Featured ಅಂಕಣ

ಸುಳ್ಳು ವರದಿ ಬಿತ್ತರಿಸಿ ಆತ್ಮಹತ್ಯೆಯ ಬಳಿಕ ನುಣುಚಿಕೊಂಡರೇ ಮಾಧ್ಯಮದ ಮಂದಿ?

ಹತ್ತು ಲಕ್ಷ ಲಂಚಕ್ಕಾಗಿ ಬೇಡಿಕೆಯಿಟ್ಟ ಡಿವೈಎಸ್’ಪಿ ಎನ್ನುವ ಆ ಬ್ರೇಕಿಂಗ್ ನ್ಯೂಸ್ ನೋಡಿ ನಿಜಕ್ಕೂ ಆತಂಕವುಂಟಾಗಿತ್ತು. ಏನಾಗುತ್ತಿದೆ ನಮ್ಮ ಪೋಲೀಸ್ ಇಲಾಖೆಯಲ್ಲಿ? ದೇಶದಲ್ಲಿ ತನ್ನದೇ ಖ್ಯಾತಿಯನ್ನು ಗಳಿಸಿದ್ದ ನಮ್ಮ ಪೋಲೀಸರು ಯಾಕೆ ಇಷ್ಟು ಅಧಃಪತನಕ್ಕಿಳಿಯುತ್ತಿದ್ದಾರೆ? ಇಂತಹ ಪೋಲೀಸರನ್ನೇ ನಾವು ಮೊನ್ನೆ ಪ್ರತಿಭಟನೆಯಂದು ಬೆಂಬಲಿಸಿದ್ದು? ಎಂಬ ಹತಾಶ ಭಾವನೆ ಮೂಡಿತ್ತು ಆ ಬ್ರೇಕಿಂಗ್ ನ್ಯೂಸ್ ನೋಡಿ. ನಮ್ಮ ರಾಜಕಾರಣವಂತೂ ಮೇಲಕ್ಕೆತ್ತಲೂ ಸಾಧ್ಯವಿಲ್ಲ ಎನ್ನುವಷ್ಟು ತಳ ಮುಟ್ಟಿದೆ. ಪೋಲೀಸರೂ ಹೀಗೆಯಾ? ಲಂಚವೆನ್ನುವುದು ಸಾಮಾನ್ಯವಾಗಿದೆ ಎಂದು ಗೊತ್ತು, ಆದರೆ ಓಪನ್ನಾಗಿ ಹತ್ತು ಲಕ್ಷ ಲಂಚ ಕೇಳುವಷ್ಟು ದರಿದ್ರರಾದ್ರಾ ಈ ಪೋಲೀಸರು? ಮುಂತಾದ ಯೋಚನೆಗಳನ್ನು ಹುಟ್ಟು ಹಾಕಿತ್ತು ಆ ನ್ಯೂಸು. ಒಂದಿಡೀ ದಿನ ಸುದ್ದಿ ಮಾಡಿ ಆ ನ್ಯೂಸು ಟಿವಿಯಿಂದ ಮರೆಯಾದಂತೆ ನಮ್ಮ ನೆನಪಿನ ಶಕ್ತಿಯಿಂದಲೂ ಮರುದಿನವೇ ಮರೆಯಾಗಿ ಹೋಯ್ತು. ಆದರೆ ಆ ನೆನಪಿನ ನೆತ್ತಿ ಮೇಲೆ ಹೊಡೆದಂತೆ  ಘಟನೆಯೊಂದು ಎರಡು ದಿನಗಳ ಬಳಿಕ ನಡೆದು ಹೋಯ್ತು. ತನ್ನ ಮೇಲಿದ್ದ ಆರೋಪಗಳಿಂದ, ಒತ್ತಡಗಳಿಂದ, ರಾಜ್ಯಾದ್ಯಂತ ಪ್ರಸಾರವಾದ ಹೀನಾಮಾನ ಟೀವಿ ವರದಿಗಳಿಂದ ಬೇಸತ್ತು ಖಿನ್ನನಾದ ಕಲ್ಲಪ್ಪ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಇಡೀ ರಾಜ್ಯದಲ್ಲಿ ತೀವ್ರ ತಲ್ಲಣವನ್ನುಂಟುಮಾಡಿತು. 


