ಅಂಕಣ

ಟೈಮ್ ಟ್ರಾವೆಲ್…! ಭೂತ ಭವಿಷ್ಯಗಳ ಸುತ್ತ..!

ಮನುಷ್ಯನಿಗೆ ಎಂತಹಾ ಸುಖವಿದ್ದರೂ ನೆಮ್ಮದಿಯಿಂದ ಬದುಕುವ ಕಲೆಯೇ ತಿಳಿದಿಲ್ಲ. ಒಂದಿದ್ದರೆ ಇನ್ನೊಂದು ಬೇಕು ಎಂಬ ಅತಿಯಾಸೆ. ಅಯ್ಯೋ ನನ್ನ ಜೀವನವೇ ಇಷ್ಟು ಏನೂ ಸುಖವಿಲ್ಲ ಬರೀ ಕಷ್ಟಗಳೇ ಅಂತಾ ಪ್ರತೀ ದಿನ ಕೊರಗುವ ಮನಗಳಿಗೇನೂ ಕಮ್ಮಿ ಇಲ್ಲ. ಇನ್ನು ಕೆಲವರಿಗೆ ಅಯ್ಯೋ ನನ್ನ ಜೀವನದ ಎಷ್ಟೋ ದಿನಗಳು ಸುಮ್ಮನೆ ಕಳೆದು ಹೋದವು ಏನೂ ಸಾಧಿಸಲಿಲ್ಲ ಎಂಬ ಕೊರಗು. ಮತ್ತೊಂದಷ್ಟು ಜನಕ್ಕೆ ತಮ್ಮ ಭವಿಷ್ಯದ ಬಗ್ಗೆ ಚಿಂತೆ. ಅಯ್ಯೋ ಇದೆಲ್ಲ ನಮ್ಮ ಹಣೇ ಬರಹ ಬಿಡಿ, ಅಂತ ವಿಧಿಯನ್ನು ಬೈದು ತಮ್ಮನ್ನು ತಾವು ಸಂತೈಸಿಕೊಳ್ಳುತ್ತಾರೆ ಕೆಲವರು. ಮನೋ ಮರ್ಕಟಃ ಎಂಬಂತೆ ನಮ್ಮ ಮನಸ್ಸು ಮಂಗನಿದ್ದಂತೆ. ಸುಮ್ಮನೇ ಕುಳಿತುಕೊಳ್ಳೋದೇ ಇಲ್ಲ. ಸದಾ ಇರುವ ಸುಖವನ್ನು ಬಿಟ್ಟು ಇರದರತ್ತ ಚಿತ್ತ. ಹಾಗೇ ಸುಮ್ಮನೇ ಯೋಚಿಸಿ, ಒಂದು ವೇಳೆ ನಾವೇನಾದರೂ ನಮ್ಮ ಭವಿಷ್ಯವನ್ನು ಮೊದಲೇ ತಿಳಿಯಬಹುದಾದರೆ ಅದೆಷ್ಟು ಚೆನ್ನಾಗಿರುತ್ತಿತ್ತು ಅಲ್ಲವೇ. ನಮ್ಮ ಭೂತಕಾಲಕ್ಕೆ ಮತ್ತೊಮ್ಮೆ ಹೋಗಿ ನಾವು ಸಾಧಿಸಲಾಗದಿದ್ದನ್ನು ಸಾಧಿಸಿ ಬರಲು ಅವಕಾಶವಿದ್ದರೆ ಹೇಗಿರುತಿತ್ತು. ಹೌದು ಭೌತಶಾಸ್ತ್ರದ ಕೆಲವು ಸಿದ್ಧಾಂತಗಳ ಪ್ರಕಾರ ಇದು ಸಾಧ್ಯ. ನಮ್ಮ ಪುರಾಣಗಳಲ್ಲೂ ಇದಕ್ಕೆ ಸಂಬಂಧಿಸಿದ ಹಲವಾರು ಅಧಾರಗಳಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಚಲನಚಿತ್ರಗಳೂ ಬಂದಿವೆ. ಹಾಗಾದರೆ ನಿಜವಾಗಿಯೂ ಮನುಷ್ಯನಿಗೆ ತನ್ನ ಭೂತ ಕಾಲ ಹಾಗೂ ಭವಿಷ್ಯ ಕಾಲಗಳತ್ತ ತೆರಳಲು ಸಾಧ್ಯವಿದೆಯೇ. ಅಯ್ಯೋ ಅದು ಹೇಗೆ ಸಾಧ್ಯ ಸ್ವಲ್ಪ ಹೇಳಿ ಅಂತ ಕೇಳುತಿದ್ದೀರಾ. ಸರಿ ಹಾಗಾದರೆ ಬನ್ನಿ ಟೈಮ್ ಟ್ರಾವಲ್ ಮಾಡಿ ಬರೋಣ..!

