ಧರ್ಮ ಅಥವಾ ಆಧ್ಯಾತ್ಮಿಕ ವಿಜ್ಞಾನ ಎಂಬುದು ಸೈದ್ಧಾಂತಿಕವಲ್ಲ. ಸಿದ್ಧಾಂತಗಳ ಚಿಂತನೆಯಿಂದ ಯಾವುದೇ ಆಧ್ಯಾತ್ಮಿಕ ಪ್ರಯೋಜನವಾಗುವುದಿಲ್ಲ. ಆದ್ದರಿಂದಲೇ ಭಾರತೀಯ ಆಧ್ಯಾತ್ಮವಿದ್ಯೆಗೆ ಸಿದ್ಧಾಂತ ಮತ್ತು ಅನುಷ್ಠಾನ ಎಂಬ ಎರಡು ಮುಖಗಳಿವೆ. ಭಾರತದ ಪ್ರಾಚೀನರು ಧಾರ್ಮಿಕ ಅನುಷ್ಠಾನಗಳನ್ನು ಆಚರಣೆಗೆ ತರಲಿಕ್ಕೆ ಸಿದ್ಧಾಂತಗಳ ಪ್ರತಿಪಾದನೆಯ ಮೂಲಕ ವಿವರಣೆ ನೀಡಿದ್ದಾರೆ. ಸಿದ್ಧಾಂತಗಳ ಅಡಿಪಾಯದ ಮೇಲೆಯೇ ಅನುಷ್ಠಾನವಿಧಾನಗಳು ನಿಂತಿವೆ. ಸಿದ್ಧಾಂತಗಳ ಚಿಂತನೆ ಹಾಗೂ ಅವುಗಳ ಫಲಿತಾಂಶಗಳ ಅನುಷ್ಠಾನದಿಂದ ಯೋಗಗಳೆಂಬ ನಾಲ್ಕು ಸಾಧನಾ ಮಾರ್ಗಗಳು ಹುಟ್ಟಿಕೊಂಡಿವೆ. ಆದರೆ ದುರ್ದೈವದಿಂದ ಈ ಸೈದ್ಧಾಂತಿಕ ತತ್ವಗಳು ಬೇರೆ ಬೇರೆ ರೀತಿಯಾಗಿ ಅರ್ಥೈಸಲ್ಪಟ್ಟು ಅನೇಕ ತತ್ವ-ಮತಗಳಿಗೆ ಸೆಮೆಟಿಕ್ ಮತಗಳ ಹುಟ್ಟುವಿಕೆಗೆ ಎಡೆಮಾಡಿಕೊಟ್ಟಿವೆ.
ಸಿದ್ಧಾಂತ ವಿಭಾಗ (ಆರು ಶಾಸ್ತ್ರಗಳು)
ಭಾರತೀಯ ಆಧ್ಯಾತ್ಮವಿದ್ಯೆಯ ಅಥವಾ ಧರ್ಮದ ಶಾಖೆಗಳು ಆರು. ಅವುಗಳೇ ಷಡ್ದರ್ಶನಗಳು ಅಥವಾ ಆರು ಶಾಸ್ತ್ರಗಳೆಂದು ಕರೆಯಲ್ಪಟ್ಟಿವೆ. ನಾಯಶಾಸ್ತ್ರ(ಗೌತಮ), ವೇಶೇಷಿಕ(ಕಣಾದ), ಸಾಂಖ್ಯ(ಕಪಿಲ), ಯೋಗ(ಪತಂಜಲಿ), ಮೀಮಾಂಸಾ(ಜೈಮಿನಿ) ಹಾಗೂ ವೇದಾಂತಶಾಸ್ತ್ರ(ಬಾದರಾಯಣ) ಇವುಗಳೇ ಆ ಆರು ದರ್ಶನಗಳಾಗಿವೆ. ಇವುಗಳಿಗೆಲ್ಲ ವೇದವೇ ಆಧಾರವಾಗಿದೆ. ಆದ್ದರಿಂದ ಇವುಗಳನ್ನು ವೈದಿಕ ದರ್ಶನಗಳೆಂದು ಗುರುತಿಸಲಾಗುತ್ತದೆ.
