ಅದು ಲಂಡನ್ನಿನ ಭಾರತ ಭವನ ಹಾಸ್ಟೆಲ್. ಅಲ್ಲಿದ್ದ ವಿದ್ಯಾರ್ಥಿಗಳೆಲ್ಲಾ ಭಾರತೀಯರು. ಅವರಲ್ಲೊಬ್ಬ ತನ್ನ ಕೈಯ್ಯನ್ನು ಮೇಜಿನ ಮೇಲೆ ಊರಿದ್ದ. ಇನ್ನೊಬ್ಬ ಗೆಳೆಯ ಅದರ ಮೇಲೆ ಗುಂಡು ಸೂಜಿಯಿಂದ ಬಲವಾಗಿ ಚುಚ್ಚುತ್ತಿದ್ದ. ಆದರೆ ಯುವಕನ ಮುಖದಲ್ಲಿ ನೋವಿನ ಗೆರೆ ಎಳ್ಳಷ್ಟು ಮೂಡಲಿಲ್ಲ. ನೋಡು ನೋಡುತ್ತಿದ್ದಂತೆ ರಕ್ತ ಚಿಲ್ಲನೆ ಹಾರುತ್ತಾ ಸೂಜಿ ಒಳಗಿಳಿಯಿತ್ತು! ಸುತ್ತ ನೆರೆದಿದ್ದ ಡಜನ್’ಗಟ್ಟಲೆ ಗೆಳೆಯರು ಹೌಹಾರಿದರು. ಆದರೆ ಯುವಕನ ಕಣ್ಣಲ್ಲಿ ಅದೇ ಗಟ್ಟಿತನ. ನೋವು ಬಿಡಿ ತುಟಿಗಳಲ್ಲಿದ್ದ ಮಂದಸ್ಮಿತ ಕೂಡ ಅಲುಗಾಡಲಿಲ್ಲ!
ಇಂತಹುದೊಂದು ಸಾಹಸ ಮಾಡಿದ್ದ ಯುವಕ ಬೇರಾರೂ ಅಲ್ಲ. ಭಾರತದ ಸ್ವಾತಂತ್ರ್ಯದ ಹೋರಾಟದ ಕ್ರಾಂತಿಯ ಕಿಡಿ ಮದನ್’ಲಾಲ್ ದಿಂಗ್ರಾ! ಅಷ್ಟಕ್ಕೂ ಆತ ಮಾಡಿದ್ದು ತನ್ನ ವೈಯಕ್ತಿಕ ತಾಕತ್ತನ್ನು ಪ್ರದರ್ಶಿಸಲು ಅಲ್ಲ. ಜಪಾನಿಯರಷ್ಟು ಸಾಹಸಿಗಳು ಯಾರೂ ಇಲ್ಲ ಎಂದು ಗೆಳೆಯನೊಬ್ಬ ಕಿಚಾಯಿಸಿದ್ದಕ್ಕೆ ‘ಹಿಂದೂಸ್ಥಾನದವರೇನೂ ಕಡಿಮೆ ಇಲ್ಲ’ ಎಂಬುದನ್ನು ತೋರಿಸಲು ಈ ಸಾಹಸ ಮೆರೆದಿದ್ದು!!
