ಕವಿತೆ

ಅನ್ವೇಷಣೆಯ ಅಭಿಯಾನ ….

ಒಳಗಿನದೇನೊ ಚಮತ್ಕಾರದ ಶಕ್ತಿ ತೇಜ – ಮನಸೊ, ಚಿತ್ತವೊ, ಅಂತರಾತ್ಮವೊ ಅಥವಾ ಸ್ವೇಚ್ಛೆಯಲಿರ ಬಯಸುವ ನಮ್ಮೊಳಗವಿತ ನಮ್ಮದೆ ಪ್ರತಿಬಿಂಬವೊ – ಅದರ ವಿವಿಧಾವತಾರದ ಅಗಣಿತ ಪ್ರಜ್ಞೆ ಪ್ರಪುಲ್ಲಗೊಳಿಸಿದಷ್ಟೆ ಸಹಜವಾಗಿ ಪ್ರಕ್ಷುಬ್ದಗೊಳಿಸುವ ಬಗೆ ಉಪಮಾತೀತ. ಅದು ಪ್ರಶ್ನೆ ಕೇಳುವುದೊ, ಕೇಳಿಸುವುದೊ, ಉತ್ತರಕಾಗಿ ಹುಡುಕುವುದೊ, ಹುಡುಕಿಸುವುದೊ ಎಲ್ಲವು ಮನೊ ಭ್ರಾಂತಿಯ ಪಿತ್ತ ವಿಕಾರವಾದಷ್ಟೆ ಸಹಜವಾಗಿ ಅರಿವಿನ ಸೀಮೋಲ್ಲಂಘನದ ಮನ ದಿಗ್ಭ್ರಾಂತಿಯೂ ಹೌದು. ಅದರೆಲ್ಲ ಅಯೋಮಯದ ಸಂಕಲನವನ್ನು ಚಿತ್ತ ಭ್ರಮೆಯೆನ್ನುವುದೊ, ಚಿತ್ತ ವಿಕಾರವೆನ್ನುವುದೊ, ಚಿತ್ತ ಲಾಸ್ಯದ ವಿಕಾಸವೆನ್ನುವುದೊ – ಎಲ್ಲಾ ಅವರವರ ಭಾವದ ಹೂರಣ ಲಟ್ಟಿಸಿದ ಹೋಳಿಗೆಯಂತೆ. ಆದರೆ ಆ ಪ್ರಜ್ಞೆಗೆ ಇದರ ಗಣನೆಯಿದೆಯೆ ಹೇಳಬರದು. ನಮ್ಮ ಬುದ್ಧಿಮತ್ತೆಯ ಸ್ತರದಲಿ ಗ್ರಹಿಸಲ್ಪಟ್ಟ ಒಳಿತು ಕೆಡಕು, ಸರಿ ತಪ್ಪುಗಳಾವುದನ್ನು ಲೆಕ್ಕಿಸದೆ ತನ್ನ ಪಾಡಿಗೆ ತನ್ನ ಪತಾಕೆ ಹಾರಿಸುತ್ತ ವಿಹರಿಸುವ ಈ ಅಂತರ್ಪ್ರಜ್ಞೆ ನಮಗರಿಯದಂತೆ ಆ ವಿಶ್ವಪ್ರಜ್ಞೆಯ ಜತೆಗೆ ಅನಿರ್ಬಂಧಿತ ಸಂಬಂಧವಿಟ್ಟಿದೆಯೊ ಏನೊ? ಅದರಿಂದಾಗೆ ಯಾವಾಗಲೆಂದರೆ ಅವಾಗ, ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಇದ್ದಕ್ಕಿದ್ದಂತೆ ಹಾರಿ ಸಂಚರಿಸಿ, ಏನೊ ಅವಸರದ ಕಾರ್ಯ ಮುಗಿಸುವ ಹುನ್ನಾರದಲಿರುವಂತೆ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಜಿಗಿದು ಕ್ಷಣಾರ್ಧದಲಿ ಸಹಸ್ರ ಯೋಜನ ಕ್ರಮಿಸಿ, ಅದರ ದುಪ್ಪಟ್ಟು ವೇಗದಲಿ ಮತ್ತೆ ಮೂಲ ಸ್ಥಾನ ಸೇರಿಕೊಂಡು, ಮತ್ತೆ ಇನ್ನೆಲ್ಲೊ ನೆಗೆದು ಸುತ್ತು ಹೊಡೆದು ಕೇಕೆ ಹಾಕಿ ಕುಣಿದು ಮತ್ತೆ ತವರಿಗೆ ಲಗ್ಗೆಯಿಕ್ಕುತಲೆ ಮತ್ತೊಂದರ ವಾಸನೆಯನ್ನು ಆಘ್ರಾಣಿಸಿ ಮತ್ತೊಂದು ಯಾನಕೆ ಸಿದ್ದವಾಗುತ್ತದೆ. ಸದಾ ನಮ್ಮಲ್ಲೆ ಇದ್ದೂ, ಇಲ್ಲದಂತಿರುವ ಇದು ಸುಪರಿಚಿತವೊ, ಅಪರಿಚಿತವೊ ಎಂದು ನಮಗೆ ಅನುಮಾನ ಹುಟ್ಟಿಸಿ ಬಿಡುವುದು ಇದರ ಮತ್ತೊಂದು ಚಳಕ. ಹಿಡಿಯಲಾದರೆ ಜಿತೆಂದ್ರರಾದೆವೆಂದುಕೊಳ್ಳುವರು, ಹಿಡಿಯಲಾಗದಿರೆ ಮಾಯೆಯ ಮುಸುಕೆನ್ನುವರು. ಹಿಡಿಯಲೂ ಆಗದ ಬಿಡಲೂ ಆಗದ ಒದ್ದಾಟದಲ್ಲಿ ಬಿದ್ದರೆ ಸಂಸಾರ ಚಕ್ರವೆನ್ನುವರು. ಯಾರೇನೆಂದುಕೊಂಡರೂ ಎಲ್ಲರನ್ನು ಏಮಾರಿಸಿ ಎಲ್ಲೆಲ್ಲೊ ಸುತ್ತಿ ಸುಳಿದು ಆಯಾಸ , ಬಳಲಿಕೆಯಿಲ್ಲದೆ ಹರ್ಷೋಲ್ಲಾಸದ ದಿರುಸುಟ್ಟಂತೆ ಸುತ್ತಾಟ ಮುಗಿಸಿ ವಿಶ್ರಾಮ ತಾಣಕ್ಕೆ ಬರುವ ಈ ಅಭಿವ್ಯಕ್ತಿಯ ವಿಶ್ರಾಂತಿ ಬಹುಶಃ ಈ ತರಹದ ಸ್ವೇಚ್ಛಾಯಾನದಲೆ ಹುದುಗಿದೆಯೊ ಏನೊ – ಅನಂತ ವಿಶ್ವ, ಬ್ರಹ್ಮಾಂಡದ ರಹಸ್ಯಗಳನೆಲ್ಲ ಭೇದಿಸಿ ಅರಿಯುವ ಸತತ, ನಿರಂತರ ಅನ್ವೇಷಣೆಯಲ್ಲಿ.

