ಇತಿಹಾಸದ ಪುಟಗಳಲ್ಲಿ ಕೆಂಪು ಅಕ್ಷರಗಳಲ್ಲಿ ಅಚ್ಚಾಗಿರುವ ಆ ಎರಡು ದಿನಗಳನ್ನು ಯಾರು ತಾನೆ ಮರೆಯಲು ಸಾಧ್ಯ ಹೇಳಿ. ಜಗತ್ತಿಗೆ ಜಗತ್ತೇ ನಿಬ್ಬೆರಗಾಗಿ ಕಣ್ಣು ಬಾಯಿ ಬಿಟ್ಟುಕೊಂಡು ಭಯಭೀತರಾಗಿ ಅಯ್ಯೋ ಇದೆಂತಾ ಅವಗಡ ಸಂಭವಿಸಿತು ಎಂದು ಬಿಸಿಯುಸಿರು ಬಿಟ್ಟ ಕ್ಷಣಗಳವು. ಅದೆಷ್ಟೋ ಮುಗ್ಧ ಜೀವಿಗಳು ಪ್ರಾಣ ಕಳೆದುಕೊಂಡವು. ದೊಡ್ಡವರ ಹೋರಾಟಕ್ಕೆ ಏನೂ ತಿಳಿಯದೆ ಬಲಿಯಾದ ಜೀವಗಳದೆಷ್ಟೋ. ಅಂದು ಜಗತ್ತಿನಲ್ಲೇ ಪ್ರಪ್ರಥಮವಾಗಿ ಪರಮಾಣು ಬಾಂಬ್ ದಾಳಿಗೆ ಜಪಾನ್ ದೇಶದ ಎರಡು ಪ್ರಮುಖ ಪಟ್ಟಣಗಳು ನಲುಗಿ ಹೋಗಿದ್ದವು. ೧೯೪೫ನೇ ಇಸವಿ ಆಗಸ್ಟ್ ೬ನೇ ತಾರೀಖು ಸೋಮವಾರದಂದು ಹಿರೋಷಿಮಾ ನಗರದ ಮೇಲೆ ವಿಶ್ವದ ದೊಡ್ಡಣ್ಣ ಅಮೇರಿಕ ಲಿಟ್ಲ್ ಬಾಯ್ ಎಂಬ ಹೆಸರಿನ ಪರಮಾಣು ಶಸ್ತ್ರಾಸ್ತ್ರ ಪ್ರಯೋಗಿಸಿತು. ಅದಾಗಿ ಎರಡೇ ದಿವಸದ ನಂತರ ಅಂದರೆ ಆಗಸ್ಟ್ ೯ರಂದು ನಾಗಸಾಕಿ ನಗರದ ಮೇಲೆ ಫ್ಯಾಟ್’ಮ್ಯಾನ್ ಎಂಬ ಮತ್ತೊಂದು ಬಾಂಬನ್ನು ಎಸೆದಿತ್ತು.
ಹಿರೋಷಿಮಾ ನಗರದ ಮೇಲೆ ಮೋಡಗಳು ಆವರಿಸಿದ್ದರಿಂದ ಅಮೇರಿಕ ಮಿಲಿಟರಿ ಪಡೆ ಬಾಂಬ್ ದಾಳಿಗೆ ಸೂಕ್ತವಾದ ದಿನಕ್ಕಾಗಿ ಕಾಯುತ್ತಿತ್ತು. ಆಗಸ್ಟ್ ೬ನೇ ತಾರೀಖು ಹಿರೋಷಿಮಾ ನಗರದ ಮೇಲೆ ಸೂರ್ಯ ನಗುತ್ತಿದ್ದ. ಆಕಾಶದಲ್ಲಿ ಅಷ್ಟೇನು ಮೋಡಗಳಿರಲಿಲ್ಲ. ಹಾಗಾಗಿ ಸೂಕ್ತ ಸಮಯಕ್ಕೆ ಕಾದು ಕುಳಿತಿದ್ದ ಅಮೇರಿಕ ಮಿಲಿಟರಿ ಪಡೆ ಆಗಸ್ಟ್ ೬ನೇ ತಾರೀಖಿನಂದು ದಾಳಿ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತು. ಕರ್ನಲ್ ಪಾಲ್ ಟಿಬೆಟ್ಸ್(Paul Tibbets) ಎಂಬಾತನ ವಿಮಾನ ಚಾಲಕತ್ವದಲ್ಲಿ ಬಿ-29(B-29) ಎನೊಲಾ ಗಾಯ್ ಎಂಬ ಬಾಂಬರ್ ವಿಮಾನವು ೧೦ ಅಡಿ ಉದ್ದದ ಹಾಗೂ ೪,೪೦೦ ಕೆಜಿ ತೂಕದ ಲಿಟ್ಲ್ ಬಾಯ್ ಎಂಬ ಪರಮಾಣು ಶಸ್ತ್ರಾಸ್ತ್ರವನ್ನು ಹೊತ್ತು ಜಪಾನ್’ನ ಹಿರೋಷಿಮಾ ನಗರದತ್ತ ಸಾಗಿತು. ಲಿಟ್ಲ್ ಬಾಯ್ ಬಾಂಬ್ ೬೪ ಕೆಜಿಯಷ್ಟು ಯುರೇನಿಯಂ-235 ಹೊಂದಿತ್ತು. ೮.೧೫ರ ವೇಳೆಗೆ ಮಾಡಬೇಕಿದ್ದ ಬಾಂಬ್ ಬಿಡುಗಡೆಯು ಯೋಜಿಸಿದಂತೆಯೇ ಸಾಗಿತು. ಲಿಟ್ಲ್ ಬಾಯ್ ಪೂರ್ವನಿರ್ಧಾರಿತ ಆಸ್ಫೋಟದ ಎತ್ತರಕ್ಕೆ ವಿಮಾನದಿಂದ ಬೀಳಲು ೫೭ ಸೆಕೆಂಡುಗಳನ್ನು ತೆಗೆದುಕೊಂಡಿತು. ಲಿಟ್ಲ್ ಬಾಯ್ ಎಂಬ ದೈತ್ಯ ಹಿರೋಷಿಮಾ ನಗರವನ್ನು ತನ್ನ ಅಪಾರವಾದ ಶಕ್ತಿಯಿಂದ ಬಹುತೇಕ ನಾಶಗೊಳಿಸಿದ. ಜಗತ್ತಿನಲ್ಲೇ ಪ್ರಪ್ರಥಮ ಅಣ್ವಸ್ತ್ರ ದಾಳಿ ಹಿರೋಷಿಮಾ ನಗರದ ಮೇಲೆ ಅಂದು ನಡೆದು ಹೋಗಿತ್ತು.
ಅಸಲಿಗೆ ಈ ಬಾಂಬ್’ಗಳನ್ನು ತಯಾರಿಸಲು ಸಹಾಯ ಮಾಡಿದ ವ್ಯಕ್ತಿಯ ಬಗ್ಗೆ ನಿಮಗೆ ಒಂದಷ್ಟು ಮಾಹಿತಿ ನೀಡುತ್ತೇನೆ ಕೇಳಿ. ಅಣು ಬಾಂಬ್ ಜನಕ ಎಂದೇ ಹೆಸರುವಾಸಿಯಾಗಿರುವ ಭೌತವಿಜ್ಞಾನಿ ಜೆ ರಾಬರ್ಟ್ ಓಪನ್’ಹೀಮರ್(J. Robert Oppenheimer) ನಿರ್ದೇಶನದಲ್ಲಿ ಈ ಅಣು ಬಾಂಬ್’ಗಳು ತಯಾರಾಗಿದ್ದವು. ಇದಕ್ಕೆ ಅಗತ್ಯವಿದ್ದ ಎಲ್ಲಾ ವೈಜ್ಞಾನಿಕ ಸಂಶೋಧನೆಗಳಿಗೆ ಈತನೇ ಮುಖ್ಯ ಪಾತ್ರಧಾರಿ. ಮ್ಯಾನ್’ಹಾಟ್ಟನ್ ಎಂಬ ಯೋಜನೆ ಅಡಿಯಲ್ಲಿ ಅಮೇರಿಕ ಮೊದಲ ಪರಮಾಣು ಬಾಂಬ್’ಗಳನ್ನು ವಿನ್ಯಾಸಗೊಳಿಸಿತ್ತು. ಲಿಟ್ಲ್ ಬಾಯ್ ಎಂದು ಕರೆಯಲ್ಪಟ್ಟ ಅಣು ಬಾಂಬ್ ಯುರೇನಿಯಂ-235 ನಿಂದ ರೂಪಿಸಲಾಗಿತ್ತು. ೧೯೪೫ರ ಜುಲೈ ೧೬ರಂದು ನ್ಯೂ ಮೆಕ್ಸಿಕೋದ ಅಲಾಮಾಗೊರ್ಡೋ ಸಮೀಪವಿರುವ ಟ್ರಿನಿಟಿ ಸೈಟ್’ನಲ್ಲಿ ಪರಮಾಣು ಬಾಂಬಿನ ಮೊದಲ ಪರೀಕ್ಷಾ ಪ್ರಯೋಗವನ್ನು ನಡೆಸಲಾಗಿತ್ತು.
