“ಅಮ್ಮಾ ನೀನು ನನಗೆ ಎರೆಡೆರಡಾಗಿ ಕಾಣಿಸ್ತಾ ಇದೀಯಾ..” ಎಂದು ಹೇಳಿ ಆ ಎಂಟು ವರ್ಷದ ಹುಡುಗ ನಕ್ಕುಬಿಟ್ಟ. ಅದೇನು ನಗುವ ವಿಷಯವಾಗಿರಲಿಲ್ಲ, ಯಾಕೆಂದರೆ ಆ ಪುಟ್ಟ ಹುಡುಗನಿಗೆ ಗೊತ್ತಿತ್ತು ತಾನು ಹುಷಾರು ತಪ್ಪಿದ್ದೇನೆ ಎಂದು. ಆದರೆ ಇದ್ದಕ್ಕಿದ್ದಂತೆ ತನ್ನ ತಾಯಿ ಎರೆಡೆರಡಾಗಿ ಕಂಡಿದ್ದು ವಿಚಿತ್ರವೆನಿಸಿ ನಕ್ಕು ಬಿಟ್ಟಿದ್ದ. ಆದರೆ ಆತನ ತಾಯಿಯ ಕಣ್ಣುಗಳಲ್ಲಿ ಮಾತ್ರ ಭಯ ಇಣುಕುತ್ತಿತ್ತು.
ಆಂಡ್ರ್ಯೂ ಬ್ಲಮ್’ಬರ್ಗ್ ಎಂಬ ಎಂಟು ವರ್ಷದ ಹುಡುಗನ ಬದುಕು ಕೂಡ ಎಲ್ಲರಂತೆ ಸಾಮಾನ್ಯವಾಗಿತ್ತು. ಆತ ಕೂಡ ಇತರ ಮಕ್ಕಳಂತೆ ಬೇಸಿಗೆ ಯಾವಾಗ ಬರುವುದೋ, ಯಾವಾಗ ಗೆಳೆಯರ ಜೊತೆ ಹೊರಗೆ ಹೋಗಿ ಆಟ ಆಡಬಹುದೋ, ಯಾವಾಗ ತನ್ನ ಸೈಕಲ್ ಏರಿ ಸುತ್ತಬಹುದೋ ಎಂದು ಕಾಯುತ್ತಿದ್ದ. ಆದರೆ ಅದೆಲ್ಲವೂ ಬದಲಾಗುವುದರಲ್ಲಿತ್ತು. ಆಂಡ್ರ್ಯೂ ಆಗಾಗ್ಗೆ ವಾಂತಿ ಮಾಡಲಾರಂಭಿಸಿದ್ದ. ಸಾಕಷ್ಟು ಕ್ಲಿನಿಕ್’ಗಳನ್ನು ಸುತ್ತಿ ಆಗಿದ್ದರೂ ಪರಿಣಾಮ ಮಾತ್ರ ಸೊನ್ನೆ ಆಗಿತ್ತು. ಆಗಲೇ ಒಂದು ದಿನ ಆತನಿಗೆ ಕಣ್ಣಿನ ಸಮಸ್ಯೆಯಾಗಿದ್ದು. ಆತನ ತಾಯಿ ಎರೆಡೆರೆಡಾಗಿ ಕಾಣುತ್ತಿದ್ದಳು. ಮತ್ತೆ ಡಾಕ್ಟರ್ ಬಳಿ ಬಂದಿದ್ದರು. ಅಷ್ಟರಲ್ಲಾಗಲೇ ಆತನಿಗೆ ವಿಪರೀತ ತಲೆ ನೋವು ಆರಂಭವಾಗಿತ್ತು. “ಹೊಟ್ಟೆಯ ಬಯಾಪ್ಸಿಯಲ್ಲಿ ಎಲ್ಲವೂ ನಾರ್ಮಲ್ ಇದೆ” ಎಂದ ಡಾಕ್ಟರ್’ಗೆ ಆಂಡ್ರ್ಯೂನಲ್ಲಿ ಕಂಡು ಬಂದ ಹೊಸ ಲಕ್ಷಣಗಳು ತಲೆ ನೋವಾಗಿತ್ತು. ನರ ತಜ್ಞರನ್ನು ಭೇಟಿ ಮಾಡುವಂತೆ ಸಲಹೆ ನೀಡಿದರು.