ನ್ಯಾಯ ಮತ್ತು ವೈಶೇಷಿಕ
ಗೌತಮನ ನ್ಯಾಯ ಹಾಗೂ ಕಣಾದನ ವೈಶೇಷಿಕ ಪದ್ಧತಿಗಳ ಪ್ರಕಾರ ಅಳಿವಿಲ್ಲದ ಅಣುಗಳಿಂದ ಈ ಸೃಷ್ಟಿ ನಿರ್ಮಾಣವಾಗಿದೆ. ಎಲ್ಲ ಜೀವಿಗಳ ಬಾಳಿನ ಆಗುಹೋಗುಗಳು ಹಿಂದಿನ ಸೃಷ್ಟಿಯಲ್ಲಿ ಮುಕ್ತವಾಗದೇ ಉಳಿದ ಆಯಾ ಜೀವಿಯ ‘’ಅದೃಷ್ಟ’’ ವನ್ನು (ದೃಷ್ಟಿಗೆ ಕಾಣದ್ದನ್ನು, ಅರ್ಹತೆಯನ್ನು) ಅವಲಂಬಿಸಿದೆ. ಈ ಅಣುಗಳ ಸಂಯೋಗದಿಂದ ವಿಶ್ವದ ಸೃಷ್ಟಿಕ್ರಿಯೆ ನಡೆಯುತ್ತದೆ. ಹಾಗೆಯೇ ಅವುಗಳ ವಿಯೋಗದಿಂದ ಲಯ ಸಂಭವಿಸುತ್ತದೆ. ಜೀವಿಗಳಿಗೆ ತಾನು ದೇಹ-ಇಂದ್ರಿಯಸಮೂಹ ಹಾಗೂ ಮನಸ್ಸಿಗಿಂತ ಭಿನ್ನವಾದ ಶಾಶ್ವತ ವಸ್ತು ಎಂಬ ತಿಳುವಳಿಕೆ ಇಲ್ಲದ ಕಾರಣದಿಂದಲೇ ಜೀವಿಗಳು ಮತ್ತೆ ಮತ್ತೆ ಹುಟ್ಟುವ ಸಾಯುವ ಚಕ್ರಕದಲ್ಲಿ ಸಿಲುಕಿಕೊಂಡಿರುತ್ತವೆ. ಈ ಚಕ್ರದಿಂದ ಅಂದರೆ ಎಲ್ಲ ರೀತಿಯ ದುಃಖಗಳಿಂದಲೂ ಶಾಶ್ವತ ಬಿಡುಗಡೆ ಹೊಂದಲು ಆ ಜೀವಿಯು ‘’ಶ್ರವಣ’’(ಶಾಸ್ತ್ರವು ವಿವರಿಸುವ ಸತ್ಯದ ತಿಳುವಳಿಕೆಯ ಆಲಿಸುವಿಕೆ), ಮನನ(ಆ ಸತ್ಯದ ಕುರಿತಾದ ಚಿಂತನೆ-ತನ್ಮೂಲಕ ತನ್ನ ನಿಜಸ್ವೂಪದ ಜ್ಞಾನ) ಹಾಗೂ ನಿಧಿಧ್ಯಾಸನ(ತನ್ನ ನಿಜಸ್ವರೂಪದ ಬಗ್ಗೆ ಧ್ಯಾನ) ಎಂಬ ಕ್ರಿಯೆಗಳನ್ನು ಅವಲಂಬಿಸಬೇಕು ಎಂದು ನ್ಯಾಯ- ವೈಶೇಷಿಕ ಶಾಸ್ತ್ರಗಳು ಪ್ರತಿಪಾದಿಸುತ್ತವೆ.