ನಾವು ಚಿಕ್ಕವರಿದ್ದಾಗಿನಿಂದಲೂ ಬಹಳಷ್ಟು ಸಲ ಈ ಮಾತುಗಳನ್ನು ಕೇಳಿಸಿಕೊಂಡಿದ್ದೇವೆ. ಹಾಗೂ ಈಗಲೂ ಕೇಳುತ್ತಲೇ ಇದ್ದೇವೆ. ಅದೇನೆಂದರೆ ಸಮಯ ಬಹಳ ಅಮೂಲ್ಯವಾದದ್ದು. ಒಮ್ಮೆ ಸಮಯ ಎಂಬುದು ಕಳೆದು ಹೋದರೆ ಮತ್ತೆ ಸಿಗಲಾರದು. ನಿಮ್ಮ ಸಮಯವನ್ನು ಹಾಳು ಮಾಡಬೇಡಿ. ಸಮಯವನ್ನು ಸದಾ ಪಾಲಿಸಿ. ಸಮಯ ಹಾಗೂ ಸಮುದ್ರದ ಅಲೆಗಳು ಯಾರಿಗೂ ಕಾಯುವುದಿಲ್ಲ. ಹೀಗೆ ಹತ್ತು ಹಲವು ಬಗೆಯ ನುಡಿಗಳು ನಮ್ಮ ಕಿವಿಯನ್ನು ಹೊಕ್ಕಿವೆ ಹಾಗೂ ಹೊಕ್ಕುತ್ತಲೇ ಇರುತ್ತದೆ. ಆದರೂ ನಮ್ಮಿಂದ ಸಮಯ ಪಾಲನೆ ಸಾಧ್ಯವಾಗಿರುವುದಿಲ್ಲ. ಏನಿದು ಸಮಯ, ಟೈಮ್ ಅಂದರೆ? ಅದ್ಯಾಕೆ ಸದಾ ಕಾಲ ಇದು ಓಡುತ್ತಲೆ ಇರುತ್ತದೆ? ಅದ್ಯಾಕೆ ಇದಕ್ಕೆ ಅಷ್ಟೊಂದು ಮಹತ್ವ? ಅದ್ಯಾಕೆ ಇದು ಎಂದೆಂದಿಗೂ ನಿಲ್ಲುವುದೇ ಇಲ್ಲ? ಅದ್ಯಾಕೆ ಇದರ ವೇಗ ಬದಲಾಗುವುದಿಲ್ಲ? ನೀವು ಈ ಎಲ್ಲಾ ಪ್ರಶ್ನೆಗಳ ಬಗ್ಗೆ ಒಮ್ಮೆ ಯೋಚಿಸಿ ನೋಡಿ. ಸಮಯ ಅನ್ನೋದೆ ವಿಚಿತ್ರ ಅನ್ನಿಸಿಬಿಡುತ್ತದೆ.

ಈ ಸಮಯ(Time) ಅಂದರೆ ಏನು? ನಿಜವಾಗಿಯೂ ಸಮಯ(Time) ಅನ್ನೋದು ಜಗತ್ತಿನಲ್ಲಿ ಇದೆಯೇ? ಅಥವಾ ಮನುಷ್ಯನೇ ಮಾಡಿಕೊಂಡ ಕಲ್ಪನೆಯೇ? ಸಮಯ ಯಾವಾಗ ಹುಟ್ಟಿಕೊಂಡಿತು ಹಾಗೂ ಹೇಗೆ ಹುಟ್ಟಿಕೊಂಡಿತು ಅನ್ನುವುದಕ್ಕೆ ಹಲವಾರು ದೃಷ್ಟಾಂತಗಳಿವೆ. ನಾವೆಲ್ಲಾ ತಿಳಿದಿರುವಂತೆ ಟೈಮ್ ಅನ್ನೋದು ಒಂದು ನಿರ್ಧಿಷ್ಟವಾದ ಅಳತೆಗೋಳಲ್ಲ. ಐನ್’ಸ್ಟೈನ್’ನ ಪ್ರಕಾರ ಟೈಮ್ ಅನ್ನೋದು ಬರೀ ನಮ್ಮ ಕಲ್ಪನೆ ಅಥವಾ ಭ್ರಮೆ ಅಷ್ಟೇ. ಹಾಗೂ ಟೈಮ್ ಅನ್ನೋದು ಒಬ್ಬೊಬ್ಬರಿಗೆ ಒಂದೊಂದು ರೀತಿ ಅನುಭವಕ್ಕೆ ಬರುವಂತದ್ದು.

ಒಬ್ಬ ವ್ಯಕ್ತಿಯು ಎಷ್ಟು ವೇಗದಲ್ಲಿ ಚಲಿಸುತ್ತಿರುತ್ತಾನೊ ಅದಕ್ಕೆ ತಕ್ಕಂತೆ ಟೈಮ್ ಅನ್ನೋದು ವಿಧವಿಧವಾಗಿ ತೋರಲ್ಪಡುತ್ತದೆ. ಇದನ್ನೆ ಸಾಪೇಕ್ಷ ಸಿದ್ಧಾಂತ ಸಾರುತ್ತದೆ. ಇದನ್ನೆ ಐನ್’ಸ್ಟೈನ್ ಟೈಮ್ ಅನ್ನೋದು ರಿಲೇಟಿವ್(ವ್ಯಕ್ತಿ ಹಾಗೂ ಆತನ ವೇಗಕ್ಕೆ ತಕ್ಕಂತೆ ಟೈಮ್ ಗೋಚರಿಸುತ್ತದೆ) ಎಂದು ಕರೆಯುತ್ತಾನೆ. ಹಾಗೂ ಟೈಮ್  ನಾಲ್ಕನೇ ಆಯಾಮ(Dimension) ಎಂದು ಪರಿಗಣಿಸುತ್ತಾನೆ. ಈ ಸಮಯ ಹೇಗೆ ಹುಟ್ಟಿತು ಎಂಬುದರ ಬಗ್ಗೆ ನಿಮಗೆ ಸಂಪೂರ್ಣ ವಿವರ ತಿಳಿಯಬೇಕೆನಿಸಿದರೆ ಸ್ಟೀಫನ್ ಹಾಕಿಂಗ್’ನ ಬ್ರೀಫ್ ಹಿಸ್ಟರಿ ಆಫ್ ಟೈಮ್ (A Brief History of Time) ಪುಸ್ತಕವನ್ನು ಒಮ್ಮೆ ಓದಿ.

ಸಮಯದ ಬಗ್ಗೆ ನಮ್ಮಲ್ಲಿರುವ ಕೆಲವು ತಪ್ಪು ತಿಳುವಳಿಕೆಗಳು,

1. ಸಮಯ ಎಂಬುದು ಸಾರ್ವತ್ರಿಕ (Time is Universal).

ಸಮಯ ಸಾರ್ವತ್ರಿಕವಲ್ಲ, ಭೂಮಿಯ ಮೇಲೆ ಈಗ 12 ಗಂಟೆ ಅಂದುಕೊಳ್ಳಿ, ಹಾಗಾದರೆ ಚಂದ್ರನ ಮೇಲೆ, ಮಂಗಳನ ಮೇಲೆ, ಹಾಗೂ ಬ್ರಹ್ಮಾಂಡದ ಎಲ್ಲೆಡೆಯೂ ಸಮಯ 12 ಗಂಟೆಯೇ ಆಗಿರುತ್ತದೆಯೇ ? ಇಲ್ಲ ಸಮಯ ಎಲ್ಲೆಡೆಯೂ ಒಂದೇ ಅಗಿರುವುದಿಲ್ಲ.

