Featured ಅಂಕಣ

ಅಪ್ಪನ ಪ್ರೀತಿಯ ಆಳ ಅನಾವರಣಗೊಳ್ಳುವುದು ಅಂತಹ ಸಂದರ್ಭಗಳಲ್ಲಿ ಮಾತ್ರ

ಅರುವತ್ತು ಮೀರಿದ ಆ ತಂದೆಗೆ ಮರೆವಿನ ಆಲ್ಜೈಮರ್ ಖಾಯಿಲೆಯಿರುತ್ತದೆ. ತಾಯಿ ಅದಾಗಲೇ ಶಿವನ ಪಾದ ಸೇರಿದ್ದಾಳೆ. ಮತ್ತಿರುವುದೊಬ್ಬನೇ ಮಗ. ಆತ ತನ್ನ ಕೆಲಸ, ಪ್ರಾಜೆಕ್ಟು, ಪ್ರಮೋಶನ್’ಗಳಲ್ಲಿ ಬ್ಯುಸಿ. ಜೀವನವೆಂದರೆ ಹಣ ಮಾಡುವುದಷ್ಟೇ ಎಂದು ತಿಳಿದಿದ್ದ ಆತ ತಂದೆಯನ್ನು ಎನ್.ಜಿ.ಒ ಒಂದರಲ್ಲಿ ಸೇರಿಸಿ ಹೋಗಿರುತ್ತಾನೆ. ತಂದೆಯ ಪ್ರೀತಿ, ಅವರಿಗಿರುವ ಖಾಯಿಲೆ, ಅದರ ಚಿಕಿತ್ಸೆ ಮುಂತಾದವೆಲ್ಲವನ್ನು ಹಣದ ಮೂಲಕವೇ ಅಳೆಯುತ್ತಾನೆ. ಈ ಮಧ್ಯೆ ಎಂದೋ ಅಪರೂಪಕ್ಕೊಮ್ಮೆ ಶಾಪಿಂಗ್ ಮುಗಿಸಿ ಬರುವಾಗ ತಂದೆ ಕಾಣೆಯಾಗುತ್ತಾನೆ. ತನ್ನ ಜೊತೆಗಿರುವಾಗಲೇ ತಂದೆಯನ್ನು ಕಾಣೆಯಾಗಿದ್ದಾದರೂ ನೋಡಿಕೊಳ್ಳುವುದಕ್ಕೆ ಎನ್.ಜಿ.ಓದವರಿಗೆ ಹಣ ಕೊಟ್ಟಿದ್ದೆ ಎನ್ನುವ ಕಾರಣಕ್ಕಾಗಿ ಅವರ ಮೇಲೆಯೇ ರೇಗಾಡುತ್ತಾನೆ. ಅಪ್ಪನನ್ನು ಹುಡುಕಲು ಆತ ನಡೆಸದ ಪ್ರಯತ್ನಗಳಿಲ್ಲ,  ಹುಡುಕದ ಜಾಗವಿಲ್ಲ. ಆವತ್ತು ಈ ಮಗ ಮಹಾಶಯನಿಗೆ ಏನನ್ನೋ ಕಳೆದುಕೊಂಡ ಭಾವ. ಆದರೂ ತಂದೆಯೆನ್ನುವ ಎರಡಕ್ಷರದ ಪೂರ್ಣ ಮಹತ್ವ ಆತನಿಗರಿವಾಗುವುದಿಲ್ಲ, ದೈಹಿಕವಾಗಿ ಆತ ಸಿಗಬೇಕೆಂಬುದಷ್ಟೇ ಮಗನ ಶುರು ಶುರುವಿನ ಅಗತ್ಯತೆಯಾಗಿತ್ತು. ಎಷ್ಟು ಹುಡುಕಿದರೂ ಸಿಗದಿದ್ದಾಗ ಆತನಿಗೆ ತಂದೆಯ ಮಹತ್ವ ಏನೆಂಬುದು ಅರ್ಥವಾಗುತ್ತದೆ. ಕಡೆಗೆ ತಂದೆ ಸಿಕ್ಕಾಗ ಆತ  ‘ಶಿವ… ಶಿವ…’ ಎಂದು ಮಗನ ಹೆಸರನ್ನೇ ಕನವರಿಸುವುದು ನೋಡಿ ಮಗನಿಗೆ  ತಂದೆಯ  ನೈಜ ಪ್ರೀತಿಯ ಅನಾವರಣಗೊಳ್ಳುತ್ತದೆ. ತಂದೆ ಎನ್ನುವುದು ಹಣ ಕೊಟ್ಟು ಕೊಳ್ಳುವ ಅಥವಾ ಹಣಕ್ಕಾಗಿ ಮಾರುವ ಸಾಮಾನಲ್ಲ ಎಂಬುದವನರಿವಿಗೆ ಬರುತ್ತದೆ.

ಇದು ಇತ್ತೀಚೆಗೆ ಭಾರೀ ಸದ್ದು ಮಾಡಿದ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಕಥಾಹಂದರ.  ನಿಜ ಹೇಳಬೇಕೆಂದರೆ ಈ ಕಥೆಯು ತೀರಾ ಸಾಧಾರಣ, ತೀರಾ ಸಾಮಾನ್ಯ. ಆದರೆ ಯಾಕೆ ಅದು ಜನರ ಮನ ಗೆದ್ದಿತೆಂದರೆ ಅದು ನಮ್ಮೆಲ್ಲರ ಜೀವನ ಕಥೆಯೇ ಆಗಿತ್ತು. ತಂದೆ ಮಗನ ಸಬಂಧವನ್ನು ಭಾವನಾತ್ಮಕವಾಗಿ ತೋರಿಸಿದ್ದರಿಂದ ಎರಡೂವರೆ ಗಂಟೆಗಳ ಚಿತ್ರ ಮುಗಿಯುವಷ್ಟರಲ್ಲಿ ಹಲವರು ಕಣ್ಣೀರಾಗಿದ್ದರು. ಹಲವರಿಗಿದು “ಹೌದಲ್ವ ಇದು ಸೇಮ್ ನನ್ನ ಮತ್ತು ಅಪ್ಪನ ಕತೆಯಂತೇ ಇದೆ” ಅಂತನಿಸಿದ್ದರಿಂದಲೇ ಚಿತ್ರ ಆ ಪರಿ ಸ್ಪಂದನೆಯನ್ನು ಪಡೆಯಿತು.

ಎಲ್ಲರಲ್ಲೂ ಹೀಗೆ ಅಂತಲ್ಲ, ಆದರೆ ಬಹುತೇಕರ ಕಥೆಯೂ ಹೀಗೆಯೇ. ನಮಗೆಲ್ಲರಿಗೂ ಅಪ್ಪ ಅಂದರೆ ಜೋರು, ಅಪ್ಪ ಅಂದರೆ ಅದೇನೋ ಹೆದರಿಕೆ,. ಅಮ್ಮನ ಸೆರಗಲ್ಲಿ ಸಿಗುವ ಆತ್ಮೀಯತೆ ಅಪ್ಪನ ಅಪ್ಪುಗೆಯಲ್ಲಿ ನಮಗೆ ಸಿಗುವುದಿಲ್ಲ, ಸಿಗುವುದಿಲ್ಲ ಅಂದರೆ ಅಲ್ಲಿ ಆತ್ಮೀಯತೆ ಇಲ್ಲವೇ ಇಲ್ಲವೆಂದಲ್ಲ, ನಮಗದರ ಫೀಲ್ ಅರಿವಿಗೆ ಬರುವುದಿಲ್ಲ ಅಷ್ಟೇ. ‘ನನ್ನಪ್ಪ ಪಾಪ, ನಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ,  ನಮ್ಮ ಜೊತೆ ತುಂಬಾ ಕೂಲ್ ಆಗಿ ಟೈಮ್ ಸ್ಪೆಂಡ್ ಮಾಡುತ್ತಾರೆ” ಎಂದು ನೇರವಾಗಿ ಹೇಳುವ ಮಕ್ಕಳು, ಹಾಗೆ ಹೇಳಿಸಿಕೊಳ್ಳುವ ತಂದೆಯಂದಿರು, ಜೋರು ಎಂದು ಹೇಳಿಸಿಕೊಳ್ಳುವ ತಂದೆಯಂದಿರಿಗೆ ಹೋಲಿಸಿದರೆ ಬಹಳಾನೇ ಕಮ್ಮಿ.

