Featured ಅಂಕಣ ಆಕಾಶಮಾರ್ಗ

ಉರಿ – ಉಗ್ರರು ಗುರಿ ತಲುಪಿದ್ದು ಹೇಗೆ …?

 

(ನಾನು ಹಿಂದೂಸ್ತಾನಿಯಲ್ಲ ಎಂದು ನೇರಾನೇರ ಸೋನ್‍ಮಾರ್ಗ ರಸ್ತೆಯಲ್ಲಿ ನಿಂತು ಫೋನ್‍ ಸಂಪರ್ಕ ಕಡಿತದ ಬಗ್ಗೆ ಪ್ರವಾಸಿಗರನ್ನು ಕೆಂಗಣ್ಣಿಂದ ನೋಡುವ ಮತಾಂಧ ಕಾಶ್ಮೀರಿಗಳ ಪರಿಯಿದೆಯಲ್ಲ, ಅದರ ಅರ್ಥ ನಮ್ಮ ನಿಷ್ಠೆ ಯಾವತ್ತಿದ್ದರೂ ಪಾಕಿಗಳಿಗೆ ಎಂದು. ಕುಚೊದ್ಯವೆಂದರೆ ನಮ್ಮಲ್ಲೂ ಹೀಗೇಯೆ ಆಡುತ್ತಾರೆ. ಮತಾಂಧರಿಗೆ ನಿಷ್ಠೆ ಒಪ್ಪಿಕೊಳ್ಳುವ ನಿಜಾಯಿತಿಯಾದರೂ ಇದೆ. ಪ್ರಪರ ಎಬುಜೀಗಳಿಗೆ ಕನಿಷ್ಟ ಆ ಆತ್ಮಸಾಕ್ಷಿನೂ ಇಲ್ಲ. )

ಶ್ರೀನಗರದಿಂದ 102 ಕಿ.ಮೀ. ದೂರದಲ್ಲೂ, ಪಾಕಿಗಳ ಸರಹದ್ದಿನಿಂದ ಕೇವಲ ಎಳೇ ಏಳು ಕಿ.ಮೀ. ದೂರವಿರುವ  ಚಿಕ್ಕ ಪ್ರದೇಶ ಉರಿ. ಇದು ಶ್ರೀನಗರ ಮುಝಪ್ಪರಾಬಾದ್ ಹೈವೆ ಮೇಲಿದ್ದು ಪ್ರಮುಖ ಸೇನಾ ನೆಲೆಯಾಗಿದೆ. ಪಕ್ಕದಲ್ಲೇ ಮಹೌರ್ರ ಎನ್ನುವ ಇನ್ನೊಂದು ಪ್ರದೇಶವಿದೆ. ಅದರ ಪಕ್ಕೆಗೆ ಆತುಕೊಂಡು ಹರಿಯುವ ಸಲಮ್‍ನಾಲಾ ಎಂಬ ಹಳ್ಳವಿದೆ. ಹತ್ಯಾನನಾಲಾ, ಜಂಖಾನಾಲಾ, ಧಿಕೋಟಿನಾಲಾದಂಥ ಹತ್ತಾರು ನಾಲಾಗಳು ಹರಿದು ಝೀಲಮ್ ನದಿಯನ್ನು ತಲುಪುತ್ತವೆ ನೆನಪಿರಲಿ. ಇದನ್ನೇ ಇವತ್ತು ನುಸುಳಲು ಬಳಸಿರುವ ದಾರಿ ಎಂದು ಊಹಿಸುತ್ತಿದ್ದಾರೆ. ಆದರೆ ಪಾಕ್ ಮತ್ತು ಭಾರತದ ಗಡಿಯಲ್ಲಿ ಅನಾಮತ್ತು ಐದು ಗೇಟುಗಳಿವೆ. ಇದ್ದುದರಲ್ಲೇ ದೊಡ್ಡ ಊರಾದ ಚಕೋತಿ-ಶ್ರೀನಗರ ಸಂಪರ್ಕ ಕಲ್ಪಿಸುವ ಮುಖ್ಯ ದಾರಿಯಾಗಿದೆ. ಅದರಾಚೆಗೆ ಕೊಟ್ಟ ಕೊನೆಯಲ್ಲಿ ತೀರ ಬೇಲಿಗೆ ಆತುಕೊಂಡಿರುವುದೇ ಮುಝಪ್ಪರಾಬಾದ್.

 

ಇದರ ಕೆಳಗೇ ತಾವಗಿ, ಅಪೂಟು ಬೇಲಿಗೇ ಆತುಕೊಂಡಿರುವ ಕೋಹಲಾ, ಕೊಂಚ ಎಡಕ್ಕೆ ಬಿದ್ದರೆ ಮುನಾಸಾ, ಮಾಲೋಂಚಾ, ಅದಕ್ಕೂ ಕೆಳಗೆ ನೀಲಾಭಟ್ಟಿ, ಮಗ್ಗುಲಲ್ಲೇ ತೀನ್‍ಭಾಗ್ಲಿ ಅದರ ಪಾದದಲ್ಲೇ ನಟೋರಿಯಸ್ ಊರು ಅಜಮನಗರ್, ಕೊನೆಯಲ್ಲಿ ಸಹೀಲನ್ ಹೀಗೆ ಉರಿಯ ಸುತ್ತ ಮುತ್ತ ಸರಹದ್ದಿಗೆ ಆತುಕೊಂಡು ನೂರಾರು ಮನೆಗಳ ಹತ್ತಾರು ಹಳ್ಳಿಗಳಿವೆ. ಇವೆಲ್ಲದಕ್ಕೂ ಕಳಸವಿಟ್ಟಂತೆ ಫೀರ್‍ಪಂಜಾಲ್ ಪರ್ವತ ಶ್ರೇಣಿ ಎರಡೂ ಮಗ್ಗುಲಲೂ ಯಥೇಚ್ಚವಾಗಿ ಎತ್ತರದ ತುದಿಗಳನ್ನು ಹೊಂದಿದ್ದು ಯಾವ ಕಡೆಯ ದೃಶ್ಯವನ್ನೂ ನಿರುಕಿಸಬಹುದಾಗಿದೆ. ಆದರೆ ಇದೆಲ್ಲವೂ ಸಂಪೂರ್ಣ ಸ್ಥಾನಿಕ ಮಾಹಿತಿ ಇದ್ದವರಿಗೆ ಮಾತ್ರ ಅರಿವಾಗುವ ಟೊಪೋಗ್ರಫಿ.

 

ಈ ಪರ್ವತ ಪ್ರದೇಶಗಳಲ್ಲಿ ಯಾವೊಬ್ಬನೂ ಬೀಡು ಬೀಸಾಗಿ ಓಡಾಡಲು ಸಾಧ್ಯವೇ ಇಲ್ಲ. ನೂರಾರು ಸಂದುಗಳಲ್ಲಿ ಸುಲಭಕ್ಕೆ ಕಣ್ಣಿಗೆ ಯಾವನೂ ಬೀಳಲಾರ ಕೂಡಾ. ಇಂಚಿಂಚಿಗೂ ನಮ್ಮ ಸೈನ್ಯ ಕಾವಲು ಕಾಯುತ್ತದೆಯಾದರೂ ನೋಡಿದಾಕ್ಷಣ ಎಲ್ಲವೂ ನಿಚ್ಚಳವಾಗಿ ಕಣ್ಣಿಗೆ ಕಾಣಿಸುವಂತಹ ಬಟಾಬಯಲು ಪ್ರದೇಶವಲ್ಲ ಉರಿ ಸೆಕ್ಟರ್. ಸುತ್ತಲೂ ಬಂಡೆ ಮತ್ತು ದಟ್ಟ ಕಾಡಿನ ಆವೃತ್ತವಾಗಿರುವ ಪ್ರದೇಶದಲ್ಲಿ ಮತಾಂಧರು ದಾಳಿಗಿಳಿಯಬೇಕಾದರೆ, ಹಿಂದಿನ ದಿನ ರಾತ್ರಿ ಪಿಕ್‍ನಿಕ್ಕಿಗೆಂದು ಹೊರಟಂತೆ ಹೊರಟು, ಬೆಳ್ಳಂಬೆಳಿಗ್ಗೆ ಬೇಲಿ ಹಾರಲಿಕ್ಕೆ ಸಾದ್ಯವೇ ಇಲ್ಲ. ಸತತವಾಗಿ ಅವರಿಗೆ ಸ್ಥಳೀಯ ಬೆಂಬಲ ಇಲ್ಲದಿದ್ದರೆ ಅಸಾಧ್ಯ. ಆ ಪ್ರದೇಶದ ದಾರಿ, ಒಳ ನುಸುಳುವಿಕೆ ಮತ್ತು ಕಾಲ್ದಾರಿಗಳ ವಿವರವನ್ನು ಇಂಚು ಇಂಚಾಗಿ ಪರಿಚಯಿಸದಿದ್ದರೆ ಎಂಥಾ ನಿಷ್ಣಾತನೂ ನೇರವಾಗಿ ಮಿಲಿಟರೀ ಬೇಸ್‍ವರೆಗೆ ತಲುಪಲಿಕ್ಕೆ ಪಾಸಿಬಿಲಿಟೀಸ್ ಇಲ್ಲವೇ ಇಲ್ಲ.

 

ತರಬೇತಿಗೊಳಿಸಿ ಗಡಿಭಾಗಕ್ಕೆ ಬರುವ ಹೆಚ್ಚಿನ ಉಗ್ರರನ್ನು ಬರಿಗೈಯ್ಯಲ್ಲೇ ಒಳನುಸುಳಿಸುತ್ತಾರೆ. ಜತೆಗೆ ಸಾಮಾನುಗಳು ಹೆಚ್ಚಿದ್ದಷ್ಟೂ ಸೈನ್ಯದ ಕಣ್ಣಿಗೆ ಬೀಳುವ ಅಪಾಯ ಹೆಚ್ಚಿರುತ್ತದೆ. ಹಾಗಾಗಿ ವೆಪನ್‍ಗಳನ್ನು ಸಾಗಿಸಿ ಒಳತಂದಿಡುವ ಪೋರ್ಟರ್‍ಗಳೇ ಬೇರೆ. ಇದಕ್ಕೆ `ಲಗೇಜ್’ ಎನ್ನುತ್ತಾರೆ. ಇದನ್ನು ಹೊತ್ತಿಳಿದು ಸೂಕ್ತ ಜಾಗದವರೆಗೂ ಸಾಗಿಸುವ ಒಂದು ಜಾಲವೇ ಉಗ್ರರಿಗಾಗಿ ಕೆಲಸ ಮಾಡುತ್ತದೆ ಮತ್ತು ಈ ಜಾಲದ ಮೂಲ ಭಾರತದಲ್ಲಿರುವ ದೇಶದ್ರೋಹಿಗಳದ್ದು. ಇವತ್ತು ಉರಿ ಸೆಕ್ಟರ್ ಹೆಚ್ಚಿನಂಶ ಭಾರತದ ಪರವಾಗಿಲ್ಲದಿರುವುದೂ ಜಗಜ್ಜಾಹೀರು. ಕಾರಣ ಹೀಗೆ ಇಂಡಿಯನ್ ಆರ್ಮಿ ಕಣ್ಣಿಗೆ ಮಣ್ಣೆರಚಿ ಸಾಗಿಸಬೇಕಾದರೆ ಅಯಾ ಸ್ಥಳದ ಪ್ರತಿ ತಿರುವು ಸೂಕ್ಷ್ಮವಾಗಿ ಗೊತ್ತಿರುವವನೇ ಜವಾಬ್ದಾರಿ ತೆಗೆದುಕೊಂಡಿರುತ್ತಾನೆ. ಒಳ ನುಸುಳುವ ಉಗ್ರ ತನ್ನೊಂದಿಗೆ ಲಾಂಚರು, ಏ.ಕೆ.47, ಗ್ರೇನೇಡುಗಳು, ಬಾಕು, ಶಸ್ತ್ರವಾಗಿ ಸಿದ್ಧವಾಗಿರಲು ಅಗತ್ಯದ ಸಮವಸ್ತ್ರ ಇತ್ಯಾದಿ,  ಜತೆಗೆ ಮದ್ದು ಗುಂಡುಗಳು ಮತ್ತು ಅವರು ಬದುಕುಳಿಯಲು ಬೇಕಾಗುವ ಅಹಾರ ಸಾಮಗ್ರಿ, ನೀರು ಸೇರಿದರೆ ಒಬ್ಬ ಮನುಷ್ಯ ಕನಿಷ್ಟ 25 ಕಿಲೋ ಹೊರಬೇಕಾಗುತ್ತದೆ. (ಮುಂಬೈ ಅಟ್ಯಾಕ್‍ಗೂ ಮೊದಲೇ ಹೋಟೆಲಿನಲ್ಲಿ ದಾಸ್ತಾನು ಮಾಡಿಕೊಂಡಿದ್ದ ತಯಾರಿ ನೆನಪಿಸಿಕೊಳ್ಳಿ) ಇದನ್ನೆಲ್ಲಾ ಹೊತ್ತು ಅಮ್ಲಜನಕದ ಲಭ್ಯತೆಯೇ ಮೂರರಷ್ಟು ಕಡಿಮೆ ಇರುವ ಭಾಗದಲ್ಲಿ ಅಖಂಡವಾಗಿ ಯಾವನಾದರೂ ಗಡಿ ದಾಟಿಯಾನಾ..? ದಾಟಿದರೂ ಅಷ್ಟು ನಿಖರವಾಗಿ, ತತಕ್ಷಣಕ್ಕೆ ಅವನು ಆರ್ಮಿಬೇಸ್ ತಲುಪಲಾರ.

 

ಕಾರಣ ಎಂತಹದ್ದೇ ನಕಾಶೆ, ವಿಡಿಯೋ, ಗೂಗಲ್ ಮ್ಯಾಪು ತೋರಿಸಿ ಅವರನ್ನು ನೀವು ತರಬೇತುಗೊಳಿಸಿದ್ದರೂ ಭೂಮುಖದ ಟೊಪೋಗ್ರಫಿ ನೋಡುವಾಗ ಎಂಥವನೂ ರಸ್ತೆ ಮತ್ತು ತಿರುವುಗಳನ್ನು ಗುರುತಿಸುವಾಗ ಕನ್‍ಫ್ಯೂಸ್ ಆಗೇ ಆಗುತ್ತಾನೆ. ಕಾರಣ ಕಾಶ್ಮೀರದ ವಲಯ ಯೋಜನಾ ಬದ್ಧ ನಗರವಲ್ಲ. ಅಪ್ಪಟ ಅಗಾಧ ಏರಿಳಿತಗಳ ಕಣಿವೆ. ಪ್ರತಿ ಹೆಜ್ಜೆಯೂ ಒಂದೋ ಮೇಲಕ್ಕೆ ಹತ್ತಿಸುತ್ತದೆ ಇಲ್ಲ ಕೆಳಕ್ಕಿಳಿಸುವ ಪರ್ವತ ವಲಯ ಅದು. ಅದರಲ್ಲೂ ಸಮಾಜ ವಿರೋಧಿ ಕೃತ್ಯಕ್ಕೆ ಹೊರಟ ಮತಾಂಧನಿಗೆ ಸಮಯದ ಮಿತಿ ತುಂಬ ಕಡಿಮೆ ಇರುತ್ತದೆ. ಕೂಡಲೇ ಆತ ತನ್ನ ಹೀನಕಾರ್ಯ ಆರಂಭಿಸಬೇಕಿರುತ್ತದಲ್ಲ, ಇನ್ನು ರಸ್ತೆ, ಗಲ್ಲಿ ಎಂದೆಲ್ಲಾ ಪ್ರತಿ ತಿರುವಿಗೂ ನಿಂತು ಕನ್‍ಫರ್ಮ್ ಮಾಡಿಕೊಳ್ಳುವ ಹಂತದಿಂದ ಹೊರ ಬಂದು ಯಾವುದೋ ಕಾಲವಾಗಿರುತ್ತದೆ. ನಾಲ್ಕಾರು ವಾರದ ತರಬೇತಿಯಲ್ಲಿ ಸಾಯುವುದೊಂದೇ ಅಂತಿಮ ಎನ್ನುವ ದೇವವಾಕ್ಯ ಕಲಿಯುವ ಪುಟಗೋಸಿ ಉಗ್ರರಿಗೆ ಅದಿನ್ನೆಲ್ಲಿಯ ಬುದ್ಧಿವಂತಿಕೆ ಇದ್ದೀತು..? ಅಸಲಿಗೆ ಬುದ್ಧಿವಂತಿಕೆ ಇದ್ದಿದ್ದೇ ಆದರೆ ಅಂಥವರು ಮತಾಂಧ ಉಗ್ರರಾಗುತ್ತಾರಾದರೂ ಯಾಕೆ..? ತಲೆ ಕೆಡಿಸಿಕೊಂಡು ಬಂದೂಕು ಹಿಡಿಯಲು ಕಲಿತು ಬರುವ ಕಾಂಜಿಪಿಂಜಿ ಹುಡುಗರಿಗೆ ಟ್ರಿಗ್ಗರು ಅದುಮುವುದೇ ತಲುಬು. (ನಮ್ಮ ಆರ್ಮಿ ಹೊಡೆದುರುಳಿಸಿದ ಎಲ್ಲಾ ಧೂರ್ತರ ಆಯಸ್ಸು ಇಪ್ಪತ್ತರ ಆಸುಪಾಸಿನಲ್ಲಿದೆ ಗೊತ್ತಿರಲಿ) ಹಾಗಾಗಿ ಅವರನ್ನು ಬರೀಗೈಯ್ಯಲ್ಲಿ ಒಳ ನುಗ್ಗಿಸಲಾಗಿರುತ್ತದೆ. ಇನ್ನೊಂದು ಗೊತ್ತಿರಲಿ. ಇದೆಲ್ಲಾ ಮೆಟೀರಿಯಲ್ಲುಗಳು ಕನಿಷ್ಟ ಅವಧಿಗೂ ಮೊದಲೇ ಬಂದು ಕನ್‍ಫರ್ಮ ಆಗಿರುತ್ತದೆ. ಇಲ್ಲದಿದ್ದರೆ ಸುಖಾಸುಮ್ಮನೆ ಉಗ್ರರು ಒಳ ನುಸುಳಿ `ಲಗೇಜೆ’ ಇಲ್ಲದಿದ್ದರೆ ಏನು ಉಪಯೋಗ..? ಹಾಗಾಗಿ ಮೊದಲೇ ಬಂದು ನೆಲದೊಳಗೋ, ಗಡಿ ಮನೆಗಳಲ್ಲೋ ದಾಸ್ತಾನಾಗಿರುತ್ತವೆ. ಕೊನೆ ಕ್ಷಣದಲ್ಲಿ ವಾಟರ್ ಬಾಟಲ್ ತೆಗೆದುಕೊಂಡು ಹೊರಡುವಂತೆ ಅವನ್ನೆಲ್ಲಾ ನಿಖರವಾದ ಜಾಗದಿಂದ ಲಿಫ್ಟ್ ಮಾಡಲಾಗುತ್ತದೆ.

 

ತೀರ ಗಡಿ ಭಾಗದಲ್ಲಿ ಮತಾಂಧ ಕಾಶ್ಮೀರಿಗಳ ಬೆಂಬಲ ಇಲ್ಲದೆ, ಹೊರಗಡೆಯಿಂದ ಪಾಕಿಗಳ ಒತ್ತಾಸೆ ಇಲ್ಲದೆ ಈ ಯೋಜನೆ ಸಾಧ್ಯವೇ ಇಲ್ಲ. ಸರಿಯಾಗಿ ಚುಕ್ಕೆಚುಕ್ಕೆ ಕೂಡಿಸಿ ನೋಡಿ. ಅರು ಕಿ.ಮೀ. ವ್ಯಾಪ್ತಿಯಲ್ಲಿ ಎಷ್ಟು ಮನೆಗಳು ತೀರ ಗಡಿ ಭಾಗಕ್ಕಿವೆ ಹೈಡ್ ಔಟ್ ಮಾಡಿಕೊಳ್ಳಲು, ನುಸುಳಿದ ಮೇಲ, ಬೇಲಿ ಮುರಿದು ಬೇಸ್‍ಕ್ಯಾಂಪ್‍ನಲ್ಲಿ ನುಗ್ಗುತ್ತಾರಾದರೆ ಇಂತಲ್ಲೇ ಹೀಗೀಗೆ ದಾರಿ ಹಿಡಿಯಬೇಕು ಎನ್ನುವ ಅತ್ಯಂತ ಪಿನ್ ಟು ಪಿನ್ ಮಾಹಿತಿ ಸ್ಥಳೀಯರಲ್ಲದೇ ಬೇರಾರೂ ಕೊಡಲಿಕ್ಕೆ ಸಾಧ್ಯವೇ ಇಲ್ಲ. ಸಾವಿರಾರು ಕಿ.ಮೀ. ದೂರದಲ್ಲಿದ್ದು ಟ್ರೆಕ್ಕರ್ ಆಗಿಯೂ, ಪ್ರವಾಸಿಯಾಗಿ ಅಲೆಯುವ ನಾನೇ ಇವತ್ತು ಒಂದು ಸ್ಥಳದ ಬಗ್ಗೆ ಇಷ್ಟು ನಿಖರವಾಗಿ ಗುರುತಿಸಬಲ್ಲೇನಾದರೆ ಅಲ್ಲೇ ಇರುವವರಿಗೆ ಅಡ್ಡ ದಾರಿಗಳು ಅಂಗೈ ರೇಖೆಯಷ್ಟೆ ಸಲೀಸು.

 

ಹೀಗೆ ಅಡ್ಡ ದಾರಿಯಲ್ಲಿ ನುಸುಳುವ ಉಗ್ರರಿಗೆ ಅನ್ನಾಹಾರ ಮತ್ತು ಸಕಲ ಸವಲತ್ತು ಖಂಡಿತಕ್ಕೂ ಲಭ್ಯವಾಗಲೇ ಬೇಕು. ಅದನ್ನು ಸ್ಥಳೀಯರಲ್ಲದೇ ಬೇರಾರು ಪೂರೈಸಲಿಕ್ಕೆ ಸಾಧ್ಯ..? ಅಲ್ಲಿಂದ ತೀರ ಬೆಳಗಿನ ಜಾವಕ್ಕೆ ನಿರ್ದಿಷ್ಟ ಜಾಗದಲ್ಲಿ ಬೇಲಿ ಮುರಿದು ನುಸುಳಿದರೆ ಬೇಸ್ ಕ್ಯಾಂಪ್‍ನ ಪ್ರಮುಖ ಡೆರೆ/ಟೆಂಟ್ ಲಭ್ಯವಾಗುತ್ತದೆ ಎನ್ನುವದನ್ನು ಗುರುತಿಸಿ ಗೈಡ್ ಮಾಡುವವರು ಸ್ಥಳಿಯವಾಗಿ ಉಗ್ರರಿಗೆ ಬೆಂಬಲಿಸುವ ದೇಶದ್ರೋಹಿಗಳೆ ಹೊರತು ಆಚೆ ಬದಿಗಿನ ವಿದ್ರೋಹಿ ಕಮಾಂಡರುಗಳಲ್ಲ. ಕಾರಣ ಬಂದೂಕು, ಗ್ರೆನೇಡು ಮತ್ತು ರಾಕೇಟ್ ಲಾಂಚರ್ ಹೊತ್ತು ಇಷ್ಟೆಲ್ಲಾ ದಾರಿ ಕ್ರಮಿಸಿ, ಅದೂ ಹಗಲೂ ರಾತ್ರಿಯಲ್ಲೂ ಕಾವಲಿರುವ ಸೈನ್ಯವನ್ನೂ ಯಾಮಾರಿಸಿ, ಕೇವಲ ಹಿಂದಿನ ದಿನ ರಾತ್ರಿ ಗಡಿ ದಾಟಿ ಬೆಳ್ಳಂಬೆಳಿಗ್ಗೆ ಎದ್ದು, ಸೈನಿಕರು ಹಲ್ಲುಜ್ಜಿ ಕಾಫಿಗೆ ಹೊರಡುವ ಮೊದಲು ಬಾಂಬು ಹಾಕುತ್ತೇನೆ ಎನ್ನಲು ಅದೇನು ಮದುವೆ ಮನೇನಾ..? ಎಷ್ಟು ದಿನದ ತಯಾರಿ ಮತ್ತು ಎಷ್ಟು ದೇಶ ದ್ರೋಹಿಗಳ ಬೆಂಬಲ ಇರಲಿಕ್ಕಿಲ್ಲ.

 

ನಾವು ಮತ್ತು ನಮ್ಮ ಸೈನ್ಯ ಇವತ್ತು ಮೊದಲು ಮುರಿದಿಕ್ಕಬೇಕಿರುವುದು ಇವರನ್ನು.  ಈಗ ಅಯ್ಯೋ ಪಾಪ ಅವರ ದೇಹವನ್ನು ಅವರ ಧರ್ಮಾನುಸಾರ ದಫನು ಮಾಡಿ ಎಂದು ಇಲ್ಲಿದ್ದು ಅಳುತ್ತ ಮೇಲೂ ಕೆಳಗೂ ಒದ್ದೆ ಮಾಡಿಕೊಂಡು ಕೂರುವ ದರವೇಶಿ ಎಬುಜೀಗಳನ್ನೂ, ಕಾಶ್ಮೀರದಲ್ಲಿ ಮಾನವ ಹಕ್ಕು ಹರಣವಾದ ಬಗ್ಗೆ ಪಾಕಿ ಸೆನೆಟ್‍ನಲ್ಲಿ ಮಾತಾಡುತ್ತೇನೆ ಎಂದು ಹೊರಟು ನಿಂತಿರುವ ಅವಿವೇಕಿ ಹೋರಾಟಗಾರ್ತಿಯರನ್ನು, ಜಾಗತಿಕವಾಗಿ ಅಷ್ಟೂ ಸಂಭ್ರಮಗಳನ್ನು ಅನುಭವಿಸಿಯಾದ ಮೇಲೆ, ಕಾಶ್ಮೀರಿ ಉಗ್ರರಿಗೆ ಬೆಂಬಲಿಸುವ ಅದೇ ಮನಮುರುಕ ಬುದ್ಧಿ ತೋರಿದ ಮಲಾಲಳಂತಹ ಅನನುಭವಿಗಳನ್ನು ಮೊದಲು ಸದೆಬಡಿಯಬೇಕಿದೆ.

 

ಪ್ರತಿ ದಿನ ಬೇರೇನೂ ಕಾಯಕವಿಲ್ಲದೇ ಫ್ರೀ ಫಂಡಿಂಗ್ ಪಡೆಯುತ್ತಾ, ಸಮಾಜದ್ರೋಹಿ ಜೀವನ ನಡೆಸುತ್ತಾ ಫೇಸ್‍ಬುಕ್ ಪುಟದ ಮೇಲೆ ಜಗತ್ತಿನ ಅಷ್ಟೂ ಅಲ್ಪ ಸಂಖ್ಯಾತರ, ದಯನೀಯ ಎನ್ನಿಸುವಂತಹ ಫೋಟೊಗಳನ್ನು ಹುಡುಕುಡುಕಿ ಶೇರ್ ಮಾಡುತ್ತಾ, ದೇಶದ ಅದ್ಯಾವುದೋ ಮೂಲೆಯಲ್ಲೊಂದು ಲೆಟರ್‍ಹೆಡ್ ಪಾರ್ಟಿ ಸಭೆ ನಡೆಸಿದ್ದು ಜಗತ್ತಿನ ದುಂಡು ಮೇಜಿನ ಪರಿಷತ್ತು ಟಿ.ವಿ.ಯಲ್ಲಿ ಪ್ರಸಾರವೇ ಆಗಿಲ್ಲ ಎಂದು ಗೊಳೋ ಎಂದಳುತ್ತಾ, ಆ ಮೂಲಕ ಅರಿವು ಇಲ್ಲದ, ನೆತ್ತಿ ಮಾಸು ಹಾರದ, ಮತಾಂಧ ಮನಸ್ಥಿತಿಯ ಹುಡುಗರನ್ನು ತನ್ನ ವಾಲ್ ಮೇಲೆ ಹೊಡೆದಾಡಲು ಬಿಟ್ಟು ನನಗೆ ಇವತ್ತೆಲ್ಲಿ ಹೊಲಸು ಸಿಕ್ಕಿತು, ಎಲ್ಲಿ ಬಾಯಿ ಹಾಕಲಿ ಎಂದು ಅಕ್ಷರ ಹಾದರಕ್ಕೆ ಹೊರಡುವ ಅನಾಹುತಕಾರಿ ಮನಸ್ಥಿತಿಯ ಹೆಂಗಸರನ್ನು ಮೊದಲು ಮುರಿದಿಕ್ಕಬೇಕಿದೆ. ಆಗ ಭಾರತ ದೇಶದ ದೇಹ ಮತ್ತು ಮನಸ್ಸು ಎಲ್ಲ ಒಂದು ಹಂತದವರೆಗೆ ತಹಬಂದಿಗೆ ಬಂದೀತು.

 

ಆದರೆ ಇಂತಾ ಎಬುಜೀಗಳ ಕೂಗನ್ನು ಬೆಂಬಲಿಸುವ, ಜಾಲತಾಣದ ಅರೆಕಾಲಿಕ ಅಪಕ್ವ ಪಡೆ ಸಾಲಾಗಿ ಕಾಲೆತ್ತಿ ನಿಂತು ನಂದೆಲ್ಲಿದೆ ಎಂದು ಪರಸ್ಪರ ತಡಕಾಡಿ ಗುರುತಿಸಿಕೊಳ್ಳುವ ಐಡೆಂಟಿಟಿ ಕ್ರೈಸಿಸ್‍ಗೆ ಬಿದ್ದಿರುವಾಗ, ತೀರ ಇಲ್ಲಿನ ಸಕಲ ಸವಲತ್ತು ಅನುಭವಿಸುತ್ತಾ ಹೊರಬದೀಯ ಉಗ್ರರಿಗೆ ಕಾಲು, ಮಾಲು ಒದಗಿಸಲು ಮುಂದಾಗಿ ನಿಲ್ಲುವ ದೇಶದ್ರೋಹಿಗಳ ಬೆಂಬಲವಿಲ್ಲದಿದ್ದರೆ ನಮ್ಮ ಯೋಧರ ಹೆಣಗಳ್ಯಾಕೆ ಸುಖಾಸುಮ್ಮನೆ ಬಲಿಯಾಗುತ್ತಿದ್ದವು. ಹೊರ ಉಗ್ರರನ್ನು ಬಡಿಯುವುದು ದೊಡ್ಡದಲ್ಲವೇ ಅಲ್ಲ. ಆದರೆ ಇಲ್ಲಿದ್ದೇ ಬಿಲ ತೋಡಿ ನಮ್ಮ ಕಾಲು ಸಿಗೇ ಬೀಳುವಂತೆ ಮಾಡುತ್ತಾ ದೇಶಕ್ಕೇ ಮಾರಕವಾಗುತ್ತಿದ್ದಾರಲ್ಲ ಅವರದ್ದು ನಾಯಿಗಿಂತಲೂ ಹೀನ ಬಾಳಲ್ಲದೆ ಇನ್ನೇನೂ ಅಲ್ಲ. ಕಾರಣ ದೇಶ ದ್ರೋಹ ಮತ್ತು ಆತ್ಮಹತ್ಯೆ ಇವೆರಡರಷ್ಟು ದೊಡ್ಡ ಹೇಢಿತನ ಇನ್ನೊಂದಿಲ್ಲ ಈ ಲೋಕದಲ್ಲಿ. ಆದರೆ ಇಲ್ಲಿದ್ದೂ ಉಗ್ರರನ್ನೂ, ಮತಾಂಧರನ್ನೂ ಬೆಂಬಲಿಸುವವರು ಹೇಸಿಗೆಗಿಂತಲೂ ಕಡೆ.

 

ಲಾಡೆನ್ ಹತ್ಯೆಗಾಗಿ ನಿರ್ದಿಷ್ಠ ಹೈ ಪ್ರೊಫೈಲ್ ತಯಾರಿ ಇದ್ದಾಗಲೂ ಸೀಲ್ ಸಿಕ್ಸ್ ಪಡೆಗಳು, ಒಂದು ತಿಂಗಳು ಅವನ ಮನೆಯ ರಚನೆಯನ್ನು ನಿರ್ಮಿಸಿ ಅಭ್ಯಾಸ ಮಾಡಿ ಹತ್ಯೆ ಮಾಡಿದ್ದರು ನೆನಪಿರಲಿ. ಅಂದ ಹಾಗೆ ಆವತ್ತು ಸೀಲ್ ಪಡೆಗಳ ಮೇಲೆ ಪಾಕಿಗಳು ತಿರುಗಿ ಬಿದ್ದಿದ್ದರೆ ಏನಾಗುತ್ತಿತ್ತು. ಅವರ ಕಮ್ಯಾಂಡೊಗಳನ್ನು ಸೆರೆ ಹಿಡಿದಿದ್ದರೆ…? ಅದಕ್ಕೇ ಮಾತುಕತೆಯಾಡಲು ಅಮೇರಿಕೆಯ ಉಪಾಧ್ಯಕ್ಷರು ಅದಾಗಲೇ ಅಫಘಾನಿಸ್ತಾನದ ಬೇಸ್‍ನಲ್ಲಿ ಬಂದು ಕೂತಿದ್ದ. ಅದಾಗದಿದ್ದರೆ ಕೂಡಲೇ ಪಾಕಿಗಳನ್ನು ನೆಲಸಮ ಮಾಡಲು ಅಫ್ಘನ್ ಏರ್‍ಬೇಸ್‍ನಲ್ಲಿ ಯು.ಎಸ್.ನ ಏರ್‍ಫೋರ್ಸು ಸಂಪೂರ್ಣ ತಯಾರಿಯೊಂದಿಗೆ ಕಾಲೂರಿತ್ತು. `ಉಡಾಯಿಸಿ ಬಿಡಿ, ಹಿಂದೆ ಸರಿಯುವ ಪ್ರಶ್ನೇಯೇ ಇಲ್ಲ’ ಎಂದಿದ್ದರು ಓಬಾಮ. ಅಂಥವರನ್ನು ತಡುವಿಕೊಳ್ಳುವುದು ಬೇಡವೆಂದೆ ಹೇಢಿ ಪಾಕಿಗಳು ಸುಮ್ಮನಿದ್ದು ಬಿಟ್ಟರು. ಜಗತ್ತಿಗೆ ಎಲ್ಲಾ ಸುದ್ದಿ ಸಿಕ್ಕ ಒಂದು ತಾಸಿನ ಮೇಲೆ ಪಾಕಿಗಳ ಮಂತ್ರಾಲಯಕ್ಕೆ ಸುದ್ದಿ ಸಿಕ್ಕಿತ್ತು. ಹಾಗೆ ಓಬಾಮಾ ಕಾಲೂರಿ ಕದನಕ್ಕಿಳಿಯಲು ದೈರ್ಯ ತೋರಿದ್ದು ಸಂಪೂರ್ಣ ಅಮೇರಿಕೆ ಅವನ ಹಿಂದೆ ನಿಂತಿತ್ತು ಪಕ್ಷ ಬೇಧ ಮರೆತು. ನಮ್ಮಲ್ಲಿ ನೋಡಿ ಸಾಲು ಸಾಲಾಗಿ 20 ಯೋಧರು ಶವವಾಗಿ ಮಲಗಿದ್ದರೂ ಒಬ್ಬೇ ಒಬ್ಬ ನೇತಾರ ಆಡಳಿತ ಪಕ್ಷಕ್ಕೆ ಬೆಂಬಲ ಸೂಚಿಸಿದ್ದು ಕಾಣಿಸುತ್ತಿದೆಯಾ..? ಮೋದಿಯವರು ಕಠಿಣ ಕ್ರಮದ ಬಗ್ಗೆ ಮಾತಾಡುತ್ತಿದ್ದರೆ, ಸರ್ವ ಪಕ್ಷಗಳು `..ಪ್ರಧಾನಿಗಳೇ ಮುನ್ನುಗ್ಗಿ ನಾವಿದ್ದೇವೆ ಜತೆಗೆ’ ಎನ್ನಬೇಕಿತ್ತು. ಆಗಿದ್ದೇನು..? ಎಂದಿನಂತೆ ಪಾಪದ ಅರೆ ಹೊಟ್ಟೆ ಜನಸಾಮಾನ್ಯನೂ, ನನ್ನ ನಿಮ್ಮಂಥವರೂ ಪಾಕಿಗೆ ಬುದ್ಧಿ ಕಲಿಸುವ, ಪಿ.ಓ.ಕೆಗೆ ನುಗ್ಗುವ ಬಗ್ಗೆ ಮಾತಾಡುತ್ತಿದ್ದೇವೆ.  ಇವತ್ತು ಮೋದಿಜೀ ನಾವಿದ್ದೇವೆ ಎನ್ನುತ್ತಿದ್ದೇವೆ..? ಆದರೆ ದರವೇಶಿ ಮುಖ ಹೊತ್ತಿರುವ ಇತರ ನಾಯಕರಾರೂ ಜತೆಗೆ ನಿಲ್ಲುವ ಲಕ್ಷಣಗಳೇ ಕಾಣಿಸುತ್ತಿಲ್ಲ. ` ದೊರೆ ಏನು ಮಾಡುತ್ತಿದ್ದಾನೆ..? ‘ ಎಂದು ಜಾಲತಾಣದಲ್ಲಿ ಫಾಲ್ತು ಚರ್ಚೆ ಮಾಡುತ್ತಿರುವ ಎಬುಜೀಗಳ ಬದಲಿಗೆ ಕೇಂದ್ರ ಭಧ್ರತಾ ವೈಫಲ್ಯ ಎನ್ನುವ ಕಟಕಿಯಾಡುತ್ತಿದ್ದೀರಲ್ಲ.. ನೀವೆಲ್ಲ ಹೊಟ್ಟೆಗೆ ಏನು ತಿನ್ನುತ್ತೀರಿ ಒಮ್ಮೆ ಬಗ್ಗಿ ನೋಡಿಕೊಳ್ಳಿ.

 

Facebook ಕಾಮೆಂಟ್ಸ್

ಲೇಖಕರ ಕುರಿತು

Santoshkumar Mehandale

ಅಂಕಣಕಾರರಾಗಿರುವ ಸಂತೋಷ್ ಕುಮಾರ್ ಮೆಹಂದಲೆ, ಮೂಲತಃ ಉತ್ತರಕನ್ನಡ ಜಿಲ್ಲೆಯವರಾಗಿದ್ದು, ಪ್ರಸ್ತುತ ಕೈಗಾದಲ್ಲಿ ಉದ್ಯೋಗಿಯಾಗಿದ್ದಾರೆ. ಇದುವರೆಗೆ ೮ ಕಾದಂಬರಿಗಳು, ೩ ಕಥಾ ಸಂಕಲನಗಳೂ ಸೆರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!