ಅಂಕಣ

ಎಚ್ಚೆಸ್ವಿ ಕಥಾಲೋಕದಲ್ಲೊಂದಷ್ಟು ಹೊತ್ತು…

‘ಎಚ್ಚೆಸ್ವಿ ಅವರ ಈವರೆಗಿನ ಕತೆಗಳು’ ಅನ್ನುವ ಪುಸ್ತಕದಲ್ಲಿ ಎಚ್ಚೆಸ್ವಿ ಅವರು ಬರೆದಂಥ ಕತೆಗಳನ್ನ ಕಲೆಹಾಕಲಾಗಿದೆ. ಆ ಪುಸ್ತಕದ ಜೊತೆ ನಾನು ಕಳೆದ ಕ್ಷಣಗಳನ್ನು ಹೀಗೆ ಹಂಚಿಕೊಂಬಾಸೆ…

ಸುಮಾರು ಮೂವತ್ತು ವರ್ಷಗಳಿಗಿಂತಲೂ ಹಳೆಯದಾದ ಕತೆಗಳು ಈ ಪುಸ್ತಕದಲ್ಲಿರುವುದರಿಂದ, ಇಂದಿನ ಓದುಗನಿಗೆ ಒಂದು ಹೊಸ ಅನುಭವ ದಕ್ಕುತ್ತದೆ. ಕ್ರಾಂತಿಗಳೆಲ್ಲಾ ವೈಯಕ್ತಿಕ ಒತ್ತಡಗಳ ಮೂಲದಿಂದಾನೇ ಹುಟ್ಟುತ್ತವೋ ಏನೋ ಯಾರಿಗೆ ಗೊತ್ತು ಅನ್ನುತ್ತಾ ಅಂತರ್ಜಾತೀಯ ವಿವಾಹವಾಗಲು ಯೋಚಿಸುವ ಒಬ್ಬ ವ್ಯಕ್ತಿಯ ಬಗೆಗೆ ಹೇಳಿದ್ದಾರೆ. ಪ್ರವಾಹವನ್ನು ಪ್ರೇಮಕ್ಕೆ ಹೋಲಿಸಿ, ಕೊನೆಯಲ್ಲಿ ಕ್ಷಣ ಕ್ಷಣಕ್ಕೆ ಅವಳು ದೂರಾಗುತ್ತಿದ್ದಳು ಅನ್ನುವಾಗ ನಾವೇ ನಮ್ಮ ಸ್ವಂತದ್ದೇ ಏನನ್ನೋ ಕಳೆದುಕೊಳ್ಳುತ್ತಿದ್ದೇವೆ ಅನ್ನುವ ಭಾವ ಆವರಿಸಿಕೊಳ್ಳುತ್ತದೆ. ಪ್ರವಾಹ ಇಳಿಯುವುದು ಹೇಗೆ ಒಳ್ಳೆಯದೋ ಹಾಗೇ ಕೆಲವೊಮ್ಮೆ ದೂರಾಗುವ ಪ್ರೀತಿ ಕೂಡಾ ಭವಿಷ್ಯದ ಹಿತಕ್ಕಾಗಿ ಎಂಬುದನ್ನ ಸೂಚ್ಯವಾಗಿ ತಿಳಿಸಿದ್ದಾರೆ.

ಅವರ ಇನ್ನೊಂದು ಕತೆಯಲ್ಲಿ, ಹೆಣವೊಂದು ದೇವಸ್ಥಾನದ ಎದುರಿಗಿದ್ದರೂ ಜನರು ತಮ್ಮದೇ ಧಾಟಿಗಳಲ್ಲಿ ಅದನ್ನು ವಿಶ್ಲೇಷಿಸಿ, ತಮ್ಮ ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳುವತ್ತ ಗಮನ ಹರಿಸುತ್ತಾರೆ, ಶವ ಸಂಸ್ಕಾರಕ್ಕಾಗಿ ಒಟ್ಟಾದ ಹಣ ಅವಳ ಹಸಿವನ್ನು ನೀಗಿಸಲೂ ಸಹಾಯ ಮಾಡುತ್ತದೆ. ಅಸಹಾಯಕತೆ, ಆಸೆ ಕೊನೆಗೆ ಗಟ್ಟಿಯಾಗಿ ಅಳುವಲ್ಲಿಗೆ ಕಾಡುವ ವಿಷಯವಾಗಿ ಉಳಿಯುತ್ತದೆಯಷ್ಟೆ..

