ಅಂಕಣ

ರಾಜನಿದ್ದೂ ಅರಾಜಕತೆಯತ್ತ ಸಾಗಿದೆ ಕರ್ನಾಟಕದ ರಾಜಕೀಯ

ಇತ್ತೀಚೆಗಷ್ಟೇ ಸಿದ್ಧರಾಮಯ್ಯನವರು ಸಚಿವ ಸಂಪುಟ ವಿಸ್ತರಣೆ ಮಾಡಿದ ನಂತರದ ಕೆಲವು ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಹಲವು ಘಟನೆಗಳು ಸಂಭವಿಸಿದವು.ಆ ಘಟನೆಗಳಿಂದ ಜನಸಾಮಾನ್ಯರಿಗೆ ತೊಂದರೆಯಾಗಿದ್ದರಿಂದ ಆಡಳಿತ ಪಕ್ಷದ ಮೇಲೆ ಹಲವರು ಸಿಡಿಮಿಡಿಗೊಂಡರು.ತಮ್ಮ ನಾಯಕರನ್ನು ಸಚಿವ ಸಂಪುಟದಿಂದ ವಜಾ ಮಾಡಿದ್ದಕ್ಕೆ ರೊಚ್ಚಿಗೆದ್ದ ಅವರುಗಳ ಬೆಂಬಲಿಗರು ರಾಜ್ಯದ ನಾನಾ ಕಡೆಗಳಲ್ಲಿ ದಾಂಧಲೆ ನಡೆಸಿದರು.ಬೆಂಗಳೂರಿನ ಮೆಟ್ರೋ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಿದರು.ಹಲವೆಡೆ ರಸ್ತೆ ತಡೆ ಮಾಡಿ,ಟೈರು ಸುಟ್ಟು ಹೊಗೆ ಎಬ್ಬಿಸಿದರು. ಮುಖ್ಯಮಂತ್ರಿಯ ವಿರುದ್ಧ ಬಹಿರಂಗವಾಗಿ ಭಾರೀ ಘೋಷಣೆಗಳನ್ನು ಕೂಗಲಾಯಿತು.

 

ಸಂಪುಟದಲ್ಲಿ ಸ್ಥಾನ ಕಳೆದುಕೊಂಡಾಗ ರಾಜಕಾರಣಿಗಳು ಆಕ್ರೋಶಗೊಳ್ಳುವುದು ಸಹಜವೇ.ಆದರೆ ಅದರಿಂದ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಬಾರದು.ತಮಗೆ ಮತ ಹಾಕಿ ಆರಿಸಿದ ಜನರಿಗೆ ತೊಂದರೆಯಾಗಬಾರದು.ಈ ಹಿಂದೆಯೂ ಬಹಳ ಸಲ ಮಂತ್ರಿಮಂಡಲ ವಿಸ್ತರಣೆಯಾದಾಗ ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲವಾಗಿದ್ದಿದೆ.ಆದರೆ ಅವು ಯಾವುವೂ ಈ ಬಾರಿಯಂತೆ ವಿಕೋಪಕ್ಕೆ ಹೋಗಿರಲಿಲ್ಲ.ಮಂತ್ರಿಗಿರಿ ಕಳೆದುಕೊಂಡ ತನ್ನದೇ ಸರ್ಕಾರದ ಪ್ರಭಾವಿ ಶಾಸಕರುಗಳು ಹದ್ದು ಮೀರಿ ವರ್ತಿಸಿದಾಗಲೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಯಾವ ಪ್ರತಿಕ್ರಿಯೆಯನ್ನೂ ಕೊಡಲಿಲ್ಲ.ಅಂಥ ಶಾಸಕರಿಗೆ ಎಚ್ಚರಿಕೆ ನೀಡಿ ಬುದ್ಧಿವಾದದ ಮಾತನ್ನೂ ಹೇಳಲಿಲ್ಲ.ಇದರಿಂದ ಶ್ರೀಸಾಮಾನ್ಯ ಜನರು ಗೊಂದಲಕ್ಕೀಡಾಗಿದ್ದಾರೆ.ತನ್ನದೇ ಪಕ್ಷದ ಶಾಸಕರನ್ನು ಹತೋಟಿಯಲ್ಲಿಟ್ಟುಕೊಳ್ಳಲಾರದವನು ಅದೆಂಥ ನಾಯಕ ಎನ್ನುತ್ತಿದ್ದಾರೆ.