ಸಾಂಖ್ಯ ಮತ್ತು ಯೋಗ
ಕಪಿಲನ ಸಾಂಖ್ಯ ಮತ್ತು ಪತಂಜಲಿಯ ಯೋಗಪದ್ಧತಿಗಳು ಒಂದಕ್ಕೊಂದು ಪೂರಕವಾಗಿವೆ. ಪ್ರಕೃತಿ ಎನ್ನುವುದು ವಿಶ್ವದ ಮೂಲವಸ್ತುಗಳ ಸಂಗ್ರಹ ಎನ್ನುವುದು ಈ ಎರಡೂ ಶಾಸ್ತ್ರಗಳ ಕಾಣ್ಕೆಯಾಗಿದೆ. ಪುರುಷರು(ಮನುಷ್ಯರು ಅಥವಾ ಜೀವಾತ್ಮರು) ಪ್ರೇರಕ ಶಕ್ತಿಗಳಂತೆ ವರ್ತಿಸುತ್ತಾರೆ. ಜೀವಿಗಳ ಉಪಸ್ಥಿತಿಯಲ್ಲಿ ಈ ಪ್ರಕೃತಿ ವಿಶ್ವವಾಗಿ ಸೃಷ್ಟಿಗೊಳ್ಳುತ್ತದೆ. ವಾಸ್ತವವಾಗಿ, ಈ ಇಡೀ ಸೃಷ್ಟಿಕ್ರಿಯೆಯೇ ಜೀವಿಗಳ ಆತ್ಮಿಕ ಉನ್ನತಿಗಾಗಿ ಹಾಗೂ ಅಂತಿಮವಾಗಿ ಜೀವಿಗಳ ಮುಕ್ತಿಗಾಗಿ ಉಂಟಾಗಿದೆ. ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶವೆಂಬ ಪಂಚಭೂತಗಳ ನಾನಾ ವಿಧಧ ಜೋಡಣೆಗಳಿಂದಲೇ ಈ ವಿಶ್ವದ ಅಥವಾ ಪ್ರಕೃತಿಯ ರಚನೆಯಾಗಿದೆ. ಜೀವಾತ್ಮನು ವಾಸ್ತವದಲ್ಲಿ ಈ ಪ್ರಕೃತಿಗಿಂತ ‘’ಭಿನ್ನವಾದ ಅಸ್ತಿತ್ವ’’ವಾಗಿದ್ದರೂ ಕೂಡ ಪ್ರಕೃತಿಗೂ ಹಾಗೂ ಅದರ ಉತ್ಪನ್ನಗಳಾದ ಶರೀರ ಮತ್ತು ಸತ್ವ ರಜ ತಮಗಳೆಂಬ ಮೂರು ಗುಣಗಳ ಪ್ರಭಾವಕ್ಕೆ ಒಳಗಾಗುವುದರ ಮೂಲಕ ಅವುಗಳ ಬಂಧನದಲ್ಲಿರುತ್ತಾನೆ. ಅದರ ಫಲವೇ ಮತ್ತೆ ಮತ್ತೆ ಜನ್ಮ ಉಂಟಾಗುವುದು. ‘’ವಿವೇಕಖ್ಯಾತಿ’’ಯ ಸಂಪಾದನೆ ಅಂದರೆ ವಿವೇಚನೆ ಮತ್ತು ಮತ್ತು ಜ್ಞಾನಗಳ ಮೂಲಕ ವೈರಾಗ್ಯ ಸಂಪಾದನೆ, ಹಾಗೂ ಯೋಗದ ಎಂಟು ಹಂತಗಳ ಮೂಲಕ ಅಂತಿಮವಾಗಿ ಆತನಿಗೆ ಬಿಡುಗಡೆ ಉಂಟಾಗುತ್ತದೆ ಎಂಬುದು ಸಾಂಖ್ಯ ಮತ್ತು ಯೋಗಗಳ ಪ್ರತಿಪಾದನೆಯಾಗಿದೆ.
ಮೀಮಾಂಸಾ ಶಾಸ್ತ್ರ
ಜೈಮಿನಿಯ ಮೀಮಾಂಸಾ ದರ್ಶನದ ಪ್ರಕಾರ ಪ್ರಕೃತಿಯು ಅಚೇತನವಾಗಿದ್ದು ಈ ವಿಶ್ವವಾಗಿ ತನ್ನಿಂತಾನೆ ವಿಕಾಸ ಹೊಂದುತ್ತದೆ. ಜೀವಿಗಳು ಪೂರ್ವಜನ್ಮದಲ್ಲಿ ಎಸಗಿದ ಕರ್ಮಗಳು ಮತ್ತು ಈಗ ಫಲ ಕೊಡಲಿರುವ ಪ್ರಾರಬ್ಧ ಕರ್ಮಗಳು ವಿಶ್ವದ ವಿಕಾಸಕ್ಕೆ ಕಾರಣ ಮತ್ತು ಪ್ರೇರಣೆಗಳಾಗಿವೆ. ಈ ಜೀವಿಗಳು ಯಜ್ಞಯಾಗಾದಿ ವೇದಗಳಲ್ಲಿ ಹೇಳಿದ ಅನುಷ್ಠಾನಗಳನ್ನು ಪ್ರತಿನಿತ್ಯದ ಜೀವನದಲ್ಲಿ ಆಚರಿಸಬೇಕು. ಅವುಗಳ ನಿರಂತರ ಆಚರಣೆಯಿಂದ ಚಿತ್ತಶುದ್ಧಿಯನ್ನು ಪಡೆಯುದರಮೂಲಕ ಬ್ರಹ್ಮತ್ವದ ಅನುಭವವನ್ನು ಹೊಂದಿ ತಮ್ಮ ಎಲ್ಲ ಸಂಕಟಗಳಿಂದ ಬಿಡುಗಡೆ ಹೊಂದಿ ಮುಕ್ತವಾಗಬೇಕು ಎಂದು ಮೀಮಾಂಸಾ ಶಾಸ್ತ್ರ ಹೇಳುತ್ತದೆ.
