ಪ್ರಚಲಿತ

ಸಂವೇದನೆ ಸತ್ತ ಸರ್ಕಾರದಿಂದ ಇನ್ನೇನು ನಿರೀಕ್ಷೆ ಮಾಡೋಣ?

ಮಾನ್ಯ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಮೂರು ವರ್ಷಗಳನ್ನ ಪೂರೈಸಿಬಿಟ್ಟಿದೆ; ನುಡಿದಂತೆ ನಡೆದಿದ್ದೇವೆ ಎಂಬ ಬೋರ್ಡು ಹಾಕಿಕೊಂಡವರು ಮಾಡಿದ ಅವಾಂತರಗಳು ಜನರ ಮನದಲ್ಲಿರುವಾಗ, ಸಿಎಂ ಅದೇನೋ ಒಂದಷ್ಟು ಫಲಾನುಭವಿಗಳನ್ನು ಸೇರಿಸಿ ಕೆಲ ದಿನಗಳ ಹಿಂದೆ ಜನ-ಮನ ಕಾರ್ಯಕ್ರಮವನ್ನು ಕೂಡ ಮಾಡಿ ಮುಗಿಸಿಬಿಟ್ಟರು. ಸಾಕಷ್ಟು ಹಗ್ಗ-ಜಗ್ಗಾಟದ ಬಳಿಕ ಮಂತ್ರಿ ಮಂಡಲ ಪುನಾರಚನೆ ಭಾಗ್ಯವನ್ನು ಕೂಡ ಜನ ಈಗ ನೋಡಿಯಾಗಿದೆ. ಇದೆಲ್ಲದರ ನಡುವೆ ರಾಜ್ಯದ ಜನತೆಗೆ ಅಭಿವೃದ್ಧಿ ಎಂಬುದನ್ನು ನೋಡುವಭಾಗ್ಯಮಾತ್ರ ಬರಲೇ ಇಲ್ಲ.

ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಎಡವಟ್ಟುಗಳನ್ನು ಮಾಡಿಕೊಳ್ಳುತ್ತ ಬಂದ ಸರ್ಕಾರ ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸುತ್ತ ಮೈಮರೆಯಿತು. ಆಹಾರ ಸ್ವಾತಂತ್ರ್ಯವೆಂದು ಬೊಬ್ಬಿರಿವರ್ಯಾರೋ ಕೊಟ್ಟ ಹುಚ್ಚು ಸಲಹೆಯ ಮೇರೆಗೆ, 2010ರಲ್ಲಿ ಗೋರಕ್ಷಣೆಗೆ ಬಿಜೆಪಿ ಸರ್ಕಾರ ರೂಪಿಸಿದ್ದ ಗೋಹತ್ಯಾ ನಿಷೇದ ವಿದೇಯಕವನ್ನು ಕಿತ್ತು ಹಾಕಿತು. ಜನರ ಭಾವನೆಗೆ ಕವಡೆ ಕಿಮ್ಮತ್ತು ಕೊಡದೆ ಚುಣಾವಣಾ ಸಂದರ್ಭ ನೀಡಿದ ಭರವಸೆ ಈಡೇರಿಸುವ ಭರದಲ್ಲಿ ಮಾಡಿದ ಮೊದಲನೆಯ ಘೋರ ಎಡವಟ್ಟಿದು. ಸದನದಲ್ಲಿ ಯಾವುದೇ ಚರ್ಚೆಗೆ ಅವಕಾಶ ನೀಡದೆ, ವಿರೋಧ ಪಕ್ಷದ ಪ್ರತಿಭಟನೆಯ ನಡುವೆಯೂ ಅಂಗೀಕಾರಗೊಂಡ ಈ ನಿರ್ಣಯವನ್ನು ರಾಜ್ಯದ ಜನತೆ ಮರೆಯಲಾರರು. ಈ ಮೂಲಕ ಗೆದ್ದದ್ದು ಟೌನ್_ಹಾಲ್ ಬುದ್ಧಿಜೀವಿಗಳ ಬುದ್ಧಿಗೇಡಿತನ ಹಾಗು ಅವರ ಮಾತಿನಂತೆ ನಡೆಯುತ್ತಿರುವ ಸಿದ್ದರಾಮಯ್ಯನವರ ಉಡಾಫೆ.

