ಅಂಕಣ

ನಿಮ್ಮ ಮಕ್ಕಳಿಗೆ ಕನ್ನಡ ಕಲಿಸಿ…

ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು. ಹೌದು ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ. ಮನೆಯಲ್ಲೇ ಕಲಿಕೆ ಪ್ರಾರಂಭವಾಗುವುದು. ಅದೇನೇ ಮೊದಲು ಕಲಿತರೂ ತಾಯಿಯೇ ಗುರು. ಮುಂಚೆಯೆಲ್ಲ ಮನೆಯಲ್ಲೇ ಹಲವಾರು ಕಲಿಕೆಗಳು ಪ್ರಾರಂಭವಾಗಿ ಒಂದು ಹಂತಕ್ಕೆ ಮುಗಿದಿರುತ್ತಿದ್ದವು‌. ಆದರೆ ಈಗ ಕಾಲ ಬದಲಾಗಿದೆ. ತಂದೆ ತಾಯಿಗೆ ಸಮಯ ಇಲ್ಲ. ಮನೆಯಲ್ಲಿ ಹೇಳಿ ಕೊಡಲು  ಬಹಳ ಕಷ್ಟ. ಇಡೀ ದಿನ ತಂದೆ ತಾಯಿ ಇಬ್ಬರೂ ಹೊರಗೆ ಹೋಗಿ ದುಡಿಯುವ ಪರಿಸ್ಥಿತಿಯಿಂದಾಗಿ ಮಕ್ಕಳೊಟ್ಟಿಗೆ ಕಾಲ ಕಳೆಯಲು ಸಮಯವಿಲ್ಲ.  ಹಾಗಾಗಿಯೇ ಬಹಳಷ್ಟು ಬೇಬಿ ಸಿಟ್ಟಿಂಗ್’ಗಳು ಬೆಂಗಳೂರಿನಲ್ಲಿ ತಲೆಯೆತ್ತುತ್ತಲೇ ಇವೆ. ಬೆಂಗಳೂರಿನಲ್ಲಿ ಕನ್ನಡದ ಪಾಡನ್ನು  ಕೇಳುವವರೇ ಇಲ್ಲ ಬಿಡಿ. ಇಬ್ಬರು ಕನ್ನಡಿಗರು ಎದುರಾದರೂ ಅವರು ಮಾತನಾಡುವ ಭಾಷೆ ಆಂಗ್ಲ ಭಾಷೆ. ಎಲ್ಲೆಲ್ಲೂ ಕನ್ನಡವೊಂದನ್ನು ಬಿಟ್ಟು ಬೇರೆ ಭಾಷೆಗಳದ್ದೆ ಕಾರುಬಾರು.

ಬೆಂಗಳೂರಲ್ಲಿ ಹುಟ್ಟಿ ಬೆಳೆವ ಮಕ್ಕಳು ಸಹಜವಾಗಿಯೇ ಬೇರೆ ಭಾಷೆಗಳನ್ನು ಕಲಿತು ಬಿಡುತ್ತವೆ. ಎಲ್ಲ ಭಾಷೆ ಕಲಿತು ಜೊತೆಗೆ‌ ಕನ್ನಡ ಏನೋ ಅಲ್ಪ ಸ್ವಲ್ಪ ನೆನಪಿಟ್ಟುಕೊಂಡು ಎಲ್ಲೋ‌ ಬೇಕಾದಾಗ ಬಡ ಬಡಿಸುತ್ತಾ ಮಾತನಾಡುತ್ತವೆ. ಪಾಪ ಇದಕ್ಕೆ ಮಕ್ಕಳು ಕಾರಣರಲ್ಲ ಬಿಡಿ. ಇದಕ್ಕೆ ಕಾರಣ ಪೋಷಕರೇ. ಮಕ್ಕಳ‌ ಮೇಲೆ ಚಿಕ್ಕ ವಯಸ್ಸಿನಿಂದಲೂ ಪೋಷಕರು ತಮ್ಮ ಅತಿಯಾದ ಆಸೆಗಳ ದೊಡ್ಡ ಭಾರವನ್ನು ಹೊರಿಸುತ್ತಾರೆ. ಆ ಆಸೆಗಳನ್ನು ಮಕ್ಕಳು ತಮಗೆ ಇಷ್ಟವಿಲ್ಲದಿದ್ದರೂ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ. ಪೋಷಕರು ಒಂದು ವಿಷಯವನ್ನು ಗಮನ ಇಟ್ಟುಕೊಳ್ಳಬೇಕು. ನಿಮ್ಮ ಮಕ್ಕಳು ನಿಮ್ಮ ಕೈಯಲ್ಲಿರುವ ಗ್ಯಾಡ್ಜೆಟ್’ಗಳಲ್ಲ ನೀಮಗೆ ಇಷ್ಟ ಬಂದಂತೆ‌ ಆಡಿಸಲು.

ನಾವು ಚಿಕ್ಕವರಿದ್ದಾಗ ನಮಗೆ ಮೊದಲು‌ ಹೇಳಿ ಕೊಟ್ಟ ಮನೆ ಪಾಠಗಳು ಕನ್ನಡದಲ್ಲಿದ್ದವು. ಕನ್ನಡ ಸಂಖ್ಯೆಗಳು, ಕನ್ನಡ ಅಕ್ಷರಗಳು, ಮಾಸಗಳ ಹೆಸರು, ಋತುಗಳ ಹೆಸರು, ಹೀಗೆ ಬಹಳಷ್ಟು ವಿಷಯಗಳು ನಮ್ಮ ಮೆದುಳನ್ನು ಹೊಕ್ಕುತ್ತಿದ್ದವು. ಆದರೆ ಈಗ ಬೇಬಿ ಸಿಟ್ಟಿಂಗ್’ನಿಂದ ಹಿಡಿದು ಪ್ರಾಥಮಿಕ ಶಾಲಾ ದಿನಗಳವರೆಗೂ ಬರೀ‌ ಆಂಗ್ಲ ಭಾಷೆಯದ್ದೇ ಹವಾ. ಕನ್ನಡ ಕಲಿತು ಪ್ರಯೋಜನವಿಲ್ಲ ಎಂಬ ಉಢಾಫೆಯ ಮಾತು. ಶಾಲೆಯಲ್ಲಿ ಸಂಪೂರ್ಣ ಆಂಗ್ಲ ಭಾಷೆಯದ್ದೆ ದರ್ಬಾರ್ ಆದರೆ ಮನೆಯಲ್ಲಿ ಪೋಷಕರಿಗೆ ಕನ್ನಡ ಹೇಳಿಕೊಡಲು ಸಮಯವಿಲ್ಲ.‌ ಒಂದು ವೇಳೆ ಸಮಯ ಸಿಕ್ಕರೂ ಅವರೂ ಹೇಳಿಕೊಡುವುದು ಏ ಬಿ ಸಿ ಡಿ ಯನ್ನೇ ಹೊರತು‌ ನಮ್ಮ ಭಾಷೆಯನ್ನಲ್ಲ.

ನೀವು ಈಗಿನ‌ ಕಾಲದ ಮಕ್ಕಳೊಟ್ಟಿಗೆ ಸ್ವಲ್ಪ ಕಾಲ ಕಳೆದು ನೋಡಿ. ನೀವೇನೇ ಪ್ರಶ್ನೆ ಕೇಳಿದರೂ ಆಂಗ್ಲ ಭಾಷೆಯಲ್ಲೇ ಉತ್ತರಿಸುತ್ತವೆ. ಕನ್ನಡದಲ್ಲಿ ಸಂಖ್ಯೆಗಳನ್ನು ಉಚ್ಚರಿಸಲು ಪಡಬಾರದ ಪಾಡನ್ನು ಪಡುತ್ತವೆ. ಬರೀ ಒಂದೋ ಎರಡೋ ಕನ್ನಡ ಪದಗಳು ನಿಮಗೆ ಕೇಳಲು ಸಿಗಬಹುದು. ಈ ಪರಿಸ್ಥಿತಿ ಏನಾದರೂ ಹೀಗೇ ಮುಂದುವರಿದರೆ ಮುಂದೊಂದು ದಿನ ಕನ್ನಡದ ಅವಶ್ಯಕತೆಯೇ ಇಲ್ಲದಂತಾದರೂ ಸಂದೇಹವಿಲ್ಲ. ಹಾಗಂತ ನಾನೇನು ಆಂಗ್ಲ ಭಾಷೆಯ ವಿರೋಧಿಯಲ್ಲ. ಹೌದು‌ ಈ ಕಲಿಯುಗದಲ್ಲಿ ಬದುಕಲು , ಕಡೇ ಪಕ್ಷ ಒಂದು ಕೆಲಸ ಗಿಟ್ಟಿಸಲು ಅನ್ನೋ ಆಂಗ್ಲ ಭಾಷೆ ಬೇಕೇ ಬೇಕು. ಹಾಗಂತ ಕನ್ನಡ ಮರೆಯಬಾರದು ನೋಡಿ. ತಾಯ್ನುಡಿ, ತಾಯ್ನಾಡನ್ನು ಮರೆತು ಬದುಕುವುದೂ‌ ಒಂದೇ, ದೇಶ ದ್ರೋಹಿಯಾಗಿ ಬದುಕುವುದೂ ಒಂದೇ.

ಯಾವಾಗ ಈ ಐಟಿಬಿಟಿ(ITBT) ಬೆಂಗಳೂರಿಗೆ ಕಾಲಿಟ್ಟಿತೋ ಆಗಿನಿಂದ ನಮ್ಮ ಸಂಸ್ಕೃತಿಯ ಇರುವಿಕೆಗೆ ಧಕ್ಕೆ ಉಂಟಾಗಿದೆ ಅನಿಸುತ್ತಿದೆ. ವೀಕೆಂಡ್ ಅನ್ನೋ ಪದ ನಮ್ಮ ಯಾವ ಕೆಲಸದ ದಿನಚರಿಗಳಲ್ಲೂ ಇರಲೇ ಇಲ್ಲ. ನಾವು ನಮ್ಮತನವನ್ನು ಬಿಟ್ಟು ವಿದೇಶಿ ಸಂಸ್ಕೃತಿಯನ್ನು ಅಳವಡಿಸಿಕೊಂಡಂತೆ, ಈಗಿನ ಕಾಲದ ಮಕ್ಕಳೂ ಕನ್ನಡವನ್ನು ಬಿಟ್ಟು ಆಂಗ್ಲರಾಗುತ್ತಿದ್ದಾರೆ ಅನ್ನಿಸುತ್ತಿದೆ. ಅದಕ್ಕಿಂತಾ ಬೇಜಾರಾಗೋ ವಿಷಯ ಅಂದರೆ, ನೀವು ನಂಬುತ್ತೀರೋ ಇಲ್ಲವೋ ಬೆಂಗಳೂರಲ್ಲಿ ಬದುಕಲು ಕನ್ನಡದ ಅವಶ್ಯಕತೆಯೇ ಇಲ್ಲ. ಇದೆಂತ ಪರಿಸ್ಥಿತಿ‌ ಬಂತು ನಮ್ಮ ನುಡಿಗೆ ಅಂತ ಕೊರಗಬೇಕೋ ಅಥವಾ ಇದು ನಾವೇ ಮಾಡುತ್ತಿರುವ ತಪ್ಪಿಗೆ ಪ್ರಾಯಶ್ಚಿತ್ತವೋ ಒಂದೂ ತಿಳಿಯುತ್ತಿಲ್ಲಾ.

ಪೋಷಕರೇ ಹಾಗೂ ಎಲ್ಲಾ ಬೆಂಗಳೂರಿಗರೇ ಇನ್ನಾದರು ನಮ್ಮ ಭಾಷೆಯ ಮಹತ್ವವನ್ನು ಅರಿತುಕೊಂಡು ಬದುಕೋಣ. ನಮ್ಮ ತಾಯ್ನುಡಿಗೆ ಗೌರವ ಸಲ್ಲಿಸೋಣ. ಕನ್ನಡವನ್ನು ಉಳಿಸಿಕೊಳ್ಳೋಣ. ಇದಕ್ಕೆ ಪೋಷಕರು ಒಂದಷ್ಟು ಕೆಲಸ ಮಾಡಬೇಕಿದೆ. ನಿಮ್ಮ ಮಕ್ಕಳಿಗೆ ಕಡೇ ಪಕ್ಷ ಮನೆಯಲ್ಲಾದರೂ‌ ಕನ್ನಡ ಹೇಳಿ ಕೊಡಿ. ಕನ್ನಡ ಅಕ್ಷರಗಳನ್ನು , ಸಂಖ್ಯೆಗಳನ್ನು ಹೇಳಿ ಕೊಡಿ. ಕನ್ನಡ ಗಾದೆಗಳು, ಕಥೆ‌, ಕವನ, ಸಾಹಿತ್ಯದ ಪರಿಚಯ ಮಾಡಿ ಕೊಡಿ.‌ ನಮ್ಮ ಭಾಷೆಗಿರುವ ಇತಿಹಾಸವನ್ನು ತಿಳಿಸಿ. ಒಂದು ವೇಳೆ ನಿಮಗೇ ಮರೆತು ಹೋಗಿದ್ದರೆ ದಯವಿಟ್ಟು ತಿಳಿದುಕೊಂಡು ನಿಮ್ಮ ಮಕ್ಕಳಿಗೆ ತಿಳಿಸಿ. ಹೇಗೂ‌ ಶಾಲೆಯಲ್ಲಿ ಆಂಗ್ಲ ಭಾಷೆಯನ್ನು ಕಲಿತೇ ಕಲಿಯುತ್ತಾರೆ. ಅದರ ಬಗ್ಗೆ ಚಿಂತೆ ಬೇಡ. ಪೋಷಕರೇ ಒಂದು ವಿಷಯ ನೆನಪಿರಲಿ. ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಈವತ್ತು ಎಷ್ಟೋ ಜನ ಸಮಾಜದ ದೊಡ್ಡ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಂಗ್ಲ ಭಾಷೆಯನ್ನು ಕಲಿತರೆ ಮಾತ್ರ ನಿಮ್ಮ ಮಕ್ಕಳು ಜೀವನದಲ್ಲಿ ಮುಂದೆ ಬರುತ್ತಾರೆ ಅನ್ನೋ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ.

ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯವನ್ನು  ಓದುವವರೇ ಕಮ್ಮಿಯಾಗುತ್ತಿದ್ದಾರೆ. ಕನ್ನಡ ಸಾಹಿತ್ಯ ನಮಗೆ ಬದುಕಲು ಬೇಕಾದ ಅದೆಷ್ಟೋ ವಿಷಯಗಳನ್ನು ಹೇಳಿ ಕೊಡುತ್ತದೆ. ನಮ್ಮಲ್ಲಿ‌ ಬಹಳ ಉನ್ನತವಾದ ಸಾಹಿತ್ಯದ ಭಂಡಾರವೇ ಇದೆ. ಅದನ್ನು ಬೆಳೆಸಿ ಉಳಿಸಿಕೊಳ್ಳುವ ಜವಾಬ್ದಾರಿ ‌ನಮ್ಮೆಲ್ಲರದು. ನಿಮ್ಮ ಜೊತೆ ಯಾರಾದರೂ ಬೇರೆ ಭಾಷೆಯಲ್ಲಿ ಸಂವಹನಕ್ಕೆ ಎದುರಾದರೆ ಕನ್ನಡದಲ್ಲೇ ವ್ಯವಹರಿಸಿ. ಕನ್ನಡವನ್ನು ಹೇಳಿ ಕೊಡಿ. ಬೆಂಗಳೂರಿನಲ್ಲಿ ಅಲ್ಪ ಸ್ವಲ್ಪ ಉಳಿದುಕೊಂಡಿರುವ ನಮ್ಮ ಭಾಷೆಯನ್ನು ಉಳಿಸೋಣ. ತನು ಕನ್ನಡ ಮನ ಕನ್ನಡ ಎಂದು ಕನ್ನಡಿಗರಾಗಿ ಬಾಳೋಣ.

ಪೋಷಕರೇ ಮತ್ತೊಮ್ಮೆ ನಿಮ್ಮಲ್ಲಿ ವಿನಂತಿ. ಪ್ರತೀ ದಿನ‌ ಸಮಯವಿಲ್ಲದಿದ್ದರೂ ಸ್ವಲ್ಪ ಸಮಯ ಮಾಡಿಕೊಂಡು ನಿಮ್ಮ ಮಕ್ಕಳಿಗೆ ಕನ್ನಡ ಕಲಿಸಿ.‌ ಶಾಲೆಯಿಂದ ಬಂದ ಮೇಲೂ ಏ ಬಿ ಸಿ ಡಿ ಅನ್ನೋದು ಬೇಡ. ಕನ್ನಡ ಪುಸ್ತಕಗಳನ್ನು ಓದಲು ಅಭ್ಯಾಸ ಮಾಡಿಸಿ. ಕೊನೇ ಪಕ್ಷ ಮನೆಯಲ್ಲಾದರೂ ನಿಮ್ಮ ಮಕ್ಕಳೊಟ್ಟಿಗೆ ಕನ್ನಡದಲ್ಲೇ ಮಾತನಾಡಿ. ಒಮ್ಮೆ ಅವರಿಗೆ ನಮ್ಮ ಭಾಷೆಯ ಸ್ಪರ್ಶವಾದರೆ ಅವರೇ ಮುಂದೆ ‌ನಮ್ಮ ಕನ್ನಡವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುತ್ತಾರೆ. ಯಾಕಂದರೆ ನಮ್ಮ ಭಾಷೆ ಕನ್ನಡಕ್ಕೆ ಅಪಾರವಾದ ಶಕ್ತಿ ಇದೆ.

ಕೊನೆಯದಾಗಿ, “ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು”.  “ಕನ್ನಡವೇ ಸತ್ಯ ಕನ್ನಡವೇ ನಿತ್ಯ”.

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Madhyasta

ಹೆಸರು ಮಂಜುನಾಥ್ ಮಧ್ಯಸ್ಥ. ಓದಿದ್ದು ವಿಜ್ಞಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಬಹಳ ಆಸಕ್ತಿ. ಬರೆಯೋದು ನೆಚ್ಚಿನ ಹವ್ಯಾಸ. ಭೌತಶಾಸ್ತ್ರ ಹಾಗೂ ಖಗೋಳ ಶಾಸ್ತ್ರ ನನ್ನ ನೆಚ್ಚಿನ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!