 

ಕೆಲವು ತಿಂಗಳ ಹಿಂದೆ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಬೇಕು ಎಂದು ಆಗ್ರಹಿಸುತ್ತಾ ಸಾವಿರಾರು ಸಂಖ್ಯೆಯಲ್ಲಿ ರೈತರು ಬೆಂಗಳೂರಿಗೆ ನುಗ್ಗಿದ್ದರು.ಮುಖ್ಯಮಂತ್ರಿಯನ್ನು ಭೇಟಿಯಾಗುವುದು ಅವರ ಉದ್ದೇಶವಾಗಿತ್ತು.ಆದರೆ ಸುದ್ದಿ ತಿಳಿದ ರಾಜ್ಯ ಸರ್ಕಾರ ಪೋಲೀಸರ ಮೂಲಕ ಅವರನ್ನು ತಡೆಯಿತು.ಆ ರೈತರ ಮೇಲೆ ಏಕಾಏಕಿ ಮುಗಿಬಿದ್ದ ಆರಕ್ಷಕರು ಹಿಗ್ಗಾ ಮುಗ್ಗಾ ಥಳಿಸಿದರು.ಈ ಘಟನೆ ರಾಜ್ಯ ಸರ್ಕಾರದ ಒಂದು ದಯನೀಯ ವೈಫಲ್ಯವಾಗಿ ಗುರುತಿಸಲ್ಪಟ್ಟಿತು.ಅವತ್ತು ಮುಖ್ಯಮಂತ್ರಿಯೇಕೆ,ಆಡಳಿತ ಪಕ್ಷದ ಯಾವ ಮುಖಂಡನೂ ಆ ರೈತರನ್ನು ಭೇಟಿ ಮಾಡಲಿಲ್ಲ.ಅವರ ಸಮಸ್ಯೆಗಳನ್ನು ಒಂದೇ ದಿನದಲ್ಲಿ ಬಗೆಹರಿಸುವುದು ಸಾಧ್ಯವಿಲ್ಲ ಎಂದು ರಾಜಕೀಯ ಮುಖಂಡರಿಗೂ ಗೊತ್ತಿತ್ತು.ರೈತರಿಗೂ ಗೊತ್ತಿತ್ತು.ಹಾಗಿರುವಾಗ ಅವತ್ತು ಮುಖ್ಯಮಂತ್ರಿ ಅಥವಾ ಸರ್ಕಾರದ ಯಾವುದೇ ಪ್ರಮುಖ ಮಂತ್ರಿ ಆ ರೈತರನ್ನು ಭೇಟಿಯಾಗಿದ್ದಿದ್ದರೆ ಕಳೆದುಕೊಳ್ಳುವುದೇನೂ ಇರಲಿಲ್ಲ.ಬದಲಿಗೆ ಮುಖ್ಯಮಂತ್ರಿ ಸುಮ್ಮನಿದ್ದರೆ ಉಳಿದ ಕೆಲವು ಮಂತ್ರಿಗಳು ಏನೇನೋ ನೆಪ ಹೇಳಿದರು. ಸರ್ಕಾರದ ಅವತ್ತಿನ ನಡೆಯನ್ನು ರಾಜ್ಯದ ಜನರೆಲ್ಲರೂ ಖಂಡಿಸಿದರು.ಸಿದ್ಧರಾಮಯ್ಯ ಸರ್ಕಾರಕ್ಕೆ ರೈತ ವಿರೋಧಿ ಹಣೆಪಟ್ಟಿ ಬಿತ್ತು.

 