ನಂತರ ಸಂಕಷ್ಟದಲ್ಲಿರುವ ಮಠ-ಮಾನ್ಯಗಳಲ್ಲಿ ಸರ್ಕಾರ ತಾನೇ ಯಜಮಾನಿಕೆ ಮಾಡಲು ಮುಂದಾಯ್ತು. ಕಾನೂನು ಸಚಿವ ಟಿ ಬಿ ಜಯಚಂದ್ರರವರು ಸದನದ ಮುಂದಿಟ್ಟ ಈ ವಿದೇಯಕದ ಪ್ರಕಾರ ಆಡಳಿತ ಮಂಡಳಿ ಅಥವಾ ಮುಖ್ಯಸ್ಥರು ಸಂಸ್ಥಾನ/ಮಠ/ದೇವಾಲಯ ನಡೆಸಲು ಸಾಧ್ಯವಾಗದಿದ್ದಲ್ಲಿ ಅಥವಾ ಮುಖ್ಯಸ್ಥರು ತೀರಿಕೊಂಡಾಗ, ಉತ್ತರಾಧಿಕಾರಿ ಅಪ್ರಾಪ್ತನಾಗಿದ್ದಾಗ/ಇಲ್ಲದಿದ್ದಾಗ, ಮುಜರಾಯಿ ಕಮೀಷನರ್‍ಗೆ ಆಡಳಿತ ಮಂಡಳಿಯಲ್ಲಿ ಕೊರತೆಯಿದೆ ಅನ್ನಿಸಿದಾಗ ಹೀಗೆಲ್ಲ ಒಂದು ಪಟ್ಟಿ ಮಾಡಿಕೊಂಡು ಹಿಂದೂ ಧಾರ್ಮಿಕ ಶೃದ್ಧಾ ಕೇಂದ್ರಗಳನ್ನು ತನ್ನ ಹಿಡಿತಕ್ಕೆ ತೆಗೆದು ಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಲಾಯ್ತು. ಆ ಸಂದರ್ಭದಲ್ಲಿ ವಿಪಕ್ಷ ಬಿಜೆಪಿಯು ಸರ್ಕಾರದ ನಾಲ್ಕು ಮಂತ್ರಿಗಳ ವಿರುದ್ಧ ಗಂಭೀರ ಆರೋಪ ಮಾಡಿ – ರಾಜಿನಾಮೆಗೆ ಪಟ್ಟು ಹಿಡಿದಿತ್ತು. ಸರ್ಕಾರಕ್ಕೆ ಹೇಗಾದರೂ ಮಾಡಿ ಜನರ ಗಮನವನ್ನು ಬೇರೆಡೆ ಸೆಳೆಯಬೇಕಾಗಿತ್ತು. ಆದರೆ ಸರ್ಕಾರದ ಈ ನಡೆಗೆ ರಾಜ್ಯದ ಮಠಾಧೀಶರ ವಿರೋಧ ಹಾಗೂ ವಿಪಕ್ಷದ ಒತ್ತಡ ತೊಡಕಾಗಿ ಕೊನೆಗೆ ಈ ನಿರ್ಧಾರವನ್ನು ಕೈಬಿಟ್ಟಿತು.

ಅಗ್ಗದ ಪ್ರಚಾರಕ್ಕಾಗಿ ಭಾಗ್ಯಗಳ ಹಿಂದೆ ಬಿದ್ದ ಸರ್ಕಾರ ಒಡೆದು ಆಳುವ ನೀತಿಯನ್ನೇ ಅನುಸರಿಸಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅಧಿಕಾರ ಹಿಡಿದ ಸಿದ್ಧರಾಮಯ್ಯ, ದುಡಿವ ಕೈಗಳಿಗೆ ಕೆಲಸ ನೀಡುವ ಬದಲು ಬಾಯಿಗೇ ಅನ್ನವಿಕ್ಕಲು ಮುಂದಾದರು. ಒಂದು ರೂಪಾಯಿ ಅಕ್ಕಿಯ – ಅನ್ನಭಾಗ್ಯ ನಮ್ಮ ರಾಜ್ಯಕ್ಕೆ ಸರಿಹೊಂದದ ನಿರ್ಧಾರವಾಗಿತ್ತು. ಕೇಂದ್ರದ ನೆರವನ್ನು ಈ ರೀತಿ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಬಳಸಿದ್ದು ವ್ಯಾಪಕ ಚರ್ಚೆಯಾದರೂ ಸರ್ಕಾರ ಜಪ್ಪಯ್ಯ ಎನ್ನಲಿಲ್ಲ.

ರಾಜ್ಯದ ಪ್ರಾಥಮಿಕ ಶಾಲೆಯ ಮಕ್ಕಳ ಎಳೆ ಮನಸ್ಸಿಗೆ ಮೀಸಲಾತಿ ಎಂದರೆ ಏನೆಂಬುದು ಇನ್ನೂ ಗೊತ್ತಾಗದ ವಯಸ್ಸು. ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸದಲ್ಲಿ ಮೀಸಲಾತಿ ಕಲ್ಪಿಸಲು ಹೊರಟ ಸರ್ಕಾರವನ್ನು ಈ ರಾಜ್ಯ ಹಿಂದೆಂದೂ ಕಂಡಿಲ್ಲ. ಸಾರ್ವಜನಿಕವಾಗಿ ತೀರ್ವ ಟೀಕೆಗೆ ಗುರಿಯಾದ ಈ ಮೀಸಲು ಭಾಗ್ಯಮಕ್ಕಳ ಮುಗ್ದ ಮನಸ್ಸಲ್ಲಿ ಜಾತಿಯ ಕಂದರ ನಿರ್ಮಾಣ ಮಾಡುವ ಅಪಾಯವಿತ್ತು. ಅಹಿಂದ ಜಪದೊಂದಿಗೆ ಅಧಿಕಾರ ಹಿಡಿದ ಸಿದ್ಧರಾಮಯ್ಯನವರ ಬಹುತೇಕ ನಿರ್ಧಾರಗಳು ಈ ರೀತಿಯ ಓಲೈಕೆಯದೇ ಆಗಿವೆಯೇ ಹೊರತು ಅವುಗಳಲ್ಲಿ ಸಮಾಜಮುಖಿ ಚಿಂತನೆಯೂ ಇಲ್ಲ, ಯಾರ ಹಿತವೂ ಇಲ್ಲ! ಮಧ್ಯಮ ವರ್ಗದ ಬಹುಸಂಖ್ಯಾತರಿಗೆ ಇವೆಲ್ಲ ಕೇವಲ ಹುಚ್ಚಾಟದಂತೆ ಕಂಡಿದೆ. ಅಲ್ಲದೆ ಸರ್ಕಾರ ಯಾರನ್ನೆಲ್ಲ ಫಲಾನುಭವಿಗಳನ್ನಾಗಿಸಲು ಹವಣಿಸಿತೊ ಅವರಲ್ಲಿನ ಸ್ವಾಭಿಮಾನವುಳ್ಳವರು, ಸರ್ಕಾರವೇನು ಭಾಗ್ಯಗಳಮೂಲಕ ತಮ್ಮ ಮಾನ ಕಳೆಯ ಹೊರಟಿದೆಯೇ ಎಂದು ಯೋಚಿಸಲು ಶುರು ಮಾಡುವಂತಾಯ್ತು.

