Featured ಅಂಕಣ

ಕಾಡುವ ಲಹ-ರಿಯೋ, ಮಾಯದ ನಗ-ರಿಯೋ…!

ಹದಿನೈದನೇ ಶತಮಾನದ ಕೊನೆಯ ದಶಕ. ಯುರೋಪಿನಲ್ಲಿ ಭಾರತಕ್ಕೆ ಜಲಮಾರ್ಗ ಕಂಡು ಹಿಡಿಯಲು ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳಿಗೆ ಜಿದ್ದಾಜಿದ್ದಿ ನಡೆಯುತ್ತಿದ್ದ ಹೊತ್ತು. ಇವೆರಡೂ ದೇಶಗಳು ಹೊಸ ಭೂಪ್ರದೇಶಗಳಿಗೆ ಒಟ್ಟಾಗಿ ಪ್ರವೇಶಿಸಿದರೆ ಭೂಸ್ವಾಮ್ಯಕ್ಕಾಗಿ ಅಲ್ಲೂ ಹೊಡೆದಾಟ ಮುಂದುವರಿಸಬಹುದೆಂಬ ದೂರಾಲೋಚನೆಯಿಂದ ಆಗಿನ ಪೋಪ್ 1494ರಲ್ಲಿ ಎರಡೂ ದೇಶಗಳ ನಾಯಕರನ್ನು ಕರೆದು ತನ್ನ ಉಸ್ತುವಾರಿಯಲ್ಲಿ, “ಟ್ರೀಟೀ ಆಫ್ ಟಾರ್ಡೆಸಿಲಾಸ್” ಹೆಸರಿನ ಒಪ್ಪಂದ ಮಾಡಿಸಿದ. ಜಗತ್ತಿನ ಭೂಪಟವನ್ನು ಮೇಜಿನ ಮೇಲೆ ಹರವಿಟ್ಟು, ಯುರೋಪಿನ ನಡು ಮಧ್ಯದಲ್ಲಿ ರೇಖೆಯೊಂದನ್ನು ಎಳೆದು ಅದರ ಬಲ ಭಾಗದ್ದೆಲ್ಲವೂ ಪೋರ್ಚುಗೀಸರಿಗೆಂದೂ ಎಡಭಾಗದ್ದು ಸ್ಪ್ಯಾನಿಷರಿಗೆಂದೂ ನಿಷ್ಕರ್ಷೆ ಮಾಡಿ ಬಿಟ್ಟ! ಕೇಪ್ ಆಫ್ ವರ್ದೆ ದ್ವೀಪದ ಮೇಲಿಂದ ಹಾದು ಹೋಗಿದ್ದ ಆ ರೇಖೆಯ ಆಧಾರದಲ್ಲಿ ಇಡೀ ಅಮೆರಿಕಾ ಖಂಡ ಸ್ಪ್ಯಾನಿಷರಿಗೂ ಆಫ್ರಿಕಾ, ಏಷ್ಯ, ಆಸ್ಟ್ರೇಲಿಯಗಳು ಪೋರ್ಚುಗೀಸರಿಗೂ ಹಂಚಿ ಹೋದವು. ಆಗ ಈಗಿನಂತೆ ಸರಿಯಾದ ವೈಜ್ಞಾನಿಕ ಸಲಕರಣೆಗಳಾಗಲೀ ಜಿಪಿಎಸ್ ತಂತ್ರಜ್ಞಾನವಾಗಲೀ ಇರಲಿಲ್ಲವಲ್ಲ. ಅಸಲಿಗೆ ಭಾರತ ಎಲ್ಲಿದೆಯೆಂದೇ ತಿಳಿಯದ ಯುರೋಪಿಯನ್ನರು ತಾವು ಹೋಗಿ ಮುಟ್ಟಿದ ಭೂಪ್ರದೇಶಗಳನ್ನೆಲ್ಲ ಭಾರತವೆಂದೇ ತಿಳಿಯುತ್ತಿದ್ದರು. ಅಮೆರಿಕಾ ಖಂಡವನ್ನು ಸೇರಿದ ಕೊಲಂಬಸ್ ತನ್ನ ಸಾವಿನವರೆಗೂ ಅದು ಭರತ ಖಂಡವೆಂದೇ ಸಾಧಿಸುತ್ತಿದ್ದನಂತೆ! ಪೋರ್ಚುಗಲ್ಲಿನ ರಾಜ ಮ್ಯಾನುಯೆಲ್‍ನ ಕೃಪಾಶೀರ್ವಾದಗಳೊಂದಿಗೆ ಹೊರಟ ದ್ಯೂರ್ತೇ ಪ್ಯಾಷಿಕೊ ಪರೇರಾ ಎಂಬಾತ 1498ರಲ್ಲಿ ಅಟ್ಲಾಂಟಿಕ್ ಸಾಗರ ಪರ್ಯಂತ ಸಂಚರಿಸಿ ಬ್ರೆಜಿಲ್ ದೇಶವನ್ನು ಮುಟ್ಟಿ ಅದನ್ನೇ ಭಾರತವೆಂದು ಕರೆದ. 1500ರಲ್ಲಿ ಪೋರ್ಚುಗಲ್ಲಿನ ಇನ್ನೊಬ್ಬ ವರ್ತಕ ಮತ್ತು ರಾಜಕಾರಣಿಯಾದ ಪೆದ್ರೋ ಆಲ್ವಾರೆಸ್ ಕಾಬ್ರಲ್ ಎಂಬಾತನೂ ದ್ಯೂರ್ತೇಯ ದಾರಿಯನ್ನೇ ಅನುಸರಿಸಿ ಬಂದು ಬ್ರೆಜಿಲ್‍ನ ಪೂರ್ವ ಕರಾವಳಿಯನ್ನು ತಲುಪಿ ಅದನ್ನು ಭರತ ಖಂಡವೆಂದು ಘೋಷಿಸಿದ! ಭಾರತವೆಂದರೆ ನಾಗರಿಕತೆಯ ಉಚ್ಛ್ರಾಯ ತಲುಪಿರುವ ದೇಶವೆಂದು ಜನಜನಿತವಾಗಿದ್ದರೂ ತನ್ನ ಅನ್ವೇಷಣೆಯ ಭೂಮಿಯಲ್ಲಿ ಅಂಥ ನಾಗರಿಕತೆಯ ಕುರುಹುಗಳೊಂದೂ ಕಾಣದೆ ಕಾಡು ಮನುಷ್ಯರೇ ತುಂಬಿದ್ದುದರಿಂದ ಅವನಿಗೆ ನಿರಾಸೆಯೇನೋ ಆಯಿತು. ಆದರೆ ನೈಸರ್ಗಿಕ ಸಂಪತ್ತು ತುಂಬಿ ತುಳುಕುತ್ತಿದ್ದ ಆ ಭೂಮಿಯನ್ನು ತಾನು ಎಷ್ಟೂ ಬಗೆದು ತೆಗೆಯಬಹುದೆಂಬ ಮಹದಾಸೆಯೂ ಹುಟ್ಟಿತು. ದೇಶಾದ್ಯಂತ ಸಂಚರಿಸಿದ ಅವನ ತಂಡ ಎಲ್ಲೆಲ್ಲೂ ಬಾಂದ್‍ಕಲ್ಲುಗಳನ್ನು ನೆಟ್ಟು ಇದು ಪೋರ್ಚುಗೀಸರ ವಸಾಹತು ಎಂದು ಘೋಷಿಸಿ ಬಿಟ್ಟಿತು.