ಅದು ಯಾಕೆ ಹೀಗೆಂದರೆ ಹುಟ್ಟಿದಾಗಿನಿಂದಲೇ ನಮಗೂ ಈ ಮಹಾಶಯನಿಗೂ ಹುಟ್ಟುವ ಅಂತರ ಮುಂದೆ  ನಾವು ಬೆಳೆದಂತೆಲ್ಲ ಜಾಸ್ತಿಯಾಗುತ್ತದೆ. ಆತ ದಿನವಿಡೀ ದುಡಿದು ಬರುವಾಗ ಸುಸ್ತಾಗಿರುತ್ತದೆ. ಈ ಟ್ರಾಫಿಕ್ಕಿನ ಕಿರಿಕಿರಿ, ಕಛೇರಿಯಲ್ಲಿ ಒತ್ತಡ, ತೋಟದ ಕೆಲಸದವರನ್ನು ಮ್ಯಾನೇಜ್ ಮಾಡಿ ಮನೆಗೆ ಬರುವಷ್ಟರಲ್ಲಿ ಒಮ್ಮೆ ಹಾಸಿಗೆ ಸಿಕ್ಕರೆ ಸಾಕು ಎನ್ನುವಂತಾಗಿರುತ್ತಾನೆ. ಜೊತೆಗೆ ಸಂಸಾರದ ತಾಪತ್ರಯಗಳು, ಚಿಂತೆ.  ಮತ್ತೆ ಹೆಂಡತಿ ಮಕ್ಕಳನ್ನು ವಿಚಾರಿಸಿಕೊಳ್ಳುವುದೆಲ್ಲಿಂದ ಬಂತು? ನಾವು ಬೆಳಗ್ಗೇಳುವಾಗಲೇ ಆತ ಕೆಲಸಕ್ಕೆ ಹೋಗಿರುತ್ತಾನೆ ಅಥವಾ ಹೊರಡುವ ಗಡಿಬಿಡಿಯಲ್ಲಿರುತ್ತಾನೆ. ರಾತ್ರಿ ಬರುವಾಗ ಒಂದೋ ನಾವು ಮಲಗಿರುತ್ತೇವೆ ಇಲ್ಲಾ ಆತ ಸುಸ್ತಾಗಿರುತ್ತಾನೆ. ಈ ಮಧ್ಯೆ ಅತಿಯಾಗಿ ತುಂಟತನ ಮಾಡಿದರೆ ಅಮ್ಮನೂ ಸಹ “ನಿಲ್ಲು ಅಪ್ಪ ಬರಲಿ, ಅವರ ಬಳಿ ಹೇಳುತ್ತೇನೆ, ಆವಾಗ ನಿನಗೆ ಬುದ್ಧಿ ಬರುತ್ತದೆ” ಎಂದು ಹೇಳುತ್ತಾ ಅಪ್ಪನೆಂದರೆ ಒಂದು ಗುಮ್ಮ ಎನ್ನುವ ಫೀಲನ್ನು ಎಳವೆಯಲ್ಲಿಯೇ ಬೆಳೆಸುತ್ತಾಳೆ. ಇನ್ನು ಅಮ್ಮನ ಚಾಡಿ ಮಾತಿಗೋ, ಇಲ್ಲಾ ನಮ್ಮ ಉಪದ್ರವಗಳಿಂದ ಬೇಸತ್ತೋ, ಇಲ್ಲಾ ಇನ್ನ್ಯಾವುದೋ ಒತ್ತಡದಲ್ಲಿ ನಮಗೆರಡೇಟು ಕೊಟ್ಟನೆಂದರೆ ಅಷ್ಟೇ, ಮತ್ತೆ ಅಪ್ಪನೆನ್ನುವ ಎರಡಕ್ಷರದ ಮೇಲೆ ದ್ವೇಷವೇ ಬೆಳೆದು ಬಿಡುತ್ತದೆ.

