ಅಂಕಣ

ದೊಡ್ಡ ಉದ್ಯಮಿಯೊಬ್ಬನ ಕ್ಯಾನ್ಸರ್ ಕಥೆ…

ಖಾಯಿಲೆಗಳು ಅಂದರೆ ಎಲ್ಲರೂ ಮುಖ ಸಿಂಡರಿಸುತ್ತಾರೆ. ಅದರಿಂದ ಎಷ್ಟು ದೂರ ಇದ್ದರೂ ಅಷ್ಟು ಒಳ್ಳೆಯದು ಎನ್ನುತ್ತಾರೆ. ನಿಜವೇ.. ಆರೋಗ್ಯವೇ ಭಾಗ್ಯ ಎನ್ನುವುದು ಅದಕ್ಕೇ ಅಲ್ಲವೇ..!! ಮನುಷ್ಯ ಆರೋಗ್ಯಪೂರ್ಣ ಬದುಕನ್ನ ಪಡೆದುಕೊಂಡಿದ್ದಾನೆ ಅಂದರೆ ಅದಕ್ಕಿಂತ ದೊಡ್ಡ ಭಾಗ್ಯ ಇನ್ನೇನಿದೆ?! ಆದರೂ ಏನೇ ಹೇಳಿ, ಈ ಖಾಯಿಲೆಗಳಲ್ಲಿ ಒಂದು ಒಳ್ಳೇ ಗುಣ ಇದೆ. ಯಾವುದೇ ಜಾತಿ, ಧರ್ಮ, ಬಡವ, ಶ್ರೀಮಂತ ಅಂತ ಯಾವುದೇ ರೀತಿಯ ಪಕ್ಷಪಾತ ಮಾಡದೇ ಎಲ್ಲರನ್ನೂ ಸಮಾನವಾಗಿ ಅಪ್ಪಿಕೊಳ್ಳುತ್ತದೆ. ಶ್ರೀಮಂತನಿಗೆ ತನ್ನ ಚಿಕಿತ್ಸೆಗೆ ಬೇಕಾದ ಹಣವನ್ನ ಇನ್ನೊಬ್ಬರ ಬಳಿ ಕೇಳುವ ಅವಶ್ಯಕತೆ ಇರುವುದಿಲ್ಲ, ಹೈಟೆಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಶಕ್ತಿ ಇರುತ್ತದೆ ಎನ್ನುವ ಅಂಶವೇನೋ ಸರಿ. ಆದರೆ ಹಣದಿಂದ ಬದುಕನ್ನ ಕೊಂಡುಕೊಳ್ಳುವುದಕ್ಕಾಗುವುದಿಲ್ಲವಲ್ಲ…!!

ಬದುಕಿಗಾಗಿ ಎಲ್ಲರೂ ಅವರವರೇ ಹೋರಾಡಬೇಕು. ಹಣ ಆ ಹೋರಾಟಕ್ಕೆ ಉತ್ತಮ ಸಲಕರಣೆ ನೀಡಬಹುದೇ ಹೊರತು, ಬೇರೇನಲ್ಲ. ನಮ್ಮ ಹೋರಾಟವನ್ನ ನಾವೇ ಸ್ವತಃ ಮಾಡಬೇಕು. ಈ ಕಥೆಯೂ ಅಂತಹದೇ ಒಬ್ಬ ಶ್ರೀಮಂತ ಉದ್ಯಮಿಯದು.

