Featured ಅಂಕಣ

24ರ ತರುಣ ಏಳು ಶತ್ರು ಸೈನಿಕರ ಸದೆಬಡಿದ….

ದೇಶದ ಹೆಮ್ಮೆಯ ಸೈನಿಕರ ಎಂಬತ್ನಾಲ್ಕು ದಿನದ ಅವಿರತ ಹೋರಾಟಕ್ಕೆ ಜಯ ದೊರಕಿದ ದಿನ ಜುಲೈ 26,1999.ಸುಮಾರು 527 ಸೈನಿಕರು ಭಾರತಾಂಬೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದರು. ಹನ್ನೊಂದು ತಾಸುಗಳ ನಿರಂತರ ಹೋರಾಟದ ನಂತರ “ಟೈಗರ್ ಹಿಲ್” ಅನ್ನು ಭಾರತದ ಸೈನಿಕರು ವಶಪಡಿಸಿಕೊಂಡು ತ್ರಿವರ್ಣ ಧ್ವಜವ ಹಾರಿಸಿದಾಗ ಭಾರತದ ಹೋರಾಟಕ್ಕೆ ಅರ್ಥ ದೊರಕಿತ್ತು. ದೇಶಕ್ಕಾಗಿ ಪ್ರಾಣತೆತ್ತ ಆ 527 ಜನರ ಬದುಕು, ಹೋರಾಟ ಎಲ್ಲವೂ ನಮ್ಮ ಇವತ್ತಿನ “ಹೆಮ್ಮೆ”ಯ ಜೀವನಕ್ಕೆ ಮೂಲ.

ಲೆಫ್ಟಿನಂಟ್ ಕೋಲೋನೆಲ್ ವಿಶ್ವನಾಥನ್, ಮೇಜರ್ ಅಜಯ್ ಸಿಂಗ್ ಜಾಸ್ರೊತಿಯ, ಮೇಜರ್ ಕಮಲೇಶ್ ಪಾಠಕ್, ಮೇಜರ್ ಮರಿಯಪ್ಪನ್ ಸರವಣನ್, ಮೇಜರ್ ರಾಜೇಶ್ ಸಿಂಗ್ ಅಧಿಕಾರಿ, ಕ್ಯಾಪ್ಟನ್ ಅಮೋಲ್ ಕಾಲಿಯ, ಕ್ಯಾಪ್ಟನ್ ಸುಮೀತ್ ರಾಯ್, ಮೇಜರ್ ಅಜಯ್ ಕುಮಾರ್, ಕ್ಯಾಪ್ಟನ್ ಅನುಜ್ ನಾಯರ್, ಕ್ಯಾಪ್ಟನ್ ವಿಕ್ರಮ ಬಾತ್ರ, ಲೆಫ್ಟಿನಂಟ್ ವಿಜಯಂತ್ ತೌಪರ್, ಕ್ಯಾಪ್ಟನ್ ಹನೀಫ್ ಉದ್ದೀನ್, ಲೆಫ್ಟಿನಂಟ್ ಸೌರವ್ ಕಾಲೀಯ, ಲೆಫ್ಟಿನಂಟ್ ಅಮಿತ್ ಭಾರದ್ವಾಜ್, ನೈಕ್ ಚಮನ್ ಸಿಂಗ್ ಹೀಗೆ ಅದೆಷ್ಟೋ ಜನ ಭಾರತಾಂಬೆಗಾಗಿ ತಮ್ಮ ಪ್ರಾಣ ಅರ್ಪಿಸಿದರು. ಇವರ ಹೋರಾಟ ನಮ್ಮ ಪಾಠವಾಗಬೇಕೆ ಹೊರತು ದೇಶದ ಅನ್ನ ತಿಂದು “ಹಮೆ ಚಾಹಿಯೆ ಆಜಾದಿ” ಅನ್ನುವವರ ಭಂಜಕ ಹಾರಾಟವಲ್ಲ. ಕಾಶ್ಮೀರದ ಉಗ್ರಗಾಮಿ ಬುರ್ಹಾನ್ ವಾನಿಗಾಗಿ ಪರೇಡ್ ನಡೆಸಲಿಚ್ಚಿಸಿದವರೇ, ನಿಮ್ಮ ತುತ್ತು ಅನ್ನ ಕೂಡ 527 ಜನ ಸೈನಿಕರು ನೀಡಿದ ಭಿಕ್ಷೆ ಎನ್ನುವುದನ್ನು ಮೊದಲು ತಿಳಿಯಿರಿ. ಎಷ್ಟು ದಿನ ಈ ಸೈನಿಕರಿಗಾಗಿ ನಿಮ್ಮ ಮನ ಮಿಡಿದಿದೆ? ಎಲ್ಲದರಲ್ಲೂ ಎಡ,ಬಲ,ದಲಿತ,ಬ್ರಾಹ್ಮಣ,ತುಳಿತ ಶಬ್ದವ ಹುಡುಕುವ “ಆಂತರಿಕ ಭಯೋತ್ಪಾದಕರೇ” ನಿಮ್ಮ ಪರೇಡ್ ಅನ್ನು ಪಾಕಿಸ್ತಾನದಲ್ಲಿ ಏರ್ಪಡಿಸಿ ಅಲ್ಲೊಂದು ಮನೆ ಮಾಡಿ ಭಾರತಕ್ಕೆ ಬಹುದೊಡ್ಡ ಉಪಕಾರವಾಗುತ್ತದೆ.ಎಲ್ಲದರಲ್ಲೂ ಜಾತಿ ಧರ್ಮವ ಹುಡುಕುತ್ತಾ ದೇಶ ಒಡೆಯುವ ಕೆಲಸ ಮಾಡುವ ನಿಮ್ಮಂತವರಿಂದಲೇ ದೇಶ ಕಾಯುವ ಸೈನಿಕನ ಆತ್ಮಸ್ಥೈರ್ಯ ಕುಗ್ಗಿಬಿಡಬಹುದೇನೋ ಅನ್ನಿಸುತ್ತಿದೆ.

