Featured ಅಂಕಣ

ಇಂತಹಾ ಸರಳತೆಯೇ ನಮ್ಮನ್ನು ಮತ್ತಷ್ಟು ಎತ್ತರಕ್ಕೇರುಸುವುದು..

ಮನಸ್ಸು ಮಾಡಿದರೆ ನಾವು ಜೀವನದಲ್ಲಿ ಎಂತಹದೇ ಸಾಧನೆಯನ್ನಾದರೂ ಮಾಡಿ ಬಿಡಬಹುದು. ಅದರ ಮೂಲಕವೇ ಕೋಟ್ಯಾಂತರ ಹಣವನ್ನೂ ಸಂಪಾದನೆ ಮಾಡಿಬಿಡಬಹುದು. ಏನನ್ನಾದರೂ ಸಾಧಿಸಬೇಕಾದರೆ ಅವಶ್ಯವಾಗಿ ಬೇಕಾಗಿರುವುದು ಗುರಿ ಮತ್ತು ಕಠಿಣ ಪರಿಶ್ರಮಗಳೆನ್ನುವ ಎರಡು ಸಾಧನಗಳಷ್ಟೇ. ಅವೆರಡರ ಜೊತೆಗಿನ ಕಮಿಟ್’ಮೆಂಟ್ ಸರಾಗವಾಗಿದ್ದಾಗ ಏನನ್ನು ಸಾಧಿಸಬೇಕೆಂದು ಅಂದುಕೊಂಡಿರುತ್ತೇವೋ ಅದನ್ನು ನಿರಾಳವಾಗಿ ಸಾಧಿಸುತ್ತೇವೆ. ಆದರೆ ಅಷ್ಟಕ್ಕೇ ಅದು ಪರಿಪೂರ್ಣವೆನಿಸುವುದಿಲ್ಲ. ಬರೀ ಇಷ್ಟೇ ಆಗಿದ್ದರೆ ಅವುಗಳು ಬಹುಬೇಗನೆ ನಮ್ಮ ನೆನಪಿನಂಗಳದಿಂದ ಮಾಸಿ ಹೋಗುತ್ತದೆ. ಯಾವುದನ್ನು ನಾವು ಮನಸಾರೆ ಇಷ್ಟ ಪಟ್ಟಿರುತ್ತೇವೆಯೋ, ಯಾವುದು ನಮ್ಮ ಮನಸ್ಸಿನಾಳಕ್ಕಿಳಿದು ನಮ್ಮನ್ನು “ಥ್ರಿಲ್”ಗೊಳಿಸುತ್ತದೆಯೋ ಅಂತಹಾ ಸಾಧನೆಗಳು ಮಾತ್ರ ಬಹುಕಾಲ ನಮ್ಮ ಮನಸ್ಸಿನಲ್ಲುಳಿಯುತ್ತದೆ.

ಸಾಧಾರಣವಾಗಿ ಅಂತಹಾ ಸಾಧನೆಯನ್ನು ಮಾಡಿದ ಯಾರಿಗೇ ಆದರೂ ಅಹಂ ಆವರಿಸಿಕೊಳ್ಳುವುದು ಸಾಮಾನ್ಯವಾದ ಸಂಗತಿ. ದೇಶಕ್ಕೆ ದೇಶವೇ ತನ್ನನ್ನು ಕೊಂಡಾಡುತ್ತಿರುವಾಗ, ಹತ್ತಾರು ಮೂಲಗಳಿಂದ ಕೋಟ್ಯಾಂತರ ರೂ ಹಣ, ಬಿ. ಎಂ. ಡ್ಲ್ಯೂ ಕಾರು ಮುಂತಾದ ಕೊಡುಗೆಗಳು ಬರುತ್ತಿರುವಾಗ ಬೀಗುವುದರಲ್ಲಿ ಆಶ್ಚರ್ಯವೇನೂ ಇಲ್ಲ.  ಯಾರೂ ಮಾಡದ ಸಾಧನೆಯನ್ನು ನಾನು ಮಾಡಿದ್ದೇನೆ ಎಂದು ಬೀಗುತ್ತಾ ದುರಹಾಂಕಾರದಿಂದ ವರ್ತಿಸುವ ಹಲವಾರು ಕ್ರೀಡಾಳುಗಳನ್ನು ನಾವು ನೋಡಿದ್ದೇವೆ. ಆದರೆ ಪಿ.ವಿ ಸಿಂಧು, ಗೋಪಿಚಂದ್, ಸಚಿನ್ ತೆಂಡುಲ್ಕರ್, ಯೋಗೇಶ್ವರ್ ದತ್ ಮುಂತಾದವರೆಲ್ಲಾ ಇದಕ್ಕೆ ವಿರುದ್ಧವಾಗಿ ನಿಲ್ಲತ್ತಾರೆ. ಅಮೋಘ ಸಾಧನೆಗಳ ಜೊತೆಗೆ ನಮ್ಮ ಸಂಸ್ಕೃತಿಯನ್ನು ಎತ್ತಿ  ಹಿಡಿದು ನಮಗೆಲ್ಲಾ ಪ್ರೇರಣೆಯಾಗುತ್ತಾರೆ.