ಆದರೆ ನಿಜವಾಗಿಯೂ ಅಪ್ಪನೆಂದರೆ ಅಷ್ಟೇನಾ? ಅಪ್ಪನೆಂದರೆ ನಮ್ಮನ್ನುದ್ದರಿಸುವುದಕ್ಕಾಗಿ  ದಿನಪೂರ್ತಿ ಚಲಿಸುವ ಯಂತ್ರವಾ? ಆತನ ಕೆಲಸ ನಮ್ಮನ್ನು ಬೈಯ್ಯುವುದು, ಬಡಿಯುವುದಷ್ಟೆಯಾ? ಆತ ಜೋರು ಮಾಡುವುದರ ಹಿಂದಿರುವ ಉತ್ಕಟ ಪ್ರೀತಿ ನಮಗರ್ಥವಾಗಲಾರದಾ? ತಾನು ಹೊಟ್ಟೆಗೆ ಹಿಟ್ಟಿಲ್ಲದೆ ಸೊರಗಿದರೂ, ಸಮಯಕ್ಕೆ ಸರಿಯಾಗಿ ತಿನ್ನದಿದ್ದರೂ ಪರವಾಗಿಲ್ಲ, ಹೆಂಡತಿ ಮಕ್ಕಳಿಗೇನೂ ಕಡಿಮೆಯಾಗಬಾರದು, ತಾನು ಹೊಸ ಬಟ್ಟೆ ಹಾಕಿ ಮದುವೆ-ಮುಂಜಿಗಳಿಗೆ ಹೋಗದಿದ್ದರೂ ತೊಂದರೆಯಿಲ್ಲ, ಆದರೆ ಈ ವಿಷಯದಲ್ಲಿ ಅವರಿಗೇನೂ ಕೊರತೆಯಾಗಬಾರದು, ತಾನು ಸರಿಯಾಗಿ, ಸುಖವಾಗಿ,  ನಿಶ್ಚಿಂತೆಯಿಂದ ನಿದ್ರಿಸದಿದ್ದರೂ ಬೇಜಾರಿಲ್ಲ, ಆದರೆ ಅವರಿಗೆ ದು:ಖ, ಚಿಂತೆಯ  ಲವಲೇಶವೂ ತಾಕಬಾರದು ಎಂಬಂತೆ ಅಪ್ಪ ಬದುಕಲೇಬೇಕು ಅಂತ ರೂಲ್ಸ್ ಏನಾದರೂ ಇದೆಯಾ? ಬಂದಿದ್ದು ಬರಲಿ, ಉಪವಾಸವಾದರೆ ಎಲ್ಲರೂ ಉಪವಾಸವಿರೋಣ, ಸುಖ ದು:ಖಗಳಲ್ಲಿ ಎಲ್ಲರೂ ಸಮಾನ ಭಾಗಿಗಳಾಗೋಣ ಅಂತ ಆತನೂ ಜೀವಿಸಬಹುದಲ್ಲ? ಆದರೆ ನಮ್ಮಲ್ಲಿ ಯಾರ ಅಪ್ಪನಾದರೂ ಹಾಗೆ ಜೀವಿಸುತ್ತಾನಾ? ಖಂಡಿತಾ ಇಲ್ಲ.

ವಾಸ್ತವದಲ್ಲಿ ಪ್ರತಿಯೊಬ್ಬ ಅಪ್ಪನ ಮೇಲೆ ಬೆಟ್ಟದಂತಹಾ ಒತ್ತಡವಿರುತ್ತದೆ. ಒಂದು ಕ್ಷಣವೂ ಬಿಡುವಿರದಂತಹ ನೂರಾರು ಜವಾಬ್ದಾರಿಗಳಿರುತ್ತವೆ. ಇವುಗಳ ನಡುವೆಯೂ “ನನ್ನ ಮಕ್ಕಳು ಹೀಗಾಗಬೇಕು, ದೊಡ್ಡ ಮನೆ ಕಟ್ಟಿಸಬೇಕು, ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡಬೇಕು” ಎಂಬಂತಹ ನೂರಾರು ಬೇಲಿಯಿಲ್ಲದ ಕನಸುಗಳನ್ನು ಜೇಡ ಬಲೆ ಹೆಣೆದಂತೆ ಹೆಣೆಯುತ್ತಿರುತ್ತಾನೆ. ಅವುಗಳ ಸಾಕಾರಕ್ಕಾಗಿ ಕ್ಷಣ ಕ್ಷಣವೂ ಹೆಣಗುತ್ತಾನೆ. ಬೆಳಗ್ಗೆ ಬೇಗ ಎದ್ದಾದರೂ ಸರಿ, ರಾತ್ರಿ ಲೇಟಾದರೂ ಸರಿ. ಹೆಂಡತಿ ಮಕ್ಕಳ ಒಳಿತಿಗಾಗಿ ನಿತ್ಯವೂ ಶ್ರಮಿಸುತ್ತಾನೆ.