ನಮ್ಮೊಳಗಿನ ಇಂತವರನ್ನು ನೆನೆದು ಅಥವಾ ಅವರನ್ನು ಬೈದು ಏನೂ ಪ್ರಯೋಜನವಿಲ್ಲ, ಆದರೆ ನಾವು ಗೆದ್ದ ಕಾರ್ಗಿಲ್ ವಿಜಯದಲ್ಲಿ ಮಡಿದ ಒಬ್ಬ ಸೈನಿಕನನ್ನು ಒಂದು ಕ್ಷಣ ನೆನೆದರೂ ಸಾಕು ದೇಶಪ್ರೇಮ ನಮ್ಮನ್ನು ಆವರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಬನ್ನಿ ತನ್ನ ಜೀವದ ಬಗ್ಗೆ ಸ್ವಲ್ಪವೂ ಯೋಚಿಸದೇ ಶತ್ರು ಪಡೆಯ ಆರು ಜನರನ್ನು ಕೊಂದು ತನ್ನ ಪ್ರಾಣವನ್ನು ಅರ್ಪಿಸಿದ ಆ ಬಿಸಿ ರಕ್ತದ ಯುವಕನ ಹೋರಾಟದ ಕಥೆಯನ್ನು ಓದೋಣ ಬನ್ನಿ.