ಇದ್ಯಾವುದರ ಪರಿವೆಯೇ ಇಲ್ಲದೆ ತಮ್ಮ ತಲೆಯಲ್ಲಿ ತುಂಬಿ ಹೋಗಿದ್ದ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವತ್ತ ಮತ್ತಷ್ಟು ಭಂಡತನದೊಂದಿಗೆ ಮುಂದುವರೆದದ್ದರ ಉದಾಹರಣೆಂಯೇಶಾದಿ ಭಾಗ್ಯ‘. ತುಘಲಕ್ ದರ್ಬಾರಿನ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಮದುವೆಯಾಗುವ ಅಲ್ಪ ಸಂಖ್ಯಾತ ಜೋಡಿಗೆ ಹಾಸಿಗೆ – ದಿಂಬು – ಮಂಚ ಕೊಟ್ಟು ಮಲಗಿಸುವ ಕೆಲಸವನ್ನು ಸರ್ಕಾರ ಮಾಡಲಿ ಎಂದು ಯಾವ ಮುಠ್ಠಾಳನೂ ಬಯಸಿರಲಿಲ್ಲ. ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮ ಸಲಹೆಗಾರರ ತಲೆಯಲ್ಲಿ ಇನ್ನೂ ಎನೇನು ಯೋಚನೆಗಳಿವೆಯೋ, ನೆನೆಸಿಕೊಂಡರೆ ಸಖೇದಾಶ್ಚರ್ಯವಾಗುತ್ತದೆ!

ಸಿದ್ದು ಸರ್ಕಾರದಲ್ಲಿ ಬಹಳ ಸದ್ದು ಮಾಡಿದ್ದು ಭಾಗ್ಯಹಾಗೂಜಯಂತಿಮಾತ್ರ! ಟಿಪ್ಪು ಜಯಂತಿಯನ್ನು ಶುರು ಮಾಡುವ ಮೂಲಕ ಕೊಡಗು-ಮೈಸೂರು ಭಾಗದ ಜನತೆಯ ನೆಮ್ಮದಿಗೆ ಕಲ್ಲು ಹಾಕಿತು ಸರ್ಕಾರ. ತೀರ್ವ ವಿರೋಧವಿದ್ದರೂ ತನ್ನ ಹಠಮಾರಿ ಧೋರಣೆಯಿಂದಾಗಿ ಸರ್ಕಾರೀ ಕಾರ್ಯಕ್ರಮವನ್ನಾಗಿ ಆಚರಿಸಿತು. ಟಿಪ್ಪು ಒಬ್ಬ ಕ್ರೂರಿ – ಮತಾಂಧ ಎಂಬುದು ಇತಿಹಾಸ ದಾಖಲಿಸಿದ ಸತ್ಯ ಹಾಗೂ ಸಾರ್ವತ್ರಿಕ ಅಭಿಪ್ರಾಯ ಕೂಡ ಎಂಬುದು ದಪ್ಪ ಚರ್ಮದ ಸರ್ಕಾರಕ್ಕೆ ಮಹತ್ವದ್ದಾಗಿರಲಿಲ್ಲ. ಇನ್ನು ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯ ಬೇರೆ ಬೇರೆ ಎಂದು ಹಿರಿಯ ಸಂಶೋಧಕರಾದ ಚಿದಾನಂದ ಮೂರ್ತಿಯವರು ಮುಖ್ಯಮಂತ್ರಿಗಳ ಗಮನ ಸೆಳೆದರೂ ಕೂಡ ಸರಿಯಾದ ಅಧ್ಯಯನವಿಲ್ಲದೆ ಜಯಂತಿ ಆಚರಣೆ ನಡೆಸಿತು.

ಮುಖ್ಯಮಂತ್ರಿಗಳ ಕೈಲಿರುವ ಹ್ಯೂಬ್ಲೋಟ್ (Hublot)ವಾಚನ್ನು ಯಾರು ತಂದರು ಎಂಬುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಯ್ತು, ಕೊಂಡದ್ದು-ಕದ್ದದ್ದು-ಉಡುಗೊರೆ ಹೀಗೆ ಚಿತ್ರ-ವಿಚಿತ್ರ ತಿರುವು ಪಡೆದ ಈ ಕೇಸ್‍ನಲ್ಲಿ ಅಮೋಘ ಒಂದು ತಿಂಗಳ ನಂತರ ಸೌದಿಯಲ್ಲಿರುವ ವಾರಸುದಾರರು ನೆನಪಾಗಿಬಿಲ್ಲು ಕಳಿಸಿದರು. ಅಲ್ಲಿವರೆಗೆ ಅವಸ್ಥೆಯಿಂದ ಹೊರ ಬರುವವ್ಯವಸ್ಥೆಮಾಡಲು ಸಮಯ ಹಿಡಿಯಿತೇ ಎಂಬುದು ನಿಮ್ಮ ವಿವೇಚನೆಗೆ ಬಿಟ್ಟದ್ದು.

