‘ಶ್ರೀ ಕೃಷ್ಣ’. ಆಹಾ!!! ಆ ಪದವೇ ಹಾಗೆ. ಆ ವ್ಯಕ್ತಿತ್ವವೇ ಅಂತಹುದು. ಆಬಾಲವೃದ್ಧರಾದಿಯಾಗಿ ಪ್ರತಿಯೊಬ್ಬರೂ ಇಷ್ಟಪಡುವ, ಪ್ರೀತಿಸುವ ಹೆಸರು’ಶ್ರೀ ಕೃಷ್ಣ’. “ನೀನ್ಯಾಕೋ? ನಿನ್ನ ಹಂಗ್ಯಾಕೋ? ನಿನ್ನ ನಾಮದ ಬಲವೊಂದಿದ್ದರೆ ಸಾಕೋ..” ಎಂಬ ದಾಸರ ಪದದ ಸಾಲುಗಳಂತೆ ಆ ಹೆಸರಿನಲ್ಲೇ ಒಂದು ಶಕ್ತಿ ಇದೆ, ಒಂದು ದೈವತ್ವ ಇದೆ, ಒಂದು ಸೆಳೆತ ಅಥವಾ ಆಕರ್ಷಣೆ ಇದೆ. ಇನ್ನು ಆ ದಿವ್ಯ ರೂಪದ ಕುರಿತಾಗಿಯಂತೂ ಹೇಳುವುದೇ ಬೇಡ. ಆ ರೂಪ,ಆ ಸೌಂದರ್ಯ ಎರಡೂ ಕೂಡ ವರ್ಣನೆಗಳಿಗೆ ಮೀರಿದ್ದು. ಶಾಂತ ಸ್ವರೂಪಿ ಮೊಗ, ಕೈಯಲ್ಲೊಂದು ಕೊಳಲು, ತಲೆಯ ಮೇಲೊಂದು ನವಿಲು ಗರಿ,ಅಗತ್ಯಕ್ಕನುಸಾರ ಒಂದು ಸುದರ್ಷನ ಚಕ್ರ. ಆ ಶಾಂತ ಸ್ವರೂಪಿ ಮೊಗದಲ್ಲಿ ಸದಾ ಅಲಂಕೃತವಾಗಿರುವ ಮಂದಸ್ಮಿತ ಇಡೀ ಜಗತ್ತಿನ ನೋವು-ನಲಿವುಗಳನ್ನೇ ತನ್ನ ಒಡಲಲ್ಲಿರಿಸಿಕೊಂಡಿದೆಯೇನೋ ಅನಿಸುತ್ತದೆ. ಎಲ್ಲವನ್ನೂ ಅರಿತೂ ಏನೂ ಅರಿಯದಂತೆ ನಿಂತ ಚಾಣಾಕ್ಷ ಜಗನ್ನಿಯಾಮಕನ ಆ ನಗು ಎಂದಿಗೂ ಕಾಡುವಂಥದ್ದು. ಇನ್ನು ಆ ಮುರಳಿನಾದ, ಎಲ್ಲಿ ಕೇಳಿದರೂ ಮೊದಲು ನೆನಪಾಗುವುದು ಶ್ರೀ ಕೃಷ್ಣ. ಕೊಳಲಿನ ನಾದದಲ್ಲಿ ನಾವು ನಿಜವಾಗಿಯೂ ಕಾಣುವುದು ಮುರಳಿಧರನ ರೂಪ. ಹಾಗೆಯೇ ತಲೆಯ ಮೇಲಿನ ನವಿಲು ಗರಿ. ಅದೇಕೋ ನವಿಲು ಗರಿ ಅಂದ ತಕ್ಷಣ ಬದುಕಿನ ಪ್ರೀತಿಯ ಸಂಕೇತದಂತೆ ನನಗನಿಸುತ್ತದೆ. ಕೃಷ್ಣ ಆ ಪ್ರೀತಿಯ ರಾಯಭಾರಿಯಂತೆ ಭಾಸವಾಗುತ್ತದೆ.