24 ವರ್ಷದ ಹುಡುಗ ಆರು ಜನ ಶತ್ರುಗಳನ್ನು ಸದೆ ಬಡೆದ ಕಥೆಯೇ ರೋಚಕ. ಅವನು ತನ್ನ ನಾಳೆಯ ಬಗ್ಗೆ ಯೋಚಿಸಲೇ ಇಲ್ಲ. ಭಾರತಾಂಬೆಗೆ ತನ್ನ ಜೀವವನ್ನು ಸಮರ್ಪಿಸಿ ಅಮೂಲ್ಯ ಸಮಯದಲ್ಲಿ ಭಾರತೀಯ ಸೇನೆಗೆ Point 4812 ಪ್ರದೇಶವನ್ನು ವಶಪಡಿಸಿಕೊಟ್ಟ ಆತನೇ “ಲೆಫ್ಟಿನಂಟ್ ಕೀಶಿಂಗ್ ಕ್ಲೀಫರ್ಡ್ ನೋಂಗ್ರೂಮ್”.

ನೋಂಗ್ರೂಮ್ ಮೇಘಾಲಯದ ಶಿಲಾಂಗ್’ನಲ್ಲಿ ಮಾರ್ಚ್ 7 1975 ರಂದು ಕ್ರಿಸ್ಚಿಯನ್ ಮನೆತನದಲ್ಲಿ ಜನಿಸಿದ. ಈತನ ತಂದೆ ಕೀಶಿಂಗ್ ಪೀಟರ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ತಾಯಿ ಬೇಲೀ ಗೃಹಿಣಿಯಾಗಿದ್ದರು. ನೋಂಗ್ರೂಮ್ ಶಾಲೆಯಲ್ಲಿ  ತುಂಬಾ ಪ್ರಾಮಾಣಿಕ ಮತ್ತು ವಿಧೇಯ ವಿಧ್ಯಾರ್ಥಿಯಾಗಿದ್ದ. ಮೃದು ಸ್ವಭಾವದ ನೋಂಗ್ರೂಮ್ ಯಾರ ತಂಟೆಗೂ ಹೋಗದ ಅತ್ಯಂತ ಶಾಂತ ಸ್ವಭಾವದ ವಿದ್ಯಾರ್ಥಿಯಾಗಿ ಎಲ್ಲರ ಮನ ಗೆದ್ದಿದ್ದ. ನೋಂಗ್ರೂಮ್’ಗೆ ಇಷ್ಟದ ವಿಷಯ ಎಂದರೆ ಸಂಗೀತ ಕೇಳುವುದು. ಇದಲ್ಲದೆ ನೋಂಗ್ರೂಮ್ ಆತನ ಶಾಲೆಯ ಫುಟ್ಬಾಲ್  ತಂಡದ ನಾಯಕನಾಗಿದ್ದ. ಆತನಿಗೆ ಫೂಟ್ಬಾಲ್  ಅಂದರೆ ಪ್ರಾಣವಾಗಿತ್ತು. ಆತನ ಉದ್ದೇಶ ಒಂದೇ ಆಗಿತ್ತು ಅದು ಸೈನ್ಯಕ್ಕೆ ತಾನು ಸೇರಬೇಕೆಂಬುದು. ಹಾಗಾಗಿಯೇ ಆತ ಫುಟ್ಬಾಲ್ ಆಡುವ ಮೂಲಕ ತನ್ನ ದೇಹವನ್ನು ದಂಡಿಸುತ್ತಿದ್ದ ಮತ್ತು ಸದಾ ಕಾಲ ಫಿಟ್ ಆಗಿರಲು ಪ್ರಯತ್ನಿಸುತ್ತಿದ್ದ.

