ಪ್ರವಾಸ ಕಥನ

ನನ್ನ ಮಾತಲಿ! ಮನಾಲಿ!

ನಾವೆಲ್ಲರೂ ಜೀವನದಲ್ಲಿ ಕನಸು ಕಾಣುತ್ತಿರುತ್ತೇವೆ, ಕೆಲವೊಮ್ಮೆ ಕನಸೇ ನಮ್ಮನ್ನು ಅರಸಿಕೊಂಡು ಬರುತ್ತದೆ. ಅಂತಹ ಕನಸು ಕದ ತಟ್ಟಿದಾಗ ತಡ ಮಾಡದೆ ಅದನ್ನು ಬರ ಮಾಡಿಕೊಳ್ಳಬೇಕು. ಅಂತಹ ನನ್ನ ಜೀವನದ ಕಾಣದ ಕನಸುಹಿಮದ ಮಳೆ“(snow fall). ಕನಸಿನ ಹಿಂದಿನ,ಮುಂದಿನ ಕತೆ ಇಲ್ಲಿದೆ.

ಹಿಂದಿನ ಕತೆ!

ಬೆಂಗಳೂರಿನಿಂದ ಹೊರ ಬಂದು, ತಂದೆ ತಾಯಿಯಿಂದ ದೂರವಿರುವಾಗ ಸಿಗುವ ಮತ್ತೊಂದು ಕುಟುಂಬವೇ ಸ್ನೇಹಿತರು. ಇಂತಹ 20 ಸ್ನೇಹಿತರ ಕುಟುಂಬ ನಮ್ಮದು. ದಿಲ್ಲಿಯಲ್ಲಿ ಇರುವ ಕ್ಷಣಗಳು ಉಲ್ಲಾಸದಿಂದ ಕೂಡಿರಲು ಕುಟುಂಬವೇ ಕಾರಣ. ನಮ್ಮ ಕುಟುಂಬ ಎಂದಿನಂತೆಯೇ ವಾರದ ಕೊನೆಯ ಎರಡು ದಿನ ಹೊರ ಹೋಗಲು ನಿರ್ಧರಿಸಿತು. ಹಲವು ಗೊಂದಲಗಳ ನಡುವೆಯೂ 1 tempo traveller, 1 innova ಗಾಡಿಯೆಂದು ನಿರ್ಧರಿಸಿ ಮನಾಲಿಗೆ ಶುಕ್ರವಾರ ಸಂಜೆ 8ಕ್ಕೆ ದಿಲ್ಲಿಯಿಂದ ಹೊರಟೆವು.ನಮ್ಮ ಕರ್ನಾಟಕದಲ್ಲಿ ಹೇಗೆ ತುಮಕೂರು ಇತರ ಸ್ಥಳಗಳಿಗೆ ಹೆಬ್ಬಾಗಿಲೋ, ಅದೇ ತರಹ ಪಾಣಿಪತ್ ದಿಲ್ಲಿಗೆ ಹೆಬ್ಬಾಗಿಲು. ಹೆಬ್ಬಾಗಿಲ ದಾಟಿ ರಾತ್ರಿ 11ಕ್ಕೆ ಊಟ ಮುಗಿಸಿದೆವು.ಮುಂಜಾನೆ 9 ಗಂಟೆ ಸುಮಾರಿಗೆ ಪಂಢೋಹ(Pandoh) ಎಂಬ ಸ್ಥಳದಲ್ಲಿ ಮೊದಲು ನಿಂತೆವು. ಎತ್ತೆತ್ತಲೂ ಪ್ರಕೃತಿಯ ಸೊಬಗು. ಕಣ್ಣಲ್ಲೂ ತುಂಬಿಕೊಂಡು, ನಮ್ಮ ಕ್ಯಾಮೆರಾಗಳಲ್ಲೂ ತುಂಬಿಕೊಂಡು ಮುಂದೆ ಹೊರಟೆವು.