ದೊಡ್ಡ ಆಸ್ಪತ್ರೆಯ ನರ ತಜ್ಞರನ್ನ ಭೇಟಿಯಾಗಿ ಒಂದು ಗಂಟೆಯೊಳಗೆ ರಿಪೋರ್ಟ್ ಬಂದಿತ್ತು. ಆಂಡ್ರ್ಯೂಗೆ ಮೆಡುಲ್ಲೋಬ್ಲಾಸ್ಟೊಮಾ ಆಗಿತ್ತು. ಚಿಕ್ಕ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಬ್ರೈನ್ ಕ್ಯಾನ್ಸರ್. ತಕ್ಷಣವೇ ಆಪರೇಷನ್ ಕೂಡ ಮಾಡಲಾಯಿತು. ತಲೆಗೆ ಬ್ಯಾಂಡೇಜ್, ಅದಕ್ಕೆ ಅಳವಡಿಸಿರುವ ಟ್ಯೂಬ್, ಆ ಕ್ಷಣಕ್ಕೆ ನೋವಿಲ್ಲದಿದ್ದರೂ ಔಷಧಿಯ ಪರಿಣಾಮ ಮುಗಿದ ನಂತರ ನೋವು. ತನ್ನ ಅವಸ್ಥೆಯನ್ನು ಕಂಡು ಆಂಡ್ರ್ಯೂಗೆ ವಿಪರೀತ ಕೋಪ ಬಂದಿತ್ತು. ಆದರೆ ಅದಿನ್ನೂ ಆರಂಭವಾಗಿತ್ತಷ್ಟೆ. ಅದರ ನಂತರ ರೇಡಿಯೇಷನ್ ಹಾಗೂ ಕೀಮೋ ಬಾಕಿ ಇತ್ತು.
ರೇಡಿಯೇಷನ್ ಕೊಡುವ ಮೊದಲು ಆತನಿಗೆ ಹೇಳಲಾಗಿತ್ತು “ಏನೂ ಆಗೋದಿಲ್ಲ” ಎಂದು ಆದರೆ ಮೊದಲ ರೇಡಿಯೇಷನ್ ಮುಗಿಯುವಷ್ಟರಲ್ಲಿ ಆಂಡ್ರ್ಯೂಗೆ ದಿಂಬಿನಿಂದ ತಲೆಯನ್ನು ಎತ್ತಲೂ ಆಗದ ಪರಿಸ್ಥಿತಿಯಾಯಿತು. ಆ ಬೇಸಿಗೆಯಲ್ಲಿ ತಾನು ಏನೇನೋ ಮಾಡಬೇಕೆಂದು ಸಾಕಷ್ಟು ಆಸೆ ಇಟ್ಟುಕೊಂಡಿದ್ದ ಆಂಡ್ರ್ಯೂಗೆ ಸಿಕ್ಕಿದ್ದು ಮಾತ್ರ ರೇಡಿಯೇಷನ್. ರೇಡಿಯೇಷನ್ ಕೊಡುವಾಗಲೆಲ್ಲ ಆತ ಅಲ್ಲಿಂದ ಎದ್ದು ಓಡಿ ಹೋಗಿಬಿಡಬೇಕು ಎಂದುಕೊಳ್ಳುತ್ತಿದ್ದ. ಕಣ್ಣು ಮುಚ್ಚಿ ಇನ್ನು ಏಳಲೇಬಾರದು ಎಂದುಕೊಳ್ಳುತ್ತಿದ್ದ. ಆದರೆ ಅದು ಅಂದುಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಬಿಡುತ್ತಿತ್ತು.!! ಆಂಡ್ರ್ಯೂಗೆ ಆಹಾರವನ್ನು ಟ್ಯೂಬ್ ಮೂಲಕ ನೀಡುವಂತಾಯಿತು. ಆತ ಅದನ್ನ ಯಾವಾಗಲೂ ದ್ವೇಷಿಸುತ್ತಿದ್ದ. ಆದರೇನು ಅನಿವಾರ್ಯವಾಗಿತ್ತು.