ಆತ್ಮಹತ್ಯೆ ಎಂದಾದ ಮೇಲೆ ಅಲ್ಲಿ ಒಂದಿಲ್ಲೊಂದು ಕಾರಣವಿದ್ದೇ ಇರುತ್ತದೆ. ಗಣಪತಿಯವರ ಆತ್ಮಹತ್ಯೆಯಲ್ಲಿ, ಸರಕಾರದ ದೃಷ್ಟಿಯಲ್ಲಿ ಕೌಟುಂಬಿಕ ಕಾರಣವಿತ್ತಲ್ಲ?, ಹಾಗೆಯೇ ಕಲ್ಲಪ್ಪ ಹಂಡಿಬಾಗ್ ಅವರ ಮೇಲೆ ಆರೋಪಗಳು ಬಂದಾಗ, ಅವರನ್ನು  ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಖಾಕಿಯನ್ನು ಇಷ್ಟ ಪಟ್ಟು ಧರಿಸಿದ ವ್ಯಕ್ತಿಗೆ ಅದನ್ನು ತಪ್ಪಲ್ಲದ ತಪ್ಪಿಗೆ ಕಳಚುವುದೆಂದರೆ ಆತನಿಗೆ ಅದಕ್ಕಿಂತ ದೊಡ್ಡ ಅವಮಾನ ಮತ್ತೊಂದಿಲ್ಲ. ಕಲ್ಲಪ್ಪರಿಗೂ ಅಂತಹುದೇ ಅವಮಾನವಾಗಿತ್ತು. ಜೊತೆಗೆ ಅರೋಪಕ್ಕೆ ಸಂಬಂಧ ಪಟ್ಟಂತೆ ಸ್ಪಷ್ಟನೆ ನೀಡಬೇಕಾದ ಅನಿವಾರ್ಯತೆ, ಕಿರಿಕಿರಿ.. ಅದುವೇ ಅವರ ಆತ್ಮಹತ್ಯೆಗೆ ಕಾರಣವಾಗಿತ್ತು. ಅಲ್ಲಿ ಯಾವ ಮಾನಸಿಕ ಖಿನ್ನತೆಯೂ ಇರಲಿಲ್ಲ, ಸಾಂಸಾರಿಕ ಕಲಹವೂ ಇರಲಿಲ್ಲ.

ಆದರೆ ನಾವಿಲ್ಲಿ ಮತ್ತೊಂದು ಅತೀ ಸೂಕ್ಷ್ಮ ಸಂಗತಿಯೊಂದನ್ನು ಗಮನಿಸಬೇಕು. ಕಲ್ಲಪ್ಪ ಅವರ ಮೇಲೆ ಆರೋಪ ಕೇಳಿ ಬಂದ ದಿನ ನಮ್ಮ 24*7 ಟೀವಿ ಮಾಧ್ಯಮಗಳು ಕಲ್ಲಪ್ಪ ಅವರನ್ನೇ ಅಪರಾಧಿಯಂತೆ ಬಿಂಬಿಸಿ ಇಡೀ ದಿನ ಸುದ್ದಿ ಮಾಡಿದ್ದವು. ಅದ್ಯಾವುದೋ ಫೋನ್ ಕರೆ ರೆಕಾರ್ಡನ್ನು ಮತ್ತೆ ಮತ್ತೆ ಪ್ರಸಾರ ಮಾಡಿ ಡಿವೈಎಸ್’ಪಿ ಕಲ್ಲಪ್ಪ ಕಡೆಗೆಯೇ ಬೆರಳು ತೋರಿಸಿದ್ದವು. ಆ ರೆಕಾರ್ಡನ್ನು ಗಮನಿಸುವಾಗ ಮೇಲ್ನೋಟಕ್ಕೆ ಕಲ್ಲಪ್ಪ ಅವರು ಲಂಚ ಕೇಳುವವಂತಿದ್ದರೂ ಇಡೀಯ ಪ್ರಕರಣದಲ್ಲಿ ಅವರನ್ನು ಸಿಕ್ಕಿಸಿ ಹಾಕಲಾಗಿತ್ತು ಎನ್ನುವ ಮಾತು ಈಗ ಕೇಳಿ ಬರುತ್ತಿದೆ. ಈಗ ಹೇಳಿ, ಅಪರಾಧಿ ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸುವುದು ಕೋರ್ಟು, ಕೋರ್ಟಿಗೂ ಮುಂಚೆ ಕಲ್ಲಪ್ಪರನ್ನು ಅಪರಾಧಿಯಂತೆ ಬಿಂಬಿಸಿದ ನಮ್ಮ ಚಾನೆಲ್ಲುಗಳೂ ಸಹ ಕಲ್ಲಪ್ಪ ಅವರ ಆತ್ಮಹತ್ಯೆಯಲ್ಲಿ ಪಾಲುದಾರರಲ್ಲವೇ? ಇದು ನಿಜಕ್ಕೂ ಯೋಚಿಸಬೇಕಾದ ವಿಷಯ.