ಪಂದೋಹ(Pandoh)ದಲ್ಲಿನ ಪ್ರಕೃತಿ

ಕುಲ್ಲು(Kullu) ಎಂಬ ಸ್ಥಳದಲ್ಲಿ 3ಕಿಮೀ ಸುರಂಗದ ಪ್ರಯಾಣ ಸೊಗಸಾಗಿತ್ತು. ಮನಾಲಿ ಸಮೀಪಿಸುತ್ತಿದ್ದಂತೆ ನಮ್ಮೆಲ್ಲರಿಗೂ ಏನೋ ಕಾತರ! ಹಪಹಪಿಕೆ! ದಿಲ್ಲಿಯಲ್ಲಿ 5-6 ಡಿಗ್ರಿ ಚಳಿಗೆ ನಡುಗುತ್ತಿದ್ದ ನಾವು, ಮನಾಲಿಯಲ್ಲಿ -5 ಡಿಗ್ರಿಯನ್ನು ನೋಡಲು ಇಷ್ಟ ಪಟ್ಟು ಹೊರಟಿದ್ದೆವು. ಆದರೆ ಮನಾಲಿಯಲ್ಲಿ ಕಂಡಿದ್ದೆ ಬೇರೆ! ಸುಡು ಬಿಸಿಲು!

ಇಂಟೆರ್ನೆಟ್ ಕೂಡ 2 ಡಿಗ್ರಿ ಎಂದು ಹೇಳುತ್ತಿದ್ದರೂ ಅದು 10-15 ಡಿಗ್ರಿಯಂತೆ ಭಾಸವಾಗುತ್ತಿತ್ತು. ಚಳಿಯಲ್ಲಿ ಕೊರೆಯುತ್ತೇವೆಂದು ಎಣಿಸಿದ್ದವರಿಗೆ ಬಿಸಿಲಿನಲ್ಲಿ ಬೇಯುವಂತಾಗಿತ್ತು! ಆದರೂ ಪ್ರಕೃತಿಯ ಸೊಬಗಿಗೆ ಏನು ಕೊರತೆ ಇರಲಿಲ್ಲ. ಸುತ್ತಲೂ ಹಿಮ ತುಂಬಿದ ಪರ್ವತಗಳು,ಬೀಸ್ ನದಿ(ಹಿಮ ಕರಗಿ ಹರಿಯುವ ನದಿಯೇ ಇದು),ಸ್ನೇಹಿತರ ಕುಟುಂಬ. ಆದರೂ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಸ್ವಲ್ಪ ಬೇಸರ. ಕೊನೆಗೂ ರೂಮ್ ತಲುಪಿದೆವು.12 ಗಂಟೆ ಸಮಯ, ಹಾಗಾಗಿ ತಿಂಡಿ ಇರಲಿಲ್ಲ, ಹುಲಿಯಂತೆ ಹಸಿದಿದ್ದ ನಮಗೆ ಕೂಡಲೇ ಊಟಕ್ಕೆ ಆರ್ಡರ್ ಕೊಟ್ಟೆವು. ಎಲ್ಲರೂ ಪ್ರೆಶ್ ಆದ ಮೇಲೆ ಊಟ ಮುಗಿಸಿ ಅಂದಿನ ನಿಗದಿತ ಸ್ಥಳಗಳಿಗೆ ಹೊರಟೆವು.