1502ರ ವರ್ಷದ ಮೊದಲ ದಿನದಂದು ಬ್ರೆಜಿಲ್‍ಗೆ ಬಂದಿಳಿದ ಇನ್ನೊಂದು ಪೋರ್ಚುಗೀಸರ ತಂಡ ತಾವಿಳಿದ ತಾವನ್ನು ರಿಯೋ ಡಿ ಜೆನಿರೋ ಎಂದು ಕರೆಯಿತು. ಅಂದರೆ “ಜನವರಿಯ ನದಿ” ಎಂದು ಅರ್ಥ. ಅಸಲಿಗೆ ಅವರು ನದಿ ಎಂದು ಭಾವಿಸಿದ್ದ ಪ್ರದೇಶ ನದಿಯಲ್ಲ, ಸಾಗರವೇ! ಅಟ್ಲಾಂಟಿಕ್ ಸಾಗರದ ಒಂದು ಭಾಗ ಅಲ್ಲಿ ಭೂಪ್ರದೇಶವನ್ನು ಒಳ ನೂಕಿ ದೊಡ್ಡ ನದಿಯೊಂದರ ಭ್ರಮೆ ಹುಟ್ಟಿಸಿತ್ತಷ್ಟೆ. ವಿಶಾಲವಾದ ಸಾಗರ ತೀರಗಳು, ಅವುಗಳ ಪಕ್ಕದಲ್ಲೇ ಆಕಾಶದೆತ್ತರ ಬೆಳೆದು ನಿಂತ ಬೆಟ್ಟಗಳು, ಕಣ್ಣು ಬಚ್ಚಿ ಹೋಗುವಷ್ಟು ಹಚ್ಚ ಹಸುರಿನ ಕಾಡು ಗುಡ್ಡಗಳು – ಇವೆಲ್ಲ ಇದ್ದರೆ ಪೋರ್ಚುಗೀಸರಿಗೆ ಖುಷಿಯೋ ಖುಷಿ. ಹೊಸ ಅನ್ವೇಷಣೆಯಾದ ರಿಯೋದಲ್ಲಿ ಅವನ್ನೆಲ್ಲ ದೇವರು ಉದಾರ ಕೈಗಳಿಂದ ಸುರಿದು ಬಿಟ್ಟಿದ್ದರಿಂದ ಪೋರ್ಚುಗಲ್ಲಿನ ಜನ ಇಲ್ಲಿ ಸ್ವರ್ಗ ಸಮಾನ ಸುಖ ಅನುಭವಿಸತೊಡಗಿದರು. ಬಟ್ಟೆಗೆ ಬಣ್ಣ ಕೊಡಲು ಬಳಸುವ ಪೌ-ಬ್ರಾಸಿಲ್ ಜಾತಿಯ ಮರಗಳು ಈ ಹೊಸ ಭೂಭಾಗದಲ್ಲಿ ಹೆಜ್ಜೆ ಹೆಜ್ಜೆಗೂ ಬೆಳೆದು ನಿಂತು ನಿಬಿಡಾರಣ್ಯಗಳನ್ನೇ ಸೃಷ್ಟಿಸಿದ್ದವಲ್ಲ; ಆ ಕಾರಣಕ್ಕೆ ಪೋರ್ಚುಗೀಸರು ಇದನ್ನು ಬ್ರೆಜಿಲ್ ಎಂದು ಕರೆದರು. ದಕ್ಷಿಣ ಅಮೆರಿಕದಲ್ಲಾಗಲೀ, ಕೊಲಂಬಸ್ ಅನ್ವೇಷಿಸಿದ ಉತ್ತರ ಅಮೆರಿಕಾದಲ್ಲಾಗಲೀ ಐರೋಪ್ಯರ ಆಗಮನಕ್ಕೆ ಮುಂಚೆ ಓಡಾಡಿಕೊಂಡಿದ್ದ ಮೂಲ ನಿವಾಸಿಗಳಿಗೆ ಅಕ್ಷರ, ಲಿಪಿ, ಲಿಖಿತ ಭಾಷೆಗಳ ಪರಿಚಯವಿರಲಿಲ್ಲ. ಹಾಗಾಗಿ ಬ್ರೆಜಿಲಿನ ಲಿಖಿತ ಇತಿಹಾಸ ಶುರುವಾಗುವುದೂ ಹದಿನಾರನೇ ಶತಮಾನದ ಪ್ರಾರಂಭದಿಂದಲೇ.

ಕಂಡು ಹಿಡಿದ ಮೊದಲ ಇನ್ನೂರು ವರ್ಷಗಳ ಕಾಲ ಪೋರ್ಚುಗೀಸರಿಗೆ ಬ್ರೆಜಿಲ್ ಸೂರೆ ಹೊಡೆಯುವ ನಾಡಾಗಿತ್ತು ಅಷ್ಟೇ. ಭೂಮಂಡಲದ ಹೊಸ ವಸಾಹತುಗಳಿಂದ ತಮ್ಮ ನಾಡಿಗೆ ಮಣಗಟ್ಟಲೆ ಸಂಪತ್ತನ್ನು ಹೇರಿ ತಂದು ಶ್ರೀಮಂತಿಕೆ ಹೆಚ್ಚಿಸಿಕೊಳ್ಳುವುದಷ್ಟೇ ಸ್ಪೇನ್, ಪೋರ್ಚುಗಲ್ಲುಗಳಿಗೆ ಮುಖ್ಯವಾಗಿತ್ತು. ಹದಿನೇಳನೇ ಶತಮಾನದಲ್ಲಿ ಬ್ರೆಜಿಲ್‍ನಲ್ಲಿ ಚಿನ್ನ, ವಜ್ರಗಳ ನಿಕ್ಷೇಪಗಳು ಪತ್ತೆಯಾದ ಮೇಲಂತೂ ಅದೊಂದು ಬಿಟ್ಟಿ ಗೋರುವ ಖಜಾನೆಯಾಯಿತು ಪೋರ್ಚುಗೀಸರಿಗೆ. ಕೊಳ್ಳೆಯ ಉತ್ತುಂಗಕಾಲದಲ್ಲಿ ವರ್ಷಕ್ಕೆ 15,000 ಕಿಲೋಗ್ರಾಂ ಚಿನ್ನವನ್ನು ಬ್ರೆಜಿಲ್‍ನಿಂದ ಬಾಚಿ ದೋಚಿ ಪೋರ್ಚುಗಲ್ಲಿಗೆ ಸಾಗಿಸಲಾಗುತ್ತಿತ್ತು! ಬ್ರೆಜಿಲಿನ ಕಾಡು ಮೇಡುಗಳಲ್ಲಿ ಅಲೆದಾಡಿಕೊಂಡು ಆರಾಮಾದ ಜೀವನ ನಡೆಸುತ್ತಿದ್ದ ಮೂಲ ನಿವಾಸಿಗಳನ್ನು ಹಿಡಿದು ಬಡಿದು ಜೀತಕ್ಕಿಟ್ಟುಕೊಳ್ಳಲಾಯಿತು. ಗಣಿಗಳಲ್ಲಿ ಕೆಲಸ ಮಾಡಲು ಆಫ್ರಿಕಾದಿಂದ ಕಪ್ಪು ಜನರನ್ನು ಗುಲಾಮರನ್ನಾಗಿ ಹಿಡಿದು ತರಲಾಯಿತು. ಆ ಕಾಲದಲ್ಲಿ ಅಮೆರಿಕೆಯಲ್ಲಿ ಬಿಕರಿಯಾಗುತ್ತಿದ್ದ ಕಪ್ಪು ಗುಲಾಮರಲ್ಲಿ ಅರ್ಧದಷ್ಟನ್ನು ಬ್ರೆಜಿಲ್ ಒಂದೇ ದೇಶದಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ಆದರೆ 1800ನೇ ಇಸವಿಯ ನಂತರ ಬ್ರೆಜಿಲ್‍ನ ದೆಸೆ ಬದಲಾಯಿತು. ಫ್ರಾನ್ಸಿನ ಕ್ರಾಂತಿಕಾರಿ ದೊರೆ ನೆಪೋಲಿಯನ್ ಬೋನಪಾರ್ಟೆ, ಯುರೋಪಿನ ಎಲ್ಲ ದೇಶಗಳ ಮೇಲೂ ದಂಡೆತ್ತಿಹೋಗಿ ಅವರ ಸಾಮ್ರಾಜ್ಯಗಳನ್ನು ಕಿರುಬೆರಳ ಮೇಲೆ ಕುಣಿಸತೊಡಗಿದಾಗ, ನೆಲೆ ಕಳೆದುಕೊಂಡು ದಿಕ್ಕಾಪಾಲಾದ ಪೋರ್ಚುಗಲ್ಲಿನ ರಾಜ ಆರನೇ ಡೋಮ್ ಜೊಆವೊ, 1808ರಲ್ಲಿ ತನ್ನ ವಸಾಹತು ನಾಡಾದ ಬ್ರೆಜಿಲ್‍ಗೆ ಬಂದು ನೆಲೆಸಿದ. ರಾಜ ಪರಿವಾರವೇ ಬಂದು ಬೀಡು ಬಿಟ್ಟಿದ್ದರಿಂದ ಅವರಿಗೀಗ ಬ್ರೆಜಿಲ್ ಸೂರೆ ಹೊಡೆಯುವ ನಾಡಾಗಿ ಉಳಿಯಲಿಲ್ಲ. ಇಲ್ಲೂ ಶಾಲೆ, ಅರಮನೆ, ಆಸ್ಪತ್ರೆ, ರಸ್ತೆ, ಕಾರ್ಖಾನೆ, ಉದ್ಯಾನ, ಕೆರೆ, ಬಾವಿಗಳನ್ನು ಕಟ್ಟಬೇಕೆಂಬ ಸದಾಶಯ ಹುಟ್ಟಿತು. ಅಭಿವೃದ್ಧಿ ಕೆಲಸಗಳು ಸಮರೋಪಾದಿಯಲ್ಲಿ ನಡೆಯತೊಡಗಿದವು. ಮುಂದೆ ನೆಪೋಲಿಯನ್‍ನ ಪತನದ ನಂತರ ರಾಜ ತನ್ನ ಮಗ ಒಂದನೇ ಪೆದ್ರೋನನ್ನು ಬ್ರೆಜಿಲ್‍ನಲ್ಲೇ ನಿಲ್ಲಿಸಿ ತಾನು ತವರು ನಾಡು ಪೋರ್ಚುಗಲ್ಲಿಗೆ ವಾಪಸಾದ. ಅಪ್ಪನ ಆಸ್ತಿ ನೋಡಿಕೊಳ್ಳುವ ಮೇಲುಸ್ತುವಾರಿಕೆ ಮಾಡಿಕೊಂಡಿರಬೇಕಿದ್ದ ಪೆದ್ರೋ, 1822ರ ಸೆಪ್ಟೆಂಬರ್ 7ರಂದು ಬ್ರೆಜಿಲ್ ಒಂದು ಪ್ರತ್ಯೇಕ ಸಂಸ್ಥಾನ, ಇದು ತನ್ನದೇ ರಾಜ್ಯ ಎಂದು ಘೋಷಿಸಿಕೊಂಡು ಬಿಟ್ಟ! ಪೋರ್ಚುಗಲ್ಲಿನ ಕರುಳ ಸಂಬಂಧ ಕಡಿದುಕೊಂಡು ಬ್ರೆಜಿಲ್ ಮೊದಲ ಬಾರಿಗೆ ಸ್ವಾತಂತ್ರ್ಯದ ಸುಖ ಅನುಭವಿಸಿತು. ಅಲ್ಲಿಂದ ಮುಂದಿನ ಇತಿಹಾಸವೆಲ್ಲ ಪುಡಿ ಯುದ್ಧಗಳದ್ದು.