2. ಸಮಯದ ಗತಿ ಎಲ್ಲೆಡೆಯೂ ಒಂದೇ ರೀತಿಯಾಗಿರುತ್ತದೆ (Time travels everywhere around the universe with the same rate).

ಸಮಯ ಎಲ್ಲೆಡೆಯೂ ಒಂದೇ ಗತಿಯಲ್ಲಿರುವುದಿಲ್ಲ. ಅದರ ಚಲನೆಯ ವೇಗ ಬ್ರಹ್ಮಾಂಡದ ಪ್ರತಿಯೊಂದು ಭಾಗಗಳಲ್ಲಿಯೂ ಬೇರೆ ಬೇರೆಯಾಗಿರುತ್ತದೆ. ಅಂದರೆ ಗಡಿಯಾರದ ಚಲನೆಯಲ್ಲಿನ ವ್ಯತ್ಯಾಸ.

3. ನಾವು ಮೂರು ಆಯಾಮದ (3 Dimension) ಜಗತ್ತಿನಲ್ಲಿ ಬದುಕುತ್ತಿದ್ದೇವೆ.

ನಮಗೆಲ್ಲರಿಗೂ ತಿಳಿದಿರುವುದು ಮೂರು ಆಯಾಮಗಳು. ಬಹಳಷ್ಟು ಜನರ ನಂಬಿಕೆ ನಾವು ಮೂರು ಆಯಾಮದ(3D) ಜಗತ್ತಿನಲ್ಲಿ ಬದುಕುತ್ತಿದ್ದೇವೆ ಎಂದು ಆದರೆ ನಾವು ಬದುಕುತ್ತಿರುವುದು ನಾಲ್ಕು ಆಯಾಮದ(4D) ಜಗತ್ತಿನಲ್ಲಿ. ಇದನ್ನೇ ನಾವು SpaceTime ಎಂದು ಕರೆಯುವುದು. ಈ  ನಾಲ್ಕನೇ ಆಯಾಮವೇ ಸಮಯ(Time). ಆದರೆ ಈ ನಾಲ್ಕನೇ ಆಯಾಮ ಸಮಯದ ಅನುಭವವನ್ನು ನಾವೆಂದೂ ಅಷ್ಟು ಸುಲಭದಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದ ಸಂಗತಿ. ಖ್ಯಾತ ಭೌತಶಾಸ್ತ್ರಜ್ಞ Michio Kaku ಈ ನಾಲ್ಕನೇ ಆಯಾಮದ ಬಗ್ಗೆ ಸುಂದರವಾದ ವಿವರಣೆಯನ್ನು ನೀಡಿದ್ದಾರೆ.