ಆದರೆ ನಮ್ಮ ಮಾಧ್ಯಮಗಳು ಭಯಂಕರ ಚಾಣಾಕ್ಷ ಬುದ್ಧಿಯವು,  ಕಲ್ಲೆಸೆದು ಅಡಗಿಕೊಳ್ಳುವುದು ಹೇಗೆಂದು ಅವಕ್ಕೆ ಕರಗತವಾಗಿ ಹೋಗಿದೆ. ಕಲ್ಲಪ್ಪ ಅವರ ಮೇಲೆ ಆರೋಪ ಕೇಳಿ ಬಂದಾಗ ಕಲ್ಲಪ್ಪ ಅವರ ಕಡೆಗೆಯೇ ಕೈ ತೋರಿಸಿ, ಮಾನಹಾನಿಗಿಳಿದಿದ್ದ ಮಾಧ್ಯಮಗಳು ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಂಡ ತಕ್ಷಣ “ಆತ ದಕ್ಷ ಅಧಿಕಾರಿಯಾಗಿದ್ದ, ಆತನ ಮೇಲೆ ಪಿತೂರಿ ಮಾಡಿ ಬಲೆಗೆ ಬೀಳಿಸಿದರು” ಅಂತ ಸುದ್ದಿ ಮಾಡಿದವು. ಕಲ್ಲಪ್ಪ ಆತ್ಮಹತ್ಯೆಯ ಕುರಿತಾಗಿ ನಡೆಯುತ್ತಿದ್ದ ಸಿಓಡಿ ತನಿಖೆಯ ಕುರಿತಾಗಿ ಹೆಚ್ಚು ಸುದ್ದಿಗಳನ್ನು ಪ್ರಸಾರ ಮಾಡಿದವು. ಮೊದಲು ಯಾರು ಕಲ್ಲಪ್ಪ ವಿರುದ್ಧ ದೂರು ನೀಡಿದ್ದರೋ ಅವರ ಮೇಲೆಯೇ ಗುಮಾನಿ ವ್ಯಕ್ತಪಡಿಸಿ ತಮ್ಮ ಕಾಲ ಬುಡಕ್ಕೆ ಕೇಸು ಸುತ್ತಿಕ್ಕೊಳ್ಳದಂತೆ ಯಶಸ್ವಿಯಾಗಿ ನೋಡಿಕೊಂಡವು.