ಆದರೆ ಆತನ ಈ ಎಲ್ಲಾ ಜಂಜಡಗಳಿಂದಾಗಿ ಅಪ್ಪನಿಗೆ ನಮ್ಮ ಮೇಲಿರುವ ಪ್ರೀತಿ ನಮಗೆ ಗೊತ್ತಾಗುವುದೇ ಇಲ್ಲ. ಅದರ ಆಳ ನಮ್ಮ ಅಂದಾಜಿಗೂ ನಿಲುಕುವುದಿಲ್ಲ. ಸುಖವನ್ನಾದರೂ ಅಷ್ಟೇ, ದು:ಖವನ್ನಾದರೂ ಅಷ್ಟೇ, ಆತ ಅದನ್ನೆಂದೂ ತೀರಾ ಜೋರಾಗಿ ಎಕ್ಸ್’ಪ್ರೆಸ್ ಮಾಡುವುದಿಲ್ಲ. ನಮ್ಮಂತೆ ಸಣ್ಣ ಸಣ್ಣ ವಿಶಷಯಕ್ಕೆಲ್ಲಾ ಬಿಕ್ಕಿ ಬಿಕ್ಕಿ ಅಳುವುದಿಲ್ಲ. ಸಂತೋಷಗೊಂಡಾಗ ಕುಣಿದು ಕುಪ್ಪಳಿಸುವುದಿಲ್ಲ. ಆದರಿಂದಾಗಿ ನಮ್ಮಲ್ಲಿ “ಅಪ್ಪ  ಭಾವನೆಗಳೇ ಇಲ್ಲದ ಮನುಷ್ಯ” ಎಂಬ ಭಾವನೆ  ಬೆಳೆದು ಬಿಡುತ್ತದೆ ಮತ್ತು ಹುಟ್ಟಿನಿಂದಲೇ ಪ್ರತಿಯೊಂದಕ್ಕೆ ಅಮ್ಮನನ್ನೇ ಆಶ್ರಯಿಸಿರುವುದರಿಂದ ನಮ್ಮ ಮತ್ತು ಅಪ್ಪನ ನಡುವೆ ಕಮ್ಯುನಿಕೇಶನ್ ಗ್ಯಾಪ್ ಬೆಳೆದು ಬಿಡುತ್ತದೆ. ಈ ಸಂದರ್ಭಗಳಲ್ಲಿ ಅಮ್ಮ ನಮ್ಮ ಮತ್ತು ಅಪ್ಪನ ಮಧ್ಯೆ ಪೋಸ್ಟ್ ಮ್ಯಾನ್’ನ ಪಾತ್ರ ನಿರ್ವಹಿಸುವುದೂ ಇದೆ. ಖರ್ಚಿಗೆ ಹಣ ಬೇಕಾದರೆ ಅಪ್ಪನ ಹತ್ರ ನೇರವಾಗಿ ಕೇಳದ ನಾವು ಅಮ್ಮನ ಬಳಿ ಹೋಗಿ  “ನಿಮ್ಮೆಜಮಾನ್ರಿಗೆ ಸ್ವಲ್ಪ ಹಣ ಕೊಡೋದಿಕ್ಕೆ ಹೇಳು” ಅಂತ ಹೇಳೂವುದೂ ಇದೆ. ಮತ್ತೆ ಕೆಲಸ ಅಂತ ಒಂದು ಸಿಕ್ಕಿ ಬಿಟ್ಟರೆ ಸಾಕು, ಇನ್ಯಾರಿಗೆ ಬೇಕು ಇವರ ಹಣ ಎನ್ನುವ ಅಹಂ ಭಾವನೆಯೂ ಬೆಳೆಯುವುದಿದೆ.

