ಒಂದಾನೊಂದು ಕಾಲದಲ್ಲಿ ಅಂದರೆ ಸುಮಾರು ಒಂದು ಶತಮಾನಗಳ ಹಿಂದೆ ಕ್ಯಾಮೆರಾ ಅಂದರೆ ಏನು ಅಂತ ಜಗತ್ತಿಗೆ ತಿಳಿದೇ ಇರಲಿಲ್ಲ. ವಿಕಿಪೀಡಿಯ ಹೇಳುವ ಪ್ರಕಾರ ೧೮೮೫ ರಲ್ಲಿ ಪ್ರಪ್ರಥಮ ಬಾರಿಗೆ ಕ್ಯಾಮೆರಾ ಫಿಲ್ಮ್(ರೀಲು) ಪರಿಚಯವಾಯಿತಂತೆ. ಇದಕ್ಕಿಂತಾ ಮುಂಚೆಯೂ ಹಲವಾರು ತೆರನಾದ ಕ್ಯಾಮೆರಾ ಇತಿಹಾಸವಿದೆ. ಕ್ಯಾಮೆರಾ ತಯಾರಿಕೆಯ ಮೊದಲಿಗರಲ್ಲಿ ಪ್ರಮುಖವಾಗಿ ಜಾರ್ಜ್ ಈಸ್ಟ್ಮ್ಯಾನ್(George Eastman) ಮುಖ್ಯ ಪಾತ್ರ ವಹಿಸಿದ್ದಾನೆ. ಕೊಡಾಕ್ (KODAK) ಅನ್ನುವ ಕ್ಯಾಮೆರಾ ಹುಟ್ಟು ಹಾಕಿದವನೆ ಈತ. ನಿಮ್ಮ ಭಾವಚಿತ್ರವನ್ನು ತೆಗೆದು ನೀವೇ ನಿಮ್ಮನ್ನು ನೋಡಿಕೊಳ್ಳೋದು ಅಂದರೆ ಒಂಥರಾ ವಿಚಿತ್ರ ಸಂಗತಿಯೆ. ಕ್ಯಾಮೆರಾಗಳು ಜಗತ್ತಿಗೆ ಪರಿಚಯವಾದ ಹೊಸತರಲ್ಲಿ ಮನುಷ್ಯನಿಗೆ ಕ್ಯಾಮೆರಾ ಬಹಳ ವಿಚಿತ್ರವಾದ ವಸ್ತುವಾಗಿತ್ತೇನೋ !. ಅದೇನೆ ಇರಲಿ , ಕ್ಯಾಮೆರಾಗಳು ಎಲ್ಲಿಂದ, ಹೇಗೆ ಬಂದವು ಅನ್ನುವ ಇತಿಹಾಸ ಯಾರಿಗೆ ಬೇಕು ಹೇಳಿ. ನಿಮ್ಮ ಮೊಬೈಲ್ ನಲ್ಲಿ ಕ್ಯಾಮೆರಾ ಇದ್ದರೆ ಒಂದು ಸೆಲ್ಫಿ ತೆಗೆದುಕೊಳ್ಳಿ. ಅರೇ ಇದೇನಿದು ವಿಷಯ ಬದಲಾಯಿಸಿ ೧೮ನೇ ಶತಮಾನದಿಂದ ೨೧ನೇ ಶತಮಾನಕ್ಕೆ ಬಂದು ಬಿಟ್ಟಿರಲ್ಲ ಅಂತ ಯೋಚಿಸುತ್ತಿದ್ದೀರಾ. ಹೌದು ಇಂದು ನಾನು ಹೇಳಹೊರಟಿರುವುದು ಕ್ಯಾಮೆರಾ ಇತಿಹಾಸವಲ್ಲ. ೨೧ನೇ ಶತಮಾನದಲ್ಲಿ ಕಾಲ ತನ್ನ ಸೆಲ್ಫಿಯನ್ನೇ ತೆಗೆದುಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಹೌದು ಇದು ಸೆಲ್ಫಿಯುಗ…!