ಆಲ್ಬರ್ಟ್ ಐನ್’ಸ್ಟೈನ್ ಅಣ್ವಸ್ತ್ರ ತಯಾರಿಕೆಯಲ್ಲಿ ನೇರವಾಗಿ ಭಾಗವಹಿಸದಿದ್ದರೂ ಐನ್’ಸ್ಟೈನ್’ನ ಸಾಪೇಕ್ಷ ಸಿದ್ಧಾಂತ ಅಣ್ವಸ್ತ್ರ ತರಯಾರಿಸಲು ನಡೆಯುತ್ತಿದ್ದ ಎಲ್ಲಾ ಬೆಳವಣಿಗೆಗಳಿಗೆ ಹಾಗೂ ಅಭಿವೃದ್ಧಿಗೆ ಸಹಾಯಕವಾಗಿತ್ತು. ೧೯೦೫ ರಲ್ಲಿ ಐನ್’ಸ್ಟೈನ್ ತನ್ನ ಸಾಪೇಕ್ಷ ಸಿದ್ಧಾಂತದಲ್ಲಿ ಒಂದು ಪ್ರಮುಖ ಜಿಜ್ಞಾಸೆಯನ್ನು ಮಾಡಿದ್ದಾನೆ. ಅದೇನೆಂದರೆ ಒಂದು ಸಣ್ಣ ಕಣದಿಂದ ಅಥವಾ ಪರಮಾಣುವಿನಿಂದ (matter) ಅಪಾರವಾದ ಶಕ್ತಿಯನ್ನು ಹೊರ ತೆಗೆಯಲು ಸಾಧ್ಯವಿದೆ ಎಂದು. ಇದನ್ನು ಐನ್’ಸ್ಟೈನ್ ತನ್ನ ಖ್ಯಾತ ಸಮೀಕರಣ(E=MC2)ದಲ್ಲಿ ವಿವರಿಸಿದ್ದಾನೆ. ಈ ಸಮೀಕರಣ ಪರಮಾಣು ಬಾಂಬಿನ ಮೂಲ ತತ್ವವನ್ನು ಪ್ರತಿಬಿಂಬಿಸುತ್ತದೆ. ಆದರೆ ಐನ್’ಸ್ಟೈನ್’ಗೆ ಯಾವುದೇ ರೀತಿಯ ಬಾಂಬ್ ತಯಾರಿಸುವ ಉದ್ದೇಶವಿರಲಿಲ್ಲ. ಅಸಲಿಗೆ ಐನ್’ಸ್ಟೈನ್ ಶಾಂತಿ ಪ್ರಿಯನಾಗಿದ್ದ. ಆತ ತನ್ನ E=MC2 ಸಮೀಕರಣವನ್ನು ಬಾಂಬ್ ತಯಾರಿಸುವ ಉದ್ದೇಶದಿಂದ ರಚಿಸಿರಲಿಲ್ಲ. ಅದೂ ಅಲ್ಲದೇ ಜರ್ಮನಿಯ ನಾಜಿ(Nazi)ಗಳು ಒಂದು ಶಕ್ತಿಯುತವಾದ ದೊಡ್ಡ ಶಸ್ತ್ರವನ್ನು ತಯಾರಿಸಲು ಕಾರ್ಯಪ್ರವೃತ್ತರಾಗಿದ್ದಾರೆ ಹಾಗೂ ಅದುವೆ ಅಣ್ವಸ್ತ್ರ(Atom Bomb) ಆಗಿರಬಹುದು ಎಂದು ಐನ್’ಸ್ಟೈನ್ ಅಮೇರಿಕಾದ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್’ಗೆ ಒಂದು ಪತ್ರದ ಮೂಲಕ ಎಚ್ಚರಿಕೆಯ ಸಂದೇಶವನ್ನು ನೀಡಿರುತ್ತಾನೆ.
