Featured ಪ್ರಚಲಿತ

ಆಪ್, ಸೆಕ್ಸ್ ಆ್ಯಂಡ್ ಧೋಕಾ

ಇನ್ನೂ ನೆನಪಿದೆ, ನನ್ನ ಕೆಲವು ಗೆಳೆಯರು ಒಳ್ಳೊಳ್ಳೆ ಕೆಲಸ ಬಿಟ್ಟು ಆಂದೋಲನ ಸೇರಿದ್ದರು. ಅವರ ತ್ಯಾಗ, ಪರಿಶ್ರಮದ ಫಲ ಆ ಯಶಸ್ಸು‌. ಆದರೆ ಅದರ ಲಾಭ ಪಡೆದುಕೊಂಡವರು ಕೆಲವು ನಾಟಕೀಯ ಖಾಸ್ ಆದಮಿಗಳು. ಮೊದಲು ನರಿಗಳ ಬುದ್ಧಿ ಗೊತ್ತಾಗಲಿಲ್ಲ, ಹೀಗಾಗಿ ಆಪ್ ಪಕ್ಷ ಹುಟ್ಟುಕೊಂಡಾಗ,ಅವರು ದೆಹಲಿಯಲ್ಲಿ ಆಡಳಿತಕ್ಕೆ ಬಂದಾಗ ಅವರ ಮೇಲೆ ಜನರಿಗೆ ಮೋದಿಜಿಯವರಿಗಿಂತ ಹೆಚ್ಚು ನಂಬಿಕೆ ಇತ್ತು. ಭೃಷ್ಟಾಚಾರದಿಂದ ತತ್ತರಿಸಿದ ಜನರಿಗೆ ಒಂದು ಪರ್ಯಾಯ ರಾಜಕೀಯ ಪಕ್ಷ ಬೇಕಿತ್ತು. ಆಮ್ ಆದ್ಮಿ ಪಾರ್ಟಿ ಆಗಿದ್ದು ಜನರ ನಂಬಿಕೆಗಳ ಸಾಗರದ ಮೇಲೆ. ಇವತ್ತು ಆಮ್ ಆದಮಿ ಪಾರ್ಟಿ ಒಂದು ಡ್ರಾಮಾ ಕಂಪನಿ ಆಗಿದೆ. ಜನರ ಭರವಸೆ ಬಳಿದು ಹೋಗಿದೆ‌. ಹಗ್ಗ ಕಂಡರೂ ಹಾವು ಎಂದು ಕೂಗುತ್ತ, ಕೆಲಸ ಮಾಡದೆ ಆಮ್ ಆದಮೀ ಪಾರ್ಟಿ(ಆಪ್) ಎನ್ನುವುದು ಬರೀ ಎಲ್‌ಜಿ ಹಾಗೂ ಮೋದಿಜಿ ವಿರುದ್ಧ ಗೂಬೆ ಕೂರಿಸುತ್ತ ಕೇವಲ ಮೀಡಿಯಾ ಆಕರ್ಷಣೆಯಾಗಿದೆ. ಆಪ್ ರಾಜಕೀಯ ಪಕ್ಷವೋ, ಎಕ್ತಾ ಕಪೂರ್ ಸಿರಿಯಲ್ಲೋ ಗೊತ್ತಾಗುತ್ತಿಲ್ಲ. ಮೊದಲು ಆಡಳಿತಕ್ಕೆ ಬಂದು ಕೇವಲ ನಲವತ್ತು ದಿನಗಳಲ್ಲಿ ರಾಜಿನಾಮೆ ಕೊಟ್ಟು ದೆಹಲಿಯ ಜನರಿಗೆ ನಿರಾಸೆ ಮೂಡಿಸಿದರು. ನಂತರದಲ್ಲಿ ಮಾಡಿದ್ದೇನು? ಮೋದಿಜಿಯನ್ನು ದೂರಿದ್ದು, ಅವರನ್ನು ದೂರಿದ್ದು…ಧರಣಾ ಮಾಡಿದ್ದು…ಜನರ ಜೀವನ ಹದೆಗೆಡಿಸಿದ್ದು…ಧರಣಾ ಹೆಸರಿನಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು… ಒಂದಲ್ಲ, ಎರಡಲ್ಲ ಹಲವಾರು ಬಾರಿ ಜನರಿಂದ ಮೂತಿಗೆ ಮಸಿ ಬಳಿಸಿಕೊಂಡರು ಇನ್ನೂ ಅವರಿಗೆ ಬುದ್ಧಿ ಬಂದಿಲ್ಲ. ಬಿಜೆಪಿಯ ತಪ್ಪು ಲೆಕ್ಕಾಚಾರ, ರಾಹುಲ್‌ ಗಾಂಧಿಯ ದಡ್ಡತನ ಎರಡೂ ಸೇರಿ ಎಪ್ಪತ್ತು ಸೀಟಿನಲ್ಲಿ ಅರವತ್ತಾ ಏಳು ಸೀಟು ಗೆದ್ದು ಮತ್ತೆ ಸರ್ಕಾರಕ್ಕೆ ಆಪ್ ಪಕ್ಷವೇ ಬಂತು. ಆದರೆ  ಓವರ್ ಮೆಜಾರಿಟಿ ಇಸ್ ನಾಟ್ ಗುಡ್ ಫಾರ್ ಡೆಮಾಕ್ರಸಿ ಅನ್ನುತ್ತಾರಲ್ಲ ಅದು ನೂರಕ್ಕೆ ನೂರು ನಿಜವಾಯಿತು ದೆಹಲಿಯ ವಿಷಯದಲ್ಲಿ. ಫ್ರೀ ವೈ ಫೈ, ಫ್ರೀ ವಿದ್ಯುತ್, ಫ್ರೀ ನೀರು ಎಲ್ಲಾ ಬಿಡಿ ನಿರ್ಮಲವಾದ ಫ್ರೀ ಗಾಳಿ ಕೂಡ ಸಿಗುತ್ತಿಲ್ಲ. ನಿಮಗೆ ನೆನಪಿರಬಹುದು ದೆಹಲಿಯನ್ನು ಜಗತ್ತಿನಲ್ಲೇ ಅತೀ ಕಲುಷಿತ ನಗರ ಎಂದು ಘೋಷಿಸಿತು ಒಂದು ಅಂತರಾಷ್ಟ್ರೀಯ ಸಂಶೋಧನಾ ಸಂಸ್ಥೆ! ಅಲ್ಲಿಂದ ಇಲ್ಲಿಯ ತನಕ ಕೆಜ್ರಿವಾಲ್ ಮಾಡಿದ್ದೇನು? ಬರೀ ಯು-ಟರ್ನ್ ಹೊಡೆದಿದ್ದು! ಲೆಫ್ಟಿನೆಂಟ್ ಗವರ್ನರ್ ಇಫ್ತಾರ್ ಕೂಟದಲ್ಲಿ ಕೂತು ಬಿರಯಾನಿ ತಿಂದು ಆಮೇಲೆ ಅದೇ ಲೆಫ್ಟಿನೆಂಟ್ ಗವರ್ನರ್’ಗೆ ಹಿಂದಿನಿಂದ ಬೈಯುವುದು. ಬಿರಿಯಾನಿ ತಿಂದ ಮನೆಗೆ ಎರಡು ಬಗೆಯಬಾರದು ಅನ್ನುವುದೂ ಗೊತ್ತಿಲ್ಲ. ಸ್ವತಃ ತಮ್ಮ ಪಾರ್ಟಿಯ ಫೌಂಡರ್ ಮೆಂಬರ್ಸ ಪ್ರಶಾಂತ್ ಭೂಷಣ್, ಯೊಗೇಂದ್ರ ಅವರನ್ನು ತುಂಬಿದ ಸಭೆಯಿಂದ ಒದ್ದು ಹೊರಹಾಕಿದ್ದು ಆಪ್ ಪಕ್ಷದ ಇಂದಿನವರೆಗಿನ ಅತೀ ತುಚ್ಛ ಸಾಧನೆ! ಇದು ಆಮ್ ಆದಮಿ ಪಾರ್ಟಿಯ ಇಲ್ಲಿಯವರೆಗಿನ ಸಾಧನೆಯ ಒಂದು ಸಣ್ಣ ಪಕ್ಷಿ ನೋಟ.