ಓ ಸೆಲ್ಫಿ ನೀ ಮಾಯೆಯೋ ನಿನ್ನೊಳಗೆ ಮಾಯೆಯೋ ! ನೀ ಜಗತ್ತಿನೊಳಗೋ ನಿನ್ನೊಳಗೆ ಜಗತ್ತೋ ! ಹೌದು ಇದು ಸೆಲ್ಫಿ ಯುಗ. ಕಲಿಯುಗವನ್ನು ಆವರಿಸಿರುವುದು ಬೇರೆ ಯಾವ ಭೂತವೂ ಅಲ್ಲ ಅದು ಸೆಲ್ಫಿ ಎಂಬ ಮಾಯೆ. ಕನಕದಾಸರ ನೀ ಮಾಯೆಯೊಳಗೋ, ಮಾಯೆ ನಿನ್ನೊಳಗೆ ಪದವನ್ನು ನೀವು ಕೇಳಿದ್ದೀರಿ. ಬಹುಷಃ ಕನಕದಾಸರು ಈಗೇನಾದರು ಇದ್ದಿದ್ದರೆ ಈ ಮಾಯೆ ಅನ್ನೋ ಪದಕ್ಕೆ ಸರಿಯಾದ ಹೋಲಿಕೆ ಸಿಗುತ್ತಿತ್ತು. ಆ ಮಾಯೆಗೆ ಹೋಲಿಕೆ ಸೆಲ್ಫಿ ಅಗಿರುತ್ತಿತ್ತೇನೋ. ಈ ಸೆಲ್ಫಿ ಅನ್ನೋ ಪದ ಅದೆಲ್ಲಿ ಹುಟ್ಟಿತೋ, ಈಗ ಇಡೀ ಜಗತ್ತನ್ನೇ ತನ್ನಲ್ಲಿ ಸೆಳೆದುಕೊಳ್ಳುತ್ತಿದೆ. ಈ ಮಾಯೆಯ ಜಾಲದೊಳಗೆ ಬೀಳದವರೇ ಇಲ್ಲವೇನೋ!. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಈ ಮಾಯೆ ಆವರಿಸಿದೆ. ಎಲ್ಲೆಲ್ಲಿಯೂ ಸೆಲ್ಫಿ. ಯಾವುದೇ ಕಾರ್ಯಕ್ರಮವಿರಲಿ ಅದು ಕೊನೆಗೊಳ್ಳುವುದು ವಂದನಾರ್ಪಣೆಯಿಂದಲ್ಲ ಬದಲಾಗಿ ಒಂದು ಸೆಲ್ಫಿಯಿಂದ ಅಂದರೆ ಇದರ ಹವಾ ಇನ್ನೆಷ್ಟಿರಬೇಕು ನೀವೇ ಯೋಚಿಸಿ.