ಅಪ್ಪನ ಪ್ರೀತಿಯ ಆಳ ಎಷ್ಟಿರುತ್ತದೆಯೆಂಬುದಕ್ಕೆ ತಾಜಾ ತಾಜಾ ಉದಾಹರಣೆ ಕೊಡುತ್ತೇನೆ. ಮೊನ್ನೆ ತಾನೇ ನಿಧನರಾದ ಸಿದ್ಧರಾಮಯ್ಯ ಪುತ್ರ ರಾಕೇಶ್ ಅಂತ್ಯಕ್ರಿಯೆಯಲ್ಲಿ ಡಿ.ವಿ. ಸದಾನಂದ ಗೌಡ ಮತ್ತು ಸಿದ್ಧರಾಮಯ್ಯ ಅಳುತ್ತಾ ತಬ್ಬಿಕೊಂಡಿದ್ದನ್ನು ನೀವು ನೋಡಿರುತ್ತೀರಾ. ಸಿದ್ಧರಾಮಯ್ಯನವರ ಸ್ವಭಾವ ಎಂತಹದ್ದು ಎಂಬುದು ನಮಗೆಲ್ಲಾ ಗೊತ್ತಿದೆ. ಅವರನ್ನು ಖಡಕ್  ಜನ ಅಂತ ಹೇಳುವವರಿದ್ದಾರೆ. ಆ ಮನುಷ್ಯ ಒರಟ ಅಂತ ಕರೆಯುವವರಿದ್ದಾರೆ, ಹಿಂದೆ ಪೋಲೀಸ್ ಅಧಿಕಾರಿಗಳು, ಐಏಎಸ್ ಅಧಿಕಾರಿಗಳು ಸತ್ತಾಗ ಸರಕಾರದ ಮುಖ್ಯಸ್ಥರಾಗಿ ಅವರು ನಡೆದುಕೊಂಡ ರೀತಿ ಅವರ ಸ್ವಭಾವವನ್ನು  ಪ್ರತಿಬಿಂಬಿಸಿದೆ. ಆದರೆ ಅವೆಲ್ಲವನ್ನೂ ಒಂದು ಕ್ಷಣ ಪಕ್ಕಕ್ಕಿಡೋಣ. ಅವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನಾಗಿ ನೋಡದೆ ಒಂದು ಕ್ಷಣ ಸಾಮಾನ್ಯ ಸಿದ್ಧರಾಮಯ್ಯರನ್ನಾಗಿ ನೋಡೋಣ. ಮೊನ್ನೆ ರಾಕೇಶನ  ಅಂತಿಮ ಕ್ಷಣಗಳಲ್ಲಿ ಅವರು ಶವದ ಬಳಿ ನಿಂತು ಏಕಾಂಗಿಯಾಗಿ ರೋಧಿಸಿದ ದೃಶ್ಯ ಎಂತಹಾ ಕಲ್ಲೆದೆಯನ್ನೂ ಕರಗಿಸುವಂತಿತ್ತು. ಆ ದೃಶ್ಯಕ್ಕೆ ನಾವು ಮರುಗಿರಲಿಲ್ಲ ಎಂದಾದರೆ, ಬಂಡೆ,ರವಿ,ಗಣಪತಿ ಮುಂತಾದವರ ಮನೆಯವರನ್ನು ಬಿಟ್ಟರೆ ನಾವು ಮನುಷ್ಯರಾಗಿರಲು ಸಾಧ್ಯವೇ ಇಲ್ಲ. ಸಿದ್ಧರಾಮಯ್ಯನವರು ತಾನು ಕೂಗಬಾರದು ಎಂದುಕೊಂಡು ಒತ್ತರಿಸಿ ಬರುತ್ತಿದ್ದ ಕಣ್ಣೀರನ್ನು ಅವಡುಗಚ್ಚಿ ಕಂಟ್ರೋಲ್ ಮಾಡಲು ಪ್ರಯತ್ನಿಸಿದಷ್ಟೂ ಅದು ಕಿತ್ತುಕೊಂಡು ಆಚೆ ಬರುತ್ತಿತ್ತು. ಮಗನ ಸಾವಿಗೆ  ಅಪ್ಪನ ಮಗುವಿನಿಂತಹ ಮನಸ್ಸು ಇನ್ನಿಲ್ಲದಂತೆ ಅಳಲು ಹವಣಿಸುತ್ತಿತ್ತು. ಆ ಕ್ಷಣ ಅವರು ಮುಖ್ಯಮಂತ್ರಿಯಾಗಿರಲಿಲ್ಲ, ಸಾಮಾನ್ಯ ತಂದೆಯಾಗಿದ್ದರು.  ರಾಜಕೀಯ ನಾಯಕರೆಲ್ಲಾ ಬಿಗಿದಪ್ಪಿ ಅತ್ತಾಗಲಂತೂ ಅವರು ಮತ್ತಷ್ಟು ಭಾವುಕರಾಗುತ್ತಿದ್ದರು. ಆ ಕ್ಷಣದ ಅವರ ಎಕ್ಸ್’ಪ್ರೆಶನ್ ಹೇಗಿತ್ತೆಂದರೆ “ನೀವೆಲ್ಲಾ ಎಷ್ಟು ಸಮಾಧಾನ ಮಾಡಿದರೇನು? ಹೋದ ಮಗ ಮತ್ತೆ ಬರತ್ತಾನೆಯೇ?” ಎನ್ನುವಂತೆ. ಸಾರಥಿಯಂತಿದ್ದ ಮಗನ ಕಳೆದುಕೊಂಡ ಅವರ ಆ ನೋವನ್ನು ಅವರಲ್ಲದೆ ಬೇರಾರೂ ಅರಿಯಲು ಸಾಧ್ಯವಿಲ್ಲ. ಅವರು ಒಳ್ಳೆಯ ಮುಖ್ಯಮಂತ್ರಿ ಹೌದೋ ಅಲ್ಲವೋ ಆದರೆ ಒಳ್ಳೆಯ ಅಪ್ಪ ಎನ್ನುವುದನ್ನು ಆ ಒಂದು ಸಂದರ್ಭ  ಸಾಬೀತು ಮಾಡಿತು.