ಡಿ.ಕೆ.ರವಿ,ಮಲ್ಲಿಕಾರ್ಜುನ ಬಂಡೆಯವರ ಸಾವಿನ ಪ್ರಕರಣದಲ್ಲಿ ರಾಜ್ಯ ಸರ್ಕಾರ ಹೇಗೆ ವರ್ತಿಸಿತು ಎಂದು ಎಲ್ಲರಿಗೂ ಗೊತ್ತೇ ಇದೆ.ಅನುಪಮಾ ಶಣೈ ಅವರಿಗೆ ತಮ್ಮದೇ ಸರ್ಕಾರದ ಮಂತ್ರಿಯೊಬ್ಬ ಧಮಕಿ ಹಾಕಿ ವರ್ಗಾವಣೆ ಮಾಡಿದಾಗಲೂ ಸಿದ್ಧರಾಮಯ್ಯ ಸುಮ್ಮನೇ ಇದ್ದರು.ತಮ್ಮ ಶಾಸಕರು ತಪ್ಪು ಮಾಡಿದಾಗ ಅವರಿಗೆ ಬುದ್ಧಿ ಹೇಳಿ ಜನರಲ್ಲಿ ತಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸುವ ಅವಕಾಶ ಸಿದ್ಧರಾಮಯ್ಯನವರಿಗೆ ಅನೇಕ ಬಾರಿ ಸಿಕ್ಕಿತ್ತು.ಆದರೆ ಅವರು ಅದು ಯಾವುದನ್ನೂ ಬಳಸಿಕೊಳ್ಳಲಿಲ್ಲ.ಸಿಯಾಚಿನ್’ನಲ್ಲಿ ಹುತಾತ್ಮನಾದ ರಾಜ್ಯದ ಯೋಧನೊಬ್ಬನ ಪಾರ್ಥಿವ ಶರೀರ ಬೆಂಗಳೂರಿಗೆ ಬರುವ ಹೊತ್ತಿನಲ್ಲಿ “ನಾನು ಬೆಂಗಳೂರಿನಲ್ಲಿದ್ದಾಗಲೇ ಬಂದರೆ ಮಾತ್ರ ಆತನ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸುತ್ತೇನೆ.ಇಲ್ಲವಾದಲ್ಲಿ ಇಲ್ಲ” ಎಂಬ ಬೇಜವಾಬ್ದಾರಿ ಹೇಳಿಕೆಯೂ ಮುಖ್ಯಮಂತ್ರಿಯಿಂದ ಬಂದಿತ್ತು.ಗಲಾಟೆಯಾಗುತ್ತದೆ ಎಂಬ ಸ್ಪಷ್ಟ ಅರಿವಿದ್ದೂ ವಿವಾದಾತ್ಮಕ ಟಿಪ್ಪು ಜಯಂತಿ ಆಚರಿಸಲು ಸರ್ಕಾರ ಅನುಮತಿ ಕೊಟ್ಟಿತು.ಪರಿಣಾಮ ಮಡಿಕೇರಿಯಲ್ಲಿ ಭಾರೀ ಗಲಭೆ ನಡೆದು ಅಮಾಯಕರು ಪ್ರಾಣತೆತ್ತರು.ಭ್ರಷ್ಟ ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿರುತ್ತಿದ್ದ ಲೋಕಾಯುಕ್ತವನ್ನೇ ಜನರ ವಿರೋಧದ ನಡುವೆಯೂ ಸರ್ಕಾರ ಮುಚ್ಚಿಬಿಟ್ಟಿತು.

 

ಸಿದ್ಧರಾಮಯ್ಯನವರ ವಾಚ್ ಪ್ರಕರಣವಂತೂ ತೀರಾ ಅತಿರೇಕಕ್ಕೆ ಹೋಗಿತ್ತು.ಸುಮಾರು ಒಂದು ತಿಂಗಳ ಕಾಲ ಮುಖ್ಯಮಂತ್ರಿ ಮತ್ತು ಕುಮಾರಸ್ವಾಮಿ ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಂಡೇ ಕಾಲ ಕಳೆದರು.ರಾಜ್ಯದ ಮುಖ್ಯಮಂತ್ರಿ ಎಂಬುದನ್ನೂ ಮರೆತು ಸಿದ್ಧರಾಮಯ್ಯನವರು ನಿರ್ಲಜ್ಜ ರೀತಿಯಲ್ಲಿ ವೈಯಕ್ತಿಕ ದಾಳಿಗಿಳಿದರು.ನಾಡಿನ ಸಾಹಿತ್ಯ ವಲಯದಲ್ಲಿ ಭಾರೀ ತಲ್ಲಣವನ್ನುಂಟು ಮಾಡಿದ ಡಾ.ಎಂ.ಎಂ.ಕಲಬುರ್ಗಿಯವರ ಹತ್ಯೆಯ ಆರೋಪಿಗಳನ್ನು ಇನ್ನೂ ಪತ್ತೆ ಹಚ್ಚಲಾಗಲಿಲ್ಲ.ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಕೆಟ್ಟ ಕಾರಣಗಳಿಗಾಗಿ ಕರ್ನಾಟಕ ಸುದ್ದಿಗೀಡಾದಾಗಲೂ ಸಿದ್ಧರಾಮಯ್ಯ ಎಚ್ಚೆತ್ತುಕೊಳ್ಳಲಿಲ್ಲ.ವಿಶ್ವಬ್ಯಾಂಕ್’ನಲ್ಲಿ ರಾಜ್ಯದ ಸಾಲ ದಿನೇ ದಿನೇ ಬೆಳೆಯುತ್ತಿದೆ.ಸಂಪೂರ್ಣ ಬಹುಮತದ ಸರ್ಕಾರವಿದ್ದೂ ಸಿದ್ಧರಾಮಯ್ಯ ಸರ್ಕಾರದ ಆಡಳಿತ ತೃಪ್ತಿಕರವಾಗಿಲ್ಲ ಎಂದು ರಾಜ್ಯದ ಜನತೆ ದೂರುತ್ತಿದ್ದಾರೆ.ಒಟ್ಟಿನಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಹಳಿ ತಪ್ಪಿರುವುದಂತೂ ನಿಜ.

