Featured ಅಂಕಣ

ಪದಕ ತರಲಿಲ್ಲವೆಂದು ಹೀಗಳೆಯುವ ಮುನ್ನ..

“ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಕ್ರಿಕೆಟ್ ವಿಶ್ವಕಪ್’ನಲ್ಲಿ ಭಾರತೀಯ ತಂಡ ಸೋತು ಸುಣ್ಣವಾದಾಗಲೆಲ್ಲ ಆಟಗಾರರ ಮನೆಯ ಮೇಲೆ ಕಲ್ಲೆಸೆಯುತ್ತೇವಲ್ಲಾ?  ಪ್ರತೀ ಭಾರಿ ಒಲಿಂಪಿಕ್’ನಲ್ಲಿ ಹೀನಾಯವಾಗಿ ಸೋತು ನಿರ್ಗಮಿಸುವಾಗೇಕೆ ಕ್ರೀಡಾಳುಗಳ ಮನೆಯ ಮೇಲೆ ಕಲ್ಲೆಸೆಯುವುದಿಲ್ಲ?”. ರಿಯೋ ಒಲಿಂಪಿಕ್’ನಲ್ಲಿ ನಮ್ಮವರ ಪ್ರದರ್ಶನ, ಅದರ ಕುರಿತಾಗಿ ಎದ್ದಿರುವ ಟೀಕೆಗಳನ್ನು ನೋಡುವಾಗ ಹೀಗೊಂದು ಪ್ರಶ್ನೆಯೆದ್ದಿತು ನನ್ನಲ್ಲಿ. ಬೇಕಾದ್ರೆ ನೋಡಿ, 2003ರ  ಕ್ರಿಕೆಟ್ ವಿಶ್ವಕಪ್ಪಿನ ಆರಂಭಿಕ ಪಂದ್ಯಗಳಲ್ಲಿ ದೇಶಕ್ಕೆ ದೇಶವೇ ಬೀದಿಗಿಳಿದಿತ್ತು. 2007ರ ವಿಶ್ವಕಪ್ಪಿನ ಮೊದಲ ಸುತ್ತಿನಲ್ಲೇ ಸೋತು ಸುಣ್ಣವಾದಾಗ ಎಲ್ಲಾ ಆಟಗಾರರ ಮನೆಯ ಮೇಲೆ ಕಲ್ಲು ಬಿದ್ದಿತ್ತು. 2015ರಲ್ಲಿಯೂ ಇದು ಪುನರಾವರ್ತನೆಯಾಗಿತ್ತು. ಅಷ್ಟು ಮಾತ್ರವಲ್ಲ, ಪ್ರತೀ ಭಾರಿಯೂ ವಿಶ್ವಕಪ್ಪಿನಂತಹ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸುವುದಕ್ಕೂ ಮುನ್ನ ನಮ್ಮ ಜನ “ಭಾರತ ಗೆಲ್ಲಲಿ” ಎಂದು ಹೋಮ ಹವನಗಳನ್ನು ಮಾಡಿಸುವುದುಂಟು. ಅಂತಾದ್ದರಲ್ಲಿ, ನಮ್ಮವರು ಒಲಿಂಪಿಕ್’ನಲ್ಲಿ ಸೋತಾಗ ಎಂದಾದರೂ ಅವರ ಮನೆಯ ಮೇಲೆ ಕಲ್ಲೆಸೆದಿದ್ದುಂಟಾ? ಪ್ರತಿಭಟನೆ ಮಾಡಿದ್ದುಂಟಾ? ಅವರುಗಳು ಪದಕ ಗೆಲ್ಲಲಿ ಎಂದು ಎಂದಾದರೂ ಪೂಜೆ ಪುನಸ್ಕಾರಗಳನ್ನು ಮಾಡಿಸಿದ್ದುಂಟಾ? ನೋ ವೇ!

ಸೋತಾಗ ಆಟಗಾರರ ಮನೆಯ ಮೇಲೆ ಕಲ್ಲೆಸೆಯಬೇಕೆಂದು ಹೇಳುತ್ತಿರುವುದಲ್ಲ. ಅದು ಸಾಧುವೂ ಅಲ್ಲ. ಆದರೆ ಕ್ರಿಕೆಟಿನ ಮೇಲೆ ಪ್ರೀತಿಯ ಪರಾಕಾಷ್ಟೆ ಮೆರೆಯುವ ನಾವು ಅದರ ಒಂದಂಶವನ್ನಾದರೂ ಪ್ರೀತಿಯನ್ನು ಇತರ ಕ್ರೀಡೆಯ ಮೇಲೆ ಎಂದಾದರೂ ತೋರಿಸಿದ್ದೇವಾ? ಒಲಿಂಪಿಯನ್ನರ ಮನೆಯ  ಮೇಲೆ ಕಲ್ಲೆಸೆಯಲಿಲ್ಲವೆಂದರೆ ನಾವು ಅವರುಗಳನ್ನು ಲೆಕ್ಕಕ್ಕೇ ತೆಗೆದುಕೊಂಡಿಲ್ಲವೆಂದರ್ಥವಲ್ಲವೇ?    ಸಾತ್ವಿಕವಾದ ಪ್ರತಿಭಟನೆಯನ್ನು ಮಾಡಿಲ್ಲವೆಂದರೆ ಪದಕ ಗೆಲ್ಲಲು ಅವರುಗಳು ಪಡುತ್ತಿರುವ ಪಾಡನ್ನು ಕ್ಯಾರೇ ತೆಗೆದುಕೊಂಡಿಲ್ಲವೆಂದಲ್ಲವೇ? ಪದಕ ಗೆದ್ದರೆ ಕಂಗ್ರಾಜುಲೇಶನ್ಸ್ ಹೇಳಿ, ಗೆಲ್ಲದಿದ್ದರೆ ಮುಖಕ್ಕುಗುಳಿದರೆ ನಮ್ಮ ಕೆಲಸ ಮುಗಿಯಿತು, ಆ ಮಧ್ಯದ ನಾಲ್ಕು ವರ್ಷಗಳಲ್ಲಿ ಅವರ ನರಕ ಯಾತನೆ ಏನು?ಒಂದೊಂದು ಕ್ರೀಡಾಕೂಟದಲ್ಲಿ ಭಾಗವಹಿಸಲೂ ಅವರು ಅನುಭವಿಸುತ್ತಿರುವ ಕಷ್ಟವೇನು ಎಂಬುದನ್ನು ಒಮ್ಮೆಯಾದರೂ ನೋಡಿದ್ದೇವಾ?

ದೀಪ ಕರ್ಮಕಾರ್ ಎಂಬ ಹೆಸರು ಯಾವ ಭಾರತೀಯಳೂ ಮಾಡದ ಸಾಧನೆಯನ್ನು ಮಾಡಿ ಇವತ್ತು ಹತ್ತಾರು ಮಾಧ್ಯಮಗಳಲ್ಲಿ ಬರದಿರುತ್ತಿದ್ದರೆ ಆ ಮಿನುಗು ತಾರೆಯ ಹೆಸರು ಇವತ್ತಿಗೂ ನಮಗೆ ತಿಳಿಯುತ್ತಿರಲಿಲ್ಲ. ವಿಜೇಂದರ್ ಸಿಂಗ್, ಸುಶೀಲ್ ಕುಮಾರ್, ಅಭಿನವ್ ಬಿಂದ್ರಾ, ಕರ್ಣಂ ಮಲ್ಲೇಶ್ವರಿ, ರಾಜ್ಯವರ್ಧನ್ ಸಿಂಗ್ ರಾತೋಡ್ ಮುಂತಾದ ಹೆಸರುಗಳು ಆವತ್ತು ಇವರುಗಳು ಪದಕ ಗೆಲ್ಲದೇ ಇರುತ್ತಿದ್ದರೆ ನಮ್ಮ ಗಮನಕ್ಕೂ ಬರುತ್ತಿರಲಿಲ್ಲ. ಅದೇ ಕ್ರಿಕೆಟಿನಲ್ಲಾದರೆ, ಕೊಹ್ಲಿ ಸೆಂಚುರಿಯ ಮೇಲೆ ಸೆಂಚುರಿ  ಬಾರಿಸದೇ ಇದ್ದರೂ ಸಹ, ಅವನಾರು, ಅವನ ಪ್ರೇಯಸಿ ಯಾರು? ಅವರ ಮಧ್ಯೆ ಯಾಕೆ ಬಿರುಕು ಮೂಡಿತು? ಮುಂತಾದ ವಿಷಯಗಳು ನಮಗೆ ತಿಳಿಯುತ್ತಿರಲಿಲ್ಲವೇ? ಕೊಹ್ಲಿ ಯಾಕೆ, ಹದಿನೈದು ಜನರ ತಂಡದಲ್ಲಿ ಸ್ಥಾನ ಪಡೆದು ಮೈದಾನದಲ್ಲಿ ವಾಟರ್ ಬಾಯ್ ಕೆಲಸ ಮಾಡುವ, ಬೆಂಚು ಬಿಸಿ ಮಾಡುವ ಆಟಗಾರನ ಹೆಸರೂ ಕೂಡಾ ನಮಗೆ ತಿಳಿಯುತ್ತದೆ. ಆದರೆ ಪ್ರತಿಷ್ಠಿತ ಒಲಿಂಪಿಕ್’ನಲ್ಲಿ ಭಾಗವಹಿಸುತ್ತಿರುವ ಅಗ್ರಜರ ಹೆಸರೂ ನಮಗೆ ಗೊತ್ತಿರುವುದಿಲ್ಲ.

ದೀಪಾ ಕರ್ಮಕಾರ್ ಎಂಬ ಹೆಸರು ಇಷ್ಟೊಂದು ಪ್ರಸಿದ್ಧಿ ಪಡೆದಿದ್ದಾರೂ ಹೇಗೆ? ಆಕೆ ಅವಳಿಗೆ ಅವಳೇ ಹೀರೋ ಆಗಿದ್ದೇ ಹೊರತು ನಾವ್ಯಾರೂ ಮಾಡಿದ್ದಲ್ಲ.  ಯಾವ ಮಾಧ್ಯಮವೂ ಆಕೆಯನ್ನು ಹೀರೋ ಮಾಡಿದ್ದಲ್ಲ. ಸತ್ಯ ಹೇಳಬೇಕಾದರೆ ಜಿಮ್ನಾಸ್ಟಿಕ್ಸ್ ಎಂಬ ಆಟದಲ್ಲಿ ಭಾರತ ಈ ಭಾರಿ ಒಲಿಂಪಿಕ್’ನಲ್ಲಿ ಭಾಗವಹಿಸುತ್ತಿದೆ ಎನ್ನುವುದು ನಮಗೆಲ್ಲಾ ಗೊತ್ತಾದ್ದೇ ಮೊನ್ನೆ ಮೊನ್ನೆ. ಆದರೆ ಆ ಮಟ್ಟಕ್ಕೆ ಸುದ್ದಿ ಮಾಡಲು ದೀಪಾ ಎಂತಹಾ ರಿಸ್ಕುಗಳನ್ನೆಲ್ಲಾ ತೆಗೆದುಕೊಂಡಿದ್ದಾಳೆ? ಎಷ್ಟು ವರ್ಷದಿಂದ ಪರಿಶ್ರಮ ಪಟ್ಟಿದ್ದಾಳೆ? ಅಂತ ದೇವರಾಣೆಗೂ ಗೊತ್ತಿಲ್ಲ. ನಾವಂತೂ ಕ್ರಿಕೆಟ್ ಬಿಟ್ಟರೆ ಬೇರೆ ಆಟಗಳ ಕಡೆಗೆ ಕಣ್ಣೆತ್ತಿಯೂ ನೋಡುವುದಿಲ್ಲ, ನಮ್ಮ ಸರಕಾರವಾದರೂ ಈ ಕ್ರೀಡಾಳುಗಳಿಗೆ ಎಂತಹಾ ಸೌಲಭ್ಯಗಳನ್ನು ಕೊಟ್ಟಿದೆಯೆಂದರೆ ಅದೂ ಸಹ ನಮಗೆ ಗೊತ್ತಿಲ್ಲ. ನಮ್ಮ ಪಾಲಿಗೆ ಹೊಸ ಕ್ರೀಡೆಯಾಗಿರುವ ಜಿಮ್ನಾಸ್ಟಿಕ್ಸ್’ಗೆ ಇತರ ದೇಶಗಳಲ್ಲಿ ಕೊಟ್ಟಿರುವ ಪ್ರಾಮುಖ್ಯತೆಯನ್ನು ನಾವಾಗಲಿ, ನಮ್ಮ ಸರಕಾರವಾಗಲೀ ಖಂಡಿತಾ ಕೊಟ್ಟಿಲ್ಲ.  ನಮಗೆ ಗೊತ್ತಿರುವುದೇನಿದ್ದರೂ ಫೇಸ್ಬುಕ್ಕಿನೊಳಗೆ ಟೀಕಿಸಿ ಸ್ಟೇಟಸ್ಸುಗಳನ್ನು ಹಾಕುವುದು.

