Featured ಅಂಕಣ

ಆಕೆಯ ನೃತ್ಯ ಕ್ಯಾನ್ಸರ್’ನ್ನೂ ಮೀರಿಸಿತ್ತು…

             “ಕಲೆಯ ಬಗೆಗಿರುವ ಪ್ರೀತಿ ಮತ್ತು ಅನುರಾಗ ಬದುಕುವ ಭರವಸೆಯನ್ನು ನೀಡುತ್ತದೆ. ಪ್ರತಿಯೊಬ್ಬರಲ್ಲೂ ತಮ್ಮ ಕನಸಿನ ಬಗ್ಗೆ ತುಡಿತವಿರಬೇಕು, ಅದೇ ಭರವಸೆಯನ್ನ ನೀಡುತ್ತದೆ, ಅದೇ ಬದುಕಿಗಾಗಿ ಹೋರಾಡಲು ಸ್ಪೂರ್ತಿ ನೀಡುತ್ತದೆ” ಖ್ಯಾತ ಒಡಿಸ್ಸಿ ನೃತ್ಯಗಾರ್ತಿ ಹಾಗೂ ಕ್ಯಾನ್ಸರ್ ಸರ್ವವೈರ್ ಆಗಿರುವ ಶುಭಾ ವರದ್ಕರ್ ಹೇಳಿರುವ ಮಾತುಗಳಿವು. ಅವರು ಕ್ಯಾನ್ಸರ್’ನ್ನು ಗೆದ್ದಿದ್ದೇ ನೃತ್ಯದಿಂದ. ಯಾಕೆಂದರೆ ಅವರ ತುಡಿತವೇ ಅಂಥದ್ದಾಗಿತ್ತು.

       ೨೦೦೬ರ ನವೆಂಬರಿನಲ್ಲಿ ಲಂಡನ್ನಿನಲ್ಲಿ ಶುಭದಾ ಕಾರ್ಯಕ್ರಮ ನೀಡುತ್ತಿದ್ದರು. ನೃತ್ಯ ಮಾಡುತ್ತಿರುವಾಗಲೇ ಏನೋ ಒಂದು ರೀತಿಯ ಇರುಸು ಮುರುಸು ಆಗತೊಡಗಿತ್ತು. ನಂತರ ತಮಗೆ ರಕ್ತಸ್ರಾವವಾಗುತ್ತಿದೆ ಎಂದು ತಿಳಿಯಿತು. ತಮ್ಮ ನೃತ್ಯ ಮುಗಿದ ನಂತರ ತಕ್ಷಣವೇ ಮುಂಬೈಗೆ ಹೊರಟು ಬಂದು ಡಾಕ್ಟರನ್ನು ಭೇಟಿ ಮಾಡಿದರು. ಸೋನೋಗ್ರಫಿ ಮಾಡಿಸಿದಾಗ ೧೦ ಇಂಚು ಉದ್ದದ ಟ್ಯೂಮರ್ ಅಂಡಾಶಯದಲ್ಲಿ ಕಂಡು ಬಂದಿತ್ತು. ಅಷ್ಟು ದೊಡ್ಡ ಟ್ಯೂಮರ್ ಇದ್ದರೂ ಶುಭದಾ ಅವರು ನೃತ್ಯ ಮಾಡುತ್ತಿದ್ದುದು, ಅದೂ ಕೂಡ ಯಾವುದೇ ನೋವು ಕಂಡು ಬರದಿದ್ದನ್ನು ನೋಡಿ ಡಾಕ್ಟರ್’ಗಳೇ ಆಶ್ಚರ್ಯ ಪಟ್ಟಿದ್ದರು. ಶುಭದಾ ಅವರು ಕೆಲವೇ ದಿನಗಳಲ್ಲಿ ಇನ್ನೊಂದೆಡೆ ಕಾರ್ಯಕ್ರಮ ಕೊಡುವವರಿದ್ದರು, ಅದಕ್ಕೆ ಅಡ್ಡಿಯಾಗದಿರಲಿ ಎಂದು ಭಾವಿಸಿ, ಡಾಕ್ಟರ್ ಬಳಿ ತಮಗೆ ಕಾರ್ಯಕ್ರಮಕ್ಕೂ ಮೊದಲೇ ಮುಗಿಸಿ ಬಿಡಿ ಎಂದು ಕೇಳಿಕೊಂಡಿದ್ದರು.