‘ಶ್ರೀ ಕೃಷ್ಣ’ ದೇವರು. ಜಗನ್ನಿಯಾಮಕ. ಆದರೆ ಇವೆಲ್ಲಕ್ಕಿಂತ ಹೆಚ್ಚಾಗಿ ಆತ ಭಕ್ತರಿಗೆ ಪ್ರೀತಿ ಪಾತ್ರ,ಆತ್ಮೀಯ. ನನ್ನ ಪ್ರಕಾರ ಆತ ಭಕ್ತರ ಪಾಲಿಗೆ ದೇವರು ಎನ್ನವುದಕ್ಕಿಂತ ಹೆಚ್ಚಾಗಿ ಕಾಣಿಸುವುದು ಒಬ್ಬ ಕಷ್ಟದಲ್ಲಿ ಕಾಪಾಡುವ ಬಂಧುವಾಗಿ. ಅಷ್ಟೇ ಅಲ್ಲ, ನಮ್ಮಲ್ಲೊಬ್ಬನಾಗಿ. ಕಾರಣ ಇಷ್ಟೇ. ‘ಶ್ರೀ ಕೃಷ್ಣ’ನ ಲೀಲೆಗಳೆ ಹಾಗಿವೆ. ಆತ ಎಲ್ಲ ಮಕ್ಕಳಂತೆ ಚಿಕ್ಕವನಿದ್ದಾಗ ಮಣ್ಣು ತಿನ್ನುವ ಚೇಷ್ಟೆ ಮಾಡುತ್ತಿದ್ದ,ಬೆಣ್ಣೆ ಕದ್ದು ಅಮ್ಮನ ಕೈಲಿ ಬೈಸಿಕೊಳ್ಳುತ್ತಿದ್ದ,ಮೊಸರು ಮಾರುವವರ ಕುಡಿಕೆ ಒಡೆಯುತ್ತಿದ್ದ,ಗೋಪಿಕೆಯರ ಸೀರೆ ಕದ್ದು ಬಚ್ಚಿಡುತ್ತಿದ್ದ. ಹೀಗೆ ಎಲ್ಲರೂ ಮಾಡುವಂತಹ ಬಾಲ್ಯ ಸಹಜ ಚೇಷ್ಟೆಗಳನ್ನು ಕೃಷ್ಣನೂ ಮಾಡಿದ್ದ ಎಂಬ ಕಥೆಗಳು ಎಲ್ಲೊ ಒಂದು ಕಡೆ ಅರಿಯದೇ ಅರಳುವ ಮುಗ್ಧ ಪ್ರೀತಿಯನ್ನು ಆ ಬಾಲಕೃಷ್ಣ ನ ಮೇಲೆ ಹುಟ್ಟು ಹಾಕುತ್ತದೆ. ನಮ್ಮದೇ ಗೆಳೆಯನೇನೋ ಅನಿಸುವಂತೆ ಮಾಡುತ್ತದೆ. ಈ ಸಮಯದಲ್ಲಿ ಅದೆಷ್ಟೋ ರಾಕ್ಷಸರ ಸಂಹಾರ ಕೂಡ ಕೃಷ್ಣ ಮಾಡುತ್ತಾನೆ. ಆದರೆ ಅವುಗಳೆಲ್ಲದರ ನಡುವೆಯೂ ಗೋಪಾಲಕರ ಮಧ್ಯದಲ್ಲಿದ್ದು ಎಲ್ಲರಂತೆ ಬದುಕುವ ವಿಶಿಷ್ಟ ವ್ಯಕ್ತಿತ್ವ ಶ್ರೀ ಕೃಷ್ಣನದು. ಮಣ್ಣುಂಡ ಬಾಯ ತೆರೆದು ತೋರು