ಪಿ.ವಿ.ಸಿಂಧು.. ಮೊನ್ನೆ ತಾನೆ ಮುಕ್ತಾಯಗೊಂಡ ರಿಯೋ ಒಲಂಪಿಕ್ಸ್’ನಲ್ಲಿ ಬೆಳ್ಳಿ ಪದಕವನ್ನು ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಾಕೆ. ಸಿಂಧು ಅದಕ್ಕೂ ಮೊದಲೇ ಹಲವಾರು ಟೂರ್ನಮೆಂಟುಗಳನ್ನು ಗೆದ್ದಿದ್ದರೂ ಸಹ ಇವತ್ತು ಆಕೆ ಜನಪ್ರಿಯಳಾಗಿರುವಷ್ಟು ಆವತ್ತು ಆಗಿರಲಿಲ್ಲ. ಬಹುಶಃ ಮೊನ್ನೆ ಮೊನ್ನೆಯವರೆಗೂ ಆಕೆಯ ಬಗ್ಗೆ ಬಹುತೇಕ ಭಾರತೀಯರಿಗೆ  ಗೊತ್ತಿರಲಿಲ್ಲ. ಆದರೆ ಮೊನ್ನೆ ಆಕೆಯ ಹವಾ ಎಷ್ಟಿತ್ತೆಂದರೆ ಒಂದಿಡೀ ದೇಶ ಆಕೆಯ ಆಟವನ್ನು ಕೂತಲ್ಲಿಂದ ಕದಲದೇ ನೋಡಿತು. ಸಿಂಧು ಮತ್ತು ಮೆರಿನ್ ನಡುವಿನ ಆ ಪಂದ್ಯವನ್ನು ನೋಡಿದಷ್ಟು ಜನ, ಭಾರತ-ವೆಸ್ಟಿಂಡೀಸ್ ನಡುವೆ ನಡೆದ ಟಿ-೨೦ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನೂ ಸಹ ನೋಡಿರಲಿಲ್ಲವಂತೆ. ಭಾರತದಂತಹ ಕ್ರಿಕೆಟ್ ಆರಾಧಕರ ದೇಶದಲ್ಲಿ  ಕ್ರಿಕೆಟನ್ನು ಹೊರತುಪಡಿಸಿದ ಆಟವನ್ನು ಇಷ್ಟೊಂದು ಜನ ನೋಡುವಂತೆ ಮಾಡುವುದು, ಇಡೀ ದೇಶದ ಜನರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುವುದೇ ಒಂದು ಸಾಧನೆ. ಆ ಸಾಧನೆಯ ಜೊತೆಗೆ ಒಲಂಪಿಕ್’ನಲ್ಲಿ ಪದಕಗಳಿಲ್ಲದೆ ಸೊರಗಿದ್ದ ದೇಶಕ್ಕೆ ಬೆಳ್ಳಿ ಪದಕ ತಂದು ಕೊಡುವುದಿದೆಯಲ್ಲ, ಅದು ಮಹಾನ್ ಸಾಧನೆ.