 

ಇದಿಷ್ಟು ಆಡಳಿತ ಪಕ್ಷದ ಕಥೆಯಾದರೆ ವಿರೋಧ ಪಕ್ಷ ಬಿಜೆಪಿಯ ಕಥೆಯನ್ನಂತೂ ಕೇಳುವುದೇ ಬೇಡ.ಗಾಢ ನಿದ್ರೆಯಲ್ಲಿರುವ ಅದು ಇನ್ನೂ ಎಚ್ಚರವಾಗಿಲ್ಲ.ಒಂದು ಕಾಲದಲ್ಲಿ ಯಡಿಯೂರಪ್ಪ ರಾಜ್ಯದ ವಿರೋಧ ಪಕ್ಷದ ನಾಯಕರಾಗಿದ್ದಾಗ ಅವರು ಮಾತನಾಡಿದರೆ ಇಡೀ ವಿಧಾನಸಭೆಯೇ ನಡುಗುತ್ತಿತ್ತು.ಆಗ ಕರ್ನಾಟಕದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿಯೇ ಹೆಸರು ಮಾಡಿತ್ತು. ಈಗ ಪ್ರತಿಪಕ್ಷ ಇದೆಯೋ ಇಲ್ಲವೋ ಎಂದೇ ಗೊತ್ತಾಗುತ್ತಿಲ್ಲ.ಸದನದ ಒಳಗೂ ಹೊರಗೂ ಅದಕ್ಕೆ ಬಲವೇ ಇಲ್ಲ.ಸೂಕ್ತ ನಾಯಕತ್ವವಂತೂ ಮೊದಲೇ ಇಲ್ಲ.ಜನರ ಮಾತುಗಳಿಗಂತೂ ಸಿದ್ಧರಾಮಯ್ಯ ಸರ್ಕಾರ ಬೆಲೆ ಕೊಡುವುದಿಲ್ಲ.ಕಡೇ ಪಕ್ಷ ವಿರೋಧ ಪಕ್ಷವಾದರೂ ತನ್ನ ಕೆಲಸವನ್ನು ಸರಿಯಾಗಿ ಮಾಡಿದ್ದಿದ್ದರೆ ಆಡಳಿತ ಪಕ್ಷ ಸ್ವಲ್ಪವಾದರೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿತ್ತು.ಆದರೆ ವಿರೋಧ ಪಕ್ಷ ಜೀವವೇ ಇಲ್ಲದಂತೆ ವರ್ತಿಸುತ್ತಿದೆ.

 