ಅಂದು ಹಡಿಂಬಾ(ಮೂಲತಃ ಈಶ್ವರ) ದೇವಸ್ಥಾನ, ವಸಿಷ್ಟ ಸ್ಥಾನ ಹಾಗೂ ಗೊತ್ತಿರದ,ಕಾಣದ, ಕೇಳದ ಜಲಪಾತ ನೋಡಲು ಹೊರಟೆವು. ದೇವಸ್ಥಾನಗಳು ಕಂಡವು. ನಮ್ಮ ಕಡೆ ದೇವಸ್ಥಾನದ ಅರ್ಚಕ ಮಡಿಯಲ್ಲಿಲ್ಲದಿದ್ದರೆ, ಒಳಕ್ಕೂ ಪ್ರವೇಶವಿಲ್ಲ, ಆದರೆ ಇಲ್ಲಿನ ಅರ್ಚಕರ ವಿಚಾರವೇ ಬೇರೆ. ಪ್ಯಾಂಟ್ಶರ್ಟ್ಬೆಚ್ಚನೆಯ ಸ್ವೆಟರ್ ಧರಿಸಿ ಗರ್ಭಗುಡಿಯಲ್ಲಿ ಕುಳಿತಿದ್ದರು! ಇದು ಇಲ್ಲಿನ ವಾತಾವರಣಕ್ಕೆ ಸರಿ ಇರಬಹುದು, ಇರಲಿ ಬಿಡಿ! ಗೊತ್ತಿರದ, ಕಾಣದ,ಕೇಳದ ಜಲಪಾತದ ಹೆಸರು ಜುಗಿನಿ. ವಶಿಷ್ಟ ಸ್ಥಾನದಿಂದ 2 ಕಿಮೀ ನಡೆದಿದ್ದಷ್ಟೆ, ನಮ್ಮ ಪಾಲಿಗೆ ಹರಿಯುವ ನೀರು ಕಂಡಿತು, ಎಲ್ಲೋ ನೀರು ಬೀಳುತ್ತಿದ್ದ ಸದ್ದು ಕೇಳುತ್ತಿತ್ತು, ಅದೇ ಜಲಪಾತವೆಂದು ತಿಳಿದು ಕ್ಯಾಮೆರಾದಲ್ಲಿ ಸೆರೆ ಹಿಡಿದು, ಮನಾಲಿ ಮಾರ್ಕೆಟ್‌ಗೆ ಹೊರಟೆವು. ದಿಲ್ಲಿಯಲ್ಲಿ ಸಿಗದಿದ್ದ ವಸ್ತುವೇನು ಅಲ್ಲಿ ಇರಲಿಲ್ಲ, ಆದರೂ ನೆನಪಿಗೆ ಒಂದು ಕೀ ಚೈನ್ ಖರೀದಿಸಿದೆವು. ಹೋಟೆಲ್‌ನ ರೂಮಿಗೆ ಬಂದು ಊಟ ಮಾಡಿ ಮಲಗಿದ್ದಷ್ಟೇ ನನಗೆ ನೆನಪು, ಮುಂಜಾನೆ ಎದ್ದಾಗ ಜಿಟಿಜಿಟಿ ಮಳೆ ಸುರಿಯುತ್ತಿತ್ತು.

ಹಡಿಂಬಾ ದೇವಸ್ಥಾನ

ಮಳೆ ಸುರಿಯುತ್ತಿದ್ದರೂ ಚಳಿಯೇನು ಆಗುತ್ತಿರಲಿಲ್ಲ. ಅಂದು ಸೋಲಂಗ್ ವ್ಯಾಲಿ(Solang Valley) ಎಂಬ ಹಿಮ ಕಾಣುವ ಸ್ಥಳ(snow point)ಕ್ಕೆ ಹೊರಡಬೇಕಿತ್ತು. ನಮಗೆಲ್ಲರಿಗೂ ನಮ್ಮ ಕಡೆಯ ಮಾತೇ ಗೊತ್ತು, ಮಳೆಯಲ್ಲಿ ನೆನೆದರೆ ನೆಗಡಿ, ಬಟ್ಟೆ ಒದ್ದೆಯಾಗುವುದು, ಇಷ್ಟೇ! ಆದರೆ ಮಳೆಯ ಅರ್ಥವೇ ಬೇರೆ ಎಂದು ತಿಳಿಯಲು ನಮಗೆ ಹೆಚ್ಚು ಸಮಯ ಹಿಡಿಸಲಿಲ್ಲ.