ಹಿರೋಷಿಮಾ ಜಪಾನ್’ನ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿತ್ತು. ಅದಲ್ಲದೇ ಹಿರೋಷಿಮಾ ಜಪಾನ್’ನ ಎರಡನೇ ಸೇನಾ ಕೇಂದ್ರ ಕಾರ್ಯಾಲಯವನ್ನು ಹೊಂದಿತ್ತು. ಇದೆಲ್ಲದರ ಜೊತೆಗೆ ಸಂವಹನಗಳ ಕೇಂದ್ರ ಬಿಂದು ಹಾಗೂ ಶೇಖರಣಾ ಉಗ್ರಾಣವಾಗಿದ್ದರಿಂದ ಅಮೇರಿಕ ಹಿರೋಷಿಮಾ ನಗರವನ್ನೇ ತನ್ನ ಮುಖ್ಯ ಗುರಿಯನ್ನಾಗಿಟ್ಟುಕೊಂಡು ಮೊದಲ ದಾಳಿಯನ್ನು ನಡೆಸಿತು. ೧೯೪೫ರ ಮೇ ೧೦-೧೧ ರಂದು ಜೆ ರಾಬರ್ಟ್ ಓಪನ್’ಹೀಮರ್(J. Robert Oppenheimer) ನೇತೃತ್ವದಲ್ಲಿ ಗುರಿ ಸಮಿತಿಯು ಕ್ಯೋಟೋ, ಹಿರೋಷಿಮಾ, ಯೋಕೋಹಾಮಾ ನಗರಗಳನ್ನು ಮತ್ತು ಕೊಕುರಾದಲ್ಲಿನ ಶಸ್ತ್ರಾಸ್ತ್ರ ಸಂಗ್ರಹವನ್ನು ಸಂಭವನೀಯ ಗುರಿಗಳಾಗಿ ಶಿಫಾರಸ್ಸು ಮಾಡಿತು.
ಎರಡನೇ ಜಾಗತಿಕ ಸಮರದ ಅವಧಿಯಲ್ಲಿ ಹಿರೋಷಿಮಾ ನಗರ ಕೆಲವೊಂದು ಕೈಗಾರಿಕಾ ಮತ್ತು ಸೇನಾ ಪ್ರಾಮುಖ್ಯತೆಯ ಒಂದು ಪ್ರಮುಖ ನಗರವಾಗಿತ್ತು. ದಕ್ಷಿಣ ಜಪಾನ್’ನ ಸಂಪೂರ್ಣ ರಕ್ಷಣೆಯನ್ನು ಹಿರೋಷಿಮಾ ನಗರದಲ್ಲಿದ್ದ ಸೇನಾ ಕೇಂದ್ರ ಕಾರ್ಯಾಲಯವು ನೋಡಿಕೊಳ್ಳುತ್ತಿದ್ದವು. ಈ ನಗರವು ಸೈನ್ಯಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಗೆ ಕೇಂದ್ರಬಿಂದುವಾಗಿತ್ತು. ಜಪಾನ್ ಸೈನ್ಯದ ಪ್ರಮುಖ ಬೆಳವಣಿಗೆಗಳು ಹಾಗೂ ನಿರ್ಧಾರಗಳನ್ನು ಹಿರೋಷಿಮಾ ಸೈನ್ಯ ಕೇಂದ್ರ ಕಾರ್ಯಾಲಯವೇ ನೋಡಿಕೊಳ್ಳುತ್ತಿತ್ತು. ಯುದ್ಧಕ್ಕೆ ಮುನ್ನ ಹಿರೋಷಿಮಾ ನಗರದ ಜನಸಂಖ್ಯೆಯು 3,81,000 ಕ್ಕೂ ಹೆಚ್ಚಿತ್ತು. ಆದರೆ ಅಣು ಬಾಂಬ್ ದಾಳಿ ನಡೆದ ಕೆಲವು ದಿನಗಳ ಹಿಂದೆ ಜನಸಂಖ್ಯೆ ಅಂಕಿ ಅಂಶಗಳ ಪ್ರಕಾರ ಕಡಿಮೆಯಾಗಿತ್ತು. ಜಪಾನ್ ಸರ್ಕಾರದ ಆದೇಶದಿಂದ ಜನರು ಹಿರೋಷಿಮಾ ನಗರದಿಂದ ಸ್ಥಳಾಂತರಗೊಂಡಿದ್ದರು.