ಬಹಳ ಹಿಂದಿನ ವಿಷಯವೇನು ಅಲ್ಲ. ಹೆಚ್ಚೆಂದರೆ ಹದಿನೈದರಿಂದ ಇಪ್ಪತ್ತು ವರ್ಷಗಳ ಹಿಂದೆ ಫೋಟೋ ತೆಗೆಯೋದು ಅಷ್ಟೇನು ಸುಲಭದ ವಿಷಯವಾಗಿರಲಿಲ್ಲ. ನನಗೆ ಇನ್ನೂ ನೆನಪಿದೆ. ನನ್ನ ತಂದೆಯವರು ಒಂದು ಕ್ಯಾಮೆರ ಇಟ್ಟುಕೊಂಡಿದ್ದರು. ಅದಕ್ಕೆ ಈಗಿನ ಕಾಲದ ಹಾಗೆ ಮೆಮೋರಿ ಕಾರ್ಡ್ ಇರಲಿಲ್ಲ. ಬಹಳ ಹಳೆಯ ಕ್ಯಾಮೆರಾ. ಅದರ ವಿಶೇಷವೇನು ಗೊತ್ತಾ, ಪ್ರತೀ ಫೋಟೋ ತೆಗೆಯಬೇಕಾದರೂ ಒಂದು ಚಿಕ್ಕ ಬಲ್ಬ್ ಬದಲಾಯಿಸಬೇಕಿತ್ತು. ಒಮ್ಮೆ ಫ್ಲಾಶ್ ಮಾಡಿದರೆ ಅದರ ಆಯುಷ್ಯ ಮುಗೀತು. ಮತ್ತೆ ಇನ್ನೊಂದು ಬಲ್ಬ್ ಹಾಕಲೇಬೇಕು. ಹಾಗಾಗಿ ಒಂದು ಫೋಟೋ ತೆಗೆಯಬೇಕಾದರೂ ಬಹಳಾ ಯೋಚಿಸಬೇಕು. ಕೆಲವೊಂದು ವಸ್ತು ಸಂಗ್ರಹಾಲಯಗಳಲ್ಲಿ ಈ ಮಾಡೆಲ್ಗಳು ಇರುತ್ತವೆ. ನಿಮಗೇನಾದರು ಅವಕಾಶ ಸಿಕ್ಕರೆ ಒಮ್ಮೆ ನೋಡಿ. ಇನ್ನು ನೀವು ರೀಲ್ ಕ್ಯಾಮೆರಾಗಳನ್ನು ನೋಡಿರುತ್ತೀರಿ. ನನ್ನ ಬಾಲ್ಯದ ದಿನಗಳಲ್ಲಿ ನಾನು ಬಳಸಿದ ಕ್ಯಾಮೆರಾ, ರೀಲ್ ಕ್ಯಾಮೆರಾ. ಈ ರೀಲ್ ಕ್ಯಾಮೆರಾ ಕಥೆಯೂ ಅಷ್ಟೇ. ಒಂದು ಫೋಟೋ ತೆಗಿಯಬೇಕಾದರೂ ಬಹಳ ಯೋಚಿಸಿ ತೆಗೆಯಬೇಕು. ಯಾಕೆಂದರೆ ರೀಲ್ ಮುಗಿದು ಹೋದರೆ ಅನ್ನೋ ಆತಂಕ ಹಾಗೂ ರೀಲ್ ಮೇಲಿನ ಎಲ್ಲಿಲ್ಲದ ಆಸೆ!. ಒಂದು ರೀಲ್ ನಲ್ಲಿ ಅಬ್ಬಬ್ಬಾ ಅಂದರೆ ಇಪ್ಪತ್ತೈದರಿಂದ ಮೂವತ್ತು ಫೋಟೋ ತೆಗೆಯುವ ಅವಕಾಶ ಇರುತ್ತಿತ್ತು ಅಷ್ಟೇ.
ನಿಮ್ಮ ಮನೆಯಲ್ಲಿ ಹಳೇ ಅಲ್ಬಮ್’ಗಳು ಇದ್ದರೆ ಒಮ್ಮೆ ಕಣ್ಣುಹಾಯಿಸಿ. ಆ ಕಾಲದ ಫೋಟೋಗಳ ಅಂದ ಹೇಗಿರುತ್ತಿತ್ತು ಅಂತ. ಯಾವುದೇ ಕಾರ್ಯಕ್ರಮಗಳಲ್ಲಿ ಒಂದು ಫೋಟೋ ತೆಗೆಯಬೇಕಾದರೆ ಕ್ಯಾಮೆರಾ ಹಿಡಿದಿರುವಾತ ಎಲ್ಲರೂ ಸರಿಯಾಗಿ ನಿಂತ ಮೇಲಷ್ಟೇ ಫೋಟೋ ಕ್ಲಿಕ್ಕಿಸಬೇಕು. ಇಲ್ಲವಾದಲ್ಲಿ ಒಂದು ಫಿಲ್ಮ್ ಸುಮ್ಮನೇ ಕಳೆದುಕೊಂಡಂತೆ. ಇನ್ನು ಆ ರೀಲ್ ಡಬ್ಬಿ ಇಟ್ಟುಕೊಂಡು ಹಲವಾರು ತೆರನಾದ ಆಟಗಳನ್ನು ಆಡಿದ ನೆನಪು ನಿಮಗಿರಬಹುದು. ಆ ದಿನಗಳು ಇನ್ನು ಮರಳಿ ಬರುವುದೇ ಇಲ್ಲ ಬಿಡಿ. ಪ್ರತಿಯೊಂದು ವಸ್ತುವಿನ ಅರ್ಥ ಹಾಗೂ ಅವಶ್ಯಕತೆಗಳನ್ನು ಸರಿಯಾಗಿ ತಿಳಿಸುತ್ತಿದ್ದ ದಿನಗಳು ಇನ್ನು ಮುಂದಿನ ಪೀಳಿಗೆಗೆ ಸಿಗಲು ಸಾಧ್ಯವೇ ಇಲ್ಲ.