ಸೈಂಟ್ ಆಂಥೋನಿ ಕಾಲೇಜ್’ನಲ್ಲಿ ರಾಜ್ಯಶಾಸ್ತ್ರದಲ್ಲಿ ಪದವಿ ಮುಗಿಸಿದ ನೋಂಗ್ರೂಮ್ ಕಾಲೇಜ್ನಲ್ಲಿ ಕೂಡ ಆಟ ಹಾಗೂ ಪಾಠ ಎರಡರಲ್ಲೂ ಮುಂದಿದ್ದ. ಆತನಲ್ಲಿ ತಾನು ಸೈನ್ಯಕ್ಕೆ ಸೇರಬೇಕೆಂಬ ಕನಸು ಮತ್ತು ಛಲ ಎರಡೂ ಇತ್ತು ಪರಿಣಾಮ ಆತ ಚೆನ್ನೈನಲ್ಲಿರುವ ಆಫಿಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಟ್ರೈನಿಂಗ್’ಗೆ ಸೇರಿಕೊಂಡು ಆ ಪದವಿಯನ್ನೂ ಕೂಡ ಯಶಸ್ವಿಯಾಗಿ ಮುಗಿಸುತ್ತಾನೆ.ಟ್ರೈನಿಂಗ್ ಮುಗಿಸಿದ ನೋಂಗ್ರೂಮ್’ನನ್ನು ಜಮ್ಮು & ಕಾಶ್ಮೀರ್ ಲೈಟ್ ಇನ್ಫೆಂಟ್ರೀಯ ಹನ್ನೆರಡನೇ ಬೆಟಾಲಿಯನ್’ಗೆ ನೇಮಕ ಮಾಡಲಾಯಿತು. ಅದಾಗಲೇ ಕಾರ್ಗಿಲ್ ಯುದ್ಧ ಘೋಷಣೆಯಾಗಿತ್ತು. ನೋಂಗ್ರೂಮ್’ಗೆ ಆಗ ವಯಸ್ಸು ಕೇವಲ 24. ಯುದ್ಧದ ಸಮಯದಲ್ಲಿ ನೋಂಗ್ರೂಮ್’ನ ಬೆಟಾಲಿಯನ್ ಅನ್ನು ಬೇಟಾಲಿಕ್ ಸೆಕ್ಟರ್’ಗೆ ಕಳಿಸಲಾಯಿತು. ನೋಂಗ್ರೂಮ್ ತನ್ನ ದೇಶಕ್ಕಾಗಿ ಹೊರಡಬೇಕು ಎಂಬ ಮನಸ್ಥಿತಿಯಲ್ಲಿಯೇ ತನ್ನ ಬೆಟಾಲಿಯನ್ ಜೊತೆ ಹೊರಟ. 24ರ ತರುಣ ಭಾರತಾಂಬೆಯ ಸೇವೆಗೆ ಸರ್ವ ಸನ್ನದ್ಧನಾಗಿ ಹೊರಟಿದ್ದ.

ಅದು 1999 ಜೂನ್ 30ರ ಸಂಜೆ, ಲೆಫ್ಟಿನಂಟ್ ನೋಂಗ್ರೂಮ್ ನ ತಂಡಕ್ಕೆ Point 4812 ಪ್ರದೇಶವನ್ನು ಭದ್ರತೆಯಿಂದ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿಯನ್ನು ನೀಡಲಾಗಿತ್ತು. Point 4812 ಭಾರತದ ಪಾಲಿಗೆ ಅತ್ಯಂತ ಮಹತ್ತರ ಮತ್ತು ಗರಿಷ್ಟ ಎತ್ತರದಲ್ಲಿರುವ ಪ್ರದೇಶ. “ಲೆಫ್ಟಿನಂಟ್ ಕೀಶಿಂಗ್ ಕ್ಲೀಫರ್ಡ್ ನೋಂಗ್ರೂಮ್” Point 4812 ಪ್ರದೇಶವನ್ನು ಶತ್ರು ದಾಳಿಯಿಂದ ರಕ್ಷಿಸಬೇಕಿತ್ತು. ಮೊದಲನೆಯದಾಗಿ Point 4812 ಅನ್ನು ಏರುವುದೇ ಬಲು ಕ್ಲಿಷ್ಟಕರವಾಗಿತ್ತು. 90 ಡಿಗ್ರೀ ಲಂಬವಾಗಿರುವ ಆ ಪ್ರದೇಶವನ್ನು ಏರುವುದೇ ಒಂದು ದೊಡ್ಡ ಸಾಹಸವಾಗಿತ್ತು. ಆದರೆ ನೋಂಗ್ರೂಮ್ ಮತ್ತು ಆತನ ತಂಡ ಈ ಕೆಲಸವನ್ನು ಸವಾಲಾಗಿ ತೆಗೆದುಕೊಂಡಿತು. ನೋಂಗ್ರೂಮ್ ಪಕ್ಕಾ ತಿಳಿದಿತ್ತು ಮೇಲೆ ಪಾಕಿಗಳು ಬೀಡು ಬಿಟ್ಟಿರುತ್ತಾರೆ ಎಂದು. ಆದರೂ ಕಿಷ್ಟ ಹಾದಿಯಲ್ಲಿ ಪಯಣಿಸಿ Point 4812 ವನ್ನು ಏರಿತು ಲೆಫ್ಟಿನಂಟ್ ನೋಂಗ್ರೂಮ್ ತಂಡ.

