ಅವಳೊಬ್ಬಳು ಸಾಫ್ಟ್’ವೇರ್ ಇಂಜಿನಿಯರ್.ಗಂಡ ಮತ್ತು ಮುದ್ದಾದ ಮಗಳ ಸುಂದರ ಸಂಸಾರವಿದೆ ಆಕೆಗೆ.ಗತಿಸಿ ಹೋದ ತಾಯಿಯ ನೆನಪಿನಲ್ಲೇ ಅಮ್ಮನ ಸಾವಿಗೆ ಪರೋಕ್ಷವಾಗಿ ಕಾರಣವಾದ ತನ್ನ ಅಪ್ಪನನ್ನೂ ತನ್ನ ಮನೆಯಲ್ಲೇ ಇರಿಸಿಕೊಂಡಿದ್ದಾಳೆ.ಹೆಸರು ಪಲ್ಲವಿ.ಉದ್ಯೋಗದ ಕಾರಣದಿಂದ ವಿದೇಶಗಳಿಗೂ ಹೋಗಬೇಕಾಗಿ ಬರುತ್ತದೆ.ಸದಾ ಅವಳ ಬೆನ್ನುಲು ಬಾಗಿರುವ ಗಂಡ ರಘು ಏನೂ ಕ್ಯಾತೆ ತೆಗೆಯದೇ ಅವಳು ಹೋಗಬೇಕೆಂದಲ್ಲೆಲ್ಲ ಕಳಿಸುತ್ತಾನೆ.ಪುಟ್ಟ ಮಗು ಪೂರ್ವಿ ಕೂಡಾ ತನಗೆ ತರಬೇಕಾದ ವಸ್ತುಗಳ ದೊಡ್ಡದೊಂದು ಪಟ್ಟಿಯನ್ನು ಕೊಟ್ಟೇ ಅಮ್ಮನನ್ನು ಪ್ರೀತಿಯಿಂದ ಬೀಳ್ಕೊಡುತ್ತದೆ.ಒಮ್ಮೆ ನಾಲ್ಕು ತಿಂಗಳ ಅಮೇರಿಕಾ ಪ್ರವಾಸ ಮಾತ್ರ ಆಕೆಯ ಜೀವನದಲ್ಲಿ ಒಂದು ತಿರುವನ್ನು ತಂದಿಡುತ್ತದೆ.
ಸ್ವತ: ಸಾಫ್ಟ್’ವೇರ್ ಇಂಜಿನಿಯರ್ ಆಗಿರುವ,ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದು ಪ್ರಸಿದ್ಧರಾಗಿರುವ,ಭೈರಪ್ಪನವರ ಕಾದಂಬರಿಗಳಲ್ಲಿನ ಸ್ತ್ರಿ ಪಾತ್ರಗಳ ಬಗ್ಗೆ ಭೈರಪ್ಪನವರ ಮುಂದೆಯೇ ಭಾಷಣ ಮಾಡಿ ಎಲ್ಲರಿಂದ ಭೇಷ್ ಎನ್ನಿಸಿಕೊಂಡಿರುವ ಸಹನಾ ವಿಜಯ್ ಕುಮಾರ್ ಬರೆದಿರುವ ಚೊಚ್ಚಲ ಕಾದಂಬರಿ ‘ಕ್ಷಮೆ’.ಸರಳ ಸುಂದರ ಭಾಷೆಯ ಸರಾಗವಾಗಿ ಓದಿಸಿಕೊಂಡು ಹೋಗುವ ಕಾದಂಬರಿ.