ನಾಗಸಾಕಿ ಜಪಾನ್’ನ ದಕ್ಷಿಣದ ಅತಿ ದೊಡ್ಡ ಸಮುದ್ರ ನೆಲೆಗಳ ಪೈಕಿ ಒಂದೆನಿಸಿಕೊಂಡಿದೆ. ಇಲ್ಲಿ ಫಿರಂಗಿಗಳು, ಹಡಗುಗಳು, ಸೇನಾ ಉಪಕರಣ ಹಾಗೂ ಇತರ ಯುದ್ಧ ಸಾಮಗ್ರಿಗಳ ಉತ್ಪಾದನೆ ಮಾಡಲಾಗುತ್ತಿತ್ತು. ಇದರಿಂದಾಗಿ ಯುದ್ಧ ಕಾಲದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿತ್ತು. ನಾಗಸಾಕಿ ನಗರ ಜಪಾನ್’ನ ಹಳೇ ಶೈಲಿಯಲ್ಲಿ ನಿರ್ಮಾಣವಾಗಿತ್ತು. ಕಟ್ಟಡಗಳಲ್ಲಿ ಜಪಾನ್’ನ ಹಳೆಯ ಶೈಲಿಗಳೇ ಕಾಣಸಿಗುತ್ತವೆ. ನಾಗಸಾಕಿ ಅಣುಬಾಂಬ್ ದಾಳಿಗೂ ಮುಂಚೆ ಯಾವುದೇ ಬೃಹತ್ ದಾಳಿಗಳಿಗೆ ಒಳಗಾಗಿರಲಿಲ್ಲ. ಅಲ್ಲಿನ ಕಟ್ಟಡಗಳು ಬಾಂಬ್ ದಾಳಿಯನ್ನು ತಡೆದುಕೊಳ್ಳುವಷ್ಟು ಸಧೃಡವಾಗಿರಲಿಲ್ಲ.
ಬಾಂಬ್ ದಾಳಿಗಳಾದ ಮೊದಲ ಎರಡರಿಂದ ನಾಲ್ಕು ತಿಂಗಳುಗಳ ಒಳಗಾಗಿ, ಅದರ ತೀವ್ರವಾದ ಪ್ರಭಾವಗಳು ಹಿರೋಷಿಮಾದಲ್ಲಿ 90,000–166,000 ಜನರನ್ನು, ಮತ್ತು ನಾಗಸಾಕಿಯಲ್ಲಿ 60,000–80,000 ಜನರನ್ನು ಕೊಂದಿತು. ಪ್ರತಿ ನಗರದಲ್ಲೂ ಸಂಭವಿಸಿದ ಸಾವು ನೋವುಗಳ ಪೈಕಿ ಸ್ಥೂಲವಾಗಿ ಅರ್ಧದಷ್ಟು ಮೊದಲ ದಿನದಂದೇ ಸಂಭವಿಸಿದವು. ಹಿರೋಷಿಮಾದ ಪ್ರಿಫೆಕ್ಟಿನ ಆಡಳಿತ ಪ್ರಾಂತಕ್ಕೆ ಸಂಬಂಧಿಸಿದ ಆರೋಗ್ಯ ಇಲಾಖೆಯು ಅಂದಾಜು ಮಾಡಿರುವ ಪ್ರಕಾರ, ಸ್ಫೋಟದ ದಿನದಂದು ಸತ್ತ ಜನರ ಪೈಕಿ 60%ನಷ್ಟು ಜನರು ಥಟ್ಟನೆ ಎದ್ದ ಉರಿ ಅಥವಾ ಜ್ವಾಲೆಯ ಸುಟ್ಟ ಗಾಯಗಳಿಂದ ಸತ್ತರೆ, 30%ನಷ್ಟು ಜನರು ಬೀಳುತ್ತಿರುವ ಭಗ್ನಾವಶೇಷದಿಂದ ಮತ್ತು 10%ನಷ್ಟು ಜನರು ಇತರ ಕಾರಣಗಳಿಂದ ಸತ್ತರು. ಇದನ್ನು ಅನುಸರಿಸಿಕೊಂಡು ಬಂದ ತಿಂಗಳುಗಳ ಅವಧಿಯಲ್ಲಿ, ಸುಟ್ಟಗಾಯಗಳು, ವಿಕಿರಣದ ಕಾಯಿಲೆ, ಮತ್ತು ಅಸ್ವಸ್ಥತೆಯಿಂದ ಜಟಿಲಗೊಳಿಸಲ್ಪಟ್ಟ ಇತರ ಗಾಯಗಳ ಪ್ರಭಾವದಿಂದ ಬೃಹತ್ ಸಂಖ್ಯೆಗಳಲ್ಲಿ ಜನರು ಸತ್ತರು. ಮರಣಕ್ಕೆ ಸಂಬಂಧಿಸಿದ ತತ್‌ಕ್ಷಣದ ಮತ್ತು ಅಲ್ಪಾವಧಿಯ ಕಾರಣಗಳ ಒಟ್ಟಾರೆ ಪ್ರಮಾಣದ ಒಂದು ತೋರುವ ಅಂದಾಜಿನ ಅನುಸಾರ, 15–20%ನಷ್ಟು ಜನರು ವಿಕಿರಣದ ಕಾಯಿಲೆಯಿಂದ ಸತ್ತರೆ, 20–30%ನಷ್ಟು ಜನರು ಥಟ್ಟನೆ ಎದ್ದ ಉರಿಯ ಸುಟ್ಟಗಾಯಗಳಿಂದ, ಮತ್ತು 50–60%ನಷ್ಟು ಜನರು ಅಸ್ವಸ್ಥತೆಯಿಂದ ಜಟಿಲಗೊಳಿಸಲ್ಪಟ್ಟ ಇತರ ಗಾಯಗಳಿಂದ ಸತ್ತರು.
