ ಹೇಳತೀರದು ಅದರ ಗೋಳು. ನಿಜಕ್ಕೂ ನರಕಯಾತನೆ ಅಲ್ಲಿಯ ಜನರಿಗೆ. ಪ್ರತಿನಿತ್ಯ ಉಗ್ರರ ದಾಳಿ ಎಂಬ ಸುದ್ದಿ ಕೇಳುತ್ತಲೇ ಇದ್ದೇವೆ… ಅದರೊಂದಿಗೆ ನಮ್ಮ ಹೆಮ್ಮೆಯ ವೀರ ಸೈನಿಕರ ಸಾವಿನ ಸುದ್ದಿಯೂ ಕೂಡ.  ನಮಗೆ ಒಬ್ಬ ಸೈನಿಕ ಸತ್ತರೂ ದುಃಖದ ಜೊತೆಗೆ ಸಿಟ್ಟು ಬರತೊಡಗುತ್ತದೆ. ತಾಳ್ಮೆಯಿಂದ ಇದ್ದಷ್ಟು ದಾಳಿಗಳು ಹೆಚ್ಚುತ್ತಲೇ ಇದೆ.   ಏನಾದರೊಂದು ಮಾಡಲೇಬೇಕು. ಭಾರತದ ತಾಕತ್ತು ಎಷ್ಟಿದೆ ಎಂದು ಕೇಳಿಸಿಕೊಂಡರೆ ಸಾಕು ಪಟಾಕಿ ಸದ್ದಿಗೆ ಹೆದರಿದ ನಾಯಿಯಂತೆ ಬಾಲ ಮುದುಡಿಕೊಂಡು ಮೂಲೆಗುಂಪಾಗುತ್ತದೆ. ಅಂದೊಮ್ಮೆ ಪಾಕಿಸ್ಥಾನವು ಯುದ್ಧಕ್ಕೆ ಬಂದಾಗ ಅವರನ್ನು ಬೆಚ್ಚಿ ಬೀಳಿಸಿ ಸೋಲಿಸುವಂತೆ ಮಾಡಿದ್ದರು ನಮ್ಮ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಜೀಯವರು. ಅಂದು ತೆಗೆದುಕೊಂಡ ಶಾಸ್ತ್ರಿಯವರ ಆ ಮಹತ್ವದ ನಿರ್ಧಾರವು ಜಗತ್ತನ್ನೇ ಹುಬ್ಬೇರಿಸುವಂತೆ ಮಾಡಿತ್ತು.

ಪ್ರತಿಬಾರಿಯೂ ಕಾಲು ಕೆರೆದುಕೊಂಡು ಬರುವ ಪಾಕಿಸ್ಥಾನ ಕೆಲವು ದಿನಗಳ ಹಿಂದೆ ಏಳೆಂಟು ಉಗ್ರರನ್ನು ಗಡಿಯಲ್ಲಿ ನುಸುಳಿಸಿ ಕಾಶ್ಮೀರದ ಸಮೀಪವಿರುವ ಉರಿ ಎಂಬಲ್ಲಿ  ಭಾರತ 18  ಸೈನಿಕರನ್ನು  ಕೊಂದಿತ್ತು. ಇದು ಭಾರತದ ಕೋಪ ಮತ್ತಷ್ಟು ಹೆಚ್ಚಾಗುವಂತೆ ಮಾಡಿತ್ತು. ಆ 18 ಸೈನಿಕರ ವೀರ ಮರಣವು ಇಡೀ ದೇಶವನ್ನೇ ನಿದ್ದೆಗೆಡಿಸಿತ್ತು. ಪಾಕಿಸ್ಥಾನದ ವಿರುದ್ಧ ಯುದ್ಧದ ಒತ್ತಡ ಹೆಚ್ಚಾಯಿತು. ಇದನ್ನೆಲ್ಲಾ ಗಮನಿಸಿದ ಪ್ರಧಾನಿ ಮೋದಿಯವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಕ್ಷಣವೇ ಎಚ್ಚರಿಕೆ ಸಂದೇಶವನ್ನು ರವಾನಿಸಿದರು. ಪಾಕಿಸ್ಥಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ಥಾನವನ್ನು ಭಯೋತ್ಪಾದಕ ದೇಶ ಎಂದು ಘೋಷಿಸುವಂತೆ ಒತ್ತಡ ಹೇರಿದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಮೇರಿಕಾ ಸಂಸತ್ತು ಪಾಕಿಸ್ಥಾನವನ್ನು ಭಯೋತ್ಪಾದಕ ದೇಶವೆಂದು ಘೋಷಿಸಲು ನಿರ್ಣಯ ಕೈಗೊಂಡಿತ್ತು.  ಘಟಾನುಘಟಿ ದೇಶಗಳು ಘಟನೆಯನ್ನು ತೀವ್ರವಾಗಿ ಖಂಡಿಸಿ ಭಾರತಕ್ಕೆ ಬೆಂಬಲ ಸೂಚಿಸಿದವು. ವಿಶ್ವಮಟ್ಟದಲ್ಲಿ ಪಾಕಿಸ್ಥಾನದ ಮಾನ ಹರಾಜಾಗಿ ತಲೆತಗ್ಗಿಸುವಂತೆ ಮಾಡಿದೆ.