ಇನ್ನು ಪಕ್ಷದ ಮಂತ್ರಿಗಳ, ಶಾಸಕರ ಕಥೆ ಕೇಳಿದರೆ ಅಸಹ್ಯವಾಗುತ್ತದೆ. ಬಿಹಾರದಲ್ಲಿಯೂ ಇಷ್ಟು ಹೊಲಸು ಶಾಸಕರು  ಇರಲಿಕ್ಕಿಲ್ಲ. ಕಾಮ,‌ಕ್ರೋಧ,ಲೋಭ, ಮದ, ಮೋಹ, ಮತ್ಸರ ಇದಷ್ಟೇ ಅಲ್ಲ‌ ಇನ್ನೂವರೆಗೂ ಕೇಳರಿಯದ ಮತ್ತೂ ಹತ್ತು ಹದಿನೈದು ಷಡ್ವೈರಿಗಳಿರಬಹುದು ಆ ಶಾಸಕಾಂಗದ ಶಾಸಕರಲ್ಲಿ. ಇಲ್ಲಿಯವರೆಗೆ ಹದಿನಾಲ್ಕು ಮಂದಿ ಶಾಸಕರು ಒಂದಲ್ಲಾ ಒಂದು ಕಾರಣದಿಂದ ದೇಶದಲ್ಲಿ ಸುದ್ದಿಯಾಗಿದ್ದಾರೆ. ಸುದ್ದಿ ಮಾಡುವುದೇ ಅವರ ಕೆಲಸವೇನೋ ಅನಿಸುತ್ತದೆ. ಇದು ಒಂದು ವಿಶ್ವದಾಖಲೆಯೇ ಇರಬೇಕು. ಎಲ್ಲರ ಸರ್ಟಿಫಿಕೇಟ್ ಕೇಳುವ ಕ್ರೇಜಿವಾಲ್ ತಮ್ಮ ಮಂತ್ರಿಗಳ ಗುಣದ ಸರ್ಟಿಫಿಕೇಟ್ ನೋಡುವುದನ್ನೇ ಮರೆತ ಹಾಗೆ ಕಾಣುತ್ತಿದೆ. ಕಾನೂನನ್ನು ನೋಡಿಕೊಳ್ಳಬೇಕಾದ ಕಾನೂನಿನ ಮಂತ್ರಿಯ ಡಿಗ್ರಿ ಫೋರ್ಜರಿಯಂತೆ!!! ವ್ಹಾ …ಭಾರತದ ರಾಜಕೀಯದಲ್ಲಿ ಇದೊಂದು ಹೊಸ  ಕ್ರಾಂತಿಯೇ ಅನ್ನಬೇಕು!!! ಇದು ಜಿತೇಂದ್ರ ಸಿಂಗ್‌ ತೋಮಾರ್ ಎಂಬ ಮಾಜಿ ಕಾನೂನು ಮಂತ್ರಿಯ ಕಥೆ. ಇನ್ನು  ಮಾಜಿ ಕಾನೂನು ಮಂತ್ರಿ ಸೋಮನಾಥ ಭಾರತಿ “ಹೇಳುವುದು ವೇದಾಂತ ತಿನ್ನುವುದು ಮಷಿಕೆಂಡ” ಅಂತಾರಲ್ಲ ಅಂತವನು. ಊರಿಗೇ ಮಂತ್ರಿ, ಮನೆಯಲ್ಲಿ ಕಂತ್ರಿ. ಹೆಂಡತಿಯ ವಿರುದ್ಧ ನಾಯಿಯನ್ನು ಛೂ ಬಿಟ್ಟು ಅವಳಿಗೆ ಜೀವ ಬೆದರಿಕೆ ಕೊಡುತ್ತಿದ್ದ ಎಂದು ಬೇರಾರೂ ಅಲ್ಲ ಸ್ವತಃ ಅವನ ಹೆಂಡತಿಯೇ ಪೋಲಿಸ್ ಕಂಪ್ಲೇಂಟ್ ಕೊಟ್ಟಿದ್ದು. ಶರದ್ ಚವ್ಹಾನ್, ಅಮನ್ಹತುಲ್ಹಾ ಖಾನ್,ಪ್ರಕಾಶ ಜರವಾಲ್, ದಿನೇಶ್ ಮೊಹನಿಯಾ ಇವರೆಲ್ಲ ದೆಹಲಿಯ ಶಾಸಕರು, ಆಪ್ ಪಕ್ಷದ ನಾಯಕರು. ಇವರು ಮಹಿಳಾ ಅತ್ಯಾಚಾರ ವಿಚಾರದಲ್ಲಿ ಶಾಸಕಾಂಗದಿಂದ ಉಚ್ಛಾಟನೆಗೊಳಪಟ್ಟವರು. ಬಿಹಾರ್ ಅಥವಾ ಉತ್ತರ ಪ್ರದೇಶ ಆಗಿದ್ದರೆ ಅಲ್ಲಿ ಜನ ಓದಿರೊಲ್ಲ, ಹಳ್ಳಿ ಗುಗ್ಗುಗಳು, ಗೂಂಡಾಗಳು ಅನ್ನಬಹುದು. ಇದು ದೆಹಲಿಯ ಶಾಸಕರ ವಿಷಯ, ಬಹಳ ಗಂಭೀರ. ಜನರು ಭರವಸೆ ಇಟ್ಟು ಗೆಲ್ಲಿಸಿ ಕೂರಿಸಿರುವಾಗ ಕೆಲಸ ಮಾಡದೆ ಕಾಮ ಮಾಡುವುದು ಅದೆಷ್ಟು ಅಸಹ್ಯ. ಇವರ ಬದಲು ಭ್ರಷ್ಟ ಅನಿಸಿಕೊಂಡಿದ್ದ ಶೀಲಾ ದೀಕ್ಷಿತ್ ಮಂತ್ರಿಗಳು ಸಾವಿರ ಪಟ್ಟು ವಾಸಿ. ಮನೋಜ್ ಕುಮಾರ್ ಭೂ ಕಬಳಿಕೆಯ ಕೇಸು, ಕಮಾಂಡರ್ ಸುರೇಂದ್ರ ಸಿಂಗ್ ಅವರ ಮೇಲೆ ಜಾತಿವಾದದ ಕೇಸು, ಆಮೇಲೆ ನರೇಷ್ ಯಾದವನಿಗೆ ದೆಲ್ಲಿಯಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಪಂಜಾಬಿಗೆ ಹೋಗಿ ಕುರಾನ್ ಪವಿತ್ರ ಗ್ರಂಥವನ್ನು ಅವಮಾನಿಸುವ ಕುಚೋದ್ಯ ಕೆಲಸ ಯಾಕೆ ಬೇಕಿತ್ತು??? ಇನ್ನು ಅಕಿಲೇಶ ತ್ರಿಪಾಟಿ ಮತ್ತು ಮಹೇಂದ್ರ ಯಾದವ್ ಗಲಭೆ ಮಾಡಿಸಿದರು ಎಂಬ ಕಾರಣಕ್ಕಾಗಿ ಎಲ್ಲೆಡೆ ಸುದ್ದಿಯಾದರು. ಕರ್ತಾರ ಸಿಂಘ್ ಇವರನ್ನು ಆದಾಯ ತೆರಿಗೆ ಇಲಾಖೆ ರೈಡ್ ಮಾಡಿದಾಗ ನೂರಾ ಮೂವತ್ತು ಕೋಟಿ ಹಣ ಸಿಕ್ಕಿತಂತೆ. ಪಾಪ, ಆಪ್ ಬಡ ಶಾಸಕರು ಇಷ್ಟು ಬ್ಲಾಕ್ ಹಣ ಎಲ್ಲಿಂದ ಬಂತೋ ಆ ಮುಗ್ಧ ಕೇಜ್ರಿವಾಲ್ ಮಹಾರಾಜನಿಗೇ ಗೊತ್ತು!

ಇದೆಲ್ಲಾ ಹೋಗಲಿ…ಜಗತ್ತೇ ತಪ್ಪು ಆಪ್ ಮಾತ್ರ ಸಾಚ ಎನ್ನಿ. ಆದರೆ ನನಗೆ Shocking ಅನಿಸಿದ್ದು ಸಂದೀಪ್ ಕುಮಾರನ ಸೆಕ್ಸ್ ಸ್ಕಾಂಡಲ್! ದೆಹಲಿಯ’ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ’ ಮಂತ್ರಿಯ ಸೆಕ್ಸ್ ವಿಡಿಯೋ ಸಿಡಿ ಲೀಕ್ ಆಗಿದ್ದು, ಮಂತ್ರಿಗೆ ಮಹಿಳಾ ಕಲ್ಯಾಣ ಇಲಾಖೆ ಅಂದರೆ ಮಂತ್ರಿವರ್ಯರಿಗೆ ಕಂಡ ಕಂಡ ಮಹಿಳೆಯರೊಡನೆ ಕಲ್ಯಾಣದ ಹೆಸರಲ್ಲಿ ಹೆದರಿಸಿ ತನ್ನ ಕಾಮದಾಹವನ್ನು