‘ತಲೆಗೊಂದು ಕೋಗಿಲೆ’ ಎನ್ನುವ ಕತೆಯಲ್ಲಿ ಊಹೆಯೆಂಬುದು ಕಟ್ಟುವಿಕೆಗೆ ಸಹಕಾರಿಯಾಗುತ್ತದೆ, ಆದರೆ ಯೋಚನೆ ಏನನ್ನೂ ಕಟ್ಟಲಾರದು ಎಂದು ಹೇಳುತ್ತಾರೆ. ಊಹೆ ಸುಳ್ಳನ್ನು ಅಲಂಕರಿಸುತ್ತದೆ, ಸತ್ಯವನ್ನು ಸುಳ್ಳಿನ ಕೋಟೆಯಲ್ಲಿಟ್ಟು ಕಾಪಾಡುತ್ತದೆ. ಪ್ರಾಣಿ ಪಕ್ಷಿಗಳ ಹೆಸರನ್ನು ಬರೆದಿಟ್ಟ ಹಲಗೆಗಳು ಯಾರಿಗಾಗಿ ಮತ್ತು ಯಾತಕ್ಕಾಗಿ ಇವೆ ಎಂದು ಕೇಳುತ್ತಾ ಅಸ್ತಿತ್ವದ ಬಗೆಗೆ ವಿಶ್ಲೇಷಿಸಿದ್ದಾರೆ.

ಮನಸ್ಸಿನಲ್ಲಿರುವ ಆಸೆಗಳೇ ಕನಸುಗಳಾಗುತ್ತವೆ ಎಂಬುದು ‘ಉಳಿಕೆ’ ಕತೆಯಲ್ಲಿ ವ್ಯಕ್ತವಾಗಿದೆ. ಕಣ್ಣಿಗೆ ಕಾಣುವುದಷ್ಟೇ ಸತ್ಯ ಎನ್ನುವುದೂ ಸೂಚ್ಯ. ಬೆಳಕಿನಲ್ಲಿ ಕಲ್ಪನೆ ಬೆಳೆಯಲಾರದು, ಕತ್ತಲಿನಲ್ಲಿ ಮಾತ್ರವೇ ಕಲ್ಪನೆ ಬೆಳೆಯುವುದು, ಯಾಕಂದ್ರೆ ಕತ್ತಲೆಗೆ ನಿರ್ದಿಷ್ಟ ರೂಪು ಇರುವುದಿಲ್ಲ.. ಆದರೆ ಬೆಳಕಿನಲ್ಲಿ ಜಗತ್ತು ಸೀಮಿತವಾಗುತ್ತದೆ ಎಂಬುದು ಅತ್ಯಂತ ಆಳದ ವಿಷಯ. ಮರವೊಂದು ಉದುರಿದಾಗ ಅದರಲ್ಲಿ ಗೂಡು ಕಟ್ಟಿದ್ದ ಹಕ್ಕಿಗಳೆಲ್ಲಾ ಹಾರಿಹೋಗುತ್ತವೆ ಅನ್ನುವಾಗ ಸಂಬಂಧಗಳ ಪದರಗಳು ಒಂದೊಂದೇ ಕಳಚಿಕೊಂಡಂತಾಗುತ್ತದೆ.

ಸಾಯುವ ಕನಸೂ ಕೂಡ ಕೆಲವೊಮ್ಮೆ ಸುಂದರವಾಗಿ ಕಾಣುತ್ತದೆ ಎಂದಾಗ, ಬದುಕಿನ ಬಗೆಗಿನ ಒಬ್ಬ ವ್ಯಕ್ತಿಯ ದ್ವೇಷ ಅನಾವರಣವಾಗುತ್ತದೆ. ಅವನು ಬದುಕಿನ ಕ್ರೂರ ಆಘಾತಕ್ಕೆ ಸಿಲುಕಿ ಅದೆಷ್ಟು ನಲುಗಿರಬಹುದು ಎಂಬುದು ತಿಳಿಯುತ್ತದೆ. ಅಸಹಾಯಕತೆ, ಬಡತನ ಇದ್ದರೂ ಕೂಡ ಬಿಡದ ಸ್ವಾಭಿಮಾನ ಒಂದು ವಿಶಿಷ್ಟ ಅಂಶವಾಗಿ ಸ್ಥಾನ ಪಡೆದ ಕತೆ ‘ಚಂಬಣ್ಣನ ಬೊಂಬೆ ವ್ಯಾಪಾರ’. ಇಲ್ಲಿ ಹಣ ಕೂಡ ಗೌಣವಾಗಿದೆ ಸ್ವಾಭಿಮಾನದ ಇದಿರು..

‘ಅದೇ ಮುಖ’ ಎಂಬ ಕತೆಯಲ್ಲಿ ಚೌಕವನ್ನ ಚೌಕದ ಪಾಲಿಗೆ ಬಿಟ್ಟು ಚಲಿಸಲಾಗದೆ ಹೆಜ್ಜೆ ಕಿತ್ತಿಡಲಾಗದೆ ಇರುವ ಮರವನ್ನ ತಮ್ಮ ತಮ್ಮಲ್ಲೇ ಚೌಕಟ್ಟು ನಿರ್ಮಿಸಿಕೊಂಡು ಅದರಲ್ಲೇ ಒದ್ದಾಡುವ ಜನರ ಮನಃಸ್ಥಿತಿಯಯ ಚಿತ್ರಣವಿದೆ. ಯಾವುದೇ ಒಬ್ಬ ವ್ಯಕ್ತಿ, ಯಾವುದೋ ಒಂದು ಪ್ರದೇಶವನ್ನ ಅಥವಾ ಸಂಬಂಧವನ್ನ ಅತಿಯಾಗಿ ಹಚ್ಚಿಕೊಳ್ಳುವುದೆಂದರೆ ಅದು ಮಣ್ಣಿನಲ್ಲಿ ಸಿಕ್ಕಿಕೊಂಡ ಮರದ ಹಾಗೆ ಭಯಂಕರ ಹಿಂಸೆ, ಕೆಲವೊಮ್ಮೆ ಬಿಡಿಸಿಕೊಳ್ಳುವುದರಲ್ಲಿ ಮತ್ತು ಕ್ಷಮಿಸುವುದರಲ್ಲಿ ಬದುಕಿನ ಅರ್ಥ ಹುದುಗಿರಬೇಕು ಅಲ್ಲವೇ ಎಂದು ಪ್ರಶ್ನಿಸುತ್ತಾರೆ.

‘ಪುಟ್ಟಾರಿಯ ಮತಾಂತರ’ ನನ್ನನ್ನು ತುಂಬಾನೇ ಕಾಡಿದ ಕತೆ. ಸಂಬಂಧ ಎಂದರೇನು ಎಂಬ ಪ್ರಶ್ನೆಗೆ ಹಚ್ಚಿಕೊಂಡರೆ ಉಂಟು, ಬಿಟ್ಟರೆ ಇಲ್ಲ ಎಂಬ ಅತ್ಯಂತ ಸಮರ್ಪಕ ಉತ್ತರವನ್ನು ಕೊಟ್ಟಿದ್ದಾರೆ. ನೆನಪುಗಳ ಮಹತ್ವವನ್ನು ಹೇಳುತ್ತಾ, ನೆನಪುಗಳು ಬೆಳೆಯದ ಯಾವ ವಸ್ತುವೂ ಸ್ವಂತದ್ದಾಗುವುದಿಲ್ಲವೇನೋ ಅನ್ನುತ್ತಾರೆ. ಧರ್ಮ ಶಾಸ್ತ್ರಗಳು ಒಬ್ಬ ಮನುಷ್ಯನ ಬದುಕನ್ನು ಕಟ್ಟಬೇಕು, ಮನಃಶಾಂತಿಯನ್ನು ನೀಡಬೇಕು. ಸಂತಸರಹಿತ ಧರ್ಮ ಆಚರಣೆ ಮತ್ತು ಕಟ್ಟಳೆಗಳು ಬದುಕಿನ ಅರ್ಥದಿಂದ ಬಲು ದೂರ ಎಂಬುದು ಸೂಕ್ಷ್ಮವಾಗಿ ಹೇಳಲ್ಪಟ್ಟಿದೆ.

ಎಚ್ಚೆಸ್ವಿ ಅವರ ಪ್ರತಿಯೊಂದು ಕತೆಯಲ್ಲಿಯೂ ಹಳ್ಳಿಯ ಪರಿಸರದ ಸೊಗಡಿದೆ. ಮನುಷ್ಯ ಸಂಬಂಧಗಳ ವಿವಿಧ ಸ್ತರಗಳ ಜೀವನಾಡಿಯಂತೆ ಅವರ ಕತೆಗಳಲ್ಲಿನ ಪಾತ್ರಗಳು ಮಿಡಿಯುತ್ತವೆ. ವಿಭಿನ್ನ ಮನಃಸ್ಥಿತಿಯ ಸಂವೇದಿನಿಯಾಗಿ ನಿಲ್ಲುತ್ತವೆ. ಒಂದಷ್ಟು ಕತೆಗಳು ಮೇಲ್ನೋಟಕ್ಕೆ ಸಾಮಾನ್ಯವಾಗಿರುವಂತೆ ಕಂಡರೂ ಆಳ ಬೇರೆಯದೇ ಇದೆ. ಮೇಲ್ಪದರ ಕಳಚಿ ಒಳಗಿಳಿದರೆ ಅದರ ಅನುಭೂತಿಯೇ ಬೇರೆ. ಹಲವಾರು ವಿಷಯಗಳು ಅವ್ಯಕ್ತವಾಗಿಯೂ ವ್ಯಕ್ತವಾಗಿರುವುದು ಅವರ ಕತೆಗಳ ಸೌಂದರ್ಯ. ಹೀಗಾಗಿ ಅವರ ಪ್ರತೀ ಕತೆಯೂ ತನ್ನ ಪ್ರತ್ಯೇಕತೆಯನ್ನ ಉಳಿಸಿಕೊಂಡಿದೆ…

Facebook ಕಾಮೆಂಟ್ಸ್

ಲೇಖಕರ ಕುರಿತು

ಶ್ರೀ ತಲಗೇರಿ

ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸ,ಆಗಾಗ ಲೇಖನಿ,ಕುಂಚಗಳ ಸಹವಾಸ..ಬದುಕಿನ ಬಣ್ಣಗಳಲ್ಲಿ ಪ್ರೀತಿಯ ಚಿತ್ರ ಬಿಡಿಸಿ ಖುಷಿಪಡುತ್ತ,ಶಬ್ದಗಳಿಗೆ ಜೀವ ಕೊಡುವ ಪ್ರಯತ್ನದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿರುವ ಕನಸು ಕಂಗಳ ಹುಡುಗ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!