ಎಂದಾಗ ಅದರಲ್ಲಿ ಇಡೀ ಬ್ರಹ್ಮಾಂಡವನ್ನೇ ತಾಯಿಗೆ ತೋರುವ ಕೃಷ್ಣ, ತಾಯಿ ಯಶೋಧೆ ಅಪ್ಪುಗೆಯಲ್ಲಿ ಮತ್ತೆ ಪುಟ್ಟ ಮಗುವಾಗುತ್ತಾನೆ. ತನಗೆ ಏನೂ ಗೊತ್ತೇ ಇಲ್ಲವೇನೋ ಎಂಬಂತೆ ಮತ್ತದೇ ಚೇಷ್ಟೆಗಳಿಗೆ ತೊಡಗುತ್ತಾನೆ. ಅಲ್ಲಿಯೇ ಅಲ್ಲವೇ ವ್ಯಕ್ತಿತ್ವದ ಘನತೆ ಅಡಗಿರುವುದು. ಎಂಥ ರಾಕ್ಷಸರ ಸಂಹಾರ ಮಾಡಿದರೇನು? ಆ ತಾಯಿಗೆ ಆತ ಪುಟ್ಟ ಮಗುವಲ್ಲವೇ? “ಜಗದೋದ್ಧಾರನ ಆಡಿಸಿದಳ್ಯಶೋಧೆ… ಸುಗುಣಾಂತರಂಗನ ಆಡಿಸಿದಳ್ಯಶೋಧೆ…” ಎಂಬಂತೆ ಆಕೆ ನಿಜಕ್ಕೂ ಪುಣ್ಯವಂತೆ. ಜಗತ್ತನ್ನೇ ತನ್ನ ಕೈಬೆರಳಿನಲ್ಲಿ ಆಡಿಸಬಲ್ಲ ಕೃಷ್ಣ, ಆಕೆಯ ಮಡಿಲಲ್ಲಿ ಮಲಗಿ ಆಟವಾಡುವುದೆಂದರೆ ಸಾಮಾನ್ಯವೇ? ಖಂಡಿತ ಅಲ್ಲ. ಶ್ರೀ ಕೃಷ್ಣನ ವ್ಯಕ್ತಿತ್ವದ ಸೊಗಡೇ ಹಾಗೆ; ಆತ ತಾಯಿಗೆ ಮಗನಾಗಿ, ಗೆಳೆಯರಿಗೆ ಆಪ್ತಮಿತ್ರನಾಗಿ,ಗೋವುಗಳ ಪಾಲಕನಾಗಿ, ಗೋಪಿಕೆಯರ ಛೇಡಿಸುವ ತುಂಟನಾಗಿ, ದುಷ್ಟ ಮಾವನ ಪಾಲಿನ ಯಮನಾಗಿ, ತಂಗಿಗೆ ರಕ್ಷಣೆಯ ಕಣ್ಣಾಗಿ, ಅಣ್ಣನ ಪ್ರೀತಿಯ ತಮ್ಮನಾಗಿ, ತನ್ನ ಪ್ರೀತಿಸುವವನ್ನು ಸಂಕಷ್ಟ ಗಳಿಂದ ಕಾಪಾಡುವ ದೇವರಾಗಿ, ಭಗವದ್ಗೀತಾ ಬೋಧಕನಾಗಿ, ಸಾರಥಿಯಾಗಿ, ಸಂಧಾನಕಾರನಾಗಿ ಹೀಗೆ ಎಲ್ಲವನ್ನು ನಿಭಾಯಿಸುವ ಪರಿಪೂರ್ಣ ವ್ಯಕ್ತಿತ್ವ ಕೃಷ್ಣನದ್ದು.