ಶ್ರೀ ರವಿಶಂಕರ್ ಗುರೂಜಿಯವರ ಸಾನ್ನಿಧ್ಯದಲ್ಲಿ ಸಿಂಧು ಮತ್ತು ಗೋಪಿಚಂದ್

ಶ್ರೀ ರವಿಶಂಕರ್ ಗುರೂಜಿಯವರ ಸಾನ್ನಿಧ್ಯದಲ್ಲಿ ಸಿಂಧು ಮತ್ತು ಗೋಪಿಚಂದ್

ನನಗೆ ಈ ಲೇಖನವನ್ನು ಬರೆಯೋಣ ಅಂತ ಅನ್ನಿಸಿದ್ದು ಮೇಲೆ ಹಾಕಿರುವ ಛಾಯಾಚಿತ್ರವನ್ನು(Cover Pic) ಫೇಸ್ಬುಕ್ಕಿನಲ್ಲಿ ನೋಡಿದ ಬಳಿಕ. ಪಿ.ವಿ ಸಿಂಧು ಮತ್ತಾಕೆಯ ಗುರು ಪುಲ್ಲೇಲಾ ಗೋಪಿಚಂದ್ ಮೊನ್ನೆ ಬೆಂಗಳೂರಿಗೆ ಬಂದಿದ್ದರು. ಸಾಧಾರಣವಾಗಿ ಅಂತಾರಾಷ್ಟ್ರೀಯ ಮಟ್ಟದ ಆಟಗಾರರು ಅವರಿಗೆ ಬೆಂಗಳೂರಿನಲ್ಲಿ ಪಂದ್ಯಗಳಿದ್ದಾಗಲೋ ಇಲ್ಲಾ ಯಾವುದಾದರೂ ಜಾಹೀರಾತು ಶೂಟ್ ಇದ್ದಾಗಲೋ ಬೆಂಗಳೂರಿಗೆ ಬರುತ್ತಾರೆ. ಆದರೆ ಸಿಂಧುಗೆ ಮೊನ್ನೆ ಯಾವ ಪಂದ್ಯವೂ ಇರಲಿಲ್ಲ, ಜಾಹೀರಾತು ಶೂಟೂ ಇರಲಿಲ್ಲ. ಅವರಿಬ್ಬರು ಬೆಂಗಳೂರಿಗೆ ಬಂದ ಕಾರಣವೇ ಬೇರೆ ಇತ್ತು. ಗೋಪಿಚಂದ್ ಬಹಳಾ ವರ್ಷಗಳಿಂದಲೇ ಶ್ರಿ ರಾಮಚಂದ್ರಾಪುರ ಮಠ ಮತ್ತು  ಆರ್ಟ್ ಆಫ್ ಲಿವಿಂಗ್’ನ ಭಕ್ತರು. ಅವರು  ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರನ್ನು ಮತ್ತು ಶ್ರೀ ರವಿಶಂಕರ್ ಗುರೂಜಿಯವರನ್ನು ಭೇಟಿಯಾಗುವುದಕ್ಕಾಗಿ ಬೆಂಗಳೂರಿಗೆ ಬರುವವರಿದ್ದರು. ಬರುತ್ತಾ ತನ್ನ ಶಿಷ್ಯೆ ಸಿಂಧುವನ್ನೂ ಜೊತೆಗೆಯೇ ಕರೆದುಕೊಂಡು ಬಂದಿದ್ದರು.