Point 4812 ದಲ್ಲಿ ಅದಾಗಲೇ ಪಾಕಿಸ್ತಾನದ ಸೈನಿಕರು ತಮ್ಮ ಬಂಕರ್ ಗಳ ಮೂಲಕ ಬೀಡು ಬಿಟ್ಟಿದ್ದರು. ಅಲ್ಲಿರುವ ಬಂಡೆಗಳ ನಡುವೆ ಪಕ್ಕಾ ವ್ಯವಸ್ತಿತವಾಗಿ ತಮ್ಮ ಬಂಕರ್’ಗಳ ಜೊತೆ ಕಾದಾಡಲು ಸಿದ್ದರಾಗಿ ನಿಂತಿದ್ದರು ಪಾಕಿಗಳು. ಭಾರತೀಯ ಸೈನಿಕರನ್ನು ಕಾಣುತ್ತಲೆ ತಮ್ಮ ಫಿರಂಗಿಗಳ ಮೂಲಕ ಧಾಳಿಯಿಡಲು ಶುರು ಮಾಡಿದ್ದರು ಶತ್ರು ಸೈನಿಕರು. ಅಷ್ಟು ಕ್ಲಿಷ್ಟಕರವಾದ ಹಾದಿಯನ್ನು ಮುಗಿಸಿ ಬೆಟ್ಟದ ತುದಿಗೆ ಆಗ ತಾನೇ ತಲುಪಿದ್ದ ನೋಂಗ್ರೂಮ್ ಮತ್ತು ಆತನ ತಂಡಕ್ಕೆ ಸುಧಾರಿಸಿಕೊಳ್ಳಲೂ ಸಮಯ ಸಿಗಲಿಲ್ಲ. ಪಾಕಿಸ್ತಾನದ ಸೈನಿಕರ ಮಶೀನ್ ಗನ್’ಗೆ ಭಾರತೀಯ ಸೈನಿಕರು ಪ್ರತ್ಯುತ್ತರ ನೀಡಲು ಶುರು ಮಾಡಿದ್ದರು. ಸುಮಾರು ಎರಡು ತಾಸುಗಳ ಕಾಲ ದೀರ್ಘ ಹೋರಾಟ Point 4812ದಲ್ಲಿ ನಡೆದಿತ್ತು. ಎರಡು ತಾಸು ಹೋರಾಡಿದ ನೋಂಗ್ರೂಮ್’ಗೆ ಈ ಹೋರಾಟ ಬೇಗ ಮುಗಿಯುವ ಲಕ್ಷಣ ಕಾಣಲಿಲ್ಲ ಆಗ ಆತ ತನ್ನ ಪ್ರಾಣವನ್ನೂ ಲೆಕ್ಕಿಸದೆ ಕೈನಲ್ಲಿ ಗ್ರೆನೇಡ್ ಹಿಡಿದು ಫೈಯರ್ ಜೋನ್ ಅನ್ನು ದಾಟಿ ಹೊರಟೇ ಬಿಟ್ಟ.!!! ಪ್ರಾಣವನ್ನೂ ಲೆಕ್ಕಿಸದೆ ಗ್ರೆನೇಡ್ ಹಿಡಿದು ಬರುತ್ತಿದ್ದ ನೋಂಗ್ರೂಮ್’ನ ನೋಡಿ ಪಾಕಿಸ್ತಾನದ ಸೈನಿಕರು ಬೆಚ್ಚಿದ್ದರು.ತನ್ನ ಕೈನಲ್ಲಿರುವ ಗ್ರೆನೇಡ್ ಅನ್ನು ಶತ್ರುಗಳ ಬಂಕರ್ ಗಳ ಮೇಲೆ ಎಸೆಯುವಾಗ ಅದಾಗಲೇ ಸುಮಾರು ಗುಂಡುಗಳು ಆತನ ಮೈ ಹೊಕ್ಕಿದ್ದವು.