ಕಾದಂಬರಿಯ ಮುಖ್ಯ ಪಾತ್ರ ಪಲ್ಲವಿ ಯಾವುದೋ ಪ್ರಾಜೆಕ್ಟ್ ನಿಮಿತ್ತ ಅಮೇರಿಕಾಕ್ಕೆ ವಿಮಾನದಲ್ಲಿ ಹಾರುವುದರೊಂದಿಗೆ ಕಾದಂಬರಿ ಶುರುವಾಗುತ್ತದೆ.ವಿದ್ಯಾವಂತೆ,ಯಾವುದು ತಪ್ಪು ಯಾವುದು ಸರಿ ಎನ್ನುವುದನ್ನು ವಿಮರ್ಶೆ ಮಾಡುವ ಸಾಮರ್ಥ್ಯವುಳ್ಳವಳು,ಪ್ರೀತಿ ಯಾವುದು ಅನೈತಿಕತೆ ಯಾವುದು ಎಂಬುದನ್ನು ಒರೆಗೆ ಹಚ್ಚುವ ಮನಸ್ಥಿತಿಯುಳ್ಳ ಪಲ್ಲವಿಯ ಸ್ವಗತದಂತಿದೆ ‘ಕ್ಷಮೆ’.ತನ್ನ ಅಪ್ಪ ಇನ್ನೊಬ್ಬ ಹೆಂಗಸಿನ ಜೊತೆ ಅಕ್ರಮ ಸಂಬಂಧ ಹೊಂದಿದ್ದನ್ನು ತಿಳಿದು ಅಮ್ಮ ಆತ್ಮಹತ್ಯೆ ಮಾಡಿಕೊಂಡ ನೆನಪು ಅವಳನ್ನು ಸದಾ ಕಾಡುತ್ತಿರುತ್ತದೆ.ಬಾಲ್ಯದಿಂದಲೂ ಎಲ್ಲದರಲ್ಲೂ ಗೆದ್ದವಳು ಅಮ್ಮನನ್ನು ಕಳೆದುಕೊಂಡದ್ದಕ್ಕಾಗಿ ಅಪ್ಪನನ್ನು ಸೋಲಿಸಲು ನಿರ್ಧರಿಸುತ್ತಾಳೆ.ಆದರೂ ತನ್ನ ಮನೆಯಲ್ಲೇ ಅಪ್ಪನನ್ನು ಸಲಹುತ್ತಿರುತ್ತಾಳೆ.ಅವಳಣ್ಣ ಚರಣ್ ಅಂತೂ ಕ್ಷಣ ಕ್ಷಣಕ್ಕೂ ಅಪ್ಪನ ಮೇಲೆ ದ್ವೇಷ ಕಾರುತ್ತಿರುತ್ತಾನೆ.
ಹದಿ ಹರೆಯದಲ್ಲಿ ಅವಳ ಹೃದಯದಲ್ಲಿ ಚೇತನ್ ಎಂಬವನ ಪ್ರೀತಿ ಮೊಳಕೆಯೊಡೆಯುತ್ತದೆ.ಕಾರಣಾಂತರಗಳಿಂದ ಆತ ಸಿಗದಾದಾದ ಧಿಡೀರನೇ ಲೆಕ್ಚರರ್ ಆಗಿರುವ ರಘುವನ್ನು ಮದುವೆಯಾಗುತ್ತಾಳೆ.ಆದರೆ ಪ್ರಾಜೆಕ್ಟ್’ಗೆಂದು ಅಮೇರಿಕಾಕ್ಕೆ ತೆರಳಿದಾಗ ಅಲ್ಲಿ ಚೇತನ್ ಸಿಕ್ಕಿ ಬಿಡುತ್ತಾನೆ.ಮೊದ ಮೊದಲು ಆತನನ್ನು ದೂರವಿಟ್ಟರೂ ನಂತರ ಆತನ ಸಾಂಗತ್ಯ ಅವಳಿಗೆ ಹಿತ ಕೊಡುತ್ತದೆ.ಆತನ ಜೊತೆ ಇರುವಾಗ ಮನೆ,ಗಂಡ,ಮಗು,ಅಪ್ಪ,ಗತಿಸಿದ ಅಮ್ಮನ ಕಹಿ ನೆನಪು ಯಾವುದೂ ಆಕೆಯನ್ನು ಕಾಡುವುದಿಲ್ಲ.ಗೆಳೆಯನಿಗಿಂತಲೂ ಹತ್ತಿರನಾದ,ಇನಿಯನಿಗಿಂತಲೂ ಎತ್ತರನಾದ ಆತ್ಮೀಯ ಸಖನಾಗುತ್ತಾನೆ ಚೇತನ್.