ಮದನ್’ಲಾಲ್ ದಿಂಗ್ರ. ಇದು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪುಟಗಳಲ್ಲಿ ಅಚ್ಚೊತ್ತಲ್ಪಟ್ಟಿರುವ ಹೆಸರು. ಈತ ಹುಟ್ಟಿದ್ದು ಅಮೃತಸರದ ಆಗರ್ಭ ಶ್ರೀಮಂತ ಕುಲದಲ್ಲಿ (1883). ತಂದೆ ಸಾಹಿಬ್ ದಿತ್ತಾ. ಈತ ಅದೆಷ್ಟು ಶ್ರೀಮಂತನೆಂದರೆ ಆ ಕಾಲಕ್ಕೇ ಈತ ೨೩ ಮನೆ, ೬ ಬಂಗ್ಲೆಗಳ ಒಡೆಯ! ಇಡೀ ಅಮೃತಸರದಲ್ಲೇ ಕಾರನ್ನು ಹೊಂದಿದ್ದ ಮೊದಲ ಭಾರತೀಯ ನಾಗರೀಕನೂ ಹೌದು! ವೃತ್ತಿಯಲ್ಲಿ ವೈದ್ಯನಾಗಿದ್ದ ಈತ ಸಹಜವಾಗೇ ಬ್ರಿಟೀಷರ ಆಪ್ತನೂ ಆಗಿದ್ದ. ಆದರೆ, ಈ ರೀತಿಯ ಶ್ರೀಮಂತಿಕೆಯ ಕುಲದಲ್ಲಿ ಹುಟ್ಟಿದ್ದರೂ ದಿಂಗ್ರಾ ಮಾತ್ರ ಅಪ್ಪನ ಆಶಯಕ್ಕೆ ವಿರುದ್ಧವಾಗೇ ಬೆಳೆದದ್ದು ಅದು ಭಾರತಾಂಬೆಯ ಪುಣ್ಯವೆನ್ನಬೇಕಷ್ಟೇ.
ಹಾಗೆ ನೋಡಿದರೆ ಬಾಲ್ಯದಲ್ಲಿ ದಿಂಗ್ರನಿಗೂ ಆಸೆಗಳಿದ್ದವು. ಮೋಜು ಮಸ್ತಿ ಎಂದರೆ ಸಖತ್ ಖುಷಿಪಡುತ್ತಿದ್ದ ಈತ. ತಾನೂ ಕೂಡ ಇಂಗ್ಲೆಂಡ್’ಗೆ ತೆರಳಬೇಕು, ವಿದ್ಯಾಭ್ಯಾಸ ಪಡೆಯಬೇಕೆಂಬ ಕನಸು ಈತನದ್ದಾಗಿತ್ತು. ವಿದ್ಯಾಭ್ಯಾಸದಲ್ಲೂ ಚುರುಕಿದ್ದ ಈತ ಮೆಟ್ರಿಕ್ಯುಲೇಶನ್ ಬಳಿಕ ಕಾಲೇಜು ವಿದ್ಯಾಭ್ಯಾಸಕ್ಕೆಂದು ಸೇರಿದ್ದು ಲಾಹೋರಿನ ಕಾಲೇಜಿಗೆ. ಆದರೆ ಈತನ ಚಟುವಟಿಕೆಗಳು ಕಾಲೇಜಿಗೆ ಸಹ್ಯವಾಗದೇ ಹೋದುದರಿಂದ ಕೆಲವೇ ದಿನಗಳಲ್ಲಿ ಕಾಲೇಜಿನಿಂದ ಹೊರದಬ್ಬಲ್ಪಟ್ಟ! ಇತ್ತ ಈತನ ತಂದೆ ಕೂಡ ಮಗನ ದುರ್ವರ್ತನೆಗೆ ಕಿಡಿ ಕಾರಿ ಮನೆಯಿಂದಲೇ ಅಟ್ಟಿಸಿ ಬಿಟ್ಟರು. ದಿಂಗ್ರ ಅಕ್ಷರಶಃ ಏಕಾಂಗಿಯಾಗಿದ್ದ. ಅಲ್ಲಿ ಇಲ್ಲಿ ಕೆಲಸ ಮಾಡುತ್ತಾ ಹೇಗೋ ದಿನ ತಳ್ಳಬೇಕಾಯಿತು. ಆದರೆ ತನ್ನ ಉನ್ನತ ವಿದ್ಯಾಭ್ಯಾಸದ ಕನಸು ಹಾಗೆಯೇ ಉಳಿದಿತ್ತಾದ್ದರಿಂದ ಮುಂದೆ ಅದೇಗೋ ಮನೆ ಸೇರಿ 1906ರಲ್ಲಿ ಇಂಗ್ಲೆಂಡ್’ಗೆ ಪ್ರಯಾಣ ಬೆಳೆಸಿದ. ಸೇರಿದ್ದು ಇಂಜಿನಿಯರ್ ಪದವಿಗಾಗಿ.