ರಾಘವೇಶ್ವರ ಶ್ರೀಗಳ ಆಶೀರ್ವಾದ ಪಡೆಯುತ್ತಿರುವ ಸಿಂಧು ಮತ್ತು ಗೋಪಿಚಂದ್

ರಾಘವೇಶ್ವರ ಶ್ರೀಗಳ ಆಶೀರ್ವಾದ ಪಡೆಯುತ್ತಿರುವ ಸಿಂಧು ಮತ್ತು ಗೋಪಿಚಂದ್

ಅವರಿಬ್ಬರ ಸ್ವಾಮೀಜಿ ಮತ್ತು ಗುರೂಜಿ ಭೇಟಿಯ ಛಾಯಚಿತ್ರ ಮತ್ತು ವಿಡಿಯೋ ಕ್ಲಿಪ್’ಗಳನ್ನು ಗಮನಿಸಿದೆ. ಇಬ್ಬರು ಗುರುಗಳ ಸಾನ್ನಿದ್ಯದಲ್ಲಿ ನತಮಸ್ತಕರಾಗಿ ಕುಳಿತ ಅವರಿಬ್ಬರನ್ನೂ ನೋಡಿ ನಾನೂ ನತಮಸ್ತಕನಾದೆ. ಗುರುಗಳಿಗೆ ಶಿರಬಾಗಿ ನಮಿಸುವಾಗ, ಮಂತ್ರಾಕ್ಷತೆಯನ್ನು ಸ್ವೀಕರಿಸುವಾಗ, ಸನ್ಮಾನಿಸಲ್ಪಡುವಾಗ ಅದೇನು ನಯ, ಅದೇನು ವಿನಯ.. ಅಬ್ಬಾ.. ಕೋಟ್ಯಾಂತರ ಜನರ ಮನಗೆದ್ದು ಗುರು-ಶಿಷ್ಯೆ ಇವರೇನಾ ಅಂತ ಮೈ ಚಿವುಟಿಕೊಂಡು ನೋಡಿದೆ. ಅಹಂಕಾರ, ಗತ್ತಿನ ಲವಲೇಶವೂ ಅವರಿಬ್ಬರಲ್ಲಿರಲಿಲ್ಲ. ಸರಳತೆ, ಭಕ್ತಿ, ವಿನಯತೆ ತುಂಬಿ ತುಳುಕುತ್ತಿತ್ತು. ಆಧ್ಯಾತ್ಮ ಸಾಗರದಲ್ಲಿ ಇಬ್ಬರೂ ಸಾಮಾನ್ಯರಲ್ಲಿ ಸಾಮಾನ್ಯರಂತೆ ಮುಳುಗೆದ್ದರು. ಸಿಂಧು ಮೊನ್ನೆಯ ಫೈನಲ್ ಸೋತ ತಕ್ಷಣ ನೆಲಕ್ಕೊರಗಿದ್ದ ಎದುರಾಳಿ ಆತಗಾರ್ತಿಯನ್ನು ಹಿಡಿದೆತ್ತಿ ಅಪ್ಪುಗೆ ನೀಡುವ ಮೂಲಕ ಕ್ರೀಡಾ ಸ್ಪೂರ್ತಿಯನ್ನು ಮೆರೆದಿದ್ದಳು. ಆಟಕ್ಕೂ ಮುನ್ನವೇ ಇಷ್ಟ ದೇವರಿಗೆ  ಹೊತ್ತುಕೊಂಡಿದ್ದ ಹರಕೆಯನ್ನು ಪದಕ ಗೆದ್ದ ಬಳಿಕ ಚಾಚೂ ತಪ್ಪದೆ ಒಪ್ಪಿಸಿದ್ದಳು. ನಮ್ಮ ಸಂಸ್ಕೃತಿ, ಆಧ್ಯಾತ್ಮದ ಮೇಲೆ ಅವರಿಗಿದ್ದ ಅಭಿಮಾನವನ್ನು ನೋಡಿ  ಅವರಿಬ್ಬರ ಮೇಲೆ ಇದ್ದ ಅಭಿಮಾನ, ಗೌರವ ದುಪ್ಪಟ್ಟಾಯಿತು.