ಸದಾನಂದ ಗೌಡರೂ ಸಹ ಎಂದೋ ತೀರಿ ಹೋದ ಮಗನ ನೆನೆದು ತೀರಾ ಭಾವುಕರಾದರು. ನಾನೂ ನಿಮ್ಮ ಜೊತೆ ಸಮಾನ  ದು:ಖಿ ಎನ್ನುತ್ತಾ ರಾಜಕೀಯ ವಿರೋದಧಾಭಾಸವನ್ನೆಲ್ಲಾ ಬದಿಗಿಟ್ಟು  ಸಿದ್ಧರಾಮಯ್ಯನವರನ್ನು ಸಮಾಧಾನಪಡಿಸುತ್ತಾ ಅಗಾಧವಾದ ತಂದೆಯ ಪ್ರೀತಿಯನ್ನು ಹೊರ ಹಾಕಿದರು.

ಹೆಚ್ಚಿನ ಅಪ್ಪಂದಿರೂ ಹೀಗೆಯೇ. ಕಂಡ ಕಂಡದ್ದಕ್ಕೆಲ್ಲಾ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸೋದಿಲ್ಲ. ಕಣ್ಣ ಮುಂದೆಯೇ ಬಳೆದು ದೊಡ್ಡವನಾದ ಮಗ, ತನ್ನ ಚಿತೆಗೆ ಬೆಂಕಿಯಿಡಬೇಕಾದ ಮಗ ತನಗೂ ಮುಂಚೆ ಸಾವನ್ನಪ್ಪಿದಾಗ, ಮುದ್ದಾಗಿ ಸಾಕಿದ ಮಗಳು ಎಳೆಯ ವಯಸ್ಸಿನಲ್ಲಿಯೇ ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ನರಳುವಾಗ,  ಪ್ರೀತಿಸಿ ಮದುವೆಯಾದ ಮಡದಿ ಕಡೆಗೊಂದು ದಿನ ಒಂಟಿಯಾಗಿ ಬಿಟ್ಟು ಹೋಗುವಾಗ ಮಾತ್ರ ಅದು ಹೊರ ಬರುತ್ತದೆ. ಅಲ್ಲಿಯವರೆಗೆ ಹೆಂಡತಿ ಮಕ್ಕಳ ಮೇಲೆ ಅವರಿಟ್ಟಿರುವ  ಪ್ರೀತಿ ಎಷ್ಟು ಆಳವಾಗಿದೆ ಎಂಬುದು ನಮಗೆ ಅರಿವಾಗುವುದೇ ಇಲ್ಲ. ಜಗತ್ತಿನ ಮುಂದೆ ಅದು ಅನಾವರಣಗೊಳ್ಳುವ ಹೊತ್ತಿಗೆ ಒಂದೋ ನಾವೇ ಇರುವುದಿಲ್ಲ, ಇಲ್ಲಾ ಅದನ್ನು ಅನಾವರಣಗೊಳಿಸುವುದಕ್ಕೆ ಅವರೇ ಇರುವುದಿಲ್ಲ..!

ಹೆಂಡತಿ ಮಕ್ಕಳ ಒಳಿತಿಗಾಗಿ ಗಂಧ ತೇಯ್ದಂತೆ ತೇಯ್ದು ಹೋಗುವ ಪ್ರತೀ  ಅಪ್ಪಂದಿರಿಗೆ ಈ ಬರಹ ಸಮರ್ಪಣೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!