ಬಾಂಬ್ ದಾಳಿಯಾದ ಕೆಲವು ದಿನಗಳ ನಂತರ ಜಪಾನ್ ತನ್ನ ಶರಣಾಗತಿಯನ್ನು ಘೋಷಿಸಿತು. ಈ ಅಣ್ವಸ್ತ್ರ ಪ್ರಯೋಗದ ಫಲಿತಾಂಶದಿಂದ ನಲುಗಿ ಹೋದ ಜಪಾನ್ ಜಗತ್ತಿನ ಮುಂದೆ ಒಂದಷ್ಟು ಶರತ್ತುಗಳನ್ನಿಟ್ಟಿತು. ಇದರ ಪರಿಣಾಮವಾಗಿ ಹಲವಾರು ಪರಮಾಣು ಶಸ್ತ್ರಾಸ್ತ್ರಗಳ ಒಪ್ಪಂದಗಳು ಹುಟ್ಟಿಕೊಂಡವು. ಮುಂದೆ ಈ ರೀತಿಯ ದಾಳಿಗಳನ್ನು ತಡೆಯುವುದೇ ಈ ಒಪ್ಪಂದಗಳ ಮುಖ್ಯ ಉದ್ದೇಶವಾಗಿತ್ತು. ಅದೇನೆ ಇರಲಿ ಎರಡನೇ ಮಹಾಯುದ್ಧದಲ್ಲಿ ಇಂತದ್ದೊಂದು ಪ್ರಯೋಗವನ್ನು ಮಾಡಿದ ಅಮೇರಿಕಾ ಜಗತ್ತಿನ ಹಲವಾರು ದೇಶಗಳು ಅಣ್ವಸ್ತ್ರ ಪರೀಕ್ಷೆ ಮಾಡಲು ನಾಂದಿ ಹಾಡಿತು. ಮುಂದೊಂದು ದಿನ ಮೂರನೇ ಮಹಾಯುದ್ಧ ನಡೆದರೆ ಜಗತ್ತಿನ ಹಲವಾರು ದೇಶಗಳು ಅಣ್ವಸ್ತ್ರ ಪ್ರಯೋಗ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಂದೇ ಜಗತ್ತಿನ ಅಂತ್ಯವಾಗುವುದೇನೋ !
ದಾಳಿ ನಡೆದು ಏಳು ದಶಕಗಳೇ ಕಳೆದಿದೆ. ಆದರೆ ಇಂದಿಗೂ ಹಿರೋಷಿಮಾ ಮತ್ತು ನಾಗಸಾಕಿ ನಗರಗಳಲ್ಲಿ ವಿಕಿರಣದ ಪರಿಣಾಮ ಹಾಗೆಯೇ ಇದೆ. ಅದೆಷ್ಟೋ ಜನ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದಾರೆ. ಯುದ್ಧಗಳು ಹಲವಾರು ಮುಗ್ಧ ಜನರ ಜೀವವನ್ನು ತೆಗೆದುಕೊಂಡು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಮನುಷ್ಯನ ಹೊಸ ಸಂಶೋಧನೆಗಳು ಹೇಗೆ ಮನುಷ್ಯನನ್ನೆ ಕೊಂದು ಗಹಗಹಿಸಿ ನಗುತ್ತವೆ ಅನ್ನುವುದಕ್ಕೆ ಎರಡನೆಯ ಮಹಾಯುದ್ಧ ಒಂದು ಉದಾಹರಣೆ.