ನಯ-ವಿನಯ, ಕ್ರೀಡಾ ಸ್ಪೂರ್ತಿಯ ಮಾತು ಬಂದಾಗ ಮೊದಲು ನೆನಪಿಗೆ ಬರುವ ಹೆಸರೇ ಸಚಿನ್ ತೆಂಡುಲ್ಕರ್. ಆತ ಯಾರು, ಆತನ ಸಾಧನೆಗಳೇನು ಎನ್ನುವುದು ಇನ್ನೂ ಹುಟ್ಟದ ಮಗುವಿಗೂ ತಿಳಿದಿರಬಹುದು ಎನ್ನುವಷ್ಟು ಜನಪ್ರಿಯ ಕ್ರೀಡಾ ವ್ಯಕ್ತಿ ಆತ. ಆತನ ಆಟ  ಆತನನ್ನು ಎಷ್ಟು ಎತ್ತರಕ್ಕೇರಿಸಿತೋ ಅದಕ್ಕಿಂತ ದುಪ್ಪಟ್ಟು ಆತನ ವಿನಯವಂತಿಕೆ ಆತನನ್ನು ಮೇಲಕ್ಕೇರಿಸಿದೆ. ಒಂದು ಸಣ್ಣ ಉದಾಹರಣೆಯನ್ನು ನೋಡಿ. ಅದು 2011ರ ವಿಶ್ವಕಪ್ಪಿನಲ್ಲಿ ಭಾರತ ಮತ್ತು ವೆಸ್ಟಿಂಡೀಸ್ ನಡುವೆ ನಡೆಯುತ್ತಿದ್ದ ಪಂದ್ಯ. ರವಿ ರಾಮ್’ಪಾಲ್ ಎಸೆದ ಚೆಂಡು “ಕಾಟ್ ಬಿಹೈಂಡ್” ಆಗಿ ವಿಕೇಟ್ ಕೀಪರ್ ಕೈ ಸೇರಿತ್ತು. ಆದರೆ ಬೌಲರ್ ಮತ್ತು ಕೀಪರ್’ನ ಮನವಿಯನ್ನು ತಿರಸ್ಕರಿಸಿದ ಅಂಪೈರ್ ‘ನಾಟೌಟ್’ ತೀರ್ಪಿತ್ತಿದ್ದರು.  ಆದರೆ ಸಚಿನ್’ಗೆ ಅದು ಔಟ್ ಎಂದು ಗೊತ್ತಿತ್ತು. ಆತ ಅಂಪೈರ್ ತೀರ್ಪಿಗೂ ಕಾಯದೆ ಪೆವಿಲಿಯನ್’ನತ್ತ ನಡೆದ. ತಂಡಕ್ಕೆ ಅನಿವಾರ್ಯ ಸ್ಥಿತಿಯಲ್ಲಿದ್ದಾಗಲೂ ಕ್ರೀಡಾಸ್ಪೂರ್ತಿಯನ್ನು ಮೆರೆದಿದ್ದ  ಸಚಿನ್.