      ಆಪರೇಷನ್ ನಂತರ ಆಕೆ ಮೊದಲ ಒಪ್ಪಿಕೊಂಡಿದ್ದ ರೀತಿಯಲ್ಲಿ ಕಾರ್ಯಕ್ರಮಕ್ಕೆ ಹೋಗುವವರಿದ್ದರು, ಇದಕ್ಕೆ ಅವರ ಗುರು ಹಾಗೂ ಡಾಕ್ಟರ್’ಗಳು ಒಪ್ಪಿದ್ದರೂ ಕೂಡ, ಪ್ರಾಕ್ಟೀಸ್ ಮಾಡಲೇಬಾರದು, ಕಾರ್ಯಕ್ರಮದವರೆಗೂ ಸಂಪೂರ್ಣ ವಿಶ್ರಾಂತಿ ಪಡೆಯಬೇಕು ಎಂದು ತಾಕೀತು ಮಾಡಿದ್ದರು ಡಾಕ್ಟರ್’ಗಳು. ಶುಭದಾ ಅವರು ಹಾಸಿಗೆಯ ಮೇಲೆ ಮಲಗಿದ್ದುಕೊಂಡೇ ಪ್ರತಿಯೊಂದು ಹೆಜ್ಜೆ, ಹಾವ-ಭಾವವನ್ನು ತಮ್ಮ ಮನದಲ್ಲಿ ದೃಶ್ಶೀಕರಿಸಿಕೊಳ್ಳುತ್ತಿದ್ದರು. ಅದೇ ಅವರ ಪ್ರಾಕ್ಟೀಸ್ ಆಗಿತ್ತು. ಕಾರ್ಯಕ್ರಮದ ದಿನ ಸುಲಭವಾದ ಕೆಲ ಅಭಿನಯ ತೋರಿಸಬೇಕೆಂದುಕೊಂಡಿದ್ದ ಶುಭದಾ ಸಂಪೂರ್ಣ ನೃತ್ಯವನ್ನು (ತಾವು ಮೊದಲ ಅಂದುಕೊಂಡ ರೀತಿಯಲ್ಲೇ) ಮಾಡಿ ಮುಗಿಸಿದ್ದರು. “ರಂಗಸ್ಥಳ ಅದೇನೋ ಒಂದು ರೀತಿಯ ಶಕ್ತಿಯನ್ನು ನೀಡುತ್ತದೆ” ಎನ್ನುತ್ತಾರೆ ಶುಭದಾ. ಅಥವಾ ನೃತ್ಯದ ಬಗೆಗಿರುವ ಅವರ ತುಡಿತವೇ ಅಂಥದ್ದು  ಅನ್ನಬಹುದು..!!!

   ಇದೆಲ್ಲಾ ಮುಗಿಯುವಷ್ಟರಲ್ಲಿ ಅವರ ಬಯಾಪ್ಸಿ ರಿಪೋರ್ಟ್ ಬಂದಿತ್ತು. ಅವರ ಅಂಡಾಶಯ ಹಾಗೂ ಗರ್ಭಕೋಶಗಳಲ್ಲಿ ಕ್ಯಾನ್ಸರ್ ಆಗಿತ್ತು. ಜನವರಿ ೨೦೦೭ರಿಂದ ಅವರಿಗೆ ಕೀಮೋಥೆರಪಿ ಆರಂಭಿಸಲಾಯಿತು. ಆದರೆ ಅವರು ಆಗಲೂ ನೃತ್ಯವನ್ನು ಬಿಡಲಿಲ್ಲ. ಕೀಮೋ ನಂತರದ ೩ನೇ ವಾರದ ದಿಗಳಲ್ಲಿ ತಮ್ಮ ಕಾರ್ಯಕ್ರಮಕ್ಕೆ ತಾರೀಖು ನಿಗದಿಪಡಿಸುತ್ತಿದ್ದರು. ಯಾಕೆಂದರೆ ಆ ಸಮಯದಲ್ಲಿ ಸ್ವಲ್ಪ ಬ್ಲಡ್ ಕೌಂಟ್ ಸ್ವಲ್ಪ ಮಟ್ಟಿಗೆ ಸುಸ್ಥಿಯಲ್ಲಿರುತ್ತಿತ್ತು…!

     ಶುಭದಾ ಅವರು ತಮ್ಮ ಕ್ಯಾನ್ಸರ್ ವಿಷಯವನ್ನು ಗುಟ್ಟಾಗಿಯೇ ಇಟ್ಟಿದ್ದರು. ವಿಷಯ ಹೊರ ಜಗತ್ತಿಗೆ ತಿಳಿದರೆ ಕಾರ್ಯಕ್ರಮಗಳು ಕಡಿಮೆಯಾಗಬಹುದು ಎನ್ನುವ ಕಾರಣಕ್ಕೆ. ಶುಭದಾ ಅವರು ಯಾವ ರೀತಿಯಲ್ಲೂ ತಮ್ಮ ನೃತ್ಯದಿಂದ ದೂರವಾಗಲು ಬಯಸಲಿಲ್ಲ. ಕ್ಯಾನ್ಸರ್ ತಮ್ಮನ್ನ ತಮ್ಮ ನೃತ್ಯದಿಂದ ಬೇರೆ ಮಾಡಬಾರದೆಂದು ಮಾತ್ರ ಬಯಸಿದ್ದರು. ಅವರಿಗೆ ನೃತ್ಯದ ಮೇಲಿನ ಪ್ರೀತಿ ಎಲ್ಲದಕ್ಕಿಂತ ಅದಮ್ಯವಾಗಿತ್ತು.