ವೇದಾಂತ ಶಾಸ್ತ್ರ
ಬಾದರಾಯಣರ(ಇವರಿಗೆ ವ್ಯಾಸರು ಎಂಬ ಹೆಸರೂ ಇದೆ) ವೇದಾಂತ ದರ್ಶನದ ಪ್ರಕಾರ ಪ್ರತಿಯೊಂದು ಕಲ್ಪದ ಆದಿಯಲ್ಲಿ ನಿರ್ಗುಣ ಪರಬ್ರಹ್ಮವು ತನ್ನೊಳಗಿನಿಂದಲೇ ಈ ವಿಶ್ವವನ್ನು ಸೃಷ್ಟಿಸುತ್ತದೆ ಹಾಗೂ ಅದನ್ನು ವಿಷ್ಣುತತ್ವವಾಗಿದ್ದುಕೊಂಡು ಪೋಷಿಸುತ್ತದೆ. ಕೊನೆಗೆ ಕಲ್ಪಾಂತ್ಯದಲ್ಲಿ ರುದ್ರತತ್ವವಾಗಿ ಈ ಸೃಷ್ಟಿಯನ್ನೆಲ್ಲ ತನ್ನೊಳಗೆ ಎಳೆದುಕೊಂಡುಬಿಡುತ್ತದೆ. ವೇದಾಂತದಲ್ಲಿ ಈ ಸೃಷ್ಟಿಕ್ರಿಯೆಯನ್ನು ಜೇಡರ ಹುಳದ ಬಾಯಿಂದ ಹೊರಬಂದಿರುವ ಅದರ ಬಲೆಗೆ ಹಾಗೂ ಉರಿಯುವ ಬೆಂಕಿಯಿಂದ ಸಿಡಿಯುವ ಕಿಡಿಗಳಿಗೆ ಹೋಲಿಸಲಾಗಿದೆ. ಅದು ಹೊರಸಿಡಿದ ಕೆಲಹೊತ್ತಿನಲ್ಲಿಯೇ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಆದರೆ ಅದಕ್ಕೆ ಕಾರಣವಾದ ಅಗ್ನಿ ಮೂಲದಲ್ಲಿ ಹಾಗೆಯೇ ಶಾಶ್ವತವಾಗಿ ಉಳಿದಿರುತ್ತದೆ. ಈ ಕಿಡಿಯ ಅಸ್ತಿತ್ವವನ್ನು ನಿರಾಕರಿಸಲೂ ಸಾಧ್ಯವಿಲ್ಲ.. ಹಾಗೆಯೇ ಅದು ಶಾಶ್ವತವೂ ಅಲ್ಲ. ಬೆಂಕಿಯಿಂದ ಸಿಡಿದ ಕಿಡಿಯೂ ಬೆಂಕಿಯೇ ಆಗಿರುವಂತೆ ಪರಬ್ರಹ್ಮದಿಂದ ಉಂಟಾದ ಈ ಜಗತ್ತೆಲ್ಲವೂ ಬ್ರಹ್ಮವೇ ಆಗಿದೆ. ಬ್ರಹ್ಮತತ್ವವಲ್ಲದ್ದು ಇಲ್ಲಿ ಏನೂ ಇಲ್ಲ. ಜೀವಿಯು ಜ್ಞಾನದ(ತನ್ನ ಅಸ್ತಿತ್ವದ, ನಿಜಸ್ವಭಾವದ ಅರಿವು) ಹಾಗೂ ಭಕ್ತಿಯ ಮೂಲಕ ತನ್ನ ಅನಂತ ಆನಂದದ ಮೂಲಸ್ಥಿತಿಯನ್ನು ಪುನಃ ಗಳಿಸುತ್ತಾನೆ ಎಂದು ಸಾರುವ ವೇದಾಂತವು ಅದರ ಸಾಧನೆಗಳನ್ನು ವಿವರಿಸುತ್ತದೆ.