ಅದೊಂದೇ ಅಲ್ಲ. ಸಚಿನ್ನನ ಕ್ರೀಡಾಸ್ಪೂರ್ತಿ, ಸರಳತೆಗೆ ಇಂತಹ ಹತ್ತು ಹಲವು ಉದಾಹರಣೆಗಳು ಸಿಗುತ್ತವೆ. ಈಗ ಆತ ಎಲ್ಲಾ ಮಾದರಿಯ ಕ್ರಿಕೆಟಿನಿಂದ ನಿವೃತ್ತನಾಗಿದ್ದಾನೆ. ಆದರೆ ಆತ ಸುಮ್ಮನೆ ಕುಳಿತಿಲ್ಲ.ಭಾರತದಲ್ಲಿ ಫುಟ್ಬಾಲ್ ಅಭಿವೃದ್ಧಿಗಾಗಿ ವರ್ಷವೂ ನಡೆಯುತ್ತಿರುವ ISL ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಕೇರಳ ಬ್ಲಾಸ್ಟರ್ಸ್ ತಂಡದ ಪಾಲುದಾರನಾಗಿ ಫುಟ್ಬಾಲ್ ಆಟಗಾರರನ್ನು ಹುರಿದುಂಬಿಸುತ್ತಿದ್ದಾನೆ. ಅದರ Promo, ಅದು ಇದು ಎನ್ನುತ್ತ ಇವತ್ತಿಗೂ ದೇಶಾದ್ಯಂತ ಸಚಿನ್ ಸುತ್ತುತ್ತಿದ್ದಾನೆ. ಪಿ.ವಿ ಸಿಂಧುಗೆ ಹಿಂದೊಮ್ಮೆ ಸ್ವಿಫ್ಟ್ ಕಾರ್ ನೀಡಿ ಆಕೆಯನ್ನು ಹುರಿದುಂಬಿಸಿದ್ದ ಸಚಿನ್  ಮೊನ್ನೆ ಸಿಂಧು ಒಲಂಪಿಕ್’ನಲ್ಲಿ ಪದಕ ಗೆದ್ದಾಗ ಬಿ. ಎಂ. ಡಬ್ಲ್ಯೂ ಕಾರ್ ನೀಡಿ ಎಲ್ಲರನ್ನು ಹುಬ್ಬೇರಿಸಿದ್ದ.  ಈ ಭಾರಿಯ ಒಲಂಪಿಕ್’ನ ರಾಯಭಾರಿಯೂ ಆಗಿದ್ದ ಸಚಿನ್. ಹೀಗೆ ಸಚಿನ್ ನಿವೃತ್ತಿಯ ಬಳಿಕವೂ ಕ್ರಿಕೆಟಿನ ಜೊತೆಗೆ ಇತರ ಆಟವನ್ನೂ ಬೆಂಬಲಿಸುತ್ತಾ, ಆಟಗಾರರಿಗೆ ಸ್ಪೂರ್ತಿಯನ್ನು ನೀಡುತ್ತಾ, ಇತರ ಹಿರಿಯ ಕ್ರೀಡಾ ವ್ಯಕ್ತಿಗಳಿಗೂ ಮಾದರಿಯಾಗುತ್ತಿದ್ದಾನೆ.

ಇಷ್ಟೆಲ್ಲಾ ಇದ್ದರೂ ಸಚಿನ್ ನಮ್ಮ ಸಂಪ್ರದಾಯ, ಸಂಸ್ಕಾರಗಳೊಂದನ್ನೂ ಬಿಟ್ಟಿಲ್ಲ. ತನಗೆ ನಾಗದೋಷವಿದೆಯೆಂದು, ಅದಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಮಾಡಿಸಬೇಕೆಂದು ಅವರ ಜ್ಯೋತಿಷಿ ಸಚಿನ್’ಗೆ ಸಲಹೆ ಕೊಟ್ಟಾಗ ಸಚಿನ್ ಅದನ್ನು ಚಾಚೂ ತಪ್ಪದೆ ಪಾಲಿಸಿದ. ಆಪ್ಪಟ ಸಂಪ್ರದಾಯವಾದಿಯಂತೆ ಮಡಿಯುಟ್ಟು ಈ ಸೇವೆಯನ್ನು ಸುಬ್ರಹ್ಮಣ್ಯನಿಗೆ ಅರ್ಪಿಸಿದ. ಸಚಿನ್ ಹಿಂದೂ ಹಬ್ಬಗಳನ್ನು ತಪ್ಪದೇ ಆಸಕ್ತಿಯಿಂದ ಮನೆಯಲ್ಲಿ ಮಾಡುತ್ತಾರೆ. ಒಟ್ಟಿನಲ್ಲಿ ಸಚಿನ್ ತನ್ನ ನಡವಳಿಕೆಯಿಂದಲೇ ಆಸ್ತಿಕರ,ಕ್ರೀಡಾಸಕ್ತರ ಮನ ಗೆದ್ದಿದ್ದಾನೆ.