ದೂರದ ಯಾವುದೋ ಬೆಟ್ಟದಲ್ಲಿ ಹಿಮದ ಮಳೆ ಕಂಡಿತು. ಹೋಟೆಲ್ ರೂಂನಿಂದಲೇ ನೋಡಿ ಖುಷಿಪಟ್ಟೆವು, ಕ್ಯಾಮೆರಾದಲ್ಲೂ ತುಂಬಿಕೊಂಡೆವು. ಸೋಲಂಗ್ ವ್ಯಾಲಿ(Solang Valley) ಗೆ ಹೊರಟೆವು. ನಮ್ಮ ಗಾಡಿಯ ಚಾಲಕ ಯಾವುದೋ ಅಂಗಡಿಯ ಬಳಿ ನಿಲ್ಲಿಸಿ ಬಾಡಿಗೆಗೆ ಸಿಗುವ, ದೇಹ ಪೂರ ಮುಚ್ಚುವಂತಹ ಬಟ್ಟೆಯನ್ನು, ಹಾಗೂ ಹಿಮದಲ್ಲಿ ನಡೆಯಲು ಸಹಾಯ ಮಾಡುವಂತಹ ಶೂಗಳನ್ನು ಬಾಡಿಗೆಗೆ ಖರೀದಿಸಲು ಹೇಳಿದ. ಅಂತೆಯೇ ಖರೀದಿಸಿ ಮುನ್ನಡೆದವು. ಇದು ನನ್ನ ಕಾಣದ ಕನಸಿನ ಹಿಂದಿನ ಕತೆ, ಮುಂದಿನ ಕತೆ ನೋಡಿ !

ಮುಂದಿನ ಕತೆ!

ಮಳೆ ಸುರಿಯುತ್ತಿದ್ದ ದಾರಿಯಲ್ಲಿ ಸಣ್ಣಗೆ ಹಿಮ ಸುರಿಯಲು ಆರಂಭಿಸಿತು. ದಾರಿ ಮುನ್ನಡೆದಂತೆ ಹಿಮ ದಟ್ಟವಾಗಿ ಸುರಿಯುತ್ತಿತ್ತು. ಆಹಾ! ನೋಟ ಈಗಲೂ ನೆನೆಸಿಕೊಂಡರು ರೋಮಾಂಚನ! ಸುತ್ತಲೂ ಹಸಿರು ಬೆಟ್ಟ ಕಾಣುತ್ತಿದ್ದ ಸ್ಥಳದಲ್ಲಿ ಹಿಮದ ಹೊದಿಕೆ. ಹಿಮದ ಹೊದಿಕೆ ಹೊತ್ತ ಹಸಿರು ಭೂತಾಯಿ! ಕಣ್ಣಿಗೆ ಎತ್ತ ನೋಡಿದರೂ ಆನಂದ. ಮನಸ್ಸಿಗೆ ಜೀವನ ಸಂತೃಪ್ತವಾದಷ್ಟು ಸಂತೋಷ! ಬಹುಶಃ ಸ್ವರ್ಗ ಎಂದರೆ ಹೀಗೆ ಇರಬಹುದೇನೋ ಎಂದಂತೆ ಅನಿಸುತ್ತಿತ್ತು.

manali1

ಸ್ವರ್ಗಕ್ಕೆ ದಾರಿ ಹೀಗೆ ಇರಬಹುದೇನೋ!