ರೋಗಗ್ರಸ್ಥವಾಗಿರುವ ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸಲು ಬಿಜೆಪಿಯ ಬಳಿ ಎಷ್ಟೊಂದು ಅವಕಾಶಗಳಿದ್ದವು.ಅಹಿಂದ ಪ್ರವಾಸ ಭಾಗ್ಯ,ಮಲ್ಲಿಕಾರ್ಜುನ ಬಂಡೆ,ಡಿ.ಕೆ.ರವಿ ಸಾವಿನ ಪ್ರಕರಣ,ಅನುಪಮಾ ಶಣೈ ಪ್ರಕರಣ,ಟಿಪ್ಪೂ ಜಯಂತಿಯ ವಿವಾದ,ರೈತರ ಮೇಲೆ ಲಾಠೀಚಾರ್ಜ್,ಲೋಕಾಯುಕ್ತವನ್ನು ರದ್ದುಗೊಳಿಸಿದ್ದು ಹೀಗೇ ಇನ್ನೂ ಅನೇಕ ವಿಷಯಗಳಿದ್ದರೂ ಯಾವುದನ್ನೂ ವಿರೋಧ ಪಕ್ಷ ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ.ಆಡಳಿತ ಪಕ್ಷ ಏನೂ ಬೇಕಾದರೂ ಮಾಡಿಕೊಳ್ಳಲಿ ನಮಗೇನು,ಎಂಬಂತಿದೆ ಅದರ ಧೋರಣೆ. ಕಡೇ ಪಕ್ಷ ಕೇಂದ್ರದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಅನ್ನು ನೋಡಿಯಾದರೂ ರಾಜ್ಯ ಬಿಜೆಪಿ ಪಾಠ ಕಲಿಯಲಿಲ್ಲ.ಕಲಾಪ ಸರಿಯಾಗಿ ನಡೆಯಲು ಬಿಡದೇ ಇರುವುದರಿಂದ ಹಿಡಿದು ರೋಹಿತ್ ವೇಮುಲ,ಜವಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರಕರಣ ಮುಂತಾದುವುಗಳಲ್ಲಿ ಕಾಂಗ್ರೆಸ್ ವಿರೋಧಪಕ್ಷವಾಗಿ ಭಾರೀ ಸದ್ದು ಮಾಡಿತು.ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯಾವ ಅವಕಾಶವನ್ನೂ ಬಿಡುತ್ತಿರಲಿಲ್ಲ.ಅದೇ ಇಲ್ಲಿ ರಾಜ್ಯದಲ್ಲಿ ಬಿಜೆಪಿಯ ನಡೆ ಆಡಳಿತ ಪಕ್ಷವನ್ನು ಪೇಚಿಗೆ ಸಿಲುಕಿಸುವುದಿರಲಿ ಸರ್ಕಾರಕ್ಕೇ ಸಹಾಯ ಮಾಡುವಂತಿದೆ.

 

ಸೂಕ್ತ ನಾಯಕತ್ವವಿಲ್ಲದೇ ಚುನಾವಣೆ ಎದುರಿಸಿದ ಕಡೆಗಳಲ್ಲೆಲ್ಲ ಬಿಜೆಪಿಗೆ ಸೋಲಾಗಿದೆ.ಅದು ದಿಲ್ಲಿ,ಬಿಹಾರಗಳ ವಿಧಾನಸಭೆ ಚುನಾವಣೆಯಿರಬಹುದು ಕರ್ನಾಟಕದ ಬಿಬಿಎಂಪಿ ಮತ್ತು ಪಂಚಾಯತಿ ಚುನಾವಣೆಗಳಿರಬಹುದು.ಎಲ್ಲದಕ್ಕೂ ಮೋದಿಯನ್ನೇ ಇಂದಿಗೂ ನೆಚ್ಚಿಕೊಂಡಿದೆ ರಾಜ್ಯ ಬಿಜೆಪಿ.ಯಡಿಯೂರಪ್ಪ ರಾಜ್ಯಾಧ್ಯಕ್ಷರಾದರೆ ಎಲ್ಲವೂ ಸರಿಯಾಗುತ್ತದೆಂದು ಅನೇಕರು ಅಂದುಕೊಂಡಿದ್ದರು.ಆದರೆ ಅವರು ರಾಜ್ಯ ಬಿಜೆಪಿಯ ಸಾರಥ್ಯ ವಹಿಸಿಕೊಂಡ ಮೇಲೂ ಯಥಾಸ್ಥಿತಿ ಮುಂದುವರೆದಿದೆ.ಪಕ್ಷ ಸಂಘಟಿಸುವಲ್ಲಿ ಯಡಿಯೂರಪ್ಪ ಯಾಕೋ ಮೊದಲಿನ ಉತ್ಸಾಹದಲ್ಲಿದ್ದಂತೆ ಇಲ್ಲ.ಅವರು ಮನಸ್ಸು ಮಾಡಿದ್ದರೆ ಕರ್ನಾಟಕದ ವಿರೋಧ ಪಕ್ಷವನ್ನು ಸರಿದಾರಿಗೆ ತರಬಹುದಿತ್ತು.ಆದರೆ ಇಲ್ಲಿಯವರೆಗೂ ಯಾವ ಬಿಜೆಪಿ ನಾಯಕರ ಜೊತೆಗೂ ಸರಿಯಾದ ಮಾತುಕತೆಯನ್ನೇ ನಡೆಸಿಲ್ಲ ಅವರು.