ರಿಯೋ ಒಲಿಂಪಿಕ್’ನ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಮಂಗಳೂರಿನ ಹುಡುಗಿ ಎಂ.ಆರ್ ಪೂವಮ್ಮ 2008ರ ಬೀಜಿಂಗ್ ಒಲಿಂಪಿಕ್’ನಲ್ಲೂ ಭಾಗವಹಿಸಿದ್ದರು. ತನಗೆ ಸಿಕ್ಕ ‘ಲಿಮಿಟೆಡ್ ಆಕ್ಸಸ್ಸರೀಸ್’ನಲ್ಲೇ ಅಭ್ಯಾಸ ಮಾಡಿದ ಪೂವಮ್ಮರ ಪಯಣ ಬೀಜಿಂಗ್’ವರೆಗೂ ಸಾಗಿತ್ತು. ಆದರೆ ಪೂವಮ್ಮಗೆ ಕೂದಲೆಳೆಯ ಅಂತರದಲ್ಲಿ ಕಂಚಿನ ಪದಕ ಮಿಸ್ ಆಗಿತ್ತು. ಕಾರಣವೇನೆಂದರೆ, ಅಲ್ಲಿನ ಸಿಂಥೆಟಿಕ್ ಟ್ರಾಕ್’ನಲ್ಲಿ ಓಡುವಾಗ, ಅಂತಹಾ ಟ್ರಾಕ್’ನಲ್ಲಿ ಓಡಿ ಅಭ್ಯಾಸವಿರದ ಪೂವಮ್ಮ ತನ್ನ ಟ್ರಾಕ್ ಬಿಟ್ಟು ಮತ್ತೊಂದು ಟ್ರಾಕ್’ನಲ್ಲಿ ಓಡಿದ್ದರು. ಅದರಿಂದಾಗಿ ಪೂವಮ್ಮಗೆ ಅತ್ಯಮೂಲ್ಯ ಕಂಚಿನ ಪದಕ ಮಿಸ್ ಆಯ್ತು. ಅಸಲಿಗೆ  ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಅಭ್ಯಾಸಕ್ಕಾಗಿ ಸಿಂಥೆಟಿಕ್ ಟ್ರಾಕ್ ನಿರ್ಮಿಸಿ ಕೊಡಿ ಅಂತ ಪೂವಮ್ಮ ಮತ್ತವರ ಕೋಚ್ ದಿನೇಶ್ ಕುಂದರ್ ಸರಕಾರವನ್ನು ನಿರಂತರವಾಗಿ ಆಗ್ರಹಿಸುತ್ತಲೇ ಬಂದಿದ್ದರು. ಶುರು ಶುರುವಿಗೆ ಇವರ ಆಗ್ರಹವನ್ನು ಕ್ಯಾರೇ ಎನ್ನದ ಸರಕಾರ 2013ರಲ್ಲಿ ಸಿಂಥೆಟಿಕ್ ಟ್ರಾಕ್ ನಿರ್ಮಿಸಿತಾದರೂ ಸರಿಯಾದ ನಿರ್ವಹಣೆಯಿಲ್ಲದೆ ಮತ್ತೆ ನಮ್ಮ ಕ್ರೀಡಾಳುಗಳು ಪರದಾಡುವಂತೆ ಮಾಡಿದೆ.  ಇದು ನಾವು ನಮ್ಮ ಕ್ರೀಡಾಳುಗಳಿಗೆ ಎಂತಹಾ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದೇವೆ ಎಂಬುದಕ್ಕೆ ಸಣ್ಣ ಉದಾಹರಣೆ ಅಷ್ಟೇ.