ಕತೆ ಇಲ್ಲಿಗೆ ಮುಗಿಯಲಿಲ್ಲ. ಇದೇ ಅರಂಭ! ಸಣ್ಣಗೆ ಸುರಿಯುವ ಹಿಮ ಒಂದು ಸುಖವಾದರೆ ದಟ್ಟವಾಗಿ ಸುರಿಯುವ ಹಿಮದ ಕತೆಯೇ ಬೇರೆ. ಹಿಂದಿನ ದಿನ ಕಂಡಿದ್ದ ಬಿಸಿಲು ಎಲ್ಲಿ? ನಮ್ಮ ಮನಗಳ ಹತಾಶೆ ಎಲ್ಲಿ? ಎಲ್ಲವೂ ಹಿಮದ ಮಳೆಯ ನೋಟಕ್ಕೆ ಕೊಚ್ಚಿ ಹೋಯಿತು. ಹಿಮ ದಟ್ಟವಾಗಿ ಸುರಿಯಲು ಪ್ರಾರಂಭಿಸಿದೊಡನೆ ನಮ್ಮ ಚಾಲಕ ಮುಂದಕ್ಕೆ ವಾಹನ ಚಲಿಸುವುದಿಲ್ಲ ಎಂದು ಹೇಳಿದ. ಮುಂದೆ ಇನ್ನೂ 2 ಕಿಮೀ ಸಾಗಿ ice skeing ಮಾಡುವುದಿತ್ತು. ಅಲ್ಲಿ ಕೇವಲ ತೆರೆದ ಜೀಪ್ನಲ್ಲಿ ಅಷ್ಟೇ ಹೋಗಬಹುದಿತ್ತು! ಸರಿ ತೆರೆದ ಜೀಪ್ನಲ್ಲಿ ಹಿಮದ ಮಳೆಗೆ ದೇಹವೊಡ್ದಿ, ಸಾಗುವುದೇ ನಾ ಕಂಡ ಅದ್ಭುತವಾದ ಪಯಣ. 2 ಜೀಪ್ನಲ್ಲಿ 20 ಮಂದಿ ಹೊರಟೆವು. ಕಣ್ಣಿಗೆ ರಾಚಿ ರಾಚಿ ಎರಚುತ್ತಿದ್ದ ಹಿಮದ ಮಳೆಯ ಹನಿಗಳು, ತಪ್ಪಿಸಿಕೊಳ್ಳಲು ನಮ್ಮ ಪ್ರಯತ್ನ! ಸುತ್ತಲೂ ಹಿಮದ ಹೊದಿಕೆ ಹೊತ್ತ ಭೂತಾಯಿ,ಮರಗಳು ತುಂಬಿದ ಹಿಮದ ಹನಿಗಳು! ನಾವು ಲೋಕದಲ್ಲಿ ಇರಲಿಲ್ಲ!

10 ಡಿಗ್ರಿಯಿಂದ -10 ಡಿಗ್ರಿ ತಲುಪಿದ್ದೆವು! ನಮಗೆ ತಾಪಮಾನದ ಅರಿವು ಇರಲಿಲ್ಲ, ನಮ್ಮ ಆರೋಗ್ಯದ ಅರಿವು ಇರಲಿಲ್ಲ, ಏಕೆಂದರೆ ನಾವು ಆಗ ಕಾಣುತ್ತಿದ್ದುದು ಸ್ವರ್ಗ! ಸ್ವರ್ಗದಲ್ಲಿ ಇವುಗಳ ಯೋಚನೆ ಬೇಡ! ಕೈಗೆ ಸಿಕ್ಕಿದ್ದೆಲ್ಲ ಹಿಮ! ಉಂಡೆ ಮಾಡಿದರೆ ಹಿಮದ ಗೆಡ್ಡೆ! ಹಿಮದ ಗೆಡ್ಡೆಯಲ್ಲಿ ಮನ ತೋಯುವಷ್ಟು ಆಡಿದೆವು. ಪರಸ್ಪರ ಎರಚಿಕೊಂಡೆವು! ಖುಷಿಗೆ ಕಿರುಚಿದೆವು!ಕೆಲವೊಂದನ್ನು ಕ್ಯಾಮೆರಾದಲ್ಲೂ ಸೆರೆ ಹಿಡಿದೆವು!