ಚೇತನ್ ಎದುರಿಗಿದ್ದಾಗ ಎಲ್ಲವನ್ನೂ ಮರೆಯುವ ಅವಳು ಒಂಟಿಯಾಗಿರುವಾಗ ಮಾತ್ರ ಅತ್ಯಂತ ಭೀಕರವಾದ ಮಾನಸಿಕ ತೊಳಲಾಟಕ್ಕೆ ಸಿಲುಕುತ್ತಾಳೆ.ಕಳೆದುಕೊಂಡಿದ್ದ ತನ್ನ ಮೊದಲ ಪ್ರೀತಿ ಮತ್ತೆ ಸಿಗುತ್ತಿದೆ ಎಂಬ ಪುಳಕ ಒಂದೆಡೆಯಾದರೆ ತಾನು ಮಾಡುತ್ತಿರುವುದು ನೈತಿಕ ನೆಲೆಗಟ್ಟಿನಲ್ಲಿ ಸರಿಯೇ?ತನ್ನ ಕುಟುಂಬದವರು ತನಗೆ ಕೊಟ್ಟಿರುವ ಸ್ವಾತಂತ್ರ್ಯವನ್ನು ತಾನು ದುರುಪಯೋಗಪಡಿಸಿಕೊಳ್ಳುತ್ತಿರುವೆನೇ ಎಂಬ ಗೊಂದಲದಲ್ಲಿ ಸಿಲುಕುತ್ತಾಳೆ.”ಸ್ವಂತ ಮನೆ,ಸಂಬಳಗಳೆಲ್ಲ ನಮ್ಮನ್ನು ಕಷ್ಟದಿಂದ ಪಾರು ಮಾಡುತ್ತವಷ್ಟೇ.ಕಷ್ಟ ಇಲ್ಲದಿರೋದೇ ಬೇರೆ,ಸುಖದಿಂದಿರೋದೇ ಬೇರೆ” ಎಂಬ ಜಿಜ್ಞಾಸೆಗಳು ಅವಳ ಮನದಲ್ಲಿ ಮೂಡುತ್ತವೆ.
ತನ್ನನ್ನು ಪ್ರೀತಿಸುವ,ಕಾಪಾಡುವ ಗಂಡನಿದ್ದೂ ಚೇತನ್’ನ ಕಡೆಗೇ ಕ್ರಮೇಣ ವಾಲುತ್ತಾಳೆ.ಆದರೆ ಏರ್ ಪೋರ್ಟ್’ನಲ್ಲಿ ಗಂಡನನ್ನು ಬಲವಾಗಿ ತಬ್ಬಿಕೊಂಡು ‘ಮಿಸ್ ಯೂ ಹನಿ’ ಎಂದು ಹೇಳಿ ಅಮೇರಿಕಾದಲ್ಲಿ ಪರ ಪುರುಷನ ಜೊತೆ ಸರಸವಾಡುವ ಮೌಶಮಿಯಂತೆ ಮತ್ತು ಗಂಡನಿಗೆ ಪಾಠ ಕಲಿಸಲು ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವನ್ನು ಅಬಾರ್ಷನ್ ಮಾಡಿಸುವ ಮಾಲಿನಿಯಂತೆ ತಾನು ಆಗಲಾರೆ ಎಂಬ ನಂಬಿಕೆ ಅವಳಿಗಿದೆ.ಅತ್ತ ಗಂಡ,ಮಗುವನ್ನೂ ಬಿಡಲಾರದೇ ಇತ್ತ ಚೇತನ್’ನ ಸಾಂಗತ್ಯವನ್ನೂ ತೊರೆಯಲಾರದೇ ಸದಾ ಒದ್ದಾಡುತ್ತಾಳೆ.