ತೀರಿಸಿಕೊಳ್ಳುವುದೇ ತನ್ನ ಕೆಲಸ ಅಂತಅನಿಸಿತ್ತೆ? ಮೋದಿಜಿ ಏನು ಮಾಡುತ್ತಾರೆ ಎಂದು ತಾಸು ತಾಸಿಗೆ ಹೇಳುವ ಕೇಜ್ರಿವಾಲ್’ಗೆ ತನ್ನ ಮಂತ್ರಿಯೊಬ್ಬ, ಮಹಿಳೆಯರೊಡನೆ ಮಲಗುವ ವಿಷಯ ಗೊತ್ತಾಗಲಿಲ್ಲವೇ? ಒಂದಲ್ಲ, ಎರಡೆರಡು ಘಟನೆಗಳ ಸಿಡಿ. ಸಿಡಿಲೇ ಎರಡಾದರೆ ಇನ್ನು ಕಾಣದೆ ಮತ್ತೆಷ್ಟು ಶೋಷಣೆ ನಡೆಯುತ್ತಿದೆಯೋ ? ರೇಷನ್ ಕಾರ್ಡು ಬೇಕು ಅಂತಾ ಹೋದರೆ ಮತ್ತು ಬರುವ ಪಾನೀಯ ಕುಡಿಸಿ ಇಂತಹ ದುಷ್ಕ್ರತ್ಯ ಮಾಡುವ ಇವರು ಆಮ್ ಆದಮಿ ಅಲ್ಲ…ಸೈತಾನರು. ಎಂತಹ ಅಮಾಯಕ ಸ್ಥಿತಿ ಅಲ್ಲಿಯ ಜನರದ್ದು ನೋಡಿ. ಆಮ್ ಆದಮಿ ಪಾರ್ಟಿ ಎಂಬ ಆ ಬ್ರಾಂಡ್’ಗೆ ಮತ ಹಾಕಿ ತಮ್ಮ ಬದುಕನ್ನೇ ಹಾಳು ಮಾಡಿಕೊಂಡ ಹಾಗಾಗಿದೆ ರಾಜಧಾನಿಯ ಜನರ ಪರಿಸ್ಥಿತಿ. ಇದೇ ಸಂದೀಪ್ ಕುಮಾರ್ ದಿನವೂ ಹೆಂಡತಿಯ ಕಾಲಿಗೆ ಬಿದ್ದು ಪೂಜೆ ಮಾಡುತ್ತಾನೆ ಅಂತ ಮಿಡೀಯಾ ಒಂದು ವರ್ಷದ ಹಿಂದೆ ಲೇಖನಗಳನ್ನು ಬರೆದಿದ್ದವು. ಮನೆಯಲ್ಲಿ ಪೂಜೆ, ಹೊರಗಡೆ ಪ್ರಸಾದ ಸ್ವಿಕರಿಸುವ ಸುದ್ದಿ ಲೀಕ್ ಆಗಿದ್ದು ಜನರ ಕಣ್ಣನ್ನು ತೆರೆಸಿದೆ. ಕೇಜ್ರಿವಾಲ್’ಗೆ ಎಲ್ಲರೂ ಕೇಳುವುದು ಒಂದೇ ಪ್ರಶ್ನೆ – ಎಲ್ಲ ಸಿನೇಮಾವನ್ನು ನೋಡಿ ರೇಟಿಂಗ್ ಕೊಡ್ತೀರಾ, ಸಂದೀಪ್ ಕುಮಾರನ ‘ರಾಸಲೀಲೆ’ ಸೀನೆಮಾ ನೋಡಿದ ಮೇಲೆ ಅದರ ರೇಟಿಂಗ್ ಎಷ್ಟು? ಮಾಡುವುದನ್ನೆಲ್ಲ ಮಾಡಿ “ತಾನು ದಲಿತ, ತಾನು ಹಿಂದುಳಿದವ, ತನ್ನನ್ನು ಟ್ರಾಪ್ ಮಾಡಿದ್ದಾರೆ..” ಎನ್ನುತ್ತಾನೆ ಸಂದೀಪ ಕುಮಾರ. ಅದೆಂಥ ಟ್ರಾಪ್ ನನಗೆ ಅರ್ಥವಾಗುತ್ತಿಲ್ಲ!!! ನೀತಿ ಸರಿಯಿದ್ದರೆ ಮೇನಕೆ, ಊರ್ವಷಿ ಬಂದರು ತಪಸ್ಸು ನಿಲ್ಲಬಾರದು…ಜನಸೇವೆ ಮಾಡಬೇಕು. ಹಣ್ಣು ಸಿಕ್ಕಿತು ಎಂದು ಗಬಕ್ಕನೆ ತಿಂದು ಬಾಯಿ ಒರೆಸಿಕೊಂಡರೆ ಜನರಿಗೆ ಗೊತ್ತಾಗದೇ ಉಳಿಯುವುದೆ? ಇನ್ನೇನು ಉಳಿದಿದೆ ಆಮ್ ಆದಮಿ ಪಾರ್ಟಿಯ ಚರಿತ್ರೆಯಲ್ಲಿ? ಇಷ್ಟೆಲ್ಲಾ ಆದರೂ ಪಾರ್ಟಿಯ ವಕ್ತಾರ ಆಶುತೋಷ್ ಹೇಳುವುದು ಏನು ಗೊತ್ತಾ? “ಗಾಂಧೀಜಿಯವರು ಸಂಬಂಧಗಳಿಂದ ಕಸ್ತೂರಬಾ ಬೇಸತ್ತು ಹೋಗಿದ್ದರು” “ವಾಜಪೇಯಿ ಅವರಿಗೆ ಕಾಲೇಜಿನಲ್ಲಿ ಗೆಳತಿಯರಿದ್ದರು” “ಭಾರತದ ಇತಿಹಾಸದಲ್ಲಿ ಸಂದೀಪ್ ಕುಮಾರನಂತ ಹಲವಾರು ಉದಾಹರಣೆಗಳಿವೆ” ” ಲೋಹಿಯಾ ಅವರು ಹೇಳುತ್ತಿದ್ದರು ಮೋಸ ಕಪಟವಿಲ್ಲದ ಎಲ್ಲಾ ಪ್ರೀತಿಯೂ ನೈತಿಕವಾದ್ದು”. ಎಂತಹ ನೀಚ ರಾಜಕೀಯ ಇದು. ಇಷ್ಟು ಹೊಲಸು ರಾಜಕೀಯ ಯಾವತ್ತೂ ಜನ ಕಂಡಿರಲಿಲ್ಲ. ದೇಶದ ಮಹಾತ್ಮನಾಗಿರುವ ಗಾಂಧಿಯವರ ಬಗ್ಗೆ, ಅಜಾತಶತ್ರು ವಾಜಪೇಯಿ ಅವರ ಬಗ್ಗೆ ಅಷ್ಟು ಕೀಳಾಗಿ ಮಾತನಾಡುವುದು. ಛೇ…ದೆಹಲಿ ಜನರು ಎಂತಹ ಜನರನ್ನು ಪ್ರತಿನಿಧಿಯಾಗಿ ಆಯ್ಕೆ ಮಾಡಿದರು? ತಾವು ಆರಿಸಿದ ಪ್ರತಿನಿಧಿಗಳಿಂದಲೇ ಇವರಿಗೆ  ಪ್ರತಿದಿನ ಶೋಷಣೆ ಎಂಬಂತಾಗಿದೆ. ಆದರೂ ಜನರಿಗೆ ಅವರೇ ಬೇಕು ಅಂದರೆ ಅವರಿಗೆಲ್ಲ ಆಪ್ ಪಕ್ಷದ ಮನರಂಜನೆ ಬಹಳ ಇಷ್ಟವಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಹೇಗಾದರೂ ಮೋದಿ ಅಭಿವೃದ್ಧಿ ಮಾಡುತ್ತಾರೆ…ಇತ್ತ ಕೇಜ್ರಿವಾಲ್ ಪುಕ್ಕಟೆ ಮನರಂಜನೆ ಕೊಡುತ್ತಾರೆ. ಅದೂ ಹೌದು ಬಿಡಿ!!! ಏನೇ ಹೇಳಿ, ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ಸುಖ ಪಟ್ಟ ಮಂತ್ರಿಗಳು ಬೇರೆ ಯಾವ ಪಾರ್ಟಿಯಲ್ಲೂ ಸಿಕ್ಕಿರಲಿಕ್ಕಿಲ್ಲ!!! ದೆಹಲಿಯ ಬೀದಿ ಬೀದಿಯಲ್ಲಿ ಆಪ್ ಹಾಕಿದ ಪೊಸ್ಟರ್ ಸತ್ಯವಾಯ್ತು “ವೋ ಪರೆಷಾನ್ ಕರತೇ ರಹೇ, ಹಮ್ ‘ಕಾಮ’ ಕರತೇ ರಹೇ” ಇದೇ ಆಪ್ ಮಂತ್ರ ಎಂದಾಯ್ತು!

ಹೀಗಾಗಿ ದೆಹಲಿಗೆ ಆಮ್ ಆದಮಿ ಪಾರ್ಟಿಯ ಇಲ್ಲಿಯವರೆಗಿನ ಕೊಡುಗೆ ಅಂದರೆ ಧೋಕಾ, ದೋಕಾ, ಆ್ಯಂಡ್ ಧೋಕಾ. ಬೆಳಗಾದರೆ ಮೋದಿಜಿ ಹಾಗೆ ಮಾಡಿದರು, ಹೀಗೆ ಮಾಡಿದರು. ಎಲ್.ಜಿ ಹಾಗೆ ಮಾಡಲಿಕ್ಕೆ ಬಿಡಲಿಲ್ಲ, ಹೀಗೆ ಮಾಡಲಿಕ್ಕೆ ಕೊಡಲಿಲ್ಲ. ಇದೇ ನಡೆಯುತ್ತಾ ಬಂದಿದೆ ಆಪ್ ಸರ್ಕಾರ ಬಂದಾಗಿನಿಂದ. ತಾವು ಮಾಡಿದ್ದೇ ಸಂವಿಧಾನ ಎನ್ನುತ್ತಾ ಭಾರತದ ಸಂವಿಧಾನಕ್ಕೆ ಅವಮಾನ ಅದೆಷ್ಟು ಬಾರಿ ಮಾಡಿದ್ದಾರೆ? ನೀವೊಮ್ಮೆ ನೋಡಿ, ಪ್ರಾದೇಶಿಕ ನ್ಯೂಸ್ ಪೇಪರಿನಲ್ಲಿ ತಿಂಗಳಿಗೊಮ್ಮೆ ಎರಡೆರಡು ಪೇಜ್ ಫುಲ್ ನ್ಯೂಸ್ ತರಹದ ಜಾಹೀರಾತುಗಳು ಬರುತ್ತವೆ. ದೆಹಲಿ ಅಲ್ಲ ನಾನು ಹೇಳುತ್ತಿರುವುದು ಪ್ರಾದೇಶಿಕ ದಿನಪತ್ರಿಕೆಗಳಲ್ಲಿ. ಅಂದರೆ ಈ ಜಾಹೀರಾತುಗಳಿಗೆ ಎಷ್ಟು ಹಣ ವ್ಯಯ ಮಾಡಿರಬಹುದು? ಅದಕ್ಕೆ ಹಣ ಎಲ್ಲಿಂದ ಬರುತ್ತದೆ?ದೆಹಲಿ ಕಾರ್ಪೊರೇಶನ್ ಕೆಲಸಗಾರರಿಗೆ ಅವರ ತಿಂಗಳ ಸಂಬಳ ಕೊಡಲು ಇವರ ಹತ್ತಿರ ಹಣವಿಲ್ಲ! ಅವರ ಮುಷ್ಕರದಿಂದ ರಾಜಧಾನಿ ಪೂರ್ಣ ಕೊಳಚೆ ಗುಂಡಿಯಾಗಿತ್ತು. ಆದರೆ ಪ್ರೈಮ್ ಟೈಮ್’ನಲ್ಲಿ ಜಾಹೀರಾತುಗಳನ್ನು ಬಿತ್ತರಿಸಲು, ದೊಡ್ಡ ದೊಡ್ಡ ನಾಮಫಲಕ ಹಾಕಲು, ಪುಟಗಟ್ಟಲೆ ಆ್ಯಡ್ ಕೊಡಲು ಹಣ ಬರುತ್ತದೆ. ಜನರ ತೆರಿಗೆ ಹಣ ಎಲ್ಲಿ ಹೋಯ್ತು…ಧೋಕಾ ಧೋಕಾ ಧೋಕಾ. ಅಂತರಾಷ್ಟ್ರೀಯ ಸಂಸ್ಥೆ ದೆಹಲಿ ಜಗತ್ತಿನಲ್ಲೇ ಅತೀ ಕುಲುಷಿತ ನಗರ ಎಂದಾಗ ಆಪ್ ಮಾಡಿದ್ದೇನು? ‘ಆಡ್ ಇವನ್’ ಕಾರ್ಯತಂತ್ರ. ಅದರಿಂದ ಆಗಿದ್ದು ಏನು? ಜನರಿಗೆ ತೊಂದರೆ? ಟ್ಯಾಕ್ಸಿ ಕಂಪನಿಗಳಿಗೆ ಒಂದಿಷ್ಟು ಹಣ…ಆಪ್’ಗೆ ಬಿಟ್ಟಿ ಪ್ರಚಾರ. ಇದರಲ್ಲೂ ಜನರಿಗೆ ದ್ರೋಹ!!! ಅಬ್ಬಾ …ಪರಿಸರದ ವಿಷಯದ ಹಾಗಿರಲಿ ಮೊದಲು ತಮಗೆ ಪ್ರಚಾರ ಬೇಕು….