ಸಚಿವ ಖಮರುಲ್ಲ ಇಸ್ಲಾಂ ಮೇಲೆ ವಕ್ಫ್ ಆಸ್ತಿ ಕಬಳಿಕೆಯ ಅರೋಪ ಕೇಳಿ ಬಂದಾಗ ಜಾಣಕಿವುಡು ತೋರಿತು ಸರ್ಕಾರ. ಪ್ರತಿಪಕ್ಷವು ಬೆನ್ನು ಬಿಡದೆ ಅಧಿವೇಶನದಲ್ಲಿ ವರದಿ ಮಂಡಿಸಲು ಪಟ್ಟು ಹಿಡಿದಾಗ, ಎಂದಿನಂತೆಯೇ ಮೊಂಡುತನ ತೋರಿ ಇದುವರೆಗೂ ನಿರುಮ್ಮಳವಾಗಿದೆ. ಸಭಾಪತಿಗಳು ಮೂರು ಬಾರಿ ನಿರ್ದೇಶನ ನೀಡಿದರೂ ಹಗ್ಗ-ಜಗ್ಗಾಟ ನಡೆಸಿ ಕೊನೆಗೂ ವಿಷಯ ರಾಜ್ಯಪಾಲರ ಅಂಗಳಕ್ಕೆ ಹೋಗುವಂತಾಯ್ತು. ಸಚಿವ ಆಂಜನೇಯ, ಸಚಿವ ಬಾಬುರಾವ್ ಚಿಂಚನಸೂರ್, ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೀಗೆ ಸಾಲು – ಸಾಲಾಗಿ ಬ್ರಷ್ಟಾಚಾರದ ಆಪಾದನೆಗಳು ಬಂದಾಗಲೂ ಆಡಳಿತಾರೂಢ ಕಾಂಗ್ರೆಸ್ಸಿನದ್ದು ಜಾಣ ಮೌನ!

ಪ್ರಗತಿಪರತೆಯ ಸೋಗಿನ ಕೆಲವರು ಈ ಸರ್ಕಾರದ ಮೂಲಕ ಹೇಗಾದರೂ ಜನರ ನಂಬಿಕೆಗಳನ್ನ ದಮನ ಮಾಡಬೇಕೆಂಬ ಪಣ ತೊಟ್ಟಂತಿದೆ. ಮೌಢ್ಯ ನಿಷೇಧ ಮಾಡುತ್ತೇವೆ ಎಂದು ಹೊರಟವರ ಅಜೆಂಡಾ ಬಹು ಸಂಖ್ಯಾತರ ಭಾವನೆಗಳನ್ನ ಘಾಸಿಗೊಳಿಸುವುದಷ್ಟೆ. ಕೆಲವು ಸಂಗತಿಗಳನ್ನ – ಕೆಲವರನ್ನ ಮಾತ್ರ ಗುರಿಯಾಗಿಸಿಕೊಂಡು ಹತ್ತಿಕ್ಕುವ ಹುನ್ನಾರ ಅರಿವಿಗೆ ಬರುತ್ತಲೇ ಜನ ಪ್ರತಿರೋಧಿಸಿದರು. ಒಳ್ಳೆಯದು-ಕೆಟ್ಟದ್ದು ಸಾಮಾಜಿಕ ಜೀವನದ ಪ್ರತಿ ಹಂತದಲ್ಲಿಯೂ ಇದೆ, ಜನರಲ್ಲಿ ಅರಿವು ಮೂಡಿಸುವುದರಿಂದ ಅಥವಾ ಸಾಮಾಜಿಕ ಜಾಗೃತಿಯಿಂದ ಸುಧಾರಣೆಯಾಗಬೇಕೆ ಹೊರತು, ಸರ್ಕಾರದ ಕಾನೂನು ಹೇರಿಕೆಯಿಂದಲ್ಲ! ಆಡಳಿತ ನಡೆಸುವವರಿಗೆ ಯಾಕೋ ಇವೆಲ್ಲ ತಿಳಿಯುತ್ತಲೇ ಇಲ್ಲ!

ಸರ್ಕಾರ ಯಾವುದೇ ಯೋಜನೆಯನ್ನ ಜಾರಿಗೆ ತರುವಾಗ,ಅದರ ಘೋಷಣೆಯ ಪೂರ್ವದಲ್ಲಿ ಸಮಗ್ರ ಅಧ್ಯಯನ ಮಾಡಬೇಕಾದದ್ದು, ಸಂಪನ್ಮೂಲ ಲಭ್ಯತೆಯೆಡೆ ಗಮನ ಹರಿಸಬೇಕಾದದ್ದು ತೀರ ಅಗತ್ಯ. ಆದರೆ ಮುಖ್ಯಮಂತ್ರಿಗಳು ಘೋಷಣೆ ಮಾಡಿದ ಅನೇಕ ಯೋಜನೆಗಳಿಗೆ ಸೂಕ್ತ ಸಂಪನ್ಮೂಲದ ಕೊರತೆಯಿದೆ ಎಂಬುದು ಈ ಸರ್ಕಾರದ ಅವಧಿಯಲ್ಲಿ ತುಂಬ ಸಲ ಜಗಜ್ಜಾಹಿರಾಗಿದೆ. ಇದು ಮಾಧ್ಯಮಗಳಲ್ಲಿ ಘೋಷಣೆ ಭಾಗ್ಯವೆಂಬ ಹೆಸರಿನಿಂದ ಪ್ರಸಿದ್ಧಿಯನ್ನೂ ಪಡೆದಿದೆ.

ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳ ಹತ್ಯೆಗಳಾಗಿದ್ದು, ಮೃತ ಅಧಿಕಾರಿಗಳ ಕುಟುಂಬ ವರ್ಗ ಮತ್ತು ಜನತೆ ಬಯಸಿದ್ದು ನಿಷ್ಪಕ್ಷಪಾತ ತನಿಖೆಯಾಗಿ ಅಪರಾಧಿಗಳಿಗೆ ಶಿಕ್ಷೆಯಾಗಲೆಂದು. ಆದರೆ ಸರ್ಕಾರದ ವಿಳಂಬ ಧೋರಣೆಯಿಂದಾಗಿ, ತನಿಖೆ ಯಾವುದೇ ಪ್ರಗತಿ ಕಾಣದೆ ಹೋದದ್ದು ಆಡಳೀತಾರೂಢ ಕಾಂಗ್ರೆಸ್ಸಿನ ಮೇಲೆ ಹಾಗೂ ಪ್ರಭಾವೀ ನಾಯಕರ ಮೇಲೆ ಅನಿವಾರ್ಯವಾಗಿ ಶಂಕೆ ಪಡುವಂತಾಗಿದೆ. ಪ್ರಾಮಾಣಿಕ ಐಏಎಸ್ ಅಧಿಕಾರಿ ಡಿ ಕೆ ರವಿ ಹತ್ಯೆ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಸರ್ಕಾರ ಸುತಾರಾಂ ಸಿದ್ಧವಿರಲಿಲ್ಲ, ತೀರ್ವ ಒತ್ತಡಕ್ಕೆ ಮಣಿದು ಕೊನೆಗೆ ಸಿಬಿಐಗೆ ಕೊಡಲಾಯಿತಷ್ಟೆ. ಇನ್ನು ಮಲ್ಲಿಕಾರ್ಜುನ ಬಂಡೆಯಂತಹ ದಕ್ಷ ಪೋಲೀಸ್ ಅಧಿಕಾರಿಗಳ ಮೇಲೆ ರೌಡಿಗಳ ಅಟ್ಟಹಾಸ ಅವ್ಯಾಹತವಾಗಿ ನಡೆಯುತ್ತಿದ್ದು,ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದು ಸ್ಪಷ್ಟ. ಇತ್ತೀಚೆಗೆ ಡಿ.ವೈ.ಎಸ್.ಪಿ ಅನುಪಮಾ ಶೆಣೈ ರಾಜೀನಾಮೆ ನೀಡಿದ್ದು, ಈಗ ಡಿ.ವೈ.ಎಸ್.ಪಿ ಎಂ ಕೆ ಗಣಪತಿ ಆತ್ಮಹತ್ಯೆ ಇವೆಲ್ಲ ಏನನ್ನು ಸಾರಿ ಹೇಳುತ್ತಿವೆ?

ಗಾರ್ಮೆಂಟ್ ಉದ್ಯೋಗಿಗಳ ಪ್ರತಿಭಟನೆ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿರುವುದು ಇದಕ್ಕೆ ತಾಜಾ ಉದಾಹರಣೆ. ಪೋಲೀಸ್, ಇಂಟಲಿಜೆನ್ಸ ಎಲ್ಲ ಇದ್ದರೂ ಅಗತ್ಯ ಸಿದ್ಧತೆ ಮಾಡಿಕೊಳ್ಳದೆ ಇದ್ದದ್ದರಿಂದ ಬೆಂಗಳೂರು ಹೊತ್ತಿ ಉರಿದದ್ದು, ಅದರಿಂದಾದ ಕೋಟ್ಯಂತರ ರೂಪಾಯಿ ಸಾರ್ವಜನಿಕ ಆಸ್ತಿ-ಪಾಸ್ತಿಯ ಹಾನಿಜನ-ಮನದಲ್ಲಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ, ಅಲ್ಲಿನ ಪರಿಸರ ಇವೆಲ್ಲ ಅರಿವಿದ್ದರೆ, ಇನ್ನೊಂದರ್ಥದಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವ ಮನಸ್ಸಿದ್ದಿದ್ದರೆ ಖಂಡಿತ ಸರ್ಕಾರಕ್ಕೆ ಕಷ್ಟವಿರಲಿಲ್ಲ. ಸದನದ ಒಳಗೂ ಹಾಗೂ ಹೊರಗೂ ಮಾನ್ಯ ಸಿದ್ಧರಾಮಯ್ಯನವರ ಸರ್ಕಾರ ಮಾಡುತ್ತಿರುವುದು ನಿದ್ದೆ‘.