ಮೋದಿಯವರು ‘ಜಲಯುದ್ಧ’ ಸಾರುವ ನಿರ್ಧಾರ ಕೈಗೊಂಡು ಪಾಕಿಸ್ಥಾನದ ವಿರುದ್ಧ ಹೀಗೂ ಯುದ್ಧಕ್ಕಿಳಿಯಬಹುದು ಎಂದು ತೋರಿಸಿಕೊಟ್ಟಿದ್ದಾರೆ ..  ಈ ಒಂದೇ ನಿರ್ಧಾರದಲ್ಲಿ ಪಾಕಿಸ್ಥಾನದಲ್ಲಿ ತಲ್ಲಣ ಉಂಟಾಗಿದೆ. ಇಡೀ ಪಾಕಿಸ್ಥಾನವೇ ಕಂಗೆಟ್ಟು ಕುಳಿತಿದೆ. ಕೆಲವರಿಗೆ ಜಲಯುದ್ಧ  ಎಂದರೆ ಏನು ಎನ್ನುವುದು ತಿಳಿದಿಲ್ಲ. ಸಮುದ್ರದ ಮೂಲಕ ಪಾಕಿಸ್ಥಾನ ದ ಮೇಲೆ ದಾಳಿ ಮಾಡುವುದು ಅಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ… ಸಿಂಧೂ ನದಿ ಭಾರತದಲ್ಲಿ ಹರಿದು ನಂತರ ಪಾಕಿಸ್ಥಾನದ ಉದ್ದಗಲಕ್ಕೂ ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತದೆ. ಆ ನದಿಗೆ ನಮ್ಮ ದೇಶದಲ್ಲಿ ಅಡ್ಡದಾಗಿ ಅಣೆಕಟ್ಟು ನ್ನು ಕಟ್ಟಲಾಗಿದೆ . ಅಲ್ಲಿ ಸಾಕಷ್ಟು ನೀರನ್ನು ವಿದ್ಯುತ್’ಗಾಗಿ ಕೃಷಿಗಾಗಿ ಹಿಡಿದಿಟ್ಟುಕೊಂಡು ಬಳಸಲಾಗುತ್ತಿದೆ. ಹಾಗೆ  ಸ್ವಾಭಾವಿಕವಾಗಿ ಹರಿದು ಬರುವ ನೀರನ್ನು ಹಾಗೆಯೇ ಅಣೆಕಟ್ಟಿನಿಂದ ಹೊರ ಬಿಡಲಾಗುತ್ತದೆ.  ಇದಕ್ಕಾಗಿ ಭಾರತ- ಪಾಕ್ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈಗ ಉರಿ ಘಟನೆಯ ಬಳಿಕ ಭಾರತ ಸರ್ಕಾರ   ಆ ಒಪ್ಪಂದವನ್ನು ರದ್ದು ಮಾಡಿ ನೀರನ್ನು ಪಾಕಿಸ್ಥಾನಕ್ಕೆ ಬಿಡದಿರಲು ಚಿಂತನೆ ನಡೆಸಿದೆ. ಇದರ ಸಾಧಕ ಬಾಧಕಗಳನ್ನೆಲ್ಲ ಲೆಕ್ಕ ಹಾಕುತ್ತಿದೆ. ಒಂದು ವೇಳೆ ಈ ಒಪ್ಪಂದ ರದ್ದು ಮಾಡಿದ್ದೇ ಆದರೆ ಪಾಕಿಸ್ಥಾನದೊಂದಿಗೆ ನಾವು ಯುದ್ಧ ಮಾಡಬೇಕಾದ ಅನಿವಾರ್ಯತೆ ಇಲ್ಲ. ನಾವು ಯುದ್ಧ ಮಾಡದೇ ಪಾಕಿಸ್ಥಾನವನ್ನು ಗೆದ್ದಂತೆ…!!! ಪಾಕಿಸ್ಥಾನವು ನಿಂತಿರುವುದು ಈ ಸಿಂಧೂ ನದಿಯ ನೀರಿನ ಆಧಾರದಲ್ಲಿ. ನೀರು ಹರಿಯುವುದು ನಿಂತರೆ ಪಾಕಿಸ್ಥಾನ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಪಾಕಿಸ್ಥಾನದಲ್ಲಿ ಈಗಾಗಲೇ ನಡುಕ ಪ್ರಾರಂಭವಾಗಿದೆ. ನಮ್ಮ ದೇಶಕ್ಕೆ  ಯಾವುದೇ ರೀತಿಯ ನಷ್ಟವಿಲ್ಲದೆ ಪಾಕಿಸ್ಥಾನವನ್ನು  ಬುದ್ಧಿ ಶಕ್ತಿಯಿಂದ ಸೋಲಿಸಿದ ಹೆಮ್ಮೆ ನಮ್ಮದು.