ಇದಕ್ಕಿಂತಲೂ ಭಯಾನಕವಾದ ವ್ಯವಸ್ಥೆಗಳನ್ನು ನಮ್ಮ ಆಟಗಾರರಿಗೆ ನಾವು ಕಲ್ಪಿಸಿದ್ದೇವೆ. ಕ್ರಿಕೆಟಿಗರನ್ನು ಪತ್ನಿ, ಪ್ರೇಯಸಿ ಸಮೇತ ವಿಮಾನದಲ್ಲಿ ಕರೆದೊಯ್ದು ಐಷಾರಾಮಿ ಹೋಟೇಲಿನಲ್ಲಿ ಉಳಿಯುವುದಕ್ಕೆ ವ್ಯವಸ್ಥೆಯನ್ನು ಮಾಡಿ ಆಟದ ಜೊತೆಗೆ ಬೇರೆ ಆಟವನ್ನೂ ಆಡುವಂತೆ ಮಾಡಿರುವ ನಾವು ಹಾಕಿ ಆಟಗಾರರನ್ನು ಕ್ರೀಡಾಕೂಟದ ಸಮಯದಲ್ಲಿ ಬೀದಿಯಲ್ಲೇ ಮಲಗುವಂತೆ ಮಾಡಿದ್ದೇವೆ. ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಅಥ್ಲೀಟುಗಳಿಗೆ ಕಳಪೆ ಗುಣಮಟ್ಟದ ಆಹಾರವನ್ನು ನೀಡಿದ್ದೇವೆ. ಇನ್ನು ಕ್ರೀಡಾಳುಗಳು ಹೆಣ್ಣು ಮಕ್ಕಳೆಂದರೆ ಮುಗಿದೇ ಹೋಯಿತು, ಯಾವುದೇ ಆಟಕ್ಕಿಳಿಯುವ ನಿರ್ಧಾರ ಮಾಡುವ ಮೊದಲು ಹತ್ತು ಭಾರಿ ಯೋಚನೆ ಮಾಡಬೇಕು. ಇವರನ್ನು ಆಟಕ್ಕೂ ಮುನ್ನ ಹಾಸಿಗೆಗೆ ಕರೆಯುವವರೇ ಹೆಚ್ಚು. ಅಂತವರೊಂದಿಗೆ ಅಡ್ಜಸ್ಟ್ ಮಾಡಿಕೊಂಡರೆ ಆಡುವ ಅವಕಾಶ ಇಲ್ಲಾ ಡೈರೆಕ್ಟ್  ಗೇಟ್’ಪಾಸ್. ಒಲ್ಲದ ಮನಸ್ಸಿನಿಂದ  ಅಡ್ಜಸ್ಟ್ ಮಾಡಿಕೊಂಡವರು ಕಡೆಗೆ  ಖಿನ್ನತೆಗೊಳಗಾಗಿ ಏಕಾಗ್ರತೆ ಕಳೆದುಕೊಳ್ಳುವರೇ ಹೊರತು ಉತ್ತಮ ಪ್ರದರ್ಶನವಂತೂ ಹೊರ ಬರುವುದಿಲ್ಲ. ಪಾಪ.. ಪದಕ ಗೆಲ್ಲುವ ಆಸೆಯಲ್ಲಿ ಅದೆಷ್ಟು ಜನ ಇಂತಹ ಅಡ್ಜಸ್ಟ್’ಮೆಂಟ್ ಮಾಡಿಕೊಂಡಿದ್ದಾರೋ? ಹೊರ ಬಂದ ಸಂಗತಿಗಳೆಷ್ಟೋ, ಹೊರ ಬರದೆ ಚಿವುಟಿ ಹೋದ ಸಂಗತಿಗಳೆಷ್ಟೋ? ದೇವನೇ ಬಲ್ಲ.