ಕಲ್ಲಪ್ಪ ಅವರ ಆತ್ಮಹತ್ಯೆಗೆ ಮಾಧ್ಯಮಗಳೇ ಕಾರಣ ಎಂಬುದು ಈ ಲೇಖನದ ತಿರುಳಲ್ಲ. ಆ ಆತ್ಮಹತ್ಯೆಯ ಹಿಂದೆ ಪ್ರವೀಣ್ ಖಾಂಡ್ಯ, ಎಕ್ಸೆಟ್ರಾ ಎಕ್ಸೆಟ್ರಾ ಗ್ಯಾಂಗಿನ ಷಡ್ಯಂತ್ರ ಇದೆ ಎನ್ನುವುದು ಸಿಐಡಿಯ ಅಭಿಪ್ರಾಯವಾಗಿದೆ. ಜೊತೆಗೆ ಕಲ್ಲಪ್ಪ ಅವರಿಗೆ ಪೋಲೀಸ್ ಇಲಾಖೆಯಲ್ಲಿ ಮಾಮೂಲಿಯಾಗಿರುವ ಮೇಲಾಧಿಕಾರಿಗಳ ಒತ್ತಡವೂ ಇತ್ತು ಎನ್ನುವ ಅನುಮಾನಗಳಿವೆ. ನಾನು ಹೇಳುತ್ತಿರುವುದೇನೆಂದರೆ, ತೇಜಸ್ ಎನ್ನುವ ಅಪರಿಚಿತ ವ್ಯಕ್ತಿ ಕಳುಹಿಸಿಕೊಟ್ಟ ಆಡಿಯೋ ರೆಕಾರ್ಡ್ ಆಧರಿಸಿ ಕಲ್ಲಪ್ಪರನ್ನು ದೋಷಿ ಎನ್ನುವಂತಹ ಸುದ್ದಿಗಳನ್ನು ಪ್ರಸಾರ ಇಡೀ ದಿನ ಬಿತ್ತರಿಸಿದ್ದರಿಂದಲೇ ಖಿನ್ನತೆಗೊಳಗಾಗಿ ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಂಡಿರಬಾರದು? ತಪ್ಪು ಮಾಡದೇ ಇದ್ದರೂ ತನ್ನ ವಿರುದ್ಧ ಬಂದ ಮಾನಹಾನಿಕರ ವರದಿಗಳೇ ಯಾಕೆ ಅವರ ಆತ್ಮಹತ್ಯೆಗೆ ಪ್ರೇರಣೆ ನೀಡಿರಬಾರದು? ಈ ಅಂಶಗಳನ್ನು ಆಧರಿಸಿ, ಕಲ್ಲಪ್ಪ ಅವರ ಕುರಿತಾಗಿ ಏಕಪಕ್ಷೀಯ ವರದಿಗಳನ್ನು ಬಿತ್ತರಿಸಿದ ಟಿವಿ ಚಾನೆಲ್ಲುಗಳ ಮುಖ್ಯಸ್ಥರ ಮೇಲೂ ಯಾಕೆ ಸೆಕ್ಷನ್ ೩೦೬ರ ಪ್ರಕಾರ, ಆತ್ಮಹತ್ಯೆಗೆ ಪ್ರಚೋದನೆ ಕೇಸು ದಾಖಲಿಸಬಾರದು? ಸಾಮಾನ್ಯ ಜನರ ಮನಸ್ಸಿನಲ್ಲೇಳುವ ಇಂತಹ ಪ್ರಶ್ನೆಗಳು ಸಿಐಡಿ ಅಧಿಕಾರಿಗಳಲ್ಲೇಳುತ್ತಿಲ್ಲ ಎನ್ನುವುದೇ ವಿಪರ್ಯಾಸ.

