Featured ಅಂಕಣ

ಏಡಿಯ ಬದುಕಿನ ಸ್ವಾರಸ್ಯ ನೋಡಿ!

ಕುಮಟಾದ ಹಿರೇಗುತ್ತಿ, ಅಘನಾಶಿನಿ, ಕಿಮಾನಿ,ಮಾದನಗೇರಿ, ಐಗಳಕುರ್ವೆ, ಕಾಗಾಲ, ನುಶಿಕೋಟೆ ಅಥವಾ ಕಾರವಾರದ ದೇವಭಾಗದ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸವಿರುವವರಿಗೆ ಏಡಿ ಬದುಕಿನ ಅವಿಭಾಜ್ಯ ಅಂಗ. ಇಡೀ ದಿನದ ಪರದಾಟಕ್ಕೆ ವರವೆನ್ನುವಂತೆ ಒಂದೇ ಒಂದು “ನುಕ್ ಏಡಿ” ಸಿಕ್ಕರೂ ಇಲ್ಲಿನ ಕೆಲ ಯುವಕರ ಅಂದಿನ ಜೀವನ ಅಷ್ಟರ ಮಟ್ಟಿಗೆ ಪಾವನ. ತಕ್ಕಡಿಯಲ್ಲಿ ಎರಡು ಕೇಜಿಗೆ ಕಮ್ಮಿಯಿಲ್ಲದಂತೆ ತೂಗುವ ಒಂದು ನುಕ್ ಏಡಿ ಅಥವಾ ಮಡ್ ಕ್ರ್ಯಾಬ್ ಅನ್ನು ಪಾಚಿಕಟ್ಟಿದ ಜಾರುಬಂಡೆಗಳ ಸಂದಿಯಿಂದಲೋ ಸಮುದ್ರಕ್ಕಿಳಿವ ಕಾಳಿಯ ವಿಸ್ತಾರಗೊಂಡ ಸೆರಗಿನಿಂದಲೋ ಗಬಕ್ಕನೆ ಉಪಾಯವಾಗಿ ಹಿಡಿದು, ಚಾಕಚಕ್ಯತೆಯಿಂದ ಚಾವಿ ಹಾಕಿ ಪಕ್ಕದ ಗೋವಾದ ಪೇಟೆಗೆ ಅಥವಾ ದೂರದ ಬೆಂಗಳೂರಿಗೆ ರಾತ್ರಿ ಬಸ್ಸಲ್ಲಿ ಕಳಿಸಿ ಕೈತೊಳೆದುಕೊಂಡು ಬಿಟ್ಟರೆ ಐನೂರು ರುಪಾಯಿಗಂತೂ ಮೋಸವಿಲ್ಲ. ಆ ದುಡ್ಡಲ್ಲಿ ಮನೆಗೆ ವಾರಕ್ಕೆ ಬೇಕಾದ ಉಪ್ಪು-ಮೆಣಸು-ಜೀರಿಗೆ ತಂದು,ಒಂದಷ್ಟು ತರಕಾರಿ ಹಾಕಿ, ಮಿಕ್ಕ ದುಡ್ಡಲ್ಲಿ ತಕ್ಕಮಟ್ಟಿಗೆ ಅಮಲೇರಿಸಿಕೊಳ್ಳಬಹುದು. ಕಾರವಾರದ ಕಡಲ ತಡಿಯಲ್ಲಿ ಬುಟ್ಟಿಗೆ ಬಿದ್ದ ಏಡಿ, ಗೋವಾ ಅಥವಾ ಬೆಂಗಳೂರಿನಿಂದ ಅಂತಾರಾಷ್ಟ್ರೀಯ ವಿಮಾನಗಳನ್ನೇರಿ ಸಿಂಗಾಪುರದ ಹೊಟೇಲಿನ ತಟ್ಟೆಗೆ; ಅಲ್ಲಿಂದ ಹಸಿದ ಹೊಟ್ಟೆಗೆ ಹೋಗಿ ತನ್ನ ಇಹದ ವ್ಯಾಪಾರ ಮುಗಿಸುತ್ತದೆ.