ಇಂತಹಾ ಕರಾಳ ವ್ಯವಸ್ಥೆಗಳನ್ನು ನಮ್ಮ ಅಥ್ಲೀಟುಗಳಿಗೆ ಕಲ್ಪಿಸಿ ಅದ್ಯಾವ ಮುಖ ಇಟ್ಟುಕೊಂಡು ಪದಕ ಗೆಲ್ಲಬೇಕೆಂದು ನಿರೀಕ್ಷಿಸುತ್ತೇವೆ ನಾವು? ಬಹುಶಃ ಇಂತಹ ದೇಶವಾಸಿಗಳು ಇನ್ಯಾವ ದೇಶದಲ್ಲೂ ಇರಲಿಕ್ಕಿಲ್ಲ. ಅದರಲ್ಲೂ “ರಿಯೋ ಜಾವೋ, ಸೆಲ್ಫಿ ಲೇಲೋ, ಖಾಲೀ ಹಾಥ್ ವಾಪಸ್ ಆವೋ” ಎಂದು ನಮ್ಮವರನ್ನೇ ಹೀಗಳೆಯುವಂತಹ ಕೃತಘ್ನರು ನಮ್ಮ ದೇಶದಲ್ಲಿ ಬಿಟ್ಟರೆ ಇನ್ನೆಲ್ಲೂ ಇರಲಿಕ್ಕಿಲ್ಲ.  ಆದರೆ ಒಲಂಪಿಕ್’ನಂತಹಾ ಒಲಿಂಪಿಕ್’ನಲ್ಲಿ ಅಮೇರಿಕಾ, ಚೀನಾ ಮುಂತಾದ ಪ್ರಬಲ ರಾಷ್ಟ್ರಗಳ  ಪದಕ ಸ್ಪರ್ಧೆಯ ಮುಂದೆ  ಗೆಲ್ಲುವುದು ಹೀಗಳದೆ ಟ್ವೀಟ್ ಮಾಡಿದಷ್ಟು ಸುಲಭವಲ್ಲವಲ್ಲಾ? ಏನೂ ಮಾಡದೇ ಹೀಗಳೆಯುವುದಷ್ಟೇ ಕೆಲವರಿಗೆ ಬಹಳ ಸುಲಭ, ಅತ್ಯುತ್ತಮ ವ್ಯವಸ್ಥೆಗಳನ್ನು ಕಲ್ಪಿಸುವುದಲ್ಲ.  

ಪದಕಗಳ ಪಟ್ಟಿಯಲ್ಲಿ ಬೇರೆ ದೇಶಗಳ ಸಾಧನೆಯ ಜೊತೆಗೆ ನಮ್ಮ ದೇಶವನ್ನು ಹೋಲಿಕೆ ಮಾಡಲಾಗುತ್ತಿದೆ.  ತಮ್ಮ ಕ್ರೀಡಾಳುಗಳಿಗೆ ಅಮೇರಿಕಾ,ಚೀನಾ, ಬ್ರಿಟನ್ ಮುಂತಾದ ರಾಷ್ಟ್ರಗಳು ಕಲ್ಪಿಸಿರುವ ವಿಶ್ವದರ್ಜೆಯ ವ್ಯವಸ್ಥೆಗಳ ಮುಂದೆ ನಮ್ಮದು ಏನೇನೂ ಅಲ್ಲ.  ಅಮೇರಿಕಾ, ಚೀನಾ ಮುಂತಾದೆಡೆ ಕ್ರೀಡೆ ಅವರ ಪಠ್ಯಕ್ರಮದಲ್ಲೇ ಇದೆ. ಆದರೆ ನಮ್ಮ ದೇಶದ ಯಾವ ರಾಜ್ಯದಲ್ಲಿ ಆಟವನ್ನು ಪಾಠದಂತೆ ಪರಿಗಣಿಸಲಾಗಿದೆ ಹೇಳಿ? ಆಯಾ ಆಟಗಳಲ್ಲಿ ಉತ್ಸಾಹಿಯಾಗಿರುವ ಕೆಲವರಷ್ಟೇ ಆಟವನ್ನು ಶ್ರದ್ಧೆಯಿಂದ ಮುಂದುವರಿಸುತ್ತಾರೆಯೇ ಹೊರತು, ಉಳಿದಂತೆ, ಪಿಯುಸಿಯವರೆಗೆ ಆಟೋಟಗಳಲ್ಲಿ ಪಾಲ್ಗೊಂಡು, ಬಳಿಕ ಸ್ಪೋರ್ಟ್ಸ್ ಕೋಟಾದಡಿಯಲ್ಲಿ ಇಂಜಿನಿಯರಿಂಗೋ, ಮೆಡಿಕಲ್ಲೋ ಸೀಟು ಪಡೆಯುವವರೇ ಹೆಚ್ಚು.  ನಮ್ಮ ಶಿಕ್ಷಣ ವ್ಯವಸ್ಥೆಯು ಸಂಬಳ ತರುವ ಸರಕಾಗಿದೆಯೇ ಹೊರತು ಮೌಲ್ಯಯುತ ಬದುಕನ್ನು ರೂಪಿಸುವ ಸಾಧನವಂತೂ ಖಂಡಿತಾ ಆಗಿಲ್ಲ.