ಕಳೆದ ಎರಡು ದಶಕಗಳಲ್ಲಿ ಆದ ತಂತ್ರಜ್ಞಾನ ಕ್ರಾಂತಿ ಮನುಷ್ಯನ ಮೇಲೆ ಅಪಾರವಾದ ಪ್ರಭಾವ ಬೀರಿದೆ. ಎಲ್ಲವೂ ಬೆರಳ ತುದಿಯಲ್ಲೇ ನಡೆಯುವಷ್ಟು ಸುಲಭ ಹಾಗೂ ಸುಂದರ. ಫೋಟೋ ತೆಗೆಯಲು ಪ್ರತ್ಯೇಕ ಕ್ಯಾಮೆರಾಗಳು ಬೇಕಾಗಿಯೇ ಇಲ್ಲ. ಈಗೇನಿದ್ದರೂ ಸ್ಮಾರ್ಟ್ ಫೋನ್ ಜಮಾನ. ಮುಂಚೆ ಈ ಸ್ಮಾರ್ಟ್ ಫೋನ್’ಗಳಲ್ಲಿ ಬರೀ ಫೋನ್’ಗಳ ಹಿಂದೆ ಮಾತ್ರ ಕ್ಯಾಮೆರಾ ಇರುತ್ತಿತ್ತು. ಈಗ ಈ ಸೆಲ್ಫಿಯೆಂಬ ಮಾಯೆಯಿಂದ ಮೊಬೈಲ್ ಫೋನ್’ಗಳಲ್ಲಿ ಮುಂದೆಯೂ ಕ್ಯಾಮೆರಾಗಳು ಬಂದು ಕುಳಿತಿವೆ.“ಕ್ಯಾಮೆರಾ ಹಿಂದಿನ ಕೈಗಳು” ಅನ್ನೋ ಮಾತುಗಳನ್ನ ಇನ್ನು ಹೇಳುವುದು ಕಷ್ಟ. ಯಾಕೆಂದರೆ ಈ ಸೆಲ್ಫಿಯಲ್ಲಿ ಫೋಟೋ ತೆಗೆಯುತ್ತಿರುವವನ ಮುಖವೂ ಅಚ್ಚಾಗಿರುತ್ತದೆ. ಈಗೆಲ್ಲಾ ಫೋಟೋ ತೆಗೆಯೋದು ದೊಡ್ಡ ವಿಷಯವೇ ಅಲ್ಲ ಬಿಡಿ. ಮೆಮೊರಿ ಕಾರ್ಡ್ ಅನ್ನೋ ಅದ್ಭುತವಾದ ತಂತ್ರಜ್ಞಾನ ಜಗತ್ತಿಗೆ ಕಾಲಿಟ್ಟ ಮೇಲೆ ಹಲವಾರು ಕೆಲಸಗಳು ಸರಾಗವಾಗಿ ಅಗುತ್ತಿವೆ. ಎಷ್ಟು ಬೇಕಾದರೂ ಫೋಟೋ ತೆಗೆಯಬಹುದು. ಬೇಡವಾದಲ್ಲಿ ಡಿಲೀಟ್ ಮಾಡಿ ಬಿಸಾಕಬಹುದು. ಒಂದು ಫೋಟೋ ತೆಗೆಯೋದಕ್ಕೆ ಬಹಳಾ ಯೋಚಿಸುತ್ತಿದ್ದ ಕಾಲ ಬದಲಾಗಿದೆ. ನಮಗೆ ಬೇಕಾದಷ್ಟು ಫೋಟೋ ಕ್ಲಿಕ್ಕಿಸಬಹುದಾದ ಆಯ್ಕೆ ಈಗಿನ ತಂತ್ರಜ್ಞಾನ ಒದಗಿಸುತ್ತದೆ.