ಬ್ರೆಜಿಲ್ ಗಣರಾಜ್ಯ ದಕ್ಷಿಣ ಅಮೆರಿಕಾದ ಅತಿ ದೊಡ್ಡ ರಾಷ್ಟ್ರ. ಇದರ ವಿಸ್ತೀರ್ಣ ಭಾರತದ ಮೂರು ಪಟ್ಟಿನಷ್ಟು! ಹಾಗಿದ್ದರೂ ಜನಸಂಖ್ಯೆ 20 ಕೋಟಿಯಷ್ಟೇ. ಪ್ರತಿ ಚದರ ಕಿಲೋಮೀಟರ್‍ನಲ್ಲಿ ಭಾರತದಲ್ಲಿ 440 ಜನ ವಾಸವಿದ್ದರೆ ಬ್ರೆಜಿಲ್‍ನಲ್ಲಿರುವುದು 25 ಜನರಷ್ಟೇ! ಜಗತ್ತಿನ ಅತಿದೊಡ್ಡ ಅರಣ್ಯ ಪ್ರದೇಶವಾದ ಅಮೆಝಾನ್‍ನ ಮುಕ್ಕಾಲು ಪಾಲು ಬ್ರೆಜಿಲ್ ಒಂದರಲ್ಲೇ ಇದೆ. ತೈಲ ಉತ್ಪಾದನೆಯಲ್ಲಿ ಜಗತ್ತಿನ ಒಂಬತ್ತನೇ ದೊಡ್ಡ ದೇಶ, ಹಸುವಿನ ಮಾಂಸದ ಎರಡನೇ ಅತಿ ದೊಡ್ಡ ಉತ್ಪಾದಕ, ಉಕ್ಕಿನ ಮೂರನೇ ದೊಡ್ಡ ರಫ್ತುಗಾರ, ಪ್ರಪಂಚದ ಸಪ್ತಮ ಆರ್ಥಿಕ ಬಲಾಢ್ಯ ಬ್ರೆಜಿಲ್. ಆದರೆ ರಾಜಕೀಯ ಮಾತ್ರ ಅಸ್ಥಿರ. ಇಪ್ಪತ್ತನೇ ಶತಮಾನದಲ್ಲೂ ಬಹಳಷ್ಟು ವರ್ಷಗಳನ್ನು ಇದು ಸರ್ವಾಧಿಕಾರದ ಕರಿನೆರಳಿನಲ್ಲೇ ಕಳೆಯಿತು. ತೀರ ಇತ್ತೀಚಿನ ಉದಾಹರಣೆ ತೆಗೆದುಕೊಳ್ಳುವುದಾದರೆ, 1964ರಿಂದ 85ರವರೆಗೆ ಸರ್ವಾಧಿಕಾರದ ಕೈಕೆಳಗಿದ್ದ ಬ್ರೆಜಿಲ್ ಆಮೇಲೆ ಪ್ರಜಾಪ್ರಭುತ್ವದ ತೆಕ್ಕೆಗೆ ಬಿತ್ತು. ಆದರೆ ಐರೋಪ್ಯರ ದೋಚುವ ಮನಸ್ಥಿತಿಯ ಮುಂದುವರಿಕೆಯೋ ಏನೋ, ಇಲ್ಲಿ ಗಣರಾಜ್ಯವಿದ್ದರೂ ಸರ್ವಾಧಿಕಾರವಿದ್ದರೂ ಭ್ರಷ್ಟಾಚಾರಕ್ಕೆ ಕೊರತೆಯಿಲ್ಲ. ನ್ಯಾಯಾಂಗ, ಪೊಲೀಸ್ ವ್ಯವಸ್ಥೆ ಮತ್ತು ಶಾಸಕಾಂಗ ಈ ಮೂರೂ ಸ್ವತಂತ್ರ ಸಂಸ್ಥೆಗಳಾದ್ದರಿಂದ ಮೂರಕ್ಕೂ ಜಟಾಪಟಿ ಇದ್ದದ್ದೇ. ಸರ್ವೋಚ್ಛ ನ್ಯಾಯಾಧೀಶ ಆಗಾಗ ಸರಕಾರದ ಭ್ರಷ್ಟಾಚಾರದ ಕೂಪವನ್ನು ಜನರ ಮುಂದೆ ಹಿಡಿದು ಸ್ಟಾರ್‍ಗಿರಿ ಪಡೆಯುತ್ತಾನೆ. ಪೊಲೀಸರು ಶಾಸಕಾಂಗದ ಮೇಲೇರಿ ಹೋಗಿ ಅದನ್ನು ತಮ್ಮ ನಿಯಂತ್ರಣಕ್ಕೊಳಪಡಿಸುತ್ತಾರೆ. ಈ ಎರಡೂ ವ್ಯವಸ್ಥೆಗಳನ್ನು ಹದ್ದುಬಸ್ತಿನಲ್ಲಿಡಲು ಬೇಕಾದಷ್ಟು ದುಡ್ಡನ್ನು ಭ್ರಷ್ಟಾಚಾರದ ಮೂಲಕ ಒಟ್ಟುಗೂಡಿಸುವ, ಮೇಯುವ ಕೆಲಸದಲ್ಲಿ ಶಾಸಕಾಂಗದ ಸದಸ್ಯರು ಸದಾ ನಿರತ. ಕಳೆದ ಸಲ ಚುನಾವಣೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಜನಪ್ರಿಯ ನೇತಾರ ಪಾಲೋ ಮಲುಫ್‍ನ ಪ್ರಚಾರ ಘೋಷವಾಕ್ಯ ಏನು ಗೊತ್ತೆ? “ನಾನು ಕೊಳ್ಳೆಹೊಡೆಯುತ್ತೇನೆ; ಆದರೆ ಸ್ವಲ್ಪ ಕೆಲಸವನ್ನೂ ಮಾಡುತ್ತೇನೆ” (ಐ ಸ್ಟೀಲ್, ಬಟ್ ಐ ಡೆಲಿವರ್)! ಇವನ್ನೆಲ್ಲ ಅದು ಹೇಗೋ ಸಹಿಸಿಕೊಂಡು ತಮ್ಮ ತಲೆಗೆ ತಮ್ಮ ಕೈ ಎನ್ನುತ್ತ ಜನ ಜೀವನ ಸಾಗಿಸುತ್ತಿದ್ದಾರೆ.

Rio-3

ಹಲವು ವರ್ಷಗಳ ಕಾಲ ಬ್ರೆಜಿಲ್‍ಗೆ ಸಾಲ್ವಡೋರ್ ರಾಜಧಾನಿಯಾಗಿತ್ತು. 1763ರಲ್ಲಿ ಅದು ಪೂರ್ವ ಕರಾವಳಿಯ ಬಹು ಮುಖ್ಯ ರೇವುತಾಣವಾದ ರಿಯೋ ಡಿ ಜೆನಿರೋಗೆ ಸ್ಥಳಾಂತರವಾಯಿತು. ಯುರೋಪ್ ಮತ್ತು ಆಫ್ರಿಕಾ ಖಂಡಗಳಿಗೆ ಹೆಬ್ಬಾಗಿಲಿನಂತೆ ತೆರೆದುಕೊಂಡಿದೆ; ಅವೆರಡಕ್ಕೂ ಸಮಾನ ದೂರದಲ್ಲಿದೆ ಮತ್ತು ಶತ್ರುಗಳನ್ನು ಸದೆ ಬಡಿಯಲು ತಕ್ಕ ಆಯಕಟ್ಟಿನ ಸ್ಥಳ ಎಂಬುದು ಬಹು ಮುಖ್ಯ ಕಾರಣ. ಮುಂದೆ ರಿಯೋ, ಯುರೋಪ್ ಆಫ್ರಿಕಾಗಳಿಗೆ ಮಾತ್ರವಲ್ಲ ಅಮೆರಿಕಾ ಖಂಡದ ಉಳಿದ ದೇಶಗಳಿಗೂ ಸಂಪರ್ಕ ಸಾಧಿಸಲು ಅತ್ಯಂತ ಪ್ರಶಸ್ತ ಸ್ಥಳದಲ್ಲಿದೆ ಎಂಬ ಕಾರಣಕ್ಕೆ ಅದನ್ನೇ ರಾಜಧಾನಿಯನ್ನಾಗಿ ಉಳಿಸಿಕೊಳ್ಳಲಾಯಿತು. ಹೇಳಿ ಕೇಳಿ ಪೋರ್ಚುಗೀಸರು ನೌಕಾಯಾನ ಪ್ರಿಯ ಸಾಹಸಿಗಳು. ಹಾಗಾಗಿ ವಿಶಾಲ ದೇಶದ ನಟ್ಟ ನಡುವಿನ ಭೂಪ್ರದೇಶವನ್ನು ರಾಜಧಾನಿಯಾಗಿ ಆರಿಸಿಕೊಳ್ಳುವುದಕ್ಕಿಂತ ಜೇನುಗೂಡಂಥ ಚಟುವಟಿಕೆಯುಳ್ಳ ಬಂದರು ಸ್ಥಳವನ್ನು ಆರಿಸಿಕೊಳ್ಳುವುದರಲ್ಲಿ ಅವರಿಗೆ ಆತ್ಮತೃಪ್ತಿಯೂ ಇದ್ದಿರಬಹುದು. ಸದ್ಯಕ್ಕೆ ಸುಮಾರು 1.6 ಕೋಟಿ ಜನಸಂಖ್ಯೆಯುಳ್ಳ ರಿಯೋ ಹತ್ತು ಹಲವಾರು ಐತಿಹಾಸಿಕ ಕಟ್ಟಡಗಳಿಂದ ನಿಬಿಡವಾಗಿರುವ ಊರು. ಇಡೀ ಊರನ್ನು ಆಲಂಗಿಸಿಕೊಂಡಂತೆ ಕಣ್ಣು ಹಾಯಿಸಿದಷ್ಟು ದೂರಕ್ಕೆ ಮೈಚಾಚಿ ಮಲಗಿರುವ ಸಾಗರ ತೀರವಿದೆ. ಈ ತೀರದುದ್ದಕ್ಕೂ ಸೈಕಲ್ ಹೊಡೆವವರಿಗೆ ಅನುಕೂಲವಾಗುವ ಪುಟ್ಟ ರಸ್ತೆ ಇದೆ. ಬಾಡಿಗೆ ಸೈಕಲ್ ಪಡೆದರೆ ಇಡೀ ರಿಯೋ ನಗರವನ್ನು ತೀರದುದ್ದಕ್ಕೆ ಹಾಸಿರುವ ಚಾಪೆಯಂಥ ರಸ್ತೆಯಲ್ಲಿ ಸಾಗುತ್ತ ನೋಡಿ ಬಿಡಬಹುದು. ರಿಯೋ ನಗರದ ಪ್ರಮುಖ ಆಕರ್ಷಣೆ ಕಾರ್ಕವಾಡೋ ಬೆಟ್ಟದ ಮೇಲೆ ಭವ್ಯವಾಗಿ ನಿಂತಿರುವ “ಕ್ರೈಸ್ಟ್ ದ ರಿಡೀಮರ್” ಎಂಬ ಬೃಹದಾಕಾರದ, 98 ಅಡಿ ಎತ್ತರವಿರುವ ಯೇಸು ಕ್ರಿಸ್ತನ ವಿಗ್ರಹ. ಶಿಲುಬೆಗೆ ಹೊಡೆದ ಭಂಗಿಯಲ್ಲಿ ನಿಂತಿರುವ ಯೇಸು ಅದೇ ಕ್ಷಣಕ್ಕೆ ಇಡೀ ಜಗತ್ತನ್ನು ತನ್ನ ಬಳಿಗೆ ಬಾರೆಂದು ಕರೆಯುತ್ತಿರುವಂತೆಯೂ ಭಾಸವಾಗುತ್ತದೆ. ಯೇಸುವಿನ ಹೆಗಲೇರಿ ನಿಂತರೆ ಇಡೀ ರಿಯೋ ನಗರದ ಪಕ್ಷಿನೋಟ ಪಡೆಯಬಹುದು. ರಿಯೋದ ಇನ್ನೊಂದು ಆಕರ್ಷಣೆ, ಶುಗರ್‍ಲೋಫ್ ಎಂಬ ಗುಡ್ಡಕ್ಕೆ ಕಟ್ಟಿರುವ ಕೇಬಲ್ ಕಾರುಗಳು. ಕಾಲ ಕಾಲಕ್ಕೆ ಆಧುನಿಕತೆಗೆ ತಕ್ಕಂತೆ ಮಾರ್ಪಾಟು ಆಗುತ್ತಾ ಬಂದಿರುವ ಈ ಕೇಬಲ್ ಕಾರ್ ಸೇವೆಗೆ ನೂರು ವರ್ಷಕ್ಕೂ ಹೆಚ್ಚು ವಯಸ್ಸಾಯಿತು ಎಂಬುದು ಅಚ್ಚರಿಯ ವಿಷಯ. ಇನ್ನು ಪ್ರಾಕೃತಿಕ ಸೌಂದರ್ಯದ ವಿಷಯಕ್ಕೆ ಬಂದರೆ ರಿಯೋದಲ್ಲಿ ನೋಡಲೇಬೇಕಾದ ಸಂಗತಿಗಳೆಂದರೆ ಬೀಚ್‍ಗಳು, ಅವುಗಳ ಪಕ್ಕಕ್ಕೇ ಹೆಗಲಿಗೆ ಹೆಗಲುಜ್ಜಿ ನಿಂತಂತಿರುವ ಬೃಹತ್ ಬೆಟ್ಟಗಳು ಮತ್ತು ನಗರದೊಳಗೇ ಮೈವೆತ್ತ ಹಚ್ಚ ಹಸುರಿನ ದಟ್ಟ ಕಾಡು!

Rio-2

ರಿಯೋ ನಿದ್ರಾಸಕ್ತ ನಗರ. ಅಂದರೆ ಸಮಯಕ್ಕೆ ಸರಿಯಾಗಿ ಕೆಲಸ ಚಕಾಚಕ್ ಮುಗಿಯಬೇಕು ಎಂದು ಬಯಸುವ ಶಿಸ್ತಿನ ಸಿಪಾಯಿಗಳಿಗೆ ಚಡಪಡಿಕೆ ಹುಟ್ಟಿಸುವಷ್ಟು ಆಲಸ್ಯವನ್ನು ಹೊದ್ದು ಮಲಗಿರುವ ಆರಾಮದ ನಗರ ಇದು. ರಿಯೋದಲ್ಲಿ ಶ್ರೀಸಾಮಾನ್ಯರ ದಿನಚರಿಯಿಂದ ಹಿಡಿದು ಸರಕಾರದ ಬೃಹತ್ ಯೋಜನೆಗಳವರೆಗೆ ಯಾವುದೂ ಸಮಯಕ್ಕೆ ಸರಿಯಾಗಿ ನಡೆಯುವುದಿಲ್ಲ. ಹಾಗೆಂದು ಅವರೇನೂ ಅಸಮರ್ಥರಲ್ಲ; ಸಮಯದ ಕಡೆಗೆ ದಿವ್ಯ ನಿರ್ಲಕ್ಷ್ಯ ಅಷ್ಟೇ. ಅದೇನೋಪ್ಪ, ಪೋರ್ಚುಗೀಸರ ವಸಾಹತುಗಳಲ್ಲೆಲ್ಲ ಶತಮಾನಗಳೇ ಕಳೆದರೂ ಈ ಆಲಸ್ಯ, ಜಡತ್ವ ಸಾಂಕ್ರಾಮಿಕ. ಹಾಗಾಗಿ ಜಗದ ಜಂಜಡವನ್ನೆಲ್ಲ ಮರೆತು, ಧಾವಂತದ ದೈನಿಕವನ್ನು ಹಿಂದೆ ಬಿಟ್ಟು, ಭವಿಷ್ಯದ ಚಿಂತೆ ಮರೆತ ಸಂತನಂತೆ ನಾಲ್ಕು ದಿನ ಆರಾಮಾಗಿ ಕಳೆದು ಬಿಡಬೇಕೆಂದು ಬಯಸುವವರಿಗೆ ರಿಯೋ ಹೇಳಿ ಮಾಡಿಸಿದ ಜಾಗ. ಆದರೆ ಎಚ್ಚರವಿರಲಿ; ಇದು ಕಳ್ಳ ಕಾಕರ ಸ್ವರ್ಗ; ಕುಣಿದು ಕುಪ್ಪಳಿಸುವವರ ಸಿಂಗಾಪುರ; ಮೋಜು-ಮಸ್ತಿಯಲ್ಲಿ ಕಳೆದು ಹೋಗ ಬಯಸುವವರ ಥೈಲ್ಯಾಂಡು ಕೂಡ. ಇಲ್ಲಿನ ವಿಶಾಲ ಬೀಚ್‍ಗಳು ದರೋಡೆಗೆ ಹೆಸರುವಾಸಿ. ತಂತಮ್ಮ ಬ್ಯಾಗುಗಳನ್ನು ಪ್ರವಾಸಿಗಳು ಆರಾಮ ಖುರ್ಚಿಯ ಪಕ್ಕದಲ್ಲಿಟ್ಟು ಸುವಿಶಾಲ ಸಾಗರದ ಅಂದ ಚಂದ ನೋಡುತ್ತ ಮೈಮರೆತರೋ ಖಾಲಿ ಕೈಯಲ್ಲಿ ಸ್ವಂತ ಊರಿಗೆ ವಾಪಸಾಗಬೇಕಾಗಬಹುದು. ಕಾಬಕಬಾನದಂಥ ಬೀಚ್‍ಗಳಲ್ಲಿ ಸ್ಥಳೀಯ ಕಳ್ಳರು ಪ್ರತಿದಿನ 200ಕ್ಕೂ ಹೆಚ್ಚಿನ ಬ್ಯಾಗ್‍ಗಳನ್ನು ಕದ್ದು ಹೂತಿಡುತ್ತಾರಂತೆ. ಸಂಜೆ ಜನರ ಓಡಾಟ ಕಡಿಮೆಯಾದ ಮೇಲೆ ಇಂಥ ಹೂತಿಟ್ಟ ನಿಧಿಗಳನ್ನು ತೆಗೆದು ದುಡ್ಡು ಎಗರಿಸಿ ಗಳಿಕೆಯನ್ನು ಪಬ್ಬುಗಳಲ್ಲಿ ವೇಶ್ಯಾಗೃಹಗಳಲ್ಲಿ ಕಳೆದು ನಾಳೆಯ ಚಿಂತೆಯಿಲ್ಲದೆ ನಿದ್ದೆ ಹೋದರೆ ಅಂದಿನ ದಿನ ಕಳೆದ ಹಾಗೆ. ರಿಯೋದಲ್ಲಿ ನಡೆಯುವ ವಾರ್ಷಿಕ ಸಾಂಸ್ಕøತಿಕ ಉತ್ಸವ ಕಾರ್ನಿವಲ್ ಸಮಯದಲ್ಲಂತೂ ಪರಿಣಿತ ಕಳ್ಳರು ದಿನವೊಂದಕ್ಕೆ 10,000 ಡಾಲರುಗಳನ್ನು ಸಂಪಾದಿಸುವುದೂ ಉಂಟು.

Rio-4

ಇಷ್ಟೆಲ್ಲ ಇದ್ದರೂ ಬ್ರೆಜಿಲ್ ಮತ್ತು ಅದರ ರಾಜಧಾನಿ ರಿಯೋ, ಪ್ರಪಂಚದ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಗುಡ್ಡ ಬೆಟ್ಟ ಸಾಗರ ಹಸಿರು ಎಲ್ಲವೂ ಇರುವ ರಿಯೋ ಯಾತ್ರಿಕರ ಪರಮ ನೆಚ್ಚಿನ ತಾಣ. ಅಮೆರಿಕದಷ್ಟು ದುಬಾರಿಯಲ್ಲವಾದ್ದರಿಂದ ಕಡಿಮೆ ಖರ್ಚಿನಲ್ಲಿ ದೇಶ ಸುತ್ತಬೇಕೆಂಬವರಿಗೆ ಹೇಳಿ ಮಾಡಿಸಿದ ಜಾಗ. ಹಾಡು ಕುಣಿತ ಊಟ ಭರ್ಜರಿಯಾಗಿರುವ ಜಾಗ ಇದು. ಬ್ರೆಜಿಲಿಯನ್ನರಿಗೆ ಫುಟ್‍ಬಾಲ್ ಎಂದರೆ ಪಂಚಪ್ರಾಣ ತಾನೆ? ಹಾಗಾಗಿ ರಸ್ತೆಯಲ್ಲಿ ಬಯಲಿನಲ್ಲಿ ರಂಗೋಲಿ ಇಡುವುದಕ್ಕೂ ಇಕ್ಕಟ್ಟಾಗುವಷ್ಟು ಪುಟ್ಟ ಟೆರೇಸುಗಳಲ್ಲಿ ಕೂಡ ಇಬ್ಬರು ಹುಡುಗರು ಸೇರಿದರೆಂದರೆ ಫುಟ್‍ಬಾಲ್ ಆಟ ಶುರುವಾಯಿತೆಂದೇ ಲೆಕ್ಕ! ಕೋಟ್ಯಂತರ ಬ್ರೆಜಿಲಿಯನ್ ರಿಯಲ್ (ಅಲ್ಲಿನ ಕರೆನ್ಸಿ) ದುಡ್ಡುಳ್ಳವರೂ ಮೂರು ದಿನ ಉಪವಾಸವಿದ್ದು ದಿನಗಳೆಯುವ ದೈನೇಸಿಗಳೂ ಒಟ್ಟೊಟ್ಟಿಗೆ ಕಂಡು ಬರುವ ಬ್ರೆಜಿಲ್‍ನಲ್ಲಿ ಆರ್ಥಿಕ ಅಸಮಾನತೆ ದೊಡ್ಡ ಸಮಸ್ಯೆ. ರಿಯೋ ವಿಮಾನ ನಿಲ್ದಾಣದಿಂದ ಒಲಂಪಿಕ್ಸ್ ಗ್ರಾಮಕ್ಕೆ ಬರುವ ದಾರಿಯುದ್ದಕ್ಕೂ ಬ್ರೆಜಿಲ್‍ನ ಸರಕಾರ ರಸ್ತೆಯ ಇಕ್ಕೆಲಗಳಲ್ಲಿ ಆಳೆತ್ತರದ ತಡೆಗೋಡೆ ಕಟ್ಟಿದೆ. ಗೋಡೆಯಾಚೆಗಿನ ಸ್ಲಮ್‍ಗಳು ಯಾತ್ರಿಕರಿಗೆ ಕಾಣಬಾರದೆಂದು ಈ ವಿಶೇಷ ವ್ಯವಸ್ಥೆ! ಒಲಿಂಪಿಕ್ ಗ್ರಾಮವನ್ನು ಕಟ್ಟಲು ಸುಮಾರು ಇಪ್ಪತ್ತು ಸಾವಿರ ಜನರನ್ನು ಒಕ್ಕಲೆಬ್ಬಿಸಿ ಊರ ಹೊರಗಿನ ನೀರು-ಬೆಳಕಿಲ್ಲದ ಜಾಗಗಳಿಗೆ ವರ್ಗಾಯಿಸಲಾಗಿದೆ. ನಿಮ್ಮ ಶೋಕಿಗಳಿಗಾಗಿ ನಾವು ನಮ್ಮ ಜೀವನಕ್ರಮವನ್ನು ಬಲಿ ಕೊಡಬೇಕೇ ಎಂದು ಆ ಸ್ಥಳೀಯರು ಮೂರ್ನಾಲ್ಕು ವರ್ಷಗಳಿಂದ ಸರಕಾರದೊಡನೆ ತಾರಾಮಾರ ಜಗಳಕ್ಕಿಳಿದು ಬಿಟ್ಟಿದ್ದರು. ನಮ್ಮಲ್ಲಿ ಅಂಬಾನಿ, ಅದಾನಿಗಳಿದ್ದಂತೆ ಬ್ರೆಜಿಲ್‍ನ ಅತಿ ಶ್ರೀಮಂತ ಕಾರ್ಲೋ ಕರ್ವಾಲೋ ಎಂಬಾತ ರಿಯೋ ಒಲಿಂಪಿಕ್ಸ್’ ಹೆಚ್ಚಿನ ಎಲ್ಲ ಪ್ರಾಜೆಕ್ಟುಗಳನ್ನೂ ತನ್ನ ಉಡಿಗೆ ಹಾಕಿಕೊಂಡು 1 ಬಿಲಿಯನ್ ಡಾಲರುಗಳ ಲಾಭ ಎತ್ತುವ ಚಿಂತನೆ ನಡೆಸಿದ್ದಾನೆ. ಒಲಿಂಪಿಕ್ ಆಟಗಳ ನೆಪದಲ್ಲಿ ದೇಶದಲ್ಲಿ ಹತ್ತು ಪಟ್ಟು ಬೆಳೆಯುವ ವೇಶ್ಯಾವಾಟಿಕೆ, ಡ್ರಗ್ ಮಾಫಿಯಾ, ಭ್ರಷ್ಟಾಚಾರ, ಕೊಲೆ-ಸುಲಿಕೆ, ದರೋಡೆ – ಇವನ್ನೆಲ್ಲ ಬಗ್ಗು ಬಡಿಯುವುದಾದರೂ ಹೇಗೆ ಎಂದು ಪೊಲೀಸರು ಮೈ ಪರಚಿಕೊಳ್ಳುವಂತಾಗಿದೆ. ಮೊದಲೇ ಸೊಳ್ಳೆಗಳಿಗೆ ಜಗದ್ವಿಖ್ಯಾತವಾದ ರಿಯೋದಲ್ಲಿ ಈಗ ಝೀಕಾ ವೈರಸ್‍ನ ಕಾಟ ಬೇರೆ ರಾಕ್ಷಸಾಕಾರದಲ್ಲಿ ಬೆಳೆದಿದೆ. ಇಷ್ಟೆಲ್ಲ ಸಮಸ್ಯೆ ಬೆನ್ನಿಗೆ ಕಟ್ಟಿಕೊಂಡು ಒಲಿಂಪಿಕ್ಸ್ ಬೇಕಾ ಎಂದು ಕೆಲವು ಸಂಘಟನೆಗಳು ಬೀದಿಗಿಳಿದು ಘೋಷಣೆ ಕೂಗುತ್ತಿರುವಾಗಲೇ ಅತ್ತ ಮರಕಾನ್ನ ಸ್ಟೇಡಿಯಂ ಆಕಾಶದೆತ್ತರ ಹಾರಿ ಚಿತ್ತಾರ ಬಿಡಿಸುವ ಬಾಣ ಬಿರುಸಿನ ವರ್ಣರಂಜಿತ ಅಬ್ಬರದೊಂದಿಗೆ ಒಲಿಂಪಿಕ್ಸ್ ಆಟಗಳ ಸ್ವಾಗತಕ್ಕೆ ಅಣಿಯಾಗುತ್ತಿದೆ.

ಇವನ್ನೆಲ್ಲ ನೋಡುವಾಗ ರಿಯೋ ನಮ್ಮ ಅಕ್ಕಪಕ್ಕದ ಊರುಗಳಲ್ಲಿ ಒಂದಿರಬಹುದೇ ಎಂಬ ಅನುಮಾನ ಬರದಿರುತ್ತದಾ ಹೇಳಿ!

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!