      ಅವರು ತುಂಬಾ ಚಿಕ್ಕವರಿದ್ದಾಗ ತಮ್ಮ ಪಕ್ಕದ ಮನೆಯವರೊಬ್ಬರು ಭರತನಾಟ್ಯ ಪ್ರಾಕ್ಟೀಸ್ ಮಾಡುವುದನ್ನ ಗಮನಿಸುತ್ತಿದ್ದರು. ಅಲ್ಲಿಂದಲೇ ಅವರಿಗೆ ಶಾಸ್ತ್ರೀಯ ನೃತ್ಯಗಳ ಮೇಲಿನ ಸೆಳೆತ ಆರಂಭವಾಗಿದ್ದು.  ಮೊದಲು ಕೆಲ ವರ್ಷಗಳ ಕಾಲ ಭರತನಾಟ್ಯವನ್ನು ಅಭ್ಯಸಿಸಿದ ನಂತರ ಒಡಿಸ್ಸಿ ನೃತ್ಯವನ್ನು ಕಲಿಯಲಾರಂಭಿಸಿದರು. ನಂತರ ಒಡಿಸ್ಸಿ ನೃತ್ಯ ಪ್ರಾಕಾರದಲ್ಲೇ ಮುಂದುವರೆದರು. ಶಾಸ್ತ್ರೀಯ ನೃತ್ಯ ಎನ್ನುವುದು ಅವರ ಪಾಲಿಗೆ ಕೇವಲ ಮನೋರಂಜನೆಯಲ್ಲ, ಜನರನ್ನ ಸಂತಸಗೊಳಿಸುವ, ಅವರ ಮುಖದಲ್ಲಿ ಮಂದಹಾಸ ತರಿಸುವ ಪರಿ. ಒಟ್ಟಾರೆ ಹೇಳುವುದಾದರೆ ಶುಭದಾ ಮಟ್ಟಿಗೆ ಅವರ ನೃತ್ಯ ಅವರ ಜೀವಾಳವೇ ಆಗಿತ್ತು.

        ಕೀಮೋಥೆರಪಿ ಆರಂಭವಾದ ಮೇಲೆ ಯಾವುದೇ ರೀತಿಯ ಇನ್’ಫೆಕ್ಷನ್ ಬಹಳ ಗಂಭೀರ ಸಮಸ್ಯೆಯನ್ನ ಉಂಟು ಮಾಡುವ ಸಾಧ್ಯತೆಗಳಿರುತ್ತದೆ. ಆದರೆ ಶುಭದಾ ಅವರು ಯಾವುದೇ ಕಾರಣಕ್ಕೂ ಕಾರ್ಯಕ್ರಮಗಳನ್ನು ಬಿಡಲು ತಯಾರಿರಲಿಲ್ಲ. ಇವರಿಗೆ ಯಾವುದೇ ರೀತಿಯ ಇನ್’ಫೆಕ್ಷನ್ ಆಗದ ರೀತಿಯಲ್ಲಿ ನೋಡಿಕೊಳ್ಳುವುದು ಅವರ ಕುಟುಂಬದ ಕೆಲಸವಾಗಿತ್ತು. ಶುಭದಾ ಅವರು ತಮ್ಮ ನೃತ್ಯದ ಬಗ್ಗೆ ಮಾತ್ರ ಯೋಚಿಸುತ್ತಿದ್ದರು. ಒಬ್ಬ ನೃತ್ಯಗಾರ್ತಿಯಾಗಿ ತಮ್ಮ ದೇಹವನ್ನು ಫಿಟ್ ಆಗಿಟ್ಟುಕೊಳ್ಳುವುದು ಕೂಡ ಅನಿವಾರ್ಯವಾಗಿತ್ತು. ಹಾಗಾಗಿ ಡಾಕ್ಟರ್ ಹೇಳಿದ ರೀತಿಯ ಆಹಾರ ಹಾಗೂ ಔಷಧಿಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಅವರ ಮನಸ್ಸು ಮತ್ತು ಆತ್ಮ ಎರಡೂ ಯಾವಾಗಲೂ ನೃತ್ಯದ ಮೇಲೆಯೇ ಇರುತ್ತಿತ್ತು. “ನೃತ್ಯ ಎನ್ನುವುದು ನನ್ನ ಕರ್ಮ. ಎಂತಹ ಪರಿಸ್ಥಿತಿಯಲ್ಲೂ ನಾನದನ್ನ ಮಾಡಿಯೇ ಮಾಡುತ್ತೇನೆ” ಎನ್ನುವರು ಶುಭದಾ.