ಅರ್.ಜೆ.ಸಿಂಗ್ ಒಬೆರಾಯ್’ನ ಕುಟುಂಬವೇ ಶ್ರೀಮಂತ ಕುಟುಂಬ. ಆತನ ಅಜ್ಜ ಹಾಗೂ ತಂದೆ ಮಾಡಿಟ್ಟ ಆಸ್ತಿಯೇ ಸಾಕಷ್ಟಿತ್ತು. ಆದರೆ ಆರ್.ಜೆ.ಸಿಂಗ್ ಒಬೆರಾಯ್’ಗೆ ತನ್ನದೇ ಆದ ಕನಸುಗಳಿದ್ದವು. ತನ್ನದೇ ಆದ ಬ್ಯುಸಿನೆಸ್ಸ್ ಆರಂಭಿಸಬೇಕೆಂದಿದ್ದ. ಇನ್ನು ಅದಕ್ಕೆ ಆತನ ತಂದೆ ತಾಯಿಯು ಬೆನ್ನುಲುಬಾಗಿ ನಿಂತಿದ್ದರು. ಆದರೆ ಕಷ್ಟಗಳು ಬಡವ, ಶ್ರೀಮಂತ ಎಂದು ನೋಡಿ ಬರುವುದಿಲ್ಲ. ಒಬೆರಾಯ್ ತನ್ನ ತಾಯಿಯನ್ನ ಕಳೆದುಕೊಂಡಿದ್ದ. ಆ ದುಃಖದಿಂದ ಹೇಗೋ ಹೊರಬಂದು ಕೆಲ ತಿಂಗಳುಗಳು ಕಳೆದಿತ್ತು ಅಷ್ಟೇ.. ಆತ ತನ್ನ ತಂದೆಯನ್ನು ಕಳೆದುಕೊಂಡಿದ್ದ. ಆದರೆ ಇದು ಇಲ್ಲಿಗೇ ನಿಲ್ಲಲಿಲ್ಲ, ಗರ್ಲ್’ಫ್ರೆಂಡ್ ಜೊತೆ ಬ್ರೇಕ್’ಅಪ್. ಇದೆಲ್ಲವನ್ನೂ ಹೇಗೋ ಸಹಿಸಿಕೊಳ್ಳುತ್ತಾ ಕಾಲ ಕಳೆಯುತ್ತಿದ್ದ ಒಬೆರಾಯ್’ಗೆ ದೊಡ್ಡ ಶಾಕ್ ನೀಡಿದ್ದು ಆತನ ಆರೋಗ್ಯ. ಒಬೆರಾಯ್’ಗೆ ‘ಕಾರ್ಡಿಯಾಕ್  ಸರ್ಕೋಮ’ ಉಂಟಾಗಿತ್ತು. ಆತನ ಹೃದಯದಲ್ಲಿ ಟ್ಯೂಮರ್!!!  ಮೂರು ಬಾರಿ ಬೇರೆ ಬೇರೆ ಕಡೆ ಬಯಾಪ್ಸಿ ಮಾಡಿಸಿ ರಿಪೋರ್ಟ್ ಪಡೆದುಕೊಂಡ. ಎಲ್ಲಾ ಕಡೆಯಿಂದಲೂ ಒಂದೇ ಉತ್ತರ ಬಂದಿತ್ತು. ಡಾಕ್ಟರ್’ಗಳು, ನಿಮ್ಮೆಲ್ಲಾ ಕನಸುಗಳನ್ನ ಬದಿಗಿಟ್ಟು ಉಳಿದ ದಿನಗಳನ್ನು ಎಂಜಾಯ್ ಮಾಡುತ್ತಾ ಕಾಲ ಕಳೆಯಿರಿ ಎಂದು ಬಿಟ್ಟಿದ್ದರು..!!

ಏನೇ ಆಗಿದ್ದರೂ ಆತನಿಗೆ ಸರ್ಜರಿಯಂತೂ ಮಾಡಲೇಬೇಕಿತ್ತು. ಹೃದಯದಲ್ಲಿ ಟ್ಯೂಮರ್ ಆಗಿದ್ದರಿಂದ ಪೂರ್ತಿ ತೆಗೆಯಲಾಗುವುದೋ ಇಲ್ಲವೋ ಎನ್ನುವುದು ಕೂಡ ಹೇಳುವುದು ಕಷ್ಟವಾಗಿತ್ತು. ಡಾಕ್ಟರ್ ಯಾವುದೇ ರೀತಿಯ ಭರವಸೆ ನೀಡಿರಲಿಲ್ಲ. ಆದರೆ ಒಬೆರಾಯ್’ನ ಅದೃಷ್ಟ ಚನ್ನಾಗಿತ್ತು. ಪೂರ್ಣ ಟ್ಯೂಮರ್ ತೆಗೆಯಲಾಯಿತು. ಸರ್ಜರಿಯ ನಂತರ ಡಾಕ್ಟರ್ ಭರವಸೆಯ ಮಾತುಗಳನ್ನಾಡಿದ್ದರು. ಅಲ್ಲಿಂದ ಆತನಿಗೆ ರೇಡಿಯೋಥೆರಪಿ ಆರಂಭಿಸಲಾಗಿತ್ತು.