ಸ್ವದೇಶ, ಸ್ವಾತಂತ್ರ್ಯ, ಹೋರಾಟ ಎಂಬ ಪದಗಳ ಅರ್ಥವೇ ಗೊತ್ತಿಲ್ಲದ ಅಂದಿನ ಮದನ್’ಲಾಲ್ ದಿಂಗ್ರಾಗೆ ಅಂದು ಅಭಿರುಚಿ ಇದ್ದದು ತನ್ನ ಸೌಂದರ್ಯ ಇಮ್ಮಡಿಗೊಳಿಸುವುದರಲ್ಲಿ! ಗಮನವಿದ್ದುದ್ದು ತನ್ನ ಉಡುಗೆ ತೊಡುಗೆಗಳ ಮೇಲೆ! ಆದರೆ ಈ ರೀತಿಯಾಗಿ ಬೆಳೆಯುತ್ತಿದ್ದ ದಿಂಗ್ರಾ ಮುಂದೆ ಕೆಲವೇ ದಿನಗಳಲ್ಲಿ ಬದಲಾಗಿ ಬಿಟ್ಟ. ಇದಕ್ಕೆ ಕಾರಣ ಅಂದು ಕಾನೂನು ಪದವಿಗೆ ಎಂದು ಇಂಗ್ಲೆಂಡ್ ಸೇರಿದ್ದ ಸಾವರ್ಕರ್! ಅವರು ನಿಜವಾಗಿಯೂ ಅಲ್ಲಿ ಮಾಡುತ್ತಿದ್ದದು ಅಲ್ಲಿನ ಭಾರತೀಯ ಯುವಕರನ್ನು ಬ್ರಿಟೀಷರ ವಿರುದ್ಧ ಹೋರಾಡುವ ಅಸ್ತ್ರವನ್ನಾಗಿಸುವ ಪ್ರಯತ್ನವನ್ನ. ಇದು ದಿಂಗ್ರನ ಜೀವನದಲ್ಲೂ ಪರಿವರ್ತನೆ ತರಿಸಿತ್ತು. ಇವರ ಭಾಷಣದ ತೀಕ್ಷಣತೆಗೆ ಆಕರ್ಷಿತನಾದ ದಿಂಗ್ರ ಮುಂದೆ ಕೆಲವೇ ದಿನಗಳಲ್ಲಿ ಬ್ರಿಟೀಷರ ವಿರುದ್ಧ ಹೋರಾಡುವ ಪ್ರಬಲ ಅಸ್ತ್ರವಾಗಿ ಬದಲಾಗಿ ಬಿಟ್ಟ.
ಹೀಗೆ ಒಂದೆಡೆಯಿಂದ ಭಾರತೀಯ ಯುವಕರು ಬ್ರಿಟೀಷರ ವಿರುದ್ಧ ತೊಡೆ ತಟ್ಟುತ್ತಿದ್ದರೆ ಅತ್ತ ಕಡೆಯಿಂದ ಬ್ರಿಟೀಷರು ‘ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್’ ಎಂಬ ಸಂಸ್ಥೆ ಕಟ್ಟಿಕೊಂಡು ಭಾರತೀಯ ಯುವಕರ ಮನ ಗೆಲ್ಲುವ ಪ್ರಯತ್ನ ಮಾಡುತ್ತಿದ್ದರು! ಇದರಲ್ಲಿ ನಿಸ್ಸೀಮನಾಗಿದ್ದವರು ಸರ್.ವಿಲಿಯಂ ಕರ್ಜನ್ ವೈಲಿ ಎಂಬಾತ. ಸಾವರ್ಕರ್ ಪ್ರಯತ್ನಕ್ಕೆ ಒಂದು ರೀತಿಯ ಅಡ್ಡಗಾಲು ಎಂಬಂತ್ತಿತ್ತು ಈತನ ಪ್ರತೀ ಹೆಜ್ಜೆಗಳು. ‘ಭಾರತದ ದಾಸ್ಯದ ವಿರುದ್ಧದ ಹೋರಾಟಕ್ಕೆ ಪ್ರತೀಯೋರ್ವರು ಕೈಜೋಡಿಸಬೇಕು, ಬ್ರಿಟೀಷರ ದಬ್ಬಾಳಿಕೆಯನ್ನು ಕೊನೆಗಾಣಿಸಬೇಕು’ ಎಂಬ ಸಾವರ್ಕರ್’ರವರ ಕಿಡಿ ಮಾತುಗಳು ದಿಂಗ್ರನ ಕಿವಿಯಲ್ಲಿ ಅದಾಗಲೇ ಗುಂಯಿಗುಡಲು ಪ್ರಾರಂಭಿಸಿತ್ತು. ಗಾಯದ ಮೇಲೆ ಬರೆ ಎಳೆದಂತೆ ಅದೇ ಸಮಯಕ್ಕೆ ಭಾರತದಲ್ಲಿ ಖುದಿರಾಮ್ ಬೋಸ್, ಕನಯ್ಯ ಲಾಲ್ ದತ್ತಾ, ಸತ್ಯೇಂದ್ರ ಬೋಸ್ ಗಲ್ಲಿಗೇರಿಸಲ್ಪಟ್ಟರು! ವೀರ ಸಾವರ್ಕರ್ ಸಹೋದರ ಗಣೇಶ್ ದಾಮೋದರ್ ಸಾವರ್ಕರ್’ನ್ನು ದೂರದ ಅಂಡಮಾನಿನ ನರಕ ಸದೃಶ ಜೈಲಿಗೆ ಅಟ್ಟಲಾಯಿತು! ಇದು ದಿಂಗ್ರ ಸಹಿತ ಇಂಗ್ಲೆಂಡ್’ನಲ್ಲಿದ್ದ ಭಾರತೀಯರ ಕ್ರೋಧವನ್ನು ಇಮ್ಮಡಿಗೊಳಿಸಿತು. ನಾನೇನಾದರು ಮಾಡಲೇ ಬೇಕು ಎಂಬ ದೃಡ ನಿರ್ಧಾರಕ್ಕೆ ಬಂದ ದಿಂಗ್ರ. ಈ ನಿಟ್ಟಿನಲ್ಲಿ ನಾನು ನೀಡಬಹುದಾದ ಕೊಡುಗೆ ಹಾಗೂ ಪ್ರತಿಕಾರವೆಂದರೆ ಅದು ಈ ಕರ್ಜನ್’ವೈಲಿಯ ಪ್ರಾಣ ಎಂಬುದನ್ನೂ ಅರಿತುಕೊಂಡ!
ಅದು 1909 ರ ಜುಲೈ 1. ಇಂಗ್ಲೇಂಡಿನಲ್ಲಿ ‘ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್’ನ ವಾರ್ಷಿಕ ದಿನಾಚರಣೆಗೆ ವೇದಿಕೆ ಸಿದ್ಧವಾಗಿತ್ತು. ಅಂದಿನ ಪ್ರಧಾನ ಭಾಷಣಕಾರ ವೈಲಿ ಎಂದೂ ನಿಗದಿಯಾಗಿತ್ತು. ಬೇಟೆಗೆ ಕಾಯುವ ಹುಲಿಯಂತಿದ್ದ ದಿಂಗ್ರಾ ಕೂಡ ಸಭೆಗೆ ಹಾಜರಾಗಿದ್ದ! ರಾತ್ರಿ ಸುಮಾರು ಹತ್ತು ಗಂಟೆಯ ಸಮಯವಿರಬಹುದು. ಕರತಾಡನದ ಭಾಷಣ ಮುಗಿಸಿ ವೈಲಿ ಇನ್ನೇನು ವೇದಿಕೆಯಿಂದ ಕೆಳಗಿಳಿಯಬೇಕು ಅನ್ನುವಷ್ಟರಲ್ಲಿ ಪಂಜಾಬಿ ದಿರಿಸಿನಲ್ಲಿದ್ದ ದಿಂಗ್ರ ಅನುಮಾನವೇ ಬಾರದ ರೀತಿಯಲ್ಲಿ ವೈಲಿ ಸನಿಹ ತಲುಪಿದ. ಏನು ಏಕೆ ಎಂದು ಅರಿವಾಗುವ ಮೊದಲೇ ದಿಂಗ್ರಾನ ಕೈಲಿದ್ದ ಪಿಸ್ತೂಲ್ ಎರಡು ಬಾರಿ ಹೊಗೆಯುಗುಳಿತು! ವೈಲಿ ನೆಲಕ್ಕುರುಳಿದ. ವೈಲಿಯ ರಕ್ಷಣೆಗೆ ದೌಡಾಯಿಸಿದ ಓರ್ವ ಪಾಸರ್ ಕೂಡ ಇಲ್ಲಿ ಬಲಿಯಾಗಬೇಕಾಯಿತು. ಕೊಲೆಗಾರ ಕೊಲೆಗಾರ ಎಂದು ಸಭೆಯೆಲ್ಲಾ ಕಿರುಚುತ್ತಿದ್ದರೆ, ಎದೆಯೇರಿಸಿಯೇ ನಿಂತಿದ್ದ ದಿಂಗ್ರಾ “ನಾನು ಕೊಲೆಗಾರನಲ್ಲ, ನನ್ನ ಕರ್ತವ್ಯ ಸರಿಯಾಗಿಯೇ ಇದೆ. ನಿಮ್ಮ ಇಂಗ್ಲೇಂಡ್’ನ ವಶಪಡಿಸಲು ಜರ್ಮನಿ ಮುಂದಾದಾಗ ನೀವೂ ಕೂಡ ಮಾಡಿದ್ದು ಇದನ್ನೇ ತಾನೆ?” ಎಂದು ತನ್ನ ಕಾರ್ಯವನ್ನು ಸಮರ್ಥಿಕೊಂಡಿದ್ದ! ಮನಸ್ಸು ಮಾಡಿದ್ದರೆ ಸುಲಭವಾಗೆ ಅಲ್ಲಿಂದ ತಪ್ಪಿಸಬಹುದಾಗಿತ್ತು.
ಬಳಿಕ ಯಾರಿಗೂ ಹೆದರದೆ ಸ್ವತಃ ಬಂಧನಕ್ಕೊಳಗಾದ ಈತ 10 ದಿನಗಳವರೆಗೆ ಜೈಲಿನೊಳಗೆ ಕಳೆಯುಂತಾಯಿತು. ಅಂದು ಭಾರತೀಯ ಕ್ರಾಂತಿಕಾರಿಗಳು ಸಿಕ್ಕಿ ಬಿದ್ದಾಗಲೆಲ್ಲಾ ಬ್ರಿಟೀಷರು ಮಾಡುತ್ತಿದ್ದುದು ಬರೀ ನಾಮಕಾವಸ್ಥೆಯ ವಿಚಾರಣೆಯನ್ನಷ್ಟೇ. ಶಿಕ್ಷೆ ಮೊದಲೇ ತೀರ್ಮಾನಿಸಲ್ಪಡುತ್ತಿತ್ತು! ಇಲ್ಲೂ ಅದೇ ಆಯಿತು. ದಿಂಗ್ರನ ವಿಚಾರಣೆ ಕೇವಲ ಒಂದೇ ದಿನಕ್ಕೆ ಮುಗಿಸಲಾಯಿತು. ಆಗಸ್ಟ್ 17ಕ್ಕೆ (1909) ಗಲ್ಲಿಗೇರಿಸುವುದೆಂದು ತೀರ್ಪು ನೀಡಲಾಯಿತು! ಈ ಸಂದರ್ಭದಲ್ಲಿ ಜೈಲಿಗೆ ಭೇಟಿಯಾದ ಸಾವರ್ಕರ್’ಗೆ ದಿಂಗ್ರ ಹೇಳಿದ ಮಾತುಗಳೇನು ಗೊತ್ತೆ? “ನನ್ನ ಸಾವು ಬ್ರಟೀಷರಿಗೆ ಎಚ್ಚರಿಕೆಯಾಗಬೇಕು. ನನ್ನ ಅಂತಿಮ ಸಂಸ್ಕಾರವನ್ನು ಹಿಂದೂಸ್ಥಾನದ ರೀತಿ ರಿವಾಜುವಿಗನುಗುಣವಾಗೇ ನಡೆಸಬೇಕು. ಬ್ರಿಟೀಷರಿಗೆ ನನ್ನ ಹೆಣವನ್ನು ಮುಟ್ಟುವ ಅಧಿಕಾರ ಕೂಡ ಇಲ್ಲ. ನನ್ನ ವಸ್ತುಗಳನ್ನೆಲ್ಲಾ ಹರಾಜುಗೊಳಿಸಿ ಬರುವ ಹಣವನ್ನು