“ಒಲಿಂಪಿಕ್’ನಲ್ಲಿ ಪದಕ್ಕ ಗೆಲ್ಲಲು ಕನಿಷ್ಟ ಪಕ್ಷ ಐದು ಕೋಟಿ ರೂಪಾಯಿಗಳ ಇನ್ವೆಸ್ಟ್’ಮೆಂಟ್ ಬೇಕು. ಅದನ್ನು ಮಾಡದ ಹೊರತು ಪದಕವನ್ನು ಎಕ್ಸ್’ಪೆಕ್ಟ್ ಮಾಡುವುದು ತಪ್ಪಾಗುತ್ತದೆ” ಅಂತ ಅಭಿನವ್ ಬಿಂದ್ರಾ ನಿನ್ನೆ  ಟ್ವೀಟ್ ಮಾಡಿದ್ದರು. ಈ ಮಾತು ಅತ್ಯಂತ ಪ್ರಸ್ತುತ. ಪದಕ ಪಟ್ಟಿಯಲ್ಲಿ ಮುಂದಿರುವ ಯಾವ ದೇಶವನ್ನಾದರೂ ನೋಡಿ. ಪ್ರತಿಯೊಂದು ಆಟದ ಅಭಿವೃದ್ಧಿಗೂ ಅವುಗಳು ಕೋಟ್ಯಂತರ ರೂಗಳನ್ನು ವ್ಯಯಿಸುತ್ತಿವೆ. ನಮ್ಮ ದೇಶದಲ್ಲಿ ಕ್ರಿಕೆಟ್ ಒಂದನ್ನು ಬಿಟ್ಟು ಉಳಿದ ಯಾವ ಆಟಗಳಿಗೆ ಎಷ್ಟು ಹಣ ವ್ಯಯಿಸಲಾಗುತ್ತಿದೆ? ಈ ಪ್ರಶ್ನೆ ಹಾಕುವ ಧೈರ್ಯ ನಮಗಾರಿಗೂ ಇಲ್ಲ. ಯಾಕೆಂದರೆ ಕ್ರಿಕೆಟ್ ಪಂದ್ಯದ ಟಿಕೆಟ್’ಗಾಗಿ ರಾತ್ರಿಯಿಡೀ ನಿದ್ದೆಗೆಟ್ಟು, ರೋಡಲ್ಲಿ ಮಲಗುವ ನೀವು ಇತರ ಆಟಗಳನ್ನು ಎಂದು ಹಣ ಕೊಟ್ಟು ನೋಡಲು ಹೋಗಿದ್ದೀರಿ ಎಂಬ ಪ್ರಶ್ನೆ ಹಾಕಿದರೆ ಆಟೋಮ್ಯಾಟಿಕ್ ಆಗಿ ನಮ್ಮ ಬಾಯಿ ಬಂದ್ ಆಗುತ್ತದೆ.

ರಿಯೋ ಒಲಿಂಪಿಕ್ ಮುಗಿಯುವ ಹಂತದಲ್ಲಿದೆ. ಒಂದೇ ಒಂದು ಪದಕ ಗೆದ್ದಿರುವ ನಾವು ಪದಕಗಳ ಪಟ್ಟಿಯಲ್ಲಿ ಪಾತಾಳದಲ್ಲಿದ್ದೇವೆ. .ಸಿಂಧು ಪದಕದ ಸನಿಹ ಬಂದಿದ್ದಾರೆ. ದೀಪಾ, ವಿಕಾಸ್ ಕೃಷ್ಣ, ಸಾನಿಯಾ-ಭೋಪಣ್ಣ, ಶ್ರೀಕಾಂತ್ ಮುಂತಾದವರೆಲ್ಲಾ ಪದಕ ಗೆಲ್ಲುವ ಹೊಸ್ತಿಲಲ್ಲೇ ಎಡವಿದ್ದಾರೆ. ಅವರೆಲ್ಲಾ ಪದಕ ಗೆಲ್ಲದಿದ್ದರೂ ಕೋಟ್ಯಾಂತರ ಜನರ ಮನ ಗೆದ್ದಿರುವುದಂತೂ ಸತ್ಯ. ಪದಕ ಗೆಲ್ಲಲಿಲ್ಲವೆಂದು ಹೀಗಳೆಯುವುದಾದರೆ ನಮ್ಮನ್ನು ನಾವೇ ಹೀಗಳೆಯಬೇಕು, ನಾವು ಅವರುಗಳಿಗೆ ಕಲ್ಪಿಸಿರುವ ವ್ಯವಸ್ಥೆಯನ್ನು ಹೀಗಳೆಯಬೇಕು. ಅಷ್ಟೇ!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!