ಒಬೆರಾಯ್ ಇದೆಲ್ಲವನ್ನು ಅರಗಿಸಿಕೊಳ್ಳುವುದು ಕಷ್ಟವಾಗಿತ್ತು. ಮೊದ ಮೊದಲು ಇದನ್ನ ತನ್ನ ಗೆಳೆಯರಿಗೆ, ಕುಟುಂಬದವರಿಗೆ ಹೇಳುವುದು ಹೇಗೆ ಎನ್ನುವುದೇ ಅರ್ಥವಾಗುತ್ತಿರಲಿಲ್ಲ. ಆದರೆ ವಿಷಯ ತಿಳಿದ ಅವರೆಲ್ಲರು ಆತನೊಂದಿಗೆ ನಿಂತರು. ಆತನ ಗೆಳೆಯರು ಈತನನ್ನು ಖುಷಿಯಾಗಿಡಲು, ಈತನ ಸುತ್ತ ತಮ್ಮ ಜಗತ್ತನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದರು. ಆದರೆ ಒಬೆರಾಯ್’ಗೆ ಅದು ಇಷ್ಟವಾಗುತ್ತಿರಲಿಲ್ಲ. ಆತ ಏಕಾಂಗಿಯಾಗಿ ಇರಲು ಬಯಸತೊಡಗಿದ. ಎಷ್ಟೋ ಬಾರಿ ತನ್ನ ಗೆಳೆಯರ ಮೇಲೆ ಕೂಗಾಡುತ್ತಿದ್ದ, ಕೋಪಿಸಿಕೊಳ್ಳುತ್ತಿದ್ದ. ಆದರೆ ಅವರದನ್ನು ಅರ್ಥ ಮಾಡಿಕೊಂಡು ಅವನೊಂದಿಗೆ ಸಹಕರಿಸುತ್ತಿದ್ದರು. ನಿಧಾನವಾಗಿ ಒಬೆರಾಯ್ ತನ್ನ ಮನದ ಅಳಲನ್ನು ಅವರೊಂದಿಗೆ ಹೇಳಿಕೊಳ್ಳಲಾರಂಭಿಸಿದ್ದ. ಅದು ತುಂಬಾ ಅವಶ್ಯಕವೂ ಆಗಿತ್ತು ಎನ್ನುತ್ತಾನೆ ಆತ.

ಆತ ಕಾರ್ಡಿಯಾಕ್ ಸರ್ಕೋಮದಿಂದ ಸಂಪೂರ್ಣ ಗುಣವಾದ. ಆದರೆ ಆಸ್ಪತ್ರೆಗೆ ಹೋಗುವುದು ಮಾತ್ರ ನಿಲ್ಲಲಿಲ್ಲ. ಪ್ರತಿ ಎರಡು ತಿಂಗಳಿಗೊಮ್ಮೆ ಏನಾದರೊಂದು ತೊಂದರೆ ಕಾಣಿಸಿಕೊಂಡು ಆಸ್ಪತ್ರೆಗೆ ಹೋಗುವಂತಾಗುತ್ತಿತ್ತು. ಮತ್ತೆ ಕೆಲ ತಿಂಗಳುಗಳ ನಂತರ ಮತ್ತೊಂದು ಟ್ಯೂಮರ್ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಅದು ಕಾರ್ಡಿಯಾಕ್ ಸರ್ಕೋಮದಷ್ಟು ಗಂಭೀರವಾಗಿರಲಿಲ್ಲ. ಅದರಿಂದಲೂ ಗುಣಮುಖನಾದ ಒಬೆರಾಯ್. ಆಯುರ್ವೇದ ಚಿಕಿತ್ಸೆ ತೆಗೆದುಕೊಳ್ಳಲಾರಂಭಿಸಿದ. ಸ್ಟ್ರೆಸ್’ನ್ನು ಕಮ್ಮಿ ಮಾಡಿಕೊಂಡ. ಆದರೆ ಮತ್ತೆ ಮೊದಲಿನಂತೆ ಒಂದು ಸಾಮಾನ್ಯ ಬದುಕಿಗೆ ಹಿಂದಿರುಗಿ ಬರುವುದು ಕಷ್ಟವಾಗುತ್ತಿತ್ತು ಆತನಿಗೆ..!

ಈ ಎಲ್ಲಾ ಆಘಾತಗಳು ಆತನನ್ನು ಜರ್ಝರಿತಗೊಳಿಸಿತ್ತು. ಇವೆಲ್ಲದರ ನಡುವೆ ಕಳೆದುಹೋದ ತನ್ನನ್ನ ತಾನು ಹುಡುಕುವ ಪ್ರಯತ್ನ ಮಾಡಬೇಕಿತ್ತು. ಅದೇ ನಿಟ್ಟಿನಲ್ಲಿ ಒಬೆರಾಯ್ ಭಾರತದ ಎಲ್ಲ ಪವಿತ್ರ ಸ್ಥಳಗಳಿಗೆ ಭೇಟಿ ನೀಡಲಾರಂಭಿಸಿದ. ಆತ ಒಬ್ಬನೇ ಪ್ರಯಾಣಿಸುತ್ತಿದ್ದ. ಈ ಎಲ್ಲಾ ಸಮಯ ಅತನಿಗೆ ಬದುಕಿನ ಬಗ್ಗೆ ಯೋಚಿಸುತ್ತಿದ್ದ. ಆ ಪ್ರಯಾಣ, ಆ ಬದಲಾವಣೆ ಆತನಿಗೆ ಹೊಸ ಹುರುಪು ಕೊಡಲಾರಂಭಿಸಿತ್ತು. ಆತನ ಕನಸು ಮತ್ತೆ ಜೀವ ಪಡೆದುಕೊಳ್ಳಲಾರಂಭಿಸಿತ್ತು. ಕ್ಯಾನ್ಸರ್ ಎನ್ನುವುದು ನಮ್ಮ ಕನಸುಗಳಿಗೆ ಒಂದು ಬೇಲಿ ಹಾಕಿ ಬಿಟ್ಟಿರುತ್ತದೆ. ಆದರೆ ಒಬೆರಾಯ್ ಅದರಿಂದ ಹೊರಬಂದು ತನ್ನ ಕನಸುಗಳಿಗಿನ್ನೂ ಜಾಗವಿದೆ ಎಂಬುದನ್ನ ಅರಿತಿದ್ದ.

ಈಗ ನಾಲ್ಕು ವರ್ಷಗಳು ಕಳೆದು ಹೋಗಿವೆ. ಆತನಿಗೊಬ್ಬ ಪುಟ್ಟ ಮಗನಿದ್ದಾನೆ ಈಗ. ಆತನ ಕನಸು ಸಾಕಾರಗೊಳ್ಳುತ್ತಿದೆ. ಪ್ಯಾರಿಸ್’ನಲ್ಲಿ ಕೂಡ ಆತನ ಹೊಟೆಲ್ ಹಾಗೂ ರೆಸ್ಟೋರೆಂಟ್’ಗಳು ಆರಂಭಗೊಳ್ಳುತ್ತಿದೆ…!! ಈಗ ಆತನ ಬದುಕು ‘ನಾರ್ಮಲ್’ ಆಗಿದೆ. ನಿಜ ಹೇಳಬೇಂದರೆ ಈ ‘ನಾರ್ಮಲ್’ ಅನ್ನೋದು ಸಂಪೂರ್ಣವಾಗಿ ಮೊದಲಿನ ಥರ ಎಂಬ ಅರ್ಥದಲ್ಲಿ ಅಲ್ಲ. ಈ ‘ನಾರ್ಮಲ್’ನಲ್ಲಿ ಸಾಕಷ್ಟು ಹೊಸತುಗಳಿರುತ್ತೆ, ಬದಲಾವಣೆಗಳಿರುತ್ತೆ. ಈ ಸಾಫ಼್ಟ್’ವೇರ್’ಗಳ ಅಪ್’ಡೇಟೆಡ್ ವರ್ಶನ್ ಬರುತ್ತಲ್ಲ ಹಾಗೆ. ಬದುಕು ಕೂಡ ಹಾಗೆಯೇ.,! ಸವಾಲುಗಳು ಬಂದಂತೆಲ್ಲಾ, ಅದನ್ನ ನಾವು ಎದುರಿಸಿದಂತೆಲ್ಲಾ ನಮ್ಮ ಅಪ್’ಡೇಟೆಡ್ ವರ್ಶನ್ ಬರುತ್ತಿರುತ್ತದೆ,.!