       ಕೀಮೋಥೆರಪಿಯಿಂದಾಗಿ ಕೂದಲು ಉದುರಿಹೋಗಿತ್ತು, ಹುಬ್ಬು ಕೂಡ. ಆದರೆ ಕಾರ್ಯಕ್ರಮದಲ್ಲಿ ವಿಗ್ ಹಾಗೂ ಮೇಕ್’ಅಪ್ ಅದನ್ನೆಲ್ಲಾ ಮರೆಮಾಚುತ್ತಿತ್ತು. ‘ನಾವು ಯಾವುದರಿಂದ ಬಳಲುತ್ತಿದ್ದೇವೆ ಎನ್ನುವುದು ಪ್ರೇಕ್ಷಕರಿಗೆ ತಿಳಿಯುವ ಅವಶ್ಯಕತೆ ಇಲ್ಲ, ಅದು ಅವರಿಗೆ ಸಂಬಂಧ ಪಟ್ಟಿದ್ದೂ ಅಲ್ಲ.’ ಎನ್ನುತ್ತಾರೆ ಶುಭದಾ. ಯಾಕೆಂದರೆ ಅವರು ಮೊದಲೇ ಹೇಳಿದ್ದರಲ್ಲ, ನೃತ್ಯ ಎನ್ನುವುದು ಅವರ ಪಾಲಿಗೆ ಜನರ ಮುಖದಲ್ಲಿ ಮಂದಹಾಸ ತರುವ ಒಂದು ಪರಿ ಎಂದು.

          ಕ್ಯಾನ್ಸರ್ ಚಿಕಿತ್ಸೆ ಎನ್ನುವುದು ಕೇವಲ ಉತ್ತಮ ಔಷಧಗಳಿಗಷ್ಟೇ ಸಂಬಂಧ ಪಟ್ಟಿದ್ದಲ್ಲ. ನಮ್ಮ ದೇಹ ಎಷ್ಟರ ಮಟ್ಟಿಗೆ ಧನಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ ಎನ್ನುವುದು ಕೂಡ ಮುಖ್ಯ. ಜೊತೆಗೆ ನಮ್ಮ ಮನಸ್ಥಿತಿ ಕೂಡ ಗುಣಮುಖರಾಗುವಲ್ಲಿ ಒಂದು ದೊಡ್ಡ ಪಾತ್ರ ವಹಿಸುತ್ತದೆ. ಶುಭದಾ ಅವರ ಮನದಲ್ಲಿ ವಿರಾಜಮಾನವಾಗಿದ್ದು ಅವರ ನೃತ್ಯ, ಅಲ್ಲಿ ಕ್ಯಾನ್ಸರ್’ಗೆ ಜಾಗವೇ ಇರಲಿಲ್ಲ. ಹಾಗಾಗಿ ಅದು ಹೋಗಲೇಬೇಕಾಗಿತ್ತು.

  ಶುಭದಾ ಅವರಿಗೆ ಈಗ ೫೩ ವರ್ಷ, ಆರೋಗ್ಯವಾಗಿದ್ದಾರೆ ಹಾಗೂ ತಮ್ಮನ್ನ ತಾವು ಹೆಮ್ಮೆಯಿಂದ ಕ್ಯಾನ್ಸರ್ ಸರ್ವೈವರ್ ಎಂದು ಕರೆದುಕೊಳ್ಳುತ್ತಾರೆ. ಶುಭದಾ ಅವರು ಕ್ಯಾನ್ಸರ್ ಕುರಿತಾಗಿರುವ ತಮ್ಮ ಅನುಭವವನ್ನ ‘ಮಯೂರ್’ಪಂಖ್’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಮುಂಬೈನಲ್ಲಿರುವ ತಮ್ಮ ‘ಸಂಸ್ಕೃತ ಫೌಂಡೇಶನ್’ನಲ್ಲಿ ಬಡ ಮಕ್ಕಳಿಗೆ ನೃತ್ಯವನ್ನು ಹೇಳಿ ಕೊಡುತ್ತಿದ್ದಾರೆ ಹಾಗೂ ಟಾಟಾ ಮೆಮೊರಿಯಲ್ ಸೆಂಟರ್’ನ ಕ್ಯಾನ್ಸರ್ ಪೇಷಂಟ್’ಗಳಿಗೆ ಹಣ ಸಂಗ್ರಹಿಸಿ ನೀಡುತ್ತಾರೆ. ಶುಭದಾ ಅವರು ಇಂದು ಸಾಕಷ್ಟು ಜನರಿಗೆ ಸ್ಪೂರ್ತಿಯಾಗಿದ್ದಾರೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!