ಆದರೂ ದಿನದಿಂದ ದಿನಕ್ಕೆ ಚೇತನ್’ನ ಕಡೆಗೆ ಅವಳ ಒಲವು ಹೆಚ್ಚುತ್ತಲೇ ಹೋಗುತ್ತದೆ.”ಮದುವೆ ಮಾಡಿಕೊಂಡು ಬಿಡೋಣ ನಾವು ಪಲ್ಲು” ಎಂದು ಚೇತನ್ ಹೇಳಿದಾಗ ಸಾರಾಸಗಟಾಗಿ ತಿರಸ್ಕರಿಸಲು ಸಾಧ್ಯವಾಗುವುದಿಲ್ಲ.ಮೊದಲ ಪ್ರೀತಿ ಅವಳನ್ನು ಮಾನಸಿಕವಾಗಿ ತುಂಬಾ ಹದಗೆಡಿಸುತ್ತದೆ.ಪ್ರಾಜೆಕ್ಟ್ ಮುಗಿಸಿ ಭಾರತಕ್ಕೆ ವಾಪಾಸ್ ಬಂದರೂ ಸದಾ ಚೇತುವಿಗಾಗಿ ಹಂಬಲಿಸುತ್ತಾಳೆ.ಆಗ ಮತ್ತೊಮ್ಮೆ ಅಮೇರಿಕಾಗೆ ತೆರಳುವ ಅವಕಾಶ ಸಿಗುತ್ತದೆ.ಅಲ್ಲಿ ಅವಳ ಮತ್ತು ಚೇತನ್ ಮಧ್ಯೆ ಏನಾಗುತ್ತದೆ ಎಂಬುದನ್ನು ತಿಳಿಯಲು ‘ಕ್ಷಮೆ’ ಓದಬೇಕು.
ಮಹಿಳಾವಾದದ ವ್ಯಾಖ್ಯಾನ ತಿರುಚಲ್ಪಡುತ್ತಿರುವ ಇಂದಿನ ದಿನದಲ್ಲಿ,ಸ್ವಾತಂತ್ರ್ಯಕ್ಕೂ ಸ್ವೇಚ್ಛೆಗೂ ವ್ಯತ್ಯಾಸ ಕಡಿಮೆಯಾಗುತ್ತಿರುವ ಹೈಟೆಕ್ ಯುಗದಲ್ಲಿ ಅವುಗಳ ನಿಜವಾದ ಅರ್ಥವನ್ನು ಮಥಿಸುವ ಕೆಲಸವನ್ನು ಮಾಡಲು ‘ಕ್ಷಮೆ’ ಪ್ರಯತ್ನಿಸುತ್ತದೆ.ತನ್ನ ಬದುಕು ತನ್ನದು,ತನ್ನಿಷ್ಟದ ಮುಂದೆ ಯಾವ ನೈತಿಕತೆಗೂ,ಮೌಲ್ಯಕ್ಕೂ ಬೆಲೆ ಕೊಡಲಾರೆ ಎಂದು ಹೇಳುತ್ತಲೇ ಕಥಾ ನಾಯಕಿ ಮೌಲ್ಯಗಳ ಚೌಕಟ್ಟಿನಿಂದ ಹೊರ ಬರಲಾರದೇ ಒದ್ದಾಡುತ್ತಾಳೆ.ತಾನೂ ಸ್ವೇಚ್ಛಾಚಾರ ಮಾಡಿದರೆ ಉಳಿದವರಿಗೂ ತನಗೂ ಏನು ವ್ಯತ್ಯಾಸ ಉಳಿಯಿತು ಎಂಬ ಅಲೋಚನೆ ಅವಳ ತಲೆಯಲ್ಲಿ ಸದಾ ಕೊರೆಯುತ್ತದೆ.