ಹಿಮದ ಮಾನವನನ್ನು(snow man) ಮಾಡಿದೆವು! ಇಲ್ಲಿರುವ ice ಅನ್ನು ಕೊಂಡೊಯ್ದರೆ ಜೀವನ ಪೂರ ಇದನ್ನು ಮಾರಿ ಬಾಳ್ವೆ ನಡೆಸಬಹುದು ಎಂಬ ಅಸಾಧ್ಯವಾದ ಯೋಚನೆ ಬಂದು ಹೋಯಿತು! ಇಂಟರ್ನೆಟ್ನಲ್ಲಿ ಕಂಡಿದ್ದ ದೃಶ್ಯವೇ ಬೇರೆ, ಅಲ್ಲಿದ್ದ ವಾಸ್ತವವೇ ಬೇರೆ! ವಾಸ್ತವವೇ ಸ್ವರ್ಗ!ice skeing ಮುಗಿಸಿ 2 ಜೀಪ್ನಲ್ಲಿ ಬಂದಿದ್ದ ನಾವು, ಹೊರಡುವಾಗ ಒಂದೇ ಜೀಪ್ನಲ್ಲಿ ಹೊರಟೆವು, ಅಷ್ಟು ಜನರನ್ನು ಕಂಡ ಮತ್ತೊಬ್ಬ ಜೀಪ್ನವನು ಹೇಳಿದ, ” इसमे आलूप्याज है” (ಇದರಲಿ ಆಲೂಗಡ್ಡೆಈರುಳ್ಳಿ ಮೂಟೆ ಇರೋದು)!

ದಟ್ಟಣೆಯ ಹಿಮದ ಕಡೆಯಿಂದ ಸಣ್ಣಗೆ ಬೀಳುತ್ತಿದ್ದ ಹಿಮದ ಕಡೆ ಬಂದೆವು. ದಾರಿಯಲ್ಲಿ ಜೋರಾಗಿಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕುಹಾಗೂ ಇತರ ಹಾಡುಗಳನ್ನು  ಹಾಡಿಕೊಂಡು ನಮ್ಮ ವಾಹನ ಇದ್ದಲ್ಲೆಡೆಗೆ ಬಂದೆವು! ಅಲ್ಲಿಂದ ಮತ್ತೆ ಬೆಟ್ಟಗಳ ಸಾಲು ಇಳಿದು, ರಹದಾರಿಯಲ್ಲಿ ಬಂದು ದಿಲ್ಲಿ ಮುಟ್ಟಿದೆವು!

ನನ್ನ ಮಾತು!

ಇದೇ ನಾನು ಕಾಣದಿದ್ದ ಕನಸು ನನಸಾದ ಕ್ಷಣ! ನನಸಾಗಿ ಮತ್ತೆ ಮತ್ತೆ ಕನಸಲ್ಲಿ ಕಾಡುತಿರುವ ಕ್ಷಣ!ಇವರೇ ನನ್ನ ಜೀವನದ ಮಧುರ ಕ್ಷಣಗಳ ಮಿತ್ರರು!ಬಿಪಿನ್, ಪ್ರಶಸ್ತ್, ಶ್ರೀಶ, ಕೌಶಿಕ್, ಶುಭಾಶಯ್, ಬಸು, ಸಂತೋಷ್,ಶ್ರೇಯಸ್,ಶರತ್,ಪುನೀತ್, ನೀಲೇಶ್, ಕಾವೇರಿ, ಪ್ರಿಯಾಂಕಾ, ವಿಭಾ, ಕಾವ್ಯ, ಕರಿಷ್ಮಾ, ಸ್ಮೃತಿ, ಪೂಜ, ವೈಷ್ಣವಿ, ನಿಮ್ಮೆಲ್ಲರಿಗೂ ನನ್ನ ಜೀವನದ ಮಧುರ ಕ್ಷಣಗಳಲ್ಲಿ ಭಾಗಿಯಾಗಿ, ಅದನ್ನು ಮತ್ತಷ್ಟು ಸುಮಧುರವಾಗಿಸಿದ್ದಕ್ಕೆ ಧನ್ಯವಾದಗಳು!

-Gurudath S

gurudaths93@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!