ಈಗ ನೋಡಿ, ಅಪಹರಣ ಪ್ರಕರಣದಲ್ಲಿ ಕಲ್ಲಪ್ಪ ಅವರು ಸಂಪೂರ್ಣ ನಿರ್ದೋಷಿ, ಅವರು ಯಾವ ಲಂಚಕ್ಕೂ ಬೇಡಿಕೆಯಿಟ್ಟಿರಲಿಲ್ಲ ಅಂತ ಸಿಐಡಿ ತನಿಖಾ  ವರದಿ ನೀಡಿದೆ.. ಈ ಘೋರ ಸಾವಿಗೆ ಯಾರನ್ನು ಹೊಣೆ ಮಾಡೋಣ? ಬರೀ ಪ್ರವೀಣ್ ಖಾಂಡ್ಯ ಮತ್ತವರ ಸಹಚರರನ್ನೇ? ಕಲ್ಲಪ್ಪ ಅವರಿಗೆ ಒತ್ತಡ ಹೇರುತ್ತಿದ್ದ ಹಿರಿಯ ಅಧಿಕಾರಿಗಳನ್ನೇ? ಅಥವಾ ಟಿಆರ್’ಪಿ ಹಾದರಕ್ಕಾಗಿ ಪ್ರಕರಣದ ಸತ್ಯಾಸತ್ಯೆಯನ್ನೇ ಪರೀಕ್ಷಿಸದೇ ಬ್ರೇಕಿಂಗ್ ನ್ಯೂಸ್ ಪ್ರಕಟಿಸಿದ ನ್ಯೂಸ್ ಚಾನೆಲ್’ಗಳನ್ನೇ?  ಇವರ ಹಣದಾಹಕ್ಕಾಗಿ ಅಮಾಯಕ ಜೀವವೊಂದು ಹೋಯ್ತಲ್ಲಾ … ಛೇ !

ಇಷ್ಟೆಲ್ಲಾ ಆದರೂ ಯಾವ ಮಾಧ್ಯಮಗಳಿಗೂ ತಾವು ಮಾಡಿದ್ದು ತಪ್ಪು ಅಂತ ಅನಿಸಲಿಲ್ಲ. ಕ್ಷಣ ಕ್ಷಣದ ಬ್ರೇಕಿಂಗ್ ನ್ಯೂಸ್ ಪ್ರಕಟಿಸಿದ ಯಾವ ಮಾಧ್ಯಮಗಳೂ ಒಂದು ಲೈನಿನ ವಿಷಾಧವನ್ನು ವ್ಯಕ್ತಪಡಿಸಲಿಲ್ಲ. ಪಿಚ್ಚೆನಿಸುವುದು ಯಾಕೆಂದರೆ ಇದೇ ಮಾಧ್ಯಮಗಳು ಡಿವೈಎಸ್’ಪಿ ಗಣಪತಿಯವರು ಆತ್ಮಹತ್ಯೆ ಮಾಡಿಕೊಂಡಾಗ ಜಾರ್ಜ್  ರಾಜೀನಾಮೆಗೆ ಆಗ್ರಹಿಸಿದ್ದವು. ಮಹಿಳಾ ಪೋಲೀಸ್ ಅಧಿಕಾರಿಣಿ ಆತ್ಮಹತ್ಯೆ ಯತ್ನಿಸಿದಾಗ ಅದನ್ನೂ ದಿನವಿಡೀ  ಬ್ರೇಕಿಂಗ್ ನ್ಯೂಸ್ ಮಾಡಿದ್ದವು. ಆದರೆ ಕಲ್ಲಪ್ಪ ಆತ್ಮಹತ್ಯೆಗೆ ನಾವುಗಳೂ ಕಾರಣ ಅಂತ ಇವಕ್ಕೆನಿಸುವುದೇ ಇಲ್ಲ. ಅನಿಸಿದರೂ ಅದನ್ನು ತಮ್ಮ ಚಾನೆಲ್ಲುಗಳಲ್ಲಿ ಪ್ರಕಟಿಸುವುದಿಲ್ಲ.