 

ರಾಜ್ಯ ಬಿಜೆಪಿಯಲ್ಲೂ ಭಿನ್ನಮತ ಕಾಣಿಸಿಕೊಂಡಿದೆ.ಪದಾಧಿಕಾರಿಗಳ ಆಯ್ಕೆ ವಿಚಾರದಲ್ಲಿ ಯಡಿಯೂರಪ್ಪ ಯಾರ ಮಾತನ್ನೂ ಕೇಳದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಬಿಜೆಪಿಯ ಹಲವರು ಆರೋಪಿಸಿದ್ದಾರೆ.ಅಲ್ಲದೇ ಯಡಿಯೂರಪ್ಪನವರನ್ನು ಭೇಟಿಯಾಗಬೇಕಾದರೆ ಮೊದಲು ಶೋಭಾ ಕರಂದ್ಲಾಜೆಯವರ ಅನುಮತಿ ಪಡೆಯಬೇಕು ಎಂಬ ದೂರುಗಳೂ ಕೇಳಿ ಬರುತ್ತಿವೆ.ಅತ್ತ ನೋಡಿದರೆ ಜೆ.ಡಿ.ಎಸ್. ಓಡೆದ ಮನೆಯಾಗಿದೆ.ಇತ್ತ ಕಾಂಗ್ರೆಸ್ ನ ನಾಯಕರಲ್ಲೂ ಎಲ್ಲವೂ ಸರಿಯಾಗಿಲ್ಲ.ಈಗ ಬಿಜೆಪಿಯೂ ನಾಯಕರ ನಡುವಿನ ಆಂತರಿಕ ಕಲಹದಿಂದ ಒಡೆದು ಚೂರಾದರೆ ಏನು ಕಥೆಯೋ ಗೊತ್ತಿಲ್ಲ.ಮೊದಲ ಬಾರಿಗೆ ಜನರು ಆಡಳಿತ ಪಕ್ಷವನ್ನು ದೂರುವುದನ್ನು ಬಿಟ್ಟು ವಿರೋಧ ಪಕ್ಷಕ್ಕೇ ಜಾಸ್ತಿ ಬೈಯ್ಯುತ್ತಿದ್ದಾರೆ.ಇದು ಬಿಜೆಪಿಯ ಕಿವಿಗೆ ಬಿದ್ದರೂ ಅದು ಇನ್ನೂ ಎಚ್ಚೆತ್ತುಕೊಂಡಿಲ್ಲ.

 

ಕರ್ನಾಟಕದಲ್ಲಿ ಸಂಪೂರ್ಣ ಬಹುಮತದ ಸರ್ಕಾರವಿದೆ.ಜನಪ್ರಿಯ ಮುಖ್ಯಮಂತ್ರಿಯಿದ್ದಾರೆ.ರಾಜಕಾರಣದಲ್ಲಿ ಅನೇಕ ವರ್ಷಗಳ ಅನುಭವವಿರುವ ಹಿರಿಯ ಶಾಸಕರು ಮಂತ್ರಿಗಳಾಗಿದ್ದಾರೆ.ರಾಜ್ಯವನ್ನು ಜನಮೆಚ್ಚುವ ರೀತಿಯಲ್ಲಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಎಲ್ಲ ಅವಕಾಶಗಳಿದ್ದರೂ ಸಿದ್ಧರಾಮಯ್ಯ ಸರ್ಕಾರ ಅದರಲ್ಲಿ ಬಹುತೇಕ ವಿಫಲವಾಗಿದೆ.ವಿರೋಧಪಕ್ಷ ಇದೆ ಎನ್ನುವುದನ್ನೂ ಜನ ಮರೆಯುವ ಹಂತಕ್ಕೆ ತಲುಪಿದ್ದಾರೆ.ತಾವೇಕೆ ಇಷ್ಟು ವಿಫಲರಾದೆವು ಎನ್ನುವುದಕ್ಕೆ ರಾಜ್ಯ ಬಿಜೆಪಿಯ ನಾಯಕರಲ್ಲೂ ಉತ್ತರವಿಲ್ಲ.ರಾಜನಿದ್ದೂ,ವಿರೋಧಪಕ್ಷವಿದ್ದೂ ಕರ್ನಾಟಕ ಅರಾಜಕತೆಯತ್ತ ಸಾಗಿದೆ.

 

Facebook ಕಾಮೆಂಟ್ಸ್

ಲೇಖಕರ ಕುರಿತು

Lakshmisha J Hegade

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!