‘ಶ್ರೀ ಕೃಷ್ಣ’ ಅಂದರೆ ನನ್ನ ಪಾಲಿಗೆ ಒಂದು ಜೀವನ ಪ್ರೀತಿ. ಆತನ ವ್ಯಕ್ತಿತ್ವ ಎಲ್ಲಿಯೂ ಈ ಬದುಕಿನ ಜಂಜಡಗಳಿಂದ ವಿಮುಖವಾಗುವ ಪಾಠ ಹೇಳುವುದಿಲ್ಲ. ಸಂಸಾರದಲ್ಲಿದ್ದುಕೊಂಡೆ ಮುಕ್ತಿಯ ಪಡೆಯುವ ದಾರಿ ತೋರಿಸಿದ ವ್ಯಕ್ತಿತ್ವ ಅದು. ಆತ ದೈವೀ ಸಂಭೂತನಾದರೂ ಮಹಾಭಾರತದುದ್ದಕ್ಕೂ ತನ್ನ ಯೋಚನೆಗಳ, ನಿರ್ಧಾರಗಳ ಚಾಣಾಕ್ಷತೆಯಿಂದಲೇ ಕಾರ್ಯ ಸಾಧಿಸುತ್ತಾನೆಯೇ ಹೊರತು ದೈವೀ ಶಕ್ತಿಯ ಪ್ರಯೋಗ ಮಾಡುವುದಿಲ್ಲ. ಜಗತ್ತಿನ ಒಳಿತಿಗಾಗಿ ಆತ ಕೈಗೊಳ್ಳುವ ಪ್ರತಿ ನಿರ್ಧಾರವೂ ಒಂದು ಜೀವನ ಪಾಠ. ಆತ ಜಗವೆಂಬ ಪ್ರಜಾಪ್ರಭುತ್ವದ ಚಾಣಾಕ್ಷ ಹಾಗೂ ಅತ್ಯುನ್ನತ ಮೌಲ್ಯಗಳ ಬೋಧಿಸಿದ ರಾಜಕಾರಣಿ. ಕೃಷ್ಣನ ಅದೆಷ್ಟೋ ಕಥೆಗಳು ನಮ್ಮದೇ ಏನೋ ಅನಿಸುವಷ್ಟು ಹತ್ತಿರವಾಗುತ್ತವೆ. ನಮ್ಮ ಬದುಕಿನ ಹಲವು ಸಮಸ್ಯೆಗಳಿಗೆ ಆ ಕಥೆಗಳು ಅಥವಾ ಕಥೆಯಲ್ಲಿ ಬರುವ ಪಾತ್ರಗಳು ಉತ್ತರವಾಗಬಲ್ಲವು. ಸಂಬಂಧಗಳ ನಡುವಿನ ಗುದ್ದಾಟ, ವೈಷಮ್ಯ, ಹಾಗೂ ಅವನ್ನು ಕೃಷ್ಣ ನಿಭಾಯಿಸುವ ರೀತಿ ಎಲ್ಲವೂ ಅತ್ಯಪೂರ್ವ. ಅದಕ್ಕೇ ತಾನೆ ಮಹಾಭಾರತ ಮತ್ತೆ ಮತ್ತೆ ಮನಸನ್ನು ತಟ್ಟುವುದು. ಸಂಬಂಧಗಳೊಡನೆ ಹೋರಾಡಲಾರೆ ಎಂದು ಅರ್ಜುನ ಕುಳಿತಾಗ ಭಗವದ್ಗೀತೆ ಎಂಬ ಜೀವನ ಸತ್ಯವನ್ನು ಭೋದಿಸಿದ ಆ ಪಾರ್ಥಸಾರಥಿ “ಇಲ್ಲಿ ಈಸಬೇಕು, ಇದ್ದು ಜಯಿಸಬೇಕು” ಎಂಬ ಸಾರ್ವತ್ರಿಕ ಸತ್ಯದ ಅನಾವರಣ ಮಾಡುತ್ತಾನೆ. ಅದಕ್ಕೇ ನನಗೆ ಶ್ರೀ ಕೃಷ್ಣ ಕಾಣುವುದು ಜೀವನ ಪ್ರೀತಿಯಾಗಿ. ಸಂದರ್ಭಗಳಿಗೆ ಹೆದರಿ ಹೇಡಿಯಂತೆ ಕರ್ತವ್ಯ ವಿಮುಖನಾಗುವುದು ಉಚಿತವಲ್ಲ. ನಾವು ಕೈಗೊಂಡಿರುವ ಕಾರ್ಯ ಒಳಿತಾಗಿದ್ದರೆ ಬೇರೆಲ್ಲವೂ ನಗಣ್ಯ ಎಂಬ ನಗ್ನ ಸತ್ಯದ ಅರಿವನ್ನು ಕೃಷ್ಣನ ವ್ಯಕ್ತಿತ್ವ ಪದೇ ಪದೇ ಮಾಡಿಸುತ್ತದೆ.