ಸಾಪೇಕ್ಷ  ಸಿದ್ಧಾಂತದ ಪ್ರಾಕಾರ ನಮ್ಮ ವೇಗಕ್ಕೆ ತಕ್ಕಂತೆ ಸಮಯದ ಚಲನೆಯಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ನಾವು ಚಲಿಸುವ ವೇಗಕ್ಕೆ ತಕ್ಕಂತೆ ನಮ್ಮ ಸಮಯವೂ ವ್ಯತ್ಯಾಸವಾಗುತ್ತದೆ. ಹಾಗೂ ಇದರಿಂದ ನಮಗೆ ವಯಸ್ಸಾಗುವ ವೇಗದಲ್ಲೂ ವ್ಯತ್ಯಾಸ ಕಂಡು ಬರುತ್ತದೆ. ನಾವು ಬೆಳಕಿನ ವೇಗಕ್ಕೆ ಹತ್ತಿರವಾದಂತೆ ನಮಗೆ ವಯಸ್ಸಾಗುವ ವೇಗ ನಿಧಾನವಾಗುತ್ತಾ ಹೋಗುತ್ತದೆ. ಅರ್ಥ ಮಾಡಿಕೊಳ್ಳೋದೆ ಸ್ವಲ್ಪ ಕಷ್ಟ. ಉದಾಹರಣೆಗೆ ನೀವು ಈವಾಗ ಬೆಳಕಿನ ವೇಗದಲ್ಲಿ ಹೊರಟು ಬ್ರಹ್ಮಾಂಡ ದರ್ಶನ ಮಾಡಿಕೊಂಡು ಐದು ವರ್ಷಗಳ ನಂತರ ಪುನಃ ಭೂಮಿಗೆ ಹಿಂತಿರುಗಿದರೆ, ಭೂಮಿಯ ಮೇಲೆ ಹಲವಾರು ವರ್ಷಗಳೇ ಕಳೆದು ಹೋಗಿರುತ್ತದೆ. ನಿಮಗೆ ಬರೀ ಐದೇ ವರ್ಷಗಳು ಅನ್ನಿಸಿದರೆ ಭೂಮಂಡಲದಲ್ಲಿ ಹಲವಾರು ವರುಷಗಳೇ ಉರುಳಿ ಹೋಗಿರುತ್ತದೆ. ಅಬ್ಬಾ ಇದೆಂತಾ ವಿಚಿತ್ರ ಸಂಗತಿ ಅಲ್ಲವೇ. ಸಾಪೇಕ್ಷ ಸಿದ್ಧಾಂತದ (General theory of relativity) ಪ್ರಕಾರ ಗುರುತ್ವಕ್ಕೆ ಸಮಯವನ್ನು ಬಾಗಿಸುವ ಶಕ್ತಿ ಇದೆಯಂತೆ. ಐನ್’ಸ್ಟೈನ್ ತನ್ನ ಸಾಪೇಕ್ಷ ಸಿದ್ಧಾಂತವನ್ನು ಜಗತ್ತಿಗೆ ಮಂಡಿಸುವ ಮುಂಚೆ, ಸ್ಪೇಸ್ (ಸಂದರ್ಭ ಅಥವಾ ಜಾಗ) ಹಾಗೂ ಟೈಮ್ ಎರಡೂ ಪ್ರತ್ಯೇಕ ಪರಿಮಾಣಗಳು ಎಂದೇ ನಂಬಲಾಗಿತ್ತು. ಆದರೆ ಸಾಪೇಕ್ಷ ಸಿದ್ಧಾಂತದ ಪ್ರಕಾತ ಅವೆರಡೂ ಒಂದೇ ಎಂದು ಐನ್’ಸ್ಟೈನ್ ಕರೆದಿದ್ದಾನೆ. ಅದನ್ನೇ ಸ್ಪೇಸ್’ಟೈಮ್ ಎಂದು ಕರೆಯುತ್ತಾರೆ.