ಕಾದಂಬರಿಯ ಬಹುತೇಕ ಭಾಗ ಅಮೇರಿಕಾದಲ್ಲಿ ನಡೆಯುತ್ತದಾದರೂ ಅಮೇರಿಕಾದ ಭೌತಿಕ ವರ್ಣನೆ ಎಲ್ಲೂ ಕಂಡು ಬರುವುದಿಲ್ಲ.ಭಾರತೀಯ ಸ್ತ್ರೀವಾದಕ್ಕೂ,ಪಾಶ್ಚಾತ್ಯ ಸ್ತ್ರೀವಾದಕ್ಕೂ ಏನಾದರೂ ವ್ಯತ್ಯಾಸ ಇದೆಯೇ?ಇದ್ದರೆ ಅವೆರಡೂ ಹೇಗೆ ಭಿನ್ನ ಎಂಬುದನ್ನು ಕಾದಂಬರಿ ವಿಮರ್ಶಿಸುವುದಿಲ್ಲ.ಕಾದಂಬರಿಯುದ್ದಕ್ಕೂ ಬರೀ ಪಲ್ಲವಿ ಮತ್ತು ಚೇತನ್ ತುಂಬಿಕೊಳ್ಳುತ್ತಾರೆ.ಬರೀ ಅವರಿಬ್ಬರ ನಡುವಿನ ಮಾತುಕತೆ,ಅಮೇರಿಕಾದಲ್ಲಿ ಅವರ ಸುತ್ತಾಟ,ಪದೇ ಪದೇ ಅವಳು “ಚೇತು ನನ್ನನ್ನು ಬಿಟ್ಟು ಹೋಗ ಬೇಡವೋ” ಎನ್ನುವುದು ಕೆಲವು ಓದುಗರಿಗೆ ಏಕತಾನತೆಯಂತೆ ಭಾಸವಾದರೂ ಆಶ್ಚರ್ಯವಿಲ್ಲ.ಅವಳ ಗಂಡ ರಘುವಿನ ಬಗ್ಗೆ,ಮಗಳು ಪೂರ್ವಿ ಬಗ್ಗೆ ಸ್ವಲ್ಪ ಜಾಸ್ತಿ ಬರೆಯಬೇಕಿತ್ತೇನೋ.
ಮೈಸೂರಿನ ಅಗ್ರಹಾರದ ಸಾಂಪ್ರದಾಯಿಕ ಮನೆಯಲ್ಲಿ ಬೆಳೆದ ಹುಡುಗಿ,ಮದುವೆಯಾಗಿ ಒಂದು ಮಗು ಇರುವವಳು ತನ್ನ ಹಳೆಯ ಪ್ರೇಮಿ ಸಿಕ್ಕಿದೊಡನೆ ಏಕಾಏಕಿ ಬದಲಾಗಿ ಆತನಿಗಾಗಿ ಹಾತೊರೆಯುವುದನ್ನು ಭಾರತದ ಸಾಂಪ್ರದಾಯಿಕ ಕುಟುಂಬಗಳಲ್ಲಿ ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟ.ಆದರೂ ನಾವು ಭಾರತೀಯರು ಯಾವತ್ತೂ ಪ್ರತಿಪಾದಿಸುತ್ತಾ ಬಂದ ಮೌಲ್ಯ,ನಂಬಿಕೆ,ಕುಟುಂಬ ವ್ಯವಸ್ಥೆಯ ಮುಂದೆ ಯಾವುದೂ ದೊಡ್ಡದಲ್ಲ ಎನ್ನುವುದನ್ನು ಕಾದಂಬರಿಯೂ ಒಪ್ಪಿಕೊಳ್ಳುತ್ತದೆ.