ನೋಂಗ್ರೂಮ್ ಎಸೆದ ಗ್ರೆನೇಡ್ ಪಾಕಿಸ್ತಾನದ ಬಂಕರ್ ಅನ್ನು ಛಿದ್ರಗೊಳಿಸಿತ್ತು ಜೊತೆಗೆ ಪಾಪಿ ರಾಷ್ಟ್ರದ ಆರು ಜನ ಶತ್ರು ಸೈನಿಕರು ಸಾವನ್ನಪ್ಪಿದ್ದರು. ಕೊನೆಗೆ ಉಳಿದವನೊಬ್ಬನೇ ಆಗಿತ್ತು. ಆತನ ಕೈನಲ್ಲಿ ಮಶೀನ್ ಗನ್ ಇತ್ತು ಆತ ನೋಂಗ್ರೂಮ್’ನ ಮೇಲೆ ಸತತ ಗುಂಡಿನ ಮಳೆ ಸುರಿಯುತ್ತಿದ್ದ.ದೂರ ನಿಂತ ಉಳಿದ  ಭಾರತೀಯ ಸೈನಿಕರು ನೋಂಗ್ರೂಮ್’ನನ್ನು ಮರಳಿ ಬರುವಂತೆ ಕೂಗಿ ಕರೆಯುತ್ತಿದ್ದರು ಆದರೆ ಪಾಪಿಗಳ ಸರ್ವನಾಶ ಮಾಡದೇ ನಾ ಮರಳಲಾರೆ ಎಂಬುದೇ ಆತನ ಉತ್ತರವಾಗಿತ್ತು. ಆತ ತನ್ನ ಜೀವ ಹೊಕ್ಕಿದ್ದ ಗುಂಡುಗಳ ಬಗ್ಗೆ ಯೋಚಿಸಲೇ ಇಲ್ಲ. ತನ್ನ ನಾಳೆಗಳ ಬಗ್ಗೆ ಯೋಚಿಸಲೇ ಇಲ್ಲ. “ಒಬ್ಬ ಮಿಕ್ಕಿದ್ದಾನೆ ಅವನನ್ನೂ ಮುಗಿಸಿಯೇ ಬರುತ್ತೇನೆ” ಎಂಬಂತಿತ್ತು ಆತನ ಉತ್ತರ. ಉಳಿದ ಒಬ್ಬ ಶತ್ರು ಸೈನಿಕನ ಮುಖಕ್ಕೆ ಬಾಕ್ಸಿಂಗ್ ಆಟಗಾರನಂತೆ ಗುದ್ದಿ ಆತನಿಂದ ಗನ್ ಕಿತ್ತುಕೊಂಡ ನೋಂಗ್ರೂಮ್  ಆತನ ಮೇಲೆ ದಾಳಿ ನಡೆಸಿ ಅವನನ್ನೂ ಮುಗಿಸುತ್ತಾನೆ.ಅಷ್ಟೊತ್ತಿಗಾಗಲೇ ಲೆಫ್ಟಿನಂಟ್ ನೋಂಗ್ರೂಮ್ನ ಶಕ್ತಿ ಕುಗ್ಗಿತ್ತು. ದೇಹ ಹೊಕ್ಕಿದ್ದ ಗುಂಡುಗಳು ಆತ ಕುಸಿದು ಬೀಳುವಂತೆ ಮಾಡಿದ್ದವು. 24 ವರ್ಷದ ತರುಣ ಲೆಫ್ಟಿನಂಟ್ ತನ್ನ ಪ್ರಾಣವನ್ನು ಬಿಟ್ಟಿದ್ದ. ಆದರೆ ಭಾರತದ ಸೈನಿಕರು ಅದಾಗಲೇ Point 4812 ಬೆಟ್ಟವನ್ನು ಯಶಸ್ವಿಯಾಗಿ ವಶಪಡಿಸಿಕೊಂಡು ತ್ರಿವರ್ಣ ಧ್ವಜವನ್ನು ಹಾರಿಸಿಯಾಗಿತ್ತು. ಒಬ್ಬನೇ ವೀರ ಸೈನಿಕ ಏಳು ಜನ ಶತ್ರು ಸೈನಿಕರ ನಾಶ ಮಾಡಿ ಅವರ ಬಂಕರ್’ಗಳನ್ನು ಉಡಾಯಿಸಿದ್ದ. ಕೇಸರಿ ಬಿಳಿ ಹಸಿರಿನ ತ್ರಿವರ್ಣ ಧ್ವಜ Point 4812 ನ ತುತ್ತ ತುದಿಯಲ್ಲಿ ಹಾರಾಡುತ್ತಿತು.

