ಅಂಕಣ

ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೧

___________________________________

ಹೊನ್ನೆಂದು ಜಗದಿ ನೀಂ ಕೈಗೆ ಕೊಂಡುದನು ವಿಧಿ –

ಮಣ್ಣಿಸುವನ್; ಅವನ ವರ ಮಣ್ಣಿಸುವೆ ನೀನು ||

ಭಿನ್ನಂಮಿಂತಿರೆ ವಸ್ತು ಮೌಲ್ಯಗಳ ಗಣನೆಯೀ |

ಪಣ್ಯಕ್ಕೆ ಗತಿಯೆಂತೊ ? – ಮಂಕುತಿಮ್ಮ ||

ಲೋಕದ ದೃಷ್ಟಿಯಲ್ಲಿ ಪ್ರತಿಯೊಂದು ವಸ್ತುವು ಅದರದರದೆ ಆದ ಮೌಲ್ಯ, ಗುಣಾತ್ಮಕತೆಯನ್ನು ಹೊಂದಿರುತ್ತದೆ – ಅವರವರು ಕಾಣುವ ಅನುಕೂಲ ಪ್ರತಿಕೂಲಗಳ ಗಣನೆಯನುಸಾರ. ಪ್ರತಿಯೊಬ್ಬರ ಅನಿಸಿಕೆಗು ಅವರವರ ಮನಸಿಗೆ ಸೂಕ್ತವಾಗಿ ಹೊಂದುವ ವಿವರಣೆ ಮಾತ್ರವೆ ಆಪ್ತವಾಗಿ, ಸಹ್ಯವಾಗುವ ಕಾರಣ ನೈಜ ಸತ್ಯ ಎಷ್ಟೊ ಬಾರಿ ಅವರ ಅರಿವಿಗೆ ಬಂದಿರುವುದಿಲ್ಲ. ಆ ಕಾರಣದಿಂದಲೆ ತಪ್ಪು ತಿಳುವಳಿಕೆಗೆ ಬಲಿಯಾಗಿ ಮೋಸ ಹೋಗುವ ಬಗೆ ಇಲ್ಲಿನ ಸಾಲುಗಳಲ್ಲಿ ಬಿಂಬಿತವಾಗಿದೆ. ಖೇದವೆಂದರೆ, ತಪ್ಪರಿವುಂಟಾಗಿದೆಯೆನ್ನುವುದು ಎಷ್ಟೊ ಬಾರಿ ಸ್ವತಃ ಆ ವ್ಯಕ್ತಿಗೆ ತಿಳಿಯದೆ ಹೋಗುವುದರಿಂದ, ನೈಜ ಮೌಲ್ಯವಿರುವ ವಸ್ತುವನ್ನೂ ಕಡೆಗಣಿಸಿ ದೂರೀಕರಿಸಿಬಿಡಬಹುದು ; ಮೌಲ್ಯವಿರದ್ದನ್ನು ಆಪ್ತವಾಗಿಸಿಕೊಂಡು ಅಪಾತ್ರ ಕಾಳಜಿಯನ್ನು ತೋರಿಬಿಡಬಹುದು. ಎರಡು ರೀತಿಯೂ ಸರಿಯಿಲ್ಲವೆನ್ನುವುದು ಗೊತ್ತಾಗದೇ ಹೋದರೆ, ಜೀವನ ವ್ಯಾಪಾರ ಸುಲಲಿತವಾಗಿ, ಸುಸೂತ್ರವಾಗಿ ನಡೆಯುವುದಾದರೂ ಹೇಗೆ ?  ಎಂಬುದು ಕವಿಯ ಪ್ರಶ್ನೆ.

ಸಾರಾಂಶದಲ್ಲಿ ಹೇಳುವುದಾದರೆ, ನಾವು ಹೊನ್ನು ಎಂದು ಬೆನ್ನತ್ತಿ ಹೊರಟಿದ್ದನ್ನು ಮಾಯಾಮೃಗವಾಗಿಸಿ ಮಣ್ಣಾಗಿಸಿಬಿಡುತ್ತದೆ ವಿಧಿ. ಬೆಲೆ ಬಾಳುವಂತಹ ವಸ್ತು ಎನ್ನುವ ಭ್ರಮೆಯಲ್ಲಿ ಕೈ ಸೇರಿದ ಆ ವಸ್ತು, ಅಂತಿಮವಾಗಿ ಮೌಲ್ಯವಿರದ ಮಣ್ಣಾಗಿ ಭ್ರಮ ನಿರಸನವಾಗಿಬಿಡುತ್ತದೆ.  ಅದು ಸಾಲದೆಂಬಂತೆ, ಆ ನಿಯಾಮಕನು ಎಷ್ಟೊ ಬಾರಿ ಕೇಳದೆಯೂ ವರ ನೀಡಿದ ಹೊತ್ತಲ್ಲಿ ಅದು ಹೊನ್ನೆಂದು ಗುರುತಿಸದೆ ಮಣ್ಣು ಎಂದು ಮೌಲ್ಯಮಾಪನ ಮಾಡಿ, ನಿರ್ಲಕ್ಷಿಸಿಬಿಡುತ್ತೇವೆ – ನಮ್ಮ ವಕ್ರ ದೃಷ್ಟಿದೋಷದ ಪರಿಣಾಮವಾಗಿ. ವ್ಯಾಪಾರವೆನ್ನುವುದು (ಪಣ್ಯ) ಕೊಡು-ಕೊಳ್ಳುವ ಪ್ರಕ್ರಿಯೆ; ಅದು ನೆಟ್ಟಗೆ ನಡೆಯಬೇಕಾದರೆ ಇರಬೇಕಾದ ಕನಿಷ್ಠ ವಾತಾವರಣವೆಂದರೆ – ಆ ವ್ಯವಹಾರಸ್ಥರಿಗಿಬ್ಬರಿಗು ತಾವು ಮಾಡುತ್ತಿರುವ ವ್ಯಾಪಾರದ ಮೌಲ್ಯ ಕುರಿತು ಸರಿಯಾಗಿ ಗೊತ್ತಿರಬೇಕು ಮತ್ತು ಸಮಾನ ತಿಳಿವು, ಜ್ಞಾನ ಇರಬೇಕು. ಆದರೆ ಈ ವಿಧಿ ಮತ್ತು ಮಾನವನ ನಡುವಿನ ವ್ಯಾಪಾರದಲ್ಲಿ ಸರಕಿನ ಮೌಲ್ಯದ ಅರಿವು ವಿರುದ್ಧಾರ್ಥವಿದ್ದಂತೆ ಕಾಣುವುದಲ್ಲ? ನಾವು ಲೌಕಿಕ ಗಣನೆಯಲ್ಲಿ ಅತಿ ಮೌಲ್ಯದ್ದೆಂದುಕೊಂಡಿದ್ದು, ವಿಧಿಯ ಪಾರಮಾರ್ಥಿಕ ಪರಿಗಣನೆಯಲ್ಲಿ ಯಕಃಶ್ಚಿತ್ ಮಾತ್ರದ ಮೌಲ್ಯದ್ದಾಗಿಬಿಡುತ್ತದೆ. ಅದೇ ರೀತಿ ವಿಧಿ ತೋರಿದ ಹಾದಿ, ಒಣ ವೇದಾಂತದ ಕೆಲಸಕ್ಕೆ ಬಾರದ ಸರಕಿನಂತೆ ಭಾಸವಾಗಿ, ಅದನ್ನು ನಿರ್ಲಕ್ಷಿಸಲು ಪ್ರೇರೇಪಿಸುತ್ತದೆ. ಹೀಗಿದ್ದರೆ ವಿಧಿ ಮತ್ತು ಮಾನವರ, ವರ್ತಕ – ಗ್ರಾಹಕರ ನಡುವಿನ ನಿಜಾಯತಿಯ ವ್ಯಾಪಾರ ನಡೆಯುವುದಾದರು ಹೇಗೆ ಸಾಧ್ಯ ? ಎಂದು ಬೇಸರಿಸುತ್ತಾನೆ ಮಂಕುತಿಮ್ಮ.

ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ ಇಲ್ಲಿನ ಪಣ್ಯದ ಸರಕು ಬರಿಯ ಹೊನ್ನು, ಮಣ್ಣಿನ ಭೌತಿಕ ವಸ್ತುಗಳು ಮಾತ್ರವಲ್ಲ; ಅಭೌತಿಕ, ಅಲೌಕಿಕ ಸ್ತರದ ಸರಕುಗಳು ಸೇರಿಕೊಳ್ಳುವುದರಿಂದ ಸಾಮಾನ್ಯ ಜನರು ಮಾತ್ರವಲ್ಲದೆ ಜ್ಞಾನಿಗಳು, ಪಂಡಿತರೂ ಸಹ ಏಮಾರಿ ಹಳ್ಳಕ್ಕೆ ಬೀಳುವುದು ಇಲ್ಲಿನ ವಿಶೇಷ. ಆ ಅರಿವಿದ್ದ ಗ್ರಾಹಕರು ನಾವಾಗಿ ಮೌಲ್ಯಮಾಪನದಲ್ಲಿ ಇರುವ ಅಂತರವನ್ನು ಗ್ರಹಿಸಿ, ನಿವಾರಿಸಿಕೊಳ್ಳಲು ಯತ್ನಿಸಿದರೆ ಅಷ್ಟಿಷ್ಟು ಸುಖ ಕಾಣಬಹುದೆಂಬುದು ಕವಿಯ ಅಂತರಾಳದ ಆಶಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!