ರೇಡಿಯೇಷನ್ ನಂತರ ಕೀಮೋ. ಮೊದ ಮೊದಲು ರಾತ್ರಿಯಿಂದ ಬೆಳಿಗ್ಗೆಯವರೆಗೂ ಕೀಮೋ ನೀಡಲಾಗುತ್ತಿತ್ತು. ಆಂಡ್ರ್ಯೂ ಅದನ್ನ ‘ಬಿಗ್ ಶಾಟ್ ಕೀಮೋ’ ಅಂತ ಕರೆಯುತ್ತಿದ್ದ. ಕೆಲವು ವಾರಗಳ ನಂತರ ಸಣ್ಣ ಡೋಸ್’ನ್ನು ಕೊಡಲು ಆರಂಭಿಸಿದ್ದರು. ಆಂಡ್ರ್ಯೂಗೆ ಮೊದಲು ವಾಂತಿ, ತಲೆ ನೋವು ಉಂಟಾಗುತ್ತಿದ್ದಾಗ ಇದಕ್ಕಿಂತ ಹೆಚ್ಚು ಆರೋಗ್ಯ ಕೆಡಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದ. ಆದರೆ ಆ ಪುಟ್ಟ ಹುಡುಗ ಅನುಭವಿಸಿದ್ದು ಆತನ ಕಲ್ಪನೆಗೂ ಮೀರಿದ್ದಾಗಿತ್ತು.
ಇವೆಲ್ಲಾ ಆಗಿ ಈಗ ಸುಮಾರು ೧೦-೧೨ ವರ್ಷಗಳೇ ಕಳೆದು ಹೋಗಿವೆ. ಈಗ ಆಂಡ್ರ್ಯೂ ಹೇಗಿದ್ದಾನೆ ಗೊತ್ತಾ..??! ಆತನಿಗೆ ಈಗ ಎರಡೂ ಕಿವಿಗಳು ಕೇಳುವುದಿಲ್ಲ, ಶಾಶ್ವತವಾಗಿ ಕಳೆದುಕೊಂಡಿದ್ದಾನೆ. ಎರಡೂ ಕಣ್ಣುಗಳಲ್ಲಿ ಕ್ಯಾಟರಾಕ್ಟ್ ಇದೆ, ಶಾರ್ಟ್ ಟರ್ಮ್ ಮೆಮರಿ ಲಾಸ್, ಅರಿವಿನ ದುರ್ಬಲತೆ, ಕುಳ್ಳನೆಯ ದೇಹ ಪ್ರಕೃತಿ. ಇತ್ತೀಚೆಗೆ ಗೊತ್ತಾಗಿದ್ದು ಆತನ ದೇಹದಲ್ಲಿ ಗ್ರೋತ್ ಹಾರ್ಮೋನುಗಳು ಉತ್ಪತ್ತಿಯಾಗುತ್ತಿಲ್ಲ ಎಂದು. ಹಾಗಾಗಿ ಪ್ರತಿದಿನ ಇಂಜೆಕ್ಷನ್ ತೆಗೆದುಕೊಳ್ಳಬೇಕಾಗಿದೆ. ಇಷ್ಟೆಲ್ಲಾ ಇದ್ದರೂ ಆತ ಹೇಳುವುದು ಏನು ಗೊತ್ತಾ..?! “ನಾನು ಇದನ್ನು ಗೆಲ್ಲುತ್ತೀನಾ? ನನ್ನ ಪುಟ್ಟ ತಮ್ಮ ದೊಡ್ದವನಾಗುವುದನ್ನು ನೋಡುತ್ತೀನಾ ಎಂದೆಲ್ಲಾ ನನ್ನನ್ನ ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ. ಇವತ್ತು ಅದಕ್ಕೆಲ್ಲಾ ಉತ್ತರವಿದೆ. ಇದು ನಾನು…!! ಕ್ಯಾನ್ಸರ್ ವಿರುದ್ಧದ ಹೋರಾಟ ಗೆದ್ದಿದ್ದೇನೆ”
ಆಂಡ್ರ್ಯೂವಿನ ಬದುಕಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆ ಸಮಸ್ಯೆಗಳ ತೀವ್ರತೆಯನ್ನ ನಾವು ಕಲ್ಪನೆ ಮಾಡಿಕೊಳ್ಳುವುದಕ್ಕೂ ಕಷ್ಟ. ಆದರೆ ಆತ ತನ್ನ ಬದುಕನ್ನ ಅಪ್ಪಿಕೊಂಡ ರೀತಿ, ಕ್ಯಾನ್ಸರನ್ನು ನೋಡಿದ ರೀತಿ ನಿಜಕ್ಕೂ ಶ್ಲಾಘನೀಯ. ಎಲ್ಲರೂ ಅದನ್ನ ಮಾಡುವುದಿಲ್ಲ. ಕ್ಯಾನ್ಸರಿನ ನಂತರ ಎಲ್ಲರ ಬದುಕು ಬದಲಾಗುತ್ತದೆ. ಸಾಕಷ್ಟು ಜನ ಬದುಕನ್ನು ಹೊಸ ರೀತಿಯಲ್ಲಿ ನೋಡುತ್ತಾ, ಬದುಕನ್ನ ಆಸ್ವಾದಿಸುತ್ತಾ, ಆನಂದಿಸಿದರೆ, ಕೆಲವರು ತಮ್ಮ ಇಡೀ ಬದುಕನ್ನೇ ಹಳಿಯುತ್ತಾರೆ.
