ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೮
___________________________________
ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ |
ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ ||
ಬದುಕೇನು ಸಾವೇನು ಸೊದೆಯೇನು ವಿಷವೇನು ? |
ಉದಕಬುದ್ಬುದವೆಲ್ಲ ! – ಮಂಕುತಿಮ್ಮ ||
ನದಿಯ ತೆರೆಯೆನ್ನುವುದು ಅದರ ಸೆರಗಿನಂಚಿನ ಕುಸುರಿಯೆ ಆದರು ಅದನ್ನು ನಿಯಂತ್ರಿಸುವ ಹಿನ್ನಲೆ ಶಕ್ತಿ ಅದರ ಸ್ವಂತದ್ದಲ್ಲ. ನದಿಯ ಅಂತರಾಳ ಮತ್ತು ಬಾಹ್ಯಗಳ ಏನೆಲ್ಲ ಪ್ರಕ್ರಿಯೆಗಳ ನಿರಂತರ ತಿಕ್ಕಾಟ ಪಡೆಯುವೊಂದು ಪ್ರಕಟ ರೂಪಾಗಿ ತೆರೆಗಳ ಅಸ್ತಿತ್ವ. ಆ ತಿಕ್ಕಾಟದ ನಿರಂತರ ಪ್ರಕ್ರಿಯೆಯನ್ನು ಪ್ರತಿಬಿಂಬಿಸುವಂತೆ ತೆರೆ ತೆರೆಗಳಾಗಿ ಮೂಡಿ ಬಂದು ತನ್ನನ್ನೆ ಮರುಕಳಿಸಿಕೊಳ್ಳುತ್ತಿರುತ್ತದೆ ದಡದತ್ತ – ನದಿ ತನ್ನೆಲ್ಲ ಒತ್ತಡಗಳನ್ನು ತೆರೆಯ ರೂಪದಲ್ಲಿ ಬಿಡುಗಡೆಯಾಗಿಸಿ ತಾನು ನಿರಾಳವಾಗುತ್ತಿದೆಯೇನೊ ಅನ್ನುವಂತೆ. ಈ ಬದುಕೆಂಬ ಮಹಾನದಿಯಲ್ಲಿ ಹೋರಾಡುತ್ತಿರುವ ನಾವುಗಳು ಆ ಬಾಳುವೆಯೊಡ್ಡುವ ಕಷ್ಟಸುಖಗಳ ತೆರೆಗೆ ಸಿಕ್ಕಿಬಿದ್ದ ಜೀವಿಗಳೆ. ಅದರಡಿಯಲಿ ಸಿಕ್ಕಿ ಅದು ದೂಡಿಸಿದಂತೆ, ಅಡ್ಡಾಡಿಸಿದಂತೆ,ಬಳಸಾಡಿಸಿದಂತೆ ಆಡುತ್ತ ಅದರೊಟ್ಟಿಗೆ ಎತ್ತಲೊ ಸಾಗುತ್ತೇವೆ. ಅದರ ನಡುವೆ ಸಿಕ್ಕಿ ಬಿದ್ದ ಮೇಲೆ ಆ ಹೊರಳಾಟದಿಂದ ತಪ್ಪಿಸಿಕೊಳ್ಳುವ ದಾರಿಯೆ ಇಲ್ಲ – ನಿಲ್ಲಲು ಬಿಡದೆ, ಮನಸೋ ಇಚ್ಛೆ ಸ್ವೇಚ್ಛೆಯಾಗಿರಲು ದಾರಿಕೊಡದೆ ಅತಂತ್ರತೆಯನ್ನೆ ನಿರಂತರವಾಗಿಸುವಂತೆ ಇರುವ ಅದರ ಧಾಳಿಗೆ ಆರಂಭ, ಅಂತ್ಯ, ಒಂದು ನಿಶ್ಚಿತ ನೆಲೆಯಾಗಲಿ ಇಲ್ಲ. ನಿರಂತರ ಹೊರಳಾಟ, ಹೊಯ್ದಾಟವೆ ಅದರ ಮೂಲಭೂತ ಗುಣಲಕ್ಷಣ.