ಮಾಧ್ಯಮಗಳು ಕಲ್ಲಪ್ಪ ಅವರಿಗೆ ಮಾಡಿದ ಘೋರ ಅನ್ಯಾಯವೇನು ಗೊತ್ತಾ? ಮೊದ ಮೊದಲು ಕಲ್ಲಪ್ಪ ಅವರನ್ನು ಅಪರಾಧೀ ಸ್ಥಾನದಲ್ಲಿ ನಿಲ್ಲಿಸಿದ ಮಾಧ್ಯಮಗಳು ಅವರು ಆತ್ಮಹತ್ಯೆ ಮಾಡಿಕೊಂಡ ಬಳಿಕ “ಕಲ್ಲಪ್ಪ ಅವರು ಪ್ರಾಮಾಣಿಕ ಅಧಿಕಾರಿಯಾಗಿದ್ದರು, ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಎಂದೂ ಲಂಚಕ್ಕಾಗಿ ಕೈಚಾಚಿರಲಿಲ್ಲ, ಡಿವೆಎಸ್ಪಿ ಸ್ಥಾನದಲ್ಲಿದ್ದರೂ ಮನೆಯಲ್ಲಿ ಅಚ್ಚುಕಟ್ಟಾದ ಫರ್ನೀಚರುಗಳೂ ಇರಲಿಲ್ಲ” ಎನ್ನುತ್ತಾ ಗುಣಗಾನ ಮಾಡಿದ್ದು. ವ್ಯಕ್ತಿ ತನ್ನದಲ್ಲದ ತಪ್ಪಿಗೆ  ಸತ್ತು ಹೋದ ಮೇಲೆ ಆತನ ಗುಣಗಾನ ಮಾಡಿ ಏನು ಪ್ರಯೋಜನ? ಆತನ ಸಾವಿಗೆ ತಾವೂ ಕೂಡಾ ಪರೋಕ್ಷ ಕಾರಣರಾಗಿ ಬಳಿಕ ನಾಮಸ್ಮರಣೆ ಮಾಡಿದರೆ ಹೋದ ಜೀವ ಮರಳಿ ಬರುತ್ತದೆಯೇ? ಅದರ ಬದಲಾಗಿ, ಕಲ್ಲಪ್ಪರ ಮೇಲೆ ಆರೋಪ ಕೇಳಿ ಬಂದಾಗ ಪ್ರಕರಣದ ಸತ್ಯಾಸತ್ಯತೆ ಪರೀಕ್ಷಿಸಿ ವರದಿ ಬಿತ್ತರಿಸುತ್ತಿದ್ದರೆ? ತರಾತುರಿಯಲ್ಲಿ ವರದಿ ಬಿತ್ತರಿಸದೇ, ತಮಗೆ ಸಿಕ್ಕ ಸೂಕ್ತ ದಾಖಲೆಗಳನ್ನು ಹಿರಿಯ ಪೋಲೀಸ್ ಅಧಿಕಾರಿಗಳಿಗೆ ನೀಡಿ ಕಲ್ಲಪ್ಪರ ಮೇಲೆ ಕ್ರಮ   ಕೈಗೊಳ್ಳುವಂತೆ ಆಗ್ರಹಿಸಿದ್ದರೆ? ಒಂದು ಅಮಾಯಕ ಜೀವ ಉಳಿಯುತ್ತಿತ್ತಲ್ಲವೇ?

ಈ  ಮಾಧ್ಯಮಗಳು ಯಾವ್ಯಾವುದೋ ಹಳ್ಳಿ ಮೂಲೆಯಲ್ಲಿ ನಡೆಯುವ ಸಣ್ಣ ಪುಟ್ಟ ವಿಷಯಗಳನ್ನೂ ದೊಡ್ಡದು ಮಾಡಿ ಲಬೊ ಲಬೋ ಅಂತ ಬಡಿದುಕೊಳ್ಳುತ್ತವೆ. ಸಾವಿನ ಮನೆಯಲ್ಲಿ ಕ್ಯಾಮೆರಾ ಹಿಡಿದು ನಿಲ್ಲುತ್ತವೆ. ಗಂಡ ಹೆಂಡಿರ ಜಗಳವನ್ನೂ ಜಗತ್ತಿಗೇ ಬಂದ ಕಂಟಕದಂತೆ ಬಿಂಬಿಸಿ ಬೇಳೆ ಬೇಯಿಸಿಕೊಳ್ಳುತ್ತವೆ. ಆದರೆ ತಮ್ಮ ಬಟ್ಟಲಿನಲ್ಲಿ ನೊಣ ಬಿದ್ದಾಗ ಮಾತ್ರ ತುಟಿಕ್ ಪಿಟಿಕ್ ಎನ್ನುವುದಿಲ್ಲ. ಮೊನ್ನೆ ಪ್ರಮುಖ ಸುದ್ದಿ ವಾಹಿನಿಯೊಂದರ ನಿರೂಪಕಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದನ್ನು ಯಾವುದಾದರೂ ಮಾಧ್ಯಮಗಳು ಸುದ್ದಿ ಮಾಡಿದ್ದನ್ನು ನೀವು ನೋಡಿದ್ದೀರಾ? ಮಾಧ್ಯಮದೊಳಗೆ ನಡೆಯುವ ಇಂತಹಾ ವಿಚಾರಗಳಲ್ಲಿ ಮಾಧ್ಯಮದ ಮಂದಿ  ಅಖಂಡ ಒಗ್ಗಟ್ಟು ಪ್ರದರ್ಶಿಸುತ್ತಾರೆ.