ದೇಶದಾದ್ಯಂತ ಹೆಸರು ಮಾಡಿದ್ದ ಕರ್ನಾಟಕ ಲೋಕಾಯುಕ್ತವನ್ನ ವ್ಯವಸ್ಥಿತವಾಗಿ ಮುಗಿಸಿದ ಸರ್ಕಾರ,ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ಕೆಲಸ ಮಾಡುವ ಎಸಿಬಿ ರಚನೆಮಾಡಿದ ಮಾನ್ಯ ಸಿದ್ಧರಾಮಯ್ಯ ಇನ್ನು ಏನೇನು ಮಾಡುತ್ತಾರೋ, ಕರ್ನಾಟಕದ ಜನತೆ ಇನ್ನೂ ಏನೇನು ನೋಡಬೇಕಿದೆಯೋ!? ಜನತೆ, ವಿರೋಧ ಪಕ್ಷ, ಹಿರಿಯ-ನಿವೃತ್ತ ನ್ಯಾಯಾಧೀಶರು, ಮಾಧ್ಯಮ, ಚಿಂತಕರೆಲ್ಲರ ಒಕ್ಕೊರಲ ವಿರೋಧದ ನಡುವೆಯೂ ದಪ್ಪ ಚರ್ಮದ ಸರ್ಕಾರ ಭಂಡತನದಿಂದ ಮಾಡಿದ ಈ ಕೆಲಸ ನ್ಯಾಯಾಂಗಕ್ಕೆಸಗಿದ ದ್ರೋಹ ಹಾಗೂ ಜನತೆಗೆ ಮಾಡಿದ ಮೋಸವೆಂದೇ ವ್ಯಾಖ್ಯಾನಿಸಬೇಕಾಗುತ್ತದೆ.

ಬರ ಪರಿಸ್ಥಿತಿ ಹೇಗಿದೆ ಎಂಬುದರ ಅರಿವು ಸರ್ಕಾರಕ್ಕೆ ಇರಲಿಲ್ಲವಾ, ಗೊತ್ತಿದ್ದೂ ಸುಮ್ಮನೆ ಕೈಕಟ್ಟಿ ಕುಳಿತಿತ್ತಾ ಅಥವಾ ಏನು ಮಾಡಬೇಕೆಂಬುದೇ ಗೊತ್ತಿರಲಿಲ್ಲವಾ ಎಂಬುದು ಅರ್ಥವಾಗುತ್ತಿಲ್ಲ. ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿಯಿದ್ದಾಗಲೂ ಪರಿಹಾರ ಕಾರ್ಯ ಕೈಗೊಳ್ಳಬೇಕಾದ ಸರ್ಕಾರ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ಕಠೋರ ಸತ್ಯ. ವಿರೋಧ ಪಕ್ಷ ಬಿಜೆಪಿ ಬರ ಅಧ್ಯಯನ ಪ್ರವಾಸಕ್ಕೆ ಹೊರಡುವ ಸುಳಿವು ಸಿಕ್ಕ ತಕ್ಷಣ ಮೈಕೊಡವಿಕೊಂಡು ಎದ್ದ ಮುಖ್ಯಮಂತ್ರಿಗಳು, ಮಂತ್ರಿಗಳು ತರಾತುರಿಯಲ್ಲಿ ಅಧಿಕಾರಿಗಳನ್ನ ಕಟ್ಟಿಕೊಂಡು ಬರ ವೀಕ್ಷಣೆಗೆ ಹೊರಟೇ ಬಿಟ್ಟರು. ಆದರೆ ಇದು ಕೇವಲ ತೋರಿಕೆಯ ಪ್ರವಾಸವೆಂಬುದನ್ನ ಅರಿತ ಜನತೆ ಎಲ್ಲೆಡೆ ಪ್ರತಿರೋಧವೊಡ್ಡಿದರು. ಮಹಿಳೆಯರು ತಮ್ಮ ಅಳಲು ತೋಡಿಕೊಂಡು ಮುಖ್ಯಮಂತ್ರಿಗಳಿಗೆ ಘೇರಾವ್ ಹಾಕಿದರು,ಬಹುತೇಕ ಕಡೆ ಮಂತ್ರಿಗಳ ಕಾರನ್ನು ತಡೆದರು. ಮಂತ್ರಿಗಳು ಬಂದಾಗ ಗೋಶಾಲೆಗಳಲ್ಲಿ ಇದ್ದ ಜಾನುವಾರುಗಳ ಸಂಖ್ಯೆಗೂ – ವಿರೋಧ ಪಕ್ಷದವರು ಬಂದಾಗ ಇದ್ದ ಜಾನುವಾರುಗಳ ಸಂಖ್ಯೆಗೂ ತಾಳಮೇಳವಿರಲಿಲ್ಲ ಎಂಬುದೂ ಮತ್ತು ಬರ ಪರಿಹಾರ ಕಾಮಗಾರಿ ತೋರಿಸಲು ವಾಹನಗಳಲ್ಲಿ ಜನರನ್ನು ಕರೆ ತಂದು ಬಿಡಲಾಗಿತ್ತೆಂಬುದು ಚರ್ಚೆಗೆ ಗ್ರಾಸವಾಯ್ತು.ಕುಡ್ಯಾಕ ನೀರು ಬರಾಂಗಿಲ್ಲ, ಬಂದು ನೋಡ್ರೀ ಸರ…ಎಂದು ಕೂಗುತ್ತಿದ್ದ ಜನರನ್ನ ಸರಸರನೆ ಪಕ್ಕಕ್ಕೆ ಸರಿಸಿ, ಕಾರನ್ನೇರಿ ಭರ್ರನೆ ಹೊರಟೇ ಬಿಟ್ಟರು ಬರ ಅಧ್ಯಯನಕ್ಕೆ ಬಂದವರು.