ನ್ಯಾಷನಲ್ ಫಂಡ್’ಗೆ ಸೇರಿಸಿ…” ಸಾವಿನ ಬಾಯಲ್ಲಿ ನಿಂತಿದ್ದರೂ ಈ 24ರ ಹರೆಯದ ಯುವಕನ ಯೋಚನೆ ಮಾತ್ರ ಭವಿಷ್ಯದ ಭಾರತದ್ದಾಗಿತ್ತು. ಕಿಂಚಿತ್ತೂ ಅಲುಗಾಡದ ಇಂತಹ ಗಟ್ಟಿ ಹೃದಯ ಕ್ರಾಂತಿಕಾರಿಗಳಿಗಲ್ಲದೆ ಇನ್ಯಾರಿಗಿರಲು ಸಾಧ್ಯ?
ದಿಂಗ್ರನಿಗೆ ತನ್ನ ಸಾವಿನ ಬಗ್ಗೆ ಎಳ್ಳಷ್ಟೂ ವ್ಯಥೆ ಇರಲಿಲ್ಲ. ‘ಅಸಹಾಯಕನಾದ ನನ್ನಂತವರಿಗೆ ನನ್ನ ತಾಯಿ ಭಾರತಾಂಬೆಯ ರಕ್ಷಣೆಗೆ ರಕ್ತವನ್ನಲ್ಲದೆ ಬೇರೇನನ್ನು ನೀಡಲು ಸಾಧ್ಯವಿಲ್ಲ. ಓ ದೇವರೇ ಇವಳ ರಕ್ಷಣೆಗಾಗಿ ನನಗೆ ಈ ನೆಲದಲ್ಲಿ ಮತ್ತೆ ಮತ್ತೆ ಜನ್ಮ ಕೊಡು ಮತ್ತು ಆಕೆಗಾಗಿ ಮತ್ತೆ ಮತ್ತೆ ಸಾವನ್ನು ಕೊಡು’ ಎಂಬುದು ಇವನ ಮನದಾಳದ ಪ್ರಾರ್ಥನೆಯಾಗಿತ್ತು!
ದಿಂಗ್ರಾನ ನಡೆ ಮತ್ತದಕ್ಕೆ ದೊರಕಿದ ಸಾವು ಭಾರತದಾದ್ಯಂತ ಸುದ್ದಿಯಾಯಿತು. ಇದು ಇಲ್ಲಿನ ಕ್ರಾಂತಿಕಾರಿಗಳನ್ನು ಮತ್ತಷ್ಟು ಚುರುಕಾಗುವಂತೆ ಮಾಡಿತು. ದಿಂಗ್ರ ಬಯಸಿದಂತೆ ಆತನ ಸಾವು ಬ್ರಿಟೀಷರಿಗೆ ಎಚ್ಚರಿಕೆಯಾಗಿ ಮಾರ್ಪಟ್ಟಿತ್ತು. ಆದರೆ ಬ್ರಿಟೀಷರ ನೆರಳಲ್ಲಿದ್ದ ಈತನ ತಂದೆ ಮಾತ್ರ ಮಗನ ಕಾರ್ಯವನ್ನು ಮೆಚ್ಚದೆ ಈತ ತನ್ನ ಮಗನೇ ಅಲ್ಲ ಎಂದು ತಿರಸ್ಕರಿಸಿಬಿಟ್ಟ! ಆದರೇನಂತೆ ಅಷ್ಟೊತ್ತಿಗಾಗಲೇ ಸಾವಿರಾರು ಭಾರತೀಯ ಪೋಷಕರು ದಿಂಗ್ರನನ್ನು ತನ್ನ ಸ್ವಂತ ಮಗನೆಂದು ಆರಾಧಿಸಲು ಪ್ರಾರಂಭಿಸಿದ್ದರು! ಪ್ರತೀಯೋರ್ವರು ದಿಂಗ್ರನಿಗಾಗಿ ಕಣ್ಣೀರಿಟ್ಟರು. ಈತ ಸ್ವಾತಂತ್ರ್ಯ ಹೋರಾಟದಲ್ಲಿ ಸವೆಸಿದ ಹೆಜ್ಜೆಗಳು ಅಲ್ಪವಾದರು ಅವುಗಳೆಲ್ಲಾ ಸ್ವಾರ್ಥರಹಿತ ಹೆಜ್ಜೆಗಳೆಂಬುದನ್ನು ನಾವೆಂದೂ ಮರೆಯಬಾರದು.