ಭಾರತ ಸರ್ಕಾರ ಲೆಫ್ಟಿನಂಟ್ ಕೀಶಿಂಗ್ ಕ್ಲೀಫರ್ಡ್ ನೋಂಗ್ರೂಮ್’ನ ಈ ಅಪ್ರತಿಮ ಹೋರಾಟದ ಪ್ರತೀಕವಾಗಿ ಆತನಿಗೆ ಮರಣೋತ್ತರವಾಗಿ ಮಹಾವೀರ ಚಕ್ರ ಪ್ರಶಸ್ತಿಯನ್ನು ಆಗಸ್ಟ್ 15,1999 ರಲ್ಲಿ ನೀಡಿ ಗೌರವಿಸಿತು.

ಮೇಘಾಲಯದ ವೀರ ಪುತ್ರ ಭಾರತಾಂಬೆಗಾಗಿ ಕಾರ್ಗಿಲ್ ಯುದ್ಧದಲ್ಲಿ ತನ್ನ ಪ್ರಾಣವನ್ನು ನೀಡಿದ್ದ. ಕಾರ್ಗಿಲ್’ನಲ್ಲಿ ಹೋರಾಡಿದ ಅದೆಷ್ಟೋ ಜನರ ಸೈನಿಕರ ಭಿಕ್ಷೆ ನಮ್ಮ ಇವತ್ತಿನ ಈ ವಿಜೃಂಭಣೆಯ ಬದುಕು.ವೀರ ಯೋಧರಿಗೆ ಕನಿಷ್ಟ ಗೌರವ ಸಲ್ಲಿಸಲೂ ಜಾತಿ, ಧರ್ಮ ಎಂದು ಉದ್ದುದ್ದ ಬರೆಯುವ “ಭಾರತೀಯರಿಗೆ” ಏನೆನ್ನಬೇಕೋ ತಿಳಿಯುತ್ತಿಲ್ಲ.

ಈ ವೀರ ಯೋಧನಿಗೊಂದು ದೊಡ್ಡ ಸಲಾಮ್.

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!