ಈಗ ಪಾಕಿಸ್ಥಾನದ ಚಿಂತೆ “ಯಾಕಾದರೂ ಉರಿ ದಾಳಿ ನಡೆಸಿದೆನೋ?” ಇದರ ಪರಿಣಾಮ ಹೀಗಾಗಬಹುದು ಎಂದುಕೊಂಡಿರಲಿಲ್ಲ. ಭಾರತದ ಪ್ರಧಾನಿ ಮೋದಿ ಸಾಮಾನ್ಯರಲ್ಲ. ಪಾಕಿಸ್ಥಾನದ ಪ್ರಧಾನಿ ಹೋದಲ್ಲೆಲ್ಲಾ  ಅವಮಾನ ಮುಖಭಂಗ ಕಟು ಟೀಕೆ . ಭಯೋತ್ಪಾದಕರ ಮೂಲಕ ಕೆಣಕುವ ಪಾಕಿಸ್ಥಾನಕ್ಕೆ ತಕ್ಕ ಪಾಠ ಕಲಿಸಬೇಕು ಎನ್ನುವ ಕೂಗು ವಿಶ್ವದ ಮೂಲೆ ಮೂಲೆಯಿಂದ ಕೇಳಿ ಬರುತ್ತಿದೆ. ಭಾರತವು ವಿಶ್ವ ಮಟ್ಟದಲ್ಲಿ ಪ್ರಬಲವಾಗುತ್ತಿದೆ. ನಮಗೆ ಬೆಂಬಲವಾಗಿ ಅನೇಕ ದೇಶಗಳು ನಿಂತಿದೆ. ಒಟ್ಟಾರೆ ಉರಿ ದಾಳಿ ನಡೆಸಿ ತನ್ನ ತಲೆ ಮೇಲೆ ಕಲ್ಲು ಹಾಕಿಕೊಂಡಂತಾಗಿದೆ ಪಾಕಿಸ್ಥಾನದ ಪರಿಸ್ಥಿತಿ. ಅಲ್ಲೂ ಆಂತರಿಕ ಯುದ್ಧ ನಡೆಯುತ್ತಿದೆ.  ಅದೂ ಇನ್ನೂ ಹೆಚ್ಚಿನ ಅಪಾಯವನ್ನು ತರುತ್ತಿದೆ. ಬಲೂಚಿಸ್ಥಾನದ ಬಗ್ಗೆ  ಪ್ರಧಾನಿ ಮೋದಿಯವರು ಹೇಳಿದ ಒಂದೇ ಮಾತಿಗೆ ಅಲ್ಲಿ ಪಾಕಿಸ್ಥಾನದ ವಿರುದ್ಧವಾಗಿಯೇ ದಂಗೆ ಎದ್ದಿದೆ. ನುಂಗಲಾರದ ತುತ್ತಾಗಿ ಪರಿಣಮಿಸಿದೆ ಉರಿ ದಾಳಿ. ಉರಿ ದಾಳಿಯಲ್ಲಿ ಮಡಿದ ಸೈನಿಕರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ. ನೀರು ಮತ್ತು ರಕ್ತ ಒಟ್ಟಿಗೆ ಹರಿಯದು ಎನ್ನುವ ನೇರ ಎಚ್ಚರಿಕೆ ಕೊಟ್ಟಿದ್ದಾರೆ ನಮ್ಮ ಪ್ರಧಾನಿ. ಈ ಘಟನೆಯಿಂದಾದರೂ ಪಾಕಿಸ್ಥಾನವು ಪಾಠ ಕಲಿಯಲಿ. ಇನ್ನೊಂದು ಬಾರಿ ಭಾರತದ  ವಿಷಯದಲ್ಲಿ ತಲೆ ಹಾಕದಂತೆ ಆಗಲಿ, ಭಾರತೀಯ ವೀರ ಸೈನಿಕರ ಬಲಿದಾನ ಇನ್ನಾದರೂ ನಿಲ್ಲಲಿ ಎನ್ನುವುದೇ ಎಲ್ಲಾ ಭಾರತೀಯರ ಮನದಾಳದ ಮಾತು.

Facebook ಕಾಮೆಂಟ್ಸ್

ಲೇಖಕರ ಕುರಿತು

Jagath Bhat

ಜಗತ್ ಭಟ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಯಕ್ಷಗಾನ, ಛಾಯಾಗ್ರಹಣ ಮತ್ತು ಬರವಣಿಗೆ ಇವರ ಹವ್ಯಾಸ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!