ನಿಮಗೆ ತಿಳಿದಿದೆಯೇ ಈವತ್ತು ನಾವು ಬಳಸುತ್ತಿರುವ GPS ತಂತ್ರಜ್ಞಾನ ಕೆಲಸ ಮಾಡುವುದು ಸಾಪೇಕ್ಷ ಸಿದ್ಧಾಂತದ ಆಧಾರದ ಮೂಲಕವೆ. ಐನ್’ಸ್ಟೈನ್’ನ ಸಾಪೇಕ್ಷ ಸಿದ್ಧಾಂತದ ಪ್ರಕಾರ ಟೈಮ್ ಟ್ರಾವೆಲ್ ಮಾಡೋದು ಕಷ್ಟಸಾಧ್ಯ. ಸಾಪೇಕ್ಷ ಸಿದ್ಧಾಂತಕ್ಕೆ ಬದಲಾಗಿ ಹಲವಾರು ಸಿದ್ಧಾಂತಗಳು ಟೈಮ್ ಟ್ರಾವಲ್ ಬಗ್ಗೆ ಮಾತನಾಡುತ್ತವೆ. ಅವುಗಳಲ್ಲಿ ಪ್ರಮುಖವಾಗಿರುವುದು ಇನ್ಫಿನಿಟಿ ಸಿಲಿಂಡರ್(Infinity Cylinder), ಕೃಷ್ಣ ರಂಧ್ರ(Black Hole) ಹಾಗೂ ಕಾಸ್ಮಿಕ್ ಸ್ಟ್ರಿಂಗ್ (Cosmic String) ಸಿದ್ಧಾಂತಗಳು. ಟೈಮ್ ಟ್ರಾವಲ್ ಮಾಡಲು ಹೇಗೆ ನಾವು ಸಂಚಾರ ಮಾಡಲು ವಾಹನಗಳನ್ನು ಬಳಸುತ್ತೇವೆಯೋ ಹಾಗೆಯೇ ಟೈಮ್ ಟ್ರಾವೆಲ್ ಮಾಡಲು ಒಂದು ಸಾಧನ ಬೇಕು. ಅದುವೇ ಟೈಮ್ ಮಷಿನ್(Time Machine). ಟೈಮ್ ಮಷಿನ್ ನಿಮ್ಮನ್ನು ನಿಮ್ಮ ಭೂತ ಹಾಗೂ ಭವಿಷ್ಯ ಕಾಲಗಳಿಗೆ ಕರೆದುಕೊಂಡು ಹೋಗುತ್ತದೆ. ಈ ವಿಷಯವನ್ನೇ ಇಟ್ಟುಕೊಂಡು ಹಲವಾರು ಚಲನಚಿತ್ರಗಳನ್ನು ತಯಾರಿಸಿದ್ದಾರೆ. ಇತ್ತೀಚೆಗಷ್ಟೇ ತಮಿಳಿನಲ್ಲಿ 24 ಎಂಬ ಚಲನಚಿತ್ರದಲ್ಲಿ ಟೈಮ್ ಟ್ರಾವೆಲ್’ನ ಪರಿಕಲ್ಪನೆಯಿದೆ.

ಕೃಷ್ಣ ರಂಧ್ರಗಳನ್ನು(Black Holes) ಉಪಯೋಗಿಸಿಕೊಂಡು ನಾವು ಭವಿಷ್ಯದತ್ತ ಸಂಚಾರ ಮಾಡಬಹುದಂತೆ. ಇದುವರೆಗೆ ನಮಗೆ ನಮ್ಮ ಬ್ರಹ್ಮಾಂಡದ ಭೂತ ಕಾಲದ ಚಿತ್ರಣ ಮಾತ್ರ ತಿಳಿದಿದೆ. ಕೃಷ್ಣ ರಂಧ್ರಗಳಲ್ಲಿ ಅಪಾರ ಪ್ರಮಾಣದ ಗುರುತ್ವಾಕರ್ಷಣೆ ಇರುತ್ತದೆ. ಅಪಾರವಾದ ಗುರುತ್ವಾಕರ್ಷಣೆಯೊಳಗೆ ಸಿಲುಕಿದ ಗಡಿಯಾರದ ಮುಳ್ಳುಗಳು ತಮ್ಮ ಚಲನೆಯಲ್ಲಿ ಬದಲಾವಣೆಯನ್ನು ಕಂಡು ಚಲನೆ ನಿಧಾನವಾಗುತ್ತದೆ.