ಒಮ್ಮೆ ಆಕಸ್ಮಿಕವಾಗಿ ಗ್ರಹಿಸಿದ್ದು ಏನೆಂದರೆ ವಾರಕ್ಕೊಮ್ಮೆ ಟ್ಟಿಟರ್’ನಲ್ಲಿ ಆಮ್ ಆದಮಿ ಪಾರ್ಟಿ ಹೆಸರಿನಲ್ಲಿ ಟ್ರೆಂಡಿಂಗ್ ಅಂತ ಬರುತ್ತದೆ. ಅಲ್ಲಿ ಹ್ಯಾಶ್ ಟ್ಯಾಗ್ ಇರುವುದೇ ಇಲ್ಲ. ಅಂದರೆ ಇದು ದುಡ್ಡು ಕೊಟ್ಟು ಮಾಡಿಸಿದ್ದು ಅಂದಾಯಿತು. ಒಮ್ಮೆ ಆಪ್ ಕಾ ಇನ್ಫ್ರಾಸ್ಟ್ರಕ್ಟರ್ ರೆವಲ್ಯೂಷನ್ ಅಂತ ಟ್ರೆಂಡಿಂಗ್ ಕಾಣಿಸಿತು …ಹೋಗಿ ನೋಡಿದೆ…ಒಂದು ಶಾಲೆ ಕಟ್ಟಿಸಿದರಂತೆ. ಒಂದು ರಾಜ್ಯ ಸಮಾನ ಸರ್ಕಾರ ಒಂದು ಶಾಲೆ ಕಟ್ಟಿಸುವುದು ರೆವಲ್ಯೂಷನ್ ಅಂತೆ !!! ಕೇಂದ್ರ ಸರ್ಕಾರವನ್ನು ದೂಷಿಸುವುದು, ತಮ್ಮ ಪಾರ್ಟಿಯ ಪಬ್ಲಿಸಿಟಿ ಮಾಡಿಕೊಳ್ಳುವುದು, ಮಂತ್ರಿ ಶಾಸಕರ ಮನಮಾನಿ ಇದನ್ನು ಬಿಟ್ಟು ಆಪ್ ಮಾಡಿದ್ದೇನು? ಫ್ರೀ ವೈ-ಫೈ  ಕೊಟ್ಟರೆ? ಕೊಟ್ಟರಲ್ಲ …ರಿಲಾಯನ್ಸ್ ಜಿಯೋ!!! ಇನ್ನು ಫ್ರೀ ನೀರು ಫ್ರೀ ವಿದ್ಯುತ್ …ಆಮ್ ಆದಮಿ ಶಾಸಕರು ಜೈಲಿನಲ್ಲಿ ಕೂತು ಫ್ರೀ ಅನ್ನ, ನೀರು ಎಲ್ಲವನ್ನೂ ಪಡೆಯುತ್ತಿಲ್ಲವೇ? ಜೂನ್ ತಿಂಗಳಲ್ಲಿ  ಆಪ್ ಪಾರ್ಟಿಯ ಇಪ್ಪತ್ತೊಂದು ಶಾಸಕರು ಅನರ್ಹರಾಗುವವರಿದ್ದರು. ಇಪ್ಪತ್ತೊಂದು ಶಾಸಕರನ್ನು ಪಾರ್ಲಿಮೆಂಟರಿ ಸೆಕ್ರೆಟರಿ ಆಗಿ ಕ್ರೆಜಿವಾಲ್ ಬಿಲ್ ಪಾಸ್ ಮಾಡಿದರು. ಇದು Delhi Members of Legislative Assembly  Act, 1997 ಪ್ರಕಾರ ಅಪರಾಧ. ಒಬ್ಬ ಶಾಸಕ ಎರಡು ಹುದ್ದೆಯನ್ನು ಹೊಂದುವ ಹಾಗಿಲ್ಲ. ಮೊದಲು ಮಾಡಿದ್ದು ತಪ್ಪು, ಯಾವಾಗ ಇದು ತಪ್ಪು ಎಂದು ಗೊತ್ತಾಯಿತೋ ಆವಾಗ ಕೇಜ್ರಿವಾಲ್ ಕಾನೂನನ್ನೇ ತಿದ್ದಲು ಹೋದರು!!! ಪುಣ್ಯ, ಈ ತಪ್ಪನ್ನು ರಾಷ್ಟ್ರಪತಿಗಳು ತಡೆದರು. ಹಾಗೆ ನೋಡಿದರೆ ಅರವತ್ತೇಳು ಮಂದಿಯಲ್ಲಿ ಇಪ್ಪತ್ತೊಂದು ಶಾಸಕರು ಸಾಂವಿಧಾನಿಕವಾಗಿ ಅನರ್ಹರು… ಹದಿನಾಲ್ಕು ಮಂದಿ ಭ್ರಷ್ಟರು…ಉಳಿದವರು ಡ್ರಾಮಾ ಕಂಪನಿ. ಸೋ …ಕಳೆದ ಒಂದೂವರೆ ವರ್ಷದಲ್ಲಿ ಆಪ್ ಆಡಳಿತದ ಕೊಡುಗೆ ಅಂದರೆ …ಆಪ್, ಸೆಕ್ಸ್ ಆ್ಯಂಡ್ ಧೋಕಾ !

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!