‘ಎಲ್ಲರಿಗೂ ಅವರದೇ ಆದ ಭಯಗಳಿರುತ್ತವೆ, ಕ್ಯಾನ್ಸರ್ ಎನ್ನುವುದು ಈ ಭಯವನ್ನು ಹೆಚ್ಚಿಸುತ್ತದೆ. ಆದರೆ ಆ ಭಯವನ್ನು ಎದುರಿಸಲೇಬೇಕು’ ಎನ್ನುತ್ತಾನೆ ಅರ್.ಜೆ.ಸಿಂಗ್ ಒಬೆರಾಯ್. ಹಾಗಂತ ಅಂತರಾಳದ ಗುದ್ದಾಟಗಳೆಲ್ಲಾ ಮುಗಿದು ಹೋಗಿದೆ ಅಂತಲ್ಲ. ಅದಿನ್ನೂ ಇದೆ. ಪ್ರತಿಯೊಬ್ಬರಲ್ಲೂ ಇರುತ್ತದೆ. ಎಲ್ಲಾ ಪರಿಸ್ಥಿತಿಯಲ್ಲೂ ನಮ್ಮ ಗುದ್ದಾಟ, ಹೋರಾಟ ಇರುವುದೆಲ್ಲ ನಮ್ಮೊಡನೆಯೇ ಆಗಿರುತ್ತದೆ. ನಮ್ಮೊಳಗಿನ ಆ ಗುದ್ದಾಟ, ಜಗ್ಗಾಟ, ಹೋರಾಟದ ಪ್ರತಿಫಲವೇ ತಾನೆ ನಮ್ಮ ಅಪ್’ಡೇಟೆಡ್ ವರ್ಶನ್..!! ಇವೆಲ್ಲ ಮುಗಿದು ಹೋದರೆ ಬದುಕಲ್ಲಿ ಉಳಿಯುವುದಾದರೂ ಏನು..??

ಒಂದು ಸಮಯದಲ್ಲಿ ಒಬೆರಾಯ್, ತನ್ನ ಬದುಕಿನ ಮೇಲೆ ತನ್ನ ಹಿಡಿತವೇ ಇಲ್ಲವೆಂದು ಕೊರಗಿದ್ದ, ಇವೆಲ್ಲ ಕೆಟ್ಟ ಕನಸಾಗಿರಬಾರದೇ ಎಂದು ಯೋಚಿಸುತ್ತಿದ್ದ. ಆದರೆ ಇಂದು ಆತ ಹಾಗೆ ಇಲ್ಲ. ಆತ ತನ್ನ ಬದುಕಿನಲ್ಲಿ ಸಂತೋಷವಾಗಿದ್ದಾನೆ. ಬದುಕು ಈ ಎಲ್ಲಾ ಕೊರಗುಗಳಿಗೆ ತುಂಬಾ ಚಿಕ್ಕದು ಎಂದು ಗೊತ್ತಾಗಿದೆ ಆತನಿಗೆ. ಹಾಗೆ ಅನಿರೀಕ್ಷಿತವೂ ಹೌದೆಂದು ಒಪ್ಪಿಕೊಂಡಿದ್ದಾನೆ. ಈಗ ಆತ ಪ್ರತಿದಿನವೂ ಪರಿಚಿತನೋ ಅಪರಿಚಿತನೋ ಯಾವುದಾದರೊಬ್ಬ ವ್ಯಕ್ತಿಯ ಮುಖದಲ್ಲಿ ಮಂದಹಾಸ ತರುವ ಪ್ರಯತ್ನ ಮಾಡುತ್ತಾನೆ. ತನ್ನ ಕನಸನ್ನು ಸಾಕಾರಗೊಳಿಸಿಕೊಳ್ಳುತ್ತಿದ್ದಾನೆ ಹಾಗೆ ಇತರರಿಗೂ ಕೂಡ “ಧೈರ್ಯವಾಗಿ ಕನಸು ಕಾಣು” ಎನ್ನುತ್ತಿದ್ದಾನೆ.!!

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!