ಇದುವರೆಗೂ ಟೈಮ್ ಟ್ರಾವೆಲ್ ಮಾಡಲು ಮನುಷ್ಯನಿಂದ ಸಾಧ್ಯವಾಗಿಲ್ಲವಾದರೂ ಭೌತಶಾಸ್ತ್ರದ ಸಿದ್ಧಾಂತಗಳ ಅಧಾರದ ಮೇಲೆ ಇದು ಸಾಧ್ಯವಿದೆಯಂತೆ. ಪುಸ್ತಕಗಳಲ್ಲಿ, ಸಿನೆಮಾಗಳಲ್ಲಿ, ಕಥೆ ಹಾಗೂ ಕಾದಂಬರಿಗಳಲ್ಲಿ ನೀವು ಇದರ ಇರುವಿಕೆಯನ್ನು ಕಾಣಬಹುದು. ಪ್ರತೀ ದಿನ ವಿಜ್ಞಾನದ ಆವಿಷ್ಕಾರಗಳು ಹೊಸ ರೂಪವನ್ನು ಪಡೆದುಕೊಳ್ಳುತ್ತಿವೆ. ಅದೇನೇ ಇರಲಿ ಟೈಮ್ ಟ್ರಾವೆಲ್ ಸಾಧ್ಯವಾಗಲು ಇನ್ನೂ ಹಲವಾರು ಶತಮಾನಗಳೇ ಆಗಬಹುದು. ಸಾಧ್ಯವಾಗದೇ ಇರಲೂ ಬಹುದು. ನಮಗೀಗ ನಮ್ಮ ಭೂತ ಹಾಗೂ ಭವಿಷ್ಯದತ್ತ ಸಾಗಲು ಸಾಧ್ಯವಿಲ್ಲದಿದ್ದರೂ ಕೋನೇ ಪಕ್ಷ ನಾವು ನಮ್ಮ ಭೂತಕಾಲದ ನೆನಪುಗಳನ್ನು ಮತ್ತೆ ನೆನಪಿಸಿಕೊಳ್ಳಬಹುದೇ ಹೊರತು ನಡೆದು ಹೋದ ಘಟನೆ ಹಾಗೂ ಗತಿಸಿದ ಕಾಲವನ್ನು ಮರು ಪಡೆಯಲು ಸಾಧ್ಯವಿಲ್ಲ. ಹಾಗಾಗಿ ವರ್ತಮಾನದಲ್ಲಿ ಬದುಕೋಣ. ಪ್ರತೀ ಕ್ಷಣವನ್ನೂ ಅನುಭವಿಸೋಣ. ಗತಿಸಿಹೋದ ಕಾಲ ಹಾಗೂ ಮುಂದೆ ಬರಲಿರುವ ಕಾಲದ ಬಗ್ಗೆ ಅತಿಯಾಗಿ ಯೋಚಿಸಿ ಏನೂ ಪ್ರಯೋಜನವಿಲ್ಲ. ಈ ಕ್ಷಣಕ್ಕೆ ಮುಖ್ಯ ಎನಿಸುವ ಅದೆಷ್ಟೋ ವಿಷಯಗಳು ಮುಂದೆ ಬರಲಿರುವ ಕ್ಷಣಕ್ಕೆ ಬದಲಾಗಿ ಹೋಗಿರುತ್ತವೆ. ಮುಂದೊಂದು ದಿನ ಟೈಮ್ ಟ್ರಾವಲ್ ಮಾಡಲು ಸಾಧ್ಯವಾದೀತು. ಆಗ ನಾವೂ ನೀವೂ ಇರುವುದಿಲ್ಲ. ಒಂದು ವೇಳೆ ಟೈಮ್ ಟ್ರಾವೆಲ್ ಸಾಧ್ಯವಾದರೆ ನಮ್ಮ ಮುಂದಿನ ತಲೆಮಾರುಗಳ ಮೂಲಕ ನಾವು ಮತ್ತೊಮ್ಮೆ ಈ ಜಗತ್ತಿಗೆ ಬಂದು ಹೋಗಲು ಸಾಧ್ಯವಾದರೂ ಆಗಬಹುದೇನೋ..!

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Madhyasta

ಹೆಸರು ಮಂಜುನಾಥ್ ಮಧ್ಯಸ್ಥ. ಓದಿದ್ದು ವಿಜ್ಞಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಬಹಳ ಆಸಕ್ತಿ. ಬರೆಯೋದು ನೆಚ್ಚಿನ ಹವ್ಯಾಸ. ಭೌತಶಾಸ್ತ್ರ ಹಾಗೂ ಖಗೋಳ ಶಾಸ್ತ್ರ ನನ್ನ ನೆಚ್ಚಿನ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!