ಪಲ್ಲವಿ-ಚೇತನ್’ನ ನಡುವಿನ ಮಾತುಕತೆಯನ್ನು ಸ್ವಲ್ಪ ಎಳೆದಿರುವಂತೆ ಭಾಸವಾಗುತ್ತದೆ.ಇಡೀ ಕಾದಂಬರಿಯನ್ನು ಅವರಿಬ್ಬರ ಸುತ್ತಲೇ ಸುತ್ತಿಸುವುದನ್ನು ಬಿಟ್ಟು ಇತರ ಪಾತ್ರಗಳನ್ನೂ ಸ್ವಲ್ಪ ಜಾಸ್ತಿ ಪೋಷಿಸಿದ್ದರೆ ಚೆನ್ನಾಗಿರುತ್ತಿತ್ತು ಎಂಬುದು ನನ್ನ ಅನಿಸಿಕೆ.ಅವರಿಬ್ಬರ ನಡುವಿನ ಕಥೆಯನ್ನು ಕಡಿಮೆ ಪುಟಗಳಲ್ಲೇ ಇನ್ನೂ ಪರಿಣಾಮಕಾರಿಯಾಗಿ ಹೇಳಬಹುದಿತ್ತೇನೋ.ಕಾದಂಬರಿಯಲ್ಲಿ ಬಳಸಿರುವ ಭಾಷೆಯನ್ನು ಗಮನಿಸಿದಾಗ ಸಹನಾ ಅವರು ಭೈರಪ್ಪನವರ ಕಾದಂಬರಿಗಳಿಂದ ಸ್ಫೂರ್ತಿ ಪಡೆದು ‘ಕ್ಷಮೆ’ ಬರೆದಿದ್ದಾರೆಂದು ಓದುಗರಿಗೆ ಅನ್ನಿಸಲೂಬಹುದು.
ಮೊದಲಿನಿಂದಲೂ ತಮ್ಮ ಲೇಖನಗಳ ಮೂಲಕ ಢೋಂಗಿ ಮಹಿಳಾವಾದಿಗಳ ಪೊಳ್ಳು ಸಿದ್ಧಾಂತಗಳನ್ನು ಅನಾವರಣಗೊಳಿಸುತ್ತಲೇ ಬಂದಿರುವ ಸಹನಾ ವಿಜಯ್ ಕುಮಾರ್ ‘ಕ್ಷಮೆ’ಯ ಮೂಲಕ ತಮ್ಮ ವಿಚಾರಧಾರೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಳುವಲ್ಲಿ ಸಫಲರಾಗಿದ್ದಾರೆ.ಭೈರಪ್ಪನವರಿಂದ ಕಾದಂಬರಿಯ ಬಗ್ಗೆ ಮೆಚ್ಚುಗೆಯನ್ನೂ ಪಡೆದಿದ್ದಾರೆ.ವಿಷಯವನ್ನು ಕಗ್ಗಂಟಾಗಿಸದೇ ಒಂದೇ ಸಮನೇ ಕಾದಂಬರಿ ಓದಿಸಿಕೊಂಡು ಹೋಗುತ್ತದೆ.ಚೊಚ್ಚಲ ಕಾದಂಬರಿಯನ್ನು ಪರಿಣಾಮಕಾರಿಯಾಗಿ ಓದುಗರಿಗೆ ನೀಡುವಲ್ಲಿ ಸಫಲರಾಗಿದ್ದಕ್ಕೆ ಸಹನಾ ಅಭಿನಂದನಾರ್ಹರು.ಅವರ ಲೇಖನಿಯಿಂದ ಇನ್ನಷ್ಟು ಕಾದಂಬರಿಗಳು ಹೊರಬರಲಿ.‘ಕ್ಷಮೆ’ಯನ್ನು ಒಮ್ಮೆ ಓದಿ.