ಹೀಗೆ 1906ರಲ್ಲಿ ಇಂಗ್ಲೆಂಡ್’ಗೆ ತೆರಳಿದ್ದ ದಿಂಗ್ರ ಮುಂದಿನ ಮೂರೇ ವರ್ಷಗಳಲ್ಲಿ ತನ್ನೆಲ್ಲಾ ಕನಸುಗಳನ್ನು ಮೂಟೆ ಕಟ್ಟಿ ಭಾರತಕ್ಕಾಗಿ ಪ್ರಾಣವನ್ನೇ ನೀಡಿದ್ದು ಇಂದು ಇತಿಹಾಸ. ಭಾರತದ ಸ್ವಾತಂತ್ರ್ಯದ ಪಟಗಳನ್ನು ಕೆದಕಿದಾಗ ನಮ್ಮ ಕಣ್ಣಂಚಿನಲ್ಲಿ ನೀರಿಳಿಸುವುದು, ಮೈನವಿರೇಳಿಸುವುದು ಈ ಕ್ರಾಂತಿಕಾರಿಗಳೇ. ಬ್ರಿಟೀಷ್ ದಾಸ್ಯದ ವಿರುದ್ಧ ಹೋರಾಡಿ ಭಾರತೀಯರ ಭವಿಷ್ಯದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತೆತ್ತವರು ಇವರುಗಳು. ಮಹಾತ್ಮಗಾಂಧಿ ನೇತ್ರತ್ವದ ಅಹಿಂಸಾ ಚಳುವಳಿಯೊಂದೇ ಭಾರತದ ಸ್ವಾತಂತ್ರ್ಯದಲ್ಲಿ ಮಹತ್ತರ ಪಾತ್ರ ವಹಿಸಿದ್ದು ಎಂದುಕೊಂಡರೆ ಅದು ನಾವು ಈ ಕ್ರಾಂತಿಕಾರಿಗಳಿಗೆ ಮಾಡುವ ಅಪಮಾನವಾಗಬಹುದೇನೋ! ಕೊನೆ ಪಕ್ಷ ಸ್ವಾತಂತ್ರ್ಯದ ದಿನವಾದರೂ ಒಂದರೆಕ್ಷಣ ಇವರುಗಳನ್ನು ನೆನಪಿಸೋಣ, ಘೋಷಣೆ, ಭಾಷಣಗಳ ಮಧ್ಯೆಯಾದರೂ ಸೇರಿಸಿ ಗೌರವಿಸೋಣ. ಅಷ್ಟಕ್ಕೂ ಅಂದು ಅವರು ಪ್ರಾಣವರ್ಪಿಸಿದ್ದು ನಮ್ಮ ಸುಸ್ಥಿತಿಗಾಗಿ ತಾನೇ? ಅಮರವಾಗಿಸೋಣ ಇವರ ನೆನಪುಗಳನ್ನು.