ಈ ಬೆಣ್ಣೆ ಕೃಷ್ಣ ಎಲ್ಲರಿಗೂ ಅದೆಷ್ಟು ಆತ್ಮೀಯ ಅನ್ನುವುದಕ್ಕೆ ಅವನ ಕುರಿತಾಗಿ ರಚಿತವಾಗಿರುವ ಹಾಡುಗಳೇ ಸಾಕ್ಷಿ. ಅದೆಷ್ಟು ಹಾಡುಗಳು; ಅಬ್ಬಾ ಬಹುಷಃ ಎಣಿಕೆಗೆ ಸಿಗದ ಸಂಖ್ಯೆ ಅದು.
“ಬೆಣ್ಣೆ ಕದ್ದ ನಮ್ಮ ಕೃಷ್ಣ..ಬೆಣ್ಣೆ ಕದ್ದನಮ್ಮ.. ಬೆಣ್ಣೆ ಕದ್ದು ಜಾರುತ ಬಿದ್ದು ಮೊಣಕಾಲೂದಿಸಿಕೊಂಡನಮ್ಮ..”
ದೇವರ ದೇವ ಆ ಕೃಷ್ಣ ಬೆಣ್ಣೆ ಕದ್ದನಂತೆ, ಜಾರಿ ಬಿದ್ದು ಮೊಣಕಾಲು ಬೇರೆ ಊದಿಸಿಕೊಂಡನಂತೆ. ಈ ಒಂದು ಸಾಲು ಸಾಕಲ್ಲವೇ ಕೃಷ್ಣ ಅದೆಷ್ಟು ಆತ್ಮೀಯ ಎಂದು ತಿಳಿಯಲು.
“ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ…”
ದೇವರೇ ಇಡುವ ದೇವರಾಣೆ ಅದೆಷ್ಟು ಸೊಗಸು ಅಲ್ಲವೇ?
“ಉಡುಪಿಯ ಕಂಡೀರಾ? ಉಡುಪಿಯ ಕೃಷ್ಣನ ಕಂಡೀರಾ?
ಕೃಷ್ಣನ ಕಂಡೀರಾ? ಕೃಷ್ಣನ ಉಡುಪಿಯ ಕಂಡೀರಾ?”
ಉಡುಪಿಯ ಕೃಷ್ಣ, ಕೃಷ್ಣನದೇ ಉಡುಪಿ. ಅದೆಷ್ಟು ಸುಂದರ ಬಾಂಧವ್ಯ ಇದು ಅಲ್ಲವೇ?
ಹೀಗೆ ಶ್ರೀಕೃಷ್ಣ ನನಗೆ ಅವನ ರೂಪದಿಂದಲಾಗಲಿ,ಹೆಸರಿನಿಂದಾಗಲಿ, ಅಥವಾ ಈ ಹಾಡುಗಳಿಂದಾಗಲಿ,ಬೇರೆಲ್ಲೂ ಸಿಗದ, ಮನದೊಳಗೆ ಸಣ್ಣ ಕಚಗುಳಿ ಇಡುವ ನಗುವನ್ನು ತರುವ, ಅದೆಲ್ಲೋ ದೂರದಿಂದ ಅಗೋಚರವಾಗಿ ತನ್ನ ಮುರಳಿಯ ನಾದದಿಂದ ಆತ್ಮಾನಂದ ಕೊಡುವ ಮೋಜುಗಾರ. ಜಗತ್ತೇ ಅವನ ಲೀಲೆ, ಅದರೊಳಗೆ ಮಾನವ ರೂಪಿಯಾಗಿ ಬಂದು ಆತ ನಡೆಸಿದ ಲೀಲೆಗಳಿಗೆ ಮಿತಿ ಇಲ್ಲ.
ಇನ್ನೊಂದು ದಾಸರ ಪದದ ಸಾಲು ನೆನಪಾಗುತ್ತಿದೆ.