ಏಡಿಯನ್ನು ವೈಜ್ಞಾನಿಕ ವರ್ಗೀಕರಣ ಮಾಡುವಾಗ ಡೆಕಾಪಾಡ್ ವರ್ಗಕ್ಕೆ ಸೇರಿಸುತ್ತಾರೆ. ಅಂದರೆ ದಶಪದಿಗಳು ಎಂದರ್ಥ. ಏಡಿಯ ಹೊಟ್ಟೆಯಡಿ ಅತ್ತಿತ್ತ ಚಾಚಿರುವುದು ನಾಲ್ಕು ಜೋಡಿ, ಅಂದರೆ ಎಂಟು ಕಾಲುಗಳು ಮಾತ್ರ. ಉಳಿದೆರಡು, ಜೀವವಿಕಾಸದ ಯಾವುದೋ ಹಂತದಲ್ಲಿ ಕಾಲುಗಳ ಕೆಲಸ ಕಳೆದುಕೊಂಡು ಆಹಾರವನ್ನು ಬಗೆಯುವ,ಸಿಗಿಯುವ, ನಾಜೂಕಾಗಿ ತೆಗೆದು ಬಾಯಿಗಿಡುವ ಕೊಂಬುಗಳಾಗಿ ಬದಲಾದವು. ಈ ಕೊಂಬುಗಳ ತುದಿಯಲ್ಲಿ ಒಂದಷ್ಟು ಪುಟ್ಟ ಗರಗಸದಂತಹ ಹಲ್ಲುಗಳೂ ಉಂಟು. ಆತ್ಮರಕ್ಷಣೆಗಾಗಿ ಹಾವುಗಳು ಹೇಗೆ ವಿಷ ಕಾರುತ್ತವೋ ಹಾಗೆ ಏಡಿಗಳು ತಮ್ಮ ಮೈಮೇಲೆ ಬಿದ್ದ ವೈರಿಗಳನ್ನು ವಿಷವಿಲ್ಲದ ಕೊಂಬಿನಿಂದ ಕುಟುಕುತ್ತವೆ. ಏಡಿಯ ದೇಹದ ಆಕಾರ, ಚಪ್ಪಟೆ ಹಾರುವ ತಟ್ಟೆಯನ್ನು ನೆಲಕ್ಕೆ ಸಮಾನಾಂತರವಾಗಿ ಎಂಟು ಕಾಲುಗಳ ಆಧಾರದ ಮೇಲೆ ನಿಲ್ಲಿಸಿದಂತೆ. ಈ ದಶಭುಜನ ಮೈಯ ಗಾತ್ರ ಬೆಳೆಯುತ್ತ ಹೋದಂತೆ ಬೆನ್ನ ಚಿಪ್ಪೂ ದೊರಗಾಗುತ್ತಾ ಹೋಗುತ್ತದೆ. ಅಂಗೈಯಷ್ಟಗಲದ ಏಡಿಯ ಬೆನ್ನು ಪ್ಲಾಸ್ಟಿಕ್ಕಿನಷ್ಟು ಗಟ್ಟಿಯಿದ್ದೀತು. ಯಾಕೆಂದರೆ ಮನುಷ್ಯರಂತೆ ಏಡಿಯ ಅಸ್ಥಿಪಂಜರ ಒಳಗಿಲ್ಲ,ಹೊರಗಿದೆ! ಆ ಪಂಜರದೊಳಗೆ ಅದರ ಮೃದುಶರೀರವಿದೆ. ಆಮೆಯ ಚಿಪ್ಪಿನಂತೆ ಏಡಿಗೆ ತನ್ನ ಎಲುಬುಗೂಡೇ ಶ್ರೀರಕ್ಷೆ.

ಏಡಿಗಳ ದೇಹರಚನೆ ಮಾತ್ರವಲ್ಲ, ಅವುಗಳ ಚಲನೆಯೂ ವಿಚಿತ್ರವೇ. ಅವು ನೇರವಲ್ಲ, ಅಡ್ಡವಾಗಿ ಚಲಿಸುವುದೇ ಹೆಚ್ಚು! ಅಂದರೆ ಮನುಷ್ಯ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತು, ತನ್ನ ದೇಹವನ್ನಾಗಲೀ ಮುಖವನ್ನಾಗಲೀ ಬೇರಾವ ಕಡೆಗೂ ಹೊರಳಿಸದೆ ಕಾಲುಗಳನ್ನು ಮಾತ್ರ ಅಡ್ಡಡ್ಡ ಎಸೆಯುತ್ತ ಉತ್ತರ-ದಕ್ಷಿಣ ದಿಕ್ಕುಗಳಲ್ಲಿ ಓಡತೊಡಗಿದರೆ ಅದೆಂಥ ಹಾಸ್ಯಾಸ್ಪದ ಸನ್ನಿವೇಶವನ್ನು ಸೃಷ್ಟಿಸಬಹುದೋ,ಏಡಿಯ ಚಲನೆ ಮತ್ತು ಓಟ ಹಾಗೆಯೇ ಇರುತ್ತದೆ! ಕಾಳಿ ನದಿಯು ಸಮುದ್ರ ಸೇರುವ ಹಿನ್ನೀರ ಪ್ರದೇಶದಲ್ಲಿ ಕಾಣ ಸಿಗುವ ಘೋಸ್ಟ್ ಕ್ರ್ಯಾಬ್ (ಪಿಶಾಚ ಏಡಿ) ಹಿಂದೆ-ಮುಂದೆ ಅತ್ತ-ಇತ್ತ ಎನ್ನುತ್ತ ಅಷ್ಟ ದಿಕ್ಕುಗಳಲ್ಲೂ ಗಂಟೆಗೆ ಹತ್ತು ಮೈಲಿಯ ವೇಗದಲ್ಲಿ ತಟವಟನೆ ಓಡಬಲ್ಲುದು. ಅಷ್ಟಾದರೂ ಕಡಲ  ಹಕ್ಕಿಗಳು ಇದನ್ನು ಬಿಡಬೇಕಲ್ಲ? ಇರುವ ಏಡಿಗಳ ಪೈಕಿ ಇದರ ಹೊರಮೈಯೇ ಸ್ವಲ್ಪ ಮೃದುವಾದ್ದರಿಂದ ಏಡಿ ಓಡಿದಷ್ಟೇ ವೇಗದಲ್ಲಿ ತಾವೂ ಹಾರಾಡಿ ಮುತ್ತಿಗೆ ಹಾಕಿ ಕುಕ್ಕಿ ಹೆಕ್ಕಿ ಕೊಕ್ಕಿನಲ್ಲಿ ಸಿಕ್ಕಿಸಿಕೊಂಡು ಹೋಗಬಲ್ಲವು.

ಏಡಿಗಳ ದೇಹದ ಇಷ್ಟೆಲ್ಲ ಸಮೀಕ್ಷೆ ನಡೆಸಿದ ಮೇಲೆ ಕಣ್ಣುಗಳ ಬಗ್ಗೆ ಹೇಳದೆ ಹೋದರೆ ಅಪಚಾರವಾದೀತು. ಏಡಿಯ ಅಕ್ಷಿಗಳು ಕೇವಲ ದೃಷ್ಟಿಯಂಗಗಳಲ್ಲ; ಸ್ವತಃ ಪ್ರಕೃತಿಮಾತೆಯೇ ನೂರಲ್ಲ, ಸಾವಿರಾರು ಪುಟ್ಟ ಮಸೂರಗಳನ್ನು ಜಾಗರೂಕತೆಯಿಂದ ನೆಟ್ಟು ವಿನ್ಯಾಸಗೊಳಿಸಿರುವ ಅತ್ಯದ್ಭುತ ಇಂಜಿನಿಯರ್ಡ್ ಉಪಕರಣಗಳು. ಏಡಿ,ಸಾವಿರದೆಂಟು ಮಸೂರಗಳ ಈ ವಿಶೇಷ ನೇತ್ರಗಳ ಮೂಲಕ ತನ್ನ ಮುಂದಾಗುವ ಮತ್ತು ಬೆನ್ನ ಹಿಂದಾಗುವ ಎಲ್ಲ ಚಟುವಟಿಕೆಗಳನ್ನೂ ಏಕಕಾಲಕ್ಕೆ ನೋಡಬಲ್ಲುದು. ಬದುಕಿನ ಹೆಚ್ಚಿನ ಸಮಯವನ್ನು ಸಮುದ್ರ ತೀರದಂತಹ ವಿಶಾಲ ನೆಲದಲ್ಲಿ ಕಳೆಯಬೇಕಿರುವುದರಿಂದ ಮತ್ತು ತತ್‍ಕ್ಷಣ ವೈರಿಯೊಂದು ಮೇಲೆರಗಿದರೆ ಗುಡುಗುಡು ಓಡುವುದಲ್ಲದೆ ಇನ್ಯಾವ ರಣತಂತ್ರದ ಬೆಂಬಲವೂ ಇರದೆ ಹೋಗಿರುವುದರಿಂದ ಸುತ್ತಮುತ್ತಲಿನ ಜಗತ್ತನ್ನು ಸದಾ ಕಾಲ ವೀಕ್ಷಣ ಗೋಪುರದಂತಹ ಕಣ್ಣುಗಳಿಂದ ನೋಡುತ್ತಿರುವುದು ಏಡಿಗೆ ಅನಿವಾರ್ಯ. ಹೆಚ್ಚಿನ ಏಡಿಗಳಲ್ಲಿ ಮೈಗೂ ತಮಗೂ ಸಂಬಂಧವೇ ಇಲ್ಲವೆನ್ನುವಂತೆ ಕಣ್ಣುಗಳೆರಡು ಎತ್ತರದಲ್ಲಿ ನೆಟ್ಟಿರುತ್ತವೆ. ಭಯ ಬಿದ್ದಾಗ ಉಷ್ಟ್ರಪಕ್ಷಿಗಳು ಮೈಯೆಲ್ಲ ಹೊರಗಿದ್ದರೂ ತಲೆಯನ್ನಷ್ಟೇ ಮರಳಿನಲ್ಲಿ ಹುದುಗಿಸುತ್ತವಲ್ಲ;ಹಾಗೆಯೇ, ಏಡಿಗಳು ನಾಚಿಕೆಗೋ ಭಯಕ್ಕೋ ನೀರು ಅಥವಾ ಕೆಸರಿನಡಿ ಮುಳುಗಿದ್ದರೂ ಆಷಾಡದಲ್ಲಿ ಮೊಳಕೆಯೊಡೆದ ಹುರುಳಿಯ ಗಿಡಗಳಂತೆ ಅವುಗಳ ಕಣ್ಣುಗಳಷ್ಟೇ ಹೊರ ಚಾಚಿಕೊಂಡಿರುವುದನ್ನು ನೋಡಬಹುದು. ಮತ್ತೆ, ಈ ಕಣ್ಣುಗಳಿಗೆ ಸುತ್ತಲ ವಿಶ್ವದ ಸಕಲ ಚಲನೆಯನ್ನು ಏಕಕಾಲಕ್ಕೆ ನೋಡಬಹುದಾದಂಥ 360 ಡಿಗ್ರಿಗಳ ದೃಷ್ಟಿಯೂ ಉಂಟು!