ಇಂತಹ ಚಲನಶೀಲತೆಯ ನಿರಂತರತೆಯಲ್ಲಿ ಎಲ್ಲಾ ತರಹದ ಬದುಕಿನ ರಸಗಳ ಅನುಭವವೂ ಆಗಿಬಿಡುತ್ತದೆ – ಸುಖದ ಅನುಭೂತಿಯ ಹುಟ್ಟಾಗಲಿ, ಹರ್ಷವುಕ್ಕಿಸುವ ಅಮೃತ ಸಮಾನ ಅನುಭವಗಳಾಗಲಿ ಅಥವಾ ದುಃಖ, ವಿಷಾದ,ಖೇದಗಳನ್ನು ಬಡಿಸಿಕ್ಕುವ ಸಾವು ಮತ್ತು ಕಷ್ಟಕಾರ್ಪಣ್ಯಗಳ ವಿಷಕೂಪದ ತೊಳಲಾಟಗಳಾಗಲಿ ಎಲ್ಲವು ಅದರ ಮೂಸೆಯಿಂದೆದ್ದು ಬಂದ ಸರಕುಗಳೆ. ಎಲ್ಲವು ಆ ತೆರೆಯಡಿಯಲ್ಲಿ ವಿವಿಧಾಕಾರ ತೊಟ್ಟುಬಂದ ವೇಷಗಳೆ. ಅದರಿಂದಲೆ ಅವುಗಳ ಸ್ವರೂಪವೂ ತೆರೆಗಳ ಮೂಲ ಸ್ವರೂಪಕ್ಕಿಂತ ಭಿನ್ನವಿರಲು ಸಾಧ್ಯವಿಲ್ಲ. ಆ ತೆರೆಗಳಾಗಿದ್ದು ಮೂಲತಃ ನೀರಿನಿಂದ; ಮತ್ತದರ ಚಲನೆಯ ಒತ್ತಡಗಳುಂಟು ಮಾಡುವ ಫಲಿತವೆ ಕುದಿದೆದ್ದು ಮರೆಯಾಗುವ ನೀರ್ಗುಳ್ಳೆಗಳ ಸಮೂಹ. ಈ ಕಷ್ಟ ಸುಖಗಳೆಂಬ ನೀರಿನ ಗುಳ್ಳೆಗಳು ಎಷ್ಟೇ ವೇಗದ ತೆರೆಯ ಮೇಲೆ ಕುಳಿತುಕೊಂಡು ಬಂದಪ್ಪಳಿಸಿದರು, ನೀರಿನ ಶಾಶ್ವತ ಅಸ್ತಿತ್ವವಿರದ ಆ ಗುಳ್ಳೆ ನಿರಂತರವಾಗಿರಲು ಆಗದೆ ತಂತಾನೆ ಕ್ಷಯವಾಗಿ ಹೋಗುತ್ತದೆ, ತನ್ನ ಮೂಲಭೂತ ಅಸ್ತಿರ ಗುಣದಿಂದಾಗಿ. ಅದರ ಅನುಭವವಾದ ಜೀವಕ್ಕೆ ಕಷ್ಟ ಸುಖಗಳೆಂಬ ಗುಳ್ಳೆಯನ್ನೆದುರಿಸುವ ಪಕ್ವತೆ,ಮನೋಸ್ಥೈರ್ಯ ಬರುವುದೇ ಅದೆಲ್ಲ ಶಾಶ್ವತವಲ್ಲ ಎಂಬ ತಿಳುವಳಿಕೆಯಿಂದ. ಅದನ್ನರಿತು ನಿರ್ಲಿಪ್ತನಾಗಿರೊ ಎನ್ನುವ ಪರಿಪಕ್ವ ಕವಿಮನ ಇಲ್ಲಿ ಕಾಣಿಸಿಕೊಂಡಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ – ಅನುಭವದ ಮೂಸೆಯಲ್ಲಿ ಮೂಡಿದ ಅಗಾಧ ಜೀವನದ ಸರಳ ಸತ್ಯದ ಅರಿವು. ಒಂದಲ್ಲ ಒಂದರಡಿ ಸಿಕ್ಕಿ ಹೊರಳಾಡುತ್ತ ನಡೆಯುವುದೆ ಜೀವನ. ಅದನ್ನೊಂದು ನಿಶ್ಚಿತ ದಡ ಮುಟ್ಟಿಸಿ ಆ ಸ್ಥಿತಿಯನ್ನೆ ನಿಶ್ಚಲ ನಿರಂತರವಾಗಿಸಿ ನೆಮ್ಮದಿಯಾಗಿರುವಂತಹ ಸ್ಥಿತಿ ಬಹುಶಃ ಎಂದಿಗೂ ಸಾಧ್ಯವಾಗುವುದಿಲ್ಲ. ಸುಖದಷ್ಟೆ ಸಹಜವಾಗಿ ದುಃಖ, ಒಂದರ ಜತೆಗೊಂದು ತೆರೆಗಳಾಗಿ ಜೀವನ ನೌಕೆಯನ್ನು ಸ್ಪರ್ಷಿಸಿ ಅದರ ದಿಕ್ಕುದೆಸೆಗಳನ್ನು ಸ್ಥಳಾಂತರಿಸಲೆತ್ನಿಸಿ ಹೋಗುತ್ತಲೆ ಇರುತ್ತದೆ. ಅದನ್ನು ನುರಿತ ನಾವಿಕನಂತೆ ನಿಭಾಯಿಸಿಕೊಂಡು, ಅದರ ಕ್ಷಣಿಕತೆಯನ್ನು ಅರ್ಥಮಾಡಿಕೊಂಡು ಮುನ್ನಡೆಯುತ್ತಿರಬೇಕು. ಜೀವನದಂತೆ ಈ ಜೀವವೂ ಕ್ಷಣಿಕವಾದದ್ದೆ – ನೀರಿನ ಗುಳ್ಳೆಯಂತೆ. ಅದನ್ನು ಒದ್ದಾಡಿಸಿ,ತೊಳಲಾಡಿಸಲೆಂದೆ ಮೋಹ, ಮದ, ಮತ್ಸರ,ಮಾತ್ಸರ್ಯಾದಿ ರಾಗದ್ವೇಷಗಳ ಮಾಯಾಗುಳ್ಳೆಗಳು ಮನದ ನದಿಯಲ್ಲಿ ತೆರೆಯ ರೂಪದಲ್ಲಿ ಬಂದು ಕಾಡುತ್ತಲೆ ಇರುತ್ತವೆ. ಅದರ ನೈಜ ರೂಪವರಿತು ನಿಭಾಯಿಸಿ ಗೆಲಬಲ್ಲವನೆ ಬದುಕಿನ ಚಂಚಲತೆಯಲ್ಲೂ ನೆಮ್ಮದಿ, ಸಮಾಧಾನ,ಸಾರ್ಥಕತೆಯನ್ನು ಕಂಡುಕೊಳ್ಳುವನು. ಇವೆಲ್ಲ ಜೀವನ ಗಹನತೆಯನ್ನು ಸೊಗಸಾಗಿ ಹಿಡಿದಿಟ್ಟಿವೆ ಈ ಸಾಲುಗಳು, ಸರಳ ಹೋಲಿಕೆಯ ಅಂತರಾಳದಲ್ಲಿ – ವಿವರಣೆಯನ್ನು ವಿಸ್ತರಿಸುತ್ತ ಹೋದಷ್ಟು ಜೀವನದೆಲ್ಲ ಮಜಲುಗಳಿಗು ಅನ್ವಯವಾಗುವ ವಿಶ್ವರೂಪವನ್ನು ತೋರಿಸುತ್ತ ; ಪ್ರಾಯಶಃ ಆ ನದಿಯ ತೆರೆಗಳ ಹಾಗೆಯೆ!