“ಮಣ್ಣುಂಡ ಬಾಯ ತೆರೆದು, ಬ್ರಹ್ಮಾಂಡವನೆ ತೋರಿದ ಕೃಷ್ಣ; ನಿನ್ನ ಲೀಲೆ ಪಾಡಲು ಮತಿಯು ಸಾಲದು…”
ನಿಜ. ಅವನ ಲೀಲೆಗಳ ಹಾಡಿ ಹೊಗಳುವಷ್ಟು ಮತಿ ನನಗೆಲ್ಲಿಂದ ಬರಬೇಕು ಹೇಳಿ. ಇಲ್ಲಿ ನಾನು ವ್ಯಕ್ತ ಪಡಿಸಲು ಯತ್ನಿಸಿರುವುದು ಅವನ ಮೇಲಿನ ನನ್ನ ಪ್ರೀತಿ ಹಾಗೂ ನನಗೇ ಅರಿಯದ ನಿಷ್ಕಾರಣ ಆಕರ್ಷಣೆ ಅಷ್ಟೇ.
ಶ್ರೀ ಕೃಷ್ಣನ ವ್ಯಕ್ತಿತ್ವದಲ್ಲಿ ನನ್ನನ್ನು ಅತಿಯಾಗಿ ಆಕರ್ಷಿಸುವ ಗುಣವೆಂದರೆ, ಆತ ಸಾಮಾನ್ಯರೊಂದಿಗೆ ಸಾಮಾನ್ಯನಾಗಿದ್ದು ಕೂಡ ತನ್ನ ವ್ಯಕ್ತಿತ್ವದ ಘನತೆಯನ್ನು ಉಳಿಸಿಕೊಳ್ಳುವುದು. ಸಾರಥಿಯಾಗಿ ಅರ್ಜುನನಿಗೆ ಜೊತೆ ನೀಡುವ ಕೃಷ್ಣ,ಸಂದರ್ಭದ ಅಗತ್ಯತೆಯನ್ನರಿತು, ತನ್ನ ವಿಶ್ವರೂಪದರ್ಶನ ಮಾಡಿಸುತ್ತಾನೆ. ಹಾಗೆಯೇ ಯಾರೇ ಆಗಲಿ ತಮ್ಮಲ್ಲಿರುವ ಅದ್ಭುತ ಶಕ್ತಿಗಳನ್ನು ಪ್ರದರ್ಶನಕ್ಕಿಡದೇ ಅಗತ್ಯ ಬಿದ್ದಾಗ ಅದನ್ನು ಬಳಸಿ ಆ ಮೂಲಕ ತಮ್ಮ ವ್ಯಕ್ತಿತ್ವದ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ. ಅದ್ದರಿಂದ ಈ ಅಷ್ಠಮಿಯ ಸುಸಂದರ್ಭದಲ್ಲಿ ಶ್ರೀಕೃಷ್ಣನ ಪೂಜೆ, ನಾಮಸ್ಮರಣೆಯ ಜೊತೆ ಜೊತೆಗೆ ಆ ಮೇರು ವ್ಯಕ್ತಿತ್ವದ ಗುಣಗಳನ್ನು ಆದಷ್ಟು ಮೈಗೂಡಿಸಿಕೊಳ್ಳುವತ್ತ ನಮ್ಮ ಪ್ರಯತ್ನ ನಡೆಸೋಣ. ಕೃಷ್ಣತ್ವದ ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವತ್ತ ಈ ಬಾಳ ಪಯಣ ಸಾಗಲಿ. ಆ ಮೂಲಕ ಆ ವೇಣುನಾದದಂತೆ ಬದುಕು ಸಂಗೀತಮಯವಾಗಲಿ, ಪ್ರೀತಿಯ ನವಿಲುಗರಿಗಳು ಬಾಳಲ್ಲಿ ಮೂಡಲಿ, ಕೃಷ್ಣನ ಆ ಮಂದಸ್ಮಿತಭರಿತ ಅಪೂರ್ವ ಮೊಗದಂತೆ ನೋವು ನಲಿವುಗಳನ್ನು ಸಮಾನ ಚಿತ್ತರಾಗಿ ಸ್ವೀಕರಿಸುವ ತಾಳ್ಮೆನಮ್ಮದಾಗಲಿ.
“ಧಣಿ ನೀನು ಕಣ-ಕಣಗಳಿಗೆ,
ಋಣಿ ನಾನು ನಿನ್ನ ಕಥೆಗಳಿಗೆ!!!
ಶರಣೆನುವೆ ಲೋಕೋತ್ತಮಾ…ಕೃಷ್ಣಾ!!!”