ಈಗೊಂದು ೭-೮ ತಿಂಗಳುಗಳ ಹಿಂದೆ ಮುಂಬೈ ಮೂಲದ ಕ್ಯಾನ್ಸರ್ ಸರ್ವೈವರ್ ಒಬ್ಬನ ಪರಿಚಯವಾಯಿತು. ಈಗ ಆತ ಆರೋಗ್ಯವಾಗಿದ್ದಾನೆ. ಆತ ಮಾತನಾಡುವಾಗ ಒಮ್ಮೆ, “ ಸಮಾಜ ನಮ್ಮನ್ನ ಬೇರೆಯದೇ ದೃಷ್ಟಿಯಲ್ಲಿ ನೋಡುತ್ತದೆ. ಕ್ಯಾನ್ಸರ್ ಆಗಿರದಿದ್ದರೆ ನನ್ನ ಬದುಕು ಇನ್ನೂ ಚನ್ನಾಗಿರುತ್ತಿತ್ತು” ಎಂದ. ನನಗೆ ನಿಜಕ್ಕೂ ಆಶ್ಚರ್ಯವಾಗಿತ್ತು. ಜನ ನಮ್ಮನ್ನು ಹೇಗೆ ನೋಡುತ್ತಾರೆ ಎನ್ನುವುದಕ್ಕಿಂತ ನಾವು ನಮ್ಮನ್ನ ಹೇಗೆ ನೋಡಿಕೊಳ್ಳುತ್ತಿದ್ದೇವೆ ಅನ್ನುವುದು ಮುಖ್ಯ ಅಲ್ಲವಾ ಎಂದೆನಿಸಿತ್ತು. ಅಂತಹ ಅನುಭವಗಳು ಆಗೇ ಇಲ್ಲ ಎಂದೇನಲ್ಲ ಸಾಕಷ್ಟು ಆಗಿವೆ. ಮರೆಯುವುದಕ್ಕೆ ಆಗದೇ ಇರುವಂಥದ್ದು. ಆದರೆ ಬೇರೆಯವರ ಅಭಿಪ್ರಾಯಗಳು ನಮ್ಮನ್ನು ವ್ಯಾಖ್ಯಾನಿಸುವುದಿಲ್ಲ. ನಮ್ಮನ್ನ ವ್ಯಾಖ್ಯಾನಿಸುವುದು ನಮ್ಮ ವ್ಯಕ್ತಿತ್ವ! ಆತ ತನ್ನ ಬದುಕಿನಲ್ಲಿರುವ ಎಲ್ಲಾ ಸಮಸ್ಯೆಗಳಿಗೆ ಕ್ಯಾನ್ಸರನ್ನೇ ದೂಷಿಸುತ್ತಿದ್ದ. ಕ್ಯಾನ್ಸರ್ ಆತನ ದೇಹದಿಂದ ಹೊರಟು ಹೋಗಿದ್ದರೂ, ಮನಸ್ಸಿನಿಂದ ಹೋಗಿರಲಿಲ್ಲ, ಆತನಿಗಗಾಗಲಿ ಅಥವಾ ಯಾರಿಗೆ ಆಗಲಿ ಕ್ಯಾನ್ಸರ್ ಆಯಿತೆಂದರೆ ಅದರಲ್ಲಿ ಅವರ ತಪ್ಪೇನೂ ಇರುವುದಿಲ್ಲ. ಆದರೆ ಅದೆಲ್ಲಾ ಮುಗಿದ ನಂತರವೂ ಇನ್ನೂ ಕ್ಯಾನ್ಸರನ್ನು ದೂಷಿಸುತ್ತಾ, ದ್ವೇಷಿಸುತ್ತಾ ದುಃಖ ಪಡುತ್ತಿದ್ದೇವೆಂದರೆ ಅದಕ್ಕೆ ನಾವೇ ಹೊಣೆ. ಅದಾಗಲೇ ನಡೆದು ಹೋಗಿರುವ ಘಟನೆಯೊಂದಿಗೆ ಗುದ್ದಾಡುತ್ತಾ ಅಲ್ಲೇ ನಿಂತು ನನಗೆ ಸುಖವಿಲ್ಲ ಎಂದರೆ ಅರ್ಥವಾದರೂ ಏನು? ಆತನ ಬದುಕನ್ನ ಕ್ಯಾನ್ಸರ್ ವ್ಯಾಖ್ಯಾನಿಸುತ್ತಿತ್ತು, ಅದಕ್ಕೆ ಅವಕಾಶ ಕೊಟ್ಟುಕೊಂಡಿದ್ದು ಕೂಡ ಆತನೇ.. ಯಾಕೆಂದರೆ ಬಹುಶಃ ಆತ ಅದರಿಂದ ಹೊರ ಬರುವ ಪ್ರಯತ್ನ ಎಂದೂ ಮಾಡಲೇ ಇಲ್ಲ.
ಆದರೆ ಆಂಡ್ರ್ಯೂ ಹಾಗಲ್ಲ. ಆತ ತನ್ನನ್ನ ತಾನು ಕ್ಯಾನ್ಸರ್ ವಾರಿಯರ್ ಎಂದು ಕರೆದುಕೊಳ್ಳುತ್ತಾನೆ. “ ಕ್ಯಾನ್ಸರ್ ನನ್ನನ್ನು ಯಾವತ್ತೂ ವ್ಯಾಖ್ಯಾನಿಸುವುದಿಲ್ಲ. ಆದರೆ ಕ್ಯಾನ್ಸರ್ ನನ್ನ ಬದುಕನ್ನು ಬದಲಾಯಿಸಿದ್ದು ನಿಜ. ನಾನೊಬ್ಬ ಹೃದಯವಂತ ಆಗಿರುವೆನೆಂದರೆ ಅದು ಕ್ಯಾನ್ಸರಿನಿಂದ. ಅದರಿಂದಲೇ ನಾನು ಒಬ್ಬ ಉತ್ತಮ ಮನುಷ್ಯನಾಗಿದ್ದು. ಗೆಲ್ಲುವ ಛಲ ಹುಟ್ಟಿದ್ದು.” ಎನ್ನುತ್ತಾನೆ. ಆಂಡ್ರ್ಯೂನನ್ನು ಆತನ ಭರವಸೆ, ಆತನ ಛಲ, ಆತನ ಹುಮ್ಮಸ್ಸು, ಆತನ ವ್ಯಕ್ತಿತ್ವ ವ್ಯಾಖ್ಯಾನಿಸುತ್ತದೆ. ತನ್ನೆಲ್ಲಾ ಸಮಸ್ಯೆಗಳ ಮಧ್ಯೆಯೂ ಖುಷಿಯಿಂದಿರುವುದು ಗೊತ್ತು ಆತನಿಗೆ. ನಮ್ಮ ಸಮಸ್ಯೆಗಳು ಅಥವಾ ಕಷ್ಟಗಳು ನಮ್ಮನ್ನ, ನಮ್ಮ ಬದುಕನ್ನ ವ್ಯಾಖ್ಯಾನಿಸುವಂತಾಗಬಾರದು, ಬದಲಾಗಿ ಅದರಿಂದ ಕಲಿತ ಪಾಠಗಳು ವ್ಯಾಖ್ಯಾನಿಸುವಂತಾಗಬೇಕು. ಆಂಡ್ರ್ಯೂ ಇದಕ್ಕೆ ದೊಡ್ಡ ಉದಾಹರಣೆಯಾಗಿ ನಿಲ್ಲುತ್ತಾನೆ..!!