ಈ ಮಾಧ್ಯಮಗಳ ಮೇಲೆ ಕೇಸು ದಾಖಲಿಸಲೇಬೇಕು ಎನ್ನುವುದೇ ನನ್ನ ಉದ್ದೇಶವಲ್ಲ, ಆದರೆ ಬ್ರೇಕಿಂಗ್ ನ್ಯೂಸ್ ಪ್ರಕಟಿಸುವ ಭರದಲ್ಲಿ ಅಮಾಯಕರ ಜೀವನದಲ್ಲಿ ಆಟವಾಡುವ ಈ ಮಾಧ್ಯಮಗಳಿಗೆ ಕಡಿವಾಣ ಹಾಕಲೇಬೇಕು. ಯಾವುದೋ ಆಡಿಯೋವೋ ವಿಡಿಯೋವೋ ಸಿಕ್ಕಿತು ಎಂದ ಮಾತ್ರಕ್ಕೆ ಅದರ ನೈಜತೆಯನ್ನು ಪರೀಕ್ಷೆಗೊಳಪಡಿಸದೇ ಟಿಆರ್’ಪಿ ದಾಹಕ್ಕಾಗಿ ಅದನ್ನು ಹಿಂದೆ ಮುಂದೆ ನೋಡದೇ ಪ್ರಕಟಿಸುವ ದಂಧೆಯನ್ನು ನಿಲ್ಲಿಸಲೇಬೇಕು. “ಇದು ಬಿಟಿವಿ ವರದಿಯ ಫಲಶೃತಿ, ಗಣಪತಿ ಆತ್ಮಹತ್ಯೆಯನ್ನು ಮೊದಲು ಬಿತ್ತರಿಸಿದ್ದು ನಾವೆ” ಎನ್ನುವಂತಹ ಮಾಧ್ಯಮಗಳ ದುಷ್ಟ ಬುದ್ಧಿಗೆ ಅಂತ್ಯ ಹಾಡಲೇ ಬೇಕು. ಅವುಗಳು ಸಮಾಜಮುಖಿಯಾಗಿ, ಜವಾಬ್ದಾರಿಯುತವಾಗಿ ಕೆಲಸ ಮಾಡುವಂತಹ ಮಾಧ್ಯಮ ಸಂಹಿತೆಯನ್ನು ಜಾರಿಗೆ ತರಲೇ ಬೇಕು.

ಹುಹ್..! ಎಷ್ಟು ಹೇಳಿ ಏನು ಪ್ರಯೋಜನ.. ನಾಯಿ ಬಾಲ ಡೊಂಕೇ ಎಂದಂತೆ  ಈ ಮಾಧ್ಯಮ ಮಂದಿಯ ಬಾಲ ಎಂದೆಂದಿಗೂ ಡೊಂಕೇ. ನಿನ್ನೆ ನಾನು ಈ ಲೇಖನ ಟೈಪಿಸುವ ಹೊತ್ತಿಗೆ “ಯಶ್-ರಾಧಿಕಾ ಪಂಡಿತ್ ತಾರಾ ಜೋಡಿಯ ವಿವಾಹ ನಿಶ್ಚಯ” ಎಂದು ಬರುತ್ತಿದ್ದ ಬ್ರೇಕಿಂಗ್ ನ್ಯೂಸ್ ನನ್ನ ಇಡೀಯ ಲೇಖನವನ್ನು ಕ್ರೂರವಾಗಿ ಅಣುಕಿಸುವಂತಿತ್ತು.

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!