ಅನುಷ್ಠಾನ ವಿಭಾಗ ( ನಾಲ್ಕು ಯೋಗಗಳು)
ಯೋಗ ಎಂಬುದು ಅನುಷ್ಠಾನಕ್ಕೆ ಸಂಬಂಧಿಸಿದ್ದು. ಈ ಯೋಗದಲ್ಲಿ ನಾಲ್ಕು ವಿಧ. ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಮತ್ತು ರಾಜಯೋಗ. ಇವೆಲ್ಲವೂ ಮನಸ್ಸನ್ನು-ಚಿತ್ತವನ್ನು ಹಂತ ಹಂತವಾಗಿ ಶುದ್ಧಗೊಳಿಸುವ ಉಪಾಯಗಳು. ಈ ಯೋಗಗಳ ಅನುಷ್ಠಾದಿಂದ ಮನಸ್ಸು ಎಷ್ಟು ಪರಿಶುದ್ಧವಾಗುವುದೆಂದರೆ ತನ್ನೊಳಗಿನ ಆತ್ಮ ಅಥವಾ ಭಗವಂತನು ಜೀವಿಗೆ ತಾನಾಗಿಯೇ ಮೈದೋರುತ್ತಾನೆ.
ಕರ್ಮಯೋಗ
ಪೂಜೆ, ಉಪಾಸನೆ ಇತ್ಯಾದಿ ಧಾರ್ಮಿಕ ಆಚರಣೆಗಳು, ಧರ್ಮಶಾಸ್ತ್ರದ ವಿಧಿ-ನಿಷೇಧಗಳು, ನಿಯಮಗಳು, ಹಾಗೂ ನಿತ್ಯ, ನೈಮಿತ್ತಿಕ, ಪ್ರಾಯಶ್ಚಿತ್ತ ಮತ್ತು ಕಾಮ್ಯವೆಂಬ ನಾಲ್ಕು ಪ್ರಕಾರದ ವೈದಿಕ ಅನುಷ್ಠಾನಗಳು, ಯಜ್ಞಗಳು ಇವೆಲ್ಲ ಕರ್ಮಯೋಗದ ಭಾಗಗಳಾಗಿವೆ. ವೈದಿಕ ಅನುಷ್ಠಾನಗಳು ಮಾತ್ರವಲ್ಲದೇ ಉದ್ಯೋಗ, ವ್ಯಾಪಾರ ಮುಂತಾದ ಎಲ್ಲ ಕ್ರಿಯೆಗಳೂ ಕರ್ಮವೇ ಆಗಿವೆ. ವಾಸ್ತವವಾಗಿ ಜೀವಿಗಳ ಮಾನಸಿಕ ಆಲೋಚನೆ ಮತ್ತು ಉಸಿರಾಟವೂ ಕೂಡ ಕರ್ಮವೇ ಆಗಿದೆ. ಕರ್ಮ ಮಾಡದೇ ಜೀವಿಯು ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಆ ಕರ್ಮದಿಂದ ಕರ್ಮಫಲ, ಕರ್ಮಫಲದಿಂದ ವಾಸನೆ..ವಾಸನೆಯಿಂದ ಪ್ರವೃತ್ತಿ, ಪ್ರವೃತ್ತಿಯಿಂದ ಮತ್ತೆ ಕರ್ಮ, ಕರ್ಮದಿಂದ ಮತ್ತೆ ಕರ್ಮಫಲ ಆ ಕರ್ಮಫಲ ಅನುಭವಿಸಲಿಕ್ಕೆ ಮತ್ತೆ ಪುನರ್ಜನ್ಮ, ಜನ್ಮಿಸಿದ ಮೇಲೆ ಮತ್ತೆ ಕರ್ಮ ಹೀಗೆ ಈ ಚಕ್ರ ನಡೆಯುತ್ತಿದೆ. ಇದರಿಂದ ಬಿಡುಗಡೆ ಹೊಂದಲಿಕ್ಕೆ ಮಾನವನು ತನ್ನ ಕರ್ತವ್ಯವಾದ ಕರ್ಮಗಳನ್ನು ‘’ಕರ್ತೃತ್ವಭಾವ’’ ಅಂದರೆ ‘’ನಾನು ಆ ಕರ್ಮವನ್ನು ಮಾಡಿದೆ’’ ಎಂಬ ಭಾವ ಮತ್ತು ಅದರಿಂದುಂಟಾಗುವ ‘’ಫಲವು ನನ್ನದೇ’’ ಎಂಬ ‘’ಫಲಾಪೇಕ್ಷೆಯ ಭಾವ’’ ಈ ಎರಡು ವಿಷಕಾರಕ ಭಾವಗಳನ್ನು ಬಿಟ್ಟು ಭಗವಂತನಿಗೆ ಅವುಗಳನ್ನು ಸಮರ್ಪಿಸಿಬಿಡುವುದರಿಂದ ಆ ಕರ್ಮಫಲ ಮತ್ತು ಅದರಿಂದುಂಟಾಗುವ ವಾಸನೆಯಿಂದ ಮುಕ್ತನಾಗುತ್ತಾನೆ.
‘’ನೀನು ಈ ಕರ್ಮವನ್ನು ಮಾಡುತ್ತಿರುವಿ ಎಂಬ ಭಾವವನ್ನು ಬಿಟ್ಟು ಬಿಡು.. ಮತ್ತು ಅದರಿಂದುಂಟಾಗುವ ಫಲವು ನಿನ್ನದು ಎಂದುಕೊಳ್ಳಬೇಡ. ಅವೆರಡೂ ನನ್ನವೇ ಆಗಿವೆ. ನಿನ್ನದೇನೂ ಇಲ್ಲ. ಆದರೂ ನೀನು ನಿನ್ನ ಕರ್ತವ್ಯವಾದ ಕರ್ಮವನ್ನು (ಯುದ್ಧವನ್ನು) ಮಾಡಬೇಕು ಮತ್ತು ಅದನ್ನು ಚೆನ್ನಾಗಿ ಶ್ರದ್ಧೆಯಿಂದ ಮಾಡಬೇಕು, ಅದರ ಕರ್ತೃತ್ವ ಮತ್ತು ಫಲವನ್ನು ನನ್ನಮೇಲೆ ಹಾಕಿಬಿಡು ’’ ಎಂಬ ಕೃಷ್ಣನ ಮಾತು ಅರ್ಜುನನಿಗೆ ಮಾತ್ರವಲ್ಲ, ಇಡೀ ಜಗತ್ತಿಗೇ ಹೇಳಿದ್ದಾಗಿದೆ ಮತ್ತು ಅದು ಕೇವಲ ಯುಧ್ಧದ ಕುರಿತಾದ ಮಾತಲ್ಲ, ಉಸಿರಾಟ, ಆಲೋಚನೆ ಮೊದಲುಗೊಂಡು ಎಲ್ಲ ರೀತಿಯ ಕರ್ಮಗಳಿಗೆ ಅನ್ವಯಿಸುತ್ತದೆ.
ಭಕ್ತಿಯೋಗ
ದೇವರಲ್ಲಿ ಭಕ್ತಿಯನ್ನು ಬೆಳೆಸಿಕೊಂಡು ಆತನ ಕೃಪೆಯಿಂದಲೇ ಆತನನ್ನು ಸೇರಬೇಕೆಂಬುದು ಭಕ್ತಿಯೋಗದ ಮಾರ್ಗ. ನಾರದನ ಭಕ್ತಿಸೂತ್ರಗಳಲ್ಲಿ ಒಂಭತ್ತು ವಿಧವಾದ ಭಕ್ತಿಗಳನ್ನು ವಿವರಿಸಿದ್ದು ರಾಮಾಯಣದಲ್ಲಿ ಅವುಗಳನ್ನೇ ರಾಮನು ಶಬರಿಗೆ ಬೋಧಿಸಿದ್ದಾನೆ. ಇಲ್ಲಿ ಭಕ್ತಿಯೆಂದರೆ ದೇವರೆಡೆಗಿನ ಮೂಢ ವಿಶ್ವಾಸವಲ್ಲ. ಅಂಧಾಭಿಮಾನವಲ್ಲ.
ಮೋಕ್ಷಸಾಧನ ಸಾಮಗ್ರ್ಯಾಂ ಭಕ್ತಿರೇವ ಗರೀಯಸಿ |
ಸ್ವಸ್ವರೂಪಾನುಸಂಧಾನಂ ಭಕ್ತಿರಿತ್ಯಭಿಧೀಯತೆ ||
ಮೋಕ್ಷಸಾಧನೆಗಿರುವ ಮಾರ್ಗಗಳಲ್ಲಿ ಭಕ್ತಿಯೇ ಉತ್ತಮವಾದದ್ದು. ಆದರೆ ಸ್ವಸ್ವರೂಪದ ಅನುಸಂಧಾನವೇ ಭಕ್ತಿಯಾಗಿದೆ ಎಂದು ಶಂಕರಾಚಾರ್ಯರು ಭಕ್ತಿಯ ಸ್ವರೂಪವನ್ನು ವಿವರಿಸಿದ್ದಾರೆ. ಈ ಸ್ವಸ್ವರೂಪದ ಅನುಸಂಧಾನಕ್ಕೆ ಹಾಗೂ ಭಗವಂತನ ಮೇಲೆ ಭಕ್ತಿಯನ್ನು ಹೊಂದಲಿಕ್ಕೆ ಭಗಂವಂತನ ಅನಂತತೆ, ಅಗಾಧತೆ, ಸೃಷ್ಟಿಯ ನಶ್ವರತೆ, ಜೀವದ ಚೈತನ್ಯ ಸ್ವಭಾವ ಮುಂತಾದವುಗಳ ಸ್ಪಷ್ಟ ಜ್ಞಾನ ಇರಲೇಬೇಕಾಗುತ್ತದೆ. ಹೀಗಾಗಿ ಭಕ್ತಿಯು ಜ್ಞಾನದ ಅಡಿಪಾಯದ ಮೇಲೆಯೇ ನಿಂತಿರುತ್ತದೆ. ಜ್ಞಾನವಿಲ್ಲದ ಮೂಢ ಅಭಿಮಾನವು ಅಥವಾ ಅವಲಂಬನೆಯು ಭಕ್ತಿಯೆನಿಸಿಕೊಳ್ಳಲು ಯೋಗ್ಯವಾಗಿರುವುದಿಲ್ಲ.
ಜ್ಞಾನಯೊಗ
ಆತ್ಮಸ್ವರೂಪದ, ಬ್ರಹ್ಮತತ್ವದ ಸಂಪೂರ್ಣ ಜ್ಞಾನವನ್ನು ಪಡೆದುಕೊಂಡು ನಿರಂತರವೂ ಮನಸ್ಸನ್ನು ಅಂತರ್ಮುಖಿಯಾಗಿಸಿಕೊಂಡು ತನ್ನನ್ನು ತಾನು ಆತ್ಮನೆಂಬ ವಾಸ್ತವವನ್ನು ಧ್ಯಾನಿಸುತ್ತಿದ್ದರೆ ಅಂತಿಮವಾಗಿ ಅದು ಅನುಭವಕ್ಕೆ ಬರುತ್ತದೆ ಎಂಬುದು ಜ್ಞಾನಯೋಗದ ಅನುಷ್ಠಾನ ವಿಧಾನ.
ರಾಜಯೋಗ
ಪತಂಜಲಿಯ ಅಷ್ಟಾಂಗಯೋಗ ಪದ್ಧತಿಯನ್ನು ರಾಜಯೋಗವು ಅವಲಂಬಿಸಿದೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಸಮಾಧಿ ಎಂಬ ಎಂಟು ಸಾಧನೆಯ ಮೆಟ್ಟಿಲುಗಳನ್ನು ಕ್ರಮವಾಗಿ ಹತ್ತಿಕೊಂಡು ಹೋದಾಗ ಆತ್ಮಾನುಭವದ ಫಲ ಉಂಟಾಗಿ ತನ್ಮೂಲಕ ಬಿಡುಗಡೆ ಸಿದ್ಧಿಸುತ್ತದೆ. ಅರ್ಜಿತ, ಸಂಚಿತ ಮತ್ತು ಪ್ರಾರಬ್ಧ ಎಂಬ ಮೂರೂ ಪ್ರಕಾರದ ಕರ್ಮಗಳೂ ಮತ್ತು ಅವುಗಳ ಫಲದಿಂದುಂಟಾಗುವ ಪುನರ್ಜನ್ಮದ ಕೊಂಡಿ ತಪ್ಪುತ್ತದೆ.