ಏಡಿಗಳ ಜೀವನ ಸರಳ. ತಾಯಗರ್ಭದಿಂದ ಹೊರಬಿದ್ದ ಸಾವಿರಾರು ಸಾಸಿವೆ ಕಾಳಂಥ ಗೊಜಮೊಟ್ಟೆಗಳು ಸಮುದ್ರದಲೆಗಳ ಮೇಲೆ ಹತ್ತಾರು ದಿನ ತೇಲಾಡುತ್ತವೆ. ಸಮಯ ಬಂದಾಗ, ದಡಕ್ಕೆ ಬಂದು ಬಿದ್ದು ಅಲ್ಲೇ ಕೈಕಾಲುಗಳನ್ನು ಮೂಡಿಸಿಕೊಂಡು ಪೂರ್ಣಾವತಾರಕ್ಕೆ ಭಡ್ತಿ ಪಡೆಯುತ್ತವೆ. ಮರಳಿನಲ್ಲಿ ಸಿಗುವ ಸಣ್ಣಪುಟ್ಟ ಜೀವಕಣಗಳೇ ಹೆಚ್ಚಿನ ಏಡಿಗಳ ಮುಖ್ಯ ಆಹಾರ. ಮಿಕ್ಸಿಂಗ್ ಮೆಷಿನಿಗೆ ಕಲ್ಲು-ಜಲ್ಲಿ ಹಾಕಿ ತಿರುಗಿಸಿ ಕಾಂಕ್ರೀಟಿನ ಮಿಶ್ರಣವನ್ನು ಹೊರ ತೆಗೆದು ರಸ್ತೆಗೆ ಚೆಲ್ಲುವಂತೆ, ಮರಳನ್ನು ಉಂಡೆಗಟ್ಟಿ ಬಾಯೊಳಗಿಟ್ಟು ಅದರಲ್ಲಿರುವ ಬ್ಯಾಕ್ಟೀರಿಯಾ ಮತ್ತು ಇತರ ಜೀವಕಣಗಳನ್ನು ಹೀರಿ ಮಿಕ್ಕ ಜೊಂಡನ್ನು ಹೊರತೆಗೆದು ತುಪುಕ್ ಎಂದು ಬಿಡುವುದು ಇವುಗಳ ಕ್ರಮ. ಅಲ್ಲದೆ ಕೆಲ ಏಡಿಗಳು ಬಂಡೆಗಳ ಮೇಲೆ ಬೆಳೆದ ಶೈವಲ, ಹಾವಸೆಗಳನ್ನು ತಿಂದು ಮೈತುಂಬಿಸಿಕೊಳ್ಳುತ್ತವೆ. ಹುಕಿ ಬಂದರೆ ಸಣ್ಣಪುಟ್ಟ ಹುಳುಹುಪ್ಪಟೆಯೂ ಆದೀತೇ; ತಮಗಿಂತ ಒಂದೆರಡು ಪಟ್ಟು ಚಿಕ್ಕವಿರುವ ಬೇರೆ ಏಡಿಗಳಿದ್ದರೂ ಆದೀತೇ! ಹೊಟ್ಟೆ ತುಂಬಿದ ಸಮಯದಲ್ಲಿ ಇವು ಮರಳಿನೊಳಗೆ ಹೊಂಡ ತೋಡಿ ಮನೆ ಕಟ್ಟಿಕೊಳ್ಳುವುದರಲ್ಲಿ ಮಗ್ನ. ಅದೂ ಬೋರಾಯಿತೆಂದರೆ ಪ್ರಣಯೋತ್ಸವ. ಅದಕ್ಕಾಗಿ ಗಂಡುಗಳ ನಡುವೆ ಜರುಗುವುದಿದೆ ಕದನ ಕುತೂಹಲ. ಮನುಷ್ಯರ ಸೆಣಸಾಟದಂತೆ ಅವೂ ತಮ್ಮ ಕೊಂಬುಗಳನ್ನೇ ಕತ್ತಿಯಂತೆ ಚಕಚಕನೆ ಬೀಸಿ ಎದುರಾಳಿಯ ಎದೆ ಬಗೆದು ಬಿಟ್ಟರೆ ನೀಲಿ ನೆತ್ತರು ಹರಿದೀತು! ಏಡಿಗಳ ಮೈಯಲ್ಲಿ ತಾಮ್ರದ ಅಂಶ ತುಸು ಹೆಚ್ಚಿರುವುದರಿಂದ ಅದು ರಾಸಾಯನಿಕ ಕ್ರಿಯೆಗೊಳಗಾಗಿ ಅವುಗಳಿಗೆ ನೀಲಿ ರಕ್ತ ದಯಪಾಲಿಸಿದೆ.