ಸಚಿನ್’ಗೆ ಯಾಕೆ ಬೇಕಿತ್ತು ಜ್ಯೋತಿಷಿಯ ಮಾತನ್ನು ಕೇಳುವ ಕೆಲಸ? ಇಂತಹಾ ಅತ್ಯಾಧುನಿಕ ಯುಗದಲ್ಲಿಯೂ ಇದನ್ನೆಲ್ಲಾ ಯಾರಾದರೂ ನಂಬುತ್ತಾರಾ? ಇದೆಲ್ಲಾ ಮೂಢನಂಬಿಕೆಯಲ್ಲವಾ? ಅಂತ ಸಚಿನ್ ಸುಮ್ಮನಿರಬಹುದಿತ್ತಲ್ಲಾ? ಯಾಕೆಂದರೆ ಸಚಿನ್’ಗೆ ನಮ್ಮ ಆಧ್ಯಾತ್ಮಿಕತೆಯ ಮೇಲೆ ಅಪಾರವಾದ ನಂಬಿಕೆಯಿತ್ತು. ಕ್ರಿಕೆಟ್ ಬಿಟ್ಟ ಮೇಲೆ ಮನೆಯವರೊಂದಿಗೆ ಆರಾಮವಾಗಿ ಕಾಲ ಕಳೆಯಬಹುದಿತ್ತು. ಯಾಕೆ ಆತ ಫುಟ್ಬಾಲ್, ಅದು ಇದು ಎಂದು ಹೊರಟನೆಂದರೆ ಆತನಿಗೆ ಇತರ ಕ್ರೀಡೆಗಳ ಅಭಿವೃದ್ಧಿಯ ಮೇಲೆ ಅಪಾರ ಕಾಳಜಿ ಇತ್ತು. ಇಂತಹಾ ಸರಳತೆ, ಸದಾಚಾರಗಳೇ ಸಚಿನ್’ನನ್ನು, ಆತ ಏರಿದ ರನ್ ಪರ್ವತಕ್ಕಿಂತಲೂ ಎತ್ತರದ ಸ್ಥಾನದಲ್ಲಿ ನಿಲ್ಲಿಸಿದ್ದು.

ರವಿಶಾಸ್ತ್ರಿ.. ಕ್ರಿಕೆಟ್ ಕಾಮೆಂಟರಿಯಲ್ಲಿ ಈತನದ್ದು ಎತ್ತಿದ ಕೈ. ಭಾರತ ಮೊದಲ ವಿಶ್ವಕಪ್ ಜಯಿಸಿದ ತಂಡದ ಸದಸ್ಯನೂ ಹೌದು. ಕಾಮೆಂಟರಿಗಾಗಿ  BCCIನಿಂದ ಇವನಷ್ಟು ಸಂಭಾವನೆ ಪಡೆಯುವವನು ಮತ್ತೊಬ್ಬನಿಲ್ಲ. ಆದರೆ ಶಾಸ್ತ್ರಿಗೆ ಆ ಯಾವ ಗತ್ತುಗಾರಿಕೆಯೂ ಇಲ್ಲದೆ ಪ್ರತೀ ವರ್ಷ ಮೂಲ್ಕಿ ಸಮೀಪದ ನಾಗ ಬನವೊಂದಕ್ಕೆ ಬಂದು ಸೇವೆ  ಸಲ್ಲಿಸಿತ್ತಾರೆ ಮತ್ತು ತನ್ನ ಇಡೀಯ ಏಳಿಗೆಗೆ ಇಲ್ಲಿನ ದೇವರೇ ಕಾರಣವೆಂದು ಸ್ಮರಿಸುತ್ತಾರೆ.

ಮತ್ತೊಬ್ಬ ಯೋಗೇಶ್ವರ್ ದತ್.. ಪಾಪ.. ಮೊನ್ನೆಯ ಒಲಂಪಿಕ್’ನ ಪಂದ್ಯದಲ್ಲಿ ಮೊದಲ ಸುತ್ತಿನಲ್ಲೇ ದತ್ ಹೊರ್ ಬಿದ್ದಾಗ ತುಂಬಾ ಜನ ಅಪಹಾಸ್ಯ ಮಾಡಿದರು. ಆ ಸೋಲಿನ ಗಾಯ ಮಾಸುವ ಮುನ್ನವೇ ದತ್’ಗೆ ಸಿಹಿ ಸುದ್ದಿಯೊಂದು ಬಂತು. 2012ರ ಒಲಂಪಿಕ್’ನಲ್ಲಿ ಯೋಗೇಶ್ವರ್ ದತ್’ನ್ನು ಸೋಲಿಸಿ ಬೆಳ್ಳಿ ಗೆದ್ದಿದ್ದ ಕ್ರೀಡಾಳು ಡೋಪಿಂಗ್ ಟೆಸ್ಟ್’ನಲ್ಲಿ ಸಿಕ್ಕಿ ಬಿದ್ದಿದ್ದರಿಂದ ಬೆಳ್ಳಿ ಪದಕ ಯೋಗೇಶ್ವರ್ ದತ್’ಗೆ ಸಿಗುತ್ತದೆ ಅಂತ ಸುದ್ದಿ ಬಂತು. ಆದರೆ ಆ ಡೋಪಿಂಗ್ ಟೆಸ್ಟ್’ನಲ್ಲಿ ಸಿಕ್ಕಿ ಬಿದ್ದ ಕ್ರೀಡಾಳು ಕಳೆದ ವರ್ಷವೇ ಅಪಘಾತಕ್ಕೀಡಾಗಿ ಮೃತಪಟ್ಟಿದ್ದ. “ಆತನ ನೆನಪಿಗಾಗಿ ಕುಟುಂಬದ ಬಳಿಯಿರುವುದು ಅದೊಂದೇ ಬೆಳ್ಳಿ ಪದಕ, ಪದಕಕ್ಕಿಂತಲೂ ಮಾನವೀಯತೆ ಮುಖ್ಯ ನನಗೆ” ಎನ್ನುತ್ತ ಬೆಳ್ಳಿ ಪದಕವನ್ನು ನಯವಾಗಿ ತಿರಸ್ಕರಿಸಿದ ಯೋಗೇಶ್ವರ್ ದತ್. ದತ್ ಪದಕವನ್ನು ಸ್ವೀಕರಿಸಿದ್ದರೆ ಅವನ ಹಿರಿಮೆಗೆ ಮತ್ತೊಂದು ಗರಿಮೆ ಮೂಡುತ್ತಿತ್ತು. ಮೊನ್ನೆಯ ಪಂದ್ಯವನ್ನಷ್ಟೇ ದತ್ ಸೋತ, ವಿಶ್ವದಾದ್ಯಂತದ ಜನರ ಮನಸನ್ನು ಗೆದ್ದ.

ಇವರಷ್ಟೇ ಅಲ್ಲಾ, ಇಂತಹಾ ಹಲವಾರು ಅಟಗಾರರು ನಮ್ಮ ಕ್ರೀಡಾ ವಲಯದಲ್ಲಿದ್ದಾರೆ. ಈ ಎಲ್ಲಾ ಆಟಗಾರರೂ ನಮಗೆ ನೀಡುತ್ತಿರುವ ಪ್ರೇರಣೆಯೊಂದೇ. ಮುಂದೊಂದು ದಿನ ನಾವೆಲ್ಲರೂ ಸಹ ನಮ್ಮದೇ ಆಸಕ್ತಿಯ ಫೀಲ್ಡಿನಲ್ಲಿ ಏನಾದರೂ ಸಾಧನೆಯನ್ನು ಮಾಡಬಹುದು. ಆದರೆ ಎಲ್ಲೆಲ್ಲೂ ಕ್ರೀಡಾ ಸ್ಪೂರ್ತಿಯನ್ನು ಮರೆಯಬಾರದು. ಗೆದ್ದಿದ್ದೇವೆಂಬ ಅಹಂಕಾರವನ್ನು ಮೈಗೂಡಿಸಿಕೊಳ್ಳದೆ, ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರಗಳಾವುದನ್ನೂ ಮರೆಯದೆ ಮುಂದಡಿಯಿಡಬೇಕು. ಇಂತಹ ಸರಳತೆಯೇ ನಮ್ಮನ್ನು ಜೀವನದಲ್ಲಿ ಮತ್ತಷ್ಟು ಎತ್ತರಕ್ಕೇರಿಸುವುದು..

ಚಿತ್ರಗಳು: https://www.facebook.com/ShankaraPeetham/?fref=ts

           https://www.facebook.com/TheArtOfLivingGlobal/?fref=ts

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!