ಈ ಸೆಲ್ಫಿ ಅನ್ನೋ ಮಾಯೆ ಬರೀ ಖುಷಿಯನ್ನಷ್ಟೇ ತಂದಿಲ್ಲ. ಬದಲಾಗಿ ಜೊತೆಗೆ ದುಃಖವನ್ನೂ ತನ್ನೊಟ್ಟಿಗೇ ತಂದು ಬಿಟ್ಟಿದೆ. ಮೋಜು ಮಸ್ತಿಗಾಗಿ ನಮ್ಮ ಜನ ಏನನ್ನಾದರೂ ಮಾಡುತ್ತಾರೆ ಬಿಡಿ. ಅದೇನೆ ಮಾಡಿದರೂ ಜೀವಕ್ಕೆ ಅಪಾಯ ಬಂದೊದಗದಿದ್ದರೆ ಅಷ್ಟೇ ಸಾಕು. ಸೆಲ್ಫಿ ಅನ್ನೋ ಮಾಯೆಗೆ ಬಲಿಯಾದವರೂ ಇದ್ದಾರೆ. ಅದೆಷ್ಟೋ ಜೀವಗಳು ಇದಕ್ಕೆ ಬಲಿಯಾಗಿದ್ದಾವೆ. ನಾವು ಅವಶ್ಯವಾಗಿ ತಿಳಿಯಲೇಬೇಕಾದ ಎರಡು ಪದಗಳೆಂದರೆ, ಒಂದು ಅವಶ್ಯಕತೆ ಮತ್ತೊಂದು ಅನಿವಾರ್ಯ. ಇವೆರಡರ ಅರ್ಥವನ್ನು ಯುವ ಜನತೆ ಸರಿಯಾಗಿ ತಿಳಿದುಕೊಂಡರೆ ಯಾವುದರಿಂದಲೂ ನಮಗೆ ಅಪಾಯ ಮತ್ತು ಹಾನಿಯುಂಟಾಗುವುದಿಲ್ಲ. ಮೊಬೈಲ್ ನಮಗೆ ಅವಶ್ಯಕತೆ ಅಷ್ಟೇ ಹೊರತು ಅನಿವಾರ್ಯವಲ್ಲ.
ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಆಸೆ ಯಾರಿಗಿಲ್ಲ ಹೇಳಿ. ನಮ್ಮ ಮುಖದ ಅಂದವನ್ನು ನೋಡುವ ಬಯಕೆ ಮನಸ್ಸಿಗೆ ಇದ್ದೇ ಇರುತ್ತದೆ. ವಿಧವಿಧವಾದ ಭಂಗಿಯಲ್ಲಿ ಈ ಸೆಲ್ಫಿಗಳು ಹುಟ್ಟುತ್ತವೆ. ಹುಡುಗಿಯರಿಗೆ ಅದೇನೆಲ್ಲಾ ತೆರನಾದ ಅವತಾರಗಳು ಈ ಸೆಲ್ಫಿ ತೆಗೆದುಕೊಳ್ಳುವಾಗ ಬರುತ್ತವೆಂದು ಊಹಿಸಲೂ ಅಸಾಧ್ಯ. ಹೋದ ಜಾಗದಲ್ಲೆಲ್ಲಾ ಸೆಲ್ಫಿ. ಅವತಾರಕ್ಕೆ ತಕ್ಕ ಸೆಲ್ಫಿಗಳು ಹುಟ್ಟುತ್ತವೆ. ಇನ್ನು ಈ ಸೆಲ್ಫಿಯನ್ನು ಇಟ್ಟುಕೊಂಡು ಒಂದು ಸಿನೆಮಾವನ್ನೇ ಮಾಡಿದ್ದಾರೆ. ಹಲವಾರು ಸ್ಪರ್ಧೆಗಳು ಸಹಾ ಹುಟ್ಟಿಕೊಂಡಿವೆ. ಸದ್ಯ ಯುವಜನತೆಗೆ ಮೋಡಿ ಮಾಡುತ್ತಿರುವ ಈ ಸೆಲ್ಫಿಗೆ ಸೆಡ್ಡು ಹೊಡೆಯುವ ಯಾವುದೇ ವಿಷಯಗಳು ಇನ್ನು ಹುಟ್ಟಿಲ್ಲ. ಅದೇನೇ ಇರಲಿ ತಂತ್ರಜ್ಞಾನ ಹಾಗೂ ಹೊಸ ವಿಷಯಗಳಿಂದ ಮನುಷ್ಯನಿಗೆ ತೊಂದರೆಯಾಗದಿದ್ದರೆ ಅಷ್ಟೇ ಸಾಕು. ಸೆಲ್ಫಿ ತೆಗೆಯುವ ಮುನ್ನ ಸ್ವಲ್ಪ ಯೋಚಿಸಿ ತೆಗೆಯಿರಿ. ನೀವಿರುವ ಜಾಗ ಹಾಗೂ ಸಂದರ್ಭದ ಅರಿವು ನಿಮಗಿರಲಿ. ಇನ್ನು ಹೆಣ್ಣುಮಕ್ಕಳು ಸೆಲ್ಫಿ ತೆಗೆಯುವಾಗ ಎಚ್ಚರದಿಂದಿರಿ. ನೀವು ತೆಗೆದ ಸೆಲ್ಫಿಯಿಂದ ನಿಮಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಿ. ಯಾವುದೇ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮುನ್ನ ಎಚ್ಚರವಹಿಸಿ.
ಎಲ್ಲಾ ತಂತ್ರಜ್ಞಾನ ಹಾಗೂ ವಿಷಯಗಳ ಹಿಂದೆ ಒಳ್ಳೆಯ ಹಾಗೂ ಕೆಟ್ಟ ವಿಚಾರಗಳು ಇದ್ದೇ ಇರುತ್ತವೆ. ಒಳ್ಳೇ ವಿಚಾರಗಳನ್ನು ತೆಗೆದುಕೊಂಡು ಕೆಟ್ಟ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ಸೆಲ್ಫಿಯಿಂದ ನಿಮ್ಮ ಜೀವಕ್ಕೆ ಆಪತ್ತು ಬರದಂತೆ ನೋಡಿಕೊಳ್ಳಿ. ಹುಚ್ಚುತನಕ್ಕೆ ಎಲ್ಲೆಲ್ಲೋ ಸೆಲ್ಫಿ ತೆಗೆದುಕೊಳ್ಳುವ ಆಸೆ ಎಂದೆಂದಿಗೂ ಬೇಡ.
ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದೆಯೇ. ಹಾಗಾದರೆ ಇನ್ನೇಕೆ ತಡ ಒಂದು ಸೆಲ್ಫಿ ಕ್ಲಿಕ್ಕಿಸಿ…ನಿಮ್ಮ ಸಂತೋಷವನ್ನು ಇತರರರೊಂದಿಗೆ ಹಂಚಿಕೊಳ್ಳಿ. ಕೊನೆಯದಾಗಿ, ಒಂದು ಸೆಲ್ಫಿ ಪ್ಲೀಸ್…..!