ರಾಜ್ಯದ ಶಿಕ್ಷಣ ವ್ಯವಸ್ಥೆಯ ಬಗ್ಗೆಯೇ ಪ್ರಶ್ನೆ ಮೂಡುವಂತೆ ಮಾಡಿದ ಪ್ರಶ್ನೆ ಪತ್ರಿಕೆ ಬಹಿರಂಗ ಮತ್ತು ಮೂರು ಬಾರಿ ಪದವಿಪೂರ್ವ ರಸಾಯನ ಶಾಸ್ತ್ರ ಪರೀಕ್ಷೆ ನಡೆದದ್ದು ಸಾವಿರಾರು ಮಕ್ಕಳ-ಪೋಷಕರ ನಿದ್ದೆ ಕೆಡಿಸಿದ್ದು ಈ ವರ್ಷದ ಬಹುದೊಡ್ಡ ಸಾಧನೆ. ಪಿಯು ಪರೀಕ್ಷೆ ಅಕ್ಷರಷಃ ಅಗ್ನಿ ಪರೀಕ್ಷೆಯಾದದ್ದು ಅತ್ಯಂತ ನೋವಿನ ಸಂಗತಿ. ಪರೀಕ್ಷೆ ಎಂಬುದು ಒಬ್ಬ ವಿದ್ಯಾರ್ಥಿಯ ಇಡೀ ವರ್ಷದ ಶ್ರಮ – ಅಧ್ಯಯನವನ್ನು ಓರೆಗೆ ಹಚ್ಚುವ ಒಂದು ಪ್ರಕ್ರಿಯೆಯಾಗಬೇಕಾಗಿತ್ತು. ಆದರೆ ಸಿಇಟಿಗೆ ಸಿದ್ಧರಾಗಬೇಕಿದ್ದ ಮಕ್ಕಳು ಬರೆದ ಪತ್ರಿಕೆಯನ್ನೇ ಪುನಃ-ಪುನಃ ಬರೆದರು. ತಪ್ಪು ಮಾಡಿದವದರು-ಮಾಡದವರೂ ಸೇರಿದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಒಂದಷ್ಟು ಅಧಿಕಾರಿಗಳು ಅಮಾನತು ಶಿಕ್ಷೆಗೆ ಗುರಿಯಾದರು. ಈಗ ಸಿಕ್ಕಿ ಬಿದ್ದಿರುವವರನ್ನು ಶಿಕ್ಷೆಗೆ ಗುರಿಪಡಿಸಿ – ಈ ಜಾಲ ಮತ್ತೆ ತಲೆಯೆತ್ತದಂತೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳತ್ತಾ ಇಲ್ಲವಾ ಕಾದು ನೋಡಬೇಕಿದೆ. ಎಸ್ಸೆಸ್ಸೆಲ್ಸಿ ಗಣಿತ ಅಂಕ ಪತ್ರಿಕೆ ಜಟಿಲವಾಗಿದ್ದ ಕಾರಣ ಅದಕ್ಕೆ ಕೃಪಾಂಕ ನೀಡಲಾಗುವುದು ಎಂದು ಮೊದಲು ಸುದ್ಧಿಯಾಗಿ ಗೊಂದಲವುಂಟಾಯಿತು. ಆಮೇಲೆ ಯಾವುದೇ ಹೆಚ್ಚುವರಿ ಅಂಕ ನೀಡುವ ವಿಚಾರವಿಲ್ಲವೆಂಬ ಸ್ಪಷ್ಟನೆ ಹೊರಬಿತ್ತು. ಇವೆಲ್ಲ ಬೆಳವಣಿಗೆ ಮಕ್ಕಳ ಹಾಗೂ ಪೋಷಕರ ಮನಸ್ಸಿನಲ್ಲಿ ಆತಂಕ ಮೂಡಿಸಿದ್ದು ಮಾತ್ರವಲ್ಲ, ತಮ್ಮ ಭವಿಷ್ಯದೊಂದಿಗೆ ಸರ್ಕಾರವೇಕೆ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶಗೊಂಡರು.

ತಿಂಗಳಾನುಗಟ್ಟಲೆ ಪ್ರತಿಭಟನೆಗೆ ಕುಳಿತ ಶಿಕ್ಷಕರ ಸಮಸ್ಯೆ ಬಗೆಹರಿಸಲಾಗದಿದ್ದದ್ದು ಕೂಡ ಅಸಹನೀಯ, ಆದರೆ ಕನಿಷ್ಠ ಹೋಗಿ ಒಮ್ಮೆ ಮಾತನಾಡಿಸುವ ಸೌಜನ್ಯವನ್ನೂ ತೋರಲಿಲ್ಲ. ಅವರ ಬೆಡಿಕೆಗಳನ್ನು ಈಡೇರಿಸುವ ಬದಲಾಗಿ ಸರ್ಕಾರ ಮಾಡಿದ್ದು ಶಿಕ್ಷಕರೊಂದಿಗೆ ಕೇವಲ ಹಗ್ಗ-ಜಗ್ಗಾಟ, ಪಾಪ ಅತಿಥಿ ಉಪನ್ಯಾಸಕರಿಗಂತೂ ಪ್ರತಿ ತಿಂಗಳೂ ಸಂಬಳಕ್ಕಾಗಿ ಹೋರಾಡುವಂತಹ ಸ್ಥಿತಿಯಿದ್ದು ಇದೆಲ್ಲವೂ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ.

ಟೆಂಡರಿನಲ್ಲೂ ಈಗ ಮೀಸಲಾತಿ ಕಲ್ಪಿಸಲು ಹೊರಟಿದ್ದೀರಿ,ಯಾಕೆ ಈ ರಾಜ್ಯದಲ್ಲಿ ಮೆರಿಟ್ ಆದಾರದ ಮೇಲೆ ಯಾವುದೇ ಕೆಲಸ ಆಗಲು ಕೊಡಬಾರದೆನ್ನುವ ಹುನ್ನಾರವೇ? ಸರ್ಕಾರಿ ಕೆಲಸವೆಂದರೇ ಕಳಪೆಯೆಂಬ ಭಾವನೆ ಜನರಲ್ಲಿ ಅದೆಷ್ಟೋ ವರ್ಷಗಳಿಂದ ಬೇರೂರಿರುವಾಗ ಇದು ಅವಿವೇಕತನದ ಅತಿರೇಕ. ಒಬ್ಬ ಒಳ್ಳೆಯ ಗುತ್ತಿಗೆದಾರನ ಕೈಗೆ ಕೆಲಸ ಕೊಟ್ಟರೆ ಅದರಿಂದ ಜನರಿಗೆ ಉಪಕಾರವಾಗುತ್ತದೆ, ಅದು ಬಿಟ್ಟು ಮೀಸಲು ಆದಾರದ ಮೇಲೆ ಕೆಲವರಿಗೆ ಮಾತ್ರ ಗುತ್ತಿಗೆಯಲ್ಲೂ ಅವಕಾಶ ಕಲ್ಪಿಸಿದರೆ, ನೆನಪಿರಲಿ ಮುಂಬರುವ ದಿನಗಳಲ್ಲಿ ಯಾವ ಯೋಜನೆಗಳೂ ಸಮರ್ಪಕ ಅನುಷ್ಠಾನಗೊಳ್ಳಲಾರವು.

ಕೆಲವು ಹೈ-ಪ್ರೊಫೈಲ್ ಹಗರಣಗಳ ಕಡತಗಳು ಯಾವುದೋ ಶಾನುಭೋಗರ ದಫ್ತಾರಿನಿಂದ ಕಾಣೆಯಾದದ್ದಲ್ಲ ಸ್ವಾಮಿ,ರಾಜ್ಯದ ಶಕ್ತಿ ಕೇಂದ್ರ ವಿಧಾನ ಸೌಧದ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಛೇರಿಗಳಿಂದ! ಬಹು ಮುಖ್ಯ ಕಡತಗಳು ಕಣ್ಮರೆಯಾದದ್ದು ಭದ್ರತಾ ವೈಫಲ್ಯಕ್ಕೆ ಹಿಡಿದ ಕನ್ನಡಿ. ಆಮೇಲೆ ಕೆಲವು ಸಿಕ್ಕವಂತೆ ಎಂದು ಸುದ್ದಿಯಾದರೂ ಏನೆಲ್ಲ ಆಗಿರಬಹುದು ಎಂಬುದನ್ನು ಸುಲಭವಾಗಿ ಊಹೆ ಮಾಡಬಹುದು.

ಬಿಟ್ಟಿ ಭಾಗ್ಯಗಳು ಯಾವುದೇ ಕಾಲಕ್ಕೂ, ಯಾವುದೇ ಸಮಾಜಕ್ಕೂ ಒಳ್ಳೆಯದಲ್ಲ. ದುಡಿದು ತಿನ್ನುವುದನ್ನು ಕಲಿಸುವುದು ಬಿಟ್ಟು ಸರ್ಕಾರವೇ ಸೋಮಾರಿತನವನ್ನು ಪೋಷಿಸುತ್ತಿರುವ ಸಂದರ್ಭವಿದು. ನೀವು ಈಗ ಮಾಡುತ್ತಿರುವ ಈ ಅವಾಂತರಗಳು ಮುಂಬರುವ ಸರ್ಕಾರಗಳಿಗೂ ನುಂಗಲಾರದ ತುತ್ತಾಗುತ್ತವೆ. ಫಲಾನುಭವಿಗಳ ವಿರೋಧ ಎದುರಿಸುವ ಗೋಜಿಗೆ ಹೋಗದೆ ಅನಿವಾರ್ಯವಾಗಿ ಈ ಭಾಗ್ಯಗಳನ್ನು ಮುಂದುವರೆಸಬೇಕಾಗುತ್ತದೆ. ಜನಪ್ರಿಯತೆಯ ಹಿಂದೆ ಬಿದ್ದು ರಾಜ್ಯವನ್ನು ಹತ್ತತ್ತಿರ ಎರಡು ಲಕ್ಷ ಕೋಟಿಯಷ್ಟು ಸಾಲದತ್ತ ನೂಕುತ್ತಿರುವುದೇ ಕಾಂಗ್ರೆಸ್ ಸರ್ಕಾರದ ಸಾಧನೆ. ಇವೆಲ್ಲದರ ನಡುವೆ ಮಂತ್ರಿ ಮಂಡಲ ಪುನಾರಚನೆ ಆಗಿದೆ,ಹೊಸ ಮಂತ್ರಿಗಳಿಗೆ ಅಭಿನಂದನೆಗಳು, ಇನ್ನಾದರೂ ಅವಿವೇಕತನದ ಯೋಜನೆಗಳು, ನಿರ್ಧಾರಗಳು, ಬ್ರಷ್ಟಾಚಾರ ಕಡಿಮೆಯಾಗಲಿ ಎನ್ನುವುದು ಆಶಯ. ಹಾಗೆ ಆಗಬೇಕೆಂದರೆ ಈ ಸರ್ಕಾರವೇ ಹೋಗಬೇಕೆ ಎನ್ನುವುದು ವಿಚಾರ ಮಾಡಲೇ ಬೇಕಾದ ವಿಷಯ!

ಗುರುಪ್ರಸಾದ ಹೆಗಡೆ,

ಸಿದ್ದಾಪುರ (ಉ.ಕ)

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!