ಪದಗಳಲಿ ಹಿಡಿದಿಡಲಾಗದ ಆ ಅನ್ವೇಷಣೆಯ ತುಣುಕೊಂದೆರಡರ ಅಭಿಯಾನ – ಈ ಪದ್ಯ.

ಪರಿಭ್ರಮಣ (ಕವಿತೆ)

_____________________

ಜಾರಿ ಬಿದ್ದ ತಮದಲೆಲ್ಲೊ

ಬೆಳಕಿನ ಬಲವಡಗಿದ ಕುರುಹು

ಕಪ್ಪು ಬಿಲವನ್ಹೊಕ್ಕ ಮೇಲೆ

ಹೊರದಾರಿ ಬಿಳಿ ಬಿಲದ ಹರಹು ||

ಅಗಣಿತ ಯೋಜನ ಉದ್ದಗಲ

ಅಳೆಯಲಾಗದ ವಿಸ್ತಾರವೆ ಬಹಳ

ಯುಗಯುಗಾಂತರದ ಜೋಗುಳ

ಹಾಡಿರುವವಳಾರೊ ತಿಳಿಯದಾಳ ||

ತೊಟ್ಟಿಕ್ಕಿತೆ ಕಂಬನಿ ಮಳೆ ಹನಿ

ಕರಗಿ ಕತ್ತಲಲಿ ಕಾಣದ ಗೃಹಿಣಿ,

ಹಾಡಿನದೆ ನಿರಂತರ ಮಾರ್ದನಿ

ನೀರವತೆ ಬೋರಲು ಬಿದ್ದಾ ತರುಣಿ ||

ಬಿಕ್ಕಿದೆಯೊ ನಕ್ಕಿದೆಯೊ ಮನ

ಅರಿವಾಗಬಿಡ ನಿರ್ವಾತ ಅನುಮಾನ

ಮಾತಿಲ್ಲದ ಮೌನದೆ ಸಂವಹನ

ಕೇಳದವಳ ದೆಸೆ ನಂಬುವುದಾರನ್ನ ||

ಗಡಿಯಿಂದಾಚೆಗೆ ಪರಿಭ್ರಮಣ

ಎಲ್ಲೆ ಕಟ್ಟು ಮೀರಿ ಹಾರಿದದೆ ಮನ

ನೋಡುತೆಲ್ಲ ಮನೋವೇಗ ಕ್ಷಣ

ಮತ್ತೆ ಗೂಡ ಸೇರೊ ಕ್ಷಣ ವಿಲಕ್ಷಣ ||

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!