ಪುರಸೊತ್ತಿದ್ದಾಗ, ಹೊಟ್ಟೆ ತುಂಬಿದ್ದಾಗ ಗಂಡು ಏಡಿಗಳು ಒಂದಿಲ್ಲೊಂದು ಕ್ಯಾತೆ ತೆಗೆದು ಬೀದಿಕಾಳಗದಲ್ಲಿ ಮಗ್ನವಾಗಿರುತ್ತವಾದರೂ ಅವೂ ಸಂಘಜೀವಿಗಳೇ. ಕಾರವಾರದಲ್ಲಿ ಕಂಡು ಬರುವ ಸೈನಿಕ ಏಡಿಗಳಂತೂ ನೂರಲ್ಲ, ಸಾವಿರಾರು ಸಂಖ್ಯೆಯಲ್ಲೇ ಸಂಚರಿಸುತ್ತವೆ. ದಂಡಯಾತ್ರೆ ಹೋಗುವಾಗಲೂ ಸಾಲು ಬಿಡದ ಅವುಗಳ ಸೈನಿಕಶಿಸ್ತು ಗಮನೀಯ. ಆಸ್ಟ್ರೇಲಿಯದ ಕ್ರಿಸ್‍ಮಸ್ ದ್ವೀಪವೆಂಬ ಜಾಗದಲ್ಲಿ ಕೆಂಪು ಏಡಿಗಳು ಒಂದೆಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುವ ಮೂರ್ನಾಲ್ಕು ವಾರಗಳ ಕಾಲ ಇಡೀ ಪೇಟೆಗೆ ಪೇಟೆಯೇ ಸ್ತಬ್ಧವಾಗಿಬಿಡುತ್ತದೆ. ವಾಹನಗಳು ಓಡಾಡಿದರೆ ರಸ್ತೆಯಲ್ಲಿ ಪಥಸಂಚಲನಕ್ಕಿಳಿದಿರುವ ಏಡಿಗಳು ಚಟ್ನಿ, ಸಾಂಬಾರು ಆಗಬಹುದೆಂದು ರಸ್ತೆಗಳನ್ನು – ಅವು ಹೈವೇಗಳಾಗಿದ್ದರೂ ಸರಕಾರವೇ ಮುಂದೆ ನಿಂತು ಮುಚ್ಚಿಸುತ್ತದೆ. ಏಡಿಗಳ ಸುಖಕರ ಪ್ರಯಾಣಕ್ಕಾಗಿ ಅವುಗಳಿಗೆಂದೇ ಏಡಿರಸ್ತೆಗಳನ್ನೂ ಏಡಿಕಾಲುವೆಗಳನ್ನೂ ಕಟ್ಟಲಾಗಿದೆ! ಕ್ರಿಸ್‍ಮಸ್ ದ್ವೀಪದಲ್ಲಿ ಹೀಗೆ ಪ್ರತಿವರ್ಷ ಗುಳೆ ಹೋಗುವ ಏಡಿಗಳ ಸಂಖ್ಯೆ ಬರೋಬ್ಬರಿ ಐದು ಕೋಟಿ! ಇಂಥಾದ್ದೇ ಏಡಿ ವಲಸೆಗೆ ಕ್ಯೂಬಾ ದೇಶವೂ ಪ್ರಸಿದ್ಧ. ಕ್ಯೂಬಾದ ಒಳನಾಡಿನಲ್ಲಿರುವ ದಟ್ಟ ಅರಣ್ಯದಲ್ಲಿರುವ ಹೆಣ್ಣು ಏಡಿಗಳು ಒಂದು ದಿನ ಇದ್ದಕ್ಕಿದ್ದಂತೆ, ಸಭೆ ಸೇರಿ ಸರ್ವಾನುಮತ ನಿರ್ಣಯ ಕೈಗೊಂಡವೋ ಎಂಬಂತೆ, ತಮ್ಮ ಮನೆಗಳನ್ನು ತೊರೆದು ದೂರದ ಕೆರೆಬಿಯನ್ ಸಮುದ್ರದತ್ತ ಪಯಣ ಬೆಳೆಸುತ್ತವೆ. ಒಂದಲ್ಲ, ಎರಡಲ್ಲ,ಸಾವಿರವೂ ಅಲ್ಲ – ಲಕ್ಷಗಟ್ಟಲೆ ಸಂಖ್ಯೆಯಲ್ಲಿ! ಆಕಾಶಮಾರ್ಗದಲ್ಲಿ ನಿಂತು ನೋಡಿದರೆ ಒಂದು ಬೃಹತ್ ಕೆಂಪು ಹಾಸು ಅರಣ್ಯವನ್ನು ಬಿಟ್ಟು ಹೊರಬಂದು ಸಮುದ್ರದತ್ತ ತೆವಳುತ್ತ ಹೋಗುವಂತೆ ಕಾಣಬಹುದು. ಈ ಪಯಣದಲ್ಲಿ ಅವುಗಳಿಗೆ ಎದುರಾಗುವ ಅಡ್ಡಿ-ಆತಂಕಗಳು ಒಂದೆರಡಲ್ಲ. ನಡುನಡುವೆ ಅವು ಹತ್ತಾರು ಮಾನವನಿರ್ಮಿತ ಹೈವೇ ರಸ್ತೆಗಳನ್ನೂ ಹಾದು ಹೋಗಬೇಕಾಗುತ್ತದೆ. ಆಸ್ಟ್ರೇಲಿಯದಂತೆ ಕ್ಯೂಬದಲ್ಲೇನೂ ರಸ್ತೆಗಳನ್ನು ಮುಚ್ಚುವುದಿಲ್ಲ (ಮುಚ್ಚುವುದೇ ಆದರೆ ದೇಶದ ಬಹುದೊಡ್ಡ ಭಾಗದ ಎಲ್ಲ ಸಾರಿಗೆಯನ್ನೂ ಸ್ತಬ್ಧಗೊಳಿಸಬೇಕಾಗಬಹುದು. ಅದು ಪ್ರಾಕ್ಟಿಕಲ್ ಅಲ್ಲವಲ್ಲ). ರಸ್ತೆಯಲ್ಲಿ ಓಡಾಡುವ ಕಾರು, ಟ್ರಕ್ಕುಗಳು ಈ ಏಡಿಗಳ ತಲೆ ಮೇಲೇ ಹೋಗಿ ಅಲ್ಲೊಂದು ಭೀಕರ ಹತ್ಯಾಕಾಂಡಕ್ಕೆ ಕಾರಣವಾಗುತ್ತವೆ. ಕೆರೆಬಿಯನ್ ಬೇಸಿಗೆಯ ಸುಡುಸುಡು ಬಿಸಿಲು ಬೇರೆ ತಲೆ ಮೇಲೆ. ನೂರಾರು ಮೈಲಿ ಪ್ರಯಾಣದಲ್ಲಿ ಮೈ ನಿರ್ಜಲವಾಗದಂತೆಯೂ ಈ ಏಡಿಗಳು ನೋಡಿಕೊಳ್ಳಬೇಕು. ಇಷ್ಟೆಲ್ಲ ಗಂಡಾಂತರಗಳನ್ನು ಮೈಮೇಲೆಳೆದುಕೊಂಡು ದೀರ್ಘ ಪ್ರಯಾಣ ಮಾಡಿ ಈ ದಿಟ್ಟೆಯರು ಸಮುದ್ರ ಮುಟ್ಟುವುದು ಮತ್ತೇನಕ್ಕಲ್ಲ; ಮೊಟ್ಟೆ ಇಟ್ಟು ಹೊಟ್ಟೆಯ ಭಾರ ಕಳೆದುಕೊಳ್ಳುವುದಕ್ಕೆ! ಹಾಗೆ ತಮ್ಮ ಗರ್ಭವನ್ನು ಕೆರೆಬಿಯನ್ ತೆರೆಗಳಿಗೆ ಬಾಗಿನದಂತೆ ಸಮರ್ಪಿಸಿದ ಮೇಲೆ ಒಂದಷ್ಟು ಜಲಕ್ರೀಡೆಯಾಡಿ ಏಡಿಗಳು ವಾಪಸ್ ಕಾಡಿಗೆ ಹೋಗುತ್ತವೆ. ತಮಾಷೆ ನೋಡಿ; ಆ ಸಮುದ್ರದ ನೀರಲ್ಲಿ ಒಂದೆರಡು ವಾರ ತೇಲಾಡಿ ಮರಿಯಾಗಿ ಕೈಕಾಲು ಹುಟ್ಟಿ ಕಣ್ಣು ಬಿಟ್ಟ ಏಡಿಗಳು ಕೂಡ ತಕ್ಕ ಮಟ್ಟಿಗೆ ಪ್ರೌಢಾವಸ್ಥೆಗೆ ಬಂದ ಮೇಲೆ,ಅದ್ಯಾವ ದೈವ ಪವಾಡವೋ, ತಮ್ಮ ಅಮ್ಮಂದಿರ ಹೆಜ್ಜೆಯ ಜಾಡು ಹಿಡಿದು ತಾವೂ ಕಾಡೆಂಬ ತವರಿಗೆ ಮರಳುತ್ತವೆ!

ಏಡಿಗಳಲ್ಲಿರುವ ಪ್ರಭೇದಗಳು ಅಸಂಖ್ಯಾತ. ಜಗತ್ತಿನಲ್ಲಿ ಇದುವರೆಗೆ ಲೆಕ್ಕಕ್ಕೆ ಸಿಕ್ಕಿರುವ ಏಡಿಗಳ ಜಾತಿಗಳು ಒಟ್ಟು ನಾಲ್ಕೂವರೆ ಸಾವಿರ. ಬಟಾಣಿ ಏಡಿ (ಪೀ ಕ್ರ್ಯಾಬ್) ಎಂಬ ಪುಟಾಣಿ ಏಡಿ ಹೆಚ್ಚೆಂದರೆ ಐದಾರು ಮಿಲಿಮೀಟರ್ ಉದ್ದ ಅಷ್ಟೇ. ಆದರೆ ಜಪಾನಿನ ಜೇಡ ಏಡಿ ಎಂಬ ತಳಿಗೆ ಕೈಕಾಲುಗಳ ಉದ್ದವೇ ಬರೋಬ್ಬರಿ 13 ಅಡಿ! ಉತ್ತರ ಕನ್ನಡದ ಗಜನಿ ಭೂಮಿಯ ನೀರು-ನೆಲಗಳಲ್ಲಿ; ಮ್ಯಾಂಗ್ರೋ ಕಾಡಿನ ಅಳಲುಬಿಳಲುಗಳಲ್ಲಿ ದೋಬಿ ಏಡಿ ಎಂಬ ವೆರೈಟಿ ಕಾಣ ಸಿಗುತ್ತದೆ. ಉಳಿದೆಲ್ಲ ಏಡಿಗಳಿಗಿಂತ ಭಿನ್ನ ಇವುಗಳ ಕೊಂಬುಗಳು. ಗಂಡು ದೋಬಿಗಳಿಗೆ ಇರುವ ಎರಡರಲ್ಲಿ ಒಂದು ಕೊಂಬು ರಾಕ್ಷಸಗಾತ್ರದ್ದು. ಮೂಗಿಗಿಂತ ನತ್ತು ದೊಡ್ಡದೆನ್ನುವ ಹಾಗೆ ಏಡಿಯ ದೇಹಕ್ಕಿಂತಲೂ ಅದರ ಕೊಂಬೇ ದೀರ್ಘ! ಆ ಕೊಂಬನ್ನು ಏಡಿಗಳು ಅಗಸನೊಬ್ಬ ಬಟ್ಟೆಯನ್ನು ಎತ್ತೆತ್ತಿ ಒಗೆದಂತೆ ಮೇಲೂ ಕೆಳಗೂ ಆಡಿಸುತ್ತಲೇ ಇರುವುದರಿಂದ ಅವಕ್ಕೆ ದೋಬಿಗಳೆಂಬ ಹೆಸರೇ ಗಟ್ಟಿಯಾಗಿ ಬಿಟ್ಟಿದೆಯಂತೆ! (ಇವಕ್ಕೆ ಇಂಗ್ಲೀಷಿನಲ್ಲಿ ಫಿಡ್ಲರ್ ಕ್ರ್ಯಾಬ್ ಎನ್ನುತ್ತಾರೆ. ತಮ್ಮ ದೊಡ್ಡ ಕೊಂಬನ್ನು ಚಿಕ್ಕ ಕೊಂಬಿನಿಂದ ಉಜ್ಜುತ್ತ ಕೂತಾಗ ಇವು ಒಂದು ಕೈಯ ಪಿಟೀಲನ್ನು ಇನ್ನೊಂದು ಕೈಯ ಕೋಲಿನಿಂದ ನುಡಿಸುವ ಸಂಗೀತಗಾರನಂತೆ ಕಾಣುತ್ತವೆ. ಫಿಡ್ಲ್ ಎಂದರೆ ಪಿಟೀಲು ಎಂದರ್ಥ). ದೋಬಿ ಏಡಿಗಳ ಕೊಂಬುಗಳ ಪೈಕಿ ಒಂದಷ್ಟೇ ದಪ್ಪಗಾದರೆ ತೆಂಗಿನ ಏಡಿಗಳ ಎರಡು ಕೊಂಬುಗಳೂ ಪೈಲ್ವಾನರ ರಟ್ಟೆಗಳಷ್ಟೇ ಬಲಿಷ್ಠ. ಸಮುದ್ರದ ಸಹವಾಸವನ್ನೇ ಬಯಸದೆ ನೆಲದಲ್ಲಿ ಆರಾಮಾಗಿ ಓಡಾಡಿಕೊಂಡಿರುವ ನೆಲದ ಏಡಿಗಳ ಪೈಕಿ ಈ ತೆಂಗಿನ ಏಡಿಯೇ ದೊಡ್ಡದು. ಇವುಗಳ ಗಾತ್ರ ಪ್ರೌಢ ಬೆಕ್ಕಿನಷ್ಟಿರುತ್ತದೆ; ತೂಕ 4ರಿಂದ ಆರು ಕೆಜಿಯಷ್ಟು. ಓಡಾಡುವ ಜಾಗದಲ್ಲಿ ಸಿಗುವ ಶಿಲೀಂಧ್ರ, ಹಾವಸೆ,ಪಾಚಿ, ಅಣಬೆ, ಕೊಳೆಯುತ್ತಿರುವ ತರಕಾರಿ, ಸತ್ತ ಜಿರಳೆ, ಇಲಿ – ಹೀಗೆ ಏನು ಕಾಲಿಗೆ ತೊಡರಿದರೂ ಮುಕ್ಕುವ ಈ ಸರ್ವಭಕ್ಷಕ ಏಡಿಗೂ ತೆಂಗಿಗೂ ಏನು ಸಂಬಂಧ ಎನ್ನುತ್ತೀರಾ? ಹೊಟ್ಟೆ ತಾಳ ಹಾಕಿದರೆ ಇವು ತೋಟದಲ್ಲಿ ಬಿದ್ದ ತೆಂಗಿನ ಕಾಯಿಯನ್ನೂ ತಮ್ಮ ಕೊಂಬುಗಳಿಂದಲೇ ಒಡೆದು ಒಳಗಿನ ತಿರುಳನ್ನು ಗೆಬರಿ ತಿನ್ನಬಲ್ಲವು!

ಕಾಡಿನಲ್ಲಿ ಕಳೆ-ಕಸಗಳ ಪೋಷಕಾಂಶಗಳನ್ನು ಹೀರಿಕೊಂಡು ಸಮೃದ್ಧವಾಗಿ ಬೆಳೆಯುವ ಫಂಗೈ ಅಥವಾ ಶಿಲೀಂದ್ರಗಳಂತೆ ಸಮುದ್ರದ ದಂಡೆಯಲ್ಲಿ ಸಿಗುವ ಸಣ್ಣಪುಟ್ಟ ಕಸ-ಕೊಳೆಯನ್ನು ತಿನ್ನುತ್ತ ಪೊಗದಸ್ತಾಗಿ ಬೆಳೆದು ಮನುಷ್ಯನ ತಟ್ಟೆಯಲ್ಲಿ ಆಹಾರವಾಗಿ ಪವಡಿಸುವ ಏಡಿಗಳದ್ದು ಒಂದು ರೀತಿಯಲ್ಲಿ, ಪರೋಕಾರಾರ್ಥಂ ಇದಂ ಶರೀರಂ ಎನ್ನುವಂಥ ಜೀವನ! ಮುಂದೆ ಸಮುದ್ರದಂಡೆಯಲ್ಲಿ ಏಡಿಯೊಂದನ್ನು ಕಂಡು ಹೌಹಾರಿದಾಗ, ಅಥವಾ ಅದನ್ನು ರಾತ್ರಿಯೂಟಕ್ಕೆಂದು ನಾಜೂಕಾಗಿ ಹಿಡಿದು ಕೈಯಲ್ಲೆತ್ತುವಾಗ, ಪ್ರಕೃತಿಯ ವಿಸ್ಮಯಕ್ಕೊಮ್ಮೆ ಮನಸ್ಸು ತಲೆಬಾಗಲಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!