Featured ಅಂಕಣ

ಓ ವೀರ ಪುತ್ರನೇ ಮತ್ತೊಮ್ಮೆ ಹುಟ್ಟಿ ಬರುವೆಯಾ…?

ಪ್ರೀತಿಯ ಭಗತ್ ಸಿಂಗ್, ನಾವು ಇದೀಗ ಮತ್ತೊಂದು ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಲ್ಲಿದ್ದೇವೆ. ಸತ್ಯ ಅಹಿಂಸೆಗಳ ಮೇರು ಭಾಷಣದ ಮಧ್ಯೆ ನಮ್ಮ ಸಂಭ್ರಮಾಚರಣೆ ಕಳೆದು ಹೋಗುತ್ತಿರುವಾಗ ನನಗ್ಯಾಕೋ ನಿನ್ನ ಹಾಗೂ ನಿನ್ನಂತಹ ಬಲಿದಾನಿಗಳ ನೆನಪು ಆಳವಾಗಿ ಕಾಡುತ್ತಿದೆ. ಹೌದು ನಾವು ಸದಾ ತಪ್ಪು ಮಾಡುತ್ತಿದ್ದೇವೆ. ನಿನ್ನಂತ ಕ್ರಾಂತಿಕಾರಿಗಳ ವಿಚಾರದಲ್ಲಂತೂ ದೇವರೂ ಮೆಚ್ಚದಂತಹ ತಪ್ಪುಗಳನ್ನು ಮಾಡುತ್ತಿದ್ದೇವೆ. ದೇಶಕ್ಕಾಗಿ ಸರ್ವಸ್ವವನ್ನೂ ಜೊತೆಗೆ ಪ್ರಾಣವನ್ನೂ ಅರ್ಪಿಸಿದ ನಿನ್ನಂತವರು ಇಂದು ಅದೆಲ್ಲಿದ್ದಾರೆಯೋ… ಮರು ಜನ್ಮ ಪಡೆದು ಇದೇ ನೆಲದಲ್ಲಿ ಹುಟ್ಟಿದ್ದಾರೆಯೋ ಅಥವಾ ಸ್ವರ್ಗದಲ್ಲಿದ್ದಾರೆಯೋ ಎಂಬುದನ್ನಂತೂ ನಾವ್ಯಾರೂ ಅರಿಯೆವು! ಆದರೆ ನಮ್ಮ ಇಂದಿನ ನಡೆಗಳನ್ನು ನೀನು ಗಮನಿಸುತ್ತಿರುವೆಯೆಂದಾದರೆ , ದೇಶಕ್ಕಾಗಿ ಅದೇನೂ ಮಾಡದೆ ಕೊನೆಗೆ ನಿನ್ನಂತವರ ಬಲಿದಾನವನ್ನೂ ನೆನಪಿಸಿಕೊಳ್ಳದೆ ಜೀವನ ಪಥದಲ್ಲಿ ದಾಪುಗಾಲು ಹಾಕುತ್ತಿರುವ ನಮ್ಮೀ ಜನರನ್ನು ನೋಡಿ ನೀನೇ ಎದೆಯೊಡೆದು ಕೊಂಡು ಸಾಯುತ್ತಿದ್ದೆ ಎಂಬುದಂತೂ ಸತ್ಯ!

ಹಾಗಂತ ಎಲ್ಲವೂ ನಮ್ಮ ತಪ್ಪುಗಳಲ್ಲ ಬಿಡು. ನಿನ್ನದೂ ಇದೆ ನೋಡು!

ಒಂದೇ ಮಾತಿನಲ್ಲಿ ಹೇಳುವುದಾದರೆ ನೀನ್ಯಾಕೆ ಈ ದೇಶದಲ್ಲಿ ಅಕ್ರಮಣಕಾರಿಯಾಗಿ ಹುಟ್ಟಿದೆ? ಇರಲಿ, ಹುಟ್ಟುವುದು ಅದು ನಮ್ಮ ಆಯ್ಕೆಯಲ್ಲ ಎಂಬುದೇನೋ ನಿಜ. ಆದರೆ ಜೀವನವನ್ನು ಸಾಗಿಸುವುದು ಅದು ನಮ್ಮದೇ ಆಯ್ಕೆ ತಾನೆ? ಹೇಳು, ಅದ್ಯಾಕೆ ನೀನು ಕಲ್ಲು ಮುಳ್ಳಿನ ಹಾದಿಯನ್ನೇ ದೇಶ ಸೇವೆಯ ಹೆಸರಿನಲ್ಲಿ ಆಯ್ಕೆ ಮಾಡಿಕೊಂಡೆ? ತೀವ್ರ ಗಾಮಿಯಾಗು ಎಂದು ನಿನ್ನ ತಲೆಗೆ ತುಂಬಿದವರ್ಯಾರು? ಇವುಗಳನ್ನೆಲ್ಲಾ ಬದಿಗೊತ್ತಿ ಇಂದಿನ ನಿನ್ನದೇ ವಯಸ್ಸಿನ ಯುವಕರ ತರಹ ಜೀವನವನ್ನು ಸ್ವೀಕರಿಸುತ್ತಿದ್ದರೆ ಅದೆಷ್ಟು ಆನಂದಮಯವಾಗಿರಬಹುದಿತ್ತು!? ಇದು ನಿನ್ನದೇ ತಪ್ಪು ಅಲ್ಲವೇ? ಯೌವನದ ಹೊಸ್ತಿಲಲ್ಲಿ ಬಣ್ಣಗಳ ಬದುಕಿನ ಕಣಸು ಕಾಣಬೇಕಿದ್ದ ನೀನು ವೀರ ಸನ್ಯಾಸಿಯಂತೆ ದೇಶ ಪ್ರೇಮದ ಹೆಸರಲ್ಲಿ ಮಾಡದ ತಪ್ಪಿಗೆ ಉರುಳಿಗೆ ಕೊರಳನ್ನೊಡ್ಡಿದೆಯಲ್ಲಾ… ಸಾಯುವಾಗಲಾದ್ರೂ ಈ ರೀತಿ ಬಾಳಬಾರದಾಗಿತ್ತು ಈ ನೆಲದಲ್ಲಿ ಕೇವಲ ಸತ್ಯಾಗ್ರಹ-ಅಹಿಂಸೆ ಅಂತ ಮಾತ್ರ ಹೋರಾಡಬೇಕಿತ್ತು ಎಂದು ಅನ್ನಿಸಲಿಲ್ಲವೇ!? ನಿಜ ಹೇಳು, ಕಡೇ ಪಕ್ಷ ನಿಮ್ಮಂತಹ ವೀರಕಲಿಗಳನ್ನು ಮಹಾತ್ಮ ಎಂದೇ ಕರೆಸಿಕೊಂಡಿದ್ದ ಗಾಂಧೀಜಿಯವರು ‘ದಾರಿ ತಪ್ಪಿದ ದೇಶ ಭಕ್ತರು’ ಎಂದು ಕರೆದಾಗಲಾದರೂ ಹಿಡಿದು ದಾರಿ ಬಿಟ್ಟು ಬರುವ ಯೋಚನೆ ಆಗಿಲ್ಲವಾ!?

ಇಂತ ಅಸಂಬದ್ಧ ಪ್ರಶ್ನೆಗಳನ್ನು ಯಾಕಾದ್ರೂ ಕೇಳುತ್ತಿದ್ದೇನೆ ಅಂತ ಯೋಚಿಸಬೇಡ. ನಿನ್ ಬಗ್ಗೆ ತಿಳಿದುಕೊಳ್ಳಲು ಪುಸ್ತಕ ಬಿಟ್ಟರೆ ಬೇರೇನು ನಮಗೆ ದೊರೆಯದು ನೋಡು. ಸ್ವಾತಂತ್ರ್ಯ ದಿನಾಚರಣೆಯ ದಿನವಾದ್ರೂ ನಿನ್ನ ಬಗ್ಗೆ ತಿಳಿದು ಕೊಳ್ಳಬಹುದು ಎಂದು ಧ್ವಜಸ್ತಂಭದ ಮುಂದೆ ನಿಂತರೆ ಆವತ್ತೂ ಗಾಂಧೀ ನೆಹರು ಸಾಧನೆಯ ವರ್ಣನೆಯ ಮುಂದೆ ನಿಮ್ಮನ್ನು ಹೆಸರಿಸುವವರೇ ಇಲ್ಲವಾಗಿದ್ದಾರೆ! ಅದಕ್ಕೆ ನಿನ್ನಂತವರ ಬಗ್ಗೆ ಪುಸ್ತಕಗಳನ್ನು ಹುಡುಕಿ ಓದಿದಾಗ ನಮಗೆ ಬರುವ ಯೋಚನೆ ಒಂದೇ ಅದೇನೆಂದರೆ ಖುದಿರಾಮ್ ಬೋಸ್, ರಾಜ್‍ಗುರು, ಭಗತ್ ಸಿಂಗ್, ಚಂದ್ರಶೇಖರ್, ವೀರ ಸಾವರ್ಕರ್ ಮುಂತಾದ ತೀರ್ವಗಾಮಿಗಳು ನಮ್ಮಂತಾಹ ಉಪಕಾರ ಸ್ಮರಣೆಯೇ ಇಲ್ಲದ ದೇಶದಲ್ಲಿ ಮಾಡಿದ ಹೋರಾಟ ಅದೆಷ್ಟು ಸರಿ ಎಂದು! ಅದೂ ಕೈಯಲ್ಲಿ ಭಗವದ್ಗೀತೆ ಹಿಡಿದು ಮರಣದ ಕುಣಿಕೆಗೆ ಚುಂಬಿಸಿದ ನಿನ್ನ ಎದೆಗಾರಿಕೆ ಇದೆಯಲ್ಲಾ… ಅಬ್ಬಾ ನೆನೆದರೇನೆ ಮೈ ಜುಂ ಎನ್ನುತ್ತೇ… ಆದರೂ ನಾವು ಮರೆತಿದ್ದೇವೆ ನೋಡು!

ಈ ಮೊದಲೇ ಹೇಳಿದಂತೆ ಒಂದಂತೂ ನಿಜ. ಸದ್ಯ ಭಾರತದಲ್ಲಿ ನೀನು ಇರುತ್ತಿದ್ದರೆ ಇಂದಿನ ಯುವಕರನ್ನು ನೋಡಿ ನೀನೆ ಆತ್ಮಹತ್ಯೆ ಮಾಡುತ್ತಿದ್ದೆ! ಆದರೆ ಏನು ಮಾಡೋದು. ನೀವು ಹೋದ ಮೇಲೆ ಬ್ರಿಟೀಷರೂ ಹೋದ್ರು. ಆದರೆ ಅವರ ‘ಬೆಚ್ಚನೆಯ’ ಸಂಸ್ಕøತಿಯನ್ನು ಮಾತ್ರ ನಾವು ಹಾಗೇ ಉಳಿಸಿಕೊಂಡಿದ್ದೇವೆ. ಯಾವುದರ ವಿಮೋಚನೆಗೆ ನೀನು ಹೋರಾಡಿದೆಯೋ ಅದು ಎಷ್ಟರ ಮಟ್ಟಿಗೆ ಯಶ ಕಾಣಿತ್ತು ಎಂಬುದು ನಮಗ್ಯಾರಿಗೂ ಗೊತ್ತಿಲ್ಲ. ಸ್ವಾತಂತ್ರ್ಯದ ಹೆಸರಲ್ಲಿ ನಮಗೆ ಕಾಣುವುದು ಒಂದೇ . ಅದು ಪ್ರತೀ ವರ್ಷ ಆಗಸ್ಟ್ 15ರಂದು ಹಾರಿಸುವ ನಮ್ಮದೇ ಎನ್ನುವ ತಿರಂಗ, ಆಯ್ದ ‘ಕೆಲವೇ ಮಂದಿಗೆ’ ಕೂಗುವ ಜೈ ಘೋಷ! ಇವಿಷ್ಟರಲ್ಲೇ ಭಾರತೀಯರಾದ ನಮ್ಮ ದೇಶಪ್ರೇಮ ಪ್ರದರ್ಶನವಾಗುತ್ತಿದೆ. ಕ್ಷಮಿಸು ಹೀಗೆ ಹೇಳುತ್ತಿದ್ದೇನೆ ಎಂದು ಬೇಸರಿಸಬೇಡ. ಸತ್ಯ ಎಷ್ಟಾದರೂ ಕಹಿಯೇ ಅಲ್ಲವೇ. ನೀನು ಮಾಡಿರುವುದು ಎಲ್ಲವೂ ದೇಶಕ್ಕಾಗಿ ಎಂಬುದು ನಿನ್ನ ಇತಿಹಾಸವನ್ನು ಪರಿಶ್ರಮ ಪಟ್ಟು ಹುಡುಕಿ ಕೆದಕಿದಾಗ ತಿಳಿಯಿತು. ಆದರೇನು ಮಾಡುವುದು ಇವನ್ನೆಲ್ಲಾ ಭಾರತೀಯ ಮಕ್ಕಳಿಗೆ ತಿಳಿಸಿಕೊಡುವಷ್ಟು ಪುರಸೊತ್ತು ಸದ್ಯ ಇಲ್ಲಿ ಯಾರಿಗೂ ಇಲ್ಲ! ಅಟ್‍ಲೀಸ್ಟ್ ನಿನ್ನ ಬಗ್ಗೆ ಒಂದು ಪಠ್ಯ ವಿಷಯವನ್ನಾಗಿಸೋಣ ಎಂದರೂ ಇಂದಿನ ಶೈಕ್ಷಣಿಕ ಸಾಧನೆ (!?)ಯ ಮುಂದೆ ಇದನ್ನು ಒಪ್ಪಿಕೊಳ್ಳಲಾಗುತ್ತಿಲ್ಲ. ಯಾಕೆಂದರೆ ಇಂದಿನ ನಮ್ಮೀ ಜಾತ್ಯಾತೀತ(!?) ವ್ಯವಸ್ಥೆಯ ದೇಶದಲ್ಲಿ ಒಂಚೂರು ಪಕ್ಕ ಬದಲಾಯಿಸಿದರೂ ‘ಕೇಸರೀಕರಣದ’ ಭಯವಿದೆ. ಅದಕ್ಕಿಂತಲೂ ಮಿಗಿಲಾಗಿ ನೀನು ಬದುಕಿದ್ದು ಕೆಲವೇ ವರುಷಗಳು. ನಿನಗಿಂತ ದೀರ್ಘವಾಗಿ ದೇಶದ ಹೆಸರಲ್ಲಿ ಬದುಕಿದವರ ಜೀವನ ಚರಿತ್ರೆ ವಿಶಾಲವಾಗಿದೆ ಮತ್ತು ನಾವು ಕೂಡ ಒಂದಲ್ಲ ಒಂದು ಕಾರಣಕ್ಕೆ ಕೆಲವು ಸಲ ಕಾರಣವಿಲ್ಲದೆ ವಿಶಾಲವಾಗಿಸುತ್ತಲೇ ಇದ್ದೇವೆ! ಸೋ ದಯವಿಟ್ಟು ಕ್ಷಮಿಸು!

ಓ ಭಗತ್‍ಸಿಂಗ್, ನಿನ್ನ ಹೆಸರಿಡಿದು ಕೂಗುವ ಯೋಗ್ಯತೆ ಕೂಡ ಸದ್ಯದ ಭಾರತೀಯರಿಗಿಲ್ಲ ಅನ್ನಿಸುತ್ತೆ. ಆದರೂ ನಮ್ಮವನೇ ನೀನು ಎಂಬ ಅಭಿಮಾನದಿಂದ ಕರೆಯುತ್ತಿದ್ದೇನೆ. ನಿನ್ನ ನೆನಪಾದಾಗಲೆಲ್ಲಾ ಪದೇ ಪದೆ ಸುಳಿಯುವ ಇಂತಾಹ ಹಲವಾರು ಪ್ರಶ್ನೆಗಳಿವೆ. ಉತ್ತರಿಸದಿದ್ದರೂ ಪರವಾಗಿಲ್ಲ ಅಟ್‍ಲೀಸ್ಟ್ ಯೋಚಿಸಿ ನೋಡು! ನೀನ್ಯಾಕೆ ಅಂದು ಪಾರ್ಲಿಮೆಂಟಿನೊಳಗಡೆ ಬಾಂಬ್ ಉಡಾಯಿಸಿ ತಪ್ಪಿಸಿಕೊಳ್ಳುವ ಅವಕಾಶವಿದ್ದರೂ ತಪ್ಪಿಸಿಕೊಳ್ಳದೇ ಹೋದೆ? ಯಾರ ಪ್ರಾಣಕ್ಕೂ ಕುತ್ತು ತಾರದ ಹಾಗೆ ನಿನ್ನ ಕೈಯಿಂದ ಸಿಡಿದ ಆ ಬಾಂಬ್ ನಿನಗೆ ನೀಡಿದ ಪ್ರತಿಫಲವೇನು? ಸಾವಲ್ಲವೇ? ಅದೇ ನಿನ್ನ ಕೊನೆಯ ಹೋರಾಟವನ್ನಾಗಿಸಿತ್ತಲ್ಲಾ!? ಒಂದು ವೇಳೆ ಅಂದು ನೀನು ತಪ್ಪಿಸಿಕೊಳ್ಳುತ್ತಿದ್ದರೆ ಕ್ರಾಂತಿಯ ಕಿಚ್ಚು ಇನ್ನೂ ಹೆಚ್ಚು ಉರಿಸಬಹುದಿತ್ತು! ನಿನ್ನಂತಹ ವೀರ ಕುವರರು ಇನ್ನಷ್ಟು ಮಂದಿ ಈ ನೆಲದಲ್ಲಿ ಬ್ರಿಟೀಷರ ವಿರುದ್ಧ ಹುಟ್ಟುತ್ತಾರೆ ಎಂದು ನಂಬಿದೆಯಲ್ಲಾ ಅದು ಎಲ್ಲಿ ನಿಜವಾಯಿತು? ಅದಿರಲಿ ನೀನ್ಯಾಕೆ ಗಾಂಧೀಜಿ ಹಾಕಿ ಕೊಟ್ಟ ಅಹಿಂಸಾ ಪಥದಲ್ಲಿ ನಡೆಯಲಿಲ್ಲಾ? ಒಂದು ವೇಳೇ ಗಾಂಧೀ ತೋರಿದ ಸತ್ಯ-ಅಹಿಂಸೆ-ಅಸಹಕಾರ ದಾರಿಯಲ್ಲಿ ನಡೆದಿರುತ್ತಿದ್ದರೆ ಸ್ವಾತಂತ್ರ್ಯ ಸಿಗುವುದು ತೀರಾ ಲೇಟಾಗಿ ಹೋದ್ರು ಕೂಡ ನೀನು ಸಹ ಯಾವುದಾದರೂ ವೈಟ್ ಕಾಲರ್ ಹುದ್ದೆಯನ್ನು ಅಲಂಕರಿಸಬಹುದಿತ್ತು! ಇರುವ ಒಂದು ಸುಮಧುರ ಜೀವನವನ್ನು ಅದೂ ಮೊಗ್ಗರಳಿ ಹೂವಾಗುವ ಸಂದರ್ಭದಲ್ಲೇ ನಮ್ಮಂತಾಹ ಉಪಕಾರ ಸ್ಮರಣೆಯಿಲ್ಲದ ಭಾರತೀಯರಿಗಾಗಿ ಕಳೆದುಕೊಂಡು ಬಿಟ್ಟೆಯಲ್ಲಾ!? ಇಲ್ಲಿ ಮೂರ್ಖನಾದುದ್ದು ಯಾರು ? ನೀನು ತಾನೆ!? ನಿನಗೇನು ಗೊತ್ತು… ನಿನ್ನ ಅಗಲಿಕೆಯ ಬಳಿಕ ಈ ನಮ್ಮ ನೆಲದಲ್ಲಿ ಏನೆಲ್ಲಾ ನಡೆದಿದೆ ಏನೆಲ್ಲಾ ನಡೆದಿಲ್ಲಾ ಎಂದು!? ಸ್ವಾತಂತ್ರ್ಯ ಸಿಗುವವರೆಗೂ ನಮ್ಮೊಳಗೆ ಧರ್ಮಕ್ಕಾಗಿ ಅಷ್ಟೊಂದು ಕಚ್ಚಾಟಗಳಿರಲಿಲ್ಲ, ದ್ವೇಷ ಭಾವನೆ ನಮ್ಮೊಳಗೆ ಹರಿದಾಡಿರಲಿಲ್ಲ. ಚೂರು ಪಾರು ಇದ್ದರೂ ಬ್ರಿಟೀಷರ ದೌರ್ಜನ್ಯದ ಎದುರು ಅವೆಲ್ಲವನ್ನೂ ಮರೆತು ನಾವೆಲ್ಲಾ ಭಾರತೀಯರಾಗಿರುತ್ತಿದ್ದೇವು. ಆದರೆ 40ರ ದಶಕದಲ್ಲಿ ಆದ ಬದಲಾವಣೆಗಳೀದ್ದಾವಲ್ಲ… ನೀನು ಒಂದು ವೇಳೆ ಇರುತ್ತಿದ್ದರೆ, ‘ಮರುಜನ್ಮವೊಂದಿದ್ದರೆ ಮತ್ತೆ ಮತ್ತೆ ಈ ನೆಲದಲ್ಲಿ ಹುಟ್ಟಿ ಬರುವೆ’ ಎಂಬ ನಿನ್ನದೇ ಮಾತುಗಳನ್ನು ವಾಪಾಸ್ ತೆಗೆದುಕೊಳ್ಳುತ್ತಿದ್ದೆ! ನೋಡು ನೀವು ಹೋರಾಡಿ ಗೆದ್ದ ನಮ್ಮ ಅಖಂಡ ಭಾರತವನ್ನು ನಮ್ಮ ನಾಯಕರುಗಳು ಉಳಿಸಲಾರದೇ ಹೋದರು. ಯಾರದೋ ಮರ್ಜಿಗೆ ಕುಣಿದು ಎರಡಾಗಿ ತುಂಡರಿಸಿಯೂ ಬಿಟ್ಟರು! ಜಿನ್ನಾ-ನೆಹರು ಅಧಿಕಾರ ಹಂಚಿಕೆಯಲ್ಲಿ ನಮ್ಮ ಮಾನದ ಜೊತೆಗೆ 55 ಕೋಟಿ ರೂಪಾಯಿಗಳೂ ಹೊರಟು ಹೋದವು! ಅಂದಿನ ಘಟನೆಗೆ ಸಾಮಾನ್ಯ ಭಾರತೀಯರು ಮೂಕ ಪ್ರೇಕ್ಷಕರಾದರು ಅಷ್ಟೇ! ಹೌದು, ನಿನ್ನಂತ ವೀರ ಕುವರನೋರ್ವನಿರುತ್ತಿದ್ದರೆ ಈ ದುಸ್ಥಿತಿಯನ್ನು ತಪ್ಪಿಸುತ್ತಿದ್ದೀಯೋ ಏನೋ! ಬಹುತೇಕ ಭಾರತೀಯರು ಕೂಡ ನಿನ್ನ ನಾಯಕತ್ವವನ್ನೇ ಬಯಸಿದ್ದರು ಕೂಡ. ಆದರೇನು ಮಾಡುವುದು. ನಿನ್ನ ದುರಾದೃಷ್ಟವೋ ಅಥವಾ ಈ ದೇಶದ ದುರಾದೃಷ್ಟವೋ… ಒಟ್ಟಿನಲ್ಲಿ ಅಂದು ಮಹಾತ್ಮ ಗಾಂಧೀಜಿಯವರು ನಿನ್ನನ್ನು ಮರಣದ ಕುಣಿಕೆಯಿಂದ ರಕ್ಷಿಸಲು ಬ್ರಿಟೀಷರ ಮೇಲೆ ಒತ್ತಡ ಹೇರುತ್ತಾರೆ ಎಂದು ಕೊಂಡಿದ್ದರೆ ಅತ್ತ ಮಹಾತ್ಮ ಗಾಂಧೀಜಿಯವರು ಈ ವಿಷಯವನ್ನು ಬ್ರಿಟೀಷರಲ್ಲಿ ಎತ್ತದೆ ವಾಪಾಸ್ ಬಂದರು! ಏನು ಮಾಡೋದು. ದೇಶದ ಇನ್ನಿತರ ಸಮಸ್ಯೆಗಳ ಮುಂದೆ ನಿನ್ನ ‘ಸಣ್ಣ ಸಮಸ್ಯೆಯು’ ಗಾಂಧೀಜಿಯವರಿಗೆ ಹೊಳೆದಿರಲಿಕ್ಕ. ಅದಕ್ಕಾಗಿ ಅವರನ್ನೂ ಜೊತೆಗೆ ನಮ್ಮನ್ನೂ ಕ್ಷಮಿಸು!

ಓ ವೀರ ಕುವರನೇ, ಇವತ್ತು ನಿನ್ನಂತಹ ಎದೆಗಾರಿಕೆಯ ಧೀರ ನಮ್ಮಲ್ಲಿಲ್ಲ. ಇಂದೇನಿದ್ದರೂ ಸಮಸ್ಯೆಗಳ ಜೊತೆ, ಅನ್ಯಾಯದ ಜೊತೆ ರಾಜಿ ಮಾಡಿಕೊಂಡು ಬದುಕುವ ಕಲೆಯಷ್ಟೇ! ತ್ಯಾಗ ಬಲಿದಾನಗಳ ಮಾತು ಒತ್ತಟ್ಟಿಗಿರಲಿ ಬದಲಾಗಿ ದೇಶ ಸೇವೆಯ ಮನಸ್ಸೇ ಇಂದು ಕ್ಷೀಣಿಸಿ ಬಿಟ್ಟಿದೆ! ಅಂದಿನ ನಿನ್ನ ಭಾರತದ ಕಲ್ಪನೆ ಅದೇಗಿತ್ತೋ ನಾವರಿಯೆವು. ಆದರೆ ಅದರ ಸಾಕ್ಷಾತ್ಕಾರವಂತೂ ನಮ್ಮ ಕೈಯಿಂದಾಗದ ಮಾತು! ಆದ್ದರಿಂದ ಅದಕ್ಕಾಗಿಯಾದರೂ ನೀನು ನಿನ್ನ ಅಂದಿನ ಸಂಗಡಿಗರೊಡಗೂಡಿ ಮತ್ತೊಮ್ಮೆ ಈ ನೆಲದಲ್ಲಿ ಹುಟ್ಟಿ ಬಾ. ಓ ಭಾರತಾಂಬೆಯ ವೀರ ಪುತ್ರನೇ ನಮ್ಮೀ ಕರೆಗೆ ಊಹುಂ ಅನ್ನಲಾರೆ ಎಂಬ ವಿಶ್ವಾಸ ನಮ್ಮದು. ಆ ನಿರೀಕ್ಷೆಯೊಳಗೇ ಈ ಪತ್ರವ ಮುಗಿಸುತ್ತಿದ್